27.2.08

ಕಪಾಟಿನಲ್ಲಿ ಇಣುಕಿತೊಂದು ಹಳೆಯಂಗಿ!

ನಿಮ್ಮ ಖಾಸಗೀ ರೂಮಿನಲ್ಲಿ ಜಾಗ ತಿನ್ನುವಂಥ ಕಪಾಟಿನಲ್ಲಿ ಏನೇನಿರಬಹುದು?
ನಿಮ್ಮ ಜೇಬಿನ ಸಾಮರ್ಥ್ಯಕ್ಕನುಗುಣವಾಗಿ ಒಂದಷ್ಟು ಜ್ಯುವೆಲ್ಲರಿ, ಅರ್ಧ ಡಜನ್ನು ಷೇರು ಸರ್ಟಿಫಿಕೇಟ್, ಶಾಲೆಯಿಂದ ತೊಡಗಿ ಮದುವೆ ಆನಿವರ್ಸರಿ, ಮಗುವಿನ ಮೊದಲ ಬರ್ತ್‌ಡೇ ವರೆಗೆ ತೆಗೆದ ಫೋಟೋ ಆಲ್ಬಂ... ಹ್ಯಾಂಗರ್‍ಗಳಲ್ಲಿ ನೇತಾಡುವ, ತುಂಬಿ ತುಳುಕುವ ಬಟ್ಟೆಬರೆ....
ಇವೆಲ್ಲದರ ನಡುವೆ ಒಂದಾದರೂ ಹಳೆಯ ಅಂಗಿ ಇಣುಕಿ ನೋಡೀತೇ? ನೆನಪನ್ನು ಹತ್ತಾರು ವರ್ಷ ಹಿಂದೆ ಕೊಂಡೊಯ್ಯುವ ಹಳೆಯ ಅಂಗಿ ಇದ್ದರೂ ಇರಬಹುದೇನೋ!
ಹಳೆಯ ಅಂಗಿ ತರುವ ನೆನಪು ಆಪ್ಯಾಯಮಾನವಾದ್ದು. ಹೊಸ ಅಂಗಿ ಗರಿಗರಿಯಾಗಿ ಹಾಕುವುದು ಒಂದು ರೀತಿಯ ಹೆಮ್ಮೆ, ಉಳಿದವರ ನಡುವೆ ನ್ಯೂ ಪಿಂಚ್ ಎಂದು ಚಿವುಟಿಸಿಕೊಳ್ಳುವ ಅವಕಾಶ ಮಾಡಿಕೊಡಬಹುದು. ಆದರೆ ಹಳೆಯ ಅಂಗಿ ಹಾಗಲ್ಲ, ನಮ್ಮನ್ನು ಉಳಿದವರ ಜತೆ ಹೋಲಿಸದೆ ನಮ್ಮನ್ನು ನಮ್ಮಷ್ಟಕ್ಕೇ ಅಪ್ಪಿ ಹಿಡಿದುಕೊಳ್ಳುತ್ತದೆ ಹಳೆ ದೋಸ್ತನಂತೆ. ಕಾಲಚಕ್ರದಲ್ಲಿ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನೂ ಗೆಳೆಯನಂತೇ ಮೌನವಾಗಿ ಹೇಳಿಬಿಡುತ್ತದೆ! ಇಲ್ಲಿ ಗರಿಗರಿ ಕಾಣಿಸುವ ಹಂಬಲ ಇಲ್ಲ, ಕೂಲ್ ಆಗಿ ಹಳೆಯಂಗಿ ಧರಿಸಿ ನಮ್ಮಷ್ಟಕ್ಕೇ ನಾವಿರಬಹುದು.
ಅಂದಿನ ಕಾಲಕ್ಕೆ ಫ್ಯಾಶನೆಬಲ್ ಎಂದು ನಾವು ಪ್ರೀತಿಯಿಂದ ಕೊಂಡುಕೊಂಡ ಅಂಗಿ, ಮೊದಲ ಸ್ಯಾಲರಿಯಲ್ಲಿ ಖರೀದಿಸಿದ ಅಂಗಿ ಹೀಗೆ ಏನೆಲ್ಲಾ ಕಾರಣಗಳೊಂದಿಗೆ ನಿಮ್ಮ ಪತ್ನಿಯ ಹಾಗೆಯೇ ನಿಮ್ಮನ್ನು ಬಿಟ್ಟಿರಲಾರದ ಅಂಗಿ ಈ‌ಗ ಕಾಲರ್‍ ಹರಿದುಕೊಂಡೋ, ಚಹಾದ ಕಲೆ ಹಿಡಿದೋ ಗೋದ್ರೆಜಿನ ಮೂಲೆಯಲ್ಲಿ ಮುದುಡಿಕೊಂಡಿರಬಹುದು.
ಈಗಲೂ ನೆನಪಾದಾಗ ಒಮ್ಮೊಮ್ಮೆ ಹಳೆಯ ಅಂಗಿಯನ್ನು ಧರಿಸಿ ಹೋಗಿ ಬಿಡೋಣ ಎಂದು ಧರಿಸಿದರೆ, ಈ ಅಂಗಿಗಳು ನಿಮ್ಮ ದೇಹಕ್ಕೆ ಅಪ್ಪಿ ಹಿಡಿಯಲು ಸೆಕೆಂಡುಗಳು ಸಾಕು. ಯಾಕೆಂದರೆ ನೀವು ಅಂಗಿಗೆ ಸದಾ ಪರಿಚಿತ, ಅಷ್ಟೇ ಸಲುಗೆ! ಹೊಸ ಅಂಗಿಯಂತೆ ದೇಹಕ್ಕೆ ಒಗ್ಗಿಕೊಳ್ಳಲು ತಿಂಗಳು ಬೇಕಿಲ್ಲ.
ಏನೇ ಇರಲಿ ಈಗ ಹಳೆಯದಾದರೂ ನಮ್ಮ ಆ ಅಂಗಿ ಹತ್ತಾರು ವರ್ಷಗಳ ಹಿಂದೆ ಬೆಲೆ ಬಾಳುವಂಥದ್ದೇ. ನಿಮ್ಮ ಗೆಳತಿ ನಿಮ್ಮ ಬರ್ತ್‌ಡೇಗೆ ಕೊಟ್ಟದ್ದಿರಬಹುದು, ಹಾಸ್ಟೆಲ್ ಬದುಕಲ್ಲಿ ಏಕಾಂಗಿತನದಲ್ಲಿ ಇರುವಾಗ ತಾಯಿ ಕಳುಹಿಸಿಕೊಟ್ಟದ್ದಿರಬಹುದು. ಯಾವುದೋ ದೂರದ ಊರಿಗೆ ಪ್ರವಾಸ ಹೋದಾಗ ಆ ನೆನಪಿಗೆಂದು ಕೊಂಡುಕೊಂಡದ್ದಿರಬಹುದು...ಗೆಳತಿ ಆದರ, ತಾಯಿಯ ಪ್ರೀತಿ, ನಮ್ಮ ನೆನಪಿನ ಹಂಗು ಇವೆಲ್ಲದರ ನಡುವೆ ಅಂಗಿ ಹಳೆಯದಾದಷ್ಟೂ ಅದರ ಮೌಲ್ಯ ಬೆಲೆ ಕಟ್ಟದಷ್ಟು ಬೆಳೆದು ಬಿಡುತ್ತದೆ! ಕಾಲಾಂತರದಲ್ಲಿ ಈ ಅಂಗಿಯೂ ನಮ್ಮ ಹಾಗೆಯೇ, ಒಂದಲ್ಲ ಒಂದು ದಿನ ಹರಿದು ಚಿಂದಿಯಾಗಿ ಹೋಗುವಂಥದ್ದೇ. ಆದರೂ ಬಹಳಷ್ಟು ದಿನ ಈ ಅಂಗಿಯ ಹಿಂದಿನ ಭಾವನೆ ಗುರುತಿಸುವವರನ್ನು ಹಳೆಯಂಗಿ ಕಾಡದೆ ಬಿಡದು.

22.2.08

ನೀವೂ ಬನ್ನಿ ಕಾಡಿಗೆ....

ಪ್ರಕೃತಿ...ಕವಿ...ಚಾರಣಿಗ....ಕಲಾವಿದ....ಇವರೆಲ್ಲರ ನಡುವೆ ಅದೇಕೋ ಕೆಮಿಸ್ಟ್ರಿ ಬಹಳಷ್ಟು ಮ್ಯಾಚ್ ಆಗುತ್ತೆ...
ಅದಕ್ಕೇ ಎಲ್ಲರಿಗೂ ಬಹುಷಃ ನಿಸರ್ಗ ಎಂದರೆ ಅಚ್ಚುಮೆಚ್ಚು.
ಹೀಗೆಯೇ ಇರುವ ನಿಸರ್ಗಪ್ರೇಮಿಗಳಲ್ಲಿ ಒಬ್ಬರು ಹೊಳ್ಳ.
ಸಪುರ ದೇಹದ ದಿನೇಶ ಹೊಳ್ಳರ ತಲೆಯಲ್ಲಿ ಅದೇನೇನು ಐಡಿಯಾಗಳು ಹೊಳೆಯುತ್ತವೋ ದೇವರೇ ಬಲ್ಲ. ವೃತ್ತಿಯಲ್ಲಿ ಗ್ರಾಫಿಕ್ ಕಲಾವಿದರಾದ ಹೊಳ್ಳ, ಪ್ರವೃತ್ತಿಯಲ್ಲಿ ಚಾರಣಿಗ, ನಿಸರ್ಗಪ್ರೇಮಿ, ಕವಿ, ಕಥೆಗಾರ. ಪ್ರಮುಖ ಪತ್ರಿಕೆಗಳಲ್ಲಿ ಇವರ ಕಥೆ ಕವನ ಪ್ರಕಟವಾಗುತ್ತಲೇ ಇದೆ. ಅದೇ ರೀತಿ ತಮ್ಮದೇ ಶೈಲಿಯ ಅರ್ಥಪೂರ್ಣ ಚಿತ್ರಗಳನ್ನು ರಚಿಸುತ್ತಾರೆ. ಮಂಗಳೂರಿಗೆ ಗಾಳಿಪಟ ಹಾರಾಟದಲ್ಲಿ ಹೆಸರು ತಂದುಕೊಟ್ಟ ಟೀಂ ಮಂಗಳೂರಿನ ಪ್ರಮುಖ ಗಾಳಿಪಟದ ವಿನ್ಯಾಸಗಾರರೂ ಹೌದು.
ಕಳೆದ ಎರಡು ವರ್ಷಗಳಿಂದ ಇವರು ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದಾರೆ. ಮೊದಲ ಬಾರಿಯ ಪ್ರಯತ್ನದಲ್ಲಿ ಸುಬ್ರಹ್ಮಣ್ಯ ಬಳಿಯ ಯಸಳೂರು ರಕ್ಷಿತಾರಣ್ಯದಲ್ಲಿ ಕಲಾವಿದರಿಗೆ ಚಿತ್ರ ಬಿಡಿಸಲು ಕವಿಗಳಿಗೆ ಭಾವನೆಗಳಿಗೆ ಅಕ್ಷರ ರೂಪ ಕೊಡಲು ಅವಕಾಶ ಕೊಟ್ಟರು. ಮಧ್ಯೆ ತಮ್ಮ ‘ಅಡವಿಯ ನಡುವೆ’ ಅನ್ವರ್ಥನಾಮದ ಕವನ ಸಂಕಲನವನ್ನೂ ಬಿಡುಗಡೆ ಮಾಡಿದರು ಹೊಳ್ಳ. ಆ ಹಚ್ಚಹಸಿರು ಕಲಾವಿದರ ಕುಂಚಕ್ಕೆ ಹೊಸಸ್ಪೂರ್ತಿ ಕೊಟ್ಟರೆ, ಕವಿಗಳ ಭಾವನೆ ಅರಳಿಸಿತು. ಇದು ಆಗಿದ್ದು ೨೦೦೬ರಲ್ಲಿ.
ಆ ಬಳಿಕ ಹೊಳ್ಳರಿಗೆ ಹುರುಪು ಕಡಮೆಯಾಗಿಲ್ಲ. ಕಳೆದ ವರ್ಷ ಮಂಗಳೂರು ಸಮೀಪದ ತಣ್ಣೀರುಬಾವಿ ಕಡಲತೀರದಲ್ಲಿ ವರ್ಣಶರಧಿ ಎಂಬ ಜಂಬೋ ಕಾರ್ಯಕ್ರಮ ಏರ್ಪಡಿಸಿಬಿಟ್ಟರು. ಇಲ್ಲೂ ಕವಿಗಳಿದ್ದರು, ಕಲಾವಿದರೂ ಇದ್ದವು, ಜತೆಗೆ ಹಾಡುಗಾರರು ಹಾಡಿದರು, ನಗೆಮಲ್ಲರು ಬಂದು ನಗಿಸಿದರು ಎಲ್ಲವೂ ಕಡಲತಡಿಯ ಮರಳ ಹಾಸಿಗೆಯಲ್ಲಿ, ಗಾಳಿಮರದ ನೆರಳಲ್ಲಿ.
ಈ ಬಾರಿ ಅಂಥದ್ದೇ ಮತ್ತೊಂದು ಪ್ರಯತ್ನ ಅವರಿಂದ. ಈ ಬಾರಿ ಅವರೊಂದಿಗೆ ವನ್ಯಚಾರಣ ಬಳಗದ ಮಿತ್ರರಾದ ರಮೇಶ ಕಾಮತ್, ಸುಧೀರ್‍, ಸುನಿಲ್, ವಿನಯ್, ಪ್ರವೀಣ್ ಮುಂತಾದವರೂ ಕೈ ಜೋಡಿಸಿದ್ದಾರೆ.
ಮಂಗಳೂರಿಂದ ಹೆಚ್ಚೇನೂ ದೂರ ಇಲ್ಲದ ಇನೋಳಿ ಪಾವೂರು ಎಂಬಲ್ಲಿ ದೇವಂದಬೆಟ್ಟದಲ್ಲಿ ಕವಿಗಳನ್ನು, ಕಲಾವಿದರನ್ನು ಸೇರಿಸುತ್ತಿದ್ದಾರೆ, ಕಾರ್ಯಕ್ರಮಕ್ಕೆ ಭಾವಸಂಚಯ ಎಂಬ ಚೆಂದದ ಹೆಸರೂ ಕೊಡಲಾಗಿದೆ.
ಫೆ.24ರಂದು ಬೆಳಗ್ಗೆಯಿಂದ ಸಂಜೆ ತನಕ ದೇವಂದ ಬೆಟ್ಟದಲ್ಲಿ ೨೨ ಕವಿಗಳೂ ೨೨ ಕಲಾವಿದರೂ ಸೇರಿ ಭಾವಸಂಚಯಕ್ಕೆ ರೂಪುಕೊಡಲಿದ್ದಾರೆ.
ಉಡುಪಿಯ ಖ್ಯಾತ ಹಾಸ್ಯಸಾಹಿತಿ ಕು.ಗೋ ಅವರಿಂದ ನಗೆಯೂಟ ಇದೆ. ಕಾರ್ಯಕ್ರಮಕ್ಕೆ ಬರಲು ಆಸಕ್ತಿ ಇದ್ದರೆ ಮಂಗಳೂರು ಯೂತ್‌ ಹಾಸ್ಟೆಲ್‌ನಿಂದ ಬೆಳಗ್ಗೆ 8ಕ್ಕೆ ಬಸ್ ವ್ಯವಸ್ಥೆ ಕೂಡಾ ಇದೆ. ಹೊಳ್ಳರೊಂದಿಗೆ ಮಾತನಾಡಬೇಕಾದರೆ 9341116111ಗೆ ಕರೆಮಾಡಬಹುದು. ಇಂಥ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹೊಳ್ಳರಂಥವರು ಆಯೋಜಿಸುತ್ತಲೇ ಇರಲಿ!

14.2.08

ಗುಲಾಬಿ ತೋಟದ ಹುಡುಗ

ಗುಲಾಬಿ ತೋಟದಲ್ಲಿ ಗುಲಾಬಿ ಮೊಗ್ಗೆಗಳೊಂದಿಗೆ ರಾತ್ರಿ ಕಳೆದ ಕ್ಷಣಗಳೊಂದಿಗೆ ಮುಂಜಾನೆ ಇಬ್ಬನಿ ಮೆಲ್ಲ ಮೆಲ್ಲ ಮೆಲ್ಲನೆ ಮರೆಯಾಗಿ ಹೋಗುವ ಹೊತ್ತಿಗೆ ಸರಿಯಾಗಿ ಗುಲಾಬಿಯ ಹುಡುಗ ಬಂದ. ಪೇಸ್ಟ್ ಹಾಕಿದ್ದ ಬ್ರಶ್ಶನ್ನು ಹಾಗೇ ಬಾಯಿಗೆ ತುರುಕಿ, ಜಾರಿದ್ದ ಲುಂಗಿ ಸರಿಮಾಡುತ್ತಲೇ ಬೇಲಿ ದಾಟಿ ಗುಲಾಬಿ ತೋಟಕ್ಕೊಂದು ನೋಟ ಹಾಯಿಸಿದ.
ಮುದ್ದಾದ ಮಗು ನಿದ್ದೆಯಲ್ಲಿರುವಂತೆ ಕಾಣಿಸಿದವು ಗುಲಾಬಿಗಳು ಆತನ ಕಣ್ಣಿಗೆ.....ಇನ್ನೂ ಅರಳದೆ, ಅರೆ ಬಿರಿದ ಎಸಳುಗಳು, ಅದರ ಮೇಲೆ ಮಿನುಗುವ, ಮಾಯವಾಗಲು ತಯಾರಿಯಲ್ಲಿರುವ ಒಂದೊಂದು ಇಬ್ಬನಿ ಬಿಂದು..ಅದೆಷ್ಟು ಪರಿಶುದ್ಧ...
ಆತ ದಿನವೂ ಎದ್ದು ಗುಲಾಬಿಗಳನ್ನು ನೋಡಿ ಮೈಮರೆಯುವುದಿದೆ....
ಅವನ ಕಣ್ಣಿಗೆ ರಾಣಿಯರಂತೆ ಕಂಗೊಳಿಸಿದ ಬಳಿಕವೇ ಈ ಹೂಗಳೆಲ್ಲ ನಗರಕ್ಕೆ ಪ್ರಯಾಣ .ಅಲ್ಲಿ ಕನ್ಯೆಯರ ಮುಡಿಗೇರುವುದು. ಕಾಲೇಜಿಗೆ ಹೋಗುವ ಮೊದಲು ಕೆಲಸದವನ ಜೊತೆ ಸೇರಿ ಹೂಗಳನ್ನೆಲ್ಲ ನೀಟಾಗಿ ಕತ್ತರಿಸಿ ಬುಟ್ಟಿಯಲ್ಲಿ ಮೊಗ್ಗೆಗಳು ಹೊರಗೇ ಕಾಣಿಸುವಂತೆ ಜೋಡಿಸಿ ಊರಿನ ಮೊದಲ ಬಸ್ಸಲ್ಲಿ ಕಳುಹಿಸಿಕೊಡಬೇಕು. ನಗರದಲ್ಲಿ ಲೆಕ್ಕಾಚಾರ ನೋಡಿಕೊಳ್ಳಲು ಗುಲಾಬಿ ದಲ್ಲಾಳಿ, ತಂದೆಯ ಸ್ನೇಹಿತ ಹೇಗಾದರೂ ಇದ್ದಾನೆ. ಲೆಕ್ಕಾಚಾರ ನೋಡಿ ಹುಡುಗನ ತಂದೆಗೆ ಹಣ ಆತನೇ ಕೊಡುತ್ತಾನೆ.
ಇವೆಲ್ಲದರ ಬಗ್ಗೆ ಹುಡುಗನಿಗೇನೂ ಪರಿವೆಯಿಲ್ಲ. ಆತನಿಗೆ ಗುಲಾಬಿಗಳೆಂದರೆ ಇಷ್ಟ ಅಷ್ಟೇ. ಉಳಿದ ಹುಡುಗರಂತೆ ಆತನಿಗೇಕೋ ಹೊರ ಪ್ರಪಂಚದ ಚಿಂತೆ ಇದ್ದಂತಿಲ್ಲ. ಸಿನಿಮಾ, ಹಾಳು ಹರಟೆ, ಏನೂ ಬೇಡ. ಓದಿದರೆ ಓದಿದ...ಬಿಟ್ಟರೆ ಗುಲಾಬಿಗಳ ನಡುವೆ ಬದುಕು ಅಷ್ಟೇ.
'ಓಯ್ ಹುಡುಗಾ ನಾಳೆಗೆ ಸರಿಯಾಗಿ ನಾಲ್ಕು ದಿನ ಕಳೆದಂದು ಡಬ್ಬಲ್ ಗುಲಾಬಿ ಬೇಕು...' ಕಾಲೇಜಿಂದ ಮರಳುತ್ತಿದ್ದ ಹುಡುಗನ ಕಿವಿಗೆ ಧಡೂತಿ ದಲ್ಲಾಳಿಯ ಸ್ವರ ಕೇಳಿತು. ನಮ್ಮಲ್ಲಿಲ್ಲ, ಊರಲ್ಲಿ ಬೇರೆಲ್ಲಾದರೂ ಅಡ್ಜೆಸ್ಟಾಗುತ್ತೋ ನೋಡ್ತೇನಿ ಎಂದ ಹುಡುಗ.
ಓಹ್ ಫೆಬ್ರವರಿ ಇದು ಅನ್ನೋದು ಹುಡುಗನಿಗೆ ಮತ್ತೆ ನೆನಪಾಯಿತು. ಕಾಲೇಜಿನಲ್ಲಿ ಮೊದಲ ವರ್ಷದಲ್ಲಿರುವ ಆತನಿಗೆ ಗುಲಾಬಿ, ಅದರಲ್ಲೂ ಫೆಬ್ರವರಿಯ ಮಹತ್ವ ಚೆನ್ನಾಗಿ ಗೊತ್ತಾಗಿದ್ದು ಒಂದು ವರ್ಷ ಹಿಂದೆ....

******

.....ಅಂದು ರಜಾ ದಿನ...ತಡವಾಗೆದ್ದ ಆತ ನಿಧಾನವಾಗಿ ಗುಲಾಬಿ ತೋಟದಲ್ಲಿ ತಿರುಗಾಡುತ್ತಿದ್ದರೆ ಅಲ್ಲೊಬ್ಬಳು ಎರಡು ಜಡೆಯ ಪೋರಿ ಬೇಲಿ ಹಾರಿ ಬಂದಿದ್ದಳು..ಬಹುಷಃ ಇವನಷ್ಟೇ ಪ್ರಾಯ ಇರಬಹುದೇನೋ...ಅದೆಲ್ಲಾ ಯೋಚಿಸಲಿಲ್ಲ ಹುಡುಗ. ಯಾರನ್ನೂ ಕೇಳದೆ ಬೇಲಿಯೊಳಗೆ ಹಾರಿ ಬಂದು ಹೂ ಕದಿಯುವವರನ್ನು ಕಂಡರೆ ಆತನಿಗೆ ಕೆಟ್ಟ ಕೋಪ.
‘ಯಾರೋ ಹುಡುಗ ಬಂದ, ಬಾರೇ ಬೇಗ...’ ರಸ್ತೆಯಲ್ಲಿ ಇದ್ದ ಜೀಪಲ್ಲಿ ಕುಳಿತ ವ್ಯಕ್ತಿ ತಂದೆಯಾಗಿರಬಹುದು.. ಕರೆಯುತ್ತಿದ್ದ ಪೋರಿಯನ್ನು. ..ಹೂ ಕದಿಯುವುದನ್ನು ಹುಡುಗ ನೋಡಿದ ಕಸಿವಿಸಿ, ತಂದೆ ಕರೆದ ಅರ್ಜೆಂಟಲ್ಲಿ ಇನ್ನೂ ಹೂ ಕೊಯ್ಯದೆ ಹುಡುಕುತ್ತಲೇ ಇದ್ದ ಪೋರಿ ಗಾಬರಿಯಲ್ಲಿ ಬೇಲಿ ಹಾರಲು ಹೋಗಿ ಬಿದ್ದೇ ಬಿಟ್ಟಳು..
ಸಿಟ್ಟಿನಿಂದ ಬೈಯುತ್ತಲೇ ಆಕೆ ಬಿದ್ದತ್ತ ಧಾವಿಸಿದ ಹುಡುಗ..ಬಿದ್ದಾಗ ಕೈ, ಮೊಣಕಾಲಿಗೆ ಆದ ಗಾಯದ ನೋವು ಅದಕ್ಕೆ ಉಪ್ಪು ಸವರಿದಂತೆ, ಹುಡುಗ ನೋಡಿದ್ದೂ ಆಗಿ ಪೋರಿ ಅತ್ತಿದ್ದೇ ಅತ್ತಿದ್ದು...
ಗುಲಾಬಿ ಹುಡುಗ ಸ್ತಬ್ದ. ಎರಡು ಜಡೆಯ ಪೋರಿಯ ಮೇಲೆ ಸಿಟ್ಟೇನೋ ಇತ್ತು. ಆದರೆ, ಆಕೆ ಬಿದ್ದದ್ದು, ಆಕೆಗಾದ ಗಾಯ, ತಾನು ನೋಡಿದ್ದಕ್ಕೆ ಮಾನ ಹೋದಂತೆ ಅವಳು ನಾಚಿದ್ದು ಎಲ್ಲವನ್ನೂ ನೋಡಿ ಮಾತು ಆಡುವುದು ಸಾಧ್ಯವಾಗಲಿಲ್ಲ..
ಬೇಡ ಬೇಡ ಎಂದರೂ ಕೇಳದೆ ಹೋದೆ, ಈಗ ಬಿದ್ದು ಯುನಿಫಾರಂ ಹಾಳು ಮಾಡಿಕೊಂಡೆ, ಇನ್ನು ಕಾನ್ವೆಂಟಿಗೆ ಹೋಗೋದು ಹ್ಯಾಗೆ? ಬೈಯುತ್ತಲೇ ಆಕೆಯನ್ನೆತ್ತಿ ಕರೆದೊಯ್ದ ತಂದೆ...
ಅಂದು ಮೊದಲ ಬಾರಿಗೆ ಹುಡುಗ ನಿದ್ರಿಸಲಿಲ್ಲ. ಗುಲಾಬಿ ಸಿಗದ ನಿರಾಸೆ, ಬಿದ್ದ ಏಟಿನ ನೋವು ತುಂಬಿದ್ದ ಪೋರಿಯ ಕಂಗಳೇ ಮುಖದ ಮುಂದೆ...
ಮರುದಿನ ಅದೇ ರಸ್ತೆಯ ತಿರುವಿನಲ್ಲಿ ನಿಂತ. ಹೋಗುವಾಗ ನಾಲ್ಕು ಚೆಂಗುಲಾಬಿ ಮೊಗ್ಗೆಗಳನ್ನೂ ಹಿಡಿದುಕೊಂಡ. ಧೂಳೆಬ್ಬಿಸುತ್ತಾ ಬಂತು ಜೀಪು. ಮುಂದಿನ ಸೀಟಲ್ಲೇ ಇದ್ದಳು ಮುಖ ಊದಿಸಿಕೊಂಡಿದ್ದ ಪೋರಿ. ಜೀಪಿಗೆ ಕೈತೋರಿಸಿದ ಹುಡುಗ. ಏನು ಎಂಬಂತೆ ತಲೆಯಾಡಿಸಿದ ಪೋರಿಯ ತಂದೆ. ಬೆನ್ನ ಹಿಂದೆ ಅಡಗಿಸಿದ್ದ ಮೊಗ್ಗೆಗಳನ್ನು ಎತ್ತಿ ಪೋರಿಯ ಕೈಯಲ್ಲಿರಿಸಿದ.
ಛಟೀರ್‍ ಎಂದು ಕೆನ್ನೆ ಮೇಲೆ ಏಟು ಬಿತ್ತು. ‘ಏನೋ ನಿನ್ನೆ ಗುಲಾಬಿ ಕೇಳಲು ಬಂದೆ ಎಂದರೆ ನಸೆ ಹಿಡಿದು ನನ್ನೆದುರೇ ಮಗಳಿಗೆ ಗುಲಾಬಿ ಕೊಡ್ತೀಯಾ?’
ತಿರುಗಿಸಿದ್ದ ಮುಖ ಈಚೆ ತಿರುಗುವಾಗ ಜೀಪು ಧೂಳೆಬ್ಬಿಸುತ್ತಾ ಹೋಗಿಯಾಗಿತ್ತು.
ಮತ್ತೆ ಅಂತಹ ಕೆಲಸಕ್ಕೆ ಕೈ ಹಾಕಲಿಲ್ಲ ಹುಡುಗ. ಆದರೆ ಪೋರಿಯ ನೋವಿನ ಮುಖ ಮಾತ್ರ ಮರೆಯಲಾಗಲಿಲ್ಲ. ಆಕೆ ನೆರೆಯೂರಿನ ದೊಡ್ಡವರ ಮಗಳೆಂದೂ ಕಾನ್ವೆಂಟಿಗೆ ಹೋಗುತ್ತಾಳೆ ಎನ್ನುವುದಷ್ಟೇ ಕ್ಲಾಸಿನಲ್ಲಿ ಗೆಳೆಯರಿಂದ ಗೊತ್ತಾಗಿತ್ತು. ಒಂದು ದಿನ ಎಂದಿನಂತೆ ಬೆಳಗ್ಗೆ ಹೂ ಕೊಯ್ಯುತ್ತಿದ್ದ. ಕೆಲಸದಾತ ಮನೆಯಿಂದ ಇನ್ನೂ ಬಂದಿರಲಿಲ್ಲ.
'ಹೂ ಕೊಡ್ತಿಯಾ?' ಮೆಲು ದನಿ ಹಿಂದಿನಿಂದ!
ಹುಡುಗ ತಟಕ್ಕನೆ ಹಿಂದೆ ತಿರುಗಿದರೆ ಗುಲಾಬಿ ಕಳ್ಳಿ. ಅದೇ ಎರಡು ಜಡೆಯ ಪೋರಿ. ಈಗ ಕಣ್ಣಲ್ಲಿ ನೋವಿಲ್ಲ. ಬದಲಿಗೆ ತುಂಟ ನಗೆ. ಕೈಯಲ್ಲಿದ್ದ ಅಷ್ಟೂ ಗುಲಾಬಿ ಮೊಗ್ಗೆಗಳನ್ನು ಅವಳಿಗೆ ಕೊಟ್ಟು ಬಿಟ್ಟ ಹುಡುಗ.
ಥಟ್ಟನೆ ಬಳಿ ಬಂದು ಹುಡುಗನ ಕಾಲರ್‍ ಎಳೆದು ಕೆನ್ನೆ ಮೇಲೆ ಉಮ್ಮ ಎಂದು ತುಟಿಯೊತ್ತಿ, ತಿರುಗಿ ನೋಡದೆ ಓಡಿ ಮರೆಯಾಗೇ ಬಿಟ್ಟಳು! ಪಾಂಡ್ಸ್ ಪೌಡರ್‍ ಆಕೆಯ ಮೊಗದಿಂದ ಒಂದಷ್ಟು ಇವನ ಮುಖಕ್ಕೂ ಅಂಟಿಕೊಂಡಿತು. ಅದರ ಪರಿಮಳ ಖುಷಿಯಾಯ್ತು.
ಆಗ ಆದ ರೋಮಾಂಚನದ ನೆನಪು ಹುಡುಗನಿಗೆ ಮರೆಯಾಗುವ ವರೆಗೂ ಗುಲಾಬಿ ಕಳ್ಳಿ ಕಾಣಲೇ ಇಲ್ಲ. ಮತ್ತೆಂದು ಅಲ್ಲಿಗೆ ಬರಲೇ ಇಲ್ಲ.
ಆಕೆ ಕಾಲೇಜಿಗೆಂದು ದೊಡ್ಡ ಪಟ್ಟಣಕ್ಕೆ ಹೋಗಿದ್ದು ಕ್ಲಾಸಿನ ಗೆಳೆಯರಿಂದ ತಿಳಿಯಿತು.
ಮತ್ತೆ ಆಕೆ ಮರಳಲೇ ಇಲ್ಲ। ತೋಟದ ಗುಲಾಬಿಗಳು ಮಾತ್ರ ಗುಲಾಬಿ ಹುಡುಗನೊಂದಿಗೆ ಆಕೆ ಬರಲಿ ಗುಲಾಬಿ ಕದಿಯಲಿ ಎಂಬಂತೆ ಕಾಯುತ್ತಿದ್ದವು.....
********
....ಈಗ ವರ್ಷದಿಂದೀಚೆಗೆ ಹುಡುಗ ಕಾಯುತ್ತಿಲ್ಲ. ಪೋರಿಯೂ ಬಂದಿಲ್ಲ. ಆದರೂ ತೋಟದಲ್ಲಿ ಒಮ್ಮೊಮ್ಮೆ ಹುಡುಗನ ಕೆನ್ನೆ ತೇವಗೊಂಡಂತೆ, ಪಾಂಡ್ಸ್ ಪೌಡರ್ ಘಮಲು ಹರಡಿದಂತೆ ಅನ್ನಿಸುತ್ತದೆ!

7.2.08

ಒಂದಿಷ್ಟು ಬಡಬಡಿಕೆ...

ಭುವಿತುಂಬ ಎದ್ದ
ಉರಿ ಧಗೆಗೆ
ಮುಗಿಲು ಹನಿ ಸುರಿಸುತ್ತಿಲ್ಲ,
ಮೋಡ ಬಿತ್ತನೆಯಾಗಬೇಕು!

ನಿನ್ನ ಕಂಗಳ ಅಯಸ್ಕಾಂತಕ್ಕೆ
ಸಿಲುಕಿದ
ನೇತ್ರದ ನಗೆ
ಇದ್ದಲ್ಲೇ ವಿಗ್ರಹವಾಗೆ
ಕಣ್ಣಸನ್ನೆಗೆ ಮಾವು ಹೂಮಳೆ
ಗರೆಯಬೇಕು

ಮಾತೇ ಆಡದೆ
ಮನದೊಳಗೆ ನುಗ್ಗಿ
ಗುಟ್ಟು ಹೇಳಿ
ಹೋಗುವ ನಿನ್ನ
ಬಿಸಿಯುಸಿರಿನಲ್ಲಿ
ನನ್ನ ಕನಸುಗಳು
ಕಾವು ಪಡೆಯಬೇಕು!

3.2.08

ಚಕೋರ ಹಕ್ಕಿಯೂ, ಅವಳ ಮೌನವೂ

ಮನೆಮಾಡಿನ ಮೂಲೆ
ಹೆಂಚಿನ ಮೇಲೆ
ಚಂದ್ರನಿಲ್ಲದ ರಾತ್ರಿ ಕುಳಿತ
ಚಕೋರ ಹಕ್ಕಿ
ಬೇಸರದಿಂದ ರೋದಿಸುವಾಗ
ಕಡುನೀಲಿ ಕತ್ತಲಿನಲ್ಲೊಂದು
ನಕ್ಷತ್ರ ಮಿನುಗಿ
ಬೆಳಕುಕೊಟ್ಟಿತು!



**************

ಅವಳ ಸಿಡುಕು ಮುಖ
ಮಡುಗಟ್ಟಿದ ಮೌನದ ಹಿಂದಿನ
ಅರ್ಥ ಹುಡುಕಲು
ಹೋದಾಗ
ಹುಟ್ಟಿಕೊಂಡ ಸಹಸ್ರಾರು
ಅರ್ಥಗಳು
ಬ್ರಹ್ಮರಕ್ಕಸರಂತೆ
ಆಕಳಿಸಿಬಿಟ್ಟವು
ಕಂಗೆಡಿಸಿಬಿಟ್ಟವು
Related Posts Plugin for WordPress, Blogger...