9.2.09

ಟಯರು ಪಂಕ್ಚರ್‍ ಪುರಾಣ

ಬಹುಷಃ ಅತ್ಯಂತ ಕಿರಿಕಿರಿಯ ಅವಸ್ಥೆ ಇದು..ಎಲ್ಲ ಬೈಕ್‌ ರೈಡರ್‌ಗಳನ್ನು ಕಾಡುವ ಸಮಸ್ಯೆ...

ತಡರಾತ್ರಿ ವರೆಗೂ ದುಡಿದು ಇನ್ನೇನು ಒಮ್ಮೆ ಮನೆ ಸೇರಿಬಿಡೋಣ ಎಂದು ದ್ವಿಚಕ್ರ ಸಂಗಾತಿಯ ಬಳಿ ಬಂದು ಕಿಕ್ ಹೊಡೆದು ಮುಂದೆ ಚಲಿಸುವಾಗ ಹಿಂದಿನ ಭಾಗ ಕಡಮೆ ಮಾಲು ಕುಡಿದವರಂತೆ ಓಲಾಡತೊಡಗುತ್ತದೆ. ನೋಡಿದರೆ ಟೈರ್‍ ಫ್ಲಾಟ್! ಇನ್ನೆಲ್ಲೋ ಅರ್ಜೆಂಟಾಗಿ ಹೋಗುತ್ತಿದ್ದೀರಿ..ಅರ್ಧ ಧಾರಿಯಲ್ಲಿ ಬೈಕ್ ಓಲಾಡುತ್ತದೆ...ಟೈರು ಬಡಕಲು ನಾಯಿಯಂತಾಗಿರುತ್ತದೆ...
ನಿಮ್ಮ ದ್ವಿಚಕ್ರ ವಾಹನ ಸ್ಕೂಟರ್‍ ಆಗಿದ್ದು ಸ್ಟೆಪ್ನೀ ಇದ್ದರೆ ಬಚಾವ್..ಟೈರು ಬದಲಾಯಿಸಬಹುದು(ಕಷ್ಟಪಟ್ಟಾದರೂ).
ಆದರೆ ಬೈಕ್ ಆಗಿದ್ದರೆ ಮುಗೀತು ಕಥೆ. ರಾತ್ರಿಯಾಗಿದ್ದರೆ ಪಂಕ್ಚರ್‍ ಹಾಕುವವರೂ ಮನೆಗೆ ಹೋಗಿರುತ್ತಾರೆ. ಹೋಗುವ ಹಂತದಲ್ಲಿದ್ದರೆ ಅವರ ಮನವೊಲಿಸಿ, ದಮ್ಮಯ್ಯಾ ಹಾಕಿ ಕರೆದುಕೊಂಡು ಬಂದು ಟ್ಯೂಬ್‌ಗೆ ಪ್ಯಾಚ್ ಹಾಕಿಸುವುದು ನಮ್ಮ ನಮ್ಮ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ.
ಮಂಗಳೂರಿನ ನವಭಾರತ ಸರ್ಕಲ್ ಬಳಿಯಲ್ಲೊಬ್ಬ ಅಜ್ಜಿಯ ಟ್ಯೂಬ್ ಪಂಕ್ಚರ್‍ ಅಂಗಡಿಯಿದೆ. ಅಜ್ಜಿ ಕ್ಯಾಷಿಯರ್‍. ವಯಸ್ಸಿಗೆ ತಕ್ಕಷ್ಟು ಧಾರ್ಷ್ಟ್ಯವೂ ಇದೆ. ಆಕೆಯ ಅಸಿಸ್ಟೆಂಟ್ ಹುಡುಗನಿಗೆ ಕೈತುಂಬಾ ಕೆಲಸ. ಒಮ್ಮೆ ರಾತ್ರಿ ೯.೩೦ರ ವೇಳೆಗೆ ಮನೆಗೆ ಹೊರಟಾ‌ಗ ನನ್ನ ಬೈಕ್‌ನ ಟೈರ್‍ ಪ್ಯಾಚ್ ಆಗಿ ‘ತಳ್ಳು ಗಾಡಿ ಐಸಾ’ ಮಾಡಿಕೊಂಡು ಅಜ್ಜಿಯ ಮುಂದೆ ಹೋಗಿ ದೀನಮುಖ ಭಾವ ಹೊತ್ತು ನಿಂದೆ.
ಏನು?! ಎಂಬಂತೆ ಕಣ್ಣಲ್ಲೇ ಅಜ್ಜಿ ಆವಾಝ್ ಹಾಕಿದ್ರು. ಟೈರು ತೋರಿಸಿದೆ.
ಅಲ್ಲೆಲ್ಲೂ ಆಕೆಯ ಪಂಕ್ಚರ್‍ ಪ್ರವೀಣ ಹುಡುಗ ಕಾಣಿಸಲಿಲ್ಲ.
ಟೈಮಾಯ್ತು...ಇವತ್ತಾಗಲ್ಲ ಎಂದು ಖಡಾಖಂಡಿತವಾಗಿ ಹೇಳಬೇಕೆ ಈ ಅಜ್ಜಿ.
ಸುರತ್ಕಲ್‌ಗೆ ಹೋಗಬೇಕು, ೧೦ ಗಂಟೆ ಕಳೆದ್ರೆ ಬಸ್ ಸಿಗಲ್ಲ...ಹೀಗೆ ಅನುನಯದ ದನಿಯಲ್ಲಿ ಅಜ್ಜಿಯನ್ನು ಪುಸಲಾಯಿಸಿದೆ...ಸುಮಾರು ೧೦ ನಿಮಿಷದ ಗೋಗರೆತದ ಬಳಿಕವೂ ಅಜ್ಜಿ ಕರಗಲಿಲ್ಲ. ಕೊನೆಗೆ ಭಾವರಹಿತರಾಗಿ ‘ಹೋದವ ಬರ್‍ಲಿ ಅವ ಮಾಡಿದ್ರೆ ಆಯ್ತು ನನಗ್ಗೊತ್ತಿಲ್ಲ’(ನಿಮ್ಮಂಥವರನ್ನು ಯಾವಾಗಲೂ ನೋಡುತ್ತೇನೆ?) ಎಂಬ ಡೈಲಾಗ್.
ಕೊನೆಗೂ ಸ್ಪಾನರ್‍ಗಳ ನಾದ ಹೊರಹೊಮ್ಮಿಸುತ್ತಾ ಹುಡುಗ ಬಂದ. ಅಜ್ಜಿ ಕಣ್ಣಲ್ಲೇ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ, ಟೈರನ್ನೊಮ್ಮೆ ಹುಡುಗನ ಮುಖವನ್ನೊಮ್ಮೆ ನೋಡಿದ್ರು. ಹುಡುಗ ಆಣತಿಯನ್ನು ಅರ್ಥೈಸಿಕೊಂಡವನಂತೆ ನೇರ ಬೈಕನ್ನು ಮೈನ್ ಸ್ಟಾಂಡಿಗೇರಿಸಿ ಸರಸರನೆ ಟೈರು ಕಳಚಿ ತನ್ನ ಕಾರ್ಯ ಶುರು ಹಚ್ಚಿಕೊಂಡ....

ಟೈರಿಗೆ ಪಂಕ್ಚರ್‍ ಹಾಕುವವರು ಹತ್ತಿರವಿದ್ದರೆ, ಪಂಕ್ಚರ್‍ ಹಗಲೇ ಇದ್ದರೆ ನಿಮ್ಮ ಅದೃಷ್ಟ. ಇಲ್ಲವಾದರೆ ಸೈಕಲ್ ಮಾದರಿಯಲ್ಲಿ ಬೈಕನ್ನು ತಳ್ಳಿಕೊಂಡು ಹೋಗಬೇಕು. ಅದೂ ನಿಮ್ಮ ೧೫೦-೧೮೦ ಸಿಸಿಯ ಕೋಣಗಳಂತಹ ಬೈಕಾದರೆ ತಳ್ಳುವುದೂ ಶಿಕ್ಷೆಯೇ! ಊರಿಗೆ ಒಬ್ಬನೇ ಪಂಕ್ಚರ್‍ ಹಾಕುವವನಾದರೆ ಅವನ ಧಿಮಾಕು ನೋಡಬೇಕು. ಗೆಳೆಯರೊಬ್ಬರ ಟೈರು ಪಂಕ್ಚರಾದಾಗ, ಹೊಸ ಟ್ಯೂಬೇ ಹಾಕಬೇಕು ಎಂದು ಪಟ್ಟು ಹಿಡಿದ ಮುದುಕ ಮೆಕ್ಯಾನಿಕ್ ಒಬ್ಬರು ಆಲ್‌ಮೋಸ್ಟ್ ಡಬಲ್ ಹಣ ವಸೂಲಿ ಮಾಡಿದ್ದರಂತೆ. ಕೆಲವರ ಕೆಲಸವೂ ಕಳಪೆ. ಅದೃಷ್ಟವೂ ಕೈಕೊಟ್ಟಿತ್ತೇನೋ..ನಾನೊಮ್ಮೆ ಒಂದು ವಾರದಲ್ಲಿ ನಾಲ್ಕು ಬಾರಿ ಪಂಕ್ಚರ್‍ ಹಾಕಿಸಬೇಕಾಗಿ ಬಂದಿತ್ತು.
ನನ್ನ ಬೈಕ್‌ನ ಟೈರ್‍ ಪಂಕ್ಚರ್‍ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಮೆಕ್ಯಾನಿಕ್‌ಗಳನ್ನು ನೋಡಿದ್ದೇನೆ. ಉಪ್ಪಿನಂಗಡಿ ಬಳಿಯ ನಗು ಮೊಗದ ಮೆಕ್ಯಾನಿಕ್ ಒಬ್ಬರು ಮಧ್ಯಾಹ್ನ ಕರೆಂಟ್ ಇಲ್ಲದಿದ್ದರೂ ಗ್ಯಾಸ್ ಸ್ಟೋವ್ ಬಳಸಿ ಹಾಟ್ ಪ್ರೆಸ್ ಪಂಕ್ಚರ್‍ ಹಾಕಿ, ನಾನು ಹಣದ ಕೊಡುವ ಜತೆ ಥ್ಯಾಂಕ್ಸ್ ಹೇಳಿದಾಗ ಬಹಳ ಖುಷಿ ಪಟ್ಟಿದ್ದರು. ಟೈರ್‍ ಪಂಕ್ಚರಿನಂತಹ ಪೇಚಿನ ಪ್ರಸಂಗಗಳಲ್ಲಿ ಉತ್ತಮ ಸೇವೆ ಕೊಡುವ ಮೆಕ್ಯಾನಿಕ್‌ಗಳು ಆಪದ್ಬಾಂಧವರಂತೆಯೇ ಕಾಣಿಸಿದರೂ ಅಚ್ಚರಿಯಿಲ್ಲ.

7 comments:

KRISHNA said...

ನಿಮ್ಮ ಅನುಭವ ಅಕ್ಷರಷಃ ಸತ್ಯ (ನನ್ನ ಲೆಟೆಸ್ಟ್ ಅನುಭವವೂ ಹೌದು.) ಕಷ್ಟ ಕಾಲಕ್ಕೆ ಪಂಕ್ಚರ್‍ ಹಾಕುವವರು ಆಪದ್ಭಾಂಧವರಂತೇ ಕಾಣುತ್ತಾರೆ ಮಾತ್ರವಲ್ಲ, ನಮ್ಮ ಅವಸರದ ಸದುಪಯೋಗ ಪಡೆದು ಹೆಮ್ಮೆಯ ನಗು ಬೀರುತ್ತಾರೆ. ಉಡುಪಿ ಸಮೀಪದಲ್ಲೆಲ್ಲೋ ಫೋನ್ ಕರೆ ಮಾಡಿದರೆ ತಾವೇ ಬೈಕಲ್ಲಿ ಬಂದು ಪಂಕ್ಚರ್‍ ಮಾಡುವ ಪುಣ್ಯಾತ್ಮರೊಬ್ಬರು ಇದ್ದಾರಂತೆ. ಅವರು ಭಾನುವಾರವೂ ರಜಾ ಹಾಕುವುದಿಲ್ಲವಂತೆ, ಪತ್ರಿಕೆಯಲ್ಲಿ ಓದಿದ ನೆನಪು.ದೇವರು ಅವರನ್ನು ಚೆನ್ನಾಗಿಟ್ಟಿರಲಿ!

shivu.k said...

ವೇಣು ಆನಂದ್,

ತುಂಬಾ ಚೆನ್ನಾಗಿ ಬರೆದಿದ್ದೀರಿ....

ನಾನು ದಿನಪೂರ್ತಿ ನನ್ನ ಟೂವೀಲರಿನಲ್ಲಿ[ದಿನಪತ್ರಿಕೆ ಕೆಲಸದ ಮೇಲೆ] ಓಡಾಡುವುದರಿಂದ ನನಗೆ ಇಂಥ ಅನುಭವ ಜಾಸ್ತಿ ಆಗಿದೆ....ನೀವು ಹೇಳಿದಂತೆ ಅಂಗಡಿ ಮೆಕಾನಿಕ್‌ಗಳು ಸಕಲಕಲಾ ವಲ್ಲಭರು....

Sushrutha Dodderi said...

ಇದೊಂಥರಾ ಟೈಮ್ಲೀ ಆಗಿದೆ ನನ್ನ ಪಾಲಿಗೆ!

ನಿನ್ನೆ ತಾನೇ ನನ್ನ ಬೈಕಿನ ಟೈರು ಮೊದಲ ಬಾರಿಗೆ ಪಂಕ್ಚರ್ ಆಗಿ, ಒಂದು ಕಿಲೋಮೀಟರು ದಬ್ಬಿ, ಪ್ಯಾಚ್ ಕಟ್ಟಿಸಿದ್ದಾಯ್ತು. ಆಫೀಸಿಗೆ ಲೇಟಾಗುತ್ತೆ ಅನ್ನೋ ಆತಂಕ ಒಂದು ಕಡೆ, ಇನ್ನೂ ತಿಂಡಿ ತಿಂದಿಲ್ಲದೇ ಹಸಿವು ಇನ್ನೊಂದು ಕಡೆ, ಗಾಡಿ ತಳ್ಳಬೇಕು ಬೇರೆ.. ಅಯ್ಯೋ! ರಗಳೆ ಬೇಡ! ಒಂದು ಸಣ್ಣ ಮೊಳೆ ಚುಚ್ಚಿಕೊಂಡು ಇಷ್ಟೆಲ್ಲಾ ಕತೆ! :)

ಹರೀಶ ಮಾಂಬಾಡಿ said...

:)

sunaath said...

ಜಾತಸ್ಯ ಮರಣಂ ಧ್ರುವಮ್ ಎಂದು ಹೇಳ್ತಾರಲ್ಲ, ಹಾಗೇ
ಟೈರಸ್ಯ ಪಂಕ್ಚರಂ ಧ್ರುವಮ್ ಎಂದು ಹೇಳಬೇಕಷ್ಟೆ.

ಚಿತ್ರಾ ಸಂತೋಷ್ said...

ಹಿಹಿಹಿ ಪಂಕ್ಚರ್.!
-ಚಿತ್ರಾ

VENU VINOD said...

thanks all for responding:) nice to know that many among us have similair kinda experience ;)

Related Posts Plugin for WordPress, Blogger...