30.3.07

ವೈಶಾಖದ ಕನವರಿಕೆ

ನೆತ್ತಿ ಸುಡುವ ಬಿಸಿಲು
ಕಣ್ಣಮುಂದೆ ಕತ್ತಲು
ಬೆವರೇ ತುಂಬಿದ
ಒದ್ದೆ ಅಂಟಂಟು ಮೈ

ತಣ್ಣನೆ ಗಾಳಿಯ
ಸಿಂಚನಕ್ಕೆ ಕಾತರ
ಅದಿಲ್ಲದಿದ್ದರೂ
ಗೆಳತಿ......
ಕನಿಷ್ಠ ತೋರು
ನಿನ್ನ
ಮುಗುಳುನಗೆಯ ಪಂಜರ!

25.3.07

ಏಕೆ ಹೀಗಾಯ್ತೋ....

ನಸುಗಳು ನುಚ್ಚುನೂರು.....
ಇಂಥ ಸೋಲು ಭಾರತಕ್ಕೆ ಬಂದೀತು ಎನ್ನುವುದು ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಖಂಡಿತ ನಿರೀಕ್ಷಿಸಿರಲಿಲ್ಲ.
ಭಾರತ ಈ ಬಾರಿಯ ವಿಶ್ವಕಪ್ ಎತ್ತುವ ಫೇವರಿಟ್ ತಂಡಗಳಲ್ಲೊಂದು ಎಂಬುದು ಅನೇಕ ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿತ್ತು. ಆದರೆ ಅಭಿಮಾನಿಗಳಿಗೆ ವಿಶ್ವಕಪ್ ಗೆಲ್ಲಬೇಕೆಂದಿರಲಿಲ್ಲ. ಭಾರತದಂತಹ ಶ್ರೇಷ್ಠ (ಪುಸ್ತಕದಲ್ಲಾದರೂ) ತಂಡ ಕನಿಷ್ಠ ಸೂಪರ್ 8ಕ್ಕಾದರೂ ಪ್ರವೇಶಿಸಿ ಉತ್ತಮ ಪ್ರದರ್ಶನ ತೋರಿಸಬಹುದು ಎಂಬ ಕಾತರವಿತ್ತು. ಧೋನಿ, ಯುವಿಯ ಪವರ್‍ಫುಲ್ ಹೊಡೆತ, ತೆಂಡುಲ್ಕರ್‍, ಗಂಗೂಲಿಯ ತೋಳ್ಬಲ, ಜಹೀರ್‍, ಮುನಾಫ್‌ನ ಬೌಲಿಂಗ್ ಕರಾಮತ್ತು ನೋಡುವ ಆಸೆಯಿತ್ತು.
ನಿಜ, ಭಾರತ ತಂಡದಲ್ಲಿ ದಾಖಲೆಯ ಮೇಲೆ ದಾಖಲೆ ಕಟ್ಟಿದ ವೀರರು, ಮುನ್ನೂರಕ್ಕೂ ಹೆಚ್ಚು ಆಟವಾಡಿದ ಅನುಭವಿಗಳು, ಹೊಡೆಬಡಿಯ ದಾಂಡಿಗರು, ಗೋಡೆ, ದಡಸೇರಿಸುವ 'ದೋಣಿ' ಇದ್ದಾಗ ಅಭಿಮಾನಿಗಳು ಇಷ್ಟನ್ನಾದರೂ ನಿರೀಕ್ಷಿಸಿದ್ದರಲ್ಲಿ ತಪ್ಪಿಲ್ಲ. ಆದರೆ ಅಭಿಮಾನ, ನಿರೀಕ್ಷೆಯ ಸೀಮೆ ದಾಟಿ, ನಾವೇ ಪೂಜಿಸಿ, ಹೊಗಳಿ ಅಟ್ಟಕ್ಕೇರಿಸಿದ, ದೇವಾಂಶಸಂಭೂತರಂತೆ ಕಂಡು, ಎರಡು ಸೋಲು ಕಂಡಾಕ್ಷಣ ಅವರ ಮನೆ, ಹೊಟೇಲ್‌ ಮೇಲೆ ದಾಳಿ ನಡೆಸಿದರೆ? ಆಟಗಾರನೊಬ್ಬ ದೂರದ ತನ್ನ ಮನೆ ಮೇಲೆ ಕಲ್ಲು ಬೀಳುತ್ತಿರುವಾಗ ಆಟದ ಮೇಲೆ ಗಮನ ಕೊಡುವುದು ಎಷ್ಟರ ಮಟ್ಟಿಗೆ ಸಾಧ್ಯ?
ಅಭಿಮಾನಿಗಳ ಭಾವನೆ ಸ್ಫೋಟಗೊಂಡಾಗ ಅದನ್ನು ತಡೆಯುವುದು ಸಾಧ್ಯವೇ ಇಲ್ಲ. ಆದರೆ ಕ್ರಿಕೆಟ್ಟನ್ನು ಕೇವಲ ಇತರ ಕ್ರೀಡೆಯ ಹಾಗೆ ಕಂಡು ಉಬ್ಬದೆ, ಕುಗ್ಗದೆ ಇರಲು ನಾವೇಕೆ ಪ್ರಯತ್ನಿಸಬಾರದು?
ಇನ್ನು ಫಿಕ್ಸಿಂಗ್ ವಿಷಯ, ಮ್ಯಾಚ್ ಸೋತ ಕೂಡಲೇ ಇದು ಫಿಕ್ಸಿಂಗ್ ಎಂದು ಗೂಬೆ ಕೂರಿಸುವುದು ನಮ್ಮ ಚಾಳಿ. ಗೆಳೆಯರೇ, ದ್ರಾವಿಡ್ ಮುಖ, ತೆಂಡುಲ್ಕರ್‍ ಮುಖ ಒಮ್ಮೆ ನೋಡಿ. ಕಪ್ಪು ಸುರಿವ ಈ ಮುಖಗಳಲ್ಲಿ ಕವಿದ ಚಿಂತೆಯ ಕಾರ್ಮೋಡ ನೋಡಿದರೆ ಫಿಕ್ಸಿಂಗ್ ಎಂದು ಅನ್ನಿಸುತ್ತಿದೆಯೇ?
ಇಡೀ ಭಾರತ ನಿದ್ದೆಗೆಟ್ಟು ನಿಮ್ಮನ್ನು ನೋಡುತ್ತಿರುವಾಗ ಶುಭಹಾರೈಕೆಗಳ ಮಹಾಪೂರ ಹರಿಯುತ್ತಿರುವಾಗ ಯಾರಾದರೂ ಕೆಲ ಕೋಟಿಗಳಿಗೆ ತಮ್ಮನ್ನು ಮಾರಿಕೊಳ್ಳಲಿಕ್ಕಿಲ್ಲ ಎನ್ನುವುದು ನನ್ನ ಅನಿಸಿಕೆ. ನಿಮ್ಮದು?
Related Posts Plugin for WordPress, Blogger...