14.3.16

ಚಾರ್ಮಾಡಿಯ ಏರಿನಲ್ಲಿ ಸೈಕಲ್ ತುಳಿದದ್ದು

ಬೆಳಗ್ಗೆ ಹಾಸಿಗೆಯಿಂದ ಏಳುವಾಗಲೇ ಅಗ್ಗಿಷ್ಟಿಕೆ ಪಕ್ಕದಲ್ಲಿದೆಯೋ ಎನ್ನುವಷ್ಟು ಮಟ್ಟಿಗೆ ಧಗೆ, ಜತೆ ಬೆವರಿನ ಬೇಗೆ...ಈ ಹೊತ್ತಿನಲ್ಲೂ ಸೈಕ್ಲಿಂಗ್ ಬೇಕೇ ಎಂಬ ಜಿಜ್ಞಾಸೆ ಹುಟ್ಟುತ್ತಾ ಕೊನೆಗೆ ನಿದ್ದೆಗೇ ಜಾರಿಬಿಡುವ ಅಪಾಯ ಕಳೆದ ಕೆಲವು ದಿನಗಳಿಂದ...
ಕಳೆದ ಬಾರಿ ಕುದುರೆಮುಖದ ಬೃಹತ್ ಸವಾಲನ್ನು ಯಶಸ್ವಿಯಾಗಿ ಅಶೋಕವರ್ಧನ್, ಚಿನ್ಮಯದೇಲಂಪಾಡಿ, ಅರವಿಂದ ಕುಡ್ಲರ ಜತೆಗೆ ಹೋಗಿ ಬಂದಾಗಲೇ ಮುಂದಿನ ಪಯಣ ಚಾರ್ಮಾಡಿ ಎಂದು ನಾವೇ ತೀರ್ಮಾನಿಸಿಯಾಗಿತ್ತು.
ಫೆಬ್ರವರಿಯಲ್ಲಿ ಚಾರ್ಮಾಡಿ ಘಾಟಿಯನ್ನು ನಾವೇ ಚಾರ್ ಆದ್ಮಿಗಳು ಮಾರ್ಚ್ 2ನೇ ವಾರ ಏರೋದೆಂದೂ ಫೋನಿನಲ್ಲೇ ಮಾತಾಡಿಕೊಂಡಿದ್ದೆವು. ನಿವೃತ್ತ ಬದುಕಿನಲ್ಲಿ ಖುಷಿ ವರ್ಧಿಸುತ್ತಾ ಸಾಗುತ್ತಿರುವ ಅಶೋಕ ವರ್ಧನರು ಯಾವ ಡೇಟಾದ್ರೂ ರೆಡಿ ಎಂದಿದ್ದರು. ದುಡಿಯುವ ವರ್ಗಕ್ಕೆ ಸೇರಿದ ನಾನು, ಚಿನ್ಮಯ, ಅರವಿಂದ ಕುಡ್ಲ ಮಾತ್ರ ವಿವಿಧ ಕರ್ತವ್ಯ ಸಂಬಂಧೀ ವಿಚಾರಗಳಲ್ಲಿ ಮುಳುಗೆದ್ದು ಕೊನೆಗೆ ನನಗೆ ಸೈಕಲ್ ಸವಾರಿಗೆ ಸಂದರ್ಭ ಒದಗಿ ಬಂತು. ಕಚೇರಿ ಕಾರ್ಯದಲ್ಲಿ ಚಿನ್ಮಯ ತನ್ಮಯರಾದರೆ ಅರವಿಂದರನ್ನು ಅವರ ಹೆಡ್ ಮೇಸ್ಟ್ರು ಆಗಲೇಬೇಕಾದ ಕೆಲಸಕ್ಕೆ ಕಟ್ಟಿಹಾಕಿದ್ದರು......
ಕೊನೆಯಲ್ಲಿ ಉಳಿದದ್ದು ನಾನು, ಅಶೋಕವರ್ಧನ್ ಇಬ್ಬರೇ. ಅಷ್ಟು ಹೊತ್ತಿಗೆ ಮಂಗಳೂರು ಸೈಕ್ಲಿಂಗ್ ಕ್ಲಬ್ಬಿನ ಅನಿಲ್ ಶೇಟ್ ಬರುವುದಾಗಿ ಹೇಳಿ ಸೇರಿಕೊಂಡರು. ಅಂತೂ ಮಾ.12ರ ಬೆಳಗ್ಗೆ 5.30ಕ್ಕೆ ನಂತೂರು ಜಂಕ್ಷನ್ನಿನಲ್ಲಿ ಸೇರಿ ಮುಂದಕ್ಕೆ ಹೋಗಲು ನಿರ್ಧರಿಸಿಕೊಂಡೆವು. ಎರಡು ದಿನಕ್ಕಾಗುವ ಕನಿಷ್ಠ ಸರಂಜಾಮು ಕಟ್ಟಿಕೊಂಡು ಹೊರಟೆವು. 

ನಂತೂರು ಜಂಕ್ಷನ್ನಿನಲ್ಲಿ ಅನಿಲ್ ಶೇಟ್ ಅವರ ಸ್ನೇಹಿತ ಹಾಗೂ ಈಜು-ಓಟ-ಸೈಕ್ಲಿಂಗ್ ಇವು ಮೂರನ್ನೂ ನಿರಂತರವಾಗಿ ಮಾಡಬಲ್ಲ ಟ್ರಯತ್ಲೀಟ್ ಆಜಾನುಬಾಹು ಸಮರ್ಥ ರೈ ಕೂಡಾ ಬಂದಿದ್ದರು. ನಮ್ಮನ್ನು ಬೀಳ್ಕೊಡುವುದಕ್ಕೆ ಬಿ.ಸಿ.ರೋಡಿನ ವರೆಗೆ ಚಿನ್ಮಯ ಕೂಡಾ ಬಂದರು. ಬಿ.ಸಿ.ರೋಡಿನ ಹೊಟೇಲಲ್ಲಿ ಬಿಸಿಬಿಸಿ ಇಡ್ಲಿ ವಡೆ ಇಳಿಸಿ ಚಿನ್ಮಯ ವಾಪಸಾದರೆ ನಮ್ಮ ಪಯಣ ಮುಂದುವರಿಯಿತು. 9.30ರ ವೇಳೆಗೆ ಉಜಿರೆ ಬಂತು. 


ನಮ್ಮ ಮುಂದಿದ್ದ ಅನಿಲ್, ಸಮರ್ಥ್ ಕಾಣಲಿಲ್ಲ. ಅವರದ್ದು ಸಪೂರ ಟೈರಿನ ರೋಡ್ ಬೈಕ್. ಹಾಗಾಗಿ ಪೆಡಲು ಮಾಡಿದ ಬಲದಲ್ಲಿ ಮುನ್ನುಗ್ಗುವ ಸಾಮರ್ಥ್ಯ ನಮ್ಮ ಎಂಟಿಬಿ ಹಾಗೂ ಹೈಬ್ರಿಡ್ಗಿಂತ ಹೆಚ್ಚು. ಅಶೋಕವರ್ಧನರ ದಪ್ಪ ಟೈರಿನ ಮೆರಿಡಾ ಎಂಟಿಬಿ ತುಸು ನಿಧಾನ, ನನ್ನ ಹೈಬ್ರಿಡ್ ಅದಕ್ಕಿಂತ ಪರವಾಗಿಲ್ಲ, ಆದರೆ ರೋಡ್ ಬೈಕಲ್ಲಿ ಹೆಸರೇ ಹೇಳುವಂತೆ ಸಪಾಟು ರಸ್ತೆಯಿದ್ದರೆ ಎಷ್ಟು ದೂರವನ್ನೂ ಕ್ರಮಿಸುವ ಧೈರ್ಯ ಸಿಗುತ್ತದೆ.
ಫೋನ್ ಮಾಡಿದಾಗ ಅವರಿಬ್ಬರೂ ಮುಂದೆ ಹೋಗುತ್ತಿದ್ದೇವೆ, ಚಾರ್ಮಾಡಿ  ಘಾಟಿ ಶುರುವಾಗುವಲ್ಲೇ ಹೊಟೇಲಿದೆ, ಚಹಾ ಕುಡಿಯೋಣ ಎಂದರು. ಹಿಂಬಾಲಿಸಿದೆವು. ಬೇಸಗೆಯ ಧಗೆ ಆಗಲೇ ನಮ್ಮ ಮೇಲೆ ಪರಿಣಾಮ ತೋರಿಸುತ್ತಿತ್ತು. ಕುಡಿದಷ್ಟೂ ನೀರು ಬೆವರಾಗಿ ಹೋಗುತ್ತಿತ್ತು. ಹಾಗೆಂದು ನೀರು ಕುಡಿಯಿವುದು ನಿಲ್ಲಿಸಿದರೆ ದೇಹ ನಿರ್ಜಲೀಕರಣಗೊಂಡು ಸ್ನಾಯು ಸೆಳೆತ ಬರುವ ಸಾಧ್ಯತೆ ಇತ್ತು. 

ನುರಿತ ಸೈಕ್ಲಿಸ್ಟ್ ಹಾಗೂ ಈಗಾಗಲೇ 20 ಸಾವಿರ ಕಿ.ಮೀ ದೂರವನ್ನು ಸೈಕ್ಲಿಂಗ್ನಲ್ಲಿ ಸಾಧಿಸಿರುವ ಅನಿಲ್ ಶೇಟ್ ನನ್ನ ಸವಾರಿಯ ಶೈಲಿಯನ್ನು ಪರಿಶೀಲಿಸಿ, ನಾನು ಪೆಡಲಿಂಗ್ ಮಧ್ಯ ಪಾದದಲ್ಲಿ ಮಾಡುತ್ತಿರುವುದಾಗಿ ನನ್ನ ದೋಷ ಕಂಡುಕೊಂಡರು. ತುದಿಪಾದದಲ್ಲಿ ತುಳಿಯಬೇಕು, ಅದರಿಂದ ಶಕ್ತಿ ಕಡಿಮೆ ಸಾಕು ಎಂದೂ ಹೇಳಿಕೊಟ್ಟರು. ಅದನ್ನು ಮಾಡಿನೋಡಿದಾಗ ಹೌದು ಎನ್ನಿಸಿತು.
ಮುಂದೆ ಚಾರ್ಮಾಡಿ  ಏರುದಾರಿ, ಎಡಬದಿಯಲ್ಲಿ ಎತ್ತರಕ್ಕೆ ಏರಿಕಲ್ಲು ಶಿಖರ ನಮ್ಮನ್ನು ಸ್ವಾಗತಿಸುತ್ತಿತ್ತು. ಅನಿಲ್, ಸಮರ್ಥ ಎಂದಿನಂತೆ ತಮ್ಮದೇ ವೇಗದಲ್ಲಿ ಮುಂದೆ ಸಾಗುತ್ತಿದ್ದರೆ ನಾನು, ಅಶೋಕ್ ಫೊಟೊ ತೆಗೆಯುತ್ತಾ, ನೀರು ಕುಡಿಯುತ್ತಾ ಏರತೊಡಗಿದೆವು. ರಸ್ತೆ ಇಕ್ಕೆಲಗಳಲ್ಲೂ ಪ್ಲಾಸ್ಟಿಕ್ ಪೌಚ್, ಬಾಟಲಿ ಧಂಡಿಯಾಗಿ ಬಿದ್ದಿತ್ತು. ಮುಂದೆ ಏರೊಂದರಲ್ಲಿ ಹಂಸ ಎಂಬವರ ಮುಳ್ಳುಸೌತೆ, ಅನನಾಸು ಮಾರಾಟದ ಔಟ್ ಲೆಟ್ಟಲ್ಲಿ ಎರಡರದ್ದೂ ರುಚಿ ನೋಡಲೇಬೇಕಾಯ್ತು. ಮೊನ್ನೆ ಕಳೆದ ಶಿವರಾತ್ರಿಯಲ್ಲಿ ಭಕ್ತಾದಿಗಳ ಪಾದಯಾತ್ರೆಯ ಉಚ್ಚಿಷ್ಟವೇ ರಸ್ತೆ ಇಕ್ಕೆಲದಲ್ಲಿ ಬಿದ್ದಿರುವ ತಾಜಾ ಪ್ಲಾಸ್ಟಿಕ್ ಕಸ ಎಂಬ ಮಾಹಿತಿಯೂ ಸಿಕ್ಕಿತು.

ಮುಂದೆ ಕಡಿದಾದ ತಿರುವು ಸಹಿತ ದಾರಿ. ನನ್ನ ಕಾಲುಗಳಲ್ಲಿ ಸಣ್ಣಗೆ ಸೆಳೆತ ಶುರು! ಆದರೂ ನೀರು ಕುಡಿಯುತ್ತಾ  ಸಾಗುತ್ತಿದ್ದೆ. ಸೋಮನಕಾಡು ಕಳೆದು ಅಂತೂ ಏರು ಹಾದಿ ಬಹುತೇಕ ಮುಗಿಯುವ ಹೊತ್ತಿಗಾಗಲೇ ಬಲಗಾಲಿನ ಪಕ್ಕದ ಸ್ನಾಯು ಸರಿಯಾಗಿ ತನ್ನಿರುವಿಕೆ ಹೇಳಲು ಶುರು ಮಾಡಿತು. ಅಲ್ಲೇ ಬದಿಯಲ್ಲಿ ಈ ಬೇಸಿಗೆಯಲ್ಲೂ ನೀರು ಜಿನುಗಿ ಹರಿಯುತ್ತದೆ. ಅಲ್ಲಿ ಮುಖಾರವಿಂದ ತೊಳೆದು ಖಾಲಿಯಾದ ಬಾಟಲಿಗಳಿಗೆ ತಾಜಾ ಖನಿಜಯುಕ್ತ ಹನಿನೀರನ್ನೇ ಒಡ್ಡಿ ತುಂಬಿಕೊಂಡೆವು. ಅಶೋಕವರ್ಧನರ ಬೆನ್ಚೀಲದಲ್ಲಿದ್ದ ನಕ್ಷತ್ರ ನೇರಳೆಗೂ ಒಂದು ಗತಿ ಕಾಣಿಸಿದರೂ ಸಮರ್ಥ ಅನಿಲ್ ಕಾಣಸಿಕ್ಕಲಿಲ್ಲ. 

ನಮ್ಮ ಪಾಡಿಗೆ ಮುಂದುವರಿದೆವು. ಬಲಬದಿಯಲ್ಲಿ ವಿಶಾಲ ಕಣಿವೆ ದೂರದಲ್ಲಿ ಒಣಗಿನಿಂತ ಕಲ್ಲುಗುಂಡಿ ಫಾಲ್ಸ್ ಪ್ರದೇಶ ಚೆನ್ನಾಗಿಯೇ ಕಾಣುತ್ತಿತ್ತು. ದಾರಿಯಲ್ಲಿ ವಾಹನಚಾಲಕರೆಲ್ಲರೂ ಕೈಮುಗಿದು ಸಾಗುವ ಅಣ್ಣಪ್ಪಗುಡಿಯಲ್ಲೂ ವಿಶೇಷ ಭಕ್ತಾದಿಗಳು ಕಾಣಲಿಲ್ಲ. ಆಲೇಖಾನ್ ಫಾಲ್ಸ್ ಕೂಡಾ ಸಣಕಲಾಗಿ ಹರಿಯುತ್ತಿತ್ತು. ಈ ಭಾಗದಲ್ಲಿ ರಸ್ತೆ ಸ್ವಲ್ಪ ಹದವಾಗಿ ಸಮವಾಗಿದೆ. ಮುಂದೆ ಮತ್ತೆ ಕಡಿದಾದ ಏರು ಶುರು. ಸಮಯ ಸುಮಾರು 12.30-1 ಆಗಿತ್ತು. ನನ್ನ ಸ್ನಾಯುಸೆಳೆತ ಗಂಭೀರ ಸ್ಥಿತಿ ತಲಪಿತ್ತು. ಅಶೋಕವರ್ಧನ್ ನನ್ನನ್ನು ದಾಟಿ ಮುಂದುವರಿದಿದ್ದರು. ಅಲ್ಲಲ್ಲಿ ನಿಂತು ವಿಶ್ರಮಿಸುತ್ತಾ ನಾನು ಮುಂದುವರಿದೆ. ಇನ್ನೇನು ಕೊಟ್ಟಿಗೆಹಾರಕ್ಕೆ ಹತ್ತಿರವಿರುವಾಗ ಸಮರ್ಥ ಫೋನ್ ಬಂತು. ಅವರಿಬ್ಬರೂ ಆಗಲೇ ಕೊಟ್ಟಿಗೆಹಾರ ತಲಪಿ ಭೋಜನ ಮುಗಿಸಿದ್ದರು. ನಾವೂ ಅಲ್ಲಿಗೆ ತಲಪುವಾಗ ಮಧ್ಯಾಹ್ನ 2.30.

ನನಗೆ ಹಿಂದೆಯೂ ಸೈಕ್ಲಿಂಗ್ ವೇಳೆ ಸ್ನಾಯು ಸೆಳೆತ ಬಂದಿದ್ದರೂ ಅದು ಕೆಲ ನಿಮಿಷ ಕಾಲ ಅಷ್ಟೇ. ಅದರಲ್ಲೂ ಚಾರ್ಮಾಡಿ ಏರಿಗಿಂತಲೂ ಕಠಿಣವಾದ ಕುದುರೆಮುಖ ಏರುವಾಗಲೂ ನನ್ನ ಕಾಲು ಸರಿಯಾಗೇ ಇತ್ತು. ಸಣ್ಣ ಕ್ರಾಂಪ್ಸ್ ಬಂದರೂ ನೀರು ಕುಡಿದು ಎರಡು ನಿಮಷ ಕಾಲ ಕುಳಿತರೆ ಸರಿಯಾಗುತ್ತಿತ್ತು. ಈ ಬಾರಿ ಊಟ ಮಾಡಿದರೂ ಸ್ನಾಯು ನೋವು ಕಡಿಮೆಯಾಗಲೇ ಇಲ್ಲ. ಪ್ರತಿ ಪೆಡಲಾವರ್ತನದಲ್ಲೂ ಸೂಜಿ ಚುಚ್ಚಿದ ಅನುಭವ.

ಹಿಂದೆ ನಾನು ಬಳಸಿದ್ದ ಕಾಲಿನ ಸ್ನಾಯು ಹಾಗೂ ಈಗ ಅನಿಲ್ ಸಲಹೆಯಂತೆ ಶೈಲಿ ಬದಲಾಯಿಸಿಕೊಂಡಾಗ ಬಳಸಿದ ಸ್ನಾಯು ಬೇರೆ. ಹಾಗಾಗಿ ಪೆಡಲುವ ಹೊರೆ ಹೊತ್ತ ಸ್ನಾಯುವಿಗೆ ಹೊಸ ಅನುಭವ, ಅದಕ್ಕಾಗಿಯೇ ಕಾಲು ನೋವು ಕಾಣಿಸಿರಬಹುದು ಎಂದು ಜತೆಗಾರರು ಚರ್ಚಿಸಿಕೊಂಡರು. 

ಊಟ ಮಾಡಿ ನಮ್ಮ ಮುಂದಿನ ತಾಣ ಸಕಲೇಶಪುರ. ಅಲ್ಲಿಗೆ 54 ಕಿ.ಮೀ ಹೋಗಬೇಕು! ನನ್ನ ಕಾಲಿನ ಪರಿಸ್ಥಿತಿ ನೋಡಿದರೆ ಅದು ಕಷ್ಟ ಎನ್ನುವುದು ಖಾತರಿಯಾಗಿಬಿಟ್ಟಿತು. ಮೂಡಿಗೆರೆ ಹ್ಯಾಂಡ್ಪೋಸ್ಟಿನಲ್ಲಿ ನಿಂತು ಬಸ್ಸಿನಲ್ಲಿ ಸೈಕಲೇರಿಸಿ ಮಂಗಳೂರಿಗೆ ಬರುವ ಯೋಚನೆಯಾಯಿತಾದರೂ ಬಸ್ ಇರಲಿಲ್ಲ. ಕೊನೆಗೆ ಆದದ್ದಾಗಲಿ ಸೈಕಲ್ ತುಳಿಯುವುದೇ ಎಂದು ನಿರ್ಧರಿಸಿಬಿಟ್ಟೆ. ಉಳಿದ ಮೂವರು ಕೂಡಾ ನನ್ನ ಬೆಂಬಲಕ್ಕೆ ನಿಂತರು, ತಮ್ಮ ವೇಗವನ್ನು ತುಸು ತಗ್ಗಿಸಿಕೊಂಡರು. ಹಾಗೆ ವೇದನೆಯನ್ನು ಬಾಯಿಗೆ ತಂದು ಹಲ್ಲು ಕಚ್ಚಿ ಸೈಕಲ್ ತುಳಿಯುತ್ತಾ ಮುಂದುವರಿದೆ. ಇಳಿಜಾರು ಸಿಕ್ಕಾಗ ನಿರಾಳವಾಗುವ ಭಾವವೆಲ್ಲ ಏರು ಸಿಕ್ಕಾಗ ಮಾಯ. 
ಬೇಲೂರು ದಾರಿಯಲ್ಲಿ ಜನ್ನಾಪುರದಲ್ಲಿ ಬಲಕ್ಕೆ ತಿರುಗಿದೆವು. ಮತ್ತೆ ಸುಮಾರು 17 ಕಿ.ಮಿ ಹೋದಾಗ ಹಾನಬಾಳು. ಅಲ್ಲಿಂದ ಬಲಕ್ಕೆ `ಕೇವಲ' 7 ಕಿಮೀ ಹೋದರೆ ನಮ್ಮ ಇಳಿದಾಣ ಟಸ್ಕ್ ಎಂಡ್ ಡಾನ್ ರಿಸಾರ್ಟ್ ಇದೆ ಎಂಬ ಮಾಹಿತಿ ಊರವರು ಕೊಟ್ಟರು. ಈ  ಅಶೋಕವರ್ಧನರ ವನ್ಯಜೀವಿ ಸೇವಾ ಕ್ಷೇತ್ರದ ಮಿತ್ರ ವಿಕ್ರಮ ಗೌಡ ಎಂಬವರದ್ದು. ಹಾನುಬಾಳಿನಿಂದ ದಾರಿ ಮೊದಲ ಒಂದೆರಡು ಕಿ.ಮೀ ಪರವಾಗಿರಲಿಲ್ಲ. ಆದರೆ ಮತ್ತೆ ತೀರಾ ಕಚ್ಚಾ ರಸ್ತೆ. ಚಡಾವು, ಅದರ ಮೇಲೆ ಉಂಡೆಉಂಡೆ ಕಲ್ಲುಗಳು, ಮಣ್ಣು, ಧೂಳು. ಕೇವಲ ಜೀಪಷ್ಟೇ ಸಾಗುವ ಹಾದಿ. ಬೇಸಿಗೆಯಲ್ಲಿ ಕಷ್ಟದಲ್ಲಿ ಕಾರುಗಳೂ ಓಡಾಡುತ್ತವೆ. 
ಅಲ್ಲಿಗೆ ನನಗಿನ್ನು ಸೈಕ್ಲಿಂಗ್ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ. ಅಷ್ಟು ಹೊತ್ತಿಗೆ ಜೀಪೊಂದು ಬಂತು ಒಂದಿಬ್ಬರು ಕುಳಿತಿದ್ದರು. ನೋಡಿದರೆ ಅದು ಟಸ್ಕ್... ರಿಸಾರ್ಟ್ ನದ್ದೇ ಜೀಪು. ಅದರ ಚಾಲಕ ಅನಿಲ್ ಅವರಿಗೆ  ನಾವು ಬರುವ ಮಾಹಿತಿ ಮೊದಲೇ ವಿಕ್ರಮ್ ಗೌಡರಿಂದ ಸಿಕ್ಕಿತ್ತು. ನಾನು ಹೆಚ್ಚೇನೂ ಮಾತನಾಡಲು ಹೋಗದೆ ನನ್ನ ಸೈಕಲ್ ಜೀಪಲ್ಲಿ ಹಾಕಬಹುದೇ ಕೇಳಿಬಿಟ್ಟೆ. ಅವರೂ ಸಹಾಯ ಮಾಡಿದರು. ನನ್ನ ಮೂವರೂ ಸಹಚರರೂ ನನ್ನನ್ನು ಜೀಪಲ್ಲೇ ಮುಂದುವರಿಯಲು ಸೂಚಿಸಿದರು. ಸೈಕಲ್ಲಿನ ಮುಂದಿನ ಟೈರು ಸುಲಭವಾಗಿ ಕಳಚಿ ಜೀಪಲ್ಲಿರಿಸಿ ಕುಳಿತೆ. ಅನಿಲ್ ಜತೆ ಊರಿನ ವಿಚಾರ ಹರಟುತ್ತಾ ಮುಂದುವರಿದೆ. ಅಲ್ಲಿಂದ ರಸ್ತೆ ನಿಜಕ್ಕೂ ಕೆಟ್ಟದಾಗಿತ್ತು. ಹಿಂದೆ ಬಂದ ಮೂವರು ತಳ್ಳುತ್ತಲೋ ಪೆಡಲುತ್ತಲೋ ಬಂದಿರಬೇಕು. ಅಗನಿ ಎಂಬ ಹಳ್ಳಿಯೊಂದರಲ್ಲಿ ರಸ್ತೆ ಗರಿಷ್ಠ ಹಾಳಾಗಿತ್ತು. ಅಲ್ಲಿಯೇ ಜೀಪು ನಿಲ್ಲಿಸಿ ಮೂವರಿಗಾಗಿ ಕಾದೆವು. ಆ ವೇಳೆಗೆ ಜೀಪಲ್ಲಿದ್ದ ಪ್ರಯಾಣಿಕರೂ ಇಳಿದುಕೊಂಡದ್ದು ಅನುಕೂಲವಾಯ್ತು. ಉಳಿದ ಮೂರೂ ಸೈಕಲ್ಲನ್ನೂ, ಸವಾರರನ್ನೂ ಸೇರಿಸಿಕೊಂಡು ಜೀಪು ಮುನ್ನಡೆಯಿತು. ಸುಮಾರು 1 ಕಿ.ಮೀ ಚಡಾವೇರಿದಾಗ ನಮಗೆ ಅಚ್ಚರಿ! ಅದುವರೆಗೂ ಒಣಕಲು ಕಾಡು, ಧೂಳು ನೋಡಿದ ನಮಗೆ ದಿಢೀರ್ ಆಗಿ ಹವಾನಿಯಂತ್ರಿತ ವ್ಯವಸ್ಥೆಗೆ ಬಂದ ಅನುಭವ. ಸುತ್ತಲೂ ಹಸಿರು ಶೋಲಾ ಅರಣ್ಯ, ಬೀಸಿ ಬರುತ್ತಿದ್ದ ನಮ್ಮೆಲ್ಲ ಸುಸ್ತನ್ನೂ ಮಾಯವಾಗಿಸಿತು.

  • ಎತ್ತಿನಹೊಳೆಯ ಮಡಿಲಲ್ಲಿ ಟಸ್ಕ್ ಎಂಡ್ ಡಾನ್ 

ರಾಜ್ಯ ಸರ್ಕಾರ  ಕರಾವಳಿಗರನ್ನು ಮಂಗಮಾಡಿ ಏನೇ ಆದರೂ ಕೆಲಸ ಮುಂದುವರಿಸುತ್ತೇನೆ ಎಂದು ಪ್ರಜಾಪ್ರಭುತ್ವಕ್ಕೆ ಅಣಕವಾಗುವ ರೀತಿ ನಡೆಸುತ್ತಿರುವ ಎತ್ತಿನಹೊಳೆ ತಿರುವು ಯೋಜನೆಗೆ ಬೇಕಾದ ಜಲಮೂಲ ಎತ್ತಿನಹೊಳೆ ಇದೇ ಭಾಗದಲ್ಲಿ ಬೆಟ್ಟಗಳ ನಡುವೆ ಹುಟ್ಟಿಕೊಳ್ಳುತ್ತದೆ.
ಈ ಸದಾ ಹಸಿರು ಕಾಡುಗಳ ನಡುವೆ ಸದ್ದಿಲ್ಲದೆ ಮಲಗಿದೆ ಟಸ್ಕ್ ಎಂಡ್ ಡಾನ್.  ನಮ್ಮ ಜೀಪು ಇಳಿದಂತೆಯೇ ಮಂಗಳೂರು ಮೂಲದ ವ್ಯವಸ್ಥಾಪಕ ಪ್ರೇಮನಾಥ ರೈ ಬಹುಕಾಲ ಪರಿಚಿತರಂತೆ ಮಾತನಾಡಿಸಿ ಕುಶಲ ವಿಚಾರಿಸಿ, ಬಿಸಿಬಿಸಿ ಆಲೂಬೋಂಡ ಚಹಾ ನೀಡಿ ಉಪಚರಿಸಿದರು. ಒಂದು ಸುವ್ಯವಸ್ಥಿತ ಪಾಕಶಾಲೆ, ಕೊಡೆಯಾಕಾರದ ಮಾಡಿರುವ ಗೋಡೆಗಳಿಲ್ಲದ ಭೋಜನಗೃಹ, ಅಲ್ಲಲ್ಲಿ ಬ್ಲಾಕ್ ಮಾದರಿಯಲ್ಲಿ ಐದು ವಸತಿಗೃಹಗಳು ಇಲ್ಲಿವೆ. ಸದಾ ಹರಿದು ಬರುವ ನೀರಿನಿಂದ ವಿದ್ಯುತ್ ಉತ್ಪಾದನೆ. ನಾಲ್ಕೈದು ಕೆಲಸಗಾರರು ಯಾವಾಗಲೂ ಬಿಸಿಯಲ್ಲ. ಅಕ್ಟೋಬರ್, ಮಾರ್ಚ್ -ಮೇ ಸೀಸನ್ನಿನಲ್ಲಿ ಭರ್ಜರಿಜನ..
ರಾತ್ರಿ ಭೋಜನವಾದ ಬಳಿಕ ಮರುದಿನ ಬೆಳಗ್ಗೆ ಕಾಲು ನೋವು ಕಡಿಮೆಯಾದರೆ ಸೈಕಲ್ ತುಳಿಯುವುದು, ಇಲ್ಲವಾದರೆ ಜೀಪಲ್ಲಿ ಸಕಲೇಶಪುರ ವರೆಗೂ ಬಿಡಬೇಕು ಎಂದು ಪ್ರೇಮನಾಥ ರೈಗಳನ್ನು ಕೇಳಿಕೊಂಡೆ. ಆದರೆ ಅವರು ಅದಕ್ಕಿಂತಲೂ ಒಳ್ಳೆ ಆಫರ್ ಕೊಟ್ಟರು. ಅವರು ತಮ್ಮ ಮನೆಗೆ ಕಾರಲ್ಲಿ ಮರುದಿನ ಬೆಳಗ್ಗೆ ಹೊರಡುವವರು. ನನ್ನ ಕಾರಲ್ಲೇ ಬರಬಹುದು ಎಂದುಬಿಟ್ಟದ್ದು ನನಗೆ ಬಹಳ ಅನುಕೂಲವಾಯ್ತು. ರಾತ್ರಿ ಅನುಕೂಲಕರ ಚಳಿಯಲ್ಲಿ ಕಣ್ಮುಚ್ಚಿದ್ದೊಂದೇ ಗೊತ್ತು. ಮರುದಿನ ಎದ್ದಾಗ ಹಿಂದಿನಷ್ಟು ಕಾಲು ನೋವಿರಲಿಲ್ಲ. ಆದರೆ ಮತ್ತೆ ತುಳಿದರೆ ಕಾಲುನೋವು ಹೆಚ್ಚಾಗುವ ಭಯವಿತ್ತು. ಹಾಗೆ ಮರುಮಾತಿಲ್ಲದೆ ಸೈಕಲ್ಲಿನ ಎರಡೂ ಟೈರನ್ನೂ ಸಮರ್ಥ್ ನೆರವಿನಲ್ಲಿ ಕಳಚಿ ಫ್ರೇಮ್ ಬೇರೆಮಾಡಿ ರೈಗಳ ಕಾರಿಗೆ ನೀಟಾಗಿ ತುಂಬಿಸಿ ಹೊರಟು ನಿಂತೆ. ಮುಂಜಾನೆಯ ಚಳಿಯಲ್ಲಿ ರಿಸಾರ್ಟ್ ಹಿಂದೆ ಕಳಶದ ರೀತಿ ನಿಂತ ಬೆಟ್ಟವೊಂದನ್ನು ಏರಲು ನನ್ನ ಮೂವರೂ ಮಿತ್ರರೂ ಹೊರಟು ನಿಂತರು. ಅವರು ಬೆಟ್ಟದ ತುದಿ ತಲಪುವ ವೇಳೆಗೆ ನಮ್ಮ ಕಾರೂ ಹೊರಟಿತು.
ರೈಗಳ ರಿಸಾರ್ಟ್ ಕಥೆ ಕೇಳುತ್ತಾ ಸಕಲೇಶಪುರ ಕೆಳಗಿನ ಆನೆಮಹಲ್ ತಲಪಿ ಇಳಿಯುತ್ತಾ ಹೋದಾಗ ಬಲಭಾಗದಲ್ಲಿ ಎತ್ತಿನಹೊಳೆಯ ಕಾಮಗಾರಿ ಜೋರಲ್ಲಿ ಸಾಗಿತ್ತು. ಗುಡ್ಡ ಗುಡ್ಡಗಳನ್ನೇ ಕಡಿದು ಹಾಕಿದ್ದರು, ಮಣ್ಣಿನ ರಾಶಿಯ ಅಡಿಯಲ್ಲಿದ್ದ ಮರಗಳು ಮರ ಕಡಿಯುವುದಿಲ್ಲ ಎಂಬ ಎತ್ತಿನಹೊಳೆ ಪ್ರಾಜೆಕ್ಟ್ ರಿಪೋರ್ಟ್ ನ್ನೇ ಅಣಕಿಸುತ್ತಿದ್ದವು.
ಮತ್ತೆ ಮುಂದುವರಿದಾಗ ರೈಗಳ ರಿಸಾರ್ಟ್ ಕಥೆ ಮುಂದುವರಿಯಿತು. ಟಸ್ಕ್ ರಿಸಾರ್ಟಲ್ಲಿ ಪರಿಸರಕ್ಕೆ ಹಾನಿ ಮಾಡಿಲ್ಲ. ಬಂದವರಿಗೂ ಮಾಡಲು ಬಿಡುವುದಿಲ್ಲ. ಟಿವಿ, ಸ್ಟಿರಿಯೋ ಉದ್ದೇಶಪೂರ್ವಕ ನೀಡಿಲ್ಲ. ಅವರೇ ತಂದು ಗಲಭೆಯೆಬ್ಬಿಸುವುದಕ್ಕೂ ನಾವು ಬಿಡುವುದಿಲ್ಲ. ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳುವವರಿಗೆ ಮಾತ್ರ ನಮ್ಮ ರಿಸಾರ್ಟ್ ತೆರೆದಿದೆ, ಅದನ್ನು ಗೌರವಿಸಿ ಬಹಳಮಂದಿ ಬರುತ್ತಾರೆ. ರಿಸಾರ್ಟ್ ಗೆ ಟಸ್ಕರನೊಬ್ಬ(ಒಂಟಿಯಾನೆ) ಆಗಾಗ ಬರುತ್ತಿದ್ದ ಕಾರಣ ಟಸ್ಕ್ ಎಂಬ ಹೆಸರನ್ನೇ ರಿಸಾರ್ಟಿಗೆ ಇರಿಸಿದ್ದಾರೆ. 

ರಿಸಾರ್ಟ್ ಕಥೆ, ಎತ್ತಿನಹೊಳೆ ವಿಚಾರ ಚರ್ಚಿಸುತ್ತಾ ಮಂಗಳೂರು ಸೇರಿಕೊಂಡೆ, ನೆರೆಮನೆಯ ಅಭಿಭಟ್ ಗೆ ಮೊದಲೇ ಕಾರು ತರಲು ಹೇಳಿದ್ದೆ. ಹಾಗಾಗಿ ರೈಗಳ ಕಾರಿನಿಂದಿಳಿದು ಚಕಾಚಕ್ ಆಗಿ ಸೈಕಲ್ ನನ್ನ ಕಾರಿಗೇರಿಸಿ, ಅಭಿಯೊಂದಿಗೆ ಮನೆ ಸೇರುವಾಗ ಮಧ್ಯಾಹ್ನ 12. 




ಊಟವಾಗಿ  ಸಮರ್ಥ್ ಗೆ ಫೋನ್ ಮಾಡಿದೆ, ಅವರ ಸೈಕಲ್ಲಿನಲ್ಲೂ ತಾಂತ್ರಿಕ ತೊಂದರೆಯಾಗಿ ಅವರೂ ಸಕಲೇಶಪುರದಿಂದ ಬಸ್ಸಲ್ಲಿ ಸೈಕಲ್ ಹಾಕಿ ಬರುತ್ತಿದ್ದು ಮಧ್ಯಾಹ್ನ 1.30ಕ್ಕೆ ಮಂಗಳೂರು ತಲಪಿದರೆ ಅನಿಲ್ ಮತ್ತು ಅಶೋಕ್ ಮಾತ್ರವೇ ಸಂಜೆವರೆಗೂ ಹಿಡಿದ ಸೈಕಲ್ ವ್ರತ ಬಿಡದೆ ಪೆಡಲಿಸಿ ಸಂಜೆವೇಳೆ ಮಂಗಳೂರು ತಲಪಿದ್ದರು. ಸುಡುಬಿಸಿಲಲ್ಲಿ ಸೈಕಲ್ ಎರಡು ದಿನ ನಿರಂತರ ತುಳಿಯುವ ಸಾಧನೆ ಮಾಡಿದ ಅವರಿಗೆ ಅಭಿನಂದನೆ.
ಟಸ್ಕ್ ಎಂಡ್ ಡಾನ್ ರಿಸಾರ್ಟ್ ಬಗ್ಗೆ ತಿಳಿಯಲು ಕ್ಲಿಕ್ಕಿಸಿ: tusk n dawn

No comments:

Related Posts Plugin for WordPress, Blogger...