ಕವಿತೆಗಾಗಿ ಹುಡುಕಾಡಿದೆ
ಕತ್ತಲ ಮರೆಯಲ್ಲಿ
ಬೆಂಕಿಯ ಮುಂದೆ ಧಗಧಗ
ಕೆಂಡಗಳ ಕೆದಕಿ
ಕವಿತೆ ಸಿಗಲಿಲ್ಲ!
ಕೊಳದಲ್ಲಿ ಮುಳುಗೆದ್ದೆ
ಬದಿಯ ಹುಲ್ಲಲ್ಲಿ
ಮನಸೋಇಚ್ಛೆ
ಉರುಳಾಡಿದೆ
ಕವಿತೆ ಕಂಡುಬರಲಿಲ್ಲ
ರಾತ್ರಿಪೂರಾ ಕುಳಿತು
ಪದ ಪೋಣಿಸುತ್ತಲಿದ್ದೆ
ನನ್ನಷ್ಟಕ್ಕೇ ಗುನುಗುಟ್ಟಿದೆ
ಆದರೂ ಕವಿತೆ ಎನಿಸಲಿಲ್ಲ
ಕಾಡಿನಮಧ್ಯೆ
ಜಲಪಾತದ
ಮುಂದೆ ಕುಳಿತು
ನಿದ್ದೆ ಬಂತೇ ಹೊರತು
ಕವಿತೆ ನನ್ನತ್ತ ಸುಳಿಯಲಿಲ್ಲ
ತುಂಬು ಮಬ್ಬಿನ
ಪಬ್ಬುಗಳಲ್ಲಿ
ತೂರಾಡಿದರೂ ಕವಿತೆ
ಕಣ್ಣೆತ್ತಿ ನೋಡಲಿಲ್ಲ
ಆಸ್ಪತ್ರೆ ವಾರ್ಡ್‌ಗಳಲ್ಲಿ
ನೋವೇ ತುಂಬಿದ
ಕೋಣೆಗಳಲ್ಲಿ,
ವೃದ್ಧರ ಕಣ್ಣಾಲಿಗಳಲ್ಲಿ
ಹೊಕ್ಕುಹೊರಬಂದೆ
ನಡೆಯುತ್ತಾ ಹೋದೆ
ಹಿಂದೆಯೇ ಕವಿತೆ
ಹರಿದು ಬಂದಳು ಕೊನೆಗೆ