2.7.08

ಮಂಗಳೂರಿನ ಮತ್ಸ್ಯಕನ್ಯೆ



ಇನ್ನು ಮಂಗಳೂರಿಗೆ ಪಿಕ್‌ನಿಕ್ ಬರುವವರು ದೇವಸ್ಥಾನ, ಬೀಚ್ ನೋಡಿ ಇಷ್ಟೇನಾ ಎಂದು ಮೂಗುಮುರಿದು ಹೋಗಬೇಕಿಲ್ಲ...
ಮಂಗಳೂರಿಗೆ ವರವಾಗಿರುವ ಹಿನ್ನೀರುಗಳು ಸೃಷ್ಟಿಸಿದ ಚಿಕ್ಕ ಕುದ್ರುಗಳು ಅನೇಕ ಇವೆ...ಇಂತಹ ಕುದುರು ಅಥವಾ ದ್ವೀಪಗಳೂ ಪ್ರವಾಸಿಗರನ್ನು ಆಕರ್ಷಿಸಬಹುದು.
ನೇತ್ರಾವತಿ ನದಿಯ ಕೊಟ್ಟಾರಿ ಕುದ್ರು, ಉಳಿಯ ಪಾವೂರು ಹೀಗೆ ಅನೇಕ ಕುದ್ರುಗಳಿವೆ. ಕೆಲವದರಲ್ಲಿ ಜನವಸತಿಯೂ ಇದೆ. ಆದರೆ ಹೋಗಬೇಕಾದರೆ ದೋಣಿ ಬೇಕೇ ಬೇಕು. ಸರ್ಕಾರ ಇಂತಹ ದ್ವೀಪಗಳನ್ನು ಪ್ರವಾಸಿ ಕೇಂದ್ರವಾಗಿಸುವ ಯೋಚನೆ ಹೊಂದಿದೆ.
ಹೀಗೆ ಸರ್ಕಾರ ಯೋಚನೆಯಲ್ಲಿ ತೊಡಗಿರುವಾಗಲೇ ಮಂಗಳೂರಿನ ಜಗದೀಶ್ ಬಂಗೇರ ಎಂಬವರು ಕಾರ್ಯೋನ್ಮುಖವಾಗಿದ್ದಾರೆ. ಗುರುಪುರ ನದಿ ಸೃಷ್ಟಿಸಿದ ಚಿಕ್ಕ ದ್ವೀಪವೊಂದನ್ನು ಲೀಸ್‌ಗೆ ಖರೀದಿಸಿ, ದ್ವೀಪ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.



ಗುರುಪುರ ನದಿ ಮಂಗಳೂರು ಹೊರವಲಯದ ಕುಳೂರು ಮೂಲಕ ಸಮುದ್ರದ ಬದಿಯಲ್ಲಿಯೇ ಹರಿಯುತ್ತಾ ಸಮುದ್ರವನ್ನು ಕುಚೋದ್ಯ ಮಾಡುತ್ತಾ ಮುಂದುವರಿದು ಹೊಯ್ಗೆಬಜಾರು ಬಳಿ ನೇತ್ರಾವತಿಯೊಂದಿಗೆ ಒಂದಾಗಿ ಬಳಿಕವೇ ಸಮುದ್ರ ಸೇರುತ್ತದೆ.


ಮಂಗಳೂರಿನ ಲೇಡಿಹಿಲ್ ಸರ್ಕಲಿಂದ ಸುಲ್ತಾನ ಬತ್ತೇರಿ ಬಳಿ ಹೋದರೆ ನಿಮಗೆ ಗುರುಪುರ ನದಿ ಕಾಣಿಸುತ್ತದೆ. ಇಲ್ಲಿಂದ ತಣ್ಣೀರುಬಾವಿ ವರೆಗೆ ಹೋಗಲು ಇಲ್ಲಿ ದೋಣಿ ಇದೆ. ಇಲ್ಲಿ ರೋಪ್‌ ವೇ ಮಾಡಬೇಕು ಎಂಬ ಸರ್ಕಾರದ ಪ್ರಸ್ತಾವನೆ ಹಾಗೇ ಮುರುಟಿ ಬಿದ್ದಿದೆ.


ನದಿಯೊಳಗೆ ಇಲ್ಲೇ ಕೆಲವು ಮೀಟರ್‍ನಲ್ಲಿದೆ ಬಂಗೇರರ ದ್ವೀಪ. ಇದಕ್ಕೆ ಮೆರ್ಮೈಡ್ ಐಲ್ಯಾಂಡ್ ಎಂಬ ಹೆಸರನ್ನೂ ಇರಿಸಿದ್ದಾರೆ. ಈ ದ್ವೀಪವನ್ನು ವಾರಾಂತ್ಯ ಪ್ರಶಾಂತ ಸ್ಥಳ ಬಯಸುವವರಿಗೆ ನೀಡುವುದಾಗಿ ಹೇಳುತ್ತಾರೆ. ಹಾಗೆಂದು ಇದನ್ನು ಹೆಚ್ಚು ಕಮರ್ಷಿಯಲ್ ಆಗಿ ಪರಿವರ್ತಿಸಲು ಅವರಿಗೆ ಮನಸ್ಸಿಲ್ಲ.



ಸುಮಾರು ೧.೫ ಎಕ್ರೆ ಇರುವ ಈ ದ್ವೀಪ ತುಂಬ ಮರಳು. ದ್ವೀಪ ತನ್ನ ಹರವನ್ನು ತಾನಾಗಿ ಹೆಚ್ಚಿಸಿಕೊಳ್ಳುವುದಕ್ಕೆಂದು ಅಂಚಿನಲ್ಲಿ ಗಾಳಿಸಸಿ, ಕಾಂಡ್ಲಾ ಸಸಿ ನಟ್ಟಿದ್ದಾರೆ. ಈ ದ್ವೀಪದಲ್ಲಿ ಕುಳಿತು ಪ್ರಶಾಂತವಾಗಿ ಹರಿಯುವ ನದಿ/ಹಿನ್ನೀರನ್ನು ನೋಡುವುದೇ ಆಹ್ಲಾದಕರ ಅನುಭವ.


ಮಂಗಳೂರಿನ ಹಳೆ ನೆನಪು ಸಾರುವ ಕೆಲವು ಹೆಂಚಿನ ಫ್ಯಾಕ್ಟರಿಗಳು, ರಿಪೇರಿಗೆಂದು ಭೂಮಿ ಮೇಲೇರಿ ನಿಂತ ದೋಣಿಗಳು, ಗಾಳಿಗೆ ತೊಯ್ದಾಡುವ ತೆಂಗಿನ ಮರಗಳು added attractions.


ಈಗ ಮಳೆಗಾಲವಾದ್ದರಿಂದ ದ್ವೀಪಕ್ಕೆ ಹೋಗುವುದು ತುಸು ಕಷ್ಟ. ಆದರೆ ಇನ್ನು ನಾಲ್ಕು ತಿಂಗಳಲ್ಲಿ ದ್ವೀಪವನ್ನು ಪೂರ್ಣವಾಗಿ ಸಿದ್ದಪಡಿಸುವುದಾಗಿ ಜಗದೀಶ್ ಬಂಗೇರ ಹೇಳುತ್ತಾರೆ. ಅವರ ಪ್ರಯತ್ನಕ್ಕೆ ಹ್ಯಾಟ್ಸಾಫ್ ಹೇಳಬಯಸುತ್ತೀರಾದರೆ ಇಲ್ಲಿದೆ ಅವರ ಮೊಬೈಲು ಸಂ.9448472807.

3 comments:

ಹಳ್ಳಿಕನ್ನಡ said...

ನನಗೂ ಈ ದ್ವೀಪ ನೋಡೊ ಆಸೆ. ನಾವು ಗೋವಾ ಪ್ಲಾನ್ ಮಾಡಿದ್ವಲ್ಲ ಆಗ ಮಂಗಳೂರಿಗೆ ಬಂದಾಗ ಕರೆದುಕೊಂಡು ಹೊಗು. Next month ಗೋವಾ ಹೊಗೋಣ. ಫೋಟೋ ಹೊಸ ಕ್ಯಾಮರಾದ್ದಾ? ಚೆನ್ನಾಗಿದ್ದಾವೆ.

ರಾಜೇಶ್ ನಾಯ್ಕ said...

ಉಪಯುಕ್ತ ಮಾಹಿತಿ ವೇಣು. ಬಂಗೇರರು ಒಬ್ಬರೇ ನಡೆಸುತ್ತಾರಾ ಅಥವಾ ಮರ್ಮೈಡ್ ದ್ವೀಪದಲ್ಲಿ ಪ್ರವಾಸೋದ್ಯಮ ವ್ಯವಸ್ಥೆಗಳನ್ನು ನೋಡಿಕೊಳ್ಳಲಿಕ್ಕೆಂದು ಸಂಸ್ಥೆಯನ್ನು ಹುಟ್ಟುಹಾಕಿದ್ದಾರಾ?

VENU VINOD said...

ಸ್ವಾಮಿ,
ಖಂಡಿತಾ ಹೋಗೋಣ

ರಾಜೇಶ್,
ಸದ್ಯಕ್ಕೆ ಸಂಸ್ಥೆಯೇನಿಲ್ಲ. ಅವರೊಬ್ಬರೇ ಸ್ನೇಹಿತರ ನೆರವಿನಲ್ಲಿ ನಡೆಸ್ತಿದಾರೆ

Related Posts Plugin for WordPress, Blogger...