23.12.11

ಡಿಸೆಂಬರ‍್ ಪಲುಕುಗಳು

ಮೈಕೊಯ್ಯುತ್ತಿರುವ
ಮಾಗಿಯ ಚಳಿಯನ್ನು
ಮುದುರಿ ಮಲಗಿದ
ನಾಯಿಮರಿಯೂ ಆನಂದಿಸುತ್ತಿದ್ದರೆ
ನಾನು ಮಾತ್ರ ನಾಳೆಯ
ಭಯದಿಂದ
ಕಂಪಿಸುತ್ತಿದ್ದೇನೆ!
-------------------
ತನ್ನ ಗೂಡಿನ ಸುತ್ತ
ಹಸಿರಾಗಿದ್ದ ಎಲೆಗಳೂ
ಒಣಗಿ ಉರುಳಿ
ಹೋದಾಗ ಗಾಬರಿಗೊಳ್ಳದ
ಹಕ್ಕಿ ಹೊಸ ಚಿಗುರಿಗಾಗಿ
ಹಾತೊರೆಯಿತು
-----------------
ಬದುಕು ಸುಂದರವಾಗಿ
ಕಳೆದು ತೊಟ್ಟು ಕಳಚಿಬಿದ್ದ
ಹಣ್ಣೆಲೆಗೆ
ಇಬ್ಬನಿ ಸಾಂತ್ವನ ಹೇಳಿತು!
-------------------
ಚಳಿ ನನ್ನನ್ನು
ಇರಿಯಲು ಸಾಧ್ಯವಿಲ್ಲ
ಯಾಕೆಂದರೆ ನನ್ನ
ಸುತ್ತ ನೋವಿನ ಮುಳ್ಳುಗಳೆದ್ದಿವೆ!
-------------------
ಈ ಚಳಿಯಲ್ಲೆ ತಾನೇ
ನಮ್ಮ ಹೃದಯಗಳು ಹತ್ತಿರವಾಗಿದ್ದು
ತಮ್ಮಷ್ಟಕ್ಕೇ ಮಾತಾಡಿಕೊಂಡಿದ್ದು!
-------------------
ಇಬ್ಬನಿಯಲ್ಲಿ ಮುಳುಗೆದ್ದ
ಗುಲಾಬಿ
ಎಳೆಬಿಸಿಲಲ್ಲಿ
ಮೈಒಣಗಿಸಿಕೊಳ್ಳುತ್ತಾ
ನಸುನಾಚಿತು...

18.12.11

ವಾರಣಾಶಿಯ ಪಾರ್ಥ ಆಡಿಲೇಡ್‌ನಲ್ಲಿ ಈಜಿದ್ದು.....

ವಾರಣಾಶಿ ಪಾರ್ಥ
 ಕೆಲವೊಮ್ಮೆ ಹವ್ಯಾಸವೇ ವೃತ್ತಿಯಾಗಿ ಬಿಡುವುದೆಂದರೆ ಇದೇ ಇರಬೇಕು...
ಮಂಗಳೂರಿನ ಯುವಕನೊಬ್ಬ ಆಸ್ಟ್ರೇಲಿಯಾಕ್ಕೆ ಕೃಷಿ ಬಯೋಟೆಕಾಲಜಿಯಲ್ಲಿ ಉನತ ವ್ಯಾಸಂಗಕ್ಕೆಂದು ಹೋದವರು ಅಲ್ಲಿನ ಅತಿ ಬೇಡಿಕೆಯ ಈಜು ತರಬೇತಿ ಸಂಸ್ಥೆಯ ಡೈರೆಕ್ಟರ್ ಆದ ಸೋಜಿಗದ ಕಥೆಯಿದು.
 ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಬಯೋಟೆಕ್ ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ಪಾರ್ಥ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಜನರಿಗೆ ಈಜು ಎಂದರೆ ಅಪಾರ ಆಸಕ್ತಿ. ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗುವ ಜತೆಗೆ ಈಜು ತರಬೇತಿ ಪಡೆಯುತ್ತಾರೆ. ಪಾರ್ಥ ಸದ್ಯಕ್ಕೆ ಇರುವಂತಹ ಆಡಿಲೇಡ್ ಎಂಬ ನಗರ(ಮಂಗಳೂರಿನಷ್ಟೇ ವಿಶಾಲವಾಗಿದೆ). ಇಲ್ಲಿ ೫೦ಕ್ಕೂ ಹೆಚ್ಚು ಈಜು ಕೊಳಗಳಿವೆಯಂತೆ!
ದಕ್ಷಿಣ ಕನಡ-ಕಾಸರಗೋಡು ಜಿಲ್ಲೆ ಅಡ್ಯನಡ್ಕ ಮೂಲದವರು ಪಾರ್ಥ. ಇವರ ಅಜ್ಜ ಕ್ಯಾಂಪ್ಕೊದ ಅಧ್ಯಕ್ಷರಾಗಿದ್ದ ವಾರಣಾಶಿ ಸುಬ್ರಾಯ ಭಟ್. ತಂದೆ ಕೃಷ್ಣಮೂರ್ತಿ ಕೃಷಿಗೆ ಸಂಬಂಧಪಟ್ಟಂತಹ ಸಂಶೋಧನೆಯಲ್ಲಿ ತೊಡಗಿದವರು ವಾರಣಾಶಿ ಪ್ರತಿಷ್ಠಾನದ ಮೂಲಕ.
ಆಡಿಲೇಡ್‌ನ ಸ್ವಿಮ್ಮಿಂಗ್ ಶಿಷ್ಯರೊಂದಿಗೆ..
 ಪಾರ್ಥ ಮಂಗಳೂರಿನ ಮಂಗಳಾ ಈಜು ಕೊಳದಲ್ಲಿ ಚಿಕ್ಕಂದಿನಿಂದಲೇ ಈಜು ತರಬೇತಿ ಪಡೆದಿದ್ದರು. ಜೈಹಿಂದ್ ಈಜು ಕ್ಲಬ್‌ನ ರಾಮಕೃಷ್ಣ ಇವರ ಕೋಚ್ ಆಗಿದ್ದರು. ಮಂಗಳೂರಿನಲ್ಲಿ ಡಿಗ್ರಿ ಮುಗಿಸಿ 2007ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿ, ಆಡಿಲೇಡ್ ವಿವಿಯಲ್ಲಿ ಕೃಷಿ ಬಯೋಟೆಕ್ ಕೋರ್ಸ್‌ಗೆ ಸೇರಿದರು.
 ಅಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಮೊತ್ತ ಬೇಕಾಗುತ್ತಿತ್ತು. ಹಾಗಾಗಿ ಕಲಿಕೆ ಜತೆ ದುಡಿಮೆ ಬೇಕೇಬೇಕು. ಈಜು ಗೊತ್ತಿದ್ದ ಕಾರಣ ಈಜು ಕೋಚ್ ಆಗುವ ಅವಕಾಶವಿತ್ತು. ಅದಕ್ಕೆ ಮೊದಲು ಈಜು ತರಬೇತಿಯ ಬಗ್ಗೆ 1 ವಾರದ ಕೋರ್ಸ್ ಮಾಡಿದೆ. ಬಳಿಕ ‘ಸ್ಟೇಟ್‌ಸ್ವಿಮ್’ ಎಂಬ ಕಂಪನಿಯಲ್ಲಿ ಈಜು ತರಬೇತಿದಾರನಾಗಿ ಸೇರಿದೆ ಎನುತ್ತಾರೆ ಪಾರ್ಥ.
 ೧ ವರ್ಷ ಹೀಗೆ ತರಬೇತಿ ನೀಡುತ್ತಾ ಕೃಷಿ ಬಯೋಟೆಕ್ ಕೋರ್ಸ್ ಪೂರ್ಣಗೊಳಿಸಿದರು. ಆ ಬಳಿಕ ಬಯೋಲಾಜಿಕಲ್ ಅಗ್ರಿಕಲ್ಚರ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ನಾನು ಬಯೋಟೆಕ್‌ನಲ್ಲಿ ಕಲಿತದ್ದರಲ್ಲೇ ಆ ಉದ್ಯೋಗಕ್ಕೆ ಸೇರಿದ್ದೆ. ಒಂದು ವರ್ಷ ಆದಾಗ ಅವರು ಹಿಂದೆ ಕೋಚಿಂಗ್ ನೀಡುತ್ತಿದ್ದ ಸ್ಟೇಟ್‌ಸ್ವಿಮ್ ಕಂಪನಿಯವರೇ ಸಂಪರ್ಕಿಸಿ, ಮತ್ತೆ ಅವರ ಕಂಪನಿ ಸೇರುವಂತೆ ಕೇಳಿಕೊಂಡರು.
 ಹಾಗೆ ಮತ್ತೆ 2010ರಲ್ಲಿ ಸ್ಟೇಟ್‌ಸ್ವಿಮ್ ಕಂಪನಿಗೆ ಈಜು ಕೋಚ್‌ ಡೈರೆಕ್ಟರ್‌ ಆಗಿ ಸೇರಿಕೊಂಡರು. ಇದರಲ್ಲಿ ತರಬೇತಿ ನೀಡುವವರ ನೇಮಕಾತಿ, ಸಮಾಜದಲ್ಲಿ ಈಜು ಚಟುವಟಿಕೆಯನು ಪ್ರೋತ್ಸಾಹಿಸುವುದು ಈ ಹುದ್ದೆ ಜವಾಬ್ದಾರಿ.
ತಾಯಾಡಿನ ಸೆಳೆತ: ‘ನಾನು ಆಸ್ಟ್ರೇಲಿಯಾದ ಜನರ ಈಜಿನ ಬಗ್ಗೆ ಇರುವ ಉತ್ಸಾಹ ನೋಡಿ ಚಕಿತನಾದೆ. ನಮ್ಮಲ್ಲೂ ಅಂತಹ ಸೀಸ್ಪೋರ್ಟ್ಸ್ ಒಲವು ಮೂಡಿಸುವ ಬಗ್ಗೆ ಆಸಕ್ತಿ ಇದೆ. ನನ ತಂದೆ ಕೃಷಿ ಸಂಬಂಧಿ ಸಂಶೋಧನೆ ಮಾಡುತ್ತಿದ್ದಾರೆ. ನಾನು ಅದನೇ ಕಲಿತಿದ್ದೇನೆ, ಅದನು ಊರಿನಲ್ಲಿ ಉದ್ಯೋಗವಾಗಿ ತೆಗೆದುಕೊಳ್ಳುತ್ತೇನೆ. ಆದರೆ ಕಡಲಿನಲ್ಲಿ ಈಜುಗಾರಿಕೆ, ಇತರ ವಿಂಡ್ ಸರ್ಫಿಂಗ್‌ನಂತಹ ಚಟುವಟಿಕೆಗಳನೂ ಕೈಗೊಳ್ಳುವ ಇರಾದೆ ಇದೆ’  ಎನ್ನುತ್ತಾರೆ ಪಾರ್ಥ (9482906163)
ಈಜು ತರಬೇತುದಾರರಾಗಿ ಪಾರ್ಥ.

4.12.11

ಕಡಿದುಕೊಳ್ಳುವ ಕಷ್ಟ

ಕಡಿದುಕೊಳ್ಳುವುದು
ಅಥವಾ ಬಿಡಿಸಿಕೊಳ್ಳುವುದು
ಎಂದರೆ ಸುಲಭವಲ್ಲ
ನೂಲುಗಳ ಗಂಟಿನಂತೆ
ಸಿಕ್ಕುಸಿಕ್ಕಾದ ಅಥವಾ
ಹಾಲುಜೇನಿನಂತೆ ಮಧುರವಾದ
ಸಂಬಂಧವಿರಬಹುದು
ಎರಡನ್ನೂ ಕಡಿದು
ಹೊರಬರುವುದು ಕಡುಕಷ್ಟ
ಮೊದಲನೆಯದ್ದರಲ್ಲಿ
ಇರುವ ಒಗಟು ಬಿಡಿಸುವುದೇ
ದೊಡ್ಡ ಸವಾಲು
ಎರಡನೆಯದ್ದಂತೂ
ಹೇಳಿ ಸುಖವಿಲ್ಲ
ಅಲ್ಲೆಲ್ಲೋ ಅದೃಶ್ಯದ
ಎಳೆಗಳು
ಕಟ್ಟಿಹಾಕಿರುತ್ತವೆ
ಬೇಡವೆಂದರೂ ಕಡಿಯಲು
ಮನಸ್ಸು ಬರುವುದಿಲ್ಲ
ತಂಪೆರುವ ಮರದ
ಅಡಿಯಿಂದ ಒಮ್ಮೆಗೇ
ಬೇಸಗೆಯ ಮಧ್ಯಾಹ್ನಕ್ಕೆ
ಕಾಲಿಡುವುದು ಹೇಗೆ ?
ಒಂದು ವೇಳೆ
ಈ ಗುರುತ್ವ ಮೀರಿದರೆ
ತಾರಾ ಮಂಡಲದಾಚೆ ಹೋಗಬಹುದು
ಪಾರಾಗಲೂ ಬಹುದು,
ಅಥವಾ ಹೊಸ
ಬಲೆಯಲ್ಲಿ ಸಿಕ್ಕು ಹಾಕಿಕೊಳ್ಳಬಹುದು!

22.11.11

ಹೆಸರ ಹಂಗಿಲ್ಲದ ಹನಿಗಳು

ಮನತುಂಬಾ ನೋವಿದ್ದರೂ
ನಿನ್ನ ಮುಖ ನೋಡಿದ ಬಳಿಕ
ಕಣ್ಣೀರಿಗೆ
ಹೊರಬರುವುದಕ್ಕೂ ಆಗದೆ
ಚಡಪಡಿಸುತ್ತಿದೆ
ನಕ್ಕು ಬಿಡು ಒಮ್ಮೆ
-----------------
ಅಂದು ನನ್ನ ಕಂಗಳಲ್ಲಿ
ನಿನ್ನ ಕಂಗಳ ಬೆಳಕು
ಪ್ರತಿಫಲಿಸಿತ್ತು,
ಆ ಬೆಳಕು
ಇಂದಿಗೂ ಕತ್ತಲಲ್ಲಿ
ನನ್ನ ಮುನ್ನಡೆಸುತ್ತಿದೆ!
------------------
ಸಂಜೆ ಗಾಢವಾದಾಗ
ಮಿಂಚಿದ ಮೊದಲ ನಕ್ಷತ್ರ
ಮತ್ತೆ ಮೂಡಿದ ಚಂದಿರ
ನಿನ್ನ ನೆನಪಿಸಿದಾಗ
ಮುಂದಿದ್ದ ಬಾಟಲಿ
ನನ್ನ ಅಣಕಿಸಿತು!

18.11.11

ಹೀಗೊಂದು ಅಪಘಾತದ ಕಥೆ

ಅದು ಹಿಂಗಾರು ಮಳೆಯ ರಾತ್ರಿ...
ಪಿರಿಪಿರಿ ಮಳೆಯಲ್ಲಿ ಕಪ್ಪು ಹೆದ್ದಾರಿ ಮಿರಿಮಿರಿ ಹೊಳೆಯುತ್ತದೆ.
ಆಗೊಮ್ಮೆ ಈಗೊಮ್ಮೆ ರಾಜಾರೋಷವಾಗಿ ಟ್ರಕ್‌ಗಳು, ಬಸ್‌ಗಳು ಹರಿದಾಡುತ್ತವೆ.
ಅಲ್ಲೊಂದು ಚಿಕ್ಕ ದೃಶ್ಯ. ವ್ಯಕ್ತಿಯೊಬ್ಬನ ದೇಹ ಮಕಾಡೆ ಬಿದ್ದಿದೆ, ರಕ್ತ ಕೋಡಿ ಹರಿಯುತ್ತಿದೆ. ಒಂದೆರಡು ವಾಹನಗಳು ರಸ್ತೆ ಪಕ್ಕ ನಿಂತಿವೆ ಹತ್ತಾರು ಮಂದಿ ದೇಹದ ಸುತ್ತ ಸೇರಿದ್ದಾರೆ.
ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬಹುದು. ಪೊಲೀಸ್ ಜೀಪ್‌ ಕೂಡಾ ಅದೋ ಬಂದಿದೆ.
‘ಅದು ಹೋಗಿದೆ, ಅಲ್ಲಾಡ್ತಾ ಇಲ್ಲ..’
‘ಯಾರೋ ಏನೋ ಪಾಪ, ಲಾರಿ ಹೊಡ್ಕೊಂಡ್ ಹೋಗಿರ‍್ಬೇಕು’
ಹೀಗೆ ಸೇರಿದವರಲ್ಲೇ ಮಾತು-ಕತೆ.
ಪೊಲೀಸರು ವ್ಯಕ್ತಿಯ ಜೇಬು ತಡಕಾಡುತ್ತಾರೆ, ಗುರುತು ಹಿಡಿಯಲು ಯತ್ನಿಸಿ ಸೋತಿದ್ದಾರೆ, ಅವನ ಕಿಸೆಯಲ್ಲಿ ಸಿಕ್ಕಿದ ಮೊಬೈಲಲ್ಲೇ ಕೊನೆಯ ಕರೆ ಬಂದ ವ್ಯಕ್ತಿಗೂ ಕರೆ ಮಾಡಿದ್ದಾರೆ, ಆ ಮೊಬೈಲ್ ಈಗ ವ್ಯಾಪ್ತಿ ಪ್ರದೇಶದ ಹೊರಗೆಲ್ಲೋ ಇದೆ.
ನಿಶ್ಚಲನಾಗಿ ಬಿದ್ದ ವ್ಯಕ್ತಿಯ ಕೈನಲ್ಲಿ ವಾಚ್ ಸಹಜ ವೇಗದಲ್ಲಿ ಓಡುತ್ತಲೇ ಇದೆ, ಆದರೆ ಎದೆಬಡಿತವಲ್ಲ....
ಕೊನೆಗೂ ವ್ಯಕ್ತಿಯನ್ನು ಜೀಪೊಂದಕ್ಕೆ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ
ಏನಾಗಿರಬಹುದು? ನಾಳೆ ಪತ್ರಿಕೆ ಓದಬೇಕು!
pic courtesy devendra

25.10.11

ದೀಪಾವಳಿಯ ಕನಸು

ಹಾರುವ
ರಾಕೆಟ್ಟುಗಳೆಲ್ಲ
ಲಂಕೆ ಸುಟ್ಟಂತೆ
ಒಂದೊಂದು ಮತಾಪಿನಲ್ಲೂ
ಒಬ್ಬೊಬ್ಬ ರಕ್ಕಸ
ಉರಿದುಹೋದಂತೆ
ಬಿದ್ದಿದೆ ದೀಪಾವಳಿಯ ರಾತ್ರಿ ಕನಸು

ವೇದಿಕೆಯಲ್ಲಿ
ಅಟ್ಟಹಾಸ ಕೊಡುತ್ತಿದ್ದಾರೆ
ರಕ್ಕಸ ವೇಷಧಾರಿಗಳು,
ಅಕ್ಕಟಕಟಾ!
ಗಹಗಹಿಕೆ
ಮರೆಯಾಗಿ ಸಾಲು ಸಾಲಾಗಿ
ಕತ್ತಲಮರೆಗೆ ಹೋಗುತ್ತಿದ್ದಾರೆ
ಕಾಣಾ.
ನರಕಾಸುರನ ವಧೆಯಾಗಿದೆ
ಸುದರ್ಶನ ಚಕ್ರವಿನ್ನೂ ಸುತ್ತುತ್ತಲೇ
ಇದೆ ಹಲವು ತಲೆಗಳ ಸುತ್ತ!

ದಾನಶೂರನಾದರೂ
ಕಿತಾಪತಿ ಮಾಡಿದ
ಬಲಿ ಚಕ್ರವರ್ತಿಯನ್ನು
ವಾಮನ ಮೂರನೇ ಹೆಜ್ಜೆಗೆ
ಪಾತಾಳಕ್ಕೆ ತಳ್ಳಿದ್ದಾಗಿದೆ!
ಬಲಿ ಮತ್ತೆ
ಪ್ರಜೆಗಳನ್ನು ನೋಡುವುದಕ್ಕೆ
ಉತ್ಸುಕನಾಗಿದ್ದಾನೆ
ಈ ದೀಪಾವಳಿಯಲ್ಲಿ
ಆದರೆ ಜನರೇ
ಬಲಿಯನ್ನು ಮರೆತಿದ್ದಾರೆ
ದೀಪಾವಳಿಯ ಸಂಭ್ರಮದಲ್ಲಿ
ಬೆರೆತುಹೋಗಿದ್ದಾರೆ

ವೇದಿಕೆಯ ಹಿಂದೆ
ನರಕಾಸುರ, ಬಲಿ
ಎಲ್ಲರೂ ಕುಳಿತು ಅತ್ತರೂ
ಪಟಾಕಿಯ ಸದ್ದಿನಲ್ಲಿ
ಮರೆಯಾಗಿದೆ..

ದೀಪಾವಳಿಯ ರಾತ್ರಿ ಕನಸು ಬಿದ್ದಿದೆ!

(ಎಲ್ಲರಿಗೂ ಈ ದೀಪಾವಳಿ ಸಂಭ್ರಮ, ಜೀವನೋಲ್ಲಾಸ ತರಲಿ ಎಂದು ಆಶಿಸುತ್ತೇನೆ)


ಚಿತ್ರಕೃಪೆhttp://festivalspictures.blogspot.com

16.10.11

ಮುಖವಾಡ

ತನ್ನ ಗರ್ಭದಲ್ಲಿ
ಹೆಪ್ಪುಗಟ್ಟುವ ಮೇಘ
ಇಳೆಗೆ ಮಳೆಯಾಗಿ
ಸುರಿಯುವುದನ್ನು
ಆನಂದಿಸುವ ಆಗಸ
ಮೋಡಕ್ಕೆ ಬಾಡಿಗೆ ಕೇಳುವುದಿಲ್ಲ!

ಸುಂದರ ಪುಷ್ಪಗಳನ್ನು
ಹೆತ್ತು, ಅವು ಹೂಬುಟ್ಟಿ,
ಮಾರುಕಟ್ಟೆ ಸೇರಿ
ಸುಂದರಿಯ ಮುಡಿ ಸೇರಿದ್ದ
ತಿಳಿಯಲಾಗದ ಗಿಡ
ಕಣ್ಣೀರು ಸುರಿಸುವುದಿಲ್ಲ

ಕಂದನಿಗೆ ಇಷ್ಟಿಷ್ಟೇ ಉಳಿಸಿ
ತನ್ನ ಕೆಚ್ಚಲಿಂದ ಹಾಲೆಲ್ಲ
ಕೊಟ್ಟು ಬಿಡುವ ಗೋವು
ಮುಷ್ಕರ ಹೂಡುವುದಿಲ್ಲ...

ರೈತ ಬೆಳೆದ ಅಕ್ಕಿಯಲ್ಲಿ,
ಕಾರ್ಖಾನೆಯಿಂದ
ಹೊರಬರುವ ಉತ್ಪನ್ನಗಳಲ್ಲಿ
ಭೂಮಿ ಪಾಲು ಕೇಳುವುದಿಲ್ಲ...

 
(ತಡೀರಿ....
ಗೇಟಲ್ಲಿ ಕಿರಿಚುವ ಭಿಕ್ಷುಕನನ್ನ
ಓಡಿಸಿ ಬರುತ್ತೇನೆ )!!!

14.9.11

ಗಣಿಗೆ ಮಣಿಯದ ಸತ್ಯ!

ಸತ್ಯ ಶೋಧಿಸಲು
ಗಣಿ ಅಗೆಯುತ್ತಾ
ಆಳಕ್ಕಿಳಿದಂತೆ
ಸತ್ಯವನ್ನೇ
ಗಣಿ ನುಂಗಿಬಿಟ್ಟಿತು

ಸತ್ಯಕ್ಕೆ ಹೊರಬರಲಾಗದೆ
ಥರಗುಟ್ಟಿತು, ಚಡಪಡಿಸಿತು

ಗಣಿಯ ಶಕ್ತಿಗೆ, ಸತ್ಯದ
ಬಡಪೆಟ್ಟುಗಳು
ತಾಕಲಿಲ್ಲ

ಸತ್ಯವನ್ನೇ ಮಿಥ್ಯವಾಗಿ
ತೋರಿಸುವಷ್ಟಿತ್ತು
ಗಣಿಯ ದೌಲತ್ತು

ಸತ್ಯ ತಾಳ್ಮೆಗೆಡಲಿಲ್ಲ
ಗಣಿಯ ಧೂಳಿನಡಿಯಲ್ಲೇ
ನ್ಯಾಯದ ಮುತ್ತುಗಳ
ಪೋಣಿಸುತ್ತಲೇ
ಹೋಯಿತು..
ಕಡೆಗೊಮ್ಮೆ ಸತ್ಯ
ಪ್ರಜ್ವಲಿಸಿತು
ಗಣಿಯ ಧೂಳು
ಮರೆಯಾಯಿತು!

4.8.11

ರಾಜ ಬೇಕಾಗಿದ್ದಾನೆ!

 ನಾವು ಶಾಂತಿಪ್ರಿಯ
ರಾಜ್ಯದ ನತದೃಷ್ಟ ಪ್ರಜೆಗಳು
ಬಂದ ರಾಜರೆಲ್ಲ
ರಾಜ್ಯ ಲೂಟಿಕೊಟ್ಟು
ಹೋಗಿದ್ದಾರೆ.
ರಾಜ್ಯದ ಬೊಕ್ಕಸದಲ್ಲಿ
ತಮ್ಮ ಮಹಲು ಕಟ್ಟಿಕೊಂಡಿದ್ದಾರೆ
ನಮ್ಮವರೇ ನಮಗೆ
ಚೂರಿ ಹಾಕಿದ್ದಾರೆ,
ಸಿಂಹಾಸನವನ್ನೂ ಬಿಡದೆ
ಬಾಚಿದ್ದಾರೆ

ನಮ್ಮನ್ನು ರಕ್ಷಿಸಲು
ರಾಜ ಬೇಕಾಗಿದ್ದಾನೆ
ನಮಗೊಬ್ಬ...



ರಾಜನೆಂದರೆ ರಾಜ...
ಪ್ರಜೆಗಳನ್ನು ಪೀಡಿಸುವ
ಗುಲಾಮರಂತೆ
ಕಾಡುವ ದಳಪತಿಯಲ್ಲ,
ಆಡಳಿತದ ಗಂಧಗಾಳಿಯರಿಯದೆ
ಬರೀ ಭಾಷಣ ಬಿಗಿಯುವ
ರಾಜವಂಶದ ಕುಡಿಯಲ್ಲ
ಲೂಟಿಕೋರರೇ
ಕಳುಹಿಸಿಕೊಟ್ಟ ಬೂಟಾಟಿಕೆಯವನಲ್ಲ

ಭೋಜರಾಜನಂತೆ
ರಾಜ್ಯ ಸುತ್ತಿ
ಪ್ರಜೆಗಳ ಕಷ್ಟ ತಿಳಿಯುವವ ರಾಜ
ನಮ್ಮನ್ನು ಮಕ್ಕಳಂತೆ
ಸಲಹುವ ಕಾಶಿರಾಜನಂತಹ ರಾಜ
ರಾಮನ ಪಾದುಕೆಯನ್ನೇ
ಸಿಂಹಾಸನದಲ್ಲಿರಿಸಿಯೂ
ರಾಜ್ಯವಾಳಬಲ್ಲ ಸರಳ
ರಾಜನೊಬ್ಬ ಬೇಕಾಗಿದ್ದಾನೆ
ನಮಗೊಬ್ಬ.

ನಮ್ಮ ಮಣ್ಣಲ್ಲಿ ಬೆಳೆದವನಾಗಿರಬೇಕು
ನಮ್ಮ ಕಷ್ಟಗಳ ಅರಿತಿರಬೇಕು
ಅರವತ್ತು ವಿದ್ಯಾ ಪಾರಂಗತನಾಗಿರಬೇಕು
ಲೂಟಿಕೋರರ ಹುಟ್ಟಡಗಿಸಬೇಕು

ಅಂತಹ ರಾಜನಿದ್ದರೆ
ಹೇಳಿ ನಾವೇ
ಪಟ್ಟಕ್ಕೇರಿಸುತ್ತೇವೆ

ಕಷ್ಟವೋ ಸುಖವೋ
ಇನ್ನೊಮ್ಮೆ ನೋಡಿಬಿಡುತ್ತೇವೆ!

1.8.11

ಹೆದ್ದಾರಿಕಥೆಗಳು-4, ಪ್ರತಿಮೆಗೆ ಜೀವ ಬಂದಾಗ!

ಹೆದ್ದಾರಿ ಬದಿಯ ಉದ್ಯಾನದಲ್ಲಿ ದಶಕಗಳ ಕಾಲ ಧೂಳು ತಿನ್ನುತ್ತಾ ನಿಂತಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಆ ಪ್ರತಿಮೆಗೆ ಅದೊಂದು ದುರದೃಷ್ಟಕರ ರಾತ್ರಿಯಲ್ಲಿ ಜೀವ ಬಂತು. ಸ್ವಾತಂತ್ರ‍್ಯ ಸಿಕ್ಕಿ ಒಂದೆರಡು ತಿಂಗಳಲ್ಲಿ ಪ್ರಾಣಬಿಟ್ಟ ಮಹಾತ್ಮರ ಪ್ರತಿಮೆಯಾಗಿತ್ತದು.
ಜೀವ ಬಂದ ಕೂಡಲೇ ಪ್ರತಿಮೆ ತನ್ನ ಎತ್ತರದ ಚೌಕಿಯಿಂದ ಕೆಳಕ್ಕೆ ಧುಮುಕಿತು, ಅದಕ್ಕೆ ತನ್ನ ಕಾಲದ ಸ್ವಾತಂತ್ರ‍್ಯ ಹೋರಾಟದ ಕೆಚ್ಚು ನೆನಪಿಗೆ ಬಂತು.
ಇಷ್ಟು ದಿನ ಪ್ರತಿಮೆಯಾಗಿತ್ತಲ್ಲವೇ ಈಗಿನ ಪರಿಸ್ಥಿತಿಯ ಸಂದಿಗ್ಧತೆ ತಿಳಿದಿರಲಿಲ್ಲ. ರಾಜಾಜೋಷವಾಗಿ ಓಡುತ್ತಿದ್ದ ಕಾರುಗಳನ್ನು ನೋಡಿ ಪ್ರತಿಮೆಗೆ ಖುಷಿಯಾಯಿತು. ಜನರಲ್ಲಿ ಶ್ರೀಮಂತಿಕೆ ಬಂದಿದೆ, ಇಷ್ಟು ಸಪಾಟಾದ ರಸ್ತೆಗಳಾಗಿವೆ, ಐಷಾರಾಮಿ ಕಾರುಗಳಿವೆ, ನಾನು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದು ಸಾರ್ಥಕ ಎನಿಸಿತು.
ಹಾಗೇ ಹೆದ್ದಾರಿ ಪಕ್ಕದಲ್ಲಿ ನಗರದ ಕಡೆಗೊಂದು ಸರ್ಕೀಟು ಹೊರಟಿತು ಪ್ರತಿಮೆ. ನಡೆದು ಸುಸ್ತಾದಾಗ ದಾರಿಯಲ್ಲಿದ್ದ ಬಸ್ ಬೇಯಲ್ಲಿ ಕುಳಿತು ದಣಿವಾರಿಸಲು ಹೊರಟರೆ ಅಲ್ಲಿ ಮುಲುಗುತ್ತಾ ಕುಳಿತಿದೆ ಒಂದು ಜೀವ. ಹರಕು ಕಂಬಳಿ ಹೊದೆದು ಕುಳಿತಿದ್ದ ಭಿಕ್ಷುಕನವನು.
ಚಳಕ ಹೊಡೆದಂತಾಯ್ತು ಪ್ರತಿಮೆಯ ಹೃದಯದಲ್ಲಿ..ನಾನು ಬಡವರು-ಶ್ರೀಮಂತರ ನಡುವೆ ಅಂತರವಿರಬಾರದು ಎಂದು ಪ್ರತಿಪಾದಿಸಿದ್ದೆ..ಆದರೆ ಇಷ್ಟು ಕಡುಬಡವನಿರುವುದು ಹೇಗೆ? ಸ್ವಾತಂತ್ರ‍್ಯ ಬಂದು 64 ವರ್ಷಗಳೇ ಆಗಿಹೋದರೂ ಇನ್ನೂ ಭಿಕ್ಷುಕರಿದ್ದಾರೆಯೇ ಇಲ್ಲಿ ಎಂದು ಪ್ರತಿಮೆ ಭಿಕ್ಷುಕನಲ್ಲಿ ಪ್ರಶ್ನಿಸಿತು.
ಹೆಹ್ಹೆಹ್ಹೆ...ಒಳ್ಳೇ ಪ್ರಶ್ನೆ ಕಣಯ್ಯಾ...
‘ಎಲ್ಲಿಂದ ಬಂದೆ ನೀನು? ಅಲ್ಲಾ ಹಾಕಿದ ಗುಂಡು ಇಳಿದಿಲ್ವಾ?’ ಭಿಕ್ಷುಕ ಕೇಳಿದ.
ಪ್ರತಿಮೆಗೆ ಒಂದೂ ತಿಳಿಯಲಿಲ್ಲ..ಸುಮ್ಮನೆ ಮುಖ ಮುಖ ನೋಡಿತು. 
‘ನಾನೊಂದು ಪ್ರತಿಮೆ, ಅನೇಕ ವರ್ಷಗಳಿಂದ ಅದೋ ಅಲ್ಲಿ ನಿಂತಿದ್ದೆ ಈಗ ಜೀವ ಬಂತು...ಸುಮ್ಮನೆ ಇಲ್ಲೇನಾಗುತ್ತಿದೆ ನೋಡಬೇಕಿದೆ’
ಓ ಹಂಗಾ. ಕೇಳು..ನೋಡು ನಮ್ಮ ದೇಶದಲ್ಲಿ ಇರೋದೇ ಹೀಗೆ..ದೇಶ ಬಹಳ ಅಭಿವೃದ್ಧಿಯಾಗಿದೆ ಈಗ. ಎಲ್ಲೇ ನೋಡಿ ಬಿಲ್ಡಿಂಗ್, ಕೈಗಾರಿಕೆ, ಮಾಲ್, ಬಿಎಂಡಬ್ಲ್ಯು ಕಾರು ಬಂದಿದೆ, ಆದರೂ ನಾವು ಕೆಲವರು ಹೀಗೇ ಇದ್ದೇವೆ, ನಮಗೆ ಕೆಲಸ ಮಾಡಲು ಉದಾಸೀನ ಎಂದು ಸಮಾಜದ ಆಢ್ಯರು ಹೇಳ್ತಾರೆ...ನನ್ನಲ್ಲಿದ್ದ ಜಮೀನು ಕೈಗಾರಿಕೆಗೆ ಕೊಂಡೊಯ್ದರು. ನನಗೆ ಕೈಗೊಂದಿಷ್ಟು ಕಾಸು ಕೊಟ್ಟರು, ಕಾಸು ನೋಡಿ ಬುದ್ಧಿ ಕೆಟ್ಟಿತು, ಈಗ ಇಲ್ಲಿದ್ದೇನೆ ನೋಡು.
ಎಲ್ಲಾ ಹಾಳಾಗಲು ನೋಡು ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದೇ ಕಾರಣ.ಆ ಸ್ವಾತಂತ್ರ‍್ಯ ಹೋರಾಟಗಾರರೇನಾದರೂ ಸಿಕ್ಕಲಿ...ಬಿಡೋದಿಲ್ಲ..ಭಿಕ್ಷುಕ ಅಬ್ಬರಿಸತೊಡಗಿದ.
ನಾನು ಸ್ವಾತಂತ್ರ‍್ಯ ಹೋರಾಟಗಾರನೇ, ಸತ್ಯವಂತ, ಅಹಿಂಸಾಪರ ಹೋರಾಟಗಾರ...ಎಂದಿತು ಪ್ರತಿಮೆ.
ಹೌದಾ...ಈಗ ರಾತ್ರಿ. ಯಾರೂ ನೋಡುವುದಿಲ್ಲ. ನಿನಗೂ ಏನೂ ಕಾಣುವುದಿಲ್ಲ..ಇನ್ನು ನಿಂತು ಜನರ ಕಣ್ಣಿಗೆ ಸಿಗಬೇಡ, ನೀನೂ ನೋಡಲು ಹೋಗಬೇಡ..ನೋಡಿದರೆ ನೀನು ಸಹಿಸಲಾರೆ.
ನೋಡು ಇದೇ ರಸ್ತೆ ಮೂಲಕ ದೊಡ್ಡ ಟ್ರಕ್‌ಗಳಲ್ಲಿ ನಮ್ಮ ಮಣ್ಣನ್ನೇ ಸಾಗಿಸಿ ಅದೋ ಆ ಬಂದರಿನ ಮೂಲಕ ಕಳುಹಿಸುತ್ತಾರೆ, ಮಣ್ಣೂ ಈಗ ಚಿನ್ನವಾಗಿದೆ.
ಇಲ್ಲಿ ಕೊಲೆಗಾರರು, ದೋಚುವವರು, ಲೂಟಿಕೋರರೂ ಎದೆಯುಬ್ಬಿಸಿ ನಡೆಯುತ್ತಾರೆ, ನಿನ್ನಂತೆ ಸತ್ಯ ಸತ್ಯ ಎಂದವರು ಸತ್ತಂತೆಯೇ, ಹಾಗಾಗಿ ಎಲ್ಲಾದರೂ ಓಡಿ ಬದುಕಿಕೋ ಯಾರ ಕೈಗೂ ಸಿಗಬೇಡ ಎಂದ ಭಿಕ್ಷುಕ.
ಪ್ರತಿಮೆಗೆ ಗಾಬರಿಯಾಗಿ ಹೊರ ಬಂದು ಆಕಾಶ ನೋಡಿತು. ರಸ್ತೆ ಪಕ್ಕ ನಡೆಯತೊಡಗಿತು. 
ಅಷ್ಟರಲ್ಲಿ ಕಾರೊಂದು ದೂರ ನಿಂತಿತು...ಏನನ್ನೋ ಎಸೆದು ಹಾಗೇ ಸರಿದು ಹೋಯಿತು..ಪ್ರತಿಮೆ ಅಲ್ಲಿ ಹೋಗಿ ನೋಡಿದರೆ ಅದೊಂದು ದೇಹವಾಗಿತ್ತು. ಯುವತಿಯ ದೇಹ...ಪ್ರಾಣವಿಲ್ಲದ ದೇಹ..ದೇಹ ತುಂಬ ಗೀರುಗಳು..
ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು...ಪ್ರತಿಮೆಯನ್ನು ನೋಡಿ ಪೊಲೀಸರಿಗೆ ಯಾರೋ ಕಳ್ಳನೋ, ಕೊಲೆಗಾರನಂತೆಯೋ ಕಂಡಿತು...ನಿಲ್ಲು ನಿಲ್ಲು ಎನ್ನುತ್ತಾ ಪಿಸ್ತೂಲು ತೋರಿಸಿ ಅಧಿಕಾರಿ ಬೊಬ್ಬಿರಿದ. 
ಪ್ರತಿಮೆಗೆ ಭಿಕ್ಷುಕ ಹೇಳಿದ್ದು ನೆನಪಾಯ್ತು..
ನನಗಿದು ಕಾಲವಲ್ಲ ಎಂದಿದ್ದೇ ಪ್ರತಿಮೆ ಓಟಕ್ಕಿತ್ತಿತು..ಪೊಲೀಸರು ಬರುವ ಮೊದಲೇ ಪರಾರಿಯಾಯಿತು.
ಮರುದಿನ ಅಲ್ಲೆಲ್ಲೂ ಪ್ರತಿಮೆ ಕಂಡುಬರಲಿಲ್ಲ.
ಅಂದು ಸಂಜೆ ಪತ್ರಿಕೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆ ನಾಪತ್ತೆ ಎಂಬ ಒಂದು ಸುದ್ದಿಯೂ ಪ್ರತಿಮೆಯಿಲ್ಲದೆ ಅನಾಥವಾಗಿ ಕಾಣುವ ಅದರ ಪೀಠದ ಚಿತ್ರವೂ ಪ್ರಕಟವಾಗಿತ್ತು.
ಅದೇ ದಿನ ಮುಖ್ಯಮಂತ್ರಿಗಳು ಅದೇ ಸ್ಥಳದಲ್ಲಿ ಚಿನ್ನದ ಪ್ರತಿಮೆಯನ್ನೇ ಅಲ್ಲಿ ನಿರ್ಮಿಸಲಾಗುವುದು ಎಂಬ ಹೇಳಿಕೆಯನ್ನೂ ನೀಡಿದರು.

26.7.11

ಕಿಟಿಕಿಯಾಚೆಗಿನ ಹನಿ

ಮಳೆಗಾಲದ ಸಂಜೆಯಲ್ಲಿ
ಕಿಟಿಕಿ ತೆರೆದು ಕುಳಿತಿದ್ದರೆ
ಮನದ ಕೋಣೆಯಲ್ಲಿ
ನೆನಪುಗಳು ಚಳಿಯ
ಬಾಧೆಯಿಂದ ನರಳುತ್ತವೆ
ಮನಸ್ಸು ಹೇಳಿದರೂ
ಕೇಳದೆ ಹಿಂದಕ್ಕೋಡುತ್ತದೆ
ಹಿಡಿತ ಕಳೆದುಕೊಂಡು
ಚೆಲ್ಲಾಪಿಲ್ಲಿಯಾದ
ಭಾವಗಳು ಕಣ್ಣಂಚಿಂದ
ಹೊರಬಂದು
ಅನಾಥವಾಗುತ್ತವೆ

ಕಿಟಿಕಿಯ ಹೊರಗೆ
ಕನಿಕರವಿಲ್ಲದೆ ಸುರಿಯುವ
ಹನಿಗಳು ಹಳ್ಳ ಸೇರಲು
ಹವಣಿಸುತ್ತಿವೆ
ಮನದ ಭಾವಗಳು
ಮುಕ್ತವಾಗಲು ತಪ್ತ

ಮಳೆ ಸುರಿಯುತ್ತಲೇ
ಇದೆ ಇನ್ನೂ..
ಕುಳಿರುಗಾಳಿ, ಮಿಂಚು
ಸಿಡಿಲುಗಳಿಗೆ ಬೆದರಿದ
ಬೀದಿ ದೀಪಗಳೂ ನಂದಿವೆ

ಕೆಳಗೆ ತೊಯ್ದ ಮಿಡತೆಗಳ
ಮೃತದೇಹಗಳು..
ಮನದ ಕಿಂಡಿಯೊಳಗೆ
ಈಗ ಎಲ್ಲವೂ ಖಾಲಿ
-------------------------

pic courtesy: whiteeecrow.wordpress.com

ಕಿಟಿಕಿಯಾಚೆಗಿನ ಹನಿ

ಮಳೆಗಾಲದ ಸಂಜೆಯಲ್ಲಿ
ಕಿಟಿಕಿ ತೆರೆದು ಕುಳಿತಿದ್ದರೆ
ಮನದ ಕೋಣೆಯಲ್ಲಿ
ನೆನಪುಗಳು ಚಳಿಯ
ಬಾಧೆಯಿಂದ ನರಳುತ್ತವೆ
ಮನಸ್ಸು ಹೇಳಿದರೂ
ಕೇಳದೆ ಹಿಂದಕ್ಕೋಡುತ್ತದೆ
ಹಿಡಿತ ಕಳೆದುಕೊಂಡು
ಚೆಲ್ಲಾಪಿಲ್ಲಿಯಾದ
ಭಾವಗಳು ಕಣ್ಣಂಚಿಂದ
ಹೊರಬಂದು
ಅನಾಥವಾಗುತ್ತವೆ

ಕಿಟಿಕಿಯ ಹೊರಗೆ
ಕನಿಕರವಿಲ್ಲದೆ ಸುರಿಯುವ
ಹನಿಗಳು ಹಳ್ಳ ಸೇರಲು
ಹವಣಿಸುತ್ತಿವೆ
ಮನದ ಭಾವಗಳು
ಮುಕ್ತವಾಗಲು ತಪ್ತ

ಮಳೆ ಸುರಿಯುತ್ತಲೇ
ಇದೆ ಇನ್ನೂ..
ಕುಳಿರುಗಾಳಿ, ಮಿಂಚು
ಸಿಡಿಲುಗಳಿಗೆ ಬೆದರಿದ
ಬೀದಿ ದೀಪಗಳೂ ನಂದಿವೆ

ಕೆಳಗೆ ತೊಯ್ದ ಮಿಡತೆಗಳ
ಮೃತದೇಹಗಳು..
ಮನದ ಕಿಂಡಿಯೊಳಗೆ
ಈಗ ಎಲ್ಲವೂ ಖಾಲಿ


pic courtesy: whiteeecrow.wordpress.com

24.7.11

ಕಡಲೆಂಬ ಒಗಟು

ಕಡಲೆಂಬೋ ಕಡಲಿಗೆ
ಎಲ್ಲೆಂದಲೆಲ್ಲಿಂದಲೋ
ನೀರು ಬಂದು ಸೇರುತ್ತದೆ..
ನಾವು ಯಾವುದಕ್ಕಾಗಿ
ಬಡಿದಾಡಿದ್ದೇವೋ ಆ ಮಣ್ಣನ್ನೇ
ನೀರು ಕೊಚ್ಚಿ ತಂದು
ಸಮುದ ಗರ್ಭಕ್ಕೆ ಸುರಿಸುತ್ತದೆ

ಪ್ರವಾಹಕ್ಕೆ ಸಿಲುಕಿ ಸತ್ತ
ದನ ನಾಯಿ ಕೋಳಿ
ಗಳ ಅಂತಿಮ ಯಾತ್ರೆಯೂ
ಬಂದು ಸೇರುವುದು ಸಮುದ್ರಕ್ಕೆ

ನಮ್ಮೆಲ್ಲಾ ಕೊಳೆಗಳನ್ನೂ
ತೊಳೆದು ತೋಡಿಗಟ್ಟಿದರೂ
ಅದರಲ್ಲಿ ಮಿಳಿತವಾದ ಪಾಪವೆಲ್ಲ
ಈಶ್ವರ ಹಾಲಾಹಲ
ನುಂಗಿದಂತೆ ಸಮುದ್ರ
ಅರಗಿಸಿಕೊಳ್ಳುತ್ತದೆ

ಸಮುದ್ರ ಏನನ್ನೂ
ತಿರಸ್ಕರಿಸುವುದಿಲ್ಲ..
ಸಮುದ್ರಕ್ಕೆ ಎಲ್ಲವೂಬೇಕು
ಮತ್ತು ಏನೂ ಬೇಡ!
ಹಾಗೆಂದು ಸಮುದ್ರವನ್ನೇ
ಹುಡುಕುವುದೂ
ಅಸಾಧ್ಯ..ಅದು ಅಭೇದ್ಯ


ಚಿತ್ರಕೃಪೆ: www.fotoartglamour.com

23.7.11

ಹೆದ್ದಾರಿಕಥೆಗಳು-೩

ಹೆದ್ದಾರಿಯ ಆ ತಿರುವಿನಲ್ಲಿ ಕೆಂಬಣ್ಣದ, ಒಂದು ಕಡ್ಡಿಯಿಂದ ಜಾರಿಕೊಂಡ ಬಟ್ಟೆಯ ಕೊಡೆ ಹಿಡಿದು ನಿಂತಿರುತ್ತಾಳೆ ಪುಟ್ಟ ಹುಡುಗಿ..
ಕೈಯಲ್ಲಿ ಅಟ್ಟೆ ಮಲ್ಲಿಗೆ.
ತಿರುವಿನಲ್ಲಿ ಧಾವಿಸಿ ಬರುವ ವೇಗದೂತ ಕಾರುಗಳ ಕಿಟಿಕಿಯತ್ತ ಆಕೆಯ ದೃಷ್ಟಿ ನಟ್ಟಿರುತ್ತದೆ. ನಿ‌ನ್ನೆ ಸಂಜೆವರೆಗೆ ಇದೇ ಜಾಗದಲ್ಲಿ ಜಡಿಮಳೆಯಲ್ಲಿ ನಿಂತರೂ ಯಾರೂ ಆಕೆಯನ್ನು ನೋಡಿ, ಹೂಗಳನ್ನು ನೋಡಿ ನಿಲ್ಲಿಸಲಿಲ್ಲ. ಹಾಗಾಗಿ ತಾಯಿಯ ಕೈನಿಂದ ಸಾಕಷ್ಟು ಬೈಗುಳ ಕೇಳಿಸಬೇಕಾಗಿತ್ತು.
ಅದನ್ನು ನೆನಪಿಸಿಕೊಂಡರೇ ಹುಡುಗಿಗೆ ದುಃಖವಾಗುತ್ತದೆ. ಇಂದಿನ ದಿನವೂ ಹಾಗಾದರೆ ಮಾಡುವುದೇನು ? ಮನೆಯಲ್ಲಿ ತಾಯಿ, ಜತೆಗೆ ಪುಟ್ಟ ತಮ್ಮ. ತಾಯಿಗೆ ಪೇಟೆಯಲ್ಲಿ ಕುಳಿತು ಮಲ್ಲಿಗೆ ಮಾರುವ ಶಕ್ತಿಯಿಲ್ಲ, ವ್ಯವಹಾರ ಜ್ಞಾನವಿಲ್ಲ. ಹಾಗಾಗಿ ತಂದೆ ಇಲ್ಲವಾದ ಬಳಿಕ ಕಳೆದ ಎರಡು ವರುಷಗಳಲ್ಲಿ ಹೆದ್ದಾರಿಯೇ ಆಕೆಯ ಮಾರುಕಟ್ಟೆ. ಬಿಸಿಲು ಮಳೆಯೆನ್ನದೆ ಆಕೆ ಅಲ್ಲಿ ಮಲ್ಲಿಗೆ ಮಾರಿದ್ದಾಳೆ.
ತಾಯಿಯ ಬೈಗುಳಕ್ಕಿಂತಲೂ ಆಕೆಯನ್ನು ನೋಯಿಸುವುದು ಮಲ್ಲಿಗೆ ಮಾರುವ ಇತರೇ ಹುಡುಗರು, ಕೆಲ ದೊಡ್ಡವರು. ಮಲ್ಲಿಗೆ ಕೈಯಲ್ಲೇ ಉಳಿದರೆ ಅದನ್ನೆ ಅಣಕಿಸುತ್ತಾರೆ, ಹಂಗಿಸುತ್ತಾರೆ. ತಮ್ಮ ನಾಲಿಗೆಯ ಬಲದಿಂದ, ಮಾರಾಟದ ಚಾಕಚಕ್ಯತೆಯಿಂದ ಕಾರಿನವರನ್ನು ಅಡ್ಡಗಟ್ಟಿ ಮಲ್ಲಿಗೆ ಮಾರುವವರೇ ಅವರೆಲ್ಲಾ. ಅವರಂತೆ ಈ ಹುಡುಗಿ ಮಾರಲಾರಳು. ಹಾಗಾಗಿ ಇಂದು ಊಟಕ್ಕೂ ಹೋಗದೆ ಹಟಕ್ಕೆ ಬಿದ್ದವಳಂತೆ ರಸ್ತೆ ಪಕ್ಕ ತಪೋಮಗ್ನ ಯೋಗಿನಿಯಂತೆ ನಿಂತಿದ್ದಾಳೆ.
ಸಂಜೆಯಾಗಿ ಹೊತ್ತುಮುಳುಗಿದೆ. ಅರೆ ಒಬ್ಬರೂ ಮಲ್ಲಿಗೆಯತ್ತ ನೋಡದೇ ಹೋಗುತ್ತಿದ್ದಾರಲ್ಲ. ಮಳೆ ಕಾರಣವೋ ಏನೋ ಚಿಂತಿಸುತ್ತಿದ್ದಾಳೆ. ಕಾರೊಂದು ಮುಂದೆ ಹೋದದ್ದು ಧುತ್ತನೆ ನಿಂತಿದೆ. ಮತ್ತೆ ಅದೇ ವೇಗದಲ್ಲಿ ಹಿಂದೆ ಬರುತ್ತದೆ.
ಹುಡುಗಿ ಉತ್ಸಾಹಗೊಂಡು ಮಲ್ಲಿಗೆ ಎತ್ತಿ ಹಿಡಿದರೆ ಕಾರಿನ ಪವರ್‌ ವಿಂಡೋ ಜರ‍್ರನೆ ಕೆಳ ಸರಿಯುತ್ತದೆ. ಕಾರಿನ ಒಳಗಿನಿಂದ ಹುಡುಗರಿಬ್ಬರು ನಗುತ್ತಾ ಮಲ್ಲಿಗೆ ರೇಟು ಕೇಳುತ್ತಾರೆ. ಅಟ್ಟೆಗೆ ಇನ್ನೂರೈವತ್ತು ತಗೊಳ್ಳಣ್ಣಾ ಎಂದು ಮತ್ತೆ ಕಿಟಿಕಿಯತ್ತ ಹಿಡಿಯುತ್ತಾಳೆ. ಹುಡುಗನೊಬ್ಬ ಅಟ್ಟಹಾಸಕೊಡುತ್ತಾ ಕೈಯನ್ನೇ ಹಿಡಿಯಬೇಕೇ...ಕೊಸರಿಕೊಳ್ಳುವಾಗ ಮಲ್ಲಿಗೆ ಕಟ್ಟು ನೆಲದ ಪಾಲು...ಹೇಗೋ ತಪ್ಪಿಸಿಕೊಂಡು ಅಲ್ಲಿಂದ ರಸ್ತೆ ದಾಟುವಾಗ ಬಸ್ಸೊಂದು ಬಂದಿದ್ದಷ್ಟೇ ಆಕೆಗೆ ಗೊತ್ತು...
ಬಿಳಿ ಮಲ್ಲಿಗೆ ಕೆಂಪಾಗಿವೆ...

26.6.11

ಮಸಣದ ಗಾಳಿ

ಚಿತೆಯಲ್ಲಿ ಇನ್ನೂ ಆರದ
ಇಂಗಳದ ಧಗೆ..
ಅದರ ನಡುವೆ
ಕರಕಲಾದ ತಮ್ಮ
ದೇಹ ನೋಡಿದ
ಆತ್ಮಗಳ ಚೀರಾಟದಂತೆ
ಕೇಳಿ ಬರುತ್ತದೆ
ಮಸಣದ  ಮೂಲೆಯಿಂದ
ಗೂಬೆಯ ಧ್ವನಿ..

ಅದು ಕೇವಲ ಮಸಣವಲ್ಲ
ಆತ್ಮನಿವೇದನೆಯ ಬಿತ್ತರಿಗೆ.
ಒಂದೊಂದು ಆತ್ಮದ ಹಿಂದೆ
ಅದರದ್ದೇ ಆದ ಕಥೆ

ಕ್ಯಾನ್ಸರಾಗಿ ಸತ್ತ ರೋಗಿ,
ಸಕ್ಕರೆ ಕಾಯಿಲೆಯಿಂದ ಇನ್ನಿಲ್ಲವಾದ
ಭೋಗಿ.
ವರದಕ್ಷಿಣೆ ಬೆಂಕಿಯಲ್ಲಿ
ಸುಟ್ಟವಳು,
ಕೋಮುದಳ್ಳುರಿಯಲ್ಲಿ
ಕಣ್ಮುಚ್ಚಿದವನು..

ಒಂದೋ ಎರಡೋ...
ನೂರೆಂಟು ಆತ್ಮಗಳು
ಮತ್ತು
ಅಷ್ಟೇ ಕಾರಣಗಳು

ಯಾರಿಗೂ ಕೇಳಿಸದಂತೆ
ಅನುರಣಿಸುತ್ತದೆ
ವೇದನೆಯ ಚೀತ್ಕಾರ
ಬೀಸುತ್ತದೆ ಗಾಳಿ
ರೊಯ್ಯನೆ ಬಿದ್ದ ಎಲೆಗಳನೆತ್ತಿ
ಒಗೆಯುತ್ತದೆ
ಅಮಾವಾಸ್ಯೆ ರಾತ್ರಿಯ
ನೋವಿಗೆ, ಕಿವಿಯಾಗುತ್ತದೆ
ಸ್ಮಶಾನದ ಬಿಕ್ಕಳಿಕೆಯನ್ನು
ಸಂತೈಸುತ್ತದೆ..

photo courtesy Peter Bowers

23.6.11

ಬೆಂಗಳೂರಿಗೆ 263 ಕಿ.ಮೀ ದೂರ ತೋರಿಸುವ ಆ ಮೈಲಿಕಲ್ಲು ಈಗ ಥರಗುಟ್ಟ ತೊಡಗಿದೆ.
ಅದೆಷ್ಟೋ ವರುಷಗಳಿಂದ ದಾರಿಹೋಕರಿಗೆ, ಪ್ರಯಾಣಿಕರಿಗೆ ಮಾರ್ಗದರ್ಶಿಯಾಗಿದ್ದ, ಮೇಲಾಗಿ ಹೆದ್ದಾರಿ 48ರ ಆ ಮೃತ್ಯುರೂಪಿ ತಿರುವಿಗೆ ಸಂಗಾತಿಯಾಗಿ ಇದ್ದ ಮೈಲಿಕಲ್ಲದು.

8.6.11

ಪಾರಿಜಾತದ ಹೂಗಳು












ಚಂದ್ರ ಕಣ್‌ಬಿಡುವ ಹೊತ್ತಲ್ಲಿ
ನಕ್ಷತ್ರ ಮಿನುಗುವ ತೆರದಿ
ನಗುತ್ತವೆ ಪಾರಿಜಾತದ ಹೂಗಳು
ಕೃಷ್ಣ-ರುಕ್ಮಿಣಿಗೆ ದೇವಲೋಕದಿಂದ
ತಂದ ಮರದಲ್ಲಿ ಅರಳಿ ತಲೆದೂಗುವ
ಹೂಗಳವು, ಅಂತಿಂಥವಲ್ಲ...

ತಲೆತಿರುಗಿಸುವ
ಸುಗಂಧವಲ್ಲ, ಅಂತಹ ಹಮ್ಮು ಇಲ್ಲ
ಕಣ್ಕುಕ್ಕಿ ಬೆಡಗು ಮೆರೆಯುವುದಿಲ್ಲ
ತನ್ನ ಪಾಡಿಗೆ ಹೂಬಿಟ್ಟು 
ಮರುದಿನ ಬೆಳಕು ನೋಡುವ ಮುನ್ನ
ತೊಟ್ಟು ಕಳಚಿ
ಧರೆಯಲ್ಲಿ ಮಲಗಿರುತ್ತವೆ
ಪಾರಿಜಾತದ ಹೂಗಳು


ಬೊಗಸೆಯಲ್ಲಿ ಬಾಚಿ
ನೇವರಿಸಿದಾಗ
ಆವರಿಸಿಕೊಳ್ಳುತ್ತದೆ ನವಿರು
ಸುಗಂಧವದು ಆಪ್ಯಾಯಮಾನ


ತನ್ನ ತವರುಮನೆ-ದೇವಲೋಕದ
ಗುಂಗಿನಿಂದ ಇನ್ನೂ ಹೊರಬರದೆ
ರಾತ್ರಿಯೇ ಅರಳಿ ಹೊರಳಿ
ಇದ್ದುಬಿಡುವುದೇ ಇದರ ಜಾಯಮಾನ!

20.3.11

ಭಾನುವಾರದ ಹೊತ್ತು


ಭಾನುವಾರವೆಂದರೆ ಹಾಗೆ
ಒಂದು ಬೊಗಸೆ
ಅಮೃತವನ್ನು
ಹಿಡಿದು ನಿಂತಂತೆ...
ಥಟ್ಟನೆ ಸೋರಿ ಹೋಗಿ ಬಿಡುತ್ತದೆ
ಏನೇನೋ ಮಾಡುವ
ಯೋಚನೆ-ಯೋಜನೆಗಳು
ಸರ್ಕಾರದ ಕಾರ್ಯಕ್ರಮದಂತೆ
ಶೈಶವ ಬಿಟ್ಟೇಳವು!


ಕಣ್ಣಲ್ಲೇ ಅಂಟಿಕೊಂಡ ನಿದ್ದೆ
ಕಪ್ಪಲ್ಲೇ ಆರಿದ ಕಾಫಿ
ಮುಂದಕ್ಕೋಡದ ಕಾದಂಬರಿ
ಹಾರ್ಡ್ ಡಿಸ್ಕಲ್ಲೇ ಉಳಿದ
ಹೊಸ ಸಿನಿಮಾ
ಅಳಿದುಳಿದ ಮೊನ್ನೆಯ ಸಾಂಬಾರು
ಫ್ರಿಜ್ಜಲ್ಲಿದೆ ಕೆಎಫ್‌ ಬೀರು
ಉಫ್‌..
ಈ ಭಾನುವಾರಕ್ಕೆ
ಎಷ್ಟೊಂದು ಷೆಡ್ಯೂಲುಗಳು!


ಹಿಂದಿನ ವಾರದ ಧೂಳು
ಕೊಡವಿದಾಗ
ಹಳೆಯ ದಿನಪತ್ರಿಕೆಗಳ
ಪೇರಿಸಿದಾಗ
ಸಂಗಾತಿಯ ಗಂಟಲಿಂದ
ಹೊರಹೊಮ್ಮುವ ಕೆಮ್ಮಿಗೆ
ನಾನಾ ಅರ್ಥ!


ತಡವಾಗೆದ್ದು,
ಏನೋ ತಿಂದು
ಮಧ್ಯಾಹ್ನದ ಊಟ ಸಂಜೆ
ಮಾಡಿದಾಗಲೇ
ಮರುದಿನದ ಕೆಲಸಗಳೆಲ್ಲಾ
ಧುತ್ತನೆ ಎದುರು
ಬಂದು  ಕಣ್ಣು ಮಂಜಾದಾಗ
ಅನಾಥಭಾವ
ಛೇ..
ಹಿಡಿಯಷ್ಟು ಭಾನುವಾರ
ಉಳಿಸಿಕೊಳ್ಳಲಾಗಲಿಲ್ಲ!


1.3.11

ಹೋಯ್‌ .. ನಿಮ್ಮಲ್ಲಿ ಮಾವಿನ ಮಿಡಿ ಉಂಟೋ ?

ಈ ಸಲದ ಭರ್ಜರಿ ಚಳಿ ಸಹಿಸಿಕೊಂಡದ್ದು ಸಾರ್ಥಕ...
ಚಳಿ ಚೆನ್ನಾಗಿದ್ದರೆ ಅಲ-ಫಲ ಚೆನ್ನಾಗಿರುತ್ತದೆ ಎಂಬ ಹಿಂದಿನವರ ಮಾತು ಸತ್ಯವಾಗಿದೆ.
ಈ ಮಳೆಗಾಲದಲ್ಲಿ ಧೋ ಎನ್ನುವ ಮಳೆಗೆ ಬೆಚ್ಚನೆ ಕುಳಿತು ಗಂಜಿ ಜತೆ ಮಾವಿನಮಿಡಿ ಉಪ್ಪಿನಕಾಯಿ ಸವಿಯಬಹುದು!
ಕಳೆದ ಮೂರು ವರ್ಷಗಳಿಂದ ಹೊಸ ಮಾವು ಉಪ್ಪಿನಕಾಯಿ ಸವಿದಿರಲಿಲ್ಲ. ಈ ಬಾರಿ ಹೊಸ ಮಾವಿಗಾಗಿ ಹುಡುಕಾಟ ಶುರುವಿಟ್ಟುಕೊಂಡಿದ್ದೇನೆ, ಬಹುಷಃ ಕಷ್ಟವಾಗಲಿಕ್ಕಿಲ್ಲ.
ದಕ್ಷಿಣಕನ್ನಡದ ಬಹುತೇಕ ಎಲ್ಲಾ ಮರಗಳೂ ಈ ಸಲ ಭರ್ತಿ ಹೂಬಿಟ್ಟು, ಈಗ ಮಿಡಿ ಕಾಣಿಸಿಕೊಂಡಿದೆ. ಬಹುಷಃ ಉತ್ತರಕನ್ನಡದ ಅಪ್ಪೆಗಳೂ ಹೀಗೇ ಇರಬಹುದು. ನಮ್ಮ ಮನೆಯ ಮುಂದಿನ ಕಾಂಪೌಂಡಲ್ಲಿ ಇರುವ ಕಾಡು ಜಾತಿಯ ಮಾವಿನ ಮರದಿಂದ  ಆ ಮನೆಯವರು ಮಾವಿನಕಾಯಿ ಕುಯ್ಸಿದ್ದರು. ಸುತ್ತಲಿನ ಹಲವು ಮನೆಗಳೊಂದಿಗೆ ನಮಗೂ ಒಂದು ಚಿಕ್ಕ ಪಾಲು ಸಿಕ್ಕಿತ್ತು...
ಮ್‌ಮ್‌ಮ್‌..ಏನ್‌ ರುಚಿ ಅಂತೀರಾ! ಏನೇ ಆದ್ರು ಅದು ಭೀಮನಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಷ್ಟೇ!
ಅಜ್ಜಿ ಮನೆ, ಅವರ ಪಕ್ಕದ  ಮನೆ, ಸಹೋದ್ಯೋಗಿ ಆತ್ಮನ ಮನೆ ಇಲ್ಲೆಲ್ಲಾ ಈ ಸಲ ಮಿಡಿಗಾಗಿ ಹೇಳಿದ್ದಾಗಿದೆ.
ನಮ್ಮಲ್ಲಿ ಚಿಕ್ಕಂದಿನಿಂದಲೂ ಉಪ್ಪಿನಕಾಯಿಗಳಲ್ಲೆಲ್ಲಾ ಮಾವಿನ ಮಿಡಿ ಉಪ್ಪಿನಕಾಯಿಗೇ ಅಗ್ರಪಟ್ಟ. ಅಂಬಟೆ ಕೂಡಾ ಮಿಡಿ ಹಾಕುತ್ತಾರಾದ್ರೂ ಮಾವಿನೆದುರು ಅದು ಸಪ್ಪೆಯೇ. ನೆಲ್ಲಿಕಾಯಿ, ನಿಂಬೆ, ಇವಕ್ಕೆಲ್ಲಾ ಆ ನಂತರದ ಸ್ಥಾನಗಳೇ.
ಚಿಕ್ಕವರಿದ್ದಾಗ ನಮಗೆ ಊಟಕ್ಕೆ ಏನಿಲ್ಲವಾದರೂ ಮಜ್ಜಿಗೆ ಮತ್ತು ಹಳೆಯ ಮಿಡಿ ಉಪ್ಪಿನಕಾಯಿ ತಪ್ಪುತ್ತಿರಲಿಲ್ಲ. ಮಿಡಿಮಾವಿನ ಉಪ್ಪಿನಕಾಯಿಯಿದ್ದರೆ ನಾಲಗೆಗೆ ಏನೋ ರುಚಿ.
ಆಗ ಅಜ್ಜಿ  ಮನೆಯ ಮುಂದಿನ ಆ ದೊಡ್ಡ ಕಾಟು ಮಾವಿನ ಮರದಲ್ಲಿ ಡಿಸೆಂಬರಲ್ಲಿ ಮೆಲ್ಲನೆ ಹೂಗಳ ತುದಿ ಕಂಡಾಗಲೇ ನಮಗೆಲ್ಲ ಸಂಭ್ರಮ. ನೋಡನೋಡುತ್ತಿದ್ದಂತೆ ಮರವಿಡೀ ಹೂಗಳ ಅಲಂಕಾರ, ಮೆಲ್ಲನೆ ಕಡಲೆಯಾಕಾರದ ಮಿಡಿಗಳ ಅನಾವರಣ. ಆ ಕಾಲದಲ್ಲೆಲ್ಲಾದರೂ ಮೋಡ ಬಂದರೆ ಅಜ್ಜಿ ಮೋಡವನ್ನೇ ಶಪಿಸುತ್ತಿದ್ದರು. ಮೋಡ ನಿರಂತರವಾಗಿ ಬಂದರೆ ಮಾವಿನ ಹೂ ಮತ್ತು ಎಳೆ ಮಿಡಿ ಉದುರಿ ಹೋಗುತ್ತಿತ್ತು. ಮತ್ತೆ ಬೆರಳೆಣಿಕೆಯ ಮಾವಷ್ಟೇ ಗತಿ. ಮೋಡ ಬರದೆ ನಸು ಮಳೆ ಸುರಿದು ಹೋದರೆ ಆ ಬಾರಿ ಬಂಪರ್‌ ಮಾವಿನ ಬೆಳೆ ಎಂದೇ ಅರ್ಥ.
ಮಾವಿನ ಕಾಯಿ ಕೊಯ್ಯುವ ದಿನವಂತೂ ಸಣ್ಣ ಉತ್ಸವವೇ. ಅನೇಕ ಸಂಬಂಧಿಕರು, ಮಿತ್ರರು ತಮ್ಮ ತಮ್ಮ ಗೋಣಿಚೀಲ ಹಿಡಿದು ಹಾಜರಾಗುತ್ತಿದ್ದರು. ಮಾವ ಮತ್ತು ಮನೆಯ ಕೆಲಸದವರು ಮರವೇರುತ್ತಿದ್ದರು, ಬಂದ ಬಂಧುಗಳಲ್ಲೂ ಕೆಲವರು ನೆರವಾಗುತ್ತಿದ್ದರು. ಮಧ್ಯಾಹ್ನವರೆಗೂ ಮಿಡಿ ಮುರಿದು, ಅದನ್ನು ನಾಜೂಕಾಗಿ ಬುಟ್ಟಿಗಿಳಿಸಿ, ಬಳ್ಳಿ ಸಹಾಯದಿಂದ ನೆಲಕ್ಕೆ ಇಳಿಸುವುದಕ್ಕೆ ಅಭ್ಯಾಸ ಬೇಕು, ಬಿದ್ದು ಪೆಟ್ಟಾದ ಮಾವಿನ ಮಿಡಿ ಉಪ್ಪಿನಕಾಯಿ ಬಾಳಿಕೆ ಬರದು. ಹೀಗೆ ಇಳಿಸಿದ ಮಿಡಿಯನ್ನು ಬಂದವರಿಗೆ ಹಂಚಿ, ಉಳಿದದ್ದನ್ನು ಮನೆಯ ಮಹಿಳೆಯರ ನೇತೃತ್ವದಲ್ಲಿ ಪ್ರತ್ಯೇಕಿಸಿ ಶುಚಿಗೊಳಿಸಿ,ಮಿಡಿಗೆ ಚಿಕ್ಕ ತೊಟ್ಟಷ್ಟೇ ಇರಿಸಿ ಉಪ್ಪಿಗೆ ಹಾಕುವುದು ಮತ್ತಿತರ ಅಟ್ಟಣೆ ನಡೆಯುತ್ತಿತ್ತು. ಅಲ್ಲೆಲ್ಲಾ ಮಕ್ಕಳು ಹೋಗುವಂತಿರಲಿಲ್ಲ, ನೀರು ಹಾರಿಸಿ, ಹಾಳು ಮಾಡಿ ಬಿಡ್ತೀರಾ ಎಂದು ಅಜ್ಜಿ ಗದರಿಸಿ ಓಡಿಸುತ್ತಿದ್ದರು!
ಪಿಯುಸಿ ಮತ್ತು ಪದವಿಯಲ್ಲಿರುವಾಗ ೫ ವರುಷ ಹಾಸ್ಟೆಲ್ಲಿನ ವಾಸವಿತ್ತು. ಅಲ್ಲೂ ಮನೆಯ ನೆನಪನ್ನು ಬೆಚ್ಚಗಿರುಸಿತ್ತಿದ್ದುದು ಇದೇ ಮಾವಿನ ಉಪ್ಪಿನಕಾಯಿಯೇ. ಅಪರೂಪಕ್ಕಷ್ಟೇ ಮನೆಗೆ ಹೋಗಲು ಬಿಡುತ್ತಿದ್ದರು ಹಾಸ್ಟೆಲ್‌ ವಾರ್ಡನ್‌. ಹಾಗೆ ಬಂದು ಹೋಗುವಾಗ ಬ್ಯಾಗಿನೊಂದಿಗೆ ಅಮ್ಮ ಮರೆಯದೆ ಉಪ್ಪಿನಕಾಯಿ ಇರಿಸಲು ಮರೆಯುತ್ತಿರಲಿಲ್ಲ.
ನೋಡಿ...ಮಾವು ಎಂದರೆ ಸಾಕು ಅದೆಷ್ಟು ನೆನಪುಗಳು ಬಿಚ್ಚಿಕೊಳ್ಳುತ್ತವೆ..
ಕಳೆದ ಎರಡು ವರುಷ ಊರಿನ ಮರದಲ್ಲಿ ಸರಿಯಾಗಿ ಮಾವೇ ಆಗಿರಲಿಲ್ಲ, ಒಂದು ವರ್ಷ ಆಗಿತ್ತಾದರೂ ಅದು ಕುಯಿಸುವ ದಿನ ನನಗೆ ಹೋಗುವುದಕ್ಕಾಗಿರಲಿಲ್ಲ...
ಹಾಗಾಗಿ ಏನೋ ಹಿಂದೆ ರಿಪ್ಪನ್‌ ಪೇಟೆಯಿಂದ ತಂದ ಅಪ್ಪೆ ಮಿಡಿಯ ಉಪ್ಪಿನಕಾಯಿ ಒಂದಷ್ಟು ಕಾಲ, ನಂತರ ನಿಂಬೆ ಮತ್ತಿತರ ಉಪ್ಪಿನಕಾಯನ್ನೇ ನೆಚ್ಚಿಕೊಂಡಿದ್ದಾಯ್ತು. ಮಿಡಿ ಹಾಕುವ ಭರಣಿಗಳೆಲ್ಲಾ ಖಾಲಿ ಖಾಲಿ...
ಈ ಬಾರಿಯಾದರೂ ಮಾವಿನಕಾಯಿ ಬೇಕೇ ಬೇಕು...

17.2.11

ಹಳೆ ಟ್ರಂಕು



ಕತ್ತಲ ಕೂಪದಲ್ಲಿ
ಹುದುಗಿದ್ದ ನನ್ನ
ಟ್ರಂಕಿನ
ಮುಚ್ಚಳ ತೆಗೆದಿರಿಸಿದೆ

ವಾಹ್!
ಅಪರೂಪದ ಘಮಲು
ಪುಸ್ತಕಗಳ ಕಾಗದ
ಕುಂಬಾಗುತ್ತಿದ್ದ ಘಾಟು

ತಲೆಎಣ್ಣೆ ಚೆಲ್ಲಿದ..
ಅಮ್ಮ ಊರಿನಿಂದ
ಕಳುಹಿಸಿದ್ದ ಚಕ್ಕುಲಿ
ತುಂಬಿರಿಸಿದ್ದ
ನೆನಪಿನ ಅಮಲು

ಯಾರಿಗೂ ಗೊತ್ತಾಗದೆ
ಮಾಡಿದ್ದ ತಪ್ಪುಗಳು
ಧಿಗ್ಗನೇ ಪೆಟ್ಟಿಗೆ ಅಡಿಯಿಂದ
ಎದ್ದು ಮೆರವಣಿಗೆ
ನಡೆಸಿದವು

ಸ್ಪ್ರಿಂಗಿನಲ್ಲಿ ಒತ್ತಿರಿಸಿದ ಹತ್ತಿ
ಬಿಟ್ಟಾಕ್ಷಣ 
ಬಿಚ್ಚಿಕೊಳ್ಳುವಂತೆ
ಕೋಣೆ ತುಂಬಾ
ಹಳೆಯ ನೆನಪುಗಳ
ಚಿತ್ತಾರ.
ಮನದ ನೆಲದಗಲ
ಹರವಿಟ್ಟುಕೊಂಡ
ಮುತ್ತುಗಳು.
ಅವಚಿಕೊಳ್ಳಲಾಗದಷ್ಟು!

2.1.11

ಭತ್ತ ಬೆಳೆಯುವ ಬನ್ನಿ....

ವರುಷಗಳು ಉರುಳಿದಂತೆಯೇ ನಮ್ಮ ದೇಶದ ಮಹಾತ್ವಾಕಾಂಕ್ಷೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಪ್ರಪಂಚದ ಅತೀ ಮುಂದುವರಿದ ರಾಷ್ಟ್ರವಾಗಬೇಕು, ಪ್ರಗತಿಗೆ ಪ್ರತಿಯೊಬ್ಬರೂ ಪಾಲುದಾರರಾಗಬೇಕು ಎಂದು ನಮ್ಮ ಹೆಚ್ಚಿನ ನಾಯಕರೂ ಆಗಾಗ ‘ಕರೆ’ ಕೊಡುತ್ತಿರುತ್ತಾರೆ.
ಈ ಪ್ರಗತಿಯ ಚಕ್ರದಡಿಗೆ ಸಿಲುಕಿ ನರಳುತ್ತಿರುವುದು ಮಾತ್ರ ಕೃಷಿಕರು. ಕೃಷಿಕರಿಗೆ ಸೌಲಭ್ಯ ನೀಡುವ ನೆಪದಲ್ಲಿ ಸರ್ಕಾರಗಳು ಅವರನ್ನು ಸಾಲಗಾರರಾಗಿ ಮಾಡಿವೆ ಹೊರತು ಸ್ವಾವಲಂಬಿಗಳಾಗಲು, ದೂರಗಾಮಿ ದೃಷ್ಟಿಯಿರುವ ಅನ್ನದಾತರಾಗಿ ಮಾಡುವತ್ತ ದೃಷ್ಟಿಹರಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಇದಕ್ಕೊಂದು ತಾಜಾ ನಿದರ್ಶನ. ಇಲ್ಲಿನ ಕೃಷಿಭೂಮಿಯೆಲ್ಲ ಎಂಆರ್‌ಪಿಎಲ್, ನಾಗಾರ್ಜುನ, ವಿಶೇಷ ಆರ್ಥಿಕ ವಲಯ ಪಾಲಾಗುತ್ತಿದೆ, ಭತ್ತ ಬೆಳೆಯುತ್ತಿರುವ ಗದ್ದೆಗಳಲ್ಲಿ ದಢೀರ್‌ ಮಣ್ಣು ತುಂಬಿ ಕಟ್ಟಡ ಏಳುತ್ತಿದೆ, ಎಲ್ಲರೂ ಹಣದ ಹಿಂದೆ ಬಿದ್ದರೆ ನಾಳೆ ಅನ್ನ ಸಿಗುವುದೆಲ್ಲಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕೀತೇ?
ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸಿದವರು ಇಲ್ಲಿನ ಕುಪ್ಪೆಪದವಿನ ಕೃಷಿಕ ನೀಲಯ್ಯ ಅಗರಿಯವರು. ಇವರು ತಮ್ಮ ಮಿತ್ರರೊಂದಿಗೆ ಸೇರಿಕೊಂಡು ಭತ್ತದ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯೊಂದನ್ನು ಏರ್ಪಡಿಸಿದರು.
ಇದಕ್ಕೆ ಯಾರನ್ನೋ ಕರೆಯಲಿಲ್ಲ ನೆರೆಹೊರೆಯ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಕರೆದರು. ಬಂದವರಿಗೆ ತುಳುನಾಡಿನ ಬೇಸಾಯ ಆಧರಿತ ಜೀವನಕ್ರಮದ ಬಗ್ಗೆ ಜನಪದ ತಜ್ಞ ಡಾ.ಗಣೇಶ್ ಅಮೀನ್ ಸಂಕಮಾರ್‌ ಮನಮುಟ್ಟುವಂತೆ ಮಾತನಾಡಿದರು.






ಅಗರಿಯ ಬಾಕಿಮಾರು ಗದ್ದೆಯಲ್ಲಿ ಕೋಣ, ಎತ್ತು ಜೋಡಿಗಳು, ಉಳುವವರು ಸಿದ್ಧರಾಗಿದ್ದರೆ, ಬೇಸಾಯ ಮಾಡುವ ಮಹಿಳೆಯರೂ ವೀಳ್ಯ ಏರಿಸಿಕೊಂಡು ಕುಳಿತಿದ್ದರು.
ಕೊನೆಗೆ ಭತ್ತದ ನಾಟಿ ಮಾಡುವ ವಿಧಾನದ ಪ್ರಾತ್ಯಕ್ಷಿಕೆ. ಇಲ್ಲಿ ತಜ್ಷರೆಂದರೆ ಇದೇ ಬೇಸಾಯದ ಮಹಿಳೆಯರು. ಶ್ರೀ(systematic rice intensification) ವಿಧಾನದಲ್ಲಿ ಮಡಿ ಮಾಡಲಾದ ಜಯ ಭತ್ತದ ಸಸಿಗಳನ್ನು ಮಹಿಳೆಯರು ನೆಡುವುದಕ್ಕೆ ಆರಂಭಿಸಿದರೆ, ನಂತರ ಅವರನ್ನು ನೋಡಿದ ವಿದ್ಯಾರ್ಥಿಗಳೂ ಮಹಿಳೆಯರ ‘ಓಬೇಲೆ’ ಹಾಡಿಗೆ ದನಿಗೂಡಿಸುತ್ತಾ ಸಸಿ ನೆಡತೊಡಗಿದರು...
ಈ ವಿದ್ಯಾರ್ಥಿಗಳಲ್ಲಿ ಕನಿಷ್ಠ ನಾಲ್ಕು ಮಂದಿಯಾದರೂ ಒಳ್ಳೆಯ ಕೃಷಿಕರಾದರೆ ಅಗರಿಯವರ ಪ್ರಯತ್ನಕ್ಕೆ ಸಾರ್ಥಕತೆ ಬಂದೀತು. ಒಟ್ಟಾರೆಯಾಗಿ ಹೊಸ ಕ್ಯಾಲೆಂಡರ್‌ ವರುಷದ ಮೊದಲ ದಿನವೇ ಇಂತಹ ಸ್ಫೂರ್ತಿ ತರುವ ಕಾರ್ಯಕ್ರಮ ಆಯೋಜಿಸಲು ಮುಂದಾದವರಿಗೆ ವಂದನೆ, ಇಂತಹ ಆಲೋಚನೆಗಳು ತಡವಾಗಿಯಾದರೂ ಶುರುವಾಗಿರುವುದು ಶುಭಸೂಚಕ!

Related Posts Plugin for WordPress, Blogger...