6.8.14

ವಿಭ್ರಮೆ

ಎಷ್ಟುದಿನ ಹೀಗೆ ನೀನು
ಬೇಸಿಗೆಯ ಮೋಡದಂತೆ
ಕಟ್ಟಿ ನಿಲ್ಲಬಲ್ಲೆ
ಒಂದನೇ ತರಗತಿಗೆ ಹೋಗಲೊಪ್ಪದ
ಪೋರನ ಹಾಗೆ
ಗೂಡಿಗೆ ಹೋಗಲೊಪ್ಪದ
ಹಠಮಾರಿ ನಾಯಿಮರಿ
-ಯ ಹಾಗೆ!

ಇನ್ನೇನು ಮಳೆ ಸುರಿದೇಬಿಟ್ಟಿತು
ಎನ್ನುವಾಗಲೇ ಬೀಸಿ
ಬಂದ ಗಾಳಿಗೆ ಮೋಡ ಭಗ್ನ
ಎಂಬ ಹಾಗೆ ಆಗಿದೆ
ಇತ್ತೀಚೆಗೆ ಮನದ
ಭಾವಪರದೆಯಲ್ಲಿ
ಮೂಡುತ್ತಿಲ್ಲ ಚಿತ್ತಾರ

ಪೆನ್ನು ಹಿಡಿದು ಕುಳಿತಾಗಲೂ
ಮಂಜಿನ ದಾರಿಯಲ್ಲಿ ಕುಳಿತ
ಹಾಗೆ, ಕಣ್ಣ ಮುಂದೆ
ಖಾಲಿ ಖಾಲಿ ದಾರಿ
ಹಸಿರಿನ ಇಶಾರೆಗಾಗಿ
ಕಾಯುವ ಕಣ್ಣು
ಪದಗಳ ಪೋಣಿಸುವಲ್ಲಿ
ಸೋಲುವುದೇಕೆ!

image courtesy: http://www.tarachettur.in/

3 comments:

ಅಶೋಕವರ್ಧನ ಜಿ.ಎನ್ said...

ಏಳು, ಎದ್ದೇಳು
ಮಲೆ ಮುಟ್ಟುವತನಕ ನಿಲ್ಲದಿರು!

ಸಂಬಂಧಗಳ ಇಂಬುಳ ಕಿತ್ತು
ರಾಜಕಾರಣದ ದುರ್ವಾಸನೆ ಮೀರಿ
ನಗರಮಿತಿಯ ಮುಳ್ಳು ಕಲ್ಲುಗಳ ಮೆಟ್ಟಿ
ಜಾತಿ ಮತಗಳ ಮಂಜು ಕಳೆದು

ನಡೆ ಮುಂದೆ ನಡೆ ಮುಂದೆ
ಮಲೆ ಮುಟ್ಟುವತನಕ ನಡೆಯುತ್ತಿರು!

ಅನರ್ಥಗಳ ಪೊದರು ಬಿಡಿಸಿ
ಸವಾಲುಗಳ ಬಂಡೆ ಮೆಟ್ಟಿ
ಆನಂದಗಳ ಶಿಖರ ಸಾಧಿಸು
ಅರ್ಥಪ್ರತತಿಯ ಗಂಗಾಪಾತಕ್ಕೆ ಜಟಾಧರನಾಗು

ಏಳು, ನಡೆ ಗುರಿ ಮುಟ್ಟುವತನಕ ನಿಲ್ಲದಿರು!!

sunaath said...

ನಿಮ್ಮ ಕವನ ಹಾಗು ಅಶೋಕವರ್ಧನರ ಸ್ಪಂದನ ಎರಡೂ ಚೆನ್ನಾಗಿವೆ!

Badarinath Palavalli said...

ಒಮ್ಮೊಮ್ಮೆ ಹೀಗೆಯೇ ಮನವು ವಿಭ್ರಮೆಗೆ ಒಳಗಾಗಿ ನಮ್ಮನ್ನು ಆಳ ಕಂದಕದ ಕತ್ತಲಿಗೆ ದೂಡಿಬಿಡುತ್ತದೆ.
ಶೈಲಿ ಮತ್ತು ಶೀರ್ಷಿಕೆ ಇಷ್ಟವಾದವು.

Related Posts Plugin for WordPress, Blogger...