9.8.16

ಆಗುಂಬೆಗೊಂದು ಸೈಕಲ್ ಸವಾರಿ

ಮುಂಗಾರು ಮಳೆ ಶುರುವಾದ ಬಳಿಕ ಸೈಕಲ್ ತೆಪ್ಪಗೆ ಬದಿಯಲ್ಲಿ ಮಲಗಿತ್ತು...ಹಾಗೇ ನಾನೂ....

ಕಳೆದ ಎರಡ್ಮೂರು ತಿಂಗಳಿಂದ ಭೋರಿಡುವ ಮಳೆಯಲ್ಲಿ ತೋಯುತ್ತಾ ಸೈಕಲ್ ಮಾಡುವ ಆಸೆಯಿದ್ದರೂ ವಿವಿಧ ಕಾರಣಗಳಿಂದ ಎಲ್ಲೂ ದೂರ ಹೋಗಲಾಗಿರಲಿಲ್ಲ. ಕಳೆದ ಬೇಸಿಗೆಯಲ್ಲೇ ಚಿನ್ಮಯ ದೇಲಂಪಾಡಿ ಮಾನ್ಸೂನ್ ಸವಾರಿ ಹೋಗಲೇಬೇಕು ಎಂದು ಹಕ್ಕೊತ್ತಾಯ ಮಾಡಿದ್ದೂ ಆಗಿತ್ತು..

ನಮ್ಮ ಯಾವತ್ತಿನ ಸೈಕಲ್ ಗುರು ಅಶೋಕವರ್ಧನರು ಕೌಟುಂಬಿಕ `ನಿರೀಕ್ಷಣಾ' ಕಾರಣಕ್ಕಾಗಿ ಈ ಬಾರಿ ನಾನಿಲ್ಲ, ನೀವು ಹೋಗಿಬನ್ನಿ ಎಂದು ಬಿಟ್ಟರು, ನಾನು ಬರುವೆ ಎಂದು ಮೊದಲು ಹೇಳಿದ್ದ ಅಭಿ ಭಟ್ ಕೂಡಾ ಕಾರ್ಯದೊತ್ತಡಕ್ಕೆ ಮಣಿದು ಸರಿಯಾಗಿ ಅಭ್ಯಾಸ ಮಾಡಲಾಗದೆ ಕೈಚೆಲ್ಲಿದ.

ಉಳಿದದ್ದು ಚಿನ್ಮಯ ಹಾಗೂ ನಾನು ಮಾತ್ರ. ಸೋಮೇಶ್ವರದಿಂದ ಎತ್ತರಕ್ಕೇರಿ ಆಗುಂಬೆ ತಲಪುವುದು ಎಂದರೆ ಸಮುದ್ರಮಟ್ಟದಿಂದ 11 ಕಿ.ಮೀ ಭಾಗವನ್ನು ಏರಲು ಸುಮಾರು 800 ಮೀಟರ್ ಔನ್ನತ್ಯ ಸಾಧಿಸಬೇಕು. ಈ ಮೊದಲು ಕುದುರೆಮುಖ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಇದಕ್ಕಿಂತ ಹೆಚ್ಚಿನ ಎತ್ತರವೇರಿದ ಅನುಭವ ಕಾಲುಗಳಿಗಿತ್ತಾದರೂ ಇತ್ತೀಚೆಗೆ ಎರಡು ತಿಂಗಳಿಂದ ಸ್ನಾಯುಗಳು ವಿಶ್ರಾಂತಿಯಲ್ಲಿದ್ದ ಭೀತಿ ಮಾತ್ರ ಇದ್ದೇ ಇತ್ತು. ಬೈಕಲ್ಲೋ ಕಾರಲ್ಲೋ ಆದರೆ ಪೆಟ್ರೋಲ್ ತುಂಬಿ ಗಿಯರು ಹಾಕಿ ಆಕ್ಸಿಲೇಟರ್ ಒತ್ತಿದರೆ ಬೇಕಾದಲ್ಲಿ ತಲಪುತ್ತದೆ. ಸೈಕಲ್ ನಲ್ಲಿ ಮಾತ್ರ ಹಾಗಲ್ಲ, ದೂರ ಸವಾರಿಗೆ ನಮ್ಮ ದೇಹ ಸಿದ್ಧವಿಲ್ಲವಾದರೆ ಸ್ನಾಯು ಸೆಳೆತವೋ, ವಿಪರೀತ ಆಯಾಸವೋ ಆಗಿ ಅರ್ಧಕ್ಕೇ ಪ್ರಯಾಣ ಕೈಬಿಡಬೇಕಾಗಿ ಬರುವುದುಂಟು.
ಅದೋ ಅಲ್ಲಿ ಆಗುಂಬೆ
ಒಂದೆರಡು ಬಾರಿ ಮನೆ ಹತ್ತಿರದಲ್ಲೇ ರೈಡ್ ಮಾಡಿ ಬಂದದ್ದಷ್ಟೇ ನನ್ನ ಈ ಬಾರಿಯ ತಯಾರಿ. ಚಿನ್ಮಯನೂ ಹೆಚ್ಚೇನೂ ತಯಾರಿ ಮಾಡಿರಲಿಲ್ಲ. ಸಮಯದ ಅಭಾವ ಇದ್ದಕಾರಣ ಮಣಿಪಾಲ ವರೆಗೆ ಸೈಕಲ್ಗಳನ್ನು ಕಾರಿನಲ್ಲೇರಿಸಿಕೊಂಡು ಹೋಗಿ ಶನಿವಾರ ರಾತ್ರಿ ಅಲ್ಲಿದ್ದು ಭಾನುವಾರ ಮುಂಜಾನೆ ಸೈಕಲ್ಲೇರುವುದು ನಮ್ಮ ಯೋಜನೆ. ಅದರಂತೆಯೇ ಭಾನುವಾರ ನಸುಕು ಹರಿಯುವ ವೇಳೆಗೆ ನಮ್ಮಿಬ್ಬರ ಸವಾರಿ ಮಣಿಪಾಲ ಬಿಟ್ಟಿತು. ಹದವಾದ ಮಳೆಯಿಂದ ಇಳೆ ತಂಪಾಗಿತ್ತು. ಖಾಲಿ ಹೊಟ್ಟೆಯಲ್ಲಿ ಸೈಕಲ್ ತುಳಿಯಬಾರದು, ಹಾಗಾಗಿ ಹೊಟೇಲೊಂದರಲ್ಲಿ ಹಗುರ ತಿಂಡಿ, ಚಹಾ ಸೇವಿಸಿ ಮುಂದುವರಿದೆವು.

ಅರಣ್ಯಭಂಗ
ಪೆರ್ಡೂರು ಭಾಗವಾಗಿ ಹೋಗುವಾಗ ಇಕ್ಕೆಲಗಳಲ್ಲು ತಂಪು ನೀಡುತ್ತಿದ್ದ ಮರಗಳೆಲ್ಲಾ ಧರಾಶಾಯಿಯಾಗಿ ಬಿದ್ದಿರುವುದು ಕಂಡುಬಂತು! ಕೆಲದಿನಗಳ ಹಿಂದೆ ಬಂದ ಭಾರೀ ಸುಂಟರಗಾಳಿಯ ಪ್ರಭಾವದಿಂದ ಈ ಗತಿ. ಅತೀವ ಬೇಸರ ತರುವ ದೃಶ್ಯವನ್ನು ನೋಡುತ್ತಾ ಮುಂದುವರಿದೆವು. ಕೆಲಹೊತ್ತಿನಲ್ಲೇ ಹೆಬ್ರಿ ತಲಪಿದೆವು. ಸೋಮೇಶ್ವರದಲ್ಲಿ ನಮ್ಮ ಉದರ ತುಂಬುವ ಯೋಜನೆ ಮೊದಲಿದ್ದರೂ, ಬಳಿಕ ಘಾಟಿಯೇರುವಾಗ ತೊಂದರೆ ಬೇಡವೆಂದು ಹೆಬ್ರಿಯಲ್ಲೇ ಸೇಮಿಗೆ, ನೀರುದೋಸೆ ತಿಂದು ಮುಂದುವರಿದೆವು. ಚೆನ್ನಾಗಿ ಸೈಕಲ್ ಹಾಗೂ ನಮ್ಮ ಕಾಲುಗಳ ಹೊಂದಾಣಿಕೆಯಾಗಿ ಮೈಬಿಸಿಯೇರಿದ್ದರಿಂದ ಸೋಮೇಶ್ವರದಲ್ಲಿ ಹೆಚ್ಚು ಸಮಯ ವ್ಯರ್ಥಗೊಳಿಸದೆ ನೇರವಾಗಿ ಮಿಶನ್ ಆಗುಂಬೆ ಶುರುವಿಟ್ಟೆವು.
ಪೆರ್ಡೂರು ಸಮೀಪ ಧರಾಶಾಯಿಯಾದ ಮರಗಳು

ಮೊದಲ ಚರಣದಲ್ಲಿ ಸುಂದರ ರಸ್ತೆ ನಮ್ಮ ನೆರವಿಗೆ ಬಂತು. ಏರು ದಾರಿಯಾದ್ದರಿಂದ ಸುಲಭ ಗಿಯರ್ ಹಾಕಿ ಪೆಡಲುತ್ತಾ ಸಾಗುತ್ತಿದ್ದರೆ ಫೋರ್ ವೀಲ್ ಡ್ರೈವಿನ ಎಸ್ ಯೂ ವಿ ವಾಲಾಗಳು ನಮ್ಮನ್ನು ಅನುಕಂಪದಿಂದಲೋ ಹೀಯಾಳಿಕೆಯಿಂದಲೂ ನೋಡುತ್ತಾ ಸಾಗುತ್ತಿದ್ದರು. ಬದಿಯಲ್ಲೊಂದು ಮಳೆಗಾಲದ ವಿಶೇಷ ಕಿರು ಜಲಧಾರೆ ಕಣ್ತುಂಬಿಕೊಳ್ಳುವುದಕ್ಕೆಂದು ನಿಲ್ಲಿಸಿ ಎರಡು ಫೊಟೊ ತೆಗೆದಾಗಿತ್ತು. ಅಷ್ಟೊತ್ತಿಗೆ ಮಳೆ ಜೋರು.ಉದ್ದೇಶದಂತೆಯೇ ಮಳೆಯಲ್ಲೇ ನೆನೆಯುತ್ತಾ ಒಂದೊಂದೇ ಹಿಮ್ಮುರಿ ತಿರುವುಗಳಲ್ಲಿ ಉಸ್ಸಪ್ಪಾ ಮಾಡುತ್ತಾ ಏರಿದೆವು. ಕುದುರೆಮುಖ ಏರಿನಲ್ಲಾದರೆ ನೇರವಾಗಿ ಏರುತ್ತಾ ಸಣ್ಣ ತಿರುವುಗಳಲ್ಲಿ ಸಾಗಬೇಕು, ಆದರೆ ಆಗುಂಬೆಯಲ್ಲಿ ಸೈಕ್ಲಿಸ್ಟ್ ಗಳಿಗೆ ಸವಾಲು ದೊಡ್ಡ ಹಿಮ್ಮುರಿ ತಿರುವುಗಳು.
ಹಿಮ್ಮುರಿ ತಿರುವೊಂದರಲ್ಲಿ

ಮಳೆಗಾಲದಲ್ಲಿ ಆಗುಂಬೆಯಲ್ಲಿ ಇಂತಹ ದೃಶ್ಯ ಸಾಮಾನ್ಯ

ಮಂಜಿನಲ್ಲಿ ಘಾಟಿಯೇರುವ ಮಜಾ

ಸೈಕಲ್ ತುಳಿಯುತ್ತಾ ಏರುದಾರಿಗೆ ಕಾಲುಗಳು ಹೊಂದಾಣಿಕೆ ಮಾಡಿಕೊಂಡವು ಎನ್ನುವಷ್ಟರಲ್ಲೇ ಸಿಗುವ ಹಿಮ್ಮುರಿ ತಿರುವು ಒಮ್ಮೆಗೇ ಬ್ರೇಕ್ ಹಾಕುತ್ತದೆ. ಮತ್ತೆ ಕಾಲುಗಳಿಗೆ ಒತ್ತಡ ಹೆಚ್ಚು. ಇದರಲ್ಲೇ ನಮ್ಮ ಲಯವನ್ನು ಕಾಯ್ದುಕೊಂಡು ಹೋಗುವುದು ಸೈಕಲ್ ಸವಾರನ ಚಾಕಚಕ್ಯತೆಯ ನಿಜ ಪರೀಕ್ಷೆ.
ಮೊದಲ ಮೂರ್ನಾಲ್ಕು ತಿರುವು ಕಳೆದ ಬಳಿಕ ಆಗುಂಬೆಯ ಹಳೆಯ ರಸ್ತೆಯೇ ಗತಿ! ಒಡಕಲು ಕಾಂಕ್ರೀಟ್ ರಸ್ತೆಯಲ್ಲಿ ಗಡ ಗಡ ಸವಾರಿ. ಮೇಲೇರುತ್ತಿದ್ದಂತೆಯೇ ಆಗುಂಬೆಯ ಮಂಜು ದರ್ಶನ. ಸೈಕಲ್ ಮುಂದೆ `ತಲೆದೀಪ' ಹಾಗೂ ಹಿಂದೆ `ಬಾಲದೀಪ' ಮಿನುಗಿಸುತ್ತಿದ್ದೆವು, ಇಲ್ಲವಾದರೆ ಮಂಜಿನ ನಡುವೆ ವೇಗವಾಗಿ ಬರುವ ವಾಹನಗಳಿಗೆ ನಾವು ಸುಲಭ ತುತ್ತು. ಆಗುಂಬೆಯ ಸೂ ರ್ಯಯಾಸ್ತ ಸವಿಯಲು ಕಟ್ಟಿಸಿರುವ ವೀಕ್ಷಣಾ ತಾಣ ಪೂರ್ತಿ ಮಂಜುಮಯ. ನಮ್ಮ ಆಗಮನ ಸಾಕ್ಷೀಕರಿಸಲು ಅಲ್ಲೊಂದು ಫೊಟೊ ಕ್ಲಿಕ್ಕಿಸಿ ಮುಂದುವರಿದೆವು.

ಅಲ್ಲೊಂದಿಷ್ಟ್ ಜನಾ...
ಜಿಲ್ಲಾ ಗಡಿಯಲ್ಲಿರುವ ತಪಾಸಣಾ ಠಾಣೆ ದಾಟಿ ಮುಂದುವರಿದಾಗ ಅರರೆ....ದೂರದಲ್ಲಿ ಬದಿಯಲ್ಲಿ ಕೆಂಪು ಬಿಳಿ ಪುಟ್ಟ ದೀಪಗಳು ಮಿನುಗುತ್ತಿವೆ...ನೋಡಿದರೆ ನಮ್ಮ ಹಾಗೆಯೇ ಮೂವರು ಸೈಕಲ್ ಸವಾರರು. ಹೋಗಿ ಮಾತನಾಡಿದಾಗ ಅವರು ಬೆಂಗಳೂರಿನವರೆಂದೂ, ಹೊರನಾಡಿಗೆ ಬಸ್ಸಲ್ಲಿ ಸೈಕಲ್ ತುಂಬಿಕೊಂಡು ಬಂದು, ಅಲ್ಲಿಂದ ಆಗುಂಬೆಗೆ ಬಂದವರೆಂದೂ ತಿಳಿಯಿತು. ಅರೆಕನ್ನಡದಲ್ಲಿ ಮಾತನಾಡಿದ ಅಖಿಲೇಶ್, ಅಜಯ್ ಹಾಗೂ ಶ್ರೀವಿಜಯರಿಗೆ ವಿದಾಯ ಹೇಳಿ ನಾವು ಮುಂದುವರಿದೆವು.
ಬೆಂಗಳೂರಿನ ಸೈಕಲ್ಲಿಗರೊಂದಿಗೆ ಆಗುಂಬೆಯಲ್ಲಿ
ಸೋಮೇಶ್ವರ ವ್ಯಾಪ್ತಿ ಮುಗಿದು ಔéಷಧವನ ದಾಟಿ ಮುಂದೆ ಹೋದಾಗ ಬಲಬದಿಯಲ್ಲಿ ಮಣ್ಣು ರಸ್ತೆಯೊಂದು ಹೋಗುತ್ತಿದ್ದುದು ಕಂಡಿತು ಒಳಗೆ ಸುಂದರ ಹುಲ್ಲುಗಾವಲು ಕಾಣಿಸಿತು, ಇರಲಿ ಹಿಂದೆ ಬರುವಾಗ ಪೊಟೊ ತೆಗೆದರಾಯ್ತು ಎಂದು ಮುಂದುವರಿದೆವು. ಅಂತೂ ಆಗುಂಬೆ ಬಂತು. ಹೊಟ್ಟೆ ತಾಳ ಹಾಗುತ್ತಿತ್ತು, ಹಾಗಾಗಿ ಮಯೂರ ಹೊಟೇಲಲ್ಲಿ ಉದರ ಪೋಷಣೆ ಮಾಡಿದೆವು. ಹೊರಗೆ ಸೋನೆಮಳೆ ಸುರಿಯುತ್ತಲೇ ಇತ್ತು. ಮತ್ತೆ ಆಗುಂಬೆಯಲ್ಲೇ ಒಂದು ರೌಂಡ್ ಹೊಡೆದು ಊರು ದರ್ಶನ ಮಾಡಿಕೊಂಡು ಮೊದಲೇ ನೋಡಿದ್ದ ಹುಲ್ಲುಗಾವಲಲ್ಲಿ ಫೊಟೋಶೂಟ್ ಮಾಡುವ ಎಂದು ಹೊರಟಾಗ ಮಳೆ ಜೋರಾಯಿತು.
ಆಗುಂಬೆ ದೃಶ್ಯಾವಳಿ - 1

ಆಗುಂಬೆ ದೃಶ್ಯಾವಳಿ - 2
 ಆಗುಂಬೆಯ ಸಾಂಪ್ರದಾಯಿಕ ಹಳೆಯ ಹೆಂಚಿನ ಮನೆಗಳು ಮಂಜು ಸುರಿಯುವಾಗ ಕಟ್ಟಿಕೊಡುವ ದೃಶ್ಯಾವಳಿ ಕಲಾವಿದರು, ಆ ಮನಸ್ಸಿನವರೆಲ್ಲರಿಗೂ ಸ್ಫೂರ್ತಿ. ಅದನ್ನು ಪದಗಳಿಂದ ಕಟ್ಟಿಡಲೂ ಆಗದು. ಅಂತಹ ಒಂದು ಮನೆಯ ಮುಂಗಟ್ಟಿನ ಅಡಿಯಲ್ಲಿ ತಾತ್ಕಾಲಿಕ ಆಸರೆ ಪಡೆದು ಮಳೆ ತುಸು ಹಗುರವಾದಂತೆಯೇ ಮುಂದ್ಹೋದೆವು.
ಎರಡು ಮೆರಿಡಾಗಳು

ನೋಡಿದೆನು ನಾ... ನೋಡಿದೆನು ನಾ ...
ಅದೇ ಹುಲ್ಲುಗಾವಲು ಅಂದೆನಲ್ಲಾ, ಅದೇ ದಾರಿಯತ್ತ ಸಾಗಿದೆವು.
ನಾವಂದುಕೊಂಡಂತೆಯೇ ಪಚ್ಚೆಹಸಿರಿನ ಹುಲ್ಲುಹಾಸು ಸ್ವಾಗತಿಸಿತು...ಮುಂದೆ...ನೋ.ಡಿ.ದ.ರೆ.....
ಆಗುಂಬೆಯ ಕಸಕಡ್ಡಿ ತ್ಯಾಜ್ಯವೆಲ್ಲಾ ಅಲ್ಲೇ ಅಡರಿಕೊಂಡಿದೆ!
ಇದಕ್ಕೆ ವಿವರಣೆ ಬೇಡ!
ಇಡೀ ಆಗುಂಬೆಯಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೆಲ್ಲಾ ತಂದು ಎಸೆಯುವ ಜಾಗವಾಗಿ ಅದು ಮಾರ್ಪಟ್ಟಿತ್ತು! ಅದುವರೆಗೆ ನೋಡದ ಆಗುಂಬೆಯ ದರ್ಶನವೂ ಆಯಿತು. ಕಸಕಡ್ಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಗಳೆಲ್ಲಾ ನಮ್ಮಲ್ಲಿ ಇವೆ. ಎಷ್ಟೋ ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ ಕೂಡಾ. ಅದನ್ನು ಅಳವಡಿಸುವುದು ಬಿಟ್ಟು ಆಗುಂಬೆಯನ್ನು ಕಸದ ತಾಣವಾಗಿ ಮಾಡಿದ್ದು ನೋಡಿ ಆದ ನೋವನ್ನು ಹಂಚಿಕೊಳ್ಳುತ್ತಾ ಇಳಿಯುವಾಗ ಚಿನ್ಮಯನ ಸೈಕಲ್ನ ಪ್ರಮುಖ ಭಾಗ ಫ್ರೀವೀಲ್ನಲ್ಲೇನೋ ದೋಷ ಕಂಡುಬಂತು. ಪೆಡಲ್ ಮಾಡಿದರೂ ಸೈಕಲ್ ಮುಂದೋಡುತ್ತಿರಲಿಲ್ಲ. ಅಲ್ಲಿಂದ ಇಳಿಜಾರಾದ ಕಾರಣ ಜಾಗರೂಕತೆಯಿಂದ ಸೋಮೇಶ್ವರ ವರೆಗೂ ತಲಪಿದೆವು. ಅಲ್ಲಿಂದ ಬಸ್ನಲ್ಲೋ ಟೆಂಪೋದಲ್ಲಾದರೋ ಸೈಕಲ್ ಹಾಕಿಕೊಂಡು ಹೋಗೋಣ ಎಂದು ಅಂದುಕೊಂಡೆವು. ಆದರೆ ಆಗುಂಬೆದಾರಿಯಲ್ಲಿರುವುದು ಹೆಚ್ಚಿನವೂ ಮಿನಿಬಸ್ಗಳು, ಅದರಲ್ಲಿ ಜಾಗದ ಕೊರತೆ. ಮಧ್ಯಾಹ್ನವಾದ್ದರಿಂದ ಹೆಚ್ಚು ವಾಹನಗಳಿರಲಿಲ್ಲ. ಹಾಗಾಗಿ ಏರುದಾರಿಯಲ್ಲಿ ಇಳಿದು ತಳ್ಳುತ್ತಾ ಇಳಿಜಾರಲ್ಲಿ ಸೈಕಲ್ಲೇರುತ್ತಾ ಚಿನ್ಮಯ ಹಿಂಬಾಲಿಸಿದರೆ ನಾನು ನಿಧಾನವಾಗಿ ಮುಂದುವರಿದೆ. ಹಿರಿಯ ಮಿತ್ರ ಪ್ರಕಾಶ್ ಭಟ್ ಮಣಿಪಾಲದಲ್ಲಿರುವುದು ನೆನಪಿಗೆ ಬಂತು. ಅವರೂ ಸೈಕ್ಲಿಸ್ಟ್ ಅಲ್ಲದೆ ಎಸ್ಯುವಿ ವಾಹನ ಮತ್ತು ಸೈಕಲ್ ಕಟ್ಟುವ rack ಕೂಡಾ ಇದೆ. ಹಾಗೆ ಅವರಿಗೆ ಫೋನಾಯಿಸಿದಾಗ ನೀವು ಬರುತ್ತಾ ಇರಿ, ನಾನು ಊಟ ಮುಗಿಸಿ ಬರುವೆ ಎಂಬ ಆಶ್ವಾಸನೆ ಸಿಕ್ಕಿತು. ಅದರಂತೆ ಹೆಬ್ರಿ ವರೆಗೂ ಬಂದು, ಬಡ್ಕಿಲ್ಲಾಯರ ಹೊಟೇಲಲ್ಲಿ ಊಟಕ್ಕೆಂದು ಸೇರಿಕೊಂಡೆವು. ಊಟ ಆಗಲೇ ಖಾಲಿ. ಅವಲಕ್ಕಿ ಮೊಸರು ಮುಕ್ಕಿ ತೃಪ್ತಿ ಪಟ್ಟಾಗ ನಮ್ಮ ವಾಹನ ಆಗಮನ. ಸೈಕಲ್ ಹಾಕಿಕೊಂಡು ಸಂಜೆ ವೇಳೆಗೆ ಮಣಿಪಾಲ ತಲಪಿದೆವು.
ಹೆಚ್ಚೇನೂ ತಯಾರಿಯಿಲ್ಲದೆ ಆಗುಂಬೆಯೇರಿದ್ದು, ಅಲ್ಲಿನ ಮಂಜಿನಲ್ಲಿ ಮಿಂದೆದ್ದು ಬಂದದ್ದು ಮನತಣಿಸಿದರೆ ಆಗುಂಬೆಯ ಕಸ ಎಸೆ ತಾಣ ನೋಡಿ ಮನಕಲಕಿತು, ಮಂಜಿನ ನೆರಳಿನಲ್ಲಿ ಅಲ್ಲಿಯ ನಿಸರ್ಗದ ಮೇಲೆ ಇನ್ನೆಷ್ಟು ಅತ್ಯಾಚಾರ ನಡೆದಿದೆಯೋ ಯಾರು ಬಲ್ಲರು ???
Related Posts Plugin for WordPress, Blogger...