4.3.12

ಹಸಿರು ಅರಳುವಾಗ ಖುಷಿಯ ಬಾಗಿಲು ತೆರೆದಂತೆ

ಕಳೆದೆರಡು ವರ್ಷಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ಬೀಜ ಬಿತ್ತುವುದು, ಬೆಳೆ ತೆಗೆಯುವುದು ನಡೆಯುತ್ತಿದೆ. ನನಗೂ ಒಂದೊಮ್ಮೆ ಆ ಹುಚ್ಚು ಹಿಡಿದಿತ್ತು. ಆಗ ಬೆಳೆ ತೆಗೆದದ್ದೇ ತೆಗೆದದ್ದು.. ಅಲ್ಲಿವರೆಗೂ ಮನೆಯ ಕೈತೋಟದಲ್ಲಿ ಅಮ್ಮ ಮಾಡುವ ಕೃಷಿಗೆ ನನ್ನಿಂದಾದಷ್ಟು ಸಹಾಯವನ್ನೂ ಮಾಡುತ್ತಿದ್ದೆ, ಆದರೆ ಫಾರ್ಮ್‌ವಿಲ್ಲೆ ಬಂದ ಬಳಿಕ ಕೃಷಿಯ ಮಂಪರು ಮತ್ತಷ್ಟು ನನ್ನನ್ನು ಆವರಿಸಿದ್ದು ಮಾತ್ರ ನಿಜ.
ಫಾರ್ಮ್‌ವಿಲ್ಲೆ ಎನ್ನುವುದು ಒಂದು ವಿಚಾರವನ್ನಂತೂ ಸ್ಪಷ್ಟಗೊಳಿಸಿದೆ, ನಮ್ಮದು ಕೃಷಿ ಪ್ರಧಾನ ರಾಷ್ಟ್ರ, ಬದಲಾದ ಸನ್ನಿವೇಶದಲ್ಲಿ ಕೃಷಿಗೆ ಪ್ರಾಧಾನ್ಯ ಕಡಿಮೆಯಾಗಿ ಕೃಷಿಕರ ಮಕ್ಕಳು ನಗರ ಸೇರಿಕೊಂಡು ಉದ್ಯಮಗಳಲ್ಲಿ ದುಡಿದರೂ ಅವರ ಮನದಲ್ಲೊಬ್ಬ ಕೃಷಿಕ ಇನ್ನೂ ಜೀವಂತವಾಗಿದ್ದಾನೆ! 
ಅದೇನೇ ಇರಲಿ, ನಮ್ಮ ಮನೆಯ ಅಂಗಳದಲ್ಲೀಗ ಹೂಗಳು ಅರಳುತ್ತಿವೆ, ಹಿತ್ತಿಲ ತೋಟದಲ್ಲಿ ತರಕಾರಿ ನಮಗೆ ಬೇಕಷ್ಟಾದರೂ ಆಗುತ್ತಿದೆ. ನಮ್ಮದು ಸುರತ್ಕಲ್‌ನ ಹೊಸಬೆಟ್ಟು ಪ್ರದೇಶ. ಇಲ್ಲಿ ಒಂದು ಕಾಲದಲ್ಲಿ ಸುತ್ತಲೂ ಗದ್ದೆಗಳಿದ್ದವು. ಈಗ ಅವೆಲ್ಲ ಮಾಯವಾಗಿ ಅಲ್ಲೆಲ್ಲ ಮನೆಗಳೇ. ಆದರೆ ನಮ್ಮಲ್ಲೊಬ್ಬ ರೈತರಿದ್ದಾರೆ, ವಲ್ಲಿ ಅಂತ. ಅವರು ಹೈನುಗಾರಿಕೆ ಮಾಡಿ ನಮ್ಮ ಪ್ರದೇಶದಲ್ಲಿ ಹಾಲು ಪೂರೈಸುತ್ತಾರೆ. ಅವರ ಗದ್ದೆಗೂ ರಿಯಲ್‌ ಎಸ್ಟೇಟ್‌ ಧಣಿಗಳು ಲಕ್ಷ ಲಕ್ಷ ಕಂತೆ ಆಫರ್‌ ಮಾಡಿದ್ದಿದೆ, ಆದರೆ ನಾನಿರುವಷ್ಟು ಕಾಲ ಗದ್ದೆ ಮಾರುವುದಿಲ್ಲ, ಭೂಮಿ ನಮ್ಮ ತಾಯಿ ಎಂದು ಗಟ್ಟಿಯಾಗಿ ನಿಂತ ಕುಳ ಈ ವಲ್ಲಿಯಣ್ಣ.
ನನ್ನ ಕೃಷಿಗೆ ಈ ವಲ್ಲಿಯಣ್ಣನ ಸಹಕಾರವೂ ಇದೆ. ಸಣ್ಣ ಪುಟ್ಟ ಟಿಪ್ಸ್‌ ಕೊಡುತ್ತಾರೆ, ಬೀಜ ವಿನಿಮಯವೂ ಇದೆ.
ಹಾಗೆಂದು ಕೃಷಿ ಸುಲಭ ಎಂದುಕೊಳ್ಳಬೇಡಿ. ಬೀಜವೊಡೆದು ಚಿಗುರು ಕಾಣಿಸುತ್ತ ನಾವು ಖುಷಿ ಪಡುತ್ತಿರುವಾಗಲೇ ರೋಗ ಆಕ್ರಮಿಸಿಕೊಂಡದ್ದಿದೆ. ತುಂಬಾ ಚೆನ್ನಾಗಿ ಚಿಗುರಿ, ಹೂ ಬಿಟ್ಟ ಅಲಸಂಡೆಗೆ ಹೇನು ಬಾಧಿಸಿ ಒಣಗಿ ಹೋಗಿದೆ, ಬದನೆಗೆ ಒಡೆಯುವ ರೋಗ ಕಾಡಿದೆ. 
ಮೊದಮೊದಲು ಶ್ರದ್ಧೆಯಿಂದ ಹರಿವೆ ಬೀಜ ಹಾಕಿದ್ದನ್ನು ನಮ್ಮ ಇರುವೆ ಮಿತ್ರರು ರಾತ್ರೋ ರಾತ್ರಿ ತಮ್ಮ ಆಹಾರ ಸಂಗ್ರಹಣಾಗಾರಕ್ಕೂ ಸಾಗಿಸಿದ್ದರು. ಬಳಿಕ ಎಚ್ಚರಿಕೆಯಿಂದ ಸಾಲಿನ ಸುತ್ತಲೂ ಸೆವಿನ್‌ ಪುಡಿ ಚೆಲ್ಲಿದ ನಂತರವಷ್ಟೇ ಹರಿವೆ ಪುಟಿದೆದ್ದದ್ದು. 
ಇವೆಲ್ಲದರ ನಡುವೆಯೂ ನಮ್ಮ ಕುಟುಂಬಕ್ಕೆ, ಪಕ್ಕದ ಕೆಲ ಮನೆಗಳಿಗೆ ಕೊಡುವಷ್ಟು ತರಕಾರಿಗೆ ಕೊರತೆಯಿಲ್ಲ, ಜತೆಗೆ ನಾವೇ ಬೆಳೆದದ್ದು, ಹೆಚ್ಚೇನೋ ರಾಸಾಯನಿಕ ಹಾಕಿಲ್ಲ ಎಂಬ ತೃಪ್ತಿ ಬೇರೆ.
ಇವೆಲ್ಲ ಘಟ್ಟದಲ್ಲೂ ಗಮನ ಕೊಡುತ್ತಿದ್ದುದು ಪತ್ನಿ ರಶ್ಮಿ ಮತ್ತು ಅಮ್ಮ. ಬೆಳಗ್ಗೆ  ತರಕಾರಿ/ಹೂ ಗಿಡಗಳಿಗೆ ನೀರುಣಿಸುತ್ತಾ, ನೀರು ಕುಡಿಯಲು ಬರುವ ಹಕ್ಕಿಗಳ ನೋಡಿ ಖುಷಿ ಪಡುವ ಸರದಿ ರಶ್ಮಿಯದ್ದಾದರೆ  ಸಂಜೆಗೆ ಅದು ಅಮ್ಮನ ಅವಕಾಶ! ಹೀಗೆ ಎಲ್ಲರ ಕೃಪೆಯಿಂದ ಅಂಗಳ, ಹಿತ್ತಿಲಲ್ಲಿ ಹಸಿರು ಚಿಗುರಿದೆ. ಇನ್ನಷ್ಟು ಯೋಜನೆಗಳಿವೆ....
ನಿಮ್ಮ ಮನೆ ಸುತ್ತ ಕೊಂಚ ಜಾಗ ಇದ್ದರೆ, ಒಂದಿಷ್ಟು ಸೆಗಣಿ, ಸುಡುಮಣ್ಣು, ಗೋಮೂತ್ರ ಇವೆಲ್ಲ ಸೇರಿಸಿಕೊಳ್ಳಲು ನಿಮಗೆ ಸಾಧ್ಯವಾದರೆ ನೀವೂ ಕೃಷಿ ಮಾಡಿ ನೋಡಿ...
ನಮ್ಮ ಸುತ್ತ ಹಸಿರಿನ ಜಾಲ ತೆರೆದುಕೊಳ್ಳುವಾಗ ಅದು ಕೊಡುವ ಖುಷಿ  ಅದು ಬೇರೆಯೇ! ಮುಂದಿರುವುದು ನಮ್ಮ ಪುಟ್ಟ ಪ್ರಯತ್ನದ ಫಲದ ದೃಶ್ಯಗಳು....
ಮೊದ ಮೊದಲು ಹುಳಕಾಟದಿಂದ ಆಗೋದೇ ಇಲ್ಲ ಎಂದಿದ್ದ ತೊಂಡೆಯೂ ಈಗ ಕೃಪೆ ತೋರಿದೆ

ಚಿಗುರುತ್ತಿರುವ ಅಲಸಂಡೆ

ಕತ್ತಿ ಅವರೆ

ಎಣ್ಣೆ ಬದನೆ...ಎಣ್ಣೆಗಾಯಿಗೆ ಫೇಮಸ್ಸು!

ಬಸಳೆ ಜಾಲ

ಮಟ್ಟಿಗುಳ್ಳನನ್ನು ಧ್ಯಾನಿಸುತ್ತಾ ಈ ಬದನೆ ತಿನ್ನಬಹುದೇನೋ

ಹಸಿರು ಹರಿವೆ

ಒಂದು ಕಟಾವು ಮುಗಿದ ಬಳಿಕ ಎರಡನೇ ಹರಿವೆ ಕಳಕ್ಕೆ ತಯಾರಿ

ಜರ್ಬೆರಾ ಕೊಂಚ ಸೊರಗಿದ್ದಾಳೆ, ಮುಂದೆ ನೋಡೋಣ...

ಹಸಿ ಮೆಣಸಿನ ಕಾಯಿ ಚಟ್ನಿಗೆ ಇನ್ನಿಲ್ಲದ ರುಚಿ...

ಕೆಂಬಣ್ಣದ ಇಂಪೇಶಿನ್ಸ್‌

ಪಡುವಲ ಕಾಯಿ ಚಪ್ಪರ

ಕುಳ್ಳ ಗುಲಾಲಿ ವರ್ಣದ ಅಂತೂರಿಯಂ

ಪಿಂಕ್‌ ಇಂಪೇಶನ್ಸ್‌

ಹಸಿರು ಪುದೀನಾ

ರಕ್ತವರ್ಣದ ಅಂತೂರಿಯಂ

ಇರುವಂತಿಗೆ

ಬಿಳಿಸೇವಂತಿ

ಸುಗಂಧರಾಜ


11 comments:

mouna said...

chennagide. namma terrace nalli amma swalpa soppu belisiddaru. ashte.

ರಾಜೇಶ್ ನಾಯ್ಕ said...

ನಿಮ್ಮ ಮನೆಗೆ ಬರ್ಬೇಕಾಯ್ತಲ್ಲ ಈಗ......

Subrahmanya said...

Excellenet ! ನಾನು ಇಷ್ಟು ಮಾತ್ರ ಹೇಳಬಲ್ಲೆ !.

ಸಿಂಧು sindhu said...

ವೇಣು,
ಓದಿ ಖುಷಿಯಾಯ್ತು. ನೋಡಿ ಖುಷಿ ಪಡೋ ಕಾಲ ಬರಲಿ ಅಂತ ಹಂಬಲ ಇದೆ. ನೋಡೋಣ .
ಫೋಟೋಗಳು ಚೆನಾಗಿವೆ. ರಶ್ಮಿ'ಗೆ ಹಕ್ಕಿ ಫೋಟೋ ಹಿಡಿಯೋ ಹವ್ಯಾಸ ಕಲ್ಸಿಬಿಡಿ. :)
ಅಂದ ಹಾಗೆ ಸೀಮೆ ಬದನೆ/ಸೀಮೆ ಸೌತೆ ಬಳ್ಳಿ ಯಾಕಿಲ್ಲ. ಅದು ನೆಟ್ರೆ ಕೇರಿಗೆಲ್ಲ ಕೊಡ್ಬೊದು.
ಪ್ರೀತಿಯಿಂದ,
ಸಿಂಧು

ಮೌನರಾಗ said...

ಪ್ರಕೃತಿ , ಕೃಷಿಯ ಕುರಿತು ನಿಮ್ಮ ಪ್ರೀತಿ ಗೆ ನಿಮ್ಮ ಮನೆಯವರ ಅಕ್ಕರೆಗೆ ಅದೇನು ಹೇಳಬೇಕೋ ಗೊತ್ತಾಗುತ್ತಿಲ್ಲ......
ಶುಭವಾಗಲಿ...

sunaath said...

ಅಭಿನಂದನೆಗಳು.

ವಿಕ್ರಮ ಹತ್ವಾರ said...

great going!!...basale photo chennaagide...illi basale sigutte...hari soppu sigolla...missing hari soppina saasime :(

ವಿಕ್ರಮ ಹತ್ವಾರ said...

great going!!...basale photo chennaagide....am missing hari soppina saasime :(

VENU VINOD said...

ಮೌನ,ಒಳ್ಳೆಯದು, ಟೆರೇಸ್‌ ಕೂಡಾ ತರಕಾರಿ ಬೆಳೆಯಲು ಚೆನ್ನಾದ ಜಾಗ..
ರಾಜೇಶ್‌, ಖಂಡಿತಾ ಬನ್ನಿ :)
ಥ್ಯಾಂಕ್ಸ್‌ ಸುಬ್ರಹ್ಮಣ್ಯ...
ಸಿಂಧೂ,ನಿಮ್ಮ ಮೆಚ್ಚುಗೆಗೆ ಧನ್ಯ, ನಿಮ್ಮ ಸಲಹೆಗಳನ್ನೂ ಪಾಲಿಸುವೆ :)
ಮೌನರಾಗ, ಓದಿ ಪ್ರೋತ್ಸಾಹಿಸುವ ನಿಮ್ಮ ನಲ್ಮೆಗೂ ನನ್ನಿ...
ಸುನಾಥರಿಗೆ ವಂದನೆ..
ವಿಕ್ರಂ, ಥ್ಯಾಂಕ್ಸ್‌., ನಂಗೂ ಹರಿವೆ ಸೊಪ್ಪಿನ ಸಾಸ್ವೆ ಇಷ್ಟಾನೇ

ವನಿತಾ / Vanitha said...

Wow!! sakattaagide :)
Hugs to Amma & Rashmi..
Nanna Amma Blore li terrace mele tarakari belestaare; ooralli mava kooda maadtare..ooralli kumbalakayi, haagalakaayi ee sala tumba aagittu :)

ರಾಧಾಕೃಷ್ಣ ಆನೆಗುಂಡಿ. said...

https://www.facebook.com/groups/Agriculturist/

Related Posts Plugin for WordPress, Blogger...