28.7.07

ಬಣ್ಣಗೆಟ್ಟ ಕ್ಯಾನ್ವಾಸ್


ಕಲಾವಿದನ ಕುಂಚದಲ್ಲಿ
ಅರಳಿದ್ದ ಆ ಸುಂದರ
ಭೂದೃಶ್ಯವೆಲ್ಲ ಎಲ್ಲಿ
ತೊಳೆದು ಹೋಯಿತು?
ಗಾಢವಾಗಿದ್ದ ಆ
ಹಸಿರುಮರಗಳ ಸಾಲು
ನಸುನೀಲ ಬಣ್ಣದ
ಬೆಟ್ಟದ ತೆಕ್ಕೆಯಲ್ಲಿದ್ದ
ಗುಡಿಸಲು
ಎಲ್ಲಿ ಗುಡಿಸಿ ಹೋಯಿತು?
ಕಲಾವಿದನಿಗೇ ಅಚ್ಚರಿ
ಈಗೀಗ ಕುಂಚದಲ್ಲಿ
ಕೆಲವು ವರ್ಣಗಳು ಅರಳುವುದಿಲ್ಲ
ಎಲ್ಲೇ ನೋಡಿದರೂ ಬರಿಯ ಕೆಂಪು,
ಕ್ಯಾನ್ವಾಸಿನಿಂದ ರಕ್ತ ಚೆಲ್ಲಿ
ನದಿಯುದ್ದಕ್ಕೂ ಹರಡಿಕೊಂಡ ಹಾಗೆ
ಜೀವಂತಿಕೆಯ ಬಣ್ಣಗಳನ್ನೆಲ್ಲಾ
ನುಂಗಿದ ಹಾಗೆ
ಅದಕ್ಕಾಗಿ ಕಲಾವಿದ
ಕುಂಚ ಕೆಳಗಿಟ್ಟಿದ್ದಾನೆ
ಬಣ್ಣಗಳು ಬಣ್ಣಕಳೆದುಕೊಂಡಿವೆ

23.7.07

ಶರಾವತಿ ಕೊಳ್ಳಕ್ಕೆ ಇಣುಕಿದಾಗ!

ಕೆಲದಿನಗಳ ಹಿಂದೆ ಮಂಗಳೂರಿನ ಯೂತ್ ಹಾಸ್ಟಲ್ ತಂಡ ಜೋಗಕ್ಕೆ ಹೋಗುವುದಾಗಿ ಹೇಳಿತ್ತು. ದೂಸ್ರಾ ಮಾತಿಲ್ಲದೆ ನನ್ನ ಹೆಸರನ್ನೂ ಪಟ್ಟಿಗೆ ಹಾಕಿಬಿಟ್ಟೆ.
ಯಾಕೆಂದರೆ, ಇದುವರೆಗೆ ರಾಜ್ಯದ ಹತ್ತುಹಲವು ಸಣ್ಣಪುಟ್ಟ ಫಾಲ್ಸ್ ನೋಡಿದ್ದರೂ ದೇಶದಲ್ಲೇ ಅತ್ಯಂತ ಸುಂದರ ಜಲಧಾರೆ ಎಂದೆನಿಸಿರುವ ಜೋಗ ನೋಡದ ಪಾಪಿ ನಾನು! ಅದರಲ್ಲೂ ಮುಂಗಾರು ಮಳೆ ನೋಡಿದ ಮೇಲಾದರೂ ಜೋಗ ನೋಡದ ನನ್ನನ್ನು ನನ್ನ ಗೆಳೆಯರ ಬಳಗ ದೂರವಿಡಬಹುದು ಎಂಬ ಭೀತಿಯೂ ಕಾಡಿತ್ತು.


ಜೋಗದ ಮೇಲೆ ಸಿಟ್ಟಾಗಿ ನಾನು ಇದುವರೆಗೆ ನೋಡಿಲ್ಲ ಎಂದಲ್ಲ, ಆದರೆ ನಮ್ಮ ನಡುವೆ ಫೇಮಸ್ ಎಂದುಕೊಂಡ ಅನೇಕ ತಾಣಗಳ ‘ಗತಿ’ ನೋಡಿರುವ ನಾನು, ಜೋಗದಲ್ಲೂ ಅಂತಹ ಮಾಲಿನ್ಯ ನೋಡಿ ಸಂಕಟಪಡದಿರೋಣ ಎಂದು ಮುಂದೂಡಿದ್ದೇ ಇದಕ್ಕೆ ಕಾರಣ.
ಅದೇನೇ ಪ್ರವರಗಳಿರಲಿ, ಈ ಬಾರಿ ಯೂತ್ ಹಾಸ್ಟೆಲ್‌ನ ೪೩ ಮಂದಿಯ ಭರ್ಜರಿ ತಂಡದಲ್ಲಿ ನಾನೂ ಸೇರಿಕೊಂಡೆ. ಮಧ್ಯಾಹ್ನ ಮಂಗಳೂರಿಂದ ಹೊರಟು ರಾತ್ರಿ ೯ರ ಸುಮಾರಿಗೆ ಜೋಗ ಸೇರಿದ ನಾವು ಹೊಟ್ಟೆ ಚುರುಗುಡುತ್ತಿದ್ದ ಕಾರಣ ಮೊದಲು ಹೊಕ್ಕಿದ್ದು ಹೊಟೇಲನ್ನು.
ಆ ಬಳಿಕ ಆ ತಣ್ಣನೆ ರಾತ್ರಿಯಲ್ಲೇ ಹತ್ತು ಹೆಜ್ಜೆ ಹಾಕಿ ಕತ್ತಲಿಗೆ ಕಣ್ಣನ್ನು ಹೊಂದಿಸಿಕೊಂಡು ದೇಶದ ಹೆಮ್ಮೆಯ ಸೊತ್ತನ್ನು ನೋಡಿದೆ, ಅದೇ ದೃಶ್ಯವನ್ನು ಕಣ್ತುಂಬಿಕೊಂಡು, ಜೋಗ ಯೂತ್ ಹಾಸ್ಟೆಲ್ ಕೊಠಡಿಯಲ್ಲಿ ನಿದ್ದೆಗೆ ಶರಣಾದೆ.
ಮರುದಿನ ಬೆಳಗ್ಗೆ ಮಿತ್ರ ಅನುಭವೀ ಜಲಪಾತ ಪ್ರೇಮಿ ರಾಜೇಶ್ ನಾಯಕರೊಂದಿಗೆ ಹರಟುತ್ತಾ ಜೋಗ ನೋಡಿದೆ, ಕ್ಯಾಮೆರಾಕ್ಕೆ ಒಂದಷ್ಟು ಕ್ಲಿಕ್ಕಿಸಿದೆ.
ನೀರು ಅಷ್ಟಾಗಿ ಇರಲಿಲ್ಲ. ಲಿಂಗನಮಕ್ಕಿಯಿಂದ ಹೆಚ್ಚು ನೀರು ಬಿಟ್ಟಾಗ ತಾನು ಬೈಕಲ್ಲಿ ಬಂದು ಜೋಗ ನೋಡಿದ ಪ್ರಸಂಗವನ್ನು ನನ್ನಲ್ಲಿ ರಾಜೇಶ್ ಹೇಳಿದರು.
ಜೋಗದ ಬುಡಕ್ಕೆ ಇಳಿಯುವ ಅನುಭವ ತ್ರಾಸದಾಯಕ, ಅಷ್ಟೇ ಆಪ್ತ. ಇಳಿಯುತ್ತಾ ಹೋದಂತೆ ಜಲಪಾತದ ಆಗಾಧತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಲ್ಲಾ ದಿಕ್ಕಿಂದಲೂ ಕಡಿದಾದ ಕಣಿವೆ. ಅದಕ್ಕೆ ಧುಮ್ಮಿಕ್ಕುವ ಜೋಗ ನಿಜಕ್ಕು ಸುಂದರ ಎಂದರೆ ಈ ಬಗ್ಗೆ ಸಹಸ್ರಾರು ಬರಹ ಓದಿದ ನಿಮಗೆ ಸಪ್ಪೆ ಎನಿಸಲೇಬೇಕು.
ನನ್ನ ಗಮನ ಸೆಳೆದದ್ದು ಜೋಗದ ಬುಡದಲ್ಲಿ ನೀರಿನ ರಭಸಕ್ಕೆ ಉಂಟಾದ ಸುಂದರ ಶಿಲಾಕೃತಿಗಳು. ಮನಸ್ಸಿನ ಕಲ್ಪನೆಗೆ ಬಿಟ್ಟಂತೆ ಏನೇನೋ ವಿನ್ಯಾಸದ ಶಿಲ್ಪ, ಮಂಜು ಮುಸುಕಿದ ಹಸಿರು ಶರಾವತಿ ಕಣಿವೆ, ಹುಚ್ಚೆಬ್ಬಿಸುವ ಚಳಿ ಇವೆಲ್ಲ ಜೋಗ ಫಾಲ್ಸ್‌ನ ಬೋನಸ್ಸು.
ನಾನು ಭೇಟಿ ಕೊಟ್ಟದ್ದು ಭಾನುವಾರವಾದ ಕಾರಣ ಜನವೋ ಜನ(ಮಾರನೇ ದಿನ ಪತ್ರಿಕೆಯಲ್ಲಿ ನೋಡಿದರೆ ೪೦೦೦ ಜನ ಒಂದೇ ದಿನ ಬಂದಿದ್ದಾರೆ ಎಂದು ಗೊತ್ತಾಯ್ತು). ಹಾಗಾಗಿಯೇ ಜನಪ್ರಿಯತೆಯ ಕುರುಹುಗಳೂ ಜಲಪಾತದ ಸುತ್ತ ಸಾಕಷ್ಟಿದ್ದವು. ಜಲಪಾತದ ಬುಡದಲ್ಲೇ ಚಹಾದಂಗಡಿ ತೆರೆದು ಶರಾವತಿ ಕೊಳ್ಳಕ್ಕೆ ಪ್ಲಾಸ್ಟಿಕ್ ತುಂಬುವ ಅಮೋಘ ಕಾರ್ಯವೂ ನಡೆಯುತ್ತಿತ್ತು.
ಅದೇ ರೀತಿ ಮುಂಗಾರು ಮಳೆ ಶೂಟಿಂಗ್ ನಡೆದ ಬಳಿಕ ಖ್ಯಾತಿ ಪಡೆದ ‘ರಾಜ’ನ ಪಕ್ಕೆಯಲ್ಲೇ ಅಭಿಮಾನಿ ಯಾರೋ ಒಬ್ಬಾತ ತನ್ನ ಉಚ್ಚಿಷ್ಟ ಹಾಕಿ ಧನ್ಯತೆ ಮೆರೆದಿದ್ದ!
ಆದರೂ ಆ ದುರ್ವಾಸನೆ ಸಹಿಸಿಕೊಂಡು , ಎಲ್ಲರೂ ಸರದಿಯಂತೆ ಬಂಡೆಗಲ್ಲ ಮೇಲೆ ಮಲಗಿ ರಾಜನ ಉದ್ದ ಅಳೆಯುವ ಯತ್ನ ಮಾಡುತ್ತಿದ್ದರು. ರಾಜ ಹರಿದು ಬರುವ ಸ್ಥಳದಲ್ಲಿ ಒಬ್ಬ ಆಸಾಮಿ ಈಜುತ್ತಿರುವಾಗ, ನೇರವಾಗಿ ಕಣಿವೆಯ ಒಡಲು ಸೇರುವ ಸಾಧ್ಯತೆ ಇತ್ತು. ಆದರೆ ನಮ್ಮ ತಂಡದ ರಾಕೇಶ ಹೊಳ್ಳ, ತನ್ನ ಜಿರಾಫೆ ದೇಹದ ಕೃಪೆಯಿಂದ ಆಸಾಮಿಯನ್ನು ರಕ್ಷಿಸಿ ಎಲ್ಲರ ಶಹಬ್ಬಾಸ್‌ಗಿರಿಗೆ ಪಾತ್ರನಾದ.
ಅಂತೂ ಜೋಗ ನೋಡಿದ ಕಹಿ-ಸಿಹಿ ಅನುಭವದ ಬಳಿಕ, ರಾಜೇಶ್ ನಾಯಕರ ಈ ಬರಹ ನೋಡಿದ ಮೇಲೆ, ಲಿಂಗನಮಕ್ಕಿ ಗೇಟು ತೆರೆದಾಗ ಇನ್ನೊಮ್ಮೆ ಹೋಗಲೇ ಬೇಕು ಎಂಬ ದೃಢ ನಿಶ್ಚಯ ಹಾಕಿದ್ದೇನೆ.

15.7.07

ಅಪ್ಪೆ ಅಜ್ಞಾನ ಮತ್ತು ಶೇಷಮ್ಮ.....


ನನಗೆ ಅಸಲಿ ಅಪ್ಪೆ ಮಾವಿನ ಮಿಡಿ ಎಂದರೆ ಏನೆಂದು ಚಿಕ್ಕವನಿದ್ದಾಗ ಗೊತ್ತೇ ಇರಲಿಲ್ಲ.

ಅಪ್ಪೆಗಳ ಅಸಲಿತನ-ನಕಲಿತನ ಗೊತ್ತಾದದ್ದು ಕೆಲವರ್ಷಗಳ ಹಿಂದೆಯಷ್ಟೇ. ಅದರ ಹಿಂದೆ ಹೀಗೊಂದು ಚಿಕ್ಕ ಸಂದರ್ಭವಿದೆ.

ಕಾಸರಗೋಡಿನ ನನ್ನಜ್ಜನ ಮನೆಯಂಗಳದಲ್ಲಿ ಇದ್ದ ಕಾಟು ಮಾವಿನ ಮರದಲ್ಲಿ ಕೆಂಪಿರುವೆ ಕಡಿಸಿಕೊಂಡೇ ಮಾವ ಬುಟ್ಟಿ ಬುಟ್ಟಿ ಮಾವಿನ ಮಿಡಿ ಇಳಿಸುತ್ತಿದ್ದ. ತಾಯಿ, ಅಜ್ಜಿ, ಚಿಕ್ಕಮ್ಮಂದಿರು ಸೇರಿಕೊಂಡು ಮಿಡಿ ಕ್ಲಾಸಿಫಿಕೇಶನ್ ಮಾಡುತ್ತಿದ್ದರು. ದೊಡ್ಡಮಿಡಿ, ಕೊಯ್ಯುವಾಗ ಬಿದ್ದ ಮಾವು, ಮೀಡಿಯಂ ಸೈಝಿದ್ದು...ಹೀಗೆಲ್ಲ.

ಮಾವಿನ ಮಿಡಿ ಕೊಯ್ದ ಬಳಿಕ ಒಂದಷ್ಟು ದಿನ ನಮಗೆ ಸಿಗುತ್ತಿದ್ದುದು ಗಾಯಗೊಂಡ ಮಾವಿನ ತುಂಡುಗಳ ಉಪ್ಪಿನಕಾಯಿ ಮಾತ್ರ. ಮಿಡಿಮಾವಿನ ಉಪ್ಪಿನಕಾಯಿ ಎತ್ತರದ ಭರಣಿಗಳಿಂದ ಹೊರಗೆ ಬರಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಹಾಂ ಅಪ್ಪೆ ಬಗ್ಗೆ ಹೇಳಲು ಹೊರಟು ಏನೇನೋ ಒದರುತ್ತಿದ್ದಾನೆ ಅನ್ನಬೇಡಿ.

ಮಳೆ ಧೋ ಎಂದು ಸುರಿಯುವಾಗ ರಜೆಯಲ್ಲಿ ಮನೆಯಲ್ಲಿ ಮಧ್ಯಾಹ್ನ ಒಮ್ಮೊಮ್ಮೆ ಬಿಳಿ ಕಡಲೇಕಾಯಿಯಷ್ಟೇ ದೊಡ್ಡದಾದ ಆದರೆ ಕೇವಲ ಸೊನೆಯಿಂದಲೇ ಇದು ಕಡಲೇಕಾಯಿ ಅಲ್ಲ, ಕಾಡಿನ ಮುಳ್ಳುಗಿಡ ಕರಂಡೆ ಕಾಯಿಯೂ ಅಲ್ಲ, ಅಪ್ಪಟ ಮಾವು ಎಂದು ಗೊತ್ತಾಗುವ ಮಾವಿನ ಉಪ್ಪಿನಕಾಯಿ ಪ್ರತ್ಯಕ್ಷವಾಗುತ್ತಿತ್ತು. ಅದನ್ನೇ ಅಪ್ಪೆ ಮಿಡಿ ಎಂದು ಕರೆಯಲಾಗುತ್ತಿತ್ತು! ಮನೆಯಂಗಳದ ಮಾವಿನಲ್ಲೇ ಅತ್ಯಂತ ಚಿಕ್ಕದಾದ ಮಿಡಿಯನ್ನೇ ಅಪ್ಪೆ ಎಂದು ನಂಬಿ ನಾನು ಮೋಸಹೋಗಿದ್ದೆ. ಇದೆಂತಹ ಘೋರ ಅಜ್ಞಾನ ಎನ್ನುವುದು ಗೊತ್ತಾದ್ದು ಉಜಿರೆಯ ಹಾಸ್ಟೆಲ್ ಸೇರಿದ ಮೇಲೆಯೇ. ಅಲ್ಲಿ ಶಿರಸಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಸ್ನೇಹಿತರು ಏನೇ ಮರೆತರೂ ಅಪ್ಪೇ, ಜೀರಿಗೆ ಮಿಡಿಯ ಬಾಟಲಿಯೊಂದು ಬಿಟ್ಟು ಬರುತ್ತಿರಲಿಲ್ಲ.

ಕಾಸರಗೋಡಿನಲ್ಲಿ ಸಿಕ್ಕ ಚೋಕುಡಿ ಮಾವಿಗೆ ಅಪ್ಪೆ ಎಂದು ತಿಳಿದು ಈ ಘನತೆವೆತ್ತ ಅಪ್ಪೆಮಿಡಿಗೆ ಅನ್ಯಾಯ ಮಾಡಿದ್ದರ ಬಗ್ಗೆ ಹಲುಬುತ್ತಲೇ ಈ ಉ.ಕ ಸ್ನೇಹಿತರು ಕೊಡುವ ಅಪ್ಪೆಯನ್ನು ಸವಿಯುತ್ತಿದ್ದೆ.

ಅದು ಬಿಟ್ಟರೆ ನಾನು ಅಪ್ಪೆ ತಿಂದಿದ್ದು ಕಡಮೆ. ಅದೆಲ್ಲ ಬಿಡಿ. ಎರಡು ವರ್ಷಕ್ಕೆ ಮೊದಲು ನಮ್ಮ ಪಕ್ಕದ ಮನೆಯ ಬಾಲಕೃಷ್ಣ ಎಂಬವರು ಅಪ್ಪೆ ಸಿಗುತ್ತೆ ತರೋಣ ಎಂದರು. ಹೊರಟೇ ಬಿಟ್ಟೆ. ಸಾಗರ ಬಳಿಯ ರಿಪ್ಪನ್ ಪೇಟೆಯಲ್ಲಿಳಿದು ಅಪ್ಪೆಗಾಗಿ ಸರ್ಚ್ ಶುರು. ನಾವು ಹೊರಗಿಂದ ಬಂದ ಕಾರಣ ಎಲ್ಲರೂ ಬಾಯಿಗೆ ಬಂದ ರೇಟು ಹೇಳತೊಡಗಿದರು. ಎಲ್ಲೂ ನಮಗಿಷ್ಟವಾಗಲಿಲ್ಲ. ಸುತ್ತುತ್ತಿರುವಾಗ ಆಟೋ ಚಾಲಕರೊಬ್ಬರು ನಮ್ಮಲ್ಲಿ ಅಪ್ಪೆ ಬೇಕಾದ್ರೆ ಎರಡು ಮೈಲಿ ಮುಂದೆ ಹೋಗಿ ಶೇಷಮ್ಮ ಅಂತ ಇದಾರೆ ಎಂಬ ಸಖತ್ ಮಾಹಿತಿ ಕೊಟ್ರು.

ಹಾಗೆ ಹುಡುಕುತ್ತಾ ಹೋದಾಗ ಕೊನೆಗೂ ಶೇಷಮ್ಮ ಸಿಕ್ರು. ನಡು ಮಧ್ಯಾಹ್ನ ಆಕೆಯ ಮನೆ, ಮನೆಗಿಂತಲೂ ಚಿಕ್ಕ ಷೆಡ್ಡು ಎನ್ನಬಹುದು. ಸುಮಾರು ಎಪ್ಪತ್ತು ವರುಷದ ವಿಧವೆ ಶೇಷಮ್ಮನ ಕಾಯಕ ಮಾವಿನಕಾಯಿ ಉಪ್ಪಿನಕಾಯಿ ಮಾಡೋದೇ. ದೂರದೂರುಗಳಿಂದಲೂ ಶೇಷಮ್ಮನ ಕೈಗುಣಕ್ಕೆ ಮೆಚ್ಚಿ ಜನ ಬಂದು ಉಪ್ಪಿನಕಾಯಿ ಕೊಂಡೊಯ್ಯುತ್ತಾರೆ.

ಮಧ್ಯಾಹ್ನ ತನಗಿಟ್ಟ ಅನ್ನದಿಂದಲೇ ಒಂದಷ್ಟು ಪಾಲು ನಮಗೂ ಸಿಕ್ಕಿತು(ಊಟದಲ್ಲಿ ಶೇಷಮ್ಮನ ಉಪ್ಪಿನಕಾಯಿ ರುಚಿಯೂ ಸಿಕ್ಕಿತು). ಹತ್ತಿರ ಬೇರೆ ಹೋಟ್ಲೂ ಇರಲಿಲ್ಲ. ನಮಗೆ ಉಪ್ಪಿನಕಾಯಿ ಬೇಕಿರಲಿಲ್ಲ. ಉಪ್ಪಿನಲ್ಲಿ ಹಾಕಿದ್ದ ತಲಾ ಐದು ನೂರು ಜೀರಿಗೆ ಮತ್ತು ಅಪ್ಪೆ ಮಿಡಿಯನ್ನು ಸರಿಯಾಗಿ ಎಣಿಸಿ, ಮೇಲಿಂದ ಇಪ್ಪತ್ತು ಹೆಚ್ಚುವರಿ ಮಿಡಿಗಳನ್ನೂ ನಮ್ಮ ಪಾತ್ರೆಗೆ ಹಾಕಿಟ್ಟರು ಶೇಷಮ್ಮ. ಜತೆಗೆ ವಿಧವೆಯಾದ ಮೇಲೆ ತಾನು ಊರಿನಿಂದ ಪ್ರತ್ಯೇಕವಾದ ಕಥೆಯನ್ನೂ ಹೇಳಿದರು. ಶೇಷಮ್ಮನಿಗೆ ಮಕ್ಕಳು ಇಲ್ಲ, ವಿಶೇಷ ಆಸೆಯೂ ಇಲ್ಲ. ಒಂದೇ ಆಸೆ ಇದ್ದದ್ದು ಒಂದೇ. ತನ್ನ ಮನೆ ಪಕ್ಕ ಆಂಜನೇಯನ ಗುಡಿ ನಿರ್ಮಿಸುವುದು. ಹೊರಗೆ ಇಣುಕಿದರೆ ಗಡಿ ಆಗಲೇ ಪೂರ್ಣಗೊಂಡಿತ್ತು. ಉಪ್ಪಿನಕಾಯಿ ದುಡ್ಡು ಸೇರಿಸಿಯೇ ನಿರ್ಮಿಸಿದ್ದಂತೆ. ಆಕೆಯ ಗುಡು ಬೇಗ ನಿರ್ಮಾಣವೇಗಲಿ ಎಂದು ಹಾರೈಸಿ, ಮಾವಿನ ದುಡ್ಡು ಮೇಲೆ ನೂರು ಆಂಜನೇಯನ ಗುಡಿ ನಿರ್ಮಾಣಕ್ಕೆ ಕಿಂಚಿತ್ ಸಹಾಯವಾಗಲಿ ಎಂದು ಕೊಟ್ಟು ಹಿಂದಿರುಗಿದೆವು.

ಸಕತ್ ರುಚಿಯಿದ್ದ ಆ ಮಾವಿನ ಮಿಡಿಯನ್ನು ಸಂಬಂಧಿಗಳೆಲ್ಲ ಸ್ವಲ್ಪ ಸ್ವಲ್ಪವಾಗಿ ಇಲ್ಲವಾಗಿಸಿದರು. ಆದರೆ ಆ ಮಿಡಿಯ ಕಂಪು ಇಂದಿಗೂ ಬಾಯಿಗೆ ನೆನಪಿದೆ. ಮುಂದಿನ ವರ್ಷ ನಾನು ಮಿಡಿ ತರಲು ಹೋಗಲಾಗಲಿಲ್ಲ. ಬಾಲಕೃಷ್ಣ ಹೋಗಿದ್ದರು. ಮಿಡಿ ಕಡಮೆಯಾದ ಕಾರಣ ಭಾರೀ ಬೆಲೆ ಎಂದು ಸ್ವಲ್ಪವೇ ತಂದಿದ್ದರು.

ಕಳೆದ ವರ್ಷ ಮಾತ್ರ ನಾನೂ ಬರುತ್ತೇನೆ. ಶೇಷಮ್ಮನ ಮನೆಗೇ ಹೋಗೋಣ ಎಂದಿದ್ದೆ. ಆದರೆ ಮಿತ್ರರೊಬ್ಬರಿಂದ ಮಾಹಿತಿ ಬಂತು. ಶೇಷಮ್ಮ ನಿಧನರಾಗಿ ಕೆಲವು ತಿಂಗಳಾಗಿವೆ.......


(ಸುಶ್ರುತರ ಗಂಗಮ್ಮನ ಜೀರಿಗೆ ಬಗ್ಗೆ ಓದಿದಾಗ ಶೇಷಮ್ಮ ಫಕ್ಕನೆ ಜ್ಞಾಪಕಕ್ಕೆ ಬಂದರು. ಅದಕ್ಕಾಗಿ ಸುಶ್ರುತರಿಗೆ ಥ್ಯಾಂಕ್ಸ್)


8.7.07

ಎರಡು ಪಲುಕುಗಳು

ಜಾಹೀರಾತು

ಅವಳ
ರಾತ್ರಿಗಳಿಗೆ
ಬಣ್ಣ ಮೆತ್ತುವ
ಕನಸುಗಳನ್ನು
ಕಾವಲು
ಕಾಯುವುದಕ್ಕೊಬ್ಬ
ಕಾವಲುಗಾರ
ಬೇಕಾಗಿದ್ದಾನೆ!



ಸವಾಲು

ಆ ಹುಡುಗಿಯ
ಕೂದಲ ಮೇಲೆ
ಮಿರಿಮಿರಿ
ಮಿರುಗುವ
ನೀರಹನಿಯಲ್ಲಿ
ಯಾರ್ಯಾರದ್ದೋ
ಪ್ರತಿಬಿಂಬಗಳು
ಅದರಲ್ಲಿ
ನನ್ನನ್ನು
ಹುಡುಕಿಕೊಡುವವರು
ಬೇಕಾಗಿದ್ದಾರೆ!

4.7.07

ನೆನಪಾದ ಮಿತ್ರರಿಬ್ಬರ ಬಗ್ಗೆ....

ಹಲವು ಮಿತ್ರರಿದ್ದಾರೆ ನಂಗೆ. ೧ನೇ ತರಗತಿಯಿಂದ ಎಂ.ಎ ವರೆಗೆ ಸಹಪಾಠಿಗಳಾಗಿದ್ದವರು...ಅದರ ಮಧ್ಯೆ ಒಂದಲ್ಲ ಒಂದು ಕಾರಣದಿಂದ ಪರಿಚಯವಾಗಿ ಸ್ನೇಹಿತರಾದವರು...ಉದ್ಯೋಗಕ್ಕೆ ಸೇರಿದ ಬಳಿಕ ಮಿತ್ರರಾದವರು...ಹೀಗೆ ಅನೇಕ ರೀತಿಯವರು.
ಆದರೆ ನಾನಿಲ್ಲಿ ಹೇಳಬೇಕಾದವರು ಇಬ್ಬರ ಬಗ್ಗೆ.
ಒಬ್ಬಾತ ಜಯ, ಇನ್ನೊಬ್ಬ ನಟರಾಜ.
ಅವರಿಬ್ಬರಿಗೂ ಅನೇಕ ವಿಷಯಗಳಲ್ಲಿ ಹೋಲಿಕೆಯಿತ್ತು. ಆದರೆ ಅವರಿಬ್ಬರಿಗೂ ಪರಿಚಯ ಮಾತ್ರ ಇರಲಿಲ್ಲ.
ಜಯ ೧ನೇ ತರಗತಿಯಲ್ಲಿ ನನ್ನ ಗೆಳೆಯನಾದವನು. ಕ್ಲಾಸಲ್ಲಿ ಆತನಿಗೆ ಕಲಿಕೆಯಲ್ಲಿ ಸವಾಲೊಡ್ಡುತ್ತಿದ್ದುದು ನಾನು ಮಾತ್ರ. ಆದರೆ ಆ ಆಸಾಮಿ ವರ್ಷ ಕಳೆದಂತೇ ಕೇವಲ ಕಲಿಕೆಯಷ್ಟೇ ಅಲ್ಲ, ನಾಟಕ, ಪ್ರಬಂಧ, ಆಟೋಟಗಳಲ್ಲೂ ಮಿಂಚುತ್ತಿದ್ದ. ಸೊಗಸಾಗಿ ಚಿತ್ರ ಬಿಡಿಸುತ್ತಿದ್ದ, ನಂಗೂ ಆ ಹುಚ್ಚು ಕಲಿಸಿಕೊಟ್ಟ. ಚೆಸ್ ಆಡೋದು ಹೇಳಿಕೊಟ್ಟ.
ನಮ್ಮದು ಒಂದು ಆದರ್ಶ ಗೆಳೆತನ. ಕ್ಲಾಸಲ್ಲಿ ಮಾತ್ರವಲ್ಲ ಆತ ನನ್ನ ಮನೆಗೆ ಬರ್‍ತಾ ಇದ್ದ, ಕೈಕಾಲು ಸೋಲುವಷ್ಟು ಕ್ರಿಕೆಟ್ ಆಡುತ್ತಿದ್ದೆವು, ತಿಂಡಿ ತಿಂದು ಹೋಗ್ತಾ ಇದ್ದ, ನಾನು ಅವನ ಮನೆಗೆ ಹೋಗಿ ಚೆಸ್ ಆಡಿ ಬರುತ್ತಿದ್ದೆ. ಜಯ ೮ನೇ ತರಗತಿಯಲ್ಲಿ ಬಾಡಿಗೆ ಸೈಕಲ್ ತುಳಿಯುವ ಹೊಸ ಅಭ್ಯಾಸ ರೂಢಿಸಿಕೊಂಡ. ಆತನ ತಾಯಿ ಶಿಕ್ಷಕಿಯಾದ್ದರಿಂದ ಹಣಕ್ಕೆ ಕೊರತೆ ಇರಲಿಲ್ಲ. ನನಗೆ ಅದೊಂದು ಅಡ್ಡಿ ಇದ್ದ ಕಾರಣ. ಅದಕ್ಕೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ ತಂದೆ ಏನೋ ಹೇಳಿದರೆಂದು ಚಿಲ್ಲರೆ ಹಣ ಎತ್ತಿಕೊಂಡ ಜಯ ಬಾಡಿಗೆ ಸೈಕಲೊಂದರಲ್ಲಿ ನಾಪತ್ತೆಯಾದ! ತಾಯಿ ಕಣ್ಣೀರಿಟ್ಟರು. ಎರಡು ದಿನ ಬಿಟ್ಟು ಸುಸ್ತಾದ ಮುಖದೊಂದಿಗೆ ಹುಡುಗ ಮನೆಗೆ ಮರಳಿದ. ಓಡಿಹೋದ ಕಾರಣ ಯಾರಿಗೂ ಹೇಳಲಿಲ್ಲ.

ಒಂದು ವರ್ಷ ಸರಿಯಾಗಿದ್ದ. ೯ನೇ ತರಗತಿಗೆ ಬಂದಾ‌ಗ ಮತ್ತೆ ನಾಪತ್ತೆಯಾದ. ಹೋದವನು ಬರ್‍ತಾನೆ ಎಂದು ಹೆತ್ತವರು ತಿಳಿದಿದ್ದರು. ತಿಂಗಳಾಯಿತು...ವರ್ಷವೇ ಆಯಿತು ಜಯರಾಮನಿಲ್ಲ.
ಕೊನೆಗೂ ಜಯ ಬಂದ. ಆಗ ನಾವು ಸಿನಿಮಾದಲ್ಲಷ್ಟೇ ನೋಡುತ್ತಿದ್ದ ruf n tuf ಜೀನ್ಸು, ಬಿಳಿಯ ಸ್ಟೋನ್ ವಾಷ್ ಅಂಗಿ ಧರಿಸಿ ಥೇಟ್ ಹೀರೋ ಥರಾನೇ ಆಗಿದ್ದ. ಬೆಂಗಳೂರಿನ ಯಾವುದೋ ಹೊಟೇಲಲ್ಲಿ ಕೆಲ್ಸ ಮಾಡಿದ್ದನಂತೆ. ಸಾಕಷ್ಟು ಸಂಪಾದನೆ ಮಾಡಿದಂತೆ ಕಾಣುತ್ತಿದ್ದ.
ಏನೇ ಆಗಲಿ ಶಾಲೆ ಮುಂದುವರಿಸಿದ. ದುಡ್ಡಿನ ರುಚಿ ಹತ್ತಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಹತ್ತಿರದ ಪೇಟೆಯೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ. ಥಟ್ಟನೆ ಏನಾಯ್ತೋ ಗೊತ್ತಿಲ್ಲ. ಮತ್ತೊಮ್ಮೆ ಬೆಂಗಳೂರಿಗೆ ಹೋದಾತ ಮರಳಲಿಲ್ಲ. ಯಾವುದೋ ರೈಲು ಹಳಿಯಲ್ಲಿ ಜಯರಾಮನನ್ನೆ ಹೋಲುವ ಶವ ಪತ್ತೆಯಾಗಿತ್ತು. ಊರಿನಲ್ಲಿ ಏನೇನೋ ಸುದ್ದಿಗಳು. ಜಯ ಏನೋ ಸ್ಮಗಲಿಂಗ್ ಗ್ಯಾಂಗ್ ಸೇರಿರಬಹುದು ಎಂದು...ಕೆಟ್ಟದ್ದೇನೋ ಮಾಡಲು ಹೋಗಿ ಹುಡುಗ ಹಾಳಾದ ಎಂದೆಲ್ಲಾ ಊರು ಆಡಿಕೊಂಡು ಸುಮ್ಮನಾಯಿತು. ಈಗಲೂ ಹಳೆಯ ನೆನಪುಗಳು ಕಾಡಿದಾಗ ಜಯನ ಚಿತ್ರ ಮೊದಲು ಬರುತ್ತದೆ. ಕಣ್ಣಂಚು ತೇವಗೊಳ್ಳುತ್ತದೆ.

ಇನ್ನೊಬ್ಬ ನಟರಾಜ. ಜಯ ಒಂದು ವರ್ಷ ನಾಪತ್ತೆಯಾಗಿದ್ದಾಗ ನನ್ನ ಕ್ಲಾಸಿಗೆ ದಢಿರನೇ ಎಲ್ಲಿಂದಲೋ ಬಂದು ಸೇರಿದ್ದ. ನಡೆ ನುಡಿ ಜಯನಂತೇ. ಕಲಿಕೆಯಲ್ಲೂ ಮುಂದು. ಆದರೆ ಒಂಥರಾ ರೌಡಿಯಂತೆ. ಆ ಹಳ್ಳಿಶಾಲೆಯಲ್ಲಿ ಚಿಕ್ಕ ತಪ್ಪುಗಳೂ ಅಪರಾಧವಾಗುವಾಗ ಈ ಪಾರ್ಟಿ ಪ್ಯಾಕೆಟುಗಟ್ಟಲೆ ಪಾನ್ ಪರಾಗು, ಮಧು ಹಾಕುತ್ತಿದ್ದ. ನನ್ನೊಂದಿಗೆ ಹರಟುತ್ತಾ ಆತ್ಮೀಯನಾಗಿದ್ದ.

ಮನೆಯಲ್ಲಿ ತಂದೆ, ತಾಯಿ, ಅಣ್ಣಂದಿರಲ್ಲಿ ಜಗಳ ಮಾಡಿ ಮನೆ ಬಿಟ್ಟಿದ್ದ. ಶಾಲೆ ಹತ್ತಿರವೇ ಇದ್ದ ಶೆಡ್ಡ್ ಹೊಟೇಲಲ್ಲೆ ರೂಮ್ ಮಾಡಿದ್ದ. ಕ್ಲಾಸಿನ ಬ್ರಿಲಿಯಂಟ್ ಹುಡುಗಿಯೊಬ್ಬಳಿಗೆ ಲೈನ್ ಕೊಡಲೂ ಶುರುಮಾಡಿದ್ದ. ಹೆದರಿಕೆಯೇ ಇಲ್ಲದೆ ರಾತ್ರಿ ನಾವೆಲ್ಲಾ ಭೂತ ಇದೆ ಎಂದು ಬೆವರುತ್ತಿದ್ದ ಕ್ಲಾಸಿಗೆ ಓದಲು ಹೋಗುತ್ತಿದ್ದ. ಎಸ್ಸೆಸ್ಸೆಲ್ಸಿ ಮುಗಿದು ನಾನು ಊರಿಂದ ಬೇರೆ ಕಡೆಗೆ ಪಿಯುಸಿಗೆ ಹೋದರೆ, ಈತ ಊರಲ್ಲೇ ಏನೇನೋ ಮಾಡುತ್ತಾ ಕಳೆದ. ತಲೆಯಿದ್ದರೂ ಓದಲು ಹೋಗಲಿಲ್ಲ. ಆ ಬಳಿಕ ನನಗೆ, ಅವನಿಗೆ ನಿಧಾನವಾಗಿ ಸಂಪರ್ಕ ಕಡಿದೇ ಹೋಗಿತ್ತು.
ಕಳೆದ ವರ್ಷ ಮಂಗಳೂರಿನಲ್ಲಿ ಪರಿಚಯದವರ ಗೃಹಪ್ರವೇಶಕ್ಕೆ ಹೋದರೆ ಆಸಾಮಿ ಅಡುಗೆ ಗುಂಪಲ್ಲಿದೆ! ಕೇಳಿದರೆ ಎರಡು ವರ್ಷದಿಂದ ಇದೇ ಕೆಲಸವಂತೆ. ಮದುವೆಯಾಗಿದೆ, ಮಗು ಇದೆ, ಮನೆ ಮಾಡಿದ್ದೇನೆ. ಒಮ್ಮೆ ಟೈಂ ಮಾಡಿ ಬಾ ಎಂದಿದ್ದ. ಮೊಬೈಲು ನಂಬರೂ ಕೊಟ್ಟ. ಆ ಮೇಲೆ ಕೆಲ ದಿನಗಳ ಕಾಲ ಫೋನೂ ಮಾಡಿದ್ದ. ಈಗ ಆ ಮೊಬೈಲ್ ಅಸ್ತಿತ್ವದಲ್ಲಿಲ್ಲ, ನನಗೆ ಫೋನ್ ಕರೆಯೂ ಇಲ್ಲ.
ಇಂತಹ ಅನೇಕ ವಿಚಿತ್ರ ಎನಿಸುವ ಫ್ರೆಂಡ್‌ಗಳು ನಿಮಗೂ ಇರಬಹುದು..ಅವರ ನೆನಪುಗಳು ಬಿಡದೆ ಕಾಡಬಹುದು....
ಅಕ್ಸರ್‍ ಇಸ್ ದುನಿಯಾ ಮೇ ಅಂಜಾನೇ ಮಿಲ್ತೇ ಹೈಂ
ಅಂಜಾನೇ ರಾಹೋ ಮೇ ಮಿಲ್ಕೇ ಖೋ ಜಾತೇ ಹೈಂ
ಲೇಕಿನ್ ಹಮೇಶಾ ವೋ ಯಾದ್ ಆತೇ ಹೈಂ....
Related Posts Plugin for WordPress, Blogger...