20.7.09

ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತ


ಏನೇನೋ ಕಾರಣಗಳಿಂದ ಈ ವರ್ಷ ಮೆಚ್ಚಿನ ಅಭ್ಯಾಸ ಟ್ರೆಕ್ಕಿಂಗಿನಿಂದ ಅನಿವಾರ್ಯವಾಗಿ ದೂರವುಳಿದಿದ್ದೆ. ನಾವೇ ರಚಿಸಿಕೊಂಡ ಚಾರಣ ತಂಡದ ಬಹುತೇಕ ಹುಡುಗರೂ ಅವರವರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡ ಕಾರಣ ಆ ತಂಡವೀಗ ಬಹುತೇಕ ಬರ್ಖಾಸ್ತುಗೊಂಡಿದೆ !
ನನ್ನನ್ನು ಮತ್ತೆ ಹಸಿರಿನತ್ತ ಸೆಳೆಯಲು ಸಹಾಯ ಮಾಡಿದ್ದು ಮಿತ್ರ ದಿನೇಶ್ ಹೊಳ್ಳ.
‘ಮಳೆಗಾಲದ ಚಾರಣ ಹಾಕಿದ್ದೇವೆ. ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತಕ್ಕೆ’ ಎಂಬ ಅವರ ಒಂದು ಸಂದೇಶ ಬಂದಾಗಲೇ ರಜೆ ಫಿಕ್ಸ್ ಮಾಡಿಟ್ಟು ಬಿಟ್ಟೆ.
ಚಾರ್ಮಾಡಿಯಲ್ಲಿ ಕೊಟ್ಟಿಗೆಹಾರದತ್ತ ಪ್ರಯಾಣ ಬೆಳೆಸುವಾಗ ಎಡಬದಿಗೆ ಸುಂದರ ಬೆಟ್ಟಗಳೂ, ಬಲಬದಿಗೆ ರುದ್ರರಮಣೀಯ ಕಣಿವೆ ಕೊರಕಲು ಗಮನ ಸೆಳೆಯುತ್ತವೆ. ಈ ಕೊರಕಲಿನ ಕಾಡಿನಲ್ಲಿ ಅನೇಕ ಸುಂದರ ಜಲಪಾತಗಳು ಅಡಗಿಕೊಂಡಿವೆ. ಆದರೆ ಹೆಚ್ಚಿನ ಇಂತಹ ಜಲಪಾತಗಳೂ ಇಲ್ಲಿರುವ ಎಸ್ಟೇಟುಗಳ ಭದ್ರಕೋಟೆಯಲ್ಲಿ ಬಂದಿಯಾಗಿವೆ. ಹಾಗಾಗಿ ಅನಿವಾರ್ಯವಾಗಿ ಅವು ಕೆಲವೇ ಮಂದಿಯ ಕಣ್ಣಿಗೆ ಬೀಳುತ್ತವೆ.
ಅಂತಹುದೇ ಒಂದು ಸುಂದರಿ ಕಲ್ಲರ್ಬಿ ಜಲಪಾತ.
ಬಾಂಜಾರ ಮಲೆಯೆಂಬ ಬೆಟ್ಟದಲ್ಲಿ ಮನೆ ಮಾಡಿಕೊಂಡು ಅನೇಕ ದಶಕಗಳಿಂದಲೇ ಇಲ್ಲಿ ವಾಸಿಸುತ್ತಿದ್ದಾರೆ ಮಲೆಕುಡಿಯ ಜನಾಂಗದ ಮಂದಿ. ಅವರಿರುವುದೂ ಒಂದು ಎಸ್ಟೇಟಿಗಾಗಿ. ಎಸ್ಟೇಟಿನ ಮಂದಿ ಇವರಿಗೂ ಸಾಕಷ್ಟು ಅನುಕೂಲ ಕಲ್ಪಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಸುಮಾರು ೩೪ ಮನೆಗಳು ಇಲ್ಲಿವೆ. ೧೨೦ ಮಂದಿ ಜನರಿದ್ದಾರೆ. ಎಲ್ಲರೂ ಒಂದೇ ಮನೆಯ ಮೂಲದಿಂದ ಬಂದವರೇ.
ಹೆಂಚಿನ ಮನೆ ಬಂದಿದೆ, ವರ್ಷಪೂರ್ತಿ ಹರಿಯುವ ನೀರಿನ ಸೆಲೆ ಇಲ್ಲಿರುವ ಕಾರಣ, ಅದರಿಂದಲೇ ವಿದ್ಯುತ್ ತಯಾರಿಸುವ ವ್ಯವಸ್ಥೆ ಇಲ್ಲಿದೆ, ಕೈತುಂಬಾ ಕೆಲಸ ಎಸ್ಟೇಟಿನಲ್ಲಿದೆ. ಮಕ್ಕಳಿಗೆ ಶಾಲೆ ಮಾತ್ರ ೧೪ ಕಿ.ಮೀ ದೂರದ ಕಕ್ಕಿಂಜೆಗೆ ಹೋಗಬೇಕು. ಅಲ್ಲಿನ ಆಶ್ರಮಶಾಲೆಯಲ್ಲಿ ಉಳಿದುಕೊಂಡು ಮಕ್ಕಳು ಕಲಿಯುತ್ತಾರೆ.



ಈ ಬಾಂಜಾರ ಮಲೆ ಆದಿವಾಸಿಗಳ ಮನೆಗಳ ಎಡೆಯಲ್ಲೇ ಹೋಗಬೇಕು ಕಲ್ಲರ್ಬಿ ಜಲಪಾತ ನೋಡುವುದಕ್ಕೆ. ಕಳೆದ ೧೦-೧೫ ದಿನಗಳಿಂದ ಎಗ್ಗಿಲ್ಲದೇ ಸುರಿಯುತ್ತಿದ್ದ ಮಳೆಯಲ್ಲೂ ನಮ್ಮ ತಂಡದ ಸದಸ್ಯರ ಸಂಖ್ಯೆ ಸರಿಯಾಗಿ ಅರ್ಧಶತಕವಾಗಿತ್ತು! ಬೆಂಗಳೂರಿನಿಂದಲೂ ಮಹಿಳೆಯೊಬ್ಬರು ಚಾರಣಾಸಕ್ತಿಯಿಂದ ಬಂದಿದ್ದರು ಎನ್ನುವುದು ಮತ್ತೊಂದು ವಿಶೇಷ.
ಯೂತ್ ಹಾಸ್ಟೆಲ್‌ನ ಯಾವತ್ತೂ ಬರುವವರ ಜತೆಗೆ ಅನೇಕ ಹೊಸಮುಖಗಳಿದ್ದವು. ಒಂದೇ ದಿನದ ಚಾರಣ ಹಾಗೂ ಹೆಚ್ಚು ನಡೆಯುವುದಕ್ಕಿಲ್ಲ ಎಂಬ ‘ಮಾಹಿತಿ ಸೋರಿಕೆ’ ಆಗಿದ್ದರಿಂದ ಹೀಗಾಗಿತ್ತು! ಏನೇ ಇರಲಿ ಹೊಸಬರು ಸೇರುತ್ತಿದ್ದರೆ ಚಾರಣ ತಂಡವೂ intact ಆಗಿರುತ್ತದೆ.

ಭರ್ಜರಿ ಮಳೆ ನಮ್ಮ ದಾರಿಯುದ್ದಕ್ಕೂ ಸುರಿದು ನೆಲತುಂಬಾ ನೀರು ಮತ್ತು ಜಿಗಣೆ(leech). ಜಿಗಣೆಗಳು ಎಂದಿನಂತೆ ರೇಜಿಗೆ, ಕಿರಿಕಿರಿ ಉಂಟುಮಾಡುತ್ತಲೇ ಇದ್ದವು. ದಾರಿಮಧ್ಯೆ ಭಾರೀ ಸದ್ದಿನೊಂದಿಗೆ ಹೊಳೆಯೊಂದು ಹರಿಯುತ್ತಿತ್ತು, ಅದೇ ನದಿಯೇ ಮುಂದೆ ಕಲ್ಲರ್ಬಿಯಾಗಿ ಧುಮುಕುತ್ತದೆ. ಆ ಸೇತುವೆ ದಾಟಿ ಮುಂದೆ ಹೋದೆವು.


ಬಾಂಜಾರಮಲೆಯಲ್ಲಿ ಮಲೆಕುಡಿಯರು ಅಡಕೆ ತೋಟ ಬೆಳೆಸಿದ್ದಾರೆ. ನಮಗೆ ಜಲಪಾತ ತೋರಿಸಲು ಬಾಂಜಾರಮಲೆಯ ಯುವಕರಾದ ರವೀಂದ್ರ, ಜಗದೀಶ ಮತ್ತು ಹುಡುಗ ವಿಶ್ವನಾಥ ಸೇರಿಕೊಂಡರು. ಮರದಿಂದಲೇ ಮಾಡಿದ ತೂಗುಸೇತುವೆಯಲ್ಲಿ ಹಳ್ಳವೊಂದನ್ನು ದಾಟಿ ಮುಂದುವರಿದೆವು. ಭಾರೀ ಮಳೆಯಾದ್ದರಿಂದ ದಾರಿಯಿಡೀ ಕೊಚ್ಚೆಕೆಸರು. ತೋಟ ಮುಗಿದು ಮತ್ತೆ ಕಾಡಿಗೆ ಕಾಲಿಟ್ಟೆವು. ಕಾಡಿನಲ್ಲಿ ಕಡಿದಾದ ಇಳಿ‘ಜಾರು’ ದಾರಿ. ಮಣ್ಣು ತೀರಾ ಅಂಟಂಟಾಗಿದ್ದ ಕಾರಣ ಚಾರಣಿಗರು ಮೊದಲ ಮಳೆಗೆ ಬೈಕ್ ಸ್ಕಿಡ್ ಆಗುವಂತೆ ಬಿದ್ದು, ಬಳಿಕ ಎದ್ದು ಹೋಗುತ್ತಿದ್ದರು. ಹಲವು ಮಂದಿ ‘ನಮಗೆ ಬಾಂಜಾರಮಲೆಯೇ ಸಾಕು, ಜಲಪಾತ ನೀವೇ ನೋಡಿಬನ್ನಿ’ ಎಂದು ಹಿಂದುಳಿದರು.




ಅಂತು ನಮ್ಮ ದಾರಿತೋರುವವರ ಸಹಾಯದಲ್ಲಿ ಕಾಡಿನ ಬಳ್ಳಿ ಹಿಡಿದು ಭೋರಿಡುವ ಜಲಪಾತದ ಪಾದ ತಲುಪಿದೆವು. ಸರಿಯಾಗಿ ನೋಡುವುದಕ್ಕೂ ಜಲಪಾತದ ಅರ್ಭಟ ಅಡ್ಡಿಯಾಗಿತ್ತು. ಕ್ಯಾಮೆರಾ ಬ್ಯಾಗಲ್ಲಿ ಬೆಚ್ಚಗೆ ಮಲಗಿತ್ತು ತೆಗೆದರೆ ಹಾಳಾದೀತು ಎನ್ನುವ ಭಯ. ಅಷ್ಟು ಜೋರಾಗಿ ನೀರಿನ ಹನಿಗಳು ರಾಚುತ್ತಿದ್ದೆವು. ಕಷ್ಟಪಟ್ಟು ಮೊಬೈಲ್ ಕ್ಯಾಮೆರಾದಲ್ಲೆ ಒಂದೆರಡು ಫೋಟೋ ತೆಗೆದುಬಿಟ್ಟೆ.


ಮತ್ತೆ ಬೀಳುತ್ತ ಏಳುತ್ತಾ ಲಂಬವಾದ ದಾರಿಯಾಲ್ಲಿ ಮೇಲೇರಿ ಬಂದೆವು. ಹೊಟ್ಟೆ ಚುರುಗುಟ್ಟುತ್ತಿತ್ತು, ಗಡಿಯಾರ ನೋಡಿದರೆ ಗಂಟೆ ಆಗಲೇ ೨.೩೦ ! ಬಾಟಲಿ ನೀರು ಖಾಲಿಯಾಗಿತ್ತು, ಬಾಂಜಾರಮಲೆಯ ಮನೆಯೊಂದರಲ್ಲಿ ನೀರು ಕೇಳಿ ಕುಡಿದೆವು. ಅಲ್ಲಿಂದ ಮುಂದುವರಿದು ನಮ್ಮ ಟೆಂಪೋ ಸೇರಿ ತಿಂಡಿ ಖಾಲಿಮಾಡಿ ಮತ್ತೆ ಶುರುವಿಟ್ಟ ಮಳೆಯಲ್ಲಿ ನಮ್ಮ ಮರುಪ್ರಯಾಣ....




15 comments:

ಶ್ರೀನಿಧಿ.ಡಿ.ಎಸ್ said...

paapigaLa gumpige taavo serpadeyaagiddeeri.:)

podu banji pottaavunattande aven barepun bethe!

Ittigecement said...

ವೇಣು....

ಚಂದದ ಫೋಟೊಗಳು..
ಸುಂದರ ನಿರೂಪಣೆ....

ನಮಗೂ ಒಮ್ಮೆ ಹೋಗಿಬರೋಣ ಎನ್ನುವ ಆಸು ಹುಟ್ಟಿಸಿ ಬಿಟ್ಟಿದೆ....

ಧನ್ಯವಾದಗಳು...

ರಾಜೇಶ್ ನಾಯ್ಕ said...

ಅಬ್ಬಾ! ಎಷ್ಟು ನೀರು! ಆ ಹೊಳ್ಳ ಅಷ್ಟು ಜನರನ್ನು ಕರೆದೊಯ್ದು ಹೇಗೆ ಮ್ಯಾನೇಜ್ ಮಾಡುತ್ತಾರೋ! ಬಾಂಜಾರು ಮಲೆಯ ನಿವಾಸಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದು ಒಳ್ಳೆಯದಾಯಿತು.

shivu.k said...

ವೇಣು ವಿನೋದ್,

ಸೂಪರ್ ಅನ್ನಿಸುತ್ತೆ ನಿಮ್ಮ ಚಾರಣ ಮತ್ತು ಅದರ ಫೋಟೋಗಳನ್ನು ನೋಡಿ. ಜೊತೆಗೊಂದಿಷ್ಟು ಜಲಸ್ ಕೂಡ ಬಂತು ನಮಗೆ ಇಂಥ ಅವಕಾಶ ಸಿಗೊಲ್ಲವಲ್ಲ[ಸಿಕ್ಕಿದರೂ ಬಿಡುವಾಗೊಲ್ಲವಲ್ಲ ಅಂತ]ಒಟ್ಟಾರೆ ನಿಮ್ಮ ಚಾರಣ ಕಷ್ಟಸುಖಗಳನ್ನು ಚಿತ್ರಸಹಿತ ಕೊಟ್ಟು ನಮ್ಮ ಕಣ್ಮನ ತಣಿಸಿದ್ದೀರಿ...ಮುಂದಿನದನ್ನು ಬರೆಯಿರಿ...

ಸುಪ್ತದೀಪ್ತಿ said...

ಮಳೆಗಾಲದ ಚಾರಣ... ಅಪಾಯಕಾರಿ ರೋಮಾಂಚಕಾರಿ. ನಿಮ್ಮಂಥ ಹುಡುಗರಿಗೇ ಆಗುವಂಥದ್ದು.

>> ಶ್ರೀನಿಧಿ ಡಿ.ಎಸ್.>>
ಈರ್’ಲಾ ಊರುಡು ಇತ್ತರ್ಡ ಪೋವೊಲಿ ಅತ್ತಾ? ಕಾಂಕ್ರೀಟ್ ಕಾಡ್’ದುಲಯಿ ಕುಲ್ಲುದು ಪಚ್ಚೆ ಕಾಡ್’ನ್ ಎಣ್ಣ್ಂಡ ಎಂಚ?

ಶ್ರೀನಿಧಿ.ಡಿ.ಎಸ್ said...

@JM
:)moolu ittade pope marre, itte time ijji athe..

Rakesh Holla said...

Very nice place...
Monsoon trekking always thrilling...
Good article...

ಶರಶ್ಚಂದ್ರ ಕಲ್ಮನೆ said...

ವೇಣು ವಿನೋದ್,
ಒಳ್ಳೆ ಮಾಹಿತಿ... ಮಳೆಗಾಲದಲ್ಲಿ ಟ್ರೆಕ್ಕಿಂಗ್ ಚನ್ನಾಗಿರುತ್ತೆ... ಫೋಟೋಗಳು ಚನ್ನಾಗಿವೆ.


ಶರಶ್ಚಂದ್ರ ಕಲ್ಮನೆ

lancyad said...

ಚಾರಣ ಚೆನ್ನಾಗಿತ್ತು. ಓದುವಾಗ ನನಗೂ ಒಮ್ಮೆ ಚಾರಣ ಮಾಡಲೇಬೇಕು ಅನ್ನಿಸಿತ್ತು ಮಾತ್ರ ನಿಜ..ಇನ್ನೊಮ್ಮೆ ಪ್ರಯತ್ನಿಸುತ್ತೇನೆ..ಶುಭವಾಗಲಿ.

ಹರೀಶ ಮಾಂಬಾಡಿ said...

ಮಾಹಿತಿ ಚನ್ನಾಗಿವೆ

PARAANJAPE K.N. said...

ಚೆನ್ನಾಗಿದೆ, ಚಿತ್ರ-ಲೇಖನ. ಬಾ೦ಜಾರಮಲೆ ಬಗ್ಗೆ ಗೊತ್ತಿದ್ದೂ, ಅಲ್ಲಿಗೆ ಸಮೀಪದ ಹಳ್ಳಿಯಲ್ಲೇ ಹುಟ್ಟಿದವನಾಗಿಯೂ ನನಗೆ ಒಮ್ಮೆಯೂ ಹೋಗಲಾಗಿಲ್ಲವಲ್ಲ ಎ೦ಬ ನಿರಾಶೆ ಕಾಡಿತು. ಒಮ್ಮೆ ಹೋಗಿಬರಲೆಬೇಕೆನಿಸಿದೆ.

ಮಿಥುನ ಕೊಡೆತ್ತೂರು said...

ನನಗೆ ಬರಲಾಗಲಿಲ್ಲ. ಓದಿದ ಮೇಲೆ ಪಶ್ಚಾತ್ತಾಪವಾಗುತ್ತಿದೆ. ಒಳ್ಳೆಯ ಅವಕಾಶ ತಪ್ಪಿ ಹೋದುದಕ್ಕೆ

VENU VINOD said...

ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ಎಲ್ಲ ಮಿತ್ರರಿಗೆ ಥ್ಯಾಂಕ್ಸು :)

sudheer kumar said...

olleya baraha venu,trekking anthu super,thanks to holla sir.

Yeshwanth HV said...

Nice place Venu. I need to know few more details of the place. Can you please mail me your mobile number?

Related Posts Plugin for WordPress, Blogger...