1.8.11

ಹೆದ್ದಾರಿಕಥೆಗಳು-4, ಪ್ರತಿಮೆಗೆ ಜೀವ ಬಂದಾಗ!

ಹೆದ್ದಾರಿ ಬದಿಯ ಉದ್ಯಾನದಲ್ಲಿ ದಶಕಗಳ ಕಾಲ ಧೂಳು ತಿನ್ನುತ್ತಾ ನಿಂತಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಆ ಪ್ರತಿಮೆಗೆ ಅದೊಂದು ದುರದೃಷ್ಟಕರ ರಾತ್ರಿಯಲ್ಲಿ ಜೀವ ಬಂತು. ಸ್ವಾತಂತ್ರ‍್ಯ ಸಿಕ್ಕಿ ಒಂದೆರಡು ತಿಂಗಳಲ್ಲಿ ಪ್ರಾಣಬಿಟ್ಟ ಮಹಾತ್ಮರ ಪ್ರತಿಮೆಯಾಗಿತ್ತದು.
ಜೀವ ಬಂದ ಕೂಡಲೇ ಪ್ರತಿಮೆ ತನ್ನ ಎತ್ತರದ ಚೌಕಿಯಿಂದ ಕೆಳಕ್ಕೆ ಧುಮುಕಿತು, ಅದಕ್ಕೆ ತನ್ನ ಕಾಲದ ಸ್ವಾತಂತ್ರ‍್ಯ ಹೋರಾಟದ ಕೆಚ್ಚು ನೆನಪಿಗೆ ಬಂತು.
ಇಷ್ಟು ದಿನ ಪ್ರತಿಮೆಯಾಗಿತ್ತಲ್ಲವೇ ಈಗಿನ ಪರಿಸ್ಥಿತಿಯ ಸಂದಿಗ್ಧತೆ ತಿಳಿದಿರಲಿಲ್ಲ. ರಾಜಾಜೋಷವಾಗಿ ಓಡುತ್ತಿದ್ದ ಕಾರುಗಳನ್ನು ನೋಡಿ ಪ್ರತಿಮೆಗೆ ಖುಷಿಯಾಯಿತು. ಜನರಲ್ಲಿ ಶ್ರೀಮಂತಿಕೆ ಬಂದಿದೆ, ಇಷ್ಟು ಸಪಾಟಾದ ರಸ್ತೆಗಳಾಗಿವೆ, ಐಷಾರಾಮಿ ಕಾರುಗಳಿವೆ, ನಾನು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದು ಸಾರ್ಥಕ ಎನಿಸಿತು.
ಹಾಗೇ ಹೆದ್ದಾರಿ ಪಕ್ಕದಲ್ಲಿ ನಗರದ ಕಡೆಗೊಂದು ಸರ್ಕೀಟು ಹೊರಟಿತು ಪ್ರತಿಮೆ. ನಡೆದು ಸುಸ್ತಾದಾಗ ದಾರಿಯಲ್ಲಿದ್ದ ಬಸ್ ಬೇಯಲ್ಲಿ ಕುಳಿತು ದಣಿವಾರಿಸಲು ಹೊರಟರೆ ಅಲ್ಲಿ ಮುಲುಗುತ್ತಾ ಕುಳಿತಿದೆ ಒಂದು ಜೀವ. ಹರಕು ಕಂಬಳಿ ಹೊದೆದು ಕುಳಿತಿದ್ದ ಭಿಕ್ಷುಕನವನು.
ಚಳಕ ಹೊಡೆದಂತಾಯ್ತು ಪ್ರತಿಮೆಯ ಹೃದಯದಲ್ಲಿ..ನಾನು ಬಡವರು-ಶ್ರೀಮಂತರ ನಡುವೆ ಅಂತರವಿರಬಾರದು ಎಂದು ಪ್ರತಿಪಾದಿಸಿದ್ದೆ..ಆದರೆ ಇಷ್ಟು ಕಡುಬಡವನಿರುವುದು ಹೇಗೆ? ಸ್ವಾತಂತ್ರ‍್ಯ ಬಂದು 64 ವರ್ಷಗಳೇ ಆಗಿಹೋದರೂ ಇನ್ನೂ ಭಿಕ್ಷುಕರಿದ್ದಾರೆಯೇ ಇಲ್ಲಿ ಎಂದು ಪ್ರತಿಮೆ ಭಿಕ್ಷುಕನಲ್ಲಿ ಪ್ರಶ್ನಿಸಿತು.
ಹೆಹ್ಹೆಹ್ಹೆ...ಒಳ್ಳೇ ಪ್ರಶ್ನೆ ಕಣಯ್ಯಾ...
‘ಎಲ್ಲಿಂದ ಬಂದೆ ನೀನು? ಅಲ್ಲಾ ಹಾಕಿದ ಗುಂಡು ಇಳಿದಿಲ್ವಾ?’ ಭಿಕ್ಷುಕ ಕೇಳಿದ.
ಪ್ರತಿಮೆಗೆ ಒಂದೂ ತಿಳಿಯಲಿಲ್ಲ..ಸುಮ್ಮನೆ ಮುಖ ಮುಖ ನೋಡಿತು. 
‘ನಾನೊಂದು ಪ್ರತಿಮೆ, ಅನೇಕ ವರ್ಷಗಳಿಂದ ಅದೋ ಅಲ್ಲಿ ನಿಂತಿದ್ದೆ ಈಗ ಜೀವ ಬಂತು...ಸುಮ್ಮನೆ ಇಲ್ಲೇನಾಗುತ್ತಿದೆ ನೋಡಬೇಕಿದೆ’
ಓ ಹಂಗಾ. ಕೇಳು..ನೋಡು ನಮ್ಮ ದೇಶದಲ್ಲಿ ಇರೋದೇ ಹೀಗೆ..ದೇಶ ಬಹಳ ಅಭಿವೃದ್ಧಿಯಾಗಿದೆ ಈಗ. ಎಲ್ಲೇ ನೋಡಿ ಬಿಲ್ಡಿಂಗ್, ಕೈಗಾರಿಕೆ, ಮಾಲ್, ಬಿಎಂಡಬ್ಲ್ಯು ಕಾರು ಬಂದಿದೆ, ಆದರೂ ನಾವು ಕೆಲವರು ಹೀಗೇ ಇದ್ದೇವೆ, ನಮಗೆ ಕೆಲಸ ಮಾಡಲು ಉದಾಸೀನ ಎಂದು ಸಮಾಜದ ಆಢ್ಯರು ಹೇಳ್ತಾರೆ...ನನ್ನಲ್ಲಿದ್ದ ಜಮೀನು ಕೈಗಾರಿಕೆಗೆ ಕೊಂಡೊಯ್ದರು. ನನಗೆ ಕೈಗೊಂದಿಷ್ಟು ಕಾಸು ಕೊಟ್ಟರು, ಕಾಸು ನೋಡಿ ಬುದ್ಧಿ ಕೆಟ್ಟಿತು, ಈಗ ಇಲ್ಲಿದ್ದೇನೆ ನೋಡು.
ಎಲ್ಲಾ ಹಾಳಾಗಲು ನೋಡು ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದೇ ಕಾರಣ.ಆ ಸ್ವಾತಂತ್ರ‍್ಯ ಹೋರಾಟಗಾರರೇನಾದರೂ ಸಿಕ್ಕಲಿ...ಬಿಡೋದಿಲ್ಲ..ಭಿಕ್ಷುಕ ಅಬ್ಬರಿಸತೊಡಗಿದ.
ನಾನು ಸ್ವಾತಂತ್ರ‍್ಯ ಹೋರಾಟಗಾರನೇ, ಸತ್ಯವಂತ, ಅಹಿಂಸಾಪರ ಹೋರಾಟಗಾರ...ಎಂದಿತು ಪ್ರತಿಮೆ.
ಹೌದಾ...ಈಗ ರಾತ್ರಿ. ಯಾರೂ ನೋಡುವುದಿಲ್ಲ. ನಿನಗೂ ಏನೂ ಕಾಣುವುದಿಲ್ಲ..ಇನ್ನು ನಿಂತು ಜನರ ಕಣ್ಣಿಗೆ ಸಿಗಬೇಡ, ನೀನೂ ನೋಡಲು ಹೋಗಬೇಡ..ನೋಡಿದರೆ ನೀನು ಸಹಿಸಲಾರೆ.
ನೋಡು ಇದೇ ರಸ್ತೆ ಮೂಲಕ ದೊಡ್ಡ ಟ್ರಕ್‌ಗಳಲ್ಲಿ ನಮ್ಮ ಮಣ್ಣನ್ನೇ ಸಾಗಿಸಿ ಅದೋ ಆ ಬಂದರಿನ ಮೂಲಕ ಕಳುಹಿಸುತ್ತಾರೆ, ಮಣ್ಣೂ ಈಗ ಚಿನ್ನವಾಗಿದೆ.
ಇಲ್ಲಿ ಕೊಲೆಗಾರರು, ದೋಚುವವರು, ಲೂಟಿಕೋರರೂ ಎದೆಯುಬ್ಬಿಸಿ ನಡೆಯುತ್ತಾರೆ, ನಿನ್ನಂತೆ ಸತ್ಯ ಸತ್ಯ ಎಂದವರು ಸತ್ತಂತೆಯೇ, ಹಾಗಾಗಿ ಎಲ್ಲಾದರೂ ಓಡಿ ಬದುಕಿಕೋ ಯಾರ ಕೈಗೂ ಸಿಗಬೇಡ ಎಂದ ಭಿಕ್ಷುಕ.
ಪ್ರತಿಮೆಗೆ ಗಾಬರಿಯಾಗಿ ಹೊರ ಬಂದು ಆಕಾಶ ನೋಡಿತು. ರಸ್ತೆ ಪಕ್ಕ ನಡೆಯತೊಡಗಿತು. 
ಅಷ್ಟರಲ್ಲಿ ಕಾರೊಂದು ದೂರ ನಿಂತಿತು...ಏನನ್ನೋ ಎಸೆದು ಹಾಗೇ ಸರಿದು ಹೋಯಿತು..ಪ್ರತಿಮೆ ಅಲ್ಲಿ ಹೋಗಿ ನೋಡಿದರೆ ಅದೊಂದು ದೇಹವಾಗಿತ್ತು. ಯುವತಿಯ ದೇಹ...ಪ್ರಾಣವಿಲ್ಲದ ದೇಹ..ದೇಹ ತುಂಬ ಗೀರುಗಳು..
ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು...ಪ್ರತಿಮೆಯನ್ನು ನೋಡಿ ಪೊಲೀಸರಿಗೆ ಯಾರೋ ಕಳ್ಳನೋ, ಕೊಲೆಗಾರನಂತೆಯೋ ಕಂಡಿತು...ನಿಲ್ಲು ನಿಲ್ಲು ಎನ್ನುತ್ತಾ ಪಿಸ್ತೂಲು ತೋರಿಸಿ ಅಧಿಕಾರಿ ಬೊಬ್ಬಿರಿದ. 
ಪ್ರತಿಮೆಗೆ ಭಿಕ್ಷುಕ ಹೇಳಿದ್ದು ನೆನಪಾಯ್ತು..
ನನಗಿದು ಕಾಲವಲ್ಲ ಎಂದಿದ್ದೇ ಪ್ರತಿಮೆ ಓಟಕ್ಕಿತ್ತಿತು..ಪೊಲೀಸರು ಬರುವ ಮೊದಲೇ ಪರಾರಿಯಾಯಿತು.
ಮರುದಿನ ಅಲ್ಲೆಲ್ಲೂ ಪ್ರತಿಮೆ ಕಂಡುಬರಲಿಲ್ಲ.
ಅಂದು ಸಂಜೆ ಪತ್ರಿಕೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆ ನಾಪತ್ತೆ ಎಂಬ ಒಂದು ಸುದ್ದಿಯೂ ಪ್ರತಿಮೆಯಿಲ್ಲದೆ ಅನಾಥವಾಗಿ ಕಾಣುವ ಅದರ ಪೀಠದ ಚಿತ್ರವೂ ಪ್ರಕಟವಾಗಿತ್ತು.
ಅದೇ ದಿನ ಮುಖ್ಯಮಂತ್ರಿಗಳು ಅದೇ ಸ್ಥಳದಲ್ಲಿ ಚಿನ್ನದ ಪ್ರತಿಮೆಯನ್ನೇ ಅಲ್ಲಿ ನಿರ್ಮಿಸಲಾಗುವುದು ಎಂಬ ಹೇಳಿಕೆಯನ್ನೂ ನೀಡಿದರು.

5 comments:

Girish K.N. said...

ಹೃದಯಸ್ಪರ್ಶಿ ಕಥೆ.. ಬಹಳ ಚೆನ್ನಾಗಿದೆ

ಉಷಾ... said...

ಮತ್ತೆ ಜೀವ ಬರದೆ ಇರಲಿ ಅಂತ ಇರ್ಬೇಕು :) ಚೆನ್ನಾಗಿದೆ....

sunaath said...

ಒಳ್ಳೇ ವಿಡಂಬನೆ.

prashanth shetty said...

ನಮ್ಮ ಪ್ರೀತಿಯ ವೇಣು ಅವರೇ
ನಿಮ್ಮ ಈ ಬರಹ ನಿಜವಾಗಲು ತುಂಬಾ ಅರ್ಥಪೂರ್ಣವಾಗಿದೆ
ಹೃದಯವನ್ತರಿಗಂತೂ ಅರ್ಥವಾಗಬಹುದು ....... ಪ್ರತಿಮೆಗಳಿಗೆ ಜೀವ ಬರಬಹುದೇ ?

shivu.k said...

ಹೆದ್ದಾರಿ ಕತೆಗಳು ಚೆನ್ನಾಗಿ ಬರುತ್ತಿದೆ. ಈ ಮನಸ್ಪರ್ಶಿಯಾಗಿದೆ ಈ ಕತೆ.

Related Posts Plugin for WordPress, Blogger...