20.3.11

ಭಾನುವಾರದ ಹೊತ್ತು

ಭಾನುವಾರವೆಂದರೆ ಹಾಗೆ
ಒಂದು ಬೊಗಸೆ
ಅಮೃತವನ್ನು
ಹಿಡಿದು ನಿಂತಂತೆ...
ಥಟ್ಟನೆ ಸೋರಿ ಹೋಗಿ ಬಿಡುತ್ತದೆ
ಏನೇನೋ ಮಾಡುವ
ಯೋಚನೆ-ಯೋಜನೆಗಳು
ಸರ್ಕಾರದ ಕಾರ್ಯಕ್ರಮದಂತೆ
ಶೈಶವ ಬಿಟ್ಟೇಳವು!


ಕಣ್ಣಲ್ಲೇ ಅಂಟಿಕೊಂಡ ನಿದ್ದೆ
ಕಪ್ಪಲ್ಲೇ ಆರಿದ ಕಾಫಿ
ಮುಂದಕ್ಕೋಡದ ಕಾದಂಬರಿ
ಹಾರ್ಡ್ ಡಿಸ್ಕಲ್ಲೇ ಉಳಿದ
ಹೊಸ ಸಿನಿಮಾ
ಅಳಿದುಳಿದ ಮೊನ್ನೆಯ ಸಾಂಬಾರು
ಫ್ರಿಜ್ಜಲ್ಲಿದೆ ಕೆಎಫ್‌ ಬೀರು
ಉಫ್‌..
ಈ ಭಾನುವಾರಕ್ಕೆ
ಎಷ್ಟೊಂದು ಷೆಡ್ಯೂಲುಗಳು!


ಹಿಂದಿನ ವಾರದ ಧೂಳು
ಕೊಡವಿದಾಗ
ಹಳೆಯ ದಿನಪತ್ರಿಕೆಗಳ
ಪೇರಿಸಿದಾಗ
ಸಂಗಾತಿಯ ಗಂಟಲಿಂದ
ಹೊರಹೊಮ್ಮುವ ಕೆಮ್ಮಿಗೆ
ನಾನಾ ಅರ್ಥ!


ತಡವಾಗೆದ್ದು,
ಏನೋ ತಿಂದು
ಮಧ್ಯಾಹ್ನದ ಊಟ ಸಂಜೆ
ಮಾಡಿದಾಗಲೇ
ಮರುದಿನದ ಕೆಲಸಗಳೆಲ್ಲಾ
ಧುತ್ತನೆ ಎದುರು
ಬಂದು  ಕಣ್ಣು ಮಂಜಾದಾಗ
ಅನಾಥಭಾವ
ಛೇ..
ಹಿಡಿಯಷ್ಟು ಭಾನುವಾರ
ಉಳಿಸಿಕೊಳ್ಳಲಾಗಲಿಲ್ಲ!

ಚಿತ್ರಕೃಪೆ : http://www.psfk.com

1.3.11

ಹೋಯ್‌ .. ನಿಮ್ಮಲ್ಲಿ ಮಾವಿನ ಮಿಡಿ ಉಂಟೋ ?

ಈ ಸಲದ ಭರ್ಜರಿ ಚಳಿ ಸಹಿಸಿಕೊಂಡದ್ದು ಸಾರ್ಥಕ...
ಚಳಿ ಚೆನ್ನಾಗಿದ್ದರೆ ಅಲ-ಫಲ ಚೆನ್ನಾಗಿರುತ್ತದೆ ಎಂಬ ಹಿಂದಿನವರ ಮಾತು ಸತ್ಯವಾಗಿದೆ.
ಈ ಮಳೆಗಾಲದಲ್ಲಿ ಧೋ ಎನ್ನುವ ಮಳೆಗೆ ಬೆಚ್ಚನೆ ಕುಳಿತು ಗಂಜಿ ಜತೆ ಮಾವಿನಮಿಡಿ ಉಪ್ಪಿನಕಾಯಿ ಸವಿಯಬಹುದು!
ಕಳೆದ ಮೂರು ವರ್ಷಗಳಿಂದ ಹೊಸ ಮಾವು ಉಪ್ಪಿನಕಾಯಿ ಸವಿದಿರಲಿಲ್ಲ. ಈ ಬಾರಿ ಹೊಸ ಮಾವಿಗಾಗಿ ಹುಡುಕಾಟ ಶುರುವಿಟ್ಟುಕೊಂಡಿದ್ದೇನೆ, ಬಹುಷಃ ಕಷ್ಟವಾಗಲಿಕ್ಕಿಲ್ಲ.
ದಕ್ಷಿಣಕನ್ನಡದ ಬಹುತೇಕ ಎಲ್ಲಾ ಮರಗಳೂ ಈ ಸಲ ಭರ್ತಿ ಹೂಬಿಟ್ಟು, ಈಗ ಮಿಡಿ ಕಾಣಿಸಿಕೊಂಡಿದೆ. ಬಹುಷಃ ಉತ್ತರಕನ್ನಡದ ಅಪ್ಪೆಗಳೂ ಹೀಗೇ ಇರಬಹುದು. ನಮ್ಮ ಮನೆಯ ಮುಂದಿನ ಕಾಂಪೌಂಡಲ್ಲಿ ಇರುವ ಕಾಡು ಜಾತಿಯ ಮಾವಿನ ಮರದಿಂದ  ಆ ಮನೆಯವರು ಮಾವಿನಕಾಯಿ ಕುಯ್ಸಿದ್ದರು. ಸುತ್ತಲಿನ ಹಲವು ಮನೆಗಳೊಂದಿಗೆ ನಮಗೂ ಒಂದು ಚಿಕ್ಕ ಪಾಲು ಸಿಕ್ಕಿತ್ತು...
ಮ್‌ಮ್‌ಮ್‌..ಏನ್‌ ರುಚಿ ಅಂತೀರಾ! ಏನೇ ಆದ್ರು ಅದು ಭೀಮನಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಷ್ಟೇ!
ಅಜ್ಜಿ ಮನೆ, ಅವರ ಪಕ್ಕದ  ಮನೆ, ಸಹೋದ್ಯೋಗಿ ಆತ್ಮನ ಮನೆ ಇಲ್ಲೆಲ್ಲಾ ಈ ಸಲ ಮಿಡಿಗಾಗಿ ಹೇಳಿದ್ದಾಗಿದೆ.
ನಮ್ಮಲ್ಲಿ ಚಿಕ್ಕಂದಿನಿಂದಲೂ ಉಪ್ಪಿನಕಾಯಿಗಳಲ್ಲೆಲ್ಲಾ ಮಾವಿನ ಮಿಡಿ ಉಪ್ಪಿನಕಾಯಿಗೇ ಅಗ್ರಪಟ್ಟ. ಅಂಬಟೆ ಕೂಡಾ ಮಿಡಿ ಹಾಕುತ್ತಾರಾದ್ರೂ ಮಾವಿನೆದುರು ಅದು ಸಪ್ಪೆಯೇ. ನೆಲ್ಲಿಕಾಯಿ, ನಿಂಬೆ, ಇವಕ್ಕೆಲ್ಲಾ ಆ ನಂತರದ ಸ್ಥಾನಗಳೇ.
ಚಿಕ್ಕವರಿದ್ದಾಗ ನಮಗೆ ಊಟಕ್ಕೆ ಏನಿಲ್ಲವಾದರೂ ಮಜ್ಜಿಗೆ ಮತ್ತು ಹಳೆಯ ಮಿಡಿ ಉಪ್ಪಿನಕಾಯಿ ತಪ್ಪುತ್ತಿರಲಿಲ್ಲ. ಮಿಡಿಮಾವಿನ ಉಪ್ಪಿನಕಾಯಿಯಿದ್ದರೆ ನಾಲಗೆಗೆ ಏನೋ ರುಚಿ.
ಆಗ ಅಜ್ಜಿ  ಮನೆಯ ಮುಂದಿನ ಆ ದೊಡ್ಡ ಕಾಟು ಮಾವಿನ ಮರದಲ್ಲಿ ಡಿಸೆಂಬರಲ್ಲಿ ಮೆಲ್ಲನೆ ಹೂಗಳ ತುದಿ ಕಂಡಾಗಲೇ ನಮಗೆಲ್ಲ ಸಂಭ್ರಮ. ನೋಡನೋಡುತ್ತಿದ್ದಂತೆ ಮರವಿಡೀ ಹೂಗಳ ಅಲಂಕಾರ, ಮೆಲ್ಲನೆ ಕಡಲೆಯಾಕಾರದ ಮಿಡಿಗಳ ಅನಾವರಣ. ಆ ಕಾಲದಲ್ಲೆಲ್ಲಾದರೂ ಮೋಡ ಬಂದರೆ ಅಜ್ಜಿ ಮೋಡವನ್ನೇ ಶಪಿಸುತ್ತಿದ್ದರು. ಮೋಡ ನಿರಂತರವಾಗಿ ಬಂದರೆ ಮಾವಿನ ಹೂ ಮತ್ತು ಎಳೆ ಮಿಡಿ ಉದುರಿ ಹೋಗುತ್ತಿತ್ತು. ಮತ್ತೆ ಬೆರಳೆಣಿಕೆಯ ಮಾವಷ್ಟೇ ಗತಿ. ಮೋಡ ಬರದೆ ನಸು ಮಳೆ ಸುರಿದು ಹೋದರೆ ಆ ಬಾರಿ ಬಂಪರ್‌ ಮಾವಿನ ಬೆಳೆ ಎಂದೇ ಅರ್ಥ.
ಮಾವಿನ ಕಾಯಿ ಕೊಯ್ಯುವ ದಿನವಂತೂ ಸಣ್ಣ ಉತ್ಸವವೇ. ಅನೇಕ ಸಂಬಂಧಿಕರು, ಮಿತ್ರರು ತಮ್ಮ ತಮ್ಮ ಗೋಣಿಚೀಲ ಹಿಡಿದು ಹಾಜರಾಗುತ್ತಿದ್ದರು. ಮಾವ ಮತ್ತು ಮನೆಯ ಕೆಲಸದವರು ಮರವೇರುತ್ತಿದ್ದರು, ಬಂದ ಬಂಧುಗಳಲ್ಲೂ ಕೆಲವರು ನೆರವಾಗುತ್ತಿದ್ದರು. ಮಧ್ಯಾಹ್ನವರೆಗೂ ಮಿಡಿ ಮುರಿದು, ಅದನ್ನು ನಾಜೂಕಾಗಿ ಬುಟ್ಟಿಗಿಳಿಸಿ, ಬಳ್ಳಿ ಸಹಾಯದಿಂದ ನೆಲಕ್ಕೆ ಇಳಿಸುವುದಕ್ಕೆ ಅಭ್ಯಾಸ ಬೇಕು, ಬಿದ್ದು ಪೆಟ್ಟಾದ ಮಾವಿನ ಮಿಡಿ ಉಪ್ಪಿನಕಾಯಿ ಬಾಳಿಕೆ ಬರದು. ಹೀಗೆ ಇಳಿಸಿದ ಮಿಡಿಯನ್ನು ಬಂದವರಿಗೆ ಹಂಚಿ, ಉಳಿದದ್ದನ್ನು ಮನೆಯ ಮಹಿಳೆಯರ ನೇತೃತ್ವದಲ್ಲಿ ಪ್ರತ್ಯೇಕಿಸಿ ಶುಚಿಗೊಳಿಸಿ,ಮಿಡಿಗೆ ಚಿಕ್ಕ ತೊಟ್ಟಷ್ಟೇ ಇರಿಸಿ ಉಪ್ಪಿಗೆ ಹಾಕುವುದು ಮತ್ತಿತರ ಅಟ್ಟಣೆ ನಡೆಯುತ್ತಿತ್ತು. ಅಲ್ಲೆಲ್ಲಾ ಮಕ್ಕಳು ಹೋಗುವಂತಿರಲಿಲ್ಲ, ನೀರು ಹಾರಿಸಿ, ಹಾಳು ಮಾಡಿ ಬಿಡ್ತೀರಾ ಎಂದು ಅಜ್ಜಿ ಗದರಿಸಿ ಓಡಿಸುತ್ತಿದ್ದರು!
ಪಿಯುಸಿ ಮತ್ತು ಪದವಿಯಲ್ಲಿರುವಾಗ ೫ ವರುಷ ಹಾಸ್ಟೆಲ್ಲಿನ ವಾಸವಿತ್ತು. ಅಲ್ಲೂ ಮನೆಯ ನೆನಪನ್ನು ಬೆಚ್ಚಗಿರುಸಿತ್ತಿದ್ದುದು ಇದೇ ಮಾವಿನ ಉಪ್ಪಿನಕಾಯಿಯೇ. ಅಪರೂಪಕ್ಕಷ್ಟೇ ಮನೆಗೆ ಹೋಗಲು ಬಿಡುತ್ತಿದ್ದರು ಹಾಸ್ಟೆಲ್‌ ವಾರ್ಡನ್‌. ಹಾಗೆ ಬಂದು ಹೋಗುವಾಗ ಬ್ಯಾಗಿನೊಂದಿಗೆ ಅಮ್ಮ ಮರೆಯದೆ ಉಪ್ಪಿನಕಾಯಿ ಇರಿಸಲು ಮರೆಯುತ್ತಿರಲಿಲ್ಲ.
ನೋಡಿ...ಮಾವು ಎಂದರೆ ಸಾಕು ಅದೆಷ್ಟು ನೆನಪುಗಳು ಬಿಚ್ಚಿಕೊಳ್ಳುತ್ತವೆ..
ಕಳೆದ ಎರಡು ವರುಷ ಊರಿನ ಮರದಲ್ಲಿ ಸರಿಯಾಗಿ ಮಾವೇ ಆಗಿರಲಿಲ್ಲ, ಒಂದು ವರ್ಷ ಆಗಿತ್ತಾದರೂ ಅದು ಕುಯಿಸುವ ದಿನ ನನಗೆ ಹೋಗುವುದಕ್ಕಾಗಿರಲಿಲ್ಲ...
ಹಾಗಾಗಿ ಏನೋ ಹಿಂದೆ ರಿಪ್ಪನ್‌ ಪೇಟೆಯಿಂದ ತಂದ ಅಪ್ಪೆ ಮಿಡಿಯ ಉಪ್ಪಿನಕಾಯಿ ಒಂದಷ್ಟು ಕಾಲ, ನಂತರ ನಿಂಬೆ ಮತ್ತಿತರ ಉಪ್ಪಿನಕಾಯನ್ನೇ ನೆಚ್ಚಿಕೊಂಡಿದ್ದಾಯ್ತು. ಮಿಡಿ ಹಾಕುವ ಭರಣಿಗಳೆಲ್ಲಾ ಖಾಲಿ ಖಾಲಿ...
ಈ ಬಾರಿಯಾದರೂ ಮಾವಿನಕಾಯಿ ಬೇಕೇ ಬೇಕು...

Related Posts Plugin for WordPress, Blogger...