11.10.16

ಚಾರ್ಮಾಡಿ, ಕಳಸ, ಕುದುರೆಮುಖ ಸೈಕಲ್ ಪ್ರವಾಸಕ್ಕೊಂದು ದಾರುಣ ಕೊನೆ

ಒಂದೂವರೆ ಸಾವಿರ ಮೀಟರ್ ಎತ್ತರವನ್ನು ಸತತ ಸೈಕ್ಲಿಂಗ್ ನಲ್ಲಿ ಕ್ರಮಿಸುವುದು..ಜಠರಾಗ್ನಿಯನ್ನು ತಣಿಸಿದ ಬಳಿಕ ಮಲೆನಾಡಿನ ಎಸ್ಟೇಟಿನ ತಿರುವು ದಾರಿಗಳಲ್ಲಿ ಹಸಿರು ಕಣ್ತುಂಬಿಕೊಳ್ಳುತ್ತಾ, ಸಿಗುವ ತಾಜಾ ಕಾಫಿಯಂಗಡಿಗಳಲ್ಲಿ ಮಲೆನಾಡಿನ ಕಾಫಿ ಗುಟುಕರಿಸುವುದು...ಇಂತಹ ಅನುಭವ ಯಾರಿಗುಂಟು ಯಾರಿಗಿಲ್ಲ...
ಇಂಥದ್ದೊಂದು ದೀರ್ಘ ಸೈಕಲ್ ಸವಾರಿ ಹಾಕಲೇಬೇಕೆಂಬುದು ಮಿತ್ರ, ಎಂಸಿಎಫ್ ಉದ್ಯೋಗಿ ಚಿನ್ಮಯ ದೇಲಂಪಾಡಿ ಹಾಗೂ ನನ್ನ ದೀರ್ಘಕಾಲೀನ ಆಲೋಚನೆಯಾಗಿತ್ತು. ಇದರಲ್ಲಿ ಸೇರಿಕೊಳ್ಳಬೇಕು ಎಂಬ ನಮ್ಮ ಆಮಂತ್ರಣಕ್ಕೆ ಒಪ್ಪಿಸೇರಿಕೊಂಡವರು ಗುರುವಾಯನಕೆರೆಯ ಗೆಳೆಯ, ಮಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಗೌರವ್ ಪ್ರಭು.
ಸೈಕ್ಲಿಂಗ್ ಪಟುಗಳ ಹುಚ್ಚಿಗೆ ಕಿಚ್ಚು ಹಚ್ಚುವ ಎಲ್ಲ ವಾಹನ ಚಾಲಕರಿಗೂ ತಲೆನೋವೇ ಆಗಿರುವ ಆದರೆ ಪ್ರಕೃತಿ ಪ್ರಿಯರಿಗೆ 365 ದಿನವೂ ನಿಸರ್ಗದ ಚೆಲುವಿನ ದರುಶನ ನೀಡುವ ಚಾರ್ಮಾಡಿ ಘಾಟ್ ಏರುವುದು, ಆ ಬಳಿಕ ಸಿಗುವ ಕೊಟ್ಟಿಗೆಹಾರದಿಂದ ಎಡಕ್ಕೆ ತಿರುಗಿ ಕಳಸ ಸೇರುವುದು ಮೊದಲ ದಿನದ ಯೋಜನೆ. 
ಮರುದಿನ ಕಳಸದಿಂದ ಏರಿಳಿತದ ಹಾದಿಯಲ್ಲಿ ಕುದುರೆಮುಖ ಸೇರಿ, ನಂತರ ಕಾರ್ಕಳ, ಪಡುಬಿದಿರೆಯಾಗಿ ಊರು ಸೇರುವುದು ಎರಡನೇ ದಿನದ ನಮ್ಮ ವೇಳಾಪಟ್ಟಿ.


ದಿನ 1: ಮಂಗಳೂರಿನಿಂದ ಕಳಸದತ್ತ
ನಾನು ಸುರತ್ಕಲಿನಿಂದಲೇ ಮುಂಜಾನೆ ಹೊರಟರೆ ಚಿನ್ಮಯ ಮಂಗಳೂರಿನಲ್ಲಿ ಜತೆಯಾದರು. ಬಿ.ಸಿ.ರೋಡಿನಲ್ಲಿ ಲಘು ಉಪಹಾರ ಸೇವಿಸಿ ಮುಂದುವರಿದೆವು. ಗುರುವಾಯನಕೆರೆ ಜಂಕ್ಷನಿನಲ್ಲಿ ಗೌರವ್ ಕೂಡಾ ಸೇರಿಕೊಂಡು ತ್ರಿಮೂರ್ತಿಗಳಾಗಿ ಮುಂದುವರಿದೆವು. ಉಜಿರೆಯ ಜನಾರ್ಧನ ಸ್ವಾಮಿ ದೇಗುಲದ ಮುಂಭಾಗದ ಹಳೆಯ ಹೊಟೇಲಿನಲ್ಲಿ ಬೆಳಗ್ಗಿನ ಉಪಹಾರ ತಿನ್ನುವಾಗಲೇ ಗೌರವ್ ಅವರ ಮಿತ್ರ ಆಗಮಿಸಿದರು. ಅವರೂ ನಮ್ಮ ಪ್ರವಾಸಕ್ಕೆ ಸೇರಬೇಕಾದರೂ ತಮ್ಮ ಕೌಟುಂಬಿಕ ಅನಿವಾರ್ಯತೆಯಿಂದ ನಮ್ಮನ್ನು ಬೀಳ್ಕೊಟ್ಟರು.
ಉಜಿರೆಯಿಂದ ಯಾವುದೇ ಅರ್ಜೆಂಟಿಲ್ಲದೆ ಸುತ್ತಮುತ್ತಲಿನ ವಿಚಾರಗಳನ್ನು ಗಮನಿಸುತ್ತಾ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಾ ಮುಂದುವರಿದೆವು. ಪ್ರೊಫೆಷನಲ್ ಸೈಕ್ಲಿಸ್ಟ್ ಗಳಂತೆ "ಸರಾಸರಿ ವೇಗ, ಗರಿಷ್ಠ ವೇಗ"ಗಳಿಗಷ್ಟೇ ಸೀಮಿತಗೊಳ್ಳುವುದು ಇಷ್ಟವಿರಲಿಲ್ಲ. ಹಾಗಾಗಿ ನಿಲ್ಲಬೇಕಾದಲ್ಲಿ ನಿಂತು ಸಾಗುತ್ತಿದ್ದೆವು. ನನ್ನ ಹಿಂದಿನ ಚಾರ್ಮಾಡಿ ಸೈಕಲ್ ಪ್ರವಾಸದಲ್ಲಿ ಕಾಲಿನ ಮಾಂಸಪೇಶಿ ಸೆಳೆತ ಉಂಟಾಗಿ ಇಡೀ ಪ್ರವಾಸ ನೋವುದಾಯಕವಾಗಿದ್ದ ನೆನಪು ಬೆನ್ನಿಗಿತ್ತು. ಈ ಬಾರಿ ಅಂತಹ ಯಾವುದೇ ದೈಹಿಕ ಸಮಸ್ಯೆ ಇರಲಿಲ್ಲ 
ಆದರೆ....
ನನ್ನ ಸೈಕಲ್ಲಿನ ಹಿಂದಿನ ಡಿರೇಲ್ಯೂರ್(ಎಂದರೆ ಚೈನನ್ನು ಬೇರೆ ಬೇರೆ ಗಿಯರು ಚಕ್ರಗಳಿಗೆ ದಾಟಿಸುವ ಸಲಕರಣೆ) ದೊಡ್ಡ ಎರಡು ಗಿಯರುಗಳಿಗೆ ಕೂರುತ್ತಲೇ ಇರಲಿಲ್ಲ ಗಿಯರು ಸೈಕಲ್ ತಾಂತ್ರಿಕವಾಗಿ ಮಾಹಿತಿ ಇದ್ದವರಿಗೆ ಇದು ಅರ್ಥವಾಗಬಹುದು. ಏರುದಾರಿಗಳನ್ನು ಸಲೀಸಾಗಿ ಏರಬೇಕಾದರೆ ಈ ಗಿಯರುಗಳು ಅತ್ಯಗತ್ಯ. ಮುಂಭಾಗದ ಕ್ರ್ಯಾಂಕಿನಲ್ಲಿರುವ ಮೂರು ಗಿಯರುಗಳಲ್ಲಿ ಚಿಕ್ಕದಕ್ಕೆ ಗಿಯರ್ ಶಿಫ್ಟ್ ಮಾಡಿ, ಹಿಂಬದಿಯ ಏಳೋ, ಎಂಟೋ ಗಿಯರ್ ಸೆಟ್ ಗಳಲ್ಲಿ ದೊಡ್ಡ ಚಕ್ರಗಳಿಗೆ ಶಿಫ್ಟ್ ಮಾಡಿಕೊಂಡು ಏರುದಾರಿಯೇರುವುದು ಸಾಮಾನ್ಯ. ನನ್ನ ಎರಡು ದೊಡ್ಡ ಚಕ್ರಗಳೂ ಇಲ್ಲಿ ಉಪಯೋಗಶೂನ್ಯವಾಗಿದ್ದವು. ಇದು ಸಹಜವಾಗಿ ಅಳುಕುಂಟು ಮಾಡಿತ್ತು. ಎಂದರೆ ಕಾಲಿನ ಹೆಚ್ಚಿನ ಬಲ, ಶ್ರಮ ತುಳಿಯಲು ಹಾಕಬೇಕಾಗುತ್ತದೆ.
ದಾರಿಯಲ್ಲೊಂದು ಗ್ಯಾರೇಜಿನಲ್ಲಿ ಡಿರೇಲ್ಯೂರ್ ಸೆಟ್ಟಿಂಗ್ ಬದಲಾಯಿಸುವುದಕ್ಕೆ ಗೌರವ್ ಪ್ರಭೂ ಶ್ರಮಿಸಿದರಾದರೂ ಯಾವುದೇ ಫಲ ಸಿಗಲಿಲ್ಲ. ಕೊನೆಯಲ್ಲಿ ಆದದ್ದಾಗಲಿ ಎಂದು ಮುಂದುವರಿದೆವು. 

ಚಾರ್ಮಾಡಿಯ ಏರುದಾರಿ

ಚಾರ್ಮಾಡಿಯಲ್ಲೊಂದು ತಣ್ಣನೆಯ ಜಲಧಾರೆ
ಶರೀರಕ್ಕೆ ಹೆಚ್ಚು ಶ್ರಮಕೊಡದೆ ಸುಲಭ ಗಿಯರುಗಳಲ್ಲೇ ಮೇಲೇರುತ್ತಾ ಹೋದೆವು. ತೀರಾ ಚಡಾವು ಇದ್ದಲ್ಲಿ ನಿಧಾನವಾಗಿ ಸಾಗಿದ ಕಾರಣ ಹೆಚ್ಚು ತೊಂದರೆಯೇನೂ ಆಗಲಿಲ್ಲ. ಚಾರ್ಮಾಡಿ ಘಾಟಿ ಏರುವಾಗ ತಿರುವುಗಳಲ್ಲಿ ಲಾರಿಗಳು ಎಸೆದ ಕೊಳೆತ ಕೋಳಿ ತ್ಯಾಜ್ಯದ ದುರ್ವಾಸನೆ ಸಹಿಸಲಸಾಧ್ಯ. ಘಾಟ್ ಮುಗಿಯುತ್ತಾ ಬಂದಾಗ ಎರಡೂ ಬದಿಯ ಸೌಂದರ್ಯಲೋಕ ತೆರೆದುಕೊಂಡಿತು. ಎಡಬದಿ ಗೋಡೆಯಂತಹ ಗುಡ್ಡಗಳಿಂದ ಹರಿದು ಬರುವ ನೀರು ಮನದಣಿಯ ಮುಖಕ್ಕೆ ಎರಚಿಕೊಂಡು, ಖಾಲಿಯಾಗುತ್ತಿದ್ದ ಬಾಟಲಿ ಹಾಗೂ ನಮ್ಮ ಹೊಟ್ಟೆಗೂ ರಿಚಾರ್ಜ್ ಮಾಡಿಕೊಂಡೆವು. 9.30ಕ್ಕೆ ಉಜಿರೆ ಬಿಟ್ಟ ನಾವು 2 ಗಂಟೆಗೆ ಕೊಟ್ಟಿಗೆಹಾರ ಸೇರಿದ್ದವು.
ಕೊಟ್ಟಿಗೆಹಾರದಲ್ಲಿ ಊಟ, ನೀರ್ದೋಸೆ, ಬಾಳೆ ಹಣ್ಣು ಇತ್ಯಾದಿ ಹೊಟ್ಟೆಗಿಳಿಸಿ, ಎಡದ ರಸ್ತೆಗೆ ಹೊರಳಿದೆವು. ಅಲ್ಲಿಂದ ಎಸ್ಟೇಟುಗಳು, ಗದ್ದೆಗಳ ವಿಹಂಗಮ ದೃಶ್ಯ. ಹೆಚ್ಚೇನು ಏರುಗಳಿಲ್ಲದ ಹಾಗೆಂದು ಸುಲಭವೂ ಅಲ್ಲದ ಹಾದಿ. ಆದರೆ ಅಚ್ಚರಿಯೆಂದರೆ ರಸ್ತೆಗಳೆಲ್ಲ ಸಪಾಟು, ಹೊಂಡಗುಂಡಿಗಳೇನೂ ಇರಲಿಲ್ಲ.

ಚಾರ್ಮಾಡಿಯನ್ನೇರಿದ ಸಹಜ ಬಳಲಿಕೆ, ಮಧ್ಯೆ ಕೊಟ್ಟಿಗೆಹಾರದಲ್ಲಿ ಹೊಟ್ಟೆಗೆ ಸಾಂಗವಾಗಿ ಆಹಾರ ನೀಡಿದ್ದು ಇದರಿಂದ ಸೈಕಲ್ ಸವಾರಿ ಮಾಡುತ್ತಿರುವಾಗಲೇ ನಮಗೆ ಕಣ್ಣೆಳೆಯತೊಡಗಿತ್ತು. ಬಾಳೂರು ಕ್ರಾಸ್ ಸಿಗುವುದಕ್ಕೂ ಮೊದಲೇ ಬದಿಯಲ್ಲೊಂದು ಹಳೆಯ ಬಸ್ ನಿಲ್ದಾಣ ಮೈತುಂಬ ನಿರ್ಮಲ ಭಾರತ ಅಭಿಯಾನ ಸಂದೇಶ ಹೊದ್ದು ಮಧ್ಯಾಹ್ನದ ಸುಡುಬಿಸಿಲಿಗೆ ತೆಪ್ಪಗೆ ಕುಳಿತಿತ್ತು. ನಾವೂ ಸೈಕಲ್ ಪಕ್ಕಕ್ಕಿರಿಸಿ ತುಸು ಹೊತ್ತು ವಿಶ್ರಮಿಸಿಕೊಂಡೆವು. ಮಲಗಿದರೆ ನಿದ್ದೆ ಆವರಿಸಿಕೊಳ್ಳುವ ಭೀತಿಯಿಂದೆದ್ದು ಮುಂದುವರಿದೆವು.
ಮಧ್ಯಾಹ್ನ ವಿಶ್ರಾಂತಿಗೆ ಇನ್ನೇನು ಬೇಕು

ಬಾಳೂರು ಕ್ರಾಸ್ ನಲ್ಲಿ ಎಡಕ್ಕೆ ಹೊರಳಿ ಕಳಸ ದಾರಿಯಾಗಿ ಹೋದರೆ ಮಧ್ಯಾಹ್ನದ ಬಿಸಿಲಿನಿಂದ ಮುಕ್ತಿ. ಎರಡೂ ಬದಿಯಲ್ಲೂ ಎತ್ತರೆತ್ತರ ಮರಗಳ ಮಧ್ಯೆ ಕಾಫಿ ಬೆಳೆದಿದ್ದಾರೆ. ಹಾಗಾಗಿ ಆಯಾಸವೆಲ್ಲ ಮರೆತು ಹೋಯಿತು. ತುಸುದೂರದಲ್ಲೇ ಹೇಮಾವತಿ ನದಿಯ ಉಗಮಸ್ಥಾನಕ್ಕೆ ಹೋಗುವ ದಾರಿ ಕಂಡಿತಾದರೂ ದಾರಿ ಹೇಗಿದೆ ಎಂಬ ಸಂಶಯದಿಂದ ಆ ಕಡೆ ಹೊರಳಲಿಲ್ಲ.
ಕೆಳಗೂರು ಸಮೀಪ ದಾರಿಯ ಎಡಬದಿ ನೋಡಿದರೆ ವಿಶಾಲ ಕಣಿವೆ, ಅದರ ತುಂಬ ಅಂತರಗಳಲ್ಲಿ ಬೆಳೆದ ಪಚ್ಚೆಪೈರು! ಮಂಗಳೂರು ಭಾಗದಲ್ಲಿ ಎಲ್ಲಿ ಹೋದರೂ ಈ ರೀತಿಯ ದೃಶ್ಯ ನೋಡಲು ಸಿಗದು. ಇನ್ನೊಂದಷ್ಟು ಮುಂದೆ ಬಂದರೆ ಗುಡ್ಡಕ್ಕೆ ಗುಡ್ಡವೇ ಚಹಾತೋಟ ಮಯ. ಈ ಭಾಗದಲ್ಲಿರುವ ಬಹುತೇಕ ಗುಡ್ಡಗಳೆಲ್ಲಲ್ಲ ಎಸ್ಟೇಟುಗಳು ರಿಸಾರ್ಟ್ ಗಳೂ ತಲೆಯೆತ್ತಿವೆ.


ಮುಂದಿನ ದಾರಿ ಬಹುತೇಕ ಇಳಿಜಾರು. ರಸ್ತೆಯೂ ಚೆನ್ನಾಗಿತ್ತು. ಕೆಳಗೂರಿನ ಒಂದೆರಡು ಕಿ.ಮೀ ಮಾತ್ರ ಕೆಟ್ಟಿತ್ತು. ಹಾಗಾಗಿ ಯಾವುದೇ ಸಮಸ್ಯೆಯಾಗದೆ ಸಾಯಂಕಾಲ 6.30ರ ವೇಳೆಗೆ ಕಳಸ ಪೇಟೆ ತಲಪಿದೆವು. ಕಳಸೇಶ್ವರನಿಗೆ ದೇವಳದ ಮುಂದಿನಿಂದ ಮನದಲ್ಲೇ ನಮಸ್ಕರಿಸಿ, ಮೊದಲು ತೋಟದೂರು ಯಾತ್ರಿ ನಿವಾಸ(ಪೂರ್ವದಲ್ಲೇ ನೋಂದಾಯಿತ) ಸೇರಿಕೊಂಡೆವು. ಸ್ನಾನಾದಿ ಮುಗಿಸಿ, ಮೊದಲು ಮೀನಾಕ್ಷಿ ಭವನದ ಭಟ್ಟರಲ್ಲಿ(ಇವರು ಮೂಲತಃ ಶಿರ್ತಾಡಿಯವರು, ಕಳಸದಲ್ಲಿ ನೆಲೆಯಾಗಿ 3 ದಶಕವೇ ಕಳೆದಿದೆ) ಊಟ ಮುಗಿಸಿ ಬಂದು ಮಲಗಿಕೊಂಡರೆ ಬಡಿದು ಹಾಕಿದಂತಹ ನಿದ್ದೆ!.

ದಿನ -2 ಕಳಸದಿಂದ ಕುದುರೆಮುಖ, ಊರಿನತ್ತ ಮುಖ

ಮುಂಜಾನೆಯ ಸವಾರಿಗೆ ಸೂರ್ಯನ ಇಣುಕು
ಕಳಸದ ತಣುಪು ವಾತಾವರಣದಲ್ಲಿ ರಾತ್ರಿ ಹಾಯಾದ ನಿದ್ದೆ ಮುಗಿಸಿ, ಅಲಾರಾಂಗೆ ದಡಬಡಾಯಿಸಿ ಎದ್ದು ಮುಖಮಾರ್ಜನ ನೆರವೇರಿಸಿಕೊಂಡು ಥಟ್ಟಂತ ಹೊರಟುಬಿಟ್ಟೆವು. ಕಳಸದ ಚಾದಂಗಡಿಯಲ್ಲೊಂದು ಚಹಾ ಏರಿಸಿಕೊಂಡು ಹೊರಟು ಪೇಟೆಯ ಹೊರಗೆ ತಲಪುವಷ್ಟರಲ್ಲೆ ಎಡಬದಿಯಲ್ಲಿ ಸೂರ್ಯರಶ್ಮಿ ಸುವರ್ಣಬಣ್ಣದಲ್ಲಿ ಕೋರೈಸತೊಡಗಿತ್ತು. ತಟ್ಟು ತಟ್ಟಾದ ಗದ್ದೆಯ ಮೇಲ್ಭಾಗದಲ್ಲಿ ಹೊಳೆಯುವ ಸೂರ್ಯನ ಚಿತ್ರ ತೆಗೆಯಲು ಮರೆಯಲಿಲ್ಲ. 
ಕಳಸ ಪೇಟೆಯ ಹೊರಗೆ ಸಿಕ್ಕಿದ ದೃಶ್ಯ
ಮನಮುದಗೊಳಿಸುವ ಕೆಳಗೂರಿನ ಗದ್ದೆಗಳು

ಕಳಸದಿಂದ ಕುದುರೆಮುಖ ಸಾಗುವಾಗ ಮಧ್ಯೆ ಬಾಳ್ಗಲ್ ಎಂಬಲ್ಲಿ ಜೈನರ ಚಿಕ್ಕ ಹೊಟೇಲೊಂದರಲ್ಲಿ ನಮ್ಮ ಹಸಿದ ಹೊಟ್ಟೆಗೆ ಭರ್ಜರಿ ರುಚಿಯ ಇಡ್ಲಿ ಚಟ್ಟನಿ ಸಿಕ್ಕಿದ್ದು ಖುಷಿಯೆನಿಸಿದರೂ, ಒಂದೇ ಕಿಲೋಮೀಟರ್ ಗೆ ಅಷ್ಟೇ ಭರ್ಜರಿ ಹಿಮ್ಮುರಿ ತಿರುವು ಸಹಿತ ಏರು ದಾರಿ ಕಂಗೆಡಿಸಿಬಿಟ್ಟಿತು! ಅಲ್ಲಿವರೆಗಿನ 'ಕೂಲ್' ವಾತಾವರಣವೆಲ್ಲವೂ ನಮಗೆ ಬಿಸಿಯಾಯ್ತು. ಇಂತಹ ಒಂದಲ್ಲ ಮತ್ತೂ ಎರಡು ಚಡಾವುಗಳಲ್ಲಿ ಮೈ ಪೂರ್ತಿ ವಾರ್ಮ್ ಅಪ್ ಆಯ್ತು. ಏರಿದವನು ಇಳಿಯಲೇಬೇಕು ಎಂಬ ನಿಯಮದ ಹಾಗೆ ಮತ್ತೆ ಇಳಿದಾರಿ. ಕಳಸದಿಂದ ಸರಿಸುಮಾರು 20 ಕಿ.ಮೀ ದಾರಿಯನ್ನು ಅಂತೂ ಮೂರು ಗಂಟೆಯಲ್ಲಿ ಕ್ರಮಿಸಿದೆವು.
ದಾರಿಯಲ್ಲಿ ಜಾಮ್ಳೆ ಸರಕಾರಿ ಶಾಲೆಯ ಮಕ್ಕಳೊಂದಿಗೆ ಹಾಗೆ ಕುಶಲೋಪರಿ ಮಾತನಾಡಿ, ಅವರೊಂದಿಗೆ ಫೊಟೊ ಕ್ಲಿಕ್ಕಿಸಿಕೊಂಡೆವು. ಮಕ್ಕಳ ಸೈಕಲ್ ಕುರಿತ ಕುತೂಹಲಕಾರಿ ಪ್ರಶ್ನೆಗಳಿಗೆ ಸಾಕಷ್ಟು ಉತ್ತರಿಸಿದೆವು. ನಾವು ಓಡುತ್ತೇವೆ, ನಮ್ಮನ್ನು ಚೇಸ್ ಮಾಡಿ ಎಂದು ಮಕ್ಕಳು ನಮಗೇ ಸವಾಲೆಸೆಯಬೇಕೆ!
 ಕುದುರೆಮುಖದಿಂದ ಗಂಗಾಮೂಲದ ವರೆಗೂ ಮತ್ತೆ ಏರುದಾರಿಗಳೇ. ಆದರೆ ಆ ವೇಳೆಗಾಗಲೇ ನಮಗೆ ಸವಾರಿಯ ಲಯ ಸಿಕ್ಕಿದ್ದರಿಂದ ಕಷ್ಟವಾಗಲಿಲ್ಲ. ಬೆಳಗ್ಗಿನ ಕುದುರೆಮುಖ ಶ್ರೇಣಿ, ಕಾಡಿನ ಸೌಂದರ್ಯ ಸವಿಯುತ್ತಾ ಸಾಗಿಬಂದೆವು. ಗಂಗಾಮೂಲದ ಬಳಿ ನಿಂತು ತುಸು ದಣಿವಾರಿಸಿಕೊಳ್ಳುತ್ತಿದ್ದೆವು. 
ಮಾರ್ಗವೆಲ್ಲ ನಮದೇ :)

ಕುತೂಹಲಿ ಚಿಣ್ಣರೊಂದಿಗೆ
ಅದು ರಾಷ್ಟ್ರೀಯ ಉದ್ಯಾನವನ ಎನ್ನುವುದು ಎಲ್ಲರಿಗೂ ಗೊತ್ತು ಪ್ರಾಣಿಗಳು ರಸ್ತೆ ದಾಟುವುದು, ರಸ್ತೆಯಲ್ಲಿ ಕುಳಿತುರುವುದು ಕೂಡಾ ಹೊಸತಲ್ಲ. ಆದರೂ ನಮ್ಮ ಅನಾಗರಿಕ ಜನರಿಗೆ ಮಾತ್ರ ಈ ವ್ಯವಸ್ಥೆಗೆ ಗೌರವ ಕೊಡುವ ಬುದ್ಧಿಯೇ ಇಲ್ಲ. ಗಂಗಾಮೂಲದ ಇಳಿಜಾರು ರಸ್ತೆಯಲ್ಲಿ ವಾನರ ವೃಂದವೊಂದು ಕುಳಿತಿತ್ತು. ಹೋಗಿ ಬರುವ ಪ್ರವಾಸಿಗರು ಎಸೆಯುವ ಹಾಳುಮೂಳು ತಿಂಡಿಗೆ ಇವು ಒಗ್ಗಿಕೊಂಡಿವೆ. ಕುದುರೆಮುಖದಿಂದ ಬಂದ ಬಾಡಿಗೆಯ ಇನ್ನೋವಾ ವಾಹನದ ಚಾಲಕ ಬ್ರೇಕ್ ಇರುವುದನ್ನೂ ಮರೆತು ಮುಂದುವರಿದ. ವಾನರಗಳೆಲ್ಲ ದಿಕ್ಕಾಪಾಲಾಗಿ ಚದುರಿದರೂ ಒಂದು ಮಂಗ ಮಾತ್ರ ವಾಹನದಡಿಗೆ ಸಿಲುಕಿ ಒದ್ದಾಡಿತು, ಹಿಂದಿನ ಟೈರು ಅದರ ಹೊಟ್ಟೆಯ ಮೇಲೆಯೇ.....
ಅಲ್ಲಿಂದ ಜೀವ ಕೈಲಿ ಹಿಡಿದು ಚೀರುತ್ತಾ ಕಾಡಿನ ಗರ್ಭಕ್ಕೆ ಹೊರಟು ಹೋಯಿತು...ಈ ದೃಶ್ಯ ಮಾತ್ರ ನಮ್ಮೂವರನ್ನೂ ಕಲಕಿ ಬಿಟ್ಟಿತು. ಯಾವುದೇ ಬೇಸರವಿಲ್ಲದೆ ಇನ್ನೋವಾ ತೊಲಗಿತು. ಈ ಹೃದಯವಿದ್ರಾವಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ನಮಗೆ ಮರೆಯದ ಅನುಭವ.

9.8.16

ಆಗುಂಬೆಗೊಂದು ಸೈಕಲ್ ಸವಾರಿ

ಮುಂಗಾರು ಮಳೆ ಶುರುವಾದ ಬಳಿಕ ಸೈಕಲ್ ತೆಪ್ಪಗೆ ಬದಿಯಲ್ಲಿ ಮಲಗಿತ್ತು...ಹಾಗೇ ನಾನೂ....

ಕಳೆದ ಎರಡ್ಮೂರು ತಿಂಗಳಿಂದ ಭೋರಿಡುವ ಮಳೆಯಲ್ಲಿ ತೋಯುತ್ತಾ ಸೈಕಲ್ ಮಾಡುವ ಆಸೆಯಿದ್ದರೂ ವಿವಿಧ ಕಾರಣಗಳಿಂದ ಎಲ್ಲೂ ದೂರ ಹೋಗಲಾಗಿರಲಿಲ್ಲ. ಕಳೆದ ಬೇಸಿಗೆಯಲ್ಲೇ ಚಿನ್ಮಯ ದೇಲಂಪಾಡಿ ಮಾನ್ಸೂನ್ ಸವಾರಿ ಹೋಗಲೇಬೇಕು ಎಂದು ಹಕ್ಕೊತ್ತಾಯ ಮಾಡಿದ್ದೂ ಆಗಿತ್ತು..

ನಮ್ಮ ಯಾವತ್ತಿನ ಸೈಕಲ್ ಗುರು ಅಶೋಕವರ್ಧನರು ಕೌಟುಂಬಿಕ `ನಿರೀಕ್ಷಣಾ' ಕಾರಣಕ್ಕಾಗಿ ಈ ಬಾರಿ ನಾನಿಲ್ಲ, ನೀವು ಹೋಗಿಬನ್ನಿ ಎಂದು ಬಿಟ್ಟರು, ನಾನು ಬರುವೆ ಎಂದು ಮೊದಲು ಹೇಳಿದ್ದ ಅಭಿ ಭಟ್ ಕೂಡಾ ಕಾರ್ಯದೊತ್ತಡಕ್ಕೆ ಮಣಿದು ಸರಿಯಾಗಿ ಅಭ್ಯಾಸ ಮಾಡಲಾಗದೆ ಕೈಚೆಲ್ಲಿದ.

ಉಳಿದದ್ದು ಚಿನ್ಮಯ ಹಾಗೂ ನಾನು ಮಾತ್ರ. ಸೋಮೇಶ್ವರದಿಂದ ಎತ್ತರಕ್ಕೇರಿ ಆಗುಂಬೆ ತಲಪುವುದು ಎಂದರೆ ಸಮುದ್ರಮಟ್ಟದಿಂದ 11 ಕಿ.ಮೀ ಭಾಗವನ್ನು ಏರಲು ಸುಮಾರು 800 ಮೀಟರ್ ಔನ್ನತ್ಯ ಸಾಧಿಸಬೇಕು. ಈ ಮೊದಲು ಕುದುರೆಮುಖ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಇದಕ್ಕಿಂತ ಹೆಚ್ಚಿನ ಎತ್ತರವೇರಿದ ಅನುಭವ ಕಾಲುಗಳಿಗಿತ್ತಾದರೂ ಇತ್ತೀಚೆಗೆ ಎರಡು ತಿಂಗಳಿಂದ ಸ್ನಾಯುಗಳು ವಿಶ್ರಾಂತಿಯಲ್ಲಿದ್ದ ಭೀತಿ ಮಾತ್ರ ಇದ್ದೇ ಇತ್ತು. ಬೈಕಲ್ಲೋ ಕಾರಲ್ಲೋ ಆದರೆ ಪೆಟ್ರೋಲ್ ತುಂಬಿ ಗಿಯರು ಹಾಕಿ ಆಕ್ಸಿಲೇಟರ್ ಒತ್ತಿದರೆ ಬೇಕಾದಲ್ಲಿ ತಲಪುತ್ತದೆ. ಸೈಕಲ್ ನಲ್ಲಿ ಮಾತ್ರ ಹಾಗಲ್ಲ, ದೂರ ಸವಾರಿಗೆ ನಮ್ಮ ದೇಹ ಸಿದ್ಧವಿಲ್ಲವಾದರೆ ಸ್ನಾಯು ಸೆಳೆತವೋ, ವಿಪರೀತ ಆಯಾಸವೋ ಆಗಿ ಅರ್ಧಕ್ಕೇ ಪ್ರಯಾಣ ಕೈಬಿಡಬೇಕಾಗಿ ಬರುವುದುಂಟು.
ಅದೋ ಅಲ್ಲಿ ಆಗುಂಬೆ
ಒಂದೆರಡು ಬಾರಿ ಮನೆ ಹತ್ತಿರದಲ್ಲೇ ರೈಡ್ ಮಾಡಿ ಬಂದದ್ದಷ್ಟೇ ನನ್ನ ಈ ಬಾರಿಯ ತಯಾರಿ. ಚಿನ್ಮಯನೂ ಹೆಚ್ಚೇನೂ ತಯಾರಿ ಮಾಡಿರಲಿಲ್ಲ. ಸಮಯದ ಅಭಾವ ಇದ್ದಕಾರಣ ಮಣಿಪಾಲ ವರೆಗೆ ಸೈಕಲ್ಗಳನ್ನು ಕಾರಿನಲ್ಲೇರಿಸಿಕೊಂಡು ಹೋಗಿ ಶನಿವಾರ ರಾತ್ರಿ ಅಲ್ಲಿದ್ದು ಭಾನುವಾರ ಮುಂಜಾನೆ ಸೈಕಲ್ಲೇರುವುದು ನಮ್ಮ ಯೋಜನೆ. ಅದರಂತೆಯೇ ಭಾನುವಾರ ನಸುಕು ಹರಿಯುವ ವೇಳೆಗೆ ನಮ್ಮಿಬ್ಬರ ಸವಾರಿ ಮಣಿಪಾಲ ಬಿಟ್ಟಿತು. ಹದವಾದ ಮಳೆಯಿಂದ ಇಳೆ ತಂಪಾಗಿತ್ತು. ಖಾಲಿ ಹೊಟ್ಟೆಯಲ್ಲಿ ಸೈಕಲ್ ತುಳಿಯಬಾರದು, ಹಾಗಾಗಿ ಹೊಟೇಲೊಂದರಲ್ಲಿ ಹಗುರ ತಿಂಡಿ, ಚಹಾ ಸೇವಿಸಿ ಮುಂದುವರಿದೆವು.

ಅರಣ್ಯಭಂಗ
ಪೆರ್ಡೂರು ಭಾಗವಾಗಿ ಹೋಗುವಾಗ ಇಕ್ಕೆಲಗಳಲ್ಲು ತಂಪು ನೀಡುತ್ತಿದ್ದ ಮರಗಳೆಲ್ಲಾ ಧರಾಶಾಯಿಯಾಗಿ ಬಿದ್ದಿರುವುದು ಕಂಡುಬಂತು! ಕೆಲದಿನಗಳ ಹಿಂದೆ ಬಂದ ಭಾರೀ ಸುಂಟರಗಾಳಿಯ ಪ್ರಭಾವದಿಂದ ಈ ಗತಿ. ಅತೀವ ಬೇಸರ ತರುವ ದೃಶ್ಯವನ್ನು ನೋಡುತ್ತಾ ಮುಂದುವರಿದೆವು. ಕೆಲಹೊತ್ತಿನಲ್ಲೇ ಹೆಬ್ರಿ ತಲಪಿದೆವು. ಸೋಮೇಶ್ವರದಲ್ಲಿ ನಮ್ಮ ಉದರ ತುಂಬುವ ಯೋಜನೆ ಮೊದಲಿದ್ದರೂ, ಬಳಿಕ ಘಾಟಿಯೇರುವಾಗ ತೊಂದರೆ ಬೇಡವೆಂದು ಹೆಬ್ರಿಯಲ್ಲೇ ಸೇಮಿಗೆ, ನೀರುದೋಸೆ ತಿಂದು ಮುಂದುವರಿದೆವು. ಚೆನ್ನಾಗಿ ಸೈಕಲ್ ಹಾಗೂ ನಮ್ಮ ಕಾಲುಗಳ ಹೊಂದಾಣಿಕೆಯಾಗಿ ಮೈಬಿಸಿಯೇರಿದ್ದರಿಂದ ಸೋಮೇಶ್ವರದಲ್ಲಿ ಹೆಚ್ಚು ಸಮಯ ವ್ಯರ್ಥಗೊಳಿಸದೆ ನೇರವಾಗಿ ಮಿಶನ್ ಆಗುಂಬೆ ಶುರುವಿಟ್ಟೆವು.
ಪೆರ್ಡೂರು ಸಮೀಪ ಧರಾಶಾಯಿಯಾದ ಮರಗಳು

ಮೊದಲ ಚರಣದಲ್ಲಿ ಸುಂದರ ರಸ್ತೆ ನಮ್ಮ ನೆರವಿಗೆ ಬಂತು. ಏರು ದಾರಿಯಾದ್ದರಿಂದ ಸುಲಭ ಗಿಯರ್ ಹಾಕಿ ಪೆಡಲುತ್ತಾ ಸಾಗುತ್ತಿದ್ದರೆ ಫೋರ್ ವೀಲ್ ಡ್ರೈವಿನ ಎಸ್ ಯೂ ವಿ ವಾಲಾಗಳು ನಮ್ಮನ್ನು ಅನುಕಂಪದಿಂದಲೋ ಹೀಯಾಳಿಕೆಯಿಂದಲೂ ನೋಡುತ್ತಾ ಸಾಗುತ್ತಿದ್ದರು. ಬದಿಯಲ್ಲೊಂದು ಮಳೆಗಾಲದ ವಿಶೇಷ ಕಿರು ಜಲಧಾರೆ ಕಣ್ತುಂಬಿಕೊಳ್ಳುವುದಕ್ಕೆಂದು ನಿಲ್ಲಿಸಿ ಎರಡು ಫೊಟೊ ತೆಗೆದಾಗಿತ್ತು. ಅಷ್ಟೊತ್ತಿಗೆ ಮಳೆ ಜೋರು.ಉದ್ದೇಶದಂತೆಯೇ ಮಳೆಯಲ್ಲೇ ನೆನೆಯುತ್ತಾ ಒಂದೊಂದೇ ಹಿಮ್ಮುರಿ ತಿರುವುಗಳಲ್ಲಿ ಉಸ್ಸಪ್ಪಾ ಮಾಡುತ್ತಾ ಏರಿದೆವು. ಕುದುರೆಮುಖ ಏರಿನಲ್ಲಾದರೆ ನೇರವಾಗಿ ಏರುತ್ತಾ ಸಣ್ಣ ತಿರುವುಗಳಲ್ಲಿ ಸಾಗಬೇಕು, ಆದರೆ ಆಗುಂಬೆಯಲ್ಲಿ ಸೈಕ್ಲಿಸ್ಟ್ ಗಳಿಗೆ ಸವಾಲು ದೊಡ್ಡ ಹಿಮ್ಮುರಿ ತಿರುವುಗಳು.
ಹಿಮ್ಮುರಿ ತಿರುವೊಂದರಲ್ಲಿ

ಮಳೆಗಾಲದಲ್ಲಿ ಆಗುಂಬೆಯಲ್ಲಿ ಇಂತಹ ದೃಶ್ಯ ಸಾಮಾನ್ಯ

ಮಂಜಿನಲ್ಲಿ ಘಾಟಿಯೇರುವ ಮಜಾ

ಸೈಕಲ್ ತುಳಿಯುತ್ತಾ ಏರುದಾರಿಗೆ ಕಾಲುಗಳು ಹೊಂದಾಣಿಕೆ ಮಾಡಿಕೊಂಡವು ಎನ್ನುವಷ್ಟರಲ್ಲೇ ಸಿಗುವ ಹಿಮ್ಮುರಿ ತಿರುವು ಒಮ್ಮೆಗೇ ಬ್ರೇಕ್ ಹಾಕುತ್ತದೆ. ಮತ್ತೆ ಕಾಲುಗಳಿಗೆ ಒತ್ತಡ ಹೆಚ್ಚು. ಇದರಲ್ಲೇ ನಮ್ಮ ಲಯವನ್ನು ಕಾಯ್ದುಕೊಂಡು ಹೋಗುವುದು ಸೈಕಲ್ ಸವಾರನ ಚಾಕಚಕ್ಯತೆಯ ನಿಜ ಪರೀಕ್ಷೆ.
ಮೊದಲ ಮೂರ್ನಾಲ್ಕು ತಿರುವು ಕಳೆದ ಬಳಿಕ ಆಗುಂಬೆಯ ಹಳೆಯ ರಸ್ತೆಯೇ ಗತಿ! ಒಡಕಲು ಕಾಂಕ್ರೀಟ್ ರಸ್ತೆಯಲ್ಲಿ ಗಡ ಗಡ ಸವಾರಿ. ಮೇಲೇರುತ್ತಿದ್ದಂತೆಯೇ ಆಗುಂಬೆಯ ಮಂಜು ದರ್ಶನ. ಸೈಕಲ್ ಮುಂದೆ `ತಲೆದೀಪ' ಹಾಗೂ ಹಿಂದೆ `ಬಾಲದೀಪ' ಮಿನುಗಿಸುತ್ತಿದ್ದೆವು, ಇಲ್ಲವಾದರೆ ಮಂಜಿನ ನಡುವೆ ವೇಗವಾಗಿ ಬರುವ ವಾಹನಗಳಿಗೆ ನಾವು ಸುಲಭ ತುತ್ತು. ಆಗುಂಬೆಯ ಸೂ ರ್ಯಯಾಸ್ತ ಸವಿಯಲು ಕಟ್ಟಿಸಿರುವ ವೀಕ್ಷಣಾ ತಾಣ ಪೂರ್ತಿ ಮಂಜುಮಯ. ನಮ್ಮ ಆಗಮನ ಸಾಕ್ಷೀಕರಿಸಲು ಅಲ್ಲೊಂದು ಫೊಟೊ ಕ್ಲಿಕ್ಕಿಸಿ ಮುಂದುವರಿದೆವು.

ಅಲ್ಲೊಂದಿಷ್ಟ್ ಜನಾ...
ಜಿಲ್ಲಾ ಗಡಿಯಲ್ಲಿರುವ ತಪಾಸಣಾ ಠಾಣೆ ದಾಟಿ ಮುಂದುವರಿದಾಗ ಅರರೆ....ದೂರದಲ್ಲಿ ಬದಿಯಲ್ಲಿ ಕೆಂಪು ಬಿಳಿ ಪುಟ್ಟ ದೀಪಗಳು ಮಿನುಗುತ್ತಿವೆ...ನೋಡಿದರೆ ನಮ್ಮ ಹಾಗೆಯೇ ಮೂವರು ಸೈಕಲ್ ಸವಾರರು. ಹೋಗಿ ಮಾತನಾಡಿದಾಗ ಅವರು ಬೆಂಗಳೂರಿನವರೆಂದೂ, ಹೊರನಾಡಿಗೆ ಬಸ್ಸಲ್ಲಿ ಸೈಕಲ್ ತುಂಬಿಕೊಂಡು ಬಂದು, ಅಲ್ಲಿಂದ ಆಗುಂಬೆಗೆ ಬಂದವರೆಂದೂ ತಿಳಿಯಿತು. ಅರೆಕನ್ನಡದಲ್ಲಿ ಮಾತನಾಡಿದ ಅಖಿಲೇಶ್, ಅಜಯ್ ಹಾಗೂ ಶ್ರೀವಿಜಯರಿಗೆ ವಿದಾಯ ಹೇಳಿ ನಾವು ಮುಂದುವರಿದೆವು.
ಬೆಂಗಳೂರಿನ ಸೈಕಲ್ಲಿಗರೊಂದಿಗೆ ಆಗುಂಬೆಯಲ್ಲಿ
ಸೋಮೇಶ್ವರ ವ್ಯಾಪ್ತಿ ಮುಗಿದು ಔéಷಧವನ ದಾಟಿ ಮುಂದೆ ಹೋದಾಗ ಬಲಬದಿಯಲ್ಲಿ ಮಣ್ಣು ರಸ್ತೆಯೊಂದು ಹೋಗುತ್ತಿದ್ದುದು ಕಂಡಿತು ಒಳಗೆ ಸುಂದರ ಹುಲ್ಲುಗಾವಲು ಕಾಣಿಸಿತು, ಇರಲಿ ಹಿಂದೆ ಬರುವಾಗ ಪೊಟೊ ತೆಗೆದರಾಯ್ತು ಎಂದು ಮುಂದುವರಿದೆವು. ಅಂತೂ ಆಗುಂಬೆ ಬಂತು. ಹೊಟ್ಟೆ ತಾಳ ಹಾಗುತ್ತಿತ್ತು, ಹಾಗಾಗಿ ಮಯೂರ ಹೊಟೇಲಲ್ಲಿ ಉದರ ಪೋಷಣೆ ಮಾಡಿದೆವು. ಹೊರಗೆ ಸೋನೆಮಳೆ ಸುರಿಯುತ್ತಲೇ ಇತ್ತು. ಮತ್ತೆ ಆಗುಂಬೆಯಲ್ಲೇ ಒಂದು ರೌಂಡ್ ಹೊಡೆದು ಊರು ದರ್ಶನ ಮಾಡಿಕೊಂಡು ಮೊದಲೇ ನೋಡಿದ್ದ ಹುಲ್ಲುಗಾವಲಲ್ಲಿ ಫೊಟೋಶೂಟ್ ಮಾಡುವ ಎಂದು ಹೊರಟಾಗ ಮಳೆ ಜೋರಾಯಿತು.
ಆಗುಂಬೆ ದೃಶ್ಯಾವಳಿ - 1

ಆಗುಂಬೆ ದೃಶ್ಯಾವಳಿ - 2
 ಆಗುಂಬೆಯ ಸಾಂಪ್ರದಾಯಿಕ ಹಳೆಯ ಹೆಂಚಿನ ಮನೆಗಳು ಮಂಜು ಸುರಿಯುವಾಗ ಕಟ್ಟಿಕೊಡುವ ದೃಶ್ಯಾವಳಿ ಕಲಾವಿದರು, ಆ ಮನಸ್ಸಿನವರೆಲ್ಲರಿಗೂ ಸ್ಫೂರ್ತಿ. ಅದನ್ನು ಪದಗಳಿಂದ ಕಟ್ಟಿಡಲೂ ಆಗದು. ಅಂತಹ ಒಂದು ಮನೆಯ ಮುಂಗಟ್ಟಿನ ಅಡಿಯಲ್ಲಿ ತಾತ್ಕಾಲಿಕ ಆಸರೆ ಪಡೆದು ಮಳೆ ತುಸು ಹಗುರವಾದಂತೆಯೇ ಮುಂದ್ಹೋದೆವು.
ಎರಡು ಮೆರಿಡಾಗಳು

ನೋಡಿದೆನು ನಾ... ನೋಡಿದೆನು ನಾ ...
ಅದೇ ಹುಲ್ಲುಗಾವಲು ಅಂದೆನಲ್ಲಾ, ಅದೇ ದಾರಿಯತ್ತ ಸಾಗಿದೆವು.
ನಾವಂದುಕೊಂಡಂತೆಯೇ ಪಚ್ಚೆಹಸಿರಿನ ಹುಲ್ಲುಹಾಸು ಸ್ವಾಗತಿಸಿತು...ಮುಂದೆ...ನೋ.ಡಿ.ದ.ರೆ.....
ಆಗುಂಬೆಯ ಕಸಕಡ್ಡಿ ತ್ಯಾಜ್ಯವೆಲ್ಲಾ ಅಲ್ಲೇ ಅಡರಿಕೊಂಡಿದೆ!
ಇದಕ್ಕೆ ವಿವರಣೆ ಬೇಡ!
ಇಡೀ ಆಗುಂಬೆಯಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೆಲ್ಲಾ ತಂದು ಎಸೆಯುವ ಜಾಗವಾಗಿ ಅದು ಮಾರ್ಪಟ್ಟಿತ್ತು! ಅದುವರೆಗೆ ನೋಡದ ಆಗುಂಬೆಯ ದರ್ಶನವೂ ಆಯಿತು. ಕಸಕಡ್ಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಗಳೆಲ್ಲಾ ನಮ್ಮಲ್ಲಿ ಇವೆ. ಎಷ್ಟೋ ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ ಕೂಡಾ. ಅದನ್ನು ಅಳವಡಿಸುವುದು ಬಿಟ್ಟು ಆಗುಂಬೆಯನ್ನು ಕಸದ ತಾಣವಾಗಿ ಮಾಡಿದ್ದು ನೋಡಿ ಆದ ನೋವನ್ನು ಹಂಚಿಕೊಳ್ಳುತ್ತಾ ಇಳಿಯುವಾಗ ಚಿನ್ಮಯನ ಸೈಕಲ್ನ ಪ್ರಮುಖ ಭಾಗ ಫ್ರೀವೀಲ್ನಲ್ಲೇನೋ ದೋಷ ಕಂಡುಬಂತು. ಪೆಡಲ್ ಮಾಡಿದರೂ ಸೈಕಲ್ ಮುಂದೋಡುತ್ತಿರಲಿಲ್ಲ. ಅಲ್ಲಿಂದ ಇಳಿಜಾರಾದ ಕಾರಣ ಜಾಗರೂಕತೆಯಿಂದ ಸೋಮೇಶ್ವರ ವರೆಗೂ ತಲಪಿದೆವು. ಅಲ್ಲಿಂದ ಬಸ್ನಲ್ಲೋ ಟೆಂಪೋದಲ್ಲಾದರೋ ಸೈಕಲ್ ಹಾಕಿಕೊಂಡು ಹೋಗೋಣ ಎಂದು ಅಂದುಕೊಂಡೆವು. ಆದರೆ ಆಗುಂಬೆದಾರಿಯಲ್ಲಿರುವುದು ಹೆಚ್ಚಿನವೂ ಮಿನಿಬಸ್ಗಳು, ಅದರಲ್ಲಿ ಜಾಗದ ಕೊರತೆ. ಮಧ್ಯಾಹ್ನವಾದ್ದರಿಂದ ಹೆಚ್ಚು ವಾಹನಗಳಿರಲಿಲ್ಲ. ಹಾಗಾಗಿ ಏರುದಾರಿಯಲ್ಲಿ ಇಳಿದು ತಳ್ಳುತ್ತಾ ಇಳಿಜಾರಲ್ಲಿ ಸೈಕಲ್ಲೇರುತ್ತಾ ಚಿನ್ಮಯ ಹಿಂಬಾಲಿಸಿದರೆ ನಾನು ನಿಧಾನವಾಗಿ ಮುಂದುವರಿದೆ. ಹಿರಿಯ ಮಿತ್ರ ಪ್ರಕಾಶ್ ಭಟ್ ಮಣಿಪಾಲದಲ್ಲಿರುವುದು ನೆನಪಿಗೆ ಬಂತು. ಅವರೂ ಸೈಕ್ಲಿಸ್ಟ್ ಅಲ್ಲದೆ ಎಸ್ಯುವಿ ವಾಹನ ಮತ್ತು ಸೈಕಲ್ ಕಟ್ಟುವ rack ಕೂಡಾ ಇದೆ. ಹಾಗೆ ಅವರಿಗೆ ಫೋನಾಯಿಸಿದಾಗ ನೀವು ಬರುತ್ತಾ ಇರಿ, ನಾನು ಊಟ ಮುಗಿಸಿ ಬರುವೆ ಎಂಬ ಆಶ್ವಾಸನೆ ಸಿಕ್ಕಿತು. ಅದರಂತೆ ಹೆಬ್ರಿ ವರೆಗೂ ಬಂದು, ಬಡ್ಕಿಲ್ಲಾಯರ ಹೊಟೇಲಲ್ಲಿ ಊಟಕ್ಕೆಂದು ಸೇರಿಕೊಂಡೆವು. ಊಟ ಆಗಲೇ ಖಾಲಿ. ಅವಲಕ್ಕಿ ಮೊಸರು ಮುಕ್ಕಿ ತೃಪ್ತಿ ಪಟ್ಟಾಗ ನಮ್ಮ ವಾಹನ ಆಗಮನ. ಸೈಕಲ್ ಹಾಕಿಕೊಂಡು ಸಂಜೆ ವೇಳೆಗೆ ಮಣಿಪಾಲ ತಲಪಿದೆವು.
ಹೆಚ್ಚೇನೂ ತಯಾರಿಯಿಲ್ಲದೆ ಆಗುಂಬೆಯೇರಿದ್ದು, ಅಲ್ಲಿನ ಮಂಜಿನಲ್ಲಿ ಮಿಂದೆದ್ದು ಬಂದದ್ದು ಮನತಣಿಸಿದರೆ ಆಗುಂಬೆಯ ಕಸ ಎಸೆ ತಾಣ ನೋಡಿ ಮನಕಲಕಿತು, ಮಂಜಿನ ನೆರಳಿನಲ್ಲಿ ಅಲ್ಲಿಯ ನಿಸರ್ಗದ ಮೇಲೆ ಇನ್ನೆಷ್ಟು ಅತ್ಯಾಚಾರ ನಡೆದಿದೆಯೋ ಯಾರು ಬಲ್ಲರು ???

17.3.16

ಕವನವಿದಲ್ಲ...

ಇದು ಕವನವಲ್ಲ, 
ಪದಗಳನ್ನು ಉದ್ದೂದ್ದಕ್ಕೆ
ವಾಕ್ಯಗಳಂತೆ ಬರೆಯದೆ
ತುಂ..ಡ..ರಿ..ಸಿ
ಕೆ
ಳ 
ಗೆ

ಕೆ
ಗೆ
ಬರೆಯುತ್ತಾ ಹೋದರೆ
ಅದು ಕವನವಾಗುತ್ತದೆಯೇ ಮತ್ತೆ ?!
ಛೇ....
ಖಂಡಿತಾ ಆಗದು
ಛಂದಸ್ಸಿನ ಲಯವಿಲ್ಲದ
ಮಾತ್ರಾಗಣಗಳ
ಹೊಂದಿಸದ
ಪ್ರಾಸದ ಅಲಂಕಾರವನ್ನೂ 
ತೊಡಿಸದ
ನಿರಾಭರಣ ಸುಂದರಿಯೀ
ಗೀಚುಬರಹ
ಹೆಸರು ಕೊಡುವುದು ಬೇಡ
ವಿಭಾಗೀಕರಣವಂತೂ ಸಲ್ಲ
ಕವಿಗೋಷ್ಠಿಗಳಲ್ಲಿ ಇಂಥದ್ದೆಲ್ಲ ಓದಿ
ನನ್ನನ್ನೇ ನಾನು ಹಿಗ್ಗಿಸಲು
ಅಥವಾ ಕುಗ್ಗಿಸಲು ಹೋಗಲಾರೆ
ಸುಮ್ಮನೆ 
ಮನೆಯಂಗಳದಲ್ಲಿ ತನ್ನಷ್ಟಕ್ಕೇ
ಹುಟ್ಟಿಕೊಂಡ ತುಳಸಿಯಂತೆ
ತನ್ನ ಪಾಡಿಗೆ ಹುಟ್ಟಿ 
ತನ್ನಷ್ಟಕ್ಕೇ ಮುರುಟಿಹೋಗುವುದೇ
ನಿಜಸುಖ


14.3.16

ಚಾರ್ಮಾಡಿಯ ಏರಿನಲ್ಲಿ ಸೈಕಲ್ ತುಳಿದದ್ದು

ಬೆಳಗ್ಗೆ ಹಾಸಿಗೆಯಿಂದ ಏಳುವಾಗಲೇ ಅಗ್ಗಿಷ್ಟಿಕೆ ಪಕ್ಕದಲ್ಲಿದೆಯೋ ಎನ್ನುವಷ್ಟು ಮಟ್ಟಿಗೆ ಧಗೆ, ಜತೆ ಬೆವರಿನ ಬೇಗೆ...ಈ ಹೊತ್ತಿನಲ್ಲೂ ಸೈಕ್ಲಿಂಗ್ ಬೇಕೇ ಎಂಬ ಜಿಜ್ಞಾಸೆ ಹುಟ್ಟುತ್ತಾ ಕೊನೆಗೆ ನಿದ್ದೆಗೇ ಜಾರಿಬಿಡುವ ಅಪಾಯ ಕಳೆದ ಕೆಲವು ದಿನಗಳಿಂದ...
ಕಳೆದ ಬಾರಿ ಕುದುರೆಮುಖದ ಬೃಹತ್ ಸವಾಲನ್ನು ಯಶಸ್ವಿಯಾಗಿ ಅಶೋಕವರ್ಧನ್, ಚಿನ್ಮಯದೇಲಂಪಾಡಿ, ಅರವಿಂದ ಕುಡ್ಲರ ಜತೆಗೆ ಹೋಗಿ ಬಂದಾಗಲೇ ಮುಂದಿನ ಪಯಣ ಚಾರ್ಮಾಡಿ ಎಂದು ನಾವೇ ತೀರ್ಮಾನಿಸಿಯಾಗಿತ್ತು.
ಫೆಬ್ರವರಿಯಲ್ಲಿ ಚಾರ್ಮಾಡಿ ಘಾಟಿಯನ್ನು ನಾವೇ ಚಾರ್ ಆದ್ಮಿಗಳು ಮಾರ್ಚ್ 2ನೇ ವಾರ ಏರೋದೆಂದೂ ಫೋನಿನಲ್ಲೇ ಮಾತಾಡಿಕೊಂಡಿದ್ದೆವು. ನಿವೃತ್ತ ಬದುಕಿನಲ್ಲಿ ಖುಷಿ ವರ್ಧಿಸುತ್ತಾ ಸಾಗುತ್ತಿರುವ ಅಶೋಕ ವರ್ಧನರು ಯಾವ ಡೇಟಾದ್ರೂ ರೆಡಿ ಎಂದಿದ್ದರು. ದುಡಿಯುವ ವರ್ಗಕ್ಕೆ ಸೇರಿದ ನಾನು, ಚಿನ್ಮಯ, ಅರವಿಂದ ಕುಡ್ಲ ಮಾತ್ರ ವಿವಿಧ ಕರ್ತವ್ಯ ಸಂಬಂಧೀ ವಿಚಾರಗಳಲ್ಲಿ ಮುಳುಗೆದ್ದು ಕೊನೆಗೆ ನನಗೆ ಸೈಕಲ್ ಸವಾರಿಗೆ ಸಂದರ್ಭ ಒದಗಿ ಬಂತು. ಕಚೇರಿ ಕಾರ್ಯದಲ್ಲಿ ಚಿನ್ಮಯ ತನ್ಮಯರಾದರೆ ಅರವಿಂದರನ್ನು ಅವರ ಹೆಡ್ ಮೇಸ್ಟ್ರು ಆಗಲೇಬೇಕಾದ ಕೆಲಸಕ್ಕೆ ಕಟ್ಟಿಹಾಕಿದ್ದರು......
ಕೊನೆಯಲ್ಲಿ ಉಳಿದದ್ದು ನಾನು, ಅಶೋಕವರ್ಧನ್ ಇಬ್ಬರೇ. ಅಷ್ಟು ಹೊತ್ತಿಗೆ ಮಂಗಳೂರು ಸೈಕ್ಲಿಂಗ್ ಕ್ಲಬ್ಬಿನ ಅನಿಲ್ ಶೇಟ್ ಬರುವುದಾಗಿ ಹೇಳಿ ಸೇರಿಕೊಂಡರು. ಅಂತೂ ಮಾ.12ರ ಬೆಳಗ್ಗೆ 5.30ಕ್ಕೆ ನಂತೂರು ಜಂಕ್ಷನ್ನಿನಲ್ಲಿ ಸೇರಿ ಮುಂದಕ್ಕೆ ಹೋಗಲು ನಿರ್ಧರಿಸಿಕೊಂಡೆವು. ಎರಡು ದಿನಕ್ಕಾಗುವ ಕನಿಷ್ಠ ಸರಂಜಾಮು ಕಟ್ಟಿಕೊಂಡು ಹೊರಟೆವು. 

ನಂತೂರು ಜಂಕ್ಷನ್ನಿನಲ್ಲಿ ಅನಿಲ್ ಶೇಟ್ ಅವರ ಸ್ನೇಹಿತ ಹಾಗೂ ಈಜು-ಓಟ-ಸೈಕ್ಲಿಂಗ್ ಇವು ಮೂರನ್ನೂ ನಿರಂತರವಾಗಿ ಮಾಡಬಲ್ಲ ಟ್ರಯತ್ಲೀಟ್ ಆಜಾನುಬಾಹು ಸಮರ್ಥ ರೈ ಕೂಡಾ ಬಂದಿದ್ದರು. ನಮ್ಮನ್ನು ಬೀಳ್ಕೊಡುವುದಕ್ಕೆ ಬಿ.ಸಿ.ರೋಡಿನ ವರೆಗೆ ಚಿನ್ಮಯ ಕೂಡಾ ಬಂದರು. ಬಿ.ಸಿ.ರೋಡಿನ ಹೊಟೇಲಲ್ಲಿ ಬಿಸಿಬಿಸಿ ಇಡ್ಲಿ ವಡೆ ಇಳಿಸಿ ಚಿನ್ಮಯ ವಾಪಸಾದರೆ ನಮ್ಮ ಪಯಣ ಮುಂದುವರಿಯಿತು. 9.30ರ ವೇಳೆಗೆ ಉಜಿರೆ ಬಂತು. 


ನಮ್ಮ ಮುಂದಿದ್ದ ಅನಿಲ್, ಸಮರ್ಥ್ ಕಾಣಲಿಲ್ಲ. ಅವರದ್ದು ಸಪೂರ ಟೈರಿನ ರೋಡ್ ಬೈಕ್. ಹಾಗಾಗಿ ಪೆಡಲು ಮಾಡಿದ ಬಲದಲ್ಲಿ ಮುನ್ನುಗ್ಗುವ ಸಾಮರ್ಥ್ಯ ನಮ್ಮ ಎಂಟಿಬಿ ಹಾಗೂ ಹೈಬ್ರಿಡ್ಗಿಂತ ಹೆಚ್ಚು. ಅಶೋಕವರ್ಧನರ ದಪ್ಪ ಟೈರಿನ ಮೆರಿಡಾ ಎಂಟಿಬಿ ತುಸು ನಿಧಾನ, ನನ್ನ ಹೈಬ್ರಿಡ್ ಅದಕ್ಕಿಂತ ಪರವಾಗಿಲ್ಲ, ಆದರೆ ರೋಡ್ ಬೈಕಲ್ಲಿ ಹೆಸರೇ ಹೇಳುವಂತೆ ಸಪಾಟು ರಸ್ತೆಯಿದ್ದರೆ ಎಷ್ಟು ದೂರವನ್ನೂ ಕ್ರಮಿಸುವ ಧೈರ್ಯ ಸಿಗುತ್ತದೆ.
ಫೋನ್ ಮಾಡಿದಾಗ ಅವರಿಬ್ಬರೂ ಮುಂದೆ ಹೋಗುತ್ತಿದ್ದೇವೆ, ಚಾರ್ಮಾಡಿ  ಘಾಟಿ ಶುರುವಾಗುವಲ್ಲೇ ಹೊಟೇಲಿದೆ, ಚಹಾ ಕುಡಿಯೋಣ ಎಂದರು. ಹಿಂಬಾಲಿಸಿದೆವು. ಬೇಸಗೆಯ ಧಗೆ ಆಗಲೇ ನಮ್ಮ ಮೇಲೆ ಪರಿಣಾಮ ತೋರಿಸುತ್ತಿತ್ತು. ಕುಡಿದಷ್ಟೂ ನೀರು ಬೆವರಾಗಿ ಹೋಗುತ್ತಿತ್ತು. ಹಾಗೆಂದು ನೀರು ಕುಡಿಯಿವುದು ನಿಲ್ಲಿಸಿದರೆ ದೇಹ ನಿರ್ಜಲೀಕರಣಗೊಂಡು ಸ್ನಾಯು ಸೆಳೆತ ಬರುವ ಸಾಧ್ಯತೆ ಇತ್ತು. 

ನುರಿತ ಸೈಕ್ಲಿಸ್ಟ್ ಹಾಗೂ ಈಗಾಗಲೇ 20 ಸಾವಿರ ಕಿ.ಮೀ ದೂರವನ್ನು ಸೈಕ್ಲಿಂಗ್ನಲ್ಲಿ ಸಾಧಿಸಿರುವ ಅನಿಲ್ ಶೇಟ್ ನನ್ನ ಸವಾರಿಯ ಶೈಲಿಯನ್ನು ಪರಿಶೀಲಿಸಿ, ನಾನು ಪೆಡಲಿಂಗ್ ಮಧ್ಯ ಪಾದದಲ್ಲಿ ಮಾಡುತ್ತಿರುವುದಾಗಿ ನನ್ನ ದೋಷ ಕಂಡುಕೊಂಡರು. ತುದಿಪಾದದಲ್ಲಿ ತುಳಿಯಬೇಕು, ಅದರಿಂದ ಶಕ್ತಿ ಕಡಿಮೆ ಸಾಕು ಎಂದೂ ಹೇಳಿಕೊಟ್ಟರು. ಅದನ್ನು ಮಾಡಿನೋಡಿದಾಗ ಹೌದು ಎನ್ನಿಸಿತು.
ಮುಂದೆ ಚಾರ್ಮಾಡಿ  ಏರುದಾರಿ, ಎಡಬದಿಯಲ್ಲಿ ಎತ್ತರಕ್ಕೆ ಏರಿಕಲ್ಲು ಶಿಖರ ನಮ್ಮನ್ನು ಸ್ವಾಗತಿಸುತ್ತಿತ್ತು. ಅನಿಲ್, ಸಮರ್ಥ ಎಂದಿನಂತೆ ತಮ್ಮದೇ ವೇಗದಲ್ಲಿ ಮುಂದೆ ಸಾಗುತ್ತಿದ್ದರೆ ನಾನು, ಅಶೋಕ್ ಫೊಟೊ ತೆಗೆಯುತ್ತಾ, ನೀರು ಕುಡಿಯುತ್ತಾ ಏರತೊಡಗಿದೆವು. ರಸ್ತೆ ಇಕ್ಕೆಲಗಳಲ್ಲೂ ಪ್ಲಾಸ್ಟಿಕ್ ಪೌಚ್, ಬಾಟಲಿ ಧಂಡಿಯಾಗಿ ಬಿದ್ದಿತ್ತು. ಮುಂದೆ ಏರೊಂದರಲ್ಲಿ ಹಂಸ ಎಂಬವರ ಮುಳ್ಳುಸೌತೆ, ಅನನಾಸು ಮಾರಾಟದ ಔಟ್ ಲೆಟ್ಟಲ್ಲಿ ಎರಡರದ್ದೂ ರುಚಿ ನೋಡಲೇಬೇಕಾಯ್ತು. ಮೊನ್ನೆ ಕಳೆದ ಶಿವರಾತ್ರಿಯಲ್ಲಿ ಭಕ್ತಾದಿಗಳ ಪಾದಯಾತ್ರೆಯ ಉಚ್ಚಿಷ್ಟವೇ ರಸ್ತೆ ಇಕ್ಕೆಲದಲ್ಲಿ ಬಿದ್ದಿರುವ ತಾಜಾ ಪ್ಲಾಸ್ಟಿಕ್ ಕಸ ಎಂಬ ಮಾಹಿತಿಯೂ ಸಿಕ್ಕಿತು.

ಮುಂದೆ ಕಡಿದಾದ ತಿರುವು ಸಹಿತ ದಾರಿ. ನನ್ನ ಕಾಲುಗಳಲ್ಲಿ ಸಣ್ಣಗೆ ಸೆಳೆತ ಶುರು! ಆದರೂ ನೀರು ಕುಡಿಯುತ್ತಾ  ಸಾಗುತ್ತಿದ್ದೆ. ಸೋಮನಕಾಡು ಕಳೆದು ಅಂತೂ ಏರು ಹಾದಿ ಬಹುತೇಕ ಮುಗಿಯುವ ಹೊತ್ತಿಗಾಗಲೇ ಬಲಗಾಲಿನ ಪಕ್ಕದ ಸ್ನಾಯು ಸರಿಯಾಗಿ ತನ್ನಿರುವಿಕೆ ಹೇಳಲು ಶುರು ಮಾಡಿತು. ಅಲ್ಲೇ ಬದಿಯಲ್ಲಿ ಈ ಬೇಸಿಗೆಯಲ್ಲೂ ನೀರು ಜಿನುಗಿ ಹರಿಯುತ್ತದೆ. ಅಲ್ಲಿ ಮುಖಾರವಿಂದ ತೊಳೆದು ಖಾಲಿಯಾದ ಬಾಟಲಿಗಳಿಗೆ ತಾಜಾ ಖನಿಜಯುಕ್ತ ಹನಿನೀರನ್ನೇ ಒಡ್ಡಿ ತುಂಬಿಕೊಂಡೆವು. ಅಶೋಕವರ್ಧನರ ಬೆನ್ಚೀಲದಲ್ಲಿದ್ದ ನಕ್ಷತ್ರ ನೇರಳೆಗೂ ಒಂದು ಗತಿ ಕಾಣಿಸಿದರೂ ಸಮರ್ಥ ಅನಿಲ್ ಕಾಣಸಿಕ್ಕಲಿಲ್ಲ. 

ನಮ್ಮ ಪಾಡಿಗೆ ಮುಂದುವರಿದೆವು. ಬಲಬದಿಯಲ್ಲಿ ವಿಶಾಲ ಕಣಿವೆ ದೂರದಲ್ಲಿ ಒಣಗಿನಿಂತ ಕಲ್ಲುಗುಂಡಿ ಫಾಲ್ಸ್ ಪ್ರದೇಶ ಚೆನ್ನಾಗಿಯೇ ಕಾಣುತ್ತಿತ್ತು. ದಾರಿಯಲ್ಲಿ ವಾಹನಚಾಲಕರೆಲ್ಲರೂ ಕೈಮುಗಿದು ಸಾಗುವ ಅಣ್ಣಪ್ಪಗುಡಿಯಲ್ಲೂ ವಿಶೇಷ ಭಕ್ತಾದಿಗಳು ಕಾಣಲಿಲ್ಲ. ಆಲೇಖಾನ್ ಫಾಲ್ಸ್ ಕೂಡಾ ಸಣಕಲಾಗಿ ಹರಿಯುತ್ತಿತ್ತು. ಈ ಭಾಗದಲ್ಲಿ ರಸ್ತೆ ಸ್ವಲ್ಪ ಹದವಾಗಿ ಸಮವಾಗಿದೆ. ಮುಂದೆ ಮತ್ತೆ ಕಡಿದಾದ ಏರು ಶುರು. ಸಮಯ ಸುಮಾರು 12.30-1 ಆಗಿತ್ತು. ನನ್ನ ಸ್ನಾಯುಸೆಳೆತ ಗಂಭೀರ ಸ್ಥಿತಿ ತಲಪಿತ್ತು. ಅಶೋಕವರ್ಧನ್ ನನ್ನನ್ನು ದಾಟಿ ಮುಂದುವರಿದಿದ್ದರು. ಅಲ್ಲಲ್ಲಿ ನಿಂತು ವಿಶ್ರಮಿಸುತ್ತಾ ನಾನು ಮುಂದುವರಿದೆ. ಇನ್ನೇನು ಕೊಟ್ಟಿಗೆಹಾರಕ್ಕೆ ಹತ್ತಿರವಿರುವಾಗ ಸಮರ್ಥ ಫೋನ್ ಬಂತು. ಅವರಿಬ್ಬರೂ ಆಗಲೇ ಕೊಟ್ಟಿಗೆಹಾರ ತಲಪಿ ಭೋಜನ ಮುಗಿಸಿದ್ದರು. ನಾವೂ ಅಲ್ಲಿಗೆ ತಲಪುವಾಗ ಮಧ್ಯಾಹ್ನ 2.30.

ನನಗೆ ಹಿಂದೆಯೂ ಸೈಕ್ಲಿಂಗ್ ವೇಳೆ ಸ್ನಾಯು ಸೆಳೆತ ಬಂದಿದ್ದರೂ ಅದು ಕೆಲ ನಿಮಿಷ ಕಾಲ ಅಷ್ಟೇ. ಅದರಲ್ಲೂ ಚಾರ್ಮಾಡಿ ಏರಿಗಿಂತಲೂ ಕಠಿಣವಾದ ಕುದುರೆಮುಖ ಏರುವಾಗಲೂ ನನ್ನ ಕಾಲು ಸರಿಯಾಗೇ ಇತ್ತು. ಸಣ್ಣ ಕ್ರಾಂಪ್ಸ್ ಬಂದರೂ ನೀರು ಕುಡಿದು ಎರಡು ನಿಮಷ ಕಾಲ ಕುಳಿತರೆ ಸರಿಯಾಗುತ್ತಿತ್ತು. ಈ ಬಾರಿ ಊಟ ಮಾಡಿದರೂ ಸ್ನಾಯು ನೋವು ಕಡಿಮೆಯಾಗಲೇ ಇಲ್ಲ. ಪ್ರತಿ ಪೆಡಲಾವರ್ತನದಲ್ಲೂ ಸೂಜಿ ಚುಚ್ಚಿದ ಅನುಭವ.

ಹಿಂದೆ ನಾನು ಬಳಸಿದ್ದ ಕಾಲಿನ ಸ್ನಾಯು ಹಾಗೂ ಈಗ ಅನಿಲ್ ಸಲಹೆಯಂತೆ ಶೈಲಿ ಬದಲಾಯಿಸಿಕೊಂಡಾಗ ಬಳಸಿದ ಸ್ನಾಯು ಬೇರೆ. ಹಾಗಾಗಿ ಪೆಡಲುವ ಹೊರೆ ಹೊತ್ತ ಸ್ನಾಯುವಿಗೆ ಹೊಸ ಅನುಭವ, ಅದಕ್ಕಾಗಿಯೇ ಕಾಲು ನೋವು ಕಾಣಿಸಿರಬಹುದು ಎಂದು ಜತೆಗಾರರು ಚರ್ಚಿಸಿಕೊಂಡರು. 

ಊಟ ಮಾಡಿ ನಮ್ಮ ಮುಂದಿನ ತಾಣ ಸಕಲೇಶಪುರ. ಅಲ್ಲಿಗೆ 54 ಕಿ.ಮೀ ಹೋಗಬೇಕು! ನನ್ನ ಕಾಲಿನ ಪರಿಸ್ಥಿತಿ ನೋಡಿದರೆ ಅದು ಕಷ್ಟ ಎನ್ನುವುದು ಖಾತರಿಯಾಗಿಬಿಟ್ಟಿತು. ಮೂಡಿಗೆರೆ ಹ್ಯಾಂಡ್ಪೋಸ್ಟಿನಲ್ಲಿ ನಿಂತು ಬಸ್ಸಿನಲ್ಲಿ ಸೈಕಲೇರಿಸಿ ಮಂಗಳೂರಿಗೆ ಬರುವ ಯೋಚನೆಯಾಯಿತಾದರೂ ಬಸ್ ಇರಲಿಲ್ಲ. ಕೊನೆಗೆ ಆದದ್ದಾಗಲಿ ಸೈಕಲ್ ತುಳಿಯುವುದೇ ಎಂದು ನಿರ್ಧರಿಸಿಬಿಟ್ಟೆ. ಉಳಿದ ಮೂವರು ಕೂಡಾ ನನ್ನ ಬೆಂಬಲಕ್ಕೆ ನಿಂತರು, ತಮ್ಮ ವೇಗವನ್ನು ತುಸು ತಗ್ಗಿಸಿಕೊಂಡರು. ಹಾಗೆ ವೇದನೆಯನ್ನು ಬಾಯಿಗೆ ತಂದು ಹಲ್ಲು ಕಚ್ಚಿ ಸೈಕಲ್ ತುಳಿಯುತ್ತಾ ಮುಂದುವರಿದೆ. ಇಳಿಜಾರು ಸಿಕ್ಕಾಗ ನಿರಾಳವಾಗುವ ಭಾವವೆಲ್ಲ ಏರು ಸಿಕ್ಕಾಗ ಮಾಯ. 
ಬೇಲೂರು ದಾರಿಯಲ್ಲಿ ಜನ್ನಾಪುರದಲ್ಲಿ ಬಲಕ್ಕೆ ತಿರುಗಿದೆವು. ಮತ್ತೆ ಸುಮಾರು 17 ಕಿ.ಮಿ ಹೋದಾಗ ಹಾನಬಾಳು. ಅಲ್ಲಿಂದ ಬಲಕ್ಕೆ `ಕೇವಲ' 7 ಕಿಮೀ ಹೋದರೆ ನಮ್ಮ ಇಳಿದಾಣ ಟಸ್ಕ್ ಎಂಡ್ ಡಾನ್ ರಿಸಾರ್ಟ್ ಇದೆ ಎಂಬ ಮಾಹಿತಿ ಊರವರು ಕೊಟ್ಟರು. ಈ  ಅಶೋಕವರ್ಧನರ ವನ್ಯಜೀವಿ ಸೇವಾ ಕ್ಷೇತ್ರದ ಮಿತ್ರ ವಿಕ್ರಮ ಗೌಡ ಎಂಬವರದ್ದು. ಹಾನುಬಾಳಿನಿಂದ ದಾರಿ ಮೊದಲ ಒಂದೆರಡು ಕಿ.ಮೀ ಪರವಾಗಿರಲಿಲ್ಲ. ಆದರೆ ಮತ್ತೆ ತೀರಾ ಕಚ್ಚಾ ರಸ್ತೆ. ಚಡಾವು, ಅದರ ಮೇಲೆ ಉಂಡೆಉಂಡೆ ಕಲ್ಲುಗಳು, ಮಣ್ಣು, ಧೂಳು. ಕೇವಲ ಜೀಪಷ್ಟೇ ಸಾಗುವ ಹಾದಿ. ಬೇಸಿಗೆಯಲ್ಲಿ ಕಷ್ಟದಲ್ಲಿ ಕಾರುಗಳೂ ಓಡಾಡುತ್ತವೆ. 
ಅಲ್ಲಿಗೆ ನನಗಿನ್ನು ಸೈಕ್ಲಿಂಗ್ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ. ಅಷ್ಟು ಹೊತ್ತಿಗೆ ಜೀಪೊಂದು ಬಂತು ಒಂದಿಬ್ಬರು ಕುಳಿತಿದ್ದರು. ನೋಡಿದರೆ ಅದು ಟಸ್ಕ್... ರಿಸಾರ್ಟ್ ನದ್ದೇ ಜೀಪು. ಅದರ ಚಾಲಕ ಅನಿಲ್ ಅವರಿಗೆ  ನಾವು ಬರುವ ಮಾಹಿತಿ ಮೊದಲೇ ವಿಕ್ರಮ್ ಗೌಡರಿಂದ ಸಿಕ್ಕಿತ್ತು. ನಾನು ಹೆಚ್ಚೇನೂ ಮಾತನಾಡಲು ಹೋಗದೆ ನನ್ನ ಸೈಕಲ್ ಜೀಪಲ್ಲಿ ಹಾಕಬಹುದೇ ಕೇಳಿಬಿಟ್ಟೆ. ಅವರೂ ಸಹಾಯ ಮಾಡಿದರು. ನನ್ನ ಮೂವರೂ ಸಹಚರರೂ ನನ್ನನ್ನು ಜೀಪಲ್ಲೇ ಮುಂದುವರಿಯಲು ಸೂಚಿಸಿದರು. ಸೈಕಲ್ಲಿನ ಮುಂದಿನ ಟೈರು ಸುಲಭವಾಗಿ ಕಳಚಿ ಜೀಪಲ್ಲಿರಿಸಿ ಕುಳಿತೆ. ಅನಿಲ್ ಜತೆ ಊರಿನ ವಿಚಾರ ಹರಟುತ್ತಾ ಮುಂದುವರಿದೆ. ಅಲ್ಲಿಂದ ರಸ್ತೆ ನಿಜಕ್ಕೂ ಕೆಟ್ಟದಾಗಿತ್ತು. ಹಿಂದೆ ಬಂದ ಮೂವರು ತಳ್ಳುತ್ತಲೋ ಪೆಡಲುತ್ತಲೋ ಬಂದಿರಬೇಕು. ಅಗನಿ ಎಂಬ ಹಳ್ಳಿಯೊಂದರಲ್ಲಿ ರಸ್ತೆ ಗರಿಷ್ಠ ಹಾಳಾಗಿತ್ತು. ಅಲ್ಲಿಯೇ ಜೀಪು ನಿಲ್ಲಿಸಿ ಮೂವರಿಗಾಗಿ ಕಾದೆವು. ಆ ವೇಳೆಗೆ ಜೀಪಲ್ಲಿದ್ದ ಪ್ರಯಾಣಿಕರೂ ಇಳಿದುಕೊಂಡದ್ದು ಅನುಕೂಲವಾಯ್ತು. ಉಳಿದ ಮೂರೂ ಸೈಕಲ್ಲನ್ನೂ, ಸವಾರರನ್ನೂ ಸೇರಿಸಿಕೊಂಡು ಜೀಪು ಮುನ್ನಡೆಯಿತು. ಸುಮಾರು 1 ಕಿ.ಮೀ ಚಡಾವೇರಿದಾಗ ನಮಗೆ ಅಚ್ಚರಿ! ಅದುವರೆಗೂ ಒಣಕಲು ಕಾಡು, ಧೂಳು ನೋಡಿದ ನಮಗೆ ದಿಢೀರ್ ಆಗಿ ಹವಾನಿಯಂತ್ರಿತ ವ್ಯವಸ್ಥೆಗೆ ಬಂದ ಅನುಭವ. ಸುತ್ತಲೂ ಹಸಿರು ಶೋಲಾ ಅರಣ್ಯ, ಬೀಸಿ ಬರುತ್ತಿದ್ದ ನಮ್ಮೆಲ್ಲ ಸುಸ್ತನ್ನೂ ಮಾಯವಾಗಿಸಿತು.

  • ಎತ್ತಿನಹೊಳೆಯ ಮಡಿಲಲ್ಲಿ ಟಸ್ಕ್ ಎಂಡ್ ಡಾನ್ 

ರಾಜ್ಯ ಸರ್ಕಾರ  ಕರಾವಳಿಗರನ್ನು ಮಂಗಮಾಡಿ ಏನೇ ಆದರೂ ಕೆಲಸ ಮುಂದುವರಿಸುತ್ತೇನೆ ಎಂದು ಪ್ರಜಾಪ್ರಭುತ್ವಕ್ಕೆ ಅಣಕವಾಗುವ ರೀತಿ ನಡೆಸುತ್ತಿರುವ ಎತ್ತಿನಹೊಳೆ ತಿರುವು ಯೋಜನೆಗೆ ಬೇಕಾದ ಜಲಮೂಲ ಎತ್ತಿನಹೊಳೆ ಇದೇ ಭಾಗದಲ್ಲಿ ಬೆಟ್ಟಗಳ ನಡುವೆ ಹುಟ್ಟಿಕೊಳ್ಳುತ್ತದೆ.
ಈ ಸದಾ ಹಸಿರು ಕಾಡುಗಳ ನಡುವೆ ಸದ್ದಿಲ್ಲದೆ ಮಲಗಿದೆ ಟಸ್ಕ್ ಎಂಡ್ ಡಾನ್.  ನಮ್ಮ ಜೀಪು ಇಳಿದಂತೆಯೇ ಮಂಗಳೂರು ಮೂಲದ ವ್ಯವಸ್ಥಾಪಕ ಪ್ರೇಮನಾಥ ರೈ ಬಹುಕಾಲ ಪರಿಚಿತರಂತೆ ಮಾತನಾಡಿಸಿ ಕುಶಲ ವಿಚಾರಿಸಿ, ಬಿಸಿಬಿಸಿ ಆಲೂಬೋಂಡ ಚಹಾ ನೀಡಿ ಉಪಚರಿಸಿದರು. ಒಂದು ಸುವ್ಯವಸ್ಥಿತ ಪಾಕಶಾಲೆ, ಕೊಡೆಯಾಕಾರದ ಮಾಡಿರುವ ಗೋಡೆಗಳಿಲ್ಲದ ಭೋಜನಗೃಹ, ಅಲ್ಲಲ್ಲಿ ಬ್ಲಾಕ್ ಮಾದರಿಯಲ್ಲಿ ಐದು ವಸತಿಗೃಹಗಳು ಇಲ್ಲಿವೆ. ಸದಾ ಹರಿದು ಬರುವ ನೀರಿನಿಂದ ವಿದ್ಯುತ್ ಉತ್ಪಾದನೆ. ನಾಲ್ಕೈದು ಕೆಲಸಗಾರರು ಯಾವಾಗಲೂ ಬಿಸಿಯಲ್ಲ. ಅಕ್ಟೋಬರ್, ಮಾರ್ಚ್ -ಮೇ ಸೀಸನ್ನಿನಲ್ಲಿ ಭರ್ಜರಿಜನ..
ರಾತ್ರಿ ಭೋಜನವಾದ ಬಳಿಕ ಮರುದಿನ ಬೆಳಗ್ಗೆ ಕಾಲು ನೋವು ಕಡಿಮೆಯಾದರೆ ಸೈಕಲ್ ತುಳಿಯುವುದು, ಇಲ್ಲವಾದರೆ ಜೀಪಲ್ಲಿ ಸಕಲೇಶಪುರ ವರೆಗೂ ಬಿಡಬೇಕು ಎಂದು ಪ್ರೇಮನಾಥ ರೈಗಳನ್ನು ಕೇಳಿಕೊಂಡೆ. ಆದರೆ ಅವರು ಅದಕ್ಕಿಂತಲೂ ಒಳ್ಳೆ ಆಫರ್ ಕೊಟ್ಟರು. ಅವರು ತಮ್ಮ ಮನೆಗೆ ಕಾರಲ್ಲಿ ಮರುದಿನ ಬೆಳಗ್ಗೆ ಹೊರಡುವವರು. ನನ್ನ ಕಾರಲ್ಲೇ ಬರಬಹುದು ಎಂದುಬಿಟ್ಟದ್ದು ನನಗೆ ಬಹಳ ಅನುಕೂಲವಾಯ್ತು. ರಾತ್ರಿ ಅನುಕೂಲಕರ ಚಳಿಯಲ್ಲಿ ಕಣ್ಮುಚ್ಚಿದ್ದೊಂದೇ ಗೊತ್ತು. ಮರುದಿನ ಎದ್ದಾಗ ಹಿಂದಿನಷ್ಟು ಕಾಲು ನೋವಿರಲಿಲ್ಲ. ಆದರೆ ಮತ್ತೆ ತುಳಿದರೆ ಕಾಲುನೋವು ಹೆಚ್ಚಾಗುವ ಭಯವಿತ್ತು. ಹಾಗೆ ಮರುಮಾತಿಲ್ಲದೆ ಸೈಕಲ್ಲಿನ ಎರಡೂ ಟೈರನ್ನೂ ಸಮರ್ಥ್ ನೆರವಿನಲ್ಲಿ ಕಳಚಿ ಫ್ರೇಮ್ ಬೇರೆಮಾಡಿ ರೈಗಳ ಕಾರಿಗೆ ನೀಟಾಗಿ ತುಂಬಿಸಿ ಹೊರಟು ನಿಂತೆ. ಮುಂಜಾನೆಯ ಚಳಿಯಲ್ಲಿ ರಿಸಾರ್ಟ್ ಹಿಂದೆ ಕಳಶದ ರೀತಿ ನಿಂತ ಬೆಟ್ಟವೊಂದನ್ನು ಏರಲು ನನ್ನ ಮೂವರೂ ಮಿತ್ರರೂ ಹೊರಟು ನಿಂತರು. ಅವರು ಬೆಟ್ಟದ ತುದಿ ತಲಪುವ ವೇಳೆಗೆ ನಮ್ಮ ಕಾರೂ ಹೊರಟಿತು.
ರೈಗಳ ರಿಸಾರ್ಟ್ ಕಥೆ ಕೇಳುತ್ತಾ ಸಕಲೇಶಪುರ ಕೆಳಗಿನ ಆನೆಮಹಲ್ ತಲಪಿ ಇಳಿಯುತ್ತಾ ಹೋದಾಗ ಬಲಭಾಗದಲ್ಲಿ ಎತ್ತಿನಹೊಳೆಯ ಕಾಮಗಾರಿ ಜೋರಲ್ಲಿ ಸಾಗಿತ್ತು. ಗುಡ್ಡ ಗುಡ್ಡಗಳನ್ನೇ ಕಡಿದು ಹಾಕಿದ್ದರು, ಮಣ್ಣಿನ ರಾಶಿಯ ಅಡಿಯಲ್ಲಿದ್ದ ಮರಗಳು ಮರ ಕಡಿಯುವುದಿಲ್ಲ ಎಂಬ ಎತ್ತಿನಹೊಳೆ ಪ್ರಾಜೆಕ್ಟ್ ರಿಪೋರ್ಟ್ ನ್ನೇ ಅಣಕಿಸುತ್ತಿದ್ದವು.
ಮತ್ತೆ ಮುಂದುವರಿದಾಗ ರೈಗಳ ರಿಸಾರ್ಟ್ ಕಥೆ ಮುಂದುವರಿಯಿತು. ಟಸ್ಕ್ ರಿಸಾರ್ಟಲ್ಲಿ ಪರಿಸರಕ್ಕೆ ಹಾನಿ ಮಾಡಿಲ್ಲ. ಬಂದವರಿಗೂ ಮಾಡಲು ಬಿಡುವುದಿಲ್ಲ. ಟಿವಿ, ಸ್ಟಿರಿಯೋ ಉದ್ದೇಶಪೂರ್ವಕ ನೀಡಿಲ್ಲ. ಅವರೇ ತಂದು ಗಲಭೆಯೆಬ್ಬಿಸುವುದಕ್ಕೂ ನಾವು ಬಿಡುವುದಿಲ್ಲ. ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳುವವರಿಗೆ ಮಾತ್ರ ನಮ್ಮ ರಿಸಾರ್ಟ್ ತೆರೆದಿದೆ, ಅದನ್ನು ಗೌರವಿಸಿ ಬಹಳಮಂದಿ ಬರುತ್ತಾರೆ. ರಿಸಾರ್ಟ್ ಗೆ ಟಸ್ಕರನೊಬ್ಬ(ಒಂಟಿಯಾನೆ) ಆಗಾಗ ಬರುತ್ತಿದ್ದ ಕಾರಣ ಟಸ್ಕ್ ಎಂಬ ಹೆಸರನ್ನೇ ರಿಸಾರ್ಟಿಗೆ ಇರಿಸಿದ್ದಾರೆ. 

ರಿಸಾರ್ಟ್ ಕಥೆ, ಎತ್ತಿನಹೊಳೆ ವಿಚಾರ ಚರ್ಚಿಸುತ್ತಾ ಮಂಗಳೂರು ಸೇರಿಕೊಂಡೆ, ನೆರೆಮನೆಯ ಅಭಿಭಟ್ ಗೆ ಮೊದಲೇ ಕಾರು ತರಲು ಹೇಳಿದ್ದೆ. ಹಾಗಾಗಿ ರೈಗಳ ಕಾರಿನಿಂದಿಳಿದು ಚಕಾಚಕ್ ಆಗಿ ಸೈಕಲ್ ನನ್ನ ಕಾರಿಗೇರಿಸಿ, ಅಭಿಯೊಂದಿಗೆ ಮನೆ ಸೇರುವಾಗ ಮಧ್ಯಾಹ್ನ 12. 
ಊಟವಾಗಿ  ಸಮರ್ಥ್ ಗೆ ಫೋನ್ ಮಾಡಿದೆ, ಅವರ ಸೈಕಲ್ಲಿನಲ್ಲೂ ತಾಂತ್ರಿಕ ತೊಂದರೆಯಾಗಿ ಅವರೂ ಸಕಲೇಶಪುರದಿಂದ ಬಸ್ಸಲ್ಲಿ ಸೈಕಲ್ ಹಾಕಿ ಬರುತ್ತಿದ್ದು ಮಧ್ಯಾಹ್ನ 1.30ಕ್ಕೆ ಮಂಗಳೂರು ತಲಪಿದರೆ ಅನಿಲ್ ಮತ್ತು ಅಶೋಕ್ ಮಾತ್ರವೇ ಸಂಜೆವರೆಗೂ ಹಿಡಿದ ಸೈಕಲ್ ವ್ರತ ಬಿಡದೆ ಪೆಡಲಿಸಿ ಸಂಜೆವೇಳೆ ಮಂಗಳೂರು ತಲಪಿದ್ದರು. ಸುಡುಬಿಸಿಲಲ್ಲಿ ಸೈಕಲ್ ಎರಡು ದಿನ ನಿರಂತರ ತುಳಿಯುವ ಸಾಧನೆ ಮಾಡಿದ ಅವರಿಗೆ ಅಭಿನಂದನೆ.
ಟಸ್ಕ್ ಎಂಡ್ ಡಾನ್ ರಿಸಾರ್ಟ್ ಬಗ್ಗೆ ತಿಳಿಯಲು ಕ್ಲಿಕ್ಕಿಸಿ: tusk n dawn

18.1.16

ಕುದುರೆಮುಖ ಸೈಕಲ್ ಪಯಣಕೆ ಸೈ

ಬೈಕ್ ಖರೀದಿಸಿದ ಆರಂಭದಲ್ಲಿ ನೂರಾರು ಕಿ.ಮೀ ಬೈಕಲ್ಲೇ ಸುತ್ತುವ ಕ್ರೇಜ್ ನನ್ನದಾಗಿತ್ತು. ಕಾರು ಬಂದ ನಂತರ ಕೆಲವೊಮ್ಮೆ ದೂರದೂರಿಗೆ ಕಾರ್ ಡ್ರೈವ್ ಮಾಡುವುದೂ ಖುಷಿ ಕೊಡುತ್ತಿತ್ತು.
ನಿಸರ್ಗ ಪ್ರಿಯರಿಗೆ ಟ್ರೆಕಿಂಗ್ ಎಂದೆಂದಿಗೂ ಹುಚ್ಚಾಗಿಯೇ ಉಳಿಯುವಂಥದ್ದು, ಹಾಗೆ ನಾನು ಅದನ್ನು ಬಿಡುವುದಿಲ್ಲ....
ಆದರೆ ಒಂದು ವರ್ಷದಿಂದ ಸಂಗಾತಿಯಾಗಿರುವ ಸೈಕಲಲ್ಲಿ ಹೊಸ ಹೊಸ ಪ್ರದೇಶ ಸುತ್ತುವ, ಆ ಮೂಲಕ ಅನುಭವ ಹೆಚ್ಚಿಸಿಕೊಳ್ಳುವ ಅಪೂರ್ವ ಅವಕಾಶ.
ಸೈಕಲ್ ಪ್ರಿಯರಿಗೆ ಈಗೀಗ ಗರಿಷ್ಠ ಸ್ಪರ್ಧೆ ಸವಾಲುಗಳು ತೆರೆಯುತ್ತಿರುತ್ತವೆ. ಸೈಕಲ್ಲಿಗನೊಬ್ಬನಿಗೆ ಅವಿರತವಾಗಿ ಪೆಡಲು ತುಳಿದು ಗರಿಷ್ಠ ದೂರ ಕ್ರಮಿಸಿ, ನೆಲದ ಏರಿಳಿತಗಳನ್ನು ನಿವಾಳಿಸಿಕೊಂಡು ಗುರಿ ಸಾಧಿಸುವುದು ಎಂದಿಗೂ ಸವಾಲು.
ಒಂದು ಹಂತದ ಅಭ್ಯಾಸದ ಬಳಿಕ ಸಮತಳದಲ್ಲಿ ಸೈಕಲ್ ಮೆಟ್ಟುವುದು ದೊಡ್ಡ ವಿಚಾರವೇಲ್ಲ. ಆದರೆ ಘಟ್ಟ ಪ್ರದೇಶಗಳಲ್ಲಿ ಏರಿಳಿಯುವುದು ಸೈಕಲ್ ಪಟುವಿನ ಹಂಬಲ. ಅಂಥ ಗುರಿ ನನ್ನ ಮುಂದೆಯೂ ಇತ್ತು. ದಿಢೀರ್ ಆಗಿ 1000 ಮೀಟರ್ ನಷ್ಟು
ನಾಲ್ಕು ಮೆರಿಡ ಸೈಕಲ್ಲುಗಳು
ಎತ್ತರಕ್ಕೆ ಏರಿಬಿಡುವ ಪ್ರದೇಶಗಳಾದ ಶಿರಾಡಿ, ಚಾರ್ಮಾಡಿ, ಮಾಳ ಘಾಟಿ, ಆಗುಂಬೆ ಘಾಟಿ, ಅದನ್ನೂ ಏರಿ ಮುಂದುವರಿದರೆ ಕುಂದಾದ್ರಿ ಶಿಖರವೇರುವುದು ಇವೆಲ್ಲವೂ ಮಂಗಳೂರಿನ ಅನೇಕ ಸೈಕಲ್ಲಿಗರಿಗೆ ಒಂದೊಂದು ಪರೀಕ್ಷೆ ಪಾಸಾದ ಹಾಗೆ. ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಮಂಗಳೂರು ಸೈಕಲ್ಲಿಗರ ಸಂಘದ  ಘಟಾನುಘಟಿಗಳು ಅನೇಕರಿದ್ದಾರೆ.
ಮೊದಲ ಪರೀಕ್ಷೆಯಾಗಿ 100 ಕಿ.ಮೀ ಕೆಲ ದಿನಗಳ ಹಿಂದೆ ಕಾರ್ಕಳ-ಮೂಡುಬಿದಿರೆ ಮಾರ್ಗವಾಗಿ ಪೂರೈಸಿದ್ದೆ. ಮುಂದಿನದ್ದು ಘಟ್ಟವೇರುವ ಗುರಿ. ಈಚೆಗೆ ಕೆಲ ದಿನಗಳ ಹಿಂದೆ ಅಶೋಕವರ್ಧನರು ಕುದುರೆಮುಖ ಹೋಗೋಣ್ವೇ ಎಂದಾಗ ಜೈ ಅಂದೆ.
ಅಶೋಕರ ನೇತೃತ್ವದಲ್ಲಿ ಎಂಸಿಎಫ್ ಕಂಪನಿಯ ಚಿನ್ಮಯ ದೇಲಂಪಾಡಿ, ಮೇಸ್ಟ್ರು ಅರವಿಂದ ಕುಡ್ಲ ಹಾಗೂ ನಾನು ಒಟ್ಟಿಗೆ ನಾಲ್ವರ ಕೂಟ ತಯಾರಾಯ್ತು. ಕುದುರೆಮುಖವನ್ನು ಒಂದೇದಿನ ಏರುವುದು, ಇಳಿಯುವುದು, ಒಟ್ಟಿಗೆ 200 ಕಿ.ಮೀ ಒಂದೇ ದಿನದಲ್ಲಿ ಪರಿಕ್ರಮಿಸುವುದು ನಮ್ಮ ಗುರಿ.
ಮಕರ ಸಂಕ್ರಾಂತಿಯ ದಿನದಂದೇ ಮುಂಜಾನೆ ಹೊರಟುಬಿಟ್ಟೆವು. ಮೂವರು ಮಂಗಳೂರಿನಿಂದ ಬಂದರೆ ನಾನು ಸುರತ್ಕಲ್ಲಿಂದ ಸೇರಿಕೊಂಡೆ. ಇನ್ನೋರ್ವ ಸೈಕ್ಲಿಂಗ್ ಪಟು, ಅಭಿಜಿತ್ ಆಗತಾನೇ ಮೈಸೂರಿನಿಂದ ಊರಿಗೆ ಬಂದವನು ನಮ್ಮನ್ನು ಹಿಂಬಾಲಿಸಿ ಬೈಕ್ನಲ್ಲಿ ಬಂದು ತಂದ ಕಿತ್ತಳೆಗಳನ್ನು ನಮಗೆ ಕೊಟ್ಟ, ಪಡುಬಿದ್ರಿಯಲ್ಲಿ ಜತೆಗೆ ಕಾಫಿ ಕುಡಿದೆವು, ನಂತರ ನಾವು ಪ್ರಯಾಣ ಮುಂದುವರಿಸಿದೆವು.
ಸುಮಾರು 9 ಗಂಟೆ ವೇಳೆಗೆ ಬಜಗೋಳಿ ತಲಪಿದೆವು, ಬೆಳಗ್ಗಿನ ಲಘೂಪಹಾರ ಎಲ್ಲೋ ಮಾಯವಾಗಿತ್ತು. ಬಜಗೋಳಿಯಲ್ಲಿ ಹೊಟ್ಟೆ ಗಟ್ಟಿಯಾಗುವಷ್ಟೂ ಹೊಡೆದು ಪೆಡಲಿಂಗ್ ಮುಂದುವರಿಸಿದೆವು. ಕುದುರೆಮುಖದ ತಳಭಾಗ ಮಾಳ ಗೇಟ್ ದಾಟಿ ಮುಂದುವರಿದೆವು.
ಕಣ್ಮನ ಸೆಳೆಯುವ ಮಾಳ ಘಾಟಿಯ ಆರಂಭದಲ್ಲೇ ಫೊಟೊ ಕ್ಲಿಕ್ಕಿಸಿಕೊಂಡೆವು. ಅಲ್ಲಿ ವರೆಗೂ ಯಾವುದೇ ಸಮಸ್ಯೆಯಾಗಲಿಲ್ಲ. ಸುಮಾರು 65-70 ಕಿ.ಮೀ ಕ್ರಮಿಸಿದ್ದಾಗಿತ್ತು. ಮುಂದಿನ 18 ಕಿ.ಮೀ ಕ್ರಮಿಸುವಾಗ ನಾವು ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರಕ್ಕೇರಬೇಕಿದೆ. ಎಂದರೆ ನಿರಂತರವಾಗಿ ಏರುತ್ತಲೇ ಇರಬೇಕು! ಇದುವೇ ನಿಜವಾದ ಸವಾಲು.
ಆಗಲೇ 70 ಕಿ.ಮೀ ನಿರಂತರವಾಗಿ ಪೆಡಲಿಸಿದ್ದರಿಂದ ಸಹಜವಾಗಿಯೇ ಕಾಲುಗಳಲ್ಲಿನ ಶೇ.60ರಷ್ಟು ಬಲ ಖಚರ್ಾಗಿತ್ತು. ದೊಡ್ಡ ಗಿಯರುಗಳಲ್ಲಿ ಸೈಕಲ್ ತುಳಿಯುವುದಕ್ಕೆ ಸಾಧ್ಯವೇ ಇರಲಿಲ್ಲ. ಹಾಗಾಗಿ ಕ್ಲೈಂಬಿಂಗ್ ತಜ್ಞ ಚಿನ್ಮಯ ದೇಲಂಪಾಡಿಯ ಸಲಹೆಯಂತೆ ಮುಂದಿನ ಗಿಯರು 1 ಹಾಗೂ ಹಿಂದೆ 2,3, 4ರ ಕಾಂಬಿನೇಶನ್ನಲ್ಲೇ ಮುಂದುವರಿದೆ. ತಿಂಗಳ ಹಿಂದೆಯಷ್ಟೇ ಮೈಸೂರು-ನಾಗರಹೊಳೆ 200 ಕಿ.ಮೀ ಸೈಕ್ಲಿಂಗ್ ಯಶಸ್ವಿಯಾಗಿ ಮುಗಿಸಿದ್ದ ಚಿನ್ಮಯ ಸುಸ್ತೇ ಆಗದ ರೀತಿಯಲ್ಲಿ ಏರುತ್ತಾ ಮುಂದೆ ಸಾಗುತ್ತಿದ್ದರೆ, ಕುದುರೆಮುಖ, ಶಂಸೆ ಭಾಗದಲ್ಲಿ ಶಿಕ್ಷಕನಾಗಿದ್ದು ಸೈಕಲ್ನಲ್ಲೇ ಓಡಾಡಿದ ಅನುಭವಿ ಅರವಿಂದ ಕೂಡಾ ನಿರಾಯಾಸವಾಗಿ ಹೋಗುತ್ತಿದ್ದರು. ಅಶೋಕವರ್ಧನರು ಎಂದಿನಂತೆ ಅಲ್ಲಲ್ಲಿ ನಿಂತು ಫೊಟೊ ತೆಗೆಯುತ್ತಾ ನಮ್ಮನ್ನು ಹಿಂಬಾಲಿಸುತ್ತಿದ್ದರು. ಎರಡೂ ಬದಿ ಹಸಿರು ಗಮನ ಸೆಳೆದರೂ ನಮ್ಮನ್ನು ಆಳವಾಗಿ ನಾಟಿದ್ದೆಂದರೆ ಪರಿಸರ ಮೇಲಿನ ಅತ್ಯಾಚಾರ. ಘಟ್ಟದಿಂದ ಇಳಿದು ಬರುವ ಝುಳು ಝುಳು ಝರಿಗೆ ಗೋಣಿಯಲ್ಲೇ ಕಸ, ತ್ಯಾಜ್ಯ, ಕೊಳಕನ್ನು ತಂದು ಸುರಿಯಲಾಗುತ್ತಿತ್ತು. ಅದೇ ನೀರು ನದಿಯಾಗಿ ನಾಡು ಸೇರುತ್ತದೆ! ಯಾರಿಗೆ ಹೇಳೋದು!
ಅಂತೂ ಉಸ್ಸಪ್ಪಾ, ಬುಸ್ಸಪ್ಪಾ ಎನ್ನುತ್ತಾ ಎಸ್ಕೆ ಬಾರ್ಡರ್ ಸೇರಿಕೊಂಡೆವು. ಅಲ್ಲಿವರೆಗೂ ನಿರಂತರ ಚಡಾವು. ಇನ್ನು ಮುಂದೆ ಒಂದಷ್ಟು ಇಳಿತ, ಮತ್ತೆ ಏರು ಇವುಗಳ ಹದವಾದ ಮಿಶ್ರಣ. ಇಳಿಯುವಾಗ ಪೆಡಲಿನಲ್ಲಿ ನಿಂತು ಆಹ್ಲಾದಕರ ತಂಗಾಳಿ ಆಸ್ವಾದಿಸುತ್ತಾ ಸಾಗುವಾಗ ಬಳಲಿಕೆ ಒಂದಷ್ಟು ಮಾಯವಾಗಿ ಮುಂದಿನ ಏರಿಗೆ ತುಸು ಸಹಾಯವಾಗುತ್ತದೆ. ಬಿಸಿಲಿನ ಪೆಟ್ಟು ಇದ್ದರೂ ಗಾಳಿಯಿಂದ ಅಷ್ಟಾಗಿ ಗೊತ್ತಾಗಲಿಲ್ಲ. ಲಕ್ಯಾ ಡ್ಯಾಂನಿಂದ ಮುಂದೆ ಜು....ಂಯ್ಯನೆ ಇಳಿದು ಮಲ್ಲೇಶ್ವರ ಕುದುರೆಮುಖ ಟೌನ್ಶಿಪ್ ಸೇರಿದಾಗ ಗಂಟೆ 2.30 ಮಧ್ಯಾಹ್ನ.
ಅಲ್ಲಿಯ ಅತಿಥಿಗೃಹ ಹುಡುಕಿಕೊಂಡು ಹೋಗಿ ಭೋಜನಗೃಹದಲ್ಲಿ ಕುಳಿತಾಗ ಕಾಲೇಜಿನ ವಿದ್ಯಾಥರ್ಿಗಳು ಪ್ರವಾಸ ಬಂದವರು ತುಂಬಿ ತುಳುಕುತ್ತಿದ್ದರು. 40 ನಿಮಿಷ ತಡವಾಗಿ ಊಟ ದಕ್ಕಿತು. ಆಗಲೇ ನಮ್ಮ ಕಾಲುಗಳು ವಿಶ್ರಾಂತಿ ಬಯಸುವುದು ಸ್ಪಷ್ಟವಾಗಿತ್ತು.
ಇಂದೇ ಹೋಗುವುದು ಬೇಡ, ಇನ್ನು ಅಸಾಧ್ಯ ಎಂದು ಅಶೋಕರಿಂದ ಇಂಗಿತ ವ್ಯಕ್ತವಾಯಿತು, ನಮ್ಮ ಮನಸ್ಸಿನಲ್ಲಿದ್ದುದೂ ಅದೇ ಆಗಿತ್ತು. ಹೊಟ್ಟೆ ಬಿರಿಯುವಂತೆ ಊಟ ಮಾಡಿ, ಜು....ಂಯ್ಯನೆ ಇಳಿದ ಭಾಗವನ್ನು ಮತ್ತೆ ಏರುವುದು, ಮತ್ತೆ 100 ಕಿ.ಮೀ ಹಿಂದೆ ಪೆಡಲು ಮಾಡುವುದು ತೀರಾ ಕಷ್ಟ, ಅಲ್ಲದೆ ಊರು ಸೇರುವಾಗ ತಡರಾತ್ರಿಯೇ ಆಗಿಬಿಡಬಹುದು ಎಂಬ ಕಾರಣಕ್ಕೆ ಅದನ್ನು ಕೈಬಿಟ್ಟೆವು.
ಅರವಿಂದ ಮೇಸ್ಟ್ರು ತಮ್ಮ ಹಿಂದಿನ ಸಂಪರ್ಕವನ್ನೆಲ್ಲಾ ಬಳಸಿ ಅರಣ್ಯ ಇಲಾಖೆಯ ಭಗವತಿ ಕ್ಯಾಂಪ್ನಲ್ಲಿ ವಿಶ್ರಾಂತಿ ಗೃಹ ಪಡೆಯುವಲ್ಲಿ ಯಶಸ್ವಿಯಾದರು. ಕ್ಷಯಿಸುತ್ತಿರುವ ಕುದುರೆಮುಖ ಪೇಟೆಯ ಏಕೈಕ ಹೊಟೇಲ್ನಲ್ಲಿ ಚಹಾ ಸೇವಿಸಿ, ಸೈಕಲ್ಲೇರಿದೆವು, ಲಕ್ಯಾ ಡ್ಯಾಂ ದಾರಿಯಲ್ಲಿ ಕರೆಯಿತು. ಅಡ್ಡ ಗೇಟಿನ ಅಡೆತಡೆ, ಸೈಕಲ್ ತಳ್ಳುತ್ತಾ ಲಕ್ಯಾ ಡ್ಯಾಂ ಸೇರಿದೆವು. ಅನುಮತಿ ಎಲ್ಲಿ ಎಂದು ದೊಣ್ಣೆನಾಯಕರ ಪ್ರಶ್ನೆ. ಅವರಿಗೆ ಒಂದಷ್ಟು ಸಮಜಾಯಿಷಿ ಕೊಟ್ಟೆವು. ಲಕ್ಯಾಡ್ಯಾಂನ ಅಚ್ಚುಕಟ್ಟು ಪ್ರದೇಶದಲ್ಲಿ ತುಂಬಿರುವ ಹೂಳಿನ ಮೇಲೆ ಗಾಳಿಮರಗಳು ಯಥೇಚ್ಚವಾಗಿ ಬೆಳೆದುನಿಂತಿವೆ.
ಭಗವತಿ ಶಿಬಿರದ ದಾರಿ
ರಾತ್ರಿಯ ತಂಗುದಾಣ
ಐದು ನಿಮಿಷ ವೀಕ್ಷಣೆ ಬಳಿಕ ಸೈಕಲ್ ತುಳಿಯುತ್ತಾ ಭಗವತಿ ಕ್ಯಾಂಪ್ ಸೇರುವಾಗ ದಿನಮಣಿ ವಿದಾಯ ಹೇಳಿದ್ದ.
ರಾತ್ರಿಯ ಛಳಿಯಲ್ಲಿ ಭಗವತಿ ಕ್ಯಾಂಪ್ ಸಿಬ್ಬಂದಿ ರುಚಿಕರವಾಗಿಯೇ ಅಡುಗೆ ಮಾಡಿ ಬಡಿಸಿದರು. ಬೆಂಗಳೂರಿನ ಟ್ರೆಕ್ಕಿಂಗ್ ತಂಡವೊಂದು ಕುರಿಂಜಾಲು ಗುಡ್ಡ ಏರಿದ ಸಂಗತಿ ಅರುಹಿತು. ಅವರೊಡನೆ ತುಸು ಹರಟಿ, ಹಾಕಿದ್ದ ಬಟ್ಟೆಯಲ್ಲೇ ಬಿದ್ದುಕೊಂಡೆವು.(ಹದ ಬಿಸಿ ನೀರಿನ ಝಳಕ ಮಾಡಲು ಮರೆಯಲಿಲ್ಲ.)
****
ಮುಂಜಾನೆ 5ಕ್ಕೇ ಎಚ್ಚರವಾಗಿತ್ತು. ಮತ್ತೆ ಮರು ಪ್ರಯಾಣಕ್ಕೆ ಸಿದ್ಧವಾಗಬೇಕಾದರೆ ಬೆಳಕು ಹರಿಯಲೇ ಬೇಕು, ಅಷ್ಟೂ ಮಂಜಿನ ತೆರೆ ಬಿದ್ದಿತ್ತು. ಅಂತೂ ಚಹಾ ಗುಟುಕರಿಸಿ 7 ಗಂಟೆಗೆ ಹೊರಟೆವು.
ಮುಂಜಾನೆ ಮರ, ಹುಲ್ಲು, ಶೋಲಾ ಕಾಡಿನುದ್ದಕ್ಕೂ ಹಬ್ಬಿದ್ದ ಮಂಜು ಇಡೀ ಪರಿಸರಕ್ಕೇ ಶೋಭೆ ಕೊಟ್ಟಿತ್ತು. ಅದರ ಮಧ್ಯೆ ಸದ್ದಿಲ್ಲದೆ ಸೈಕಲ್ ತುಳಿಯುವುದು ಆಹ್ಲಾದಕರ. ಏರಿದ ಕಷ್ಟ ನೋಡಿದರೆ ಇಳಿಯುವುದಕ್ಕೇನೂ ಕಷ್ಟವಾಗಲಿಲ್ಲ, ದಾರಿ ಮಧ್ಯೆ ಬೇಕಾದಷ್ಟೂ ಫೊಟೊ ತೆಗೆದುಕೊಂಡು ಇಳಿದೆವು. ಕಡಾರಿಯ ಹೊಟೇಲ್ ಟೂರಿಸ್ಟ್ನಲ್ಲಿ ಹದವಾದ ನೀರು ದೋಸೆ ಜತೆ ಗಟ್ಟಿ ಚಟ್ನಿ, ಅದರ ಮೇಲೆ ಬನ್ಸ್ ಜಮಾಯಿಸಿ ಮತ್ತೆ  ಏರಿದ ಬಿಸಿಲಿನಲ್ಲಿ ಉಸ್ಸಾಬುಸ್ಸಾ ಮಾಡುತ್ತಾ ಮನೆ ಸೇರುವಾಗ ಮಧ್ಯಾಹ್ನ 1 ಗಂಟೆ.
ಎರಡು ದಿನದಲ್ಲಿ ನಿರಂತರವಾಗಿ 100 ಕಿ.ಮೀ ಸೈಕಲ್ ತುಳಿದದ್ದು ಕನಸೇ ಅಥವಾ ನಿಜವೇ ಎಂದು ನನಗೆ ನಾನೇ ಕೇಳುವಂತಹ ಪರಿಸ್ಥಿತಿ. ನಮ್ಮೆಲ್ಲರ ಹಿರಿಯ ಇಳಿವಯಸ್ಸಿನ ಅಶೋಕವರ್ಧನರು ನಮಗಿಂತಲೂ ಅದ್ವಿತೀಯರಾಗಿ ಸೈಕಲ್ ತುಳಿದದ್ದು ಮಾತ್ರ ಅದಕ್ಕಿಂತ ದೊಡ್ಡ ಅಚ್ಚರಿ.
ಮಧ್ಯೆ ಸೈಕಲ್ ಟ್ಯೂಬ್ ಟುಸ್ಸೆಂದು ಧರಾಶಾಯಿಯಾದಾಗ ತಮ್ಮ ಹೊಸ ಟ್ಯೂಬ್ ಕೊಟ್ಟು ಸಹಕರಿಸಿದ್ದ ಚಿನ್ಮಯ, ಪ್ರೋತ್ಸಾಹಿಸಿದ ಅಶೋಕವರ್ಧನ, ಹಕ್ಕಿಗಳ ಸ್ವರ ಕೇಳಿಯೇ ಹೆಸರು ಹೇಳಿ ಅಚ್ಚರಿ ಮೂಡಿಸುತ್ತಿದ್ದ ಅರವಿಂದರಿಗೆ ನನ್ನಿ...
----------------------
ಇಲ್ಲಿಗೆ ಸೈಕಲ್ ಯಾತ್ರೆಯ ಈ ಅಧ್ಯಾಯವು ಸಂಪೂರ್ಣಂ


Related Posts Plugin for WordPress, Blogger...