30.12.09

2010ನ್ನು ಅನಾಥ ಮಾಡಿರಿಸಿ ಹೋದ ಇಬ್ಬರು ಮಾನ್ಯರಿಗೆ....ಅಶ್ವತ್ಥರ ಬಗ್ಗೆ ತಿಳಿಯುವುದಕ್ಕೆ ಮೊದಲು ನಾನು ಮೆಚ್ಚಿದ್ದು ಅವರ ಸ್ವರಸಂಯೋಜನೆಯ, ಅವರದ್ದೇ ಗಾನವೈಶಿಷ್ಟ್ಯದ ಸಂತ ಶಿಶುನಾಳ ಶರೀಫರ ರಚನೆಗಳನ್ನು...
ನಾನು ಬಹುಷಃ ೫-೬ನೇ ತರಗತಿಯಲ್ಲಿದ್ದಿರಬಹುದು, ಆಗಲೇ ನನ್ನ ದೊಡ್ಡಪ್ಪ, ಚಿಕ್ಕಪ್ಪಂದಿರ ಮನೆಯ ಪ್ಯಾನಾಸಾನಿಕ್ ಟೇಪ್‌ ರೆಕಾರ್ಡರ‍್ಗಳಲ್ಲಿ ಸೋರುತಿಹುದು ಮನೆಯ ಮಾಳಿಗಿ, ತೇರನೆಳೆಯುತಾರೆ ತಂಗಿ, ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೊ, ಬರಿದೆ ಬಾರಿಸದಿರು ತಂಬೂರಿ, ಅಳಬೇಡ ತಂಗಿ ಅಳಬೇಡ, ಚೋಳ ಕಡಿತ ನನಗೊಂದು ಚೋಳ ಕಡಿತ ಪದ್ಯಗಳು ಕೇಳಿಬರುತ್ತಿದ್ದವು..ರೇಡಿಯೋ ಕೇಳಿ ಮಾತ್ರವೇ ಗೊತ್ತಿದ್ದ ನನಗೆ ಆ ಟೇಪ್‌ ರೆಕಾರ್ಡರ್‌ನಷ್ಟೇ ಕೌತುಕ ಹುಟ್ಟಿಸಿದ್ದು ಆ ಒತ್ತೊತ್ತಿ ಹೇಳುವ ಗಾಯನ ಶೈಲಿ..ಅದು ಅಶ್ವತ್ಥರೆಂದು ಬುದ್ಧಿ ಬೆಳೆದ ಬಳಿಕ ಗೊತ್ತಾಯ್ತು. ಆಗ ಅವರ ಬಗ್ಗೆ ಹುಟ್ಟಿದ ಗೌರವ ಇಂದಿಗೂ ಇದೆ. ಎಂದೆಂದಿಗೂ....
ಮಂಗಳೂರಿನಲ್ಲಿ ೨೦೦೬ರ ಮೇ ೧ರಂದು ಸಂಜೆ ತಮ್ಮ ಧ್ವನಿ ತಂಡದೊಂದಿಗೆ ಅಶ್ವತ್ಥರ ಮೋಹಪರವಶಗೊಳಿಸುವ ರಸಮಂಜರಿಯನ್ನು ಹತ್ತಿರದಿಂದಲೇ ನೋಡುವ ಅವಕಾಶವೂ ನನ್ನ ಅವಕಾಶ. ಅಶ್ವತ್ಥರ ಹಾಡಿನಲ್ಲಿ ಇರುವ ಮೋಡಿ ನೋಡಿದ್ದ ನನಗೆ, ಅವರಿಗೆ ಬರುವ ಸಿಟ್ಟಿನ ಪರಿಚಯವೂ ಆಗಿದ್ದಿಲ್ಲೇ.
ಆಗ ಮೈಕ್‌ಸೆಟ್‌ನಲ್ಲಿ ಏನೋ ತೊಂದರೆ ಉಂಟಾಗಿತ್ತು...ಪದೇ ಪದೇ ಹೇಳಿದರೂ ಕೇಳದಾಗ ಸಿಟ್ಟಿಗೆದ್ದ ಅಶ್ವತ್ಥ ಮೈಕ್‌ನವರ ಜನ್ಮಜಾಲಾಡಿಸಿ ಬಿಟ್ಟಿದ್ದರು...ಬಳಿಕ ಒಂದೆರಡು ಹಾಡು ಹಾಡುವಾಗ ಮಗುಮ್ಮಾಗೇ ಇದ್ದರೂ ಕೊನೆಯಲ್ಲಿ ಮನಸಾರೆ ಆನಂದಿಸುತ್ತಾ ಹಾಡಿದ್ದರು...ನನಗೆ ಪ್ರಿಯವಾಗಿದ್ದ ಹಾಡುಗಳನ್ನು ಲೈವ್ ಆಗೇ ಕೇಳಿ ಖುಷಿ ಪಟ್ಟಿದ್ದೆ....ಈಗ ಕಂಪ್ಯೂಟರ‍್ನಲ್ಲಿ ಎಂಪಿ೩ ರೂಪದಲ್ಲಿ ಕೂತಿರುವ ಅಶ್ವತ್ಥರನ್ನಷ್ಟೇ ಕೇಳಬೇಕಿದೆ...
ಇನ್ನು ವಿಷ್ಣುವರ್ಧನರ ಬಗ್ಗೆ ಕೆಲವೇ ವಾಕ್ಯ...
ನನಗೆ ಚಿಕ್ಕಂದಿನಿಂದಲೇ ವಿಷ್ಣುವರ್ಧನ, ಪ್ರಭಾಕರ‍್ ಇಬ್ಬರೂ ಇಷ್ಟ..ಅವರ ಹೆಸರಿನ ಹಿಂದಿರುವ ಸಾಹಸಸಿಂಹ, ಟೈಗರ‍್ ಎಂಬ ಪೂರ್ವನಾಮೆಗಳು ಒಂದು ಕಾರಣವಾದರೆ ಸೊಗಸಾಗಿ ಫೈಟ್ ಮಾಡುವ ಅವರ ಶೈಲಿ ಕೂಡಾ ಅಷ್ಟೇ ಇಷ್ಟ.
ಸಿನಿಮಾಗಳನ್ನು ನೋಡುವ ಅವಕಾಶ ನಾನಿದ್ದ ಹಳ್ಳಿಯಲ್ಲಿ ಕಡಮೆ...ಹಾಗಾಗಿ ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದುದು ಶುಕ್ರವಾರದ ಉದಯವಾಣಿಯನ್ನು. ಅದರಲ್ಲಿ ನನ್ನ ಮೆಚ್ಚಿನ ನಟರು ನಟಿಸಿದ ಲೇಟೆಸ್ಟ್ ಚಿತ್ರಗಳು, ಅದರಲ್ಲಿ ಅವರ ಸಾಹಸದ ಫೊಟೊಗಳಿರುತ್ತಿದ್ದವು. ಇನ್ನೂ ಖುಷಿಕೊಡುತ್ತಿದ್ದುದು ಎಂದರೆ, ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ದೇವಣ್ಣ ಎಂಬವನು ವಿಷ್ಣು ಕಟ್ಟಾ ಅಭಿಮಾನಿ..ಹಾಗಾಗಿ ಆತ ಕೆಲಸ ಮಾಡುವಾಗ ನಾನೂ ಹೋಗಿ ನಿಂತು ವಿಷ್ಣು ವರ್ಧನ್ ಚಿತ್ರ ನೋಡಿದ್ಯಾ ದೇವಣ್ಣ ಎಂದು ಕೇಳುತ್ತಿದ್ದೆ...ಆತ ಹೂಂ ಎಂದರೆ ನನಗೆ ಹಬ್ಬ...

ಯಾಕೆಂದರೆ ಆತ ಆ ಚಿತ್ರದ ಕಥೆ ನನಗೆ ಹೇಳುತ್ತಿದ್ದ...ನನಗೆ ಕೇಳುವಷ್ಟೇ ಇಷ್ಟ ಅವನಿಗೆ ಹೇಳಲೂ ಇತ್ತು!
ದೊಡ್ಡವನಾದ ಬಳಿಕ ಅನೇಕ ಸಿನಿಮಾ ನೋಡಿದ್ದೇನೆ, ಬಂಧನ, ಡಿಸೆಂಬರ‍್ ೩೧, ಆಸೆಯಬಲೆ, ಸಾಹಸಸಿಂಹ, ನಿಷ್ಕರ್ಷ..ಹೀಗೆ ಪಟ್ಟಿ ಬೆಳೆಯುತ್ತದೆ..

ಗಾನಗಂಧರ್ವ ಅಶ್ವತ್ಥರಿಗೆ, ಅವರ ಆ ಮಟ್ಟದ ಸ್ವರಕ್ಕೆ, ವಿಷ್ಣುವಿಗೆ ನನ್ನ ಮತ್ತು ದೇವಣ್ಣುವಿನ ಪರವಾಗಿ ಒಂದು ಪ್ರಣಾಮ.....

27.12.09

ಕ್ಯಾಮೆರಾಮನ್‌ನ ತುಂಟತನವೂ ನಿದ್ರಾಭಂಗವೂ


ಸಭೆ, ಕಾರ್ಯಾಗಾರ, ಸಮಾವೇಶ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಇವೆಲ್ಲಾ ಸಾಫ್ಟ್‌ ನ್ಯೂಸ್ ಆಗಿ ನಾವು ಪ್ರಕಟಿಸಬೇಕಾದ ವಿಷಯಗಳು ಪತ್ರಿಕೆಯಲ್ಲಿ...
ಇಂತಹ ಹೆಚ್ಚಿನ ಕಡೆಯೂ ವಿಚಾರಮಂಥನ ನಡೆಯುವಾಗ ವಿಚಾರಗಳ ಗಾಂಭೀರ್ಯ ಹೆಚ್ಚಿದಾಗಲೆಲ್ಲ ಸಭಿಕರು ತಲ್ಲೀನರಾಗುತ್ತಾ ‘ತಲೆದೂಗು’ವುದೂ ಉಂಟು...ಅದರಲ್ಲೂ ಬೆಳಗ್ಗೆ ಸಖತ್ ಉಪಾಹಾರ, ಮಧ್ಯಾಹ್ನ ಭೂರಿ ಭೋಜನವಿದ್ದರಂತೂ ಮುಗೀತುಕಥೆ..
ಮೊನ್ನೆ ಸುರತ್ಕಲ್‌ನ ಎನ್‌ಐಟಿಕೆ(ಹಿಂದಿನ ಕರ್ನಾಟಕ ರೀಜನಲ್ ಇಂಜಿನೀಯರಿಂಗ್ ಕಾಲೇಜ್)ಯಲ್ಲಿ ಸುವರ್ಣ ಮಹೋತ್ಸವ*ದ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಮಾವೇಶ ಏರ್ಪಾಡಾಗಿತ್ತು.
ಅತಿಥಿ ಗಣ್ಯರು ಬರುವಾಗ ಭಾರತೀಯ ಸಂಪ್ರದಾಯದಂತೆ ಒಂದು ಗಂಟೆ ತಡ. ಆ ಬಳಿಕ ಎನ್‌ಐಟಿಕೆಯ ಮಾಜಿ ಪ್ರಾಂಶುಪಾಲರು, ನಿರ್ದೇಶಕರನ್ನು ಗೌರವಿಸುವುದು, ಉಪಾನ್ಯಾಸಕರು, ಬೋಧಕೇತರ ಸಿಬ್ಬಂತಿಗಳನ್ನು ಗುಲಾಬಿ ಕೊಟ್ಟು ನೆನಪಿಸಿಕೊಳ್ಳುವ ಅರ್ಥಪೂರ್ಣ ಕಾರ್ಯಕ್ರಮ..
ಆ ಬಳಿಕ ಅತಿಥಿಗಳ ಭೀಕರ ಭಾಷಣಗಳು ಶುರುವಾದವು...ಈ ನಡುವೆ ಸೀಟ್‌ಗಳಲ್ಲಿ ಕೂತ ಅನೇಕರು ಹಿಂದಿನ ದಿನ ಸುಸ್ತಿನಿಂದಲೋ ಏನೋ ನಿಧಾನವಾಗಿ ತೂಕಡಿಸಲು ಶುರುವಿಟ್ಟುಕೊಂಡರು.
ಆದರೆ ಇವರ ಸುಖನಿದ್ದೆಗೆ ಭಂಗ ತರಲು ಆಯೋಜಕರು ಒಂದು ಸೂಪರ‍್ ತಂತ್ರವನ್ನು ಕಾರ್ಯರೂಪಕ್ಕೆ ಇಳಿಸಿದ್ದರು. ಕಾರ್ಯಕ್ರಮವನ್ನು ವೇದಿಕೆಯ ಇಕ್ಕೆಲಗಳಲ್ಲಿನ ದೊಡ್ಡ ಪರದೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು.
ಮೂವರು ಕ್ಯಾಮೆರಾಮನ್‌ಗಳು ಶೂಟಿಂಗ್ ಮಾಡಿದ್ದು ನೇರವಾಗಿ ಬಿತ್ತರಗೊಳ್ಳುತ್ತಿತ್ತು.
ಇಲ್ಲೇ ಆಗಿದ್ದು ಎಡವಟ್ಟು. ನೋಡುವವರಿಗೆ ಚೆನ್ನಾಗಿ ಕಾರ್ಯಕ್ರಮಗಳು ಕಾಣಲೆಂದು ಮಾಡಿದ ವ್ಯವಸ್ಥೆ ನಿದ್ರಾಸಕ್ತರಿಗೆ ಕಿರಿಕ್ ಎನಿಸತೊಡಗಿತ್ತು. ಯಾಕೆಂದರೆ ಯಾರು ಕಣ್ಮುಚ್ಚಿ ದೇವೇಗೌಡರಂತೆ ದೇಶದ ಬಗ್ಗೆ ಕನಸು ಕಾಣುತ್ತಿದ್ದರೋ ಅವರ ಮೇಲೆ ಕ್ಯಾಮೆರಾಮನ್‌ನ ಗೃಧ್ರ ದೃಷ್ಟಿ ಬೀಳುತ್ತಿತ್ತು. ಅಂತಹವರ ಮೇಲೆಯೇ ಆತ ಕ್ಯಾಮೆರಾ ಲೆನ್ಸ್ ಝೂಮ್ ಮಾಡುತ್ತಿದ್ದ..ಅದನ್ನೇ ವಿಡಿಯೋ ಎಡಿಟಿಂಗ್‌ನವ ನೇರವಾಗಿ ದೊಡ್ಡ ಪರದೆಗೆ ಕಳುಹಿಸಿ ನಿದ್ದೆ ಮಾಡಿದವರ ಪಕ್ಕದಲ್ಲಿ ಕುಳಿತವರು ಪಕ್ಕೆಗೆ ತಿವಿದು ಎಬ್ಬಿಸುತ್ತಿದ್ದರು....
ತಾನೊಬ್ಬ ಇಡೀ ಕಾರ್ಯಕ್ರಮವನ್ನು ನಿಂತೆ ಶೂಟಿಂಗ್‌ ಮಾಡುವ ಶಿಕ್ಷೆಗೊಳಗಾದ ಕ್ಯಾಮೆರಾ ಮನ್‌ನ ಈಗ
ಒಳಗೊಳಗೇ ಮುಸಿಮುಸಿ ನಗುತ್ತಿದ್ದ. ನಿದ್ರಾಭಂಗವಾದವರು ಕಣ್ಣೊರಸಿ ಮತ್ತೆ ವೇದಿಕೆಯತ್ತ ಕಣ್ಣು ನಡುತ್ತಿದ್ದರು ಅಥವಾ ಪ್ರಯತ್ನ ಮಾಡುತ್ತಿದ್ದರು!


*ಇದೀಗ ಎನ್‌ಐಟಿಕೆ(national institute of technology, karnataka) ಸುವರ್ಣವರ್ಷಾಚರಣೆಯ ಸಂಭ್ರಮದಲ್ಲಿದೆ. ಆಚರಣೆಯ ಅನೇಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿವೆ...ಇದು ಕೇವಲ lighter readingಗಾಗಿ ಮಾತ್ರ

17.12.09

ಬರಡುಗದ್ದೆಗಳಲ್ಲಿ ತೊಂಡೆ ಚಪ್ಪರ ಅರಳಿತು!!!

ಬೆಳೆದು ನಿಂತ ತೊಂಡೆಚಪ್ಪರ ^
ತೊಂಡೆ ಬೆಳೆದ ಜಯಂತ ರೈ ^

ಮಿಸಿಲಕೋಡಿಯ ವಿಠಲ ರೈ^


ಇದನ್ನು ಕ್ರಾಂತಿಯೆನ್ನಬಹುದು...ಅಭಿವೃದ್ಧಿ ಎಂದೂ ಹೇಳಬಹುದು...ಆದರೆ ಕೃಷಿ, ತೋಟಗಾರಿಕೆ ದಕ್ಷಿಣ ಕನ್ನಡದಲ್ಲಿ ಕ್ಷಿಪ್ರವಾಗಿ ಇನ್ನಿಲ್ಲವಾಗುತ್ತಿರುವಾಗಲೇ ಈ ವಿದ್ಯಮಾನ ನನ್ನನ್ನಂತೂ ಖುಷಿ ತಂದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗೋಳ್ತಮಜಲು ಎಂಬಲ್ಲಿ ಪುಟ್ಟ ಪುಟ್ಟ ಎರಡು ಮೂರು ಹಳ್ಳಿಗಳಲ್ಲಿನ ಒಂದಷ್ಟು ಉತ್ಸಾಹಿ ಮಂದಿ ತಮ್ಮ ಬೆಟ್ಟು ಬಿದ್ದ ಗದ್ದೆಗಳಲ್ಲೀಗ ತೊಂಡೆ ಬೆಳೆದಿದ್ದಾರೆ, ಬಂಪರ‍್ ಬೆಳೆಯನ್ನೂ ಪಡೆದು ಖುಷಿಯ ನಗೆ ಬೀರಿದ್ದಾರೆ.
ಮಿಸಿಲಕೋಡಿಯ ವಿಠಲ ಪೂಜಾರಿ ಇರಬಹುದು, ಲಿಂಗಪ್ಪ ಗೌಡರಿರಬಹುದು, ದೂಜಪಿನ್ ಲೋಬೋ ಇರಬಹುದು, ಅಥವಾ ಜಯಂತ ರೈ ಇರಬಹುದು ತಮ್ಮ ಮಣ್ಣನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಮಾರದೆ, ಗದ್ದೆಗೆ ಅಡಕೆ ಹಾಕಿ ಕಾಯದೆ ಹೀಗೊಂದು ಅನ್ನಕ್ಕೆ ನೆರವಾಗುವ ಕಾಯಕದಲ್ಲಿ ತೊಡಗಿದ್ದಾರೆ.
ಖುಷಿಯ ವಿಚಾರ ಎಂದರೆ ಕಲ್ಲಡ್ಕ ಸುತ್ತಲಿನ ಮಣ್ಣು ತೊಂಡೆ ಬೆಳೆಯಲು ಬಹಳ ಉಪಕಾರಿ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿ ತೊಂಡೆ ಬೆಳೆಸುವವರ ಸಂಖ್ಯೆ ವೃದ್ಧಿಯಾಗಿದೆ.
ಹಿಂದೆ ಹೀಗಿರಲಿಲ್ಲ. ಗದ್ದೆ ಬೇಸಾಯ ಸಾಕು ಎಂದು ರೈತರು ತೀರ್ಮಾನಕ್ಕೆ ಬಂದ ಕಾಲವದು, ಈಗ ಸುಮಾರು ೬-೭ ವರ್ಷ ಮೊದಲು. ಗದ್ದೆಗಳಲ್ಲಿ ಫಸಲು ತೆಗೆಯಲು ಮುಂದೆ ಬರುತ್ತಿರಲಿಲ್ಲ...ಗದ್ದೆಗಳು ಹಾಗೆಯೇ ಬರಡುಗಟ್ಟುತ್ತಿದ್ದವು. ರೈತರು ತಮಗಿದ್ದ ಅಡಕೆ ತೋಟವನ್ನೇ ನೆಚ್ಚಿಕೊಂಡರು.
ಆದರೆ ಇಲ್ಲಿನ ಕೆಲವರು ಮಾತ್ರ ಗದ್ದೆಯಲ್ಲೇ ತೊಂಡೆ ನೆಟ್ಟರು, ಪ್ರಯೋಗಾರ್ಥ. ಅದು ಯಶಸ್ವಿಯಾಯಿತು, ಅದನ್ನೇ ವಿಸ್ತರಿಸಿದರು. ಈಗ ಗೋಳ್ತಮಜಲಿನ ಸುಮಾರು ೫೦ ಎಕ್ರೆ ಪ್ರದೇಶದಲ್ಲಿ ತೊಂಡೆ ಹಬ್ಬಿದೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ, ಬಿ.ಸಿ.ರೋಡುಗಳಿಗೆ ಪ್ರತಿವಾರ ಇಲ್ಲಿನ ಊರ ತೊಂಡೆ ಸೇರುತ್ತದೆ. ಕನಿಷ್ಠ ಕೆಜಿಗೆ ೮ ರುಪಾಯಿಯಿಂದ ತೊಡಗಿ ೨೦ರ ವರೆಗೂ ಗಳಿಸಿದ್ದಿದೆ. ಯಾರಿಗೂ ನಷ್ಟವಾಗಿಲ್ಲ...
ಇನ್ನು ಇಲ್ಲಿ ಬೆಳೆಸುವುದು ಪುತ್ತೂರು, ಮಂಜೇಶ್ವರ ಜಾತಿಯ ತೊಂಡೆ. ಇದಕ್ಕೆ ರುಚಿ ಹೆಚ್ಚು. ಕಳೆದ ಜೂನ್‌ನಲ್ಲಿ ಹೊಂಡ ಮಾಡಿ ಗಿಡ ನೆಟ್ಟಿದ್ದಾರೆ. ಅಕ್ಟೋಬರ್‌ನಲ್ಲಿ ಕೊಯ್ಲು ಆರಂಭವಾಗಿದೆ. ಇನ್ನು ಫೆಬ್ರವರಿ ವರೆಗೂ ಈ ರೈತರಿಗೆ ಗಿಡಕ್ಕೆ ಯಥೇಚ್ಚ ಗೊಬ್ಬರ-ನೀರು ಉಣಿಸುವುದು ಕಾಯಿ ಕೊಯ್ಯುವುದು ಇದೇ ಕೆಲಸ.
ನೆರವಾಯ್ತು ಉದ್ಯೋಗ ಖಾತರಿ: ಇಲ್ಲಿ ತೊಂಡೆ ಮತ್ತೆ ಚಿಗಿತುಕೊಳ್ಳಲು ಕಾರಣವಾದ್ದು ಉದ್ಯೋಗ ಖಾತರಿ ಯೋಜನೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಸಾಲ ಮಾಡುವ ಕಿರಿಕಿರಿ ತಪ್ಪಿಸಿ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ತಮ್ಮ ಭೂಮಿಯನ್ನೇ ಹಸಿರು ಮಾಡಿ, ಸರ್ಕಾರದಿಂದ ಅದಕ್ಕೇ ಪ್ರೋತ್ಸಾಹ ಧನ ಪಡಯಲು ಆಗುವ ಏಕೈಕ ಯೋಜನೆ ಇದು.
ತಮ್ಮ ಜಾಗದಲ್ಲೇ ಬೆಳೆ ತೆಗೆಯಲು ಸರ್ಕಾರ ಹಣ ನೀಡುವುದಾದರೆ ಯಾರಿಗೆ ಬೇಡ. ವರ್ಷಕ್ಕೆ ೧೦೦ ಕೆಲಸ ಆದರೆ ಅಷ್ಟಾದರೂ ಆಯ್ತಲ್ಲ ಎನ್ನುವುದು ರೈತರ ಅಂಬೋಣ.
ಒಟ್ಟಿನಲ್ಲಿ ನಗರವಾಸಿಗಳ ಹೊಟ್ಟೆ ತುಂಬಿಸಲು ಕೇವಲ ಹಣವಿದ್ದರೆ ಸಾಲದು...ಇಂತಹ ಶ್ರಮ ಜೀವಿಗಳು ಬೆಳೆದ ಭತ್ತ, ತರಕಾರಿಯೂ ಬೇಕು ತಾನೇ...
ಸರ್ಕಾರ ಏನೇನೋ ಪ್ರಯೋಜನಕ್ಕೆ ಬಾರದ, ಕೇವಲ ಅಧೀಕಾರಿಗಳು, ಮಧ್ಯವರ್ತಿಗಳ ಹೊಟ್ಟೆ ತುಂಬಿಸುವ ಯೋಜನೆಯನ್ನೇ ಮಾಡುತ್ತಾ ಬರುತ್ತಿದೆ ಎಂದು ನಂಬಿದ್ದ ನನಗೆ ಉದ್ಯೋಗ ಖಾತರಿಯಂತಹ ಯೋಜನೆ ದಕ್ಷಿಣಕನ್ನಡದಲ್ಲಿ ಮಾಡಿದ ಜಾದೂ ನೋಡಿ ನಿಜಕ್ಕೂ ಅಚ್ಚರಿ.
ಇದು ಚಿಕ್ಕ ವಿಷಯ ಇರಬಹುದು...ಆದರೆ ಚಿಕ್ಕವೂ ಕೆಲವೊಮ್ಮೆ ಪಾಠವಾದ ನಿದರ್ಶನಗಳಿವೆ ಎಂಬ ಕಾರಣಕ್ಕಾಗಿ ನಿಮ್ಮ ಮುಂದೆ ಈ ವಿಷಯ ಇರಿಸಿದ್ದೇನೆ..ಹೇಗನಿಸಿತು ದಯವಿಟ್ಟು ತಿಳಿಸಿ.

19.11.09

ಮೌನರಾಗ

ನಿರಾಳ ಸರೋವರದ
ಮೌನ
ಮುದ ನೀಡುತ್ತದೆ
ಮೌನ ಚುಚ್ಚುತ್ತದೆ
ಮೌನ ಬಿಚ್ಚಿಕೊಳ್ಳುತ್ತದೆ
ಕಟ್ಟಿಕೊಡುತ್ತದೆ ನೆನಪನ್ನು

ಮೌನ
ಕೊಳಲಿನಂತೆ
ನುಡಿಸುತ್ತದೆ ವಿಷಾದರಾಗಗಳನ್ನು
ಮೌನ ಸಹಿಸುತ್ತದೆ
ಧರಿತ್ರಿಯಂತೆ ಎಲ್ಲ ಪೆಟ್ಟುಗಳನ್ನು
ಮೌನದಲ್ಲಿ ನೋವಿದೆ
ಸಾವಿನಲ್ಲಿ ಮೌನವಿದೆ
ಮೌನ ನಿರ್ಗುಣ
ನೀರಿನಂತೆ ನಿರ್ಮಲ


ಮೌನ ತಾಳುತ್ತದೆ
ಮೌನ ಬಿರಿಯುತ್ತದೆ
ಕತ್ತಲ ಏಕಾಂತದಲ್ಲಿ
ಆಲಂಗಿಸಿ ಸಂತೈಸುತ್ತದೆ


ಮೌನ ನಿರ್ವಿಕಾರ, ನಿರಾಕಾರ
ಪ್ರಶಾಂತ, ನಿರುಮ್ಮಳ
ಮೌನ ಪ್ರಶ್ನೆ
ಮೌನವೇ ಉತ್ತರ
ಹಾಗೂ
ಮೌನವೇ
ದೇವರು!

ಚಿತ್ರ: deviantart.com

9.11.09

ಟಾಯ್ಲೆಟ್ ವೃತ್ತಾಂತ

ಟಾಯ್ಲೆಟ್ಟಿಲ್ ಅವರ‍್ ಸಿಕ್ಕುಬಿಟ್ಟಿದ್ದಾರೆ....ಎಂದು ಹಿಂದುಸ್ತಾನ್ ಬ್ಯಾಂಕ್ ಗುಮಾಸ್ತ ವರ್ಗೀಸ್ ಹರಕಲು ಕನ್ನಡದಲ್ಲಿ ಆದರೂ ಥೇಟ್ ಟಿವಿ ಬ್ರೇಕಿಂಗ್ ನ್ಯೂಸ್ ಮಾದರಿಯಲ್ಲೇ ಘೋಷಿಸಿದ.
ಇಡೀ ಆಫೀಸೇ ಆಣೆಕಟ್ಟೆ ಒಡೆದಾಗ ನುಗ್ಗುವ ನೀರಿನಂತೆ ನುಗ್ಗಿ ಟಾಯ್ಲೆಟ್ ವಿಭಾಗದ ಸುತ್ತ ನಿಂತಿತು, ಮತ್ತು ಅದರಲ್ಲೊಬ್ಬ ನಾನೂ ಇದ್ದೆ.
ಯಾರು ಟಾಯ್ಲೆಟ್ಟಲ್ಲಿ ಸಿಕ್ಕಿಬಿದ್ದವರೆಂದು ತಿಳಿಯುವ ಮುನ್ನ ನಮ್ಮ ಕಚೇರಿ ಟಾಯ್ಲೆ‌ಟ್ ವಾಸ್ತು ಬಗ್ಗೆ ನಿಮಗೆ ನಾನು ತಿಳಿಸಬೇಕು. ಟಾಯ್ಲೆಟ್ ಎಂಬ ಬೋರ್ಡಿನ ಕೋಣೆಯ ಬಾಗಿಲು ತಳ್ಳಿದಾಗ ಒಂದು ಸಿಂಕ್ ಮತ್ತು ಕನ್ನಡಿ ಇರುವ ಪ್ಯಾಸೇಜ್ ಇದೆ. ಅದರಲ್ಲಿ ಎರಡು ಕೋಣೆಗಳಿವೆ. ಅದರಲ್ಲೊಂದು ಪುರುಷರಿಗೆ ಇನ್ನೊಂದು ಮಹಿಳೆಯರಿಗೆ.
ನಮ್ಮ ಬ್ಯಾಂಕಿನ ಕ್ಯಾಷಿಯರ‍್ ೩೩ರ ಅವಿವಾಹಿತ ಕನ್ಯೆ ರೇವತಿಯು ಬ್ಯಾಂಕ್ ಕಂಪ್ಯೂಟರ‍್ ಆಪರೇಟರ‍್ ತನಗಿಂತ ಚಿಕ್ಕ ವಯಸ್ಸಿನ ಬಾಲುವಿನೊಂದಿಗೆ ಯಾವಾಗಲೂ ಸಲ್ಲಾಪದಲ್ಲಿ ತೊಡಗಿರುತ್ತಾಳೆ, ಬ್ಯಾಚುಲರ‍್ ಆಗಿ ರೂಮ್ ಮಾಡಿಕೊಂಡಿರುವ ಆತನ ರೂಮಿಗೂ ಆಕೆ ಹೋಗುತ್ತಾಳೆ, ಆಕೆಗೆ ಆತ ಯೋಗಾಸನ ಕಲಿಸುತ್ತಾನೆ ಎಂಬಂತಹ ವಿಚಾರಗಳೆಲ್ಲ ನಮ್ಮ ಬ್ಯಾಂಕಿನಲ್ಲಿ ಪ್ರಚಲಿತ ಇರುವ ವರ್ತಮಾನಗಳು.
ಆದರೆ ಏನೇ ಹೇಳಿ ಬ್ಯಾಂಕಿನ ಕೆಲಸದಲ್ಲಿ ಬಾಲು, ರೇವತಿ ಇಬ್ಬರೂ ಅಚ್ಚುಕಟ್ಟು. ಅವರ ಮೇಲೆ ಯಾವ ದೂರೂ ನೀಡಲು ಸಾಧ್ಯವಿಲ್ಲ. ಹಾಗಿದ್ದರೂ ಇಂತಹ ಸೆನ್ಸೇಷನಲ್ ವಿಚಾರವನ್ನೆಲ್ಲ ಬ್ಯಾಂಕಿನ ಸರ್ವರೂ ಬಿಡದೆ ವಿಶ್ಲೇಷಿಸುತ್ತಾರೆ.
ವಿಷಯ ಹೀಗಿರುವಾಗ ಈ ಇಬ್ಬರೂ ಟಾಯ್ಲೆಟ್ಟಲ್ಲಿ ಸಿಕ್ಕುಕೊಂಡಿದ್ದಾರೆ ಎಂದರೆ ಅದು ಬ್ರೇಕಿಂಗ್ ನ್ಯೂಸ್ ಅಲ್ಲದೆ ಬೇರಿನ್ನೇನು?!
ಒಳಗೆ ಏನಾಗ್ತಿದೆ ಎಂದು ಎಲ್ಲರೂ ತಮ್ಮ ತಮ್ಮ ಭಾವಕ್ಕೆ ಮತ್ತು ಭಕ್ತಿಗೆ ಸರಿಯಾಗಿ ಕಲ್ಪಿಸಿಕೊಳ್ಳುವ ಹೊತ್ತಲ್ಲೇ ವರ್ಗೀಸ್ ಟಾಯ್ಲೆಟ್ಟಿನ ಹೊರಗಿಂದ ಹಾಕಿದ್ದ ಅಗುಳಿ ತೆಗೆದ.
ಬೆವೆತು ಹೋಗಿದ್ದ ಬಾಲು, ಏನೂ ಆಗದಂತಹ ಮುಖದ ರೇವತಿ ಹೊರಬಂದರು.
ಏನಾಯ್ತು...ಯಾಕೆ ಎಲ್ಲಾ ನೋಡ್ತಿದೀರಿ ನಮಗೆ ಪ್ರಶ್ನೆ ಹಾಕಬೇಕೆ ರೇವತಿ, ಏನೂ ಆಗದ ಮಳ್ಳಿ ಹಾಗೆ.
ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮಧ್ಯಾಹ್ನ ನಂತರ ಆದ ಕಾರಣ ಸದ್ಯಕ್ಕೆ ಕಸ್ಟಮರುಗಳಿರಲಿಲ್ಲ. ಹಾಗಾಗಿ ಮಹಿಳಾ ಸಿಬ್ಬಂದಿಗಳ ಪಿಸಪಿಸ, ಪುರುಷರ ಗಹಗಹಿಸುವಿಕೆ ನಡೆದಿತ್ತು.
ಹೀಗಿರುವಾಗ ರೇವತಿ ಮತ್ತು ಬಾಲುವಿಗೆ ಮ್ಯಾನೇಜರರ ಕರೆ ಬಂತು. ವರ್ಗೀಸನೇ ಇದಕ್ಕೂ ರೂವಾರಿ ಎಂದು ನನಗೆ ಸ್ಪಷ್ಟವಾಗಿತ್ತು.
ಮ್ಯಾನೇಜರ ಚೇಂಬರಲ್ಲಿ ಏನಾಯ್ತೆಂದು ನಮಗೆ ತಿಳಿಯದು. ಆದರೆ ರೇವತಿ ರಾಜೀನಾಮೆ ಕೊಟ್ಟು ಹೋದರೆ ಬಾಲುವನ್ನು ಹೈದರಾಬಾದಲ್ಲಿರುವ ಬ್ಯಾಂಕ್‌ನ ಹೆಡ್ಡಾಪೀಸಿಗೆ ವರ್ಗಾಯಿಸಿದರು.
ರೇವತಿ ನಮ್ಮಲ್ಲಿ ಕನಿಷ್ಠ ಮಾತಾಡುವವಳು, ಬಾಲುವಿಗೆ ಯಾಕೆ ಒಲಿದಳೆಂಬ ಹೊಟ್ಟೆಕಿಚ್ಚು ನಮ್ಮಲ್ಲಿ ಕೆಲವರಿಗೆ ಇದ್ದಿರಲೇಬೇಕು. ಬಾಲು ವರ್ಗಾವಣೆಗೊಂಡು ಹೋಗುವಾಗ ನಿರ್ಲಿಪ್ತನಾಗಿದ್ದ.

ತಂದೆ ತಾಯಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಬಾಲು ತಮಿಳುನಾಡಿನ ಯುವಕ. ಕಂಪ್ಯೂಟರ‍್ ತೊಂದರೆಗಳಿಗೆ ಟೆನ್ಶನ್ ಮಾಡದೆ ಸರಿಪಡಿಸುತ್ತಿದ್ದ. ಹೆಲ್ತ್‌ ಸರಿ ಇರಬೇಕ್ ಗುರೂ ಎಂದು ದಿನಾ ನಿಮಗೆ ಆ ಎಕ್ಸರ‍್ ಸೈಸ್ ಬರುತ್ತಾ ಈ ಯೋಗಾಸನ ಬರುತ್ತಾ ಎಂದೆಲ್ಲ ಆರೋಗ್ಯದ ಬಗ್ಗೆ ಸ್ವಲ್ಪ ಆಸಕ್ತಿ ಇದ್ದ ನನ್ನ ತಲೆ ತಿನ್ನುವುದೂ ಇತ್ತು. ಆದರೂ ನನಗೆ ಆತ್ಮೀಯನಾಗಿದ್ದ ಆತ ಹೋಗುವ ವೇಳೆಗೆ ಬ್ಯಾಗೇರಿಸಿ ನನ್ನ ಬಳಿ ಬಂದು ರಾವ್ ನಾನ್ ಬರ‍್ಲಾ ಎಂದಷ್ಟೇ ಹೇಳಿ ಹೋಗುವಾಗ ನನಗೆ ಬಾಲುವಿನಲ್ಲಿ ಅಂತಹ ತಪ್ಪಿತಸ್ಥನ ಭಾವ ಕಾಣಲಿಲ್ಲ.
ಇನ್ನು ರೇವತಿ ಈಸಿ ಗೋ ಯುವತಿ. ಹಾಗಾಗಿ ನಮ್ಮಲ್ಲಿ ಅನೇಕ ಮಹಿಳಾ ಮಣಿಗಳಿಗೆ ಅವಳನ್ನು ನೋಡಿದರೆ ಆಗುತ್ತಿರಲಿಲ್ಲ. ಇನ್ನು ಕೆಲವರಿಗೆ ಬಾಲು ಒಳ್ಳೆ ಹುಡ್ಗ, ಈ ಶೂರ್ಪನಖಿ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದು ಎಂಬ ಭಾವವಿತ್ತು.
ಗೃಹಸ್ಥರನೇಕರಿಗೆ ಆಕೆಯನ್ನು ಕಂಡರೆ ಒಳಗೊಳಗೇ ಖುಷಿಯಿದ್ದರೂ ಮೇಲಿನಿಂದ ಮಾತ್ರ ಕಂಡರೆ ಇಷ್ಟ ಇಲ್ಲ ಎಂಬಂತೆ ಮೂತಿ ಮಾಡುತ್ತಿದ್ದರು.
ಬಾಲು ರೇವತಿ ಹೋದ ಬಳಿಕ ವರ್ಗೀಸ್ ಮಾತ್ರ ಬಾಲು ಮತ್ತು ರೇವತಿ ಟಾಯ್ಲೆಟ್ಟೊಳಗೆ ಒಂದೇ ರೂಮಲ್ಲಿ ಹೇಗಿದ್ದರೆನ್ನುವುದನ್ನು ನಮ್ಮ ಬ್ಯಾಂಕಿನ ರಸಿಕರಲ್ಲಿ ವಿವರಿಸುತ್ತಾ ತಾನು ಹೇಗೆ ರೆಡ್ ಹ್ಯಾಂಡ್ ಆಗಿ ಪತ್ತೇದಾರನಂತೆ ಅವರನ್ನು ಹಿಡಿದೆ ಎನ್ನುವುದನ್ನು ಕೊಚ್ಚಿಕೊಳ್ಳುತ್ತಿದ್ದ.
ವರುಷಗಳುರುಳಿದವು...
ನಮ್ಮ ಬ್ಯಾಂಕಿಗೆ ಲಕ್ಷ್ಮೀ ನಟರಾಜನ್ ಎಂಬ ಖಡಕ್ ಹುಡುಗಿಯೊಬ್ಬಳು ವರ್ಗಾವಣೆಗೊಂಡು ಬಂದಳು. ಕಪ್ಪಾದಳೂ ಲಕ್ಷಣ, ಎಷ್ಟು ಬೇಕೋ ಅಷ್ಟೇ ಮಾತು. ಬಂದ ಕೆಲ ದಿನಗಳಲ್ಲೇ ಘಟನೆಯೊಂದು ನಡೆದು ಹೋಯ್ತು.
ಸದ್ಗೃಹಸ್ಥ, ಪತ್ನಿ ಮಗಳನ್ನು ಕೇರಳದ ತನ್ನ ಊರಲ್ಲಿ ಬಿಟ್ಟು ಬಂದು ಗೌರವಾನ್ವಿತ ಜೀವನದಲ್ಲಿ ತೊಡಗಿದ್ದ ನಮ್ಮ ಕಚೇರಿ ಪತ್ತೇದಾರ ವರ್ಗೀಸನ ಸಮಾಪ್ತಿಗೆ ಅದು ಕಾರಣವಾಯ್ತು.
ಒಂದಿನ ಪೊಲೀಸರು ಕಚೇರಿಗೆ ಬಂದು ವರ್ಗೀಸನನ್ನು ಎಳೆದು ವಿಚಾರಣೆಗೆ ಕೊಂಡೊಯ್ದರು. ಬ್ಯಾಂಕಿನ ಲಾಕರ‍್ ರೂಮಿಗೆ ಹೋಗಿದ್ದ ಲಕ್ಷ್ಮೀ ನಟರಾಜನ್‌ನ ಕೈಹಿಡಿದು ಅಸಭ್ಯವಾಗಿ ವರ್ತಿಸಿದ್ದ, ಅದಕ್ಕೆ ಮೊದಲು ಹಲವು ಸಲ ಬೀಚಗೆ ಹೋಗುವ, ಪಾರ್ಕಿಗೆ ಬರುತ್ತೀಯಾ ಎಂದೆಲ್ಲ ಆಕೆಯಲ್ಲಿ ಗೋಗರೆದಿದ್ದ ಎಂಬ ವಿಷಯ ಕಚೇರಿಯಲ್ಲಿ ಬಯಲಾಯ್ತು.
ವರ್ಗೀಸನಿಗೆ ಶಿಕ್ಷೆಯೇನೂ ಆಗದಿದ್ದರೂ ಮುಖ ತೋರಿಸಲಾಗದೆ ರಾಜಿನಾಮೆ ನೀಡಿ ತನ್ನ ನಾಟ್ಟಿಗೆ ಹಿಂದಿರುಗಿದ. ಲಕ್ಷ್ಮಿಯೂ ಬೆಂಗಳೂರಿಗೆ ವರ್ಗಾವಣೆಗೊಂಡು ಹೋದಳು.
ಮತ್ತೊಂದು ದಿನ ವರ್ಗೀಸನ ಆಪ್ತರಾಗಿದ್ದ ನಾಗಭೂಷಣ್ ಮಧ್ಯಾಹ್ನ ಊಟ ಮಾಡುವಾಗ ರಹಸ್ಸವೊಂದನ್ನು ಬಯಲುಮಾಡಿದರು.
ವಾಸ್ತವವಾಗಿ ವರ್ಗೀಸನೇ ಒಮ್ಮೆ ಹಿಂದೆ ಬೆಳಗ್ಗೆ ಬ್ಯಾಂಕಲ್ಲಿ ಎಲ್ಲರಿಗಿಂದ ಬೇಗ ಬಂದಿದ್ದ ಟಾಯ್ಲೆಟ್ ಪ್ರಕರಣದ ರೇವತಿಯನ್ನು ಕೆಣಕಲು ಹೋಗಿ ಪೆಟ್ಟು ತಿಂದಿದ್ದನೆಂದೂ, ಅದಕ್ಕೇ ಅವಳು ಮತ್ತು ಬಾಲು ಟಾಯ್ಲೆಟ್ ಕೋಣೆಯೊಳಗೆ ಪ್ರತ್ಯೇಕವಾಗಿ ಇರುವಾಗಲೇ ಬೇಕೆಂದೆ ಹೊರ ಚಿಲಕ ಹಾಗಿ ಗುಲ್ಲೆಬ್ಬಿಸಿದ್ದನೆಂಬ ಸತ್ಯವದು. ಆದರೆ ಬಾಲು-ರೇವತಿಯರ ಅಫೇರ‍್ ಗಾಳಿಸುದ್ದಿ ಬಲವಾದ್ದರಿಂದ ಇಡೀ ಕಚೇರಿ ಸಮಾಜ ವರ್ಗೀಸ್ ಮಾತನ್ನೇ ನಂಬಿತ್ತು.
ಮುಖ ಪೆಚ್ಚು ಮಾಡಿಕೊಂಡು ಊರಿಗೆ ಮರಳುವ ಮುನ್ನ ವರ್ಗೀಸ್ ಸತ್ಯವನ್ನು ಹೊರಕಕ್ಕಿದ್ದ. ರೇವತಿ ಬಾಲು ಅಂಥವರಾಗಿರಲಿಕ್ಕಿಲ್ಲ ಎಂದೇ ನಂಬಿದ್ದ ನನ್ನ ಮನಸ್ಸೂ ವಾಂತಿ ಬಳಿಕ ಹೊಟ್ಟೆ ಹಗುರವಾದಂತೆ ನಿರ್ಮಲವಾಯ್ತು!

26.10.09

ರೂಮಿನಲ್ಲಿರುವ ಕನ್ನಡಿಗೆ....

ನನ್ನ ರೂಪ ಹಾಳಾಗಿದೆ
ಎಂದು ಜಿಡ್ಡು ಹಿಡಿದ
ಕನ್ನಡಿ ಹೇಳಿದ್ದರಿಂದ
ಮುಖತೊಳೆಯಲು
ಕೆರೆಗೆ ಬಗ್ಗಿದೆ
ಸ್ವಚ್ಛ ನೀರಿನಲ್ಲಿ ರೂಪ
ನಳನಳಿಸಿತು!
ಈಗ ಕನ್ನಡಿಗೆ ನಾನೇ
ಕನ್ನಡಿಯಾಗಿದ್ದೇನೆ.

*******

ದಿನವೂ ನನ್ನನ್ನು
ಕೊಂಡಾಡುವ ನನ್ನ
ಕನ್ನಡಿಯೇ
ನನ್ನ ಬಿಳಿಗೂದಲು
ತೋರಿಸಿ ಹೀಯಾಳಿಸದಿರು!

*****

ಊರಿನಲ್ಲಿರುವ ಅಮ್ಮನ
ನೆನಪು ಹೇಳಲು
ನನ್ನ ರೂಮಿನಲ್ಲಿದೆ
ಆ ಹಳೇ ಕನ್ನಡಿ
ಮತ್ತೊಂದು ಅದಕ್ಕಂಟಿದ
ಬಿಂದಿ!

*********

ಈ ಹಳೆ ಕನ್ನಡಿಯಲ್ಲಿ
ಕಾಣುವುದು ನಾನು ಮಾತ್ರವಲ್ಲ
ಮೀಸೆ ಹಿರಿದು ನಗುವ ನನ್ನಜ್ಜ,
ಜೇನು ಮಯಣ ಹಣೆಗೆ ಒತ್ತಿ,
ಅದರ ಮೇಲೆ ಕುಂಕುಮ ಇಡುವ
ನನ್ನಜ್ಜಿ,
ಮೂಗಿನ ಮೇಲೆ ಸಿಟ್ಟು ತೋರಿಸುವ
ಮಾಮ,
ರಮಿಸುವ ಅತ್ತೆ,
ಈ ಕನ್ನಡಿಯೆನ್ನುವುದು
ಬರಿಯ ನೆನಪುಗಳ ಸಂತೆ
******

ಕನ್ನಡಿ ನೋಡದೆ
ಈ ಬೆಕ್ಕು, ದನ, ನಾಯಿಗಳೆಲ್ಲಾ
ಎಷ್ಟೊಂದು ಸುಖವಾಗಿವೆ !
******
picture: painting of norman rockwell

18.10.09

ಮನಸೂ(ಸಾ)ರೆ

ಇಡೀ ಪ್ರಪಂಚ ನನ್ನನ್ನ ನೋಡಿ ನಗ್ತಿದೆಯಲ್ಲ...
ನಗ್ಲಿ ಬಿಡು ಏನಾಯ್ತು....
ಹೌದಲ್ಲ...ನಗೋರು ನಗ್ಲಿ...ಪಾಪ...
-------------------------

ಹೀಗೊಂದು ಪಾಸಿಟಿವ್ ನೋಟ್‌ನೊಂದಿಗೆ ಶುಭಂ ಆಗುವ ಚಿತ್ರ ಮನಸಾರೆ.
ಮುಂಗಾರು ಮಳೆ, ಗಾಳಿಪಟ ಚಿತ್ರಗಳಲ್ಲಿ ಗಟ್ಟಿ ಕಥಾ ವಸ್ತು ಇಲ್ಲವಾದರೂ ಚುರುಕಾದ ನಿರೂಪಣೆ, ದೃಶ್ಯವೈಭವ ಮತ್ತು ಇಂಪಾದ ಹಾಡುಗಳಿಂದಷ್ಟೇ ಗೆಲುವು ದಕ್ಕಿಸಿಕೊಂಟಿದ್ದರು ಯೋಗರಾಜ್ ಭಟ್. ಆದರೆ ಈ ಬಾರಿ ಹೆಚ್ಚು ಮೆಚ್ಯೂರ‍್ಡ್ ಕಥಾವಸ್ತು ಇದೆ. ಫ್ರೆಶ್ ಮುಖಗಳಿವೆ, ಮುಂಗಾರು ಮಳೆಯ ನಂತರ ಮಾಮೂಲಿಯಾಗಿಬಿಡುವ ಮಳೆ ಈ ಬಾರಿ ಕಣ್ಮರೆಯಾಗಿ ಉತ್ತರ ಕನ್ನಡದ ಹವಾ ಮನಸಾರೆಯ ಮೂಲಕ ಬೀಸತೊಡಗಿದೆ.
ಬಳ್ಳಾರಿ, ಚಿತ್ರದುರ್ಗ, ಹಂಪಿಯ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಮಡಿಕೇರಿಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದ ಶೂಟಿಂಗ್ ನಡೆದಿದೆ.ಬರಡು ಭೂಮಿಯನ್ನು ಚಿತ್ರಕಥೆಗೆ ತಕ್ಕಂತೆ ಬಳಸಿಕೊಂಡಿದ್ದಕ್ಕೆ ಛಾಯಾಗ್ರಾಹಕ ಸತ್ಯ ಹೆಗಡೆಗೆ ಶರಣು.
ಇಲ್ಲೂ ಮನತಣಿಸುವ ಸಂಗೀತ, ಹಾಡುಗಳಿವೆ. ಕಾಯ್ಕಿಣಿಯವರ ಸಾಹಿತ್ಯದಿಂದಾಗಿ ಉತ್ತರಕನ್ನಡದಲ್ಲೂ ಮಳೆಯಾಗಿದೆ!(i.e:ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ). ಯೋಗರಾಜ ಭಟ್ಟರ ನಾ ನಗುವ ಮೊದಲೇನೆ, ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ, ಮನಮುಟ್ಟುವುದರಲ್ಲಿ ಸಂಶಯವೇ ಇಲ್ಲ.
ಅಪ್ಪ ಅಮ್ಮನಿಲ್ಲದೆ ಚಿಕ್ಕಪ್ಪನ ಮನೆಯಲ್ಲಿ ಬೆಳೆಯುವ ಮನೋಹರ(ದಿಗಂತ್) ಚಿಕ್ಕಮ್ಮ ಮತ್ತು ಆಕೆಯ ಸಾಫ್ಟ್‌ವೇರ‍್ ಮಗನ ಕಣ್ಣಲ್ಲಿ ಕಸ. ರಸ್ತೆಯಲ್ಲಿ ವಿದ್ಯುತ್ ಉತ್ಪಾದಿಸುವಂತಹ ವಿಚಿತ್ರ ಐಡಿಯಾಗಳಿರುವ ಮನೋಹರನ ಪ್ರೇಯಸಿ ನೀತು ಈತನ ಬದುಕಿನ ಬಗ್ಗೆ ಇರುವ ನಿರ್ಲಕ್ಷ್ಯ ನೋಡಿ ಸಹಿಸದೆ ಬೇರೊಬ್ಬನೊಂದಿಗೆ ಮದುವೆಯಾಗುವುದೇ ಚಿತ್ರದ ಎರಡನೇ ಸೀನ್. ಇಡೀ ‘ಜೀವನ ಹರಿದು ಹೋದ ಚಪ್ಪಲಿ ಹಾಗಾಯ್ತು’ ಎಂಬಂತಹ ಕ್ರೇಝಿ ಡಯಲಾಗುಗಳನ್ನು ದಿಗಂತ‌ಗೆ ಬಾಯಿಪಾಠ ಮಾಡಿಸಿದ್ದಾರೆ ಭಟ್.

ನಿರುದ್ಯೋಗಿ ಮನೋಹರ ಮನೆಗೆ ಬೇಡದವನಾಗಿ, ಸಮಾಜಕ್ಕೂ ಬೇಡದವನಾಗುತ್ತಾನೆ, ಈತ ಹುಚ್ಚಾಸ್ಪತ್ರೆ ಸೇರಬೇಕಿತ್ತು ಎಂಬಂತಹ ಮಾತುಗಳು ಮತ್ತೆ ಮತ್ತೆ ಈತನನ್ನ ಚುಚ್ಚುತ್ತವೆ. ಅದೊಂದು ದಿನ ಬೆಂಗಳೂರು-ಮಂಗಳೂರು ರಸ್ತೆ ಪಕ್ಕ ನಡೆಯುತ್ತಿದ್ದ ಮನೋಹರನನ್ನು ಕಾಮನಬಿಲ್ಲು ಮಾನಸಿಕ ಅಸ್ವಸ್ಥರ ಸಾಗಾಟ ವಾಹನವೊಂದು ಅಚಾನಕ್ಕಾಗಿ ಹಾಗೂ ಆಕಸ್ಮಿಕವಾಗಿ ಮಹೇಂದ್ರ ಎಂದು ತಿಳಿದು ಎತ್ತಿ ಕೊಂಡೊಯ್ಯುತ್ತದೆ. ನಾನು ಮಹೇಂದ್ರನೂ ಅಲ್ಲ, ಹುಚ್ಚನಲ್ಲ ಎಂದರೂ ಬಿಡುವುದಿಲ್ಲ.
ಅಲ್ಲಿಗೆ ಚಿತ್ರವೂ ವೇಗ ಪಡೆದುಕೊಳ್ಳುತ್ತದೆ.
ಆಸ್ಪತ್ರೆಯಲ್ಲಿ ಈತನ ಬೆಡ್ ಪಕ್ಕ ಇರುವವನು ಶಂಕ್ರಣ್ಣ(ರಾಜು ತಾಳಿಕೋಟೆ), ಕಳೆದ ೨೦ ವರ್ಷಗಳಿಂದ ಅದೇ ಕೇಂದ್ರದಲ್ಲಿರುವವನು. ಈ ಪಾತ್ರ ಚಿತ್ರವನ್ನು ಆಧರಿಸುತ್ತದೆ. ಬಳ್ಳಾರಿ ಕನ್ನಡದಲ್ಲಿ ವಟವಟ ಮಾತನಾಡುವ ರಾಜು ಪ್ರೇಕ್ಷರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.
ಕಾಮನಬಿಲ್ಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮನೋಹರ ಅಚಾನಕ್ ಆಗಿ ನಾಯಕಿ ದೇವಿಕಾ(ಐಂದ್ರಿತಾ ರೇ)ಳನ್ನು ನೋಡಿ ಕಂಟ್ರೋಲ್ ತಪ್ಪುತ್ತಾನೆ. ಕಾಮನಬಿಲ್ಲಿನ ಕೋಟೆಯಿಂದ ಹೊರಬಂದವನೂ ಮತ್ತೆ ಆಕೆಗಾಗಿ ಮರಳುತ್ತಾನೆ. ನಿದ್ದೆ ಮಾತ್ರೆ ತಿಂದು ಆಕೆ ನಿದ್ದೆಯಲ್ಲಿ ಮುಳುಗಿರುವಾಗಲೇ ಶಂಕ್ರಣ್ಣನ ನೆರವಲ್ಲಿ ಆಕೆಯನ್ನು ೧೦೮ ಅಂಬ್ಯುಲೆನ್ಸ್‌ಗೆ ಹಾಕಿಕೊಂಡು ಪರಾರಿಯಾಗುತ್ತಾರೆ.
ತಾಯಿಯನ್ನು ಹಿಂಸಿಸಿ ಕೊಂದ ತಂದೆಯ ಕಾರಣಕ್ಕಾಗಿ ಎಲ್ಲ ಗಂಡಸರನ್ನು ದ್ವೇಷಿಸುವ ದೇವಿಕಾ ಮನೋಹರನನ್ನೂ ಕೊಲ್ಲಲು ಯತ್ನಿಸುತ್ತಾಳೆ, ಸೋಲುತ್ತಾಳೆ, ಆತನಿಗೂ ಮನಸೋಲುತ್ತಾಳೆ ಕೂಡಾ!
ಗಾಢವಾಗಿ ಪ್ರೀತಿಸುವ ಇಬ್ಬರೂ ಓಡಿ ಹೋಗುವ ಬದಲು ಮತ್ತೆ ಕಾಮನಬಿಲ್ಲಿಗೇ ಬರಳುತ್ತಾರೆ. ಶಂಕ್ರಣ್ಣ ಇವರಿಬ್ಬರ ಮದುವೆ ಮಾಡಿಸುವಂತೆ ಕಾಮನಬಿಲ್ಲಿನ ನಿರ್ದೇಶಕರಿಗೆ ವಿನಂತಿ ಮಾಡಿದರೂ ಅದು ವಿಫಲವಾಗುತ್ತದೆ. ಅಷ್ಟರ ಹೊತ್ತಿಗೆ ತಪ್ಪಿಸಿಕೊಂಡಿದ್ದ ಹುಚ್ಚ ಮಹೇಂದ್ರ ಸಿಗುತ್ತಾನೆ, ಮನೋಹರನನ್ನು ಕಾಮನಬಿಲ್ಲಿನಿಂದ ಹೊರ ಹಾಕುತ್ತಾರೆ. ಕಾಮನಬಿಲ್ಲಿನ ಹುಡುಗಿಯರ ಮೇಲೆಯೇ ಕಣ್ಣಿರಿಸುವ ಡಾಕ್ಟರನೊಬ್ಬನ ಮಸಲತ್ತೂ ಇದರಲ್ಲಿರುತ್ತದೆ.

ಮನೆಗೆ ಮರಳುವ ಮನೋಹರನಿಗೆ ಮತ್ತೆ ಹೊರಗೇನಿಲ್ಲ ಅನಿಸುತ್ತದೆ. ಆರೋಗ್ಯಕವಚ ಅಂಬ್ಯುಲೆನ್ಸ್‌‌ ನಲ್ಲಿ ತಪ್ಪಿಸಿಕೊಂಡಾಗ ದೇವಿಕಾಳನ್ನು ಗಾಢವಾಗಿ ಪ್ರೀತಿಸುವ ಮನೋಹರನ ಮನದ ಪರಿಶುದ್ಧತೆ ಕಾಮನಬಿಲ್ಲಿನ ನಿರ್ದೇಶಕರಿಗೆ ಅರಿವಾಗಿ ಇಬ್ಬರನ್ನು ಒಂದಾಗಿಸುತ್ತಾರೆ.
ಮಾನಸಿಕ ಆರೋಗ್ಯ ಕೇಂದ್ರವೊಂದನ್ನು ಕಥೆಯಾಗಿಸುವ ಮೂಲಕ ಹೊಸತನ ನೀಡಿದ್ದಾರೆ ಭಟ್.
ಅಂಬ್ಯುಲೆನ್ಸ್‌ನಲ್ಲಿ ನಾಯಕಿಯನ್ನು ಕರೆದುಕೊಂಡು ಹೋಗುವ ದೃಶ್ಯ, ಕಾಮನಬಿಲ್ಲಿನ ದೊಡ್ಡಗೋಡೆಯ ಕಿಂಡಿಯಲ್ಲಿ ನಾಯಕ ನಾಯಕಿ ಮಾತನಾಡಿಕೊಳ್ಳುವ ದೃಶ್ಯ, ಚಿತ್ರದ ಕೊನೆಯಲ್ಲಿ ಇಡೀ ಚಿತ್ರದ ಪಾತ್ರಗಳು, ಜನರು ಸೇರಿಕೊಂಡು ಮನೋಹರನನ್ನು ತಮಾಷೆ ಮಾಡಿದಂತೆ ಭಾಸವಾಗುವ ದೃಶ್ಯಗಳು ಬಹಳ ಕಾಲ ನೆನಪಿನಲ್ಲುಳಿಯುವಂಥವು.
ನಟನೆಯಲ್ಲಿ ದಿಗಂತ್ ಬಹಳ ಸುಧಾರಿಸಿದ್ದಾರೆ, ಡ್ಯಾನ್ಸ್‌, ಅಭಿವ್ಯಕ್ತಿ, ಸಂಭಾಷಣೆ ನಿರಾಳವಾಗಿದೆ. ಐಂದ್ರಿತಾ ಕಣ್ಣಿಗೆ ಹಬ್ಬ. ನಟನೆಯೂ ಸುಂದರ. ತಾಳಿಕೋಟೆ ರಾಜು ಮೂಲಕ ಕನ್ನಡಚಿತ್ರರಂಗಕ್ಕೆ ಮತ್ತೊಂದು ಪ್ರತಿಭೆ ಪರಿಚಯವಾದಂತೆ. ಅಚ್ಯುತ್ ಕುಮಾರ‍್, ಪವನ್ ಕುಮಾರ‍್, ನೀನಾಸಂ ಅಶ್ವಥ್ ಚಿತ್ರಕ್ಕೆ ನೆರವಾಗಿದ್ದಾರೆ.
ಬಹಳ ಕಾಲದ ನಂತರ ಒಳ್ಳೆಯ ಚಿತ್ರ ನೋಡಿದಂತಾಗಿದೆ.
ಸಿನಿಮಾ ನೋಡಿದರೆ ಅದು ನಮ್ಮನ್ನು ಕನಿಷ್ಠ ೧ ವಾರವಾದರೂ ಕಾಡುತ್ತಿರಬೇಕು, ಒಂದು ವರುಷವಾದರೂ ಹಾಡು ಬಾಯಲ್ಲಿ ಗುನುಗುತ್ತಿರಬೇಕು. ಅಂತಹ ಒಳ್ಳೆಯ ಚಿತ್ರ ಕೊಟ್ಟಿದ್ದಕ್ಕೆ ಭಟ್ಟರಿಗೆ,ಉಲ್ಲಾಸಭರಿತ ಟ್ಯೂನ್‌ಗಳಿಗಾಗಿ ಮನೋಮೂರ್ತಿಯವರಿಗೆ, ಮತ್ತು ಮನಸೂರೆಗೊಂಡ ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ !
ಚಿತ್ರಕೃಪೆ: manasaare.com, nowshowing.com

7.10.09

ಪ್ರಶ್ನೋತ್ತರ ಕಾಲ

ಪ್ರಶ್ನೆಗೆ ಉತ್ತರ
ಸಿಗುವುದಿಲ್ಲ ಎಂದು
ತಿಳಿದ ಬಳಿಕ
ಪ್ರಶ್ನೆ ಏಕಾಂಗಿ
ಆಗಿ ಉಳಿದುಬಿಟ್ಟಿತು

ಪ್ರಶ್ನೆಗಾದರೂ ಏನು?
ಪ್ರಶ್ನೆಯಾಗಿ ಕಾಡಿದರಾಯಿತು
ಉತ್ತರಿಸುವುದು ಬಲುಕಷ್ಟ
ಪ್ರಶ್ನೆಗೆ ಬೇಸರವೂ
ಆಗಬಾರದು, ಉತ್ತರ ಸಿಗಲೂಬೇಕು

ತಲೆಗೊಂದರಂತೆ ಎದ್ದ
ಪ್ರಶ್ನೆಗಳ ಪಂಜರದಲ್ಲಿ
ಸಿಲುಕಿದ ಉತ್ತರವೀಗ
ಹೊರಬರಲು ತಡಕಾಡುತ್ತಿದೆ....

ತನ್ನಿಂದ ಪೇಚಿಗೆ
ಸಿಲುಕಿದ ಉತ್ತರವನ್ನು
ನೋಡಿ ಪ್ರಶ್ನೆಗೆ ಸಂಕಟ ಹಾಗೂ
ಪ್ರೀತಿ ಉಮ್ಮಳಿಸಿಬಂತು...
ಈಗ ಇವೆರಡೂ ಸೇರಿಕೊಂಡಿವೆ
ಉಳಿದೆಲ್ಲರನ್ನೂ ಕಾಡತೊಡಗಿವೆ!

ಪ್ರಶ್ನೆಗೆ ಉತ್ತರ ಹುಡುಕುತ್ತಾ
ಆ ಕಪ್ಪುಕತ್ತಲಿನ ಸುರಂಗದಲ್ಲಿ ಸಾಗಿದ
ನನಗೆ ಕೊನೆಯಲ್ಲಿ
ಕಂಡದ್ದು ಏನು ???

27.9.09

ಚಳಿಗೊಂದಿಷ್ಟು ಕುರುಕಲು !

ಎಲೆಯೊಂದು,
ಮರದಿಂದ ಕಳಚಿಕೊಂಡು
ಸ್ವತಂತ್ರವಾಗಲು
ಆಲೋಚಿಸುತ್ತ...
ಒಂದು ನಿರ್ಧಾರಕ್ಕೆ ಬರುವಾಗ
ಹಣ್ಣಾಗಿತ್ತು !

----------
ಮೊದಲ ಮುತ್ತಿನ
ಮತ್ತಿನಲ್ಲೇ ಮುಳುಗಿ
ರಾತ್ರಿ ಕಳೆದ
ಹುಡುಗನಿಗೆ ಮಾರನೇ
ಹಗಲು ಸುದೀರ್ಘ
ಅನ್ನಿಸಿತು!

------------

ಚಳಿ ಎಂದರೇನು?
ಬಚ್ಚಲಿನ ಒಲೆಯ
ಮಗ್ಗುಲಲ್ಲಿ
ಮುದುಡಿ ಮಲಗಿದ
ನಾಯಿಮರಿಯ ಕೇಳಲೇನು?

------------
ಬಾಗಿದಕತ್ತು,
ಕೆನ್ನೆಮೇಲೆ
ಮೂಡಿದ ನತ್ತಿನ
ಒತ್ತು,
ಮೊದಲ ಮುತ್ತಿನ
ಗಮ್ಮತ್ತು!

15.9.09

ಬೆಂಗಳೂರು-ಮಂಗಳೂರು ಬಸ್ಸಲ್ಲಿ ಮಿಡ್‌ನೈಟ್ ಮಸಾಲ!

ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು...

ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ.

ಏನೇ ಇರಲಿ ಬೆಂಗಳೂರು ತಲಪಿದ್ದಾಯ್ತು. ಗೆಳೆಯ ಸದಾಶಿವನೊಂದಿಗೆ ಮಧ್ಯಾಹ್ನ ವರೆಗೂ ಕ್ಯಾಮೆರಾ ಸರ್ವಿಸ್, ಮತ್ತಿತರ ಕೆಲಸ. ಬಂಧುವೊಬ್ಬರ ಮನೆಗೆ ಭೇಟಿ, ಪುಸ್ತಕಕ್ಕಾಗಿ ಸಪ್ನ ಬುಕ್ ಹೌಸ್ ಭೇಟಿ...ಹೀಗೆ ನನ್ನ ಪಟ್ಟಿಯಲ್ಲಿದ್ದ ಕೆಲಸಗಳೆಲ್ಲ ಮುಗಿದವು. ಸಂಜೆ ೭-೩೦ರ ವೇಳೆಗೆ ಎಲ್ಲ ಕೆಲಸವೂ ಆಗಿತ್ತು,
ಮೆಜೆಸ್ಟಿಕ್‌ನ ಕಾಮತ್‌ದಲ್ಲಿ ಲೈಟಾಗಿ ರವಾ ದೋಸೆ ಸವಿದು, ಇನ್ನು ರಾಜಹಂಸದಲ್ಲೇ ಪ್ರಯಾಣಿಸೋಣ ಎಂದು ಲೆಕ್ಕ ಹಾಕಿ ಕೆಎಸ್‌ಆರ‍್ಟಿಸಿ ಬಸ್ ನಿಲ್ದಾಣದತ್ತ ಪಾದ ಬೆಳೆಸಿದೆ. ಶನಿವಾರವಾದ್ದರಿಂದ ಎಂದಿಗಿಂತ ಹೆಚ್ಚು ಜನರಿದ್ದರು.
‘ಸಾರ‍್ ನೀವು ಕನ್ನಡ, ಹಿಂದಿ ಅಥವಾ ಮಲಯಾಳಂ’ ಎನ್ನುತ್ತಾ ಸುಮಾರು ೧೭-೧೮ರ ಹುಡುಗನೊಬ್ಬ ದೂರದ ಬಂಧುವಿನಂತೆ ಓಡೋಡಿ ಬಂದ. ಖಾಸಗಿ ಬಸ್ ಏಜೆಂಟ್ ಅನ್ನೋದು ಮೇಲ್ನೋಟಕ್ಕೇ ಗೊತ್ತಾಯ್ತು.
ಕನ್ನಡ...ಯಾಕೆ?
ಎಲ್ಲಿಗೆ ಹೋಗ್ಬೇಕ್ ಸಾ....?
ಮಂಗಳೂರಿಗೆ...ಕೆಎಸ್ಸಾರ್ಟಿಸಿಯಲ್ಲೇ ಹೋಗ್ತೇನೆ...
ನಮ್ಮದು ದುರ್ಗಾಂಬಾ ಬಸ್ಸಿದೆ. ಬರೀ ೩೨೦ ರು ಚಾರ್ಜಷ್ಟೇ...೯ ಗಂಟೆಗೆ ಬಿಡುತ್ತೇವೆ, ೫.೩೦, ೬ಕ್ಕೆಲ್ಲಾ ಮಂಗಳೂರು ತಲಪುತ್ತೆ.

ಯಾವ ಬಸ್ಸೆಂದು ನಾನೂ ನಿರ್ಧರಿಸಿರಲಿಲ್ಲ, ಹಾಗಾಗಿ ಖಾಸಗಿ ಬಸ್ ಸೇವೆ ಹೇಗಿದೆ ಎಂದು ನೋಡೋಣ ಎಂಬ ಕುತೂಹಲವೂ ಇತ್ತು. ದುರ್ಗಾಂಬ ಇದ್ದುದರಲ್ಲೇ ಒಳ್ಳೆ ಬಸ್ ಎಂಬ ಹೆಸರೂ ಇದ್ದ ಕಾರಣ ಅವನೊಂದಿಗೆ ಏಜೆನ್ಸಿಗೆ ಹೆಜ್ಜೆ ಹಾಕಿದೆ.
ನನ್ನನ್ನು ಬರಹೇಳಿದ ಆತ ಸರಕ್ಕನೆ ರಸ್ತೆ ದಾಟಿ ಮೀಡಿಯನ್‌ನಲ್ಲಿದ್ದ ಬೇಲಿಯನ್ನೂ ಹೈಜಂಪ್ ಮಾಡಿದ. ನಾನೂ ಹಿಂಬಾಲಿಸಿದೆ.


ಕೆಎಫ್‌ಸಿ ರೆಸ್ಟುರಾ ಪಕ್ಕದ ಅನ್ನಪೂರ್ಣ ಟ್ರಾವೆಲ್ ಏಜೆನ್ಸಿ ಬೋರ್ಡ್ ನೋಡುತ್ತಾ ಒಳ ನಡೆದೆ. ಅಲ್ಲಿ ಕುಳಿತಿದ್ದ ಮಹಾನುಭಾವ ಸೈಡ್ ಸೀಟಲ್ವಾ ಎಂದು, ವಿಚಾರಿಸಿ ೧೯ ಸೀಟ್ ನಂಬರ‍್ ಬರೆದು ರಶೀದಿ ಕೊಟ್ಟ. ಹಣಕೊಟ್ಟೆ.

ಊಟ-ಗೀಟ ಮಾಡಿ ಬನ್ನಿ ಸಾ....೯.೩೦ಕ್ಕೆ ಇಲ್ಲೇ ಮುಂದೆ ಬಸ್ ಪಿಕಪ್‌ಗೆ ಬರುತ್ತೆ ಎಂದ.
ಮತ್ತೆ ೯ಕ್ಕೆ ಬಸ್ ಬಿಡುತ್ತೆ ಅಂದಿದ್ದಲಾ? ಕೇಳಿದೆ.
ಬಸ್ ಇಲ್ಲೇ ಹಿಂದೆ ಇದೆ. ಅದು ೯ಕ್ಕೇ ಹೊರಟು, ಕಲಾಸಿಪಾಳ್ಯ ಹೋಗಿ ಇಲ್ಲಿಗೆ ೯.೩೦ಕ್ಕೆ ಬರುತ್ತೆ ಎಂದು ಹೇಳಿದ ಆಸಾಮಿ.
ಇರಲಿ ಅರ್ಧಗಂಟೆಯಲ್ವೇ ಎಂದು ವಾಚ್ ನೋಡಿದರೆ ಇನ್ನೂ ೮.೧೫. ಸಾಕಷ್ಟು ಸಮಯವಿತ್ತು. ಸುಮ್ಮನೇ ಕೆಎಸ್‌ಆರ‍್ಟಿಸಿ ಬಸ್ ನಿಲ್ದಾಣಕ್ಕೊಂದು ಸುತ್ತು ಹಾಕಿ ಒಂದು ಕೋಲ್ಡ್ ಬಾದಾಮಿ ಹಾಲು ಕುಡಿದು ಅನ್ನಪೂರ್ಣ ಏಜೆನ್ಸಿಯಲ್ಲಿ ಕುಳಿತು ಇದ್ದ ಪುಸ್ತಕ ಓದುತ್ತಲಿದ್ದೆ. ಅಲ್ಲೊಬ್ಬ ಹಿಂದಿ ಮಾತಾಡುವ ಸ್ವಾಮೀಜಿ ಕೂಡಾ ಕುಳಿತಿದ್ದರು.
೯.೩೦ಕ್ಕೆ ಏಜೆನ್ಸಿಯ ಆಸಾಮಿ ನಮ್ಮನ್ನು ಹೊರಗೆ ಕರೆದು. ಅಲ್ಲಿಂದ ಸುಮಾರು ೧೦೦ ಮೀಟರ‍್ ದೂರ ಸುರಂಗ ಮಾರ್ಗದ ಹತ್ತಿರ ಸಾಲು ಸಾಲಾಗಿ ಖಾಸಗಿ ಬಸ್ ನಿಂತಿದ್ದವು.
ಅಲ್ನೋಡಿ ಸಾ...ಹಿಂದಿನಿಂದ ಎರಡನೇ ಬಸ್...ನಿಮ್ಮದೇ..ಅನ್ನಪೂರ್ಣದಿಂದ ಬಂದಿದ್ದು ಅಂತ ರಶೀದಿ ತೋರಿಸಿ...ಎಂದ.
ನಾನೂ ಮತ್ತು ಹಿಂದಿ ಸ್ವಾಮೀಜಿ ಅಲ್ಲಿಗೆ ಹೋದೆವು.


ನೋಡಿದರೆ ಅದು ಯಾವುದೋ ಎಂಆರ್‌ಎಲ್ ಬಸ್. ಮಂಜುನಾಥ ರೋಡ್‌ಲೈನ್ಸ್ ಎಂಬ ಭಗವಂತನ ಹೆಸರು ಬೇರೆ!
ಅಲ್ಲಿದ್ದ ಮತ್ತೊಂದು ಅಸಾಮಿಗೆ ರಶೀದಿ ಕೊಟ್ಟೆ, ಅದನ್ನು ಕಿಸೆಗಿಳಿಸಿ, ಇನ್ನೊಂದು ಬೋರ್ಡಿಂಗ್ ಪಾಸ್ ಕೊಟ್ಟ. ವಿಂಡೋ ಸೀಟಲ್ವೇ ಇನ್ನೊಮ್ಮೆ ವಿಚಾರಿಸಿಕೊಂಡೆ.
ಹೋಗಿ ಹೋಗಿ ಕುತ್ಕಳ್ಳಿ ಎಂದು ದಬಾಯಿಸಿದ !
ನೇರ ೧೯ ಸೀಟಲ್ಲಿ ಹೋಗಿ ಕುಳಿತೆ. ಇನ್ನೊಂದು ಸಾಲಿನ ವಿಂಡೋ ಸೀಟಲ್ಲಿ ಹಿಂದಿ ಸ್ವಾಮೀಜಿ.
ಕುಳಿತು ಬಸ್ ಅವಲೋಕಿಸಿದರೆ ಯಾವುದೋ ೧೫ ವರ್ಷ ಹಿಂದಿನ ಲಡಖಾಸು ಗಾಡಿಯದು. ಸೀಟಿನ ತಲೆಭಾಗದಲ್ಲಂತೂ ಕಪ್ಪುಕಪ್ಪು ಗ್ರೀಸ್ ಬಳಿದಂತೆ ಕಾಣುತ್ತಿತ್ತು. ಬಾಟಲ್, ಪೇಪರ‍್ ಹೋಲ್ಡರುಗಳೆಲ್ಲಾ ಹರಿದು ನೇತಾಡುತ್ತಿದ್ದವು. ಪ್ರಯಾಣಿಕರೊಬ್ಬರ ಕೈ ಆಕಸ್ಮಿಕವಾಗಿ ತಗಲಿ ಲೈಟೊಂದರ ಮುಚ್ಚಳ ಬಿದ್ದೇ ಹೋಯ್ತು. ಇತಿಹಾಸ ಕಾಲದಲ್ಲಿ ವಿಡಿಯೋ ಕೋಚ್ ಬಸ್ಸಾಗಿತ್ತು ಎಂದು ಸಾರುವಂತೆ ವಿಡಿಯೋ ಇದ್ದ ಜಾಗದಲ್ಲಿ ಬೋರ್ಡೊಂದನ್ನು ಅಂಟಿಸಿದ್ದರು.
ನನ್ನದೇ ಆಲೋಚನೆ ಬಹುಷ ಸ್ವಾಮೀಜಿಗೂ ಕಾಡಿತ್ತು. ಯೇ ಬೋಲ್ತೇ ಕುಚ್, ಓರ‍್ ಕರ‍್ತೇ ಕುಚ್ ಔರ‍್ ಹೇಂ, ಯೇ ತೋ ಥರ್ಡ್ ಕ್ಲಾಸ್ ಬಸ್ ಹೇ ಎಂದು ನನ್ನಲ್ಲಿ ಅಸಮಾಧಾನ ತೋಡಿಕೊಂಡರು.


ಆಗ ಬಸ್‌ ಒಳಗೆ ಆಸಾಮಿ ನಂಬರ‍್-೩ ಪ್ರವೇಶ.
ಪಾಸ್ ನೋಡುತ್ತಾ ನನ್ನ ಬಳಿ ಬಂದ. ನಿಮ್ಮದು ವಿಂಡೋ ಸೀಟಲ್ಲ, ಈಚೆ ಕುಳಿತ್ಕಳ್ಳಿ ಎಂದ.
ನಾನು ಪ್ರತಿಭಟಿಸಿದೆ, ಏಜೆನ್ಸಿ ಬಳಿ ನಾನು ಕೇಳಿದ್ದು ವಿಂಡೋಸೀಟೇ ಎಂದೆ.
ನಾನು ಏಳುವುದಿಲ್ಲ ಎಂದು ಗೊತ್ತಾದಾಗ ಸ್ವಾಮೀಜಿಯನ್ನು ಸಾಗಹಾಕಲು ಹೋದ. ಸ್ವಾಮೀಜಿ ಸಿಟ್ಟೇರಿ, ಯು ಗಿವ್ ಬ್ಯಾಕ್ ಮೈ ಮನಿ, ಐ ವಿಲ್ ಗೆಟ್ ಡೌನ್ ಎಂದು ಅಬ್ಬರಿಸಿದರು.


ಮತ್ತೆ ನನ್ನ ಬಳಿ ಬಂದು ಇಬ್ಬರಿಗೂ ವಿಂಡೋ ಸೀಟ್ ಕೊಡಲ್ಲ. ಒಬ್ಬರು ಈಚೆ ಬರಲೇ ಬೇಕು ಅಂದ.
ನನಗೆ ಹಿಂದಿನ ದಿನದ ನಿದ್ದೆ, ಇಡೀ ಹಗಲು ಸುತ್ತಾಡಿದ ಸುಸ್ತು ಎರಡೂ ಇದ್ದರಿಂದ ಸಿಟ್ಟು ಬಂತು, ಸೀದಾ ಇಳಿದು ಅನ್ನಪೂರ್ಣ ಏಜೆನ್ಸಿಗೇ ನಡೆದೆ. ಆಸಾಮಿ ಅಲ್ಲೇ ಕುಳಿತು ಹಲ್ಲು ಗಿಂಜಿದ. ಏನ್ ಈ ಥರಾ ಮೋಸ ಮಾಡ್ತೀರಾ...ಪುನಃ ಬರಲ್ಲ ಎಂದು ತಿಳಿದಿದ್ದೀರಾ ಎಂದೇನೋ ಬಾಯಿಗೆ ಬಂದ ಹಾಗೆ ಒದರಿದೆ. ನನಗೆ ದುರ್ಗಾಂಬಾದಲ್ಲೇ ಸೀಟ್ ಕೊಡಿ, ಇಲ್ಲ ಹಣ ವಾಪಾಸ್ ಮಾಡು ಎಂದೆ.
ಛೇಛೇ ಅಷ್ಟು ಬೇಜಾರ‍್ ಯಾಕೆ ಮಾಡ್ತೀರಿ ಸಾರ‍್ ಬೇರೆ ಬಸ್ ಕೊಡೋಣ ಎಂದು ಸಮಾಧಾನ ಹೇಳಿದ. ಎಲ್ಲೆಲ್ಲೋ ಫೋನ್ ಮಾಡಿದ ಎಲ್ಲೂ ಸೀಟ್ ಇದ್ದ ಹಾಗೆ ಕಾಣಲಿಲ್ಲ,
ನನ್ ಜತೆ ಬನ್ನಿ ಸಾರ‍್, ನಾನ್‌ ಅದೇ ಬಸ್ಸಲ್ಲಿ ವಿಂಡೋ ಸೀಟ್ ಮಾಡಿಕೊಡುತ್ತೇನೆ ಎಂದ.
ನನಗೂ ಇನ್ನಷ್ಟು ಸುತ್ತಾಡುವ ಜೋಷ್ ಇರಲಿಲ್ಲ. ಮತ್ತೆ ಮಂಜುನಾಥ ಬಸ್ ಗೆ ಬಂದೆವು. ಅಲ್ಲಿ ಈ ಮೂವರೂ ಆಸಾಮಿಗಳಿಗೂ ಅದೇನೇನೋ ಜಗಳ. ನಾನೂ ನನ್ನ ಸಿಟ್ಟನ್ನೂ ಮೂವರ ಮೇಲೂ ಪ್ರದರ್ಶಿಸಿದೆ. ಆಗಲೇ ಗಂಟೆ ೧೦.೩೦ !
ಬಸ್‌ನಲ್ಲಿದ್ದ ಉಳಿದವರು ತಮಾಷೆ ನೋಡುತ್ತಿದ್ದರು. ೯.೩೦ರ ಬಸ್ ಇನ್ನೂ ಯಾಕೆ ಬಿಟ್ಟಿಲ್ಲ ಎಂದು ಕೇಳುವ ಧೈರ್ಯ ಅವರಲ್ಲಾರಲ್ಲೂ ಇಲ್ಲ. ಅಂತೂ ಅಷ್ಟು ಕಷ್ಟಪಟ್ಟದ್ದಕ್ಕೆ ನನಗೊಂದು ವಿಂಡೋ ಸೀಟ್ ದಯಪಾಲಿಸಿದರು ಮಂಜುನಾಥನ ದೂತರು!
ಕಣ್ಮುಚ್ಚಿ ನಿದ್ದೆಗೆ ಪ್ರಯತ್ನಿಸಿದೆ. ಗಂಟೆ ಸುಮಾರು ೧೧.೧೫ ಆದರೂ ಬಸ್ ಹೊರಡಲಿಲ್ಲ. ನನಗೂ ಜಗಳ ಮುಂದುವರಿಸಲು ಮನಸ್ಸಿರಲಿಲ್ಲ. ಅದಾಗಲೇ ಸಾಕಷ್ಟು ಕೆಟ್ಟ ಆನುಭವ ಆಗಿತ್ತು. ನನ್ನ ಜಗಳದ ತಮಾಷೆ ಸವಿದ ಇತರರೂ ಈಗ ಕಿರಿಕಿರಿ ಶುರುಮಾಡಿದರು. ಅಂತೂ ಮಂಜುನಾಥನ ಕೃಪೆಯಿಂದ ಎಂಆರ್‌ಎಲ್ ಎಂಬ ಬಸ್ ಕರ್ಕಶ ಇಂಜಿನ್ ಸ್ವರ ಹೊರಡಿಸುತ್ತಾ ಹೊರಟಿತು.
ಅದೆಷ್ಟೋ ಹೊತ್ತಿಗೆ ನಿದ್ದೆ ಬಂತು. ಎಚ್ಚರವಾದಾಗ ಈ ಸಿನಿಮಾದ ಇಂಟರ್‌ವಲ್! ಎಲ್ಲೋ ಟೀ ಕುಡಿಯಲು ನಿಲ್ಲಿಸಿದ್ದರು. ಮೈಯಲ್ಲೇನೋ ಕಚ್ಚಿದಂತೆ ತುರಿಸಿದಂತೆ ಅನುಭವ. ನೋಡಿದರೆ ತಿಗಣೆಗಳು! ನನಗಷ್ಟೇ ಅಲ್ಲ ಎಲ್ಲರೂ ಮೈ ತುರಿಸುತ್ತಾ ಸೀಟನ್ನು ಕೆಕ್ಕರಿಸುತ್ತಾ ಕುಳಿತಿದ್ದರು!
ಅಂತೂ ಇದೇ ರೀತಿಯ ಮಿಡ್‌ನೈಟ್ ಮಸಾಲಾ ಮುಂದುವರಿದು, ಚಾರ್ಮಾಡಿ ಘಾಟಿಯ ರಸ್ತೆ ಬ್ಲಾಕ್‌ನಲ್ಲೂ ಕೆಲ ಗಂಟೆ ಕಳೆದು ಮಂಗಳೂರು ತಲಪುವಾಗ ಬೆಳಗ್ಗೆ ೧೦.೩೦ .
ಪಿವಿಎಸ್‌ನಲ್ಲೇ ಇರುವ ಮಂಜುನಾಥ ರೋಡ್‌ಲೈನ್ಸ್ ಕಚೇರಿಗೆ ಹೋಗಿ ಅಲ್ಲಿದ್ದ ಯಜಮಾನನೊಬ್ಬನಿಗೆ ಎಲ್ಲ ಹೇಳಿದೆ.
ತಾಳ್ಮೆಯಿಂದ ಕೇಳಿಸಿಕೊಂಡ ಆತ, ಆ ಬಸ್‌ನ್ನು ನಾವು ಬೇರೆಯವರಿಗೆ ಕಾಂಟ್ರಾಕ್ಟ್‌ಗೆ ಕೊಟ್ಟಿದ್ದೇವೆ, ಏನ್‌ ಮಾಡೋದು ಸಾರ‍್ ಎಂದು ಸಹಾನುಭೂತಿ ಪ್ರದರ್ಶೀಸಿದ.
ನನಗೆ ಕೆಲಸಕ್ಕೆ ಹೋಗಬೇಕಿದ್ದರಿಂದ ನನ್ನೆಲ್ಲ ಮೂರ್ಖತನಕ್ಕೆ ಮರುಗುತ್ತಾ ಬೇಗನೆ ಮನೆ ಕಡೆ ಹೆಜ್ಜೆ ಹಾಕಿದೆ.
ಸೂಚನೆ: ಹೆಡ್‌ಲೈನಲ್ಲಿರುವ ರೋಚಕತೆ ಈ ಅನುಭವದಲ್ಲಿ ಇಲ್ಲದ್ದಕ್ಕೆ ಕ್ಷಮೆ ಇರಲಿ

2.9.09

ಮಂಜುಮುಸುಕಿದ ದಾರಿಯ ಮೂರನೇ ತಿರುವಿನಲ್ಲಿ

ಮಂಜುಮುಸುಕಿದ ದಾರಿಯಲ್ಲಿ ನನ್ನ ಪಯಣವೀಗ ಮೂರು ವರ್ಷ ಎಂಬ ಮೈಲಿಗಲ್ಲು ತಲಪಿದೆ....
ಈ ಮೊದಲು ನೂರು ಪೋಸ್ಟ್ ಆದಾಗ ಇರಲಿ, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಇಂತಹ ಮೈಲಿಗಲ್ಲನ್ನು ನೆನಪಿಸಿಕೊಳ್ಳಲು ನಾನು ಹೋಗಿರಲಿಲ್ಲ.
ಆದರೆ ಮೂರು ವರ್ಷ ಬ್ಲಾಗಿಂಗ್ ಎಂದರೆ ಅದು ನನ್ನಂಥ ಸೋಮಾರಿಗಳ ಪಾಲಿಗೆ ದೊಡ್ಡ ವಿಚಾರವೇ...
೨೦೦೬ರ ಆಗಸ್ಟ್ ೩೧ರಂದು ಮಂಜು ಮುಸುಕಿದ ದಾರಿಯಲ್ಲಿ ನನ್ನ ಮೊದಲ ಹೆಜ್ಜೆ ಗುರುತು ಮೂಡಿತ್ತು. ಗೆಳೆಯರಾದ ಚೇವಾರ‍್, ದೀಪಾ, ಕೃಷ್ಣ ಮೋಹನ್ ಅವರ ಮಾಹಿತಿಯಿಂದಾಗಿ ಬ್ಲಾಗ್ ನನಗೆ ಪರಿಚಯವಾದದ್ದು.
ಆರಂಭದಲ್ಲಿ ಸುಮ್ಮನೇ ಏನೇನೋ ಗೀಚುತ್ತಿದ್ದೆ. ಆಗಲೇ ಬ್ಲಾಗಿಗರ ಸಂಖ್ಯೆ ಏರುಗತಿಯಲ್ಲಿ ಇತ್ತು. ಆದರೂ ಅನೇಕ ಮಂದಿ ನನ್ನ ಪುಟ ಗಮನಿಸಿದರು, ನನ್ನ ಫಡಪೋಶಿ ಬರಹಗಳಿಗೂ ಪ್ರತಿಸ್ಪಂದಿಸಿದರು. ಅನೇಕ ಹಿರಿಯರ ಬರಹಗಾರರೂ ಪ್ರತಿಕ್ರಿಯಿಸಿದರು.
ಏನೇ ಇರಲಿ ಬ್ಲಾಗ್ ಎನ್ನುವುದು ನನ್ನ ಬರಹಕ್ಕೆ ಒಂದು ರೂಪ ಕೊಟ್ಟಿದೆ. ಅನೇಕ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ಸಂಪರ್ಕ ವೃದ್ದಿಸಿದೆ.
ಅದುವರೆಗೆ ಕವನ ಎಂದರೆ ದೂರ ಓಡುತ್ತಿದ್ದವನು ನಾನು. ಬ್ಲಾಗ್‌ನಲ್ಲಿ ಇತರರ ಕವನಗಳನ್ನು ಓದತೊಡಗಿದಾಗಲೇ ನಾನೂ ಯಾಕೆ ಪ್ರಯತ್ನ ಮಾಡಬಾರದು ಎಂದು ಒಂದೆರಡು ಸಾಲು ಗೀಚಲಾರಂಭಿಸಿದೆ. ಅದೆಂತಹ ಕಳಪೆಯಾಗಿದ್ದರೂ ಬ್ಲಾಗ್ ಗೆಳೆಯರು ಎಲ್ಲೂ ನನ್ನನ್ನು ಮಾತಿನಿಂದ ಚುಚ್ಚದೆ ಪ್ರೋತ್ಸಾಹಿಸಿದ್ದು ಮರೆಯಲಾರೆ. ಕೆಲವೊಮ್ಮೆ ಉದಾಸೀನವಾದಾಗ ಯಾಕೆ ಅಪ್‌ಡೇಟಾಗಿಲ್ಲ ಎಂದು ಜವಾಬ್ದಾರಿ ನೆನಪಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಮಂಜುಮುಸುಕಿದ ದಾರಿಯಲ್ಲಿ ಮುಂದೆ ಸಾಗುತ್ತ, ಸಾಗುತ್ತಾ ಹಿಂದಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ. ಕೆಲವಾದರೂ ಸ್ಮರಣೀಯವೆನಿಸುವ ಸಾಲುಗಳು, ಬರಹಗಳು ನನ್ನಿಂದ ಸೃಷ್ಟಿಯಾಗಿವೆ. ಇವೆಲ್ಲ ನಾನೇ ಬರೆದೆನೇ ಎಂಬ ಅಚ್ಚರಿ ಮಿಶ್ರಿತ ಖುಷಿ ಸಿಕ್ಕುತ್ತದೆ. ಬಹುಷಃ ಯಾವುದೇ ಮ್ಯಾಗಝಿನ್, ಪುಸ್ತಕ, ವಾರ್ತಾಪತ್ರಿಕೆ ನೀಡದಷ್ಟು ಅವಕಾಶ, ಫೀಡ್‌ಬ್ಯಾಕ್ ಬ್ಲಾಗ್‌ನಲ್ಲಿ ಸಿಕ್ಕಿದೆ.

ದಾರಿಯುದ್ದಕ್ಕೂ ನವಿರು
ಭಾವನೆಗಳ
ಮೆರವಣಿಗೆ
ಚೇತೋಹಾರಿ ಕ್ಷಣಗಳ
ನರ್ತನ,
ದಾರಿಹೋಕರ
ಚೆಲವು ನಗುವಿನ ತೋರಣ
ಸವಿಯುತ್ತಾ
ಮಂಜುಮುಸುಕಿದ ದಾರಿಯಲ್ಲಿ
ಇನ್ನಷ್ಟು ಹೆಜ್ಜೆ ಇರಿಸುವಾಸೆ..

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ, ಪ್ರೀತಿಗೆ ಒಂದು ಸಲಾಂ....

25.8.09

ಹಿಂಗಾರಿನ ಕನವರಿಕೆಗಳು

ಅಬ್ಬ...!
ಆ ನಿಮ್ಮ ಅಪರಾತ್ರಿಯ
ಯೋಜನೆಗಳ ನೋಡಿಯೇ
ಬೆಳದಿಂಗಳ ಕನಸು ಹಾರಿಹೋಯಿತು

---------------

ನನ್ನ ಕನವರಿಕೆಗಳ
ಕೇಳಬಯಸುವೆಯಾ
ಹಾಗಾದರೆ ನನ್ನ
ತಲೆದಿಂಬಿಗೆ ಕಿವಿಯಾಗು
---------------
ರುಚಿಗೆ ತಕ್ಕಷ್ಟು ಉಪ್ಪು,
ನಗುವಿಗೆ ಬೇಕಾದಷ್ಟು ಮಾತು
ಹಾಗೂ
ಪ್ರೀತಿಗೆ ಬೇಕು
ಒಂದಿಷ್ಟು ಕನಸು!

---------------

ಪಾಪ...
ಚಂದಿರ ಬೆಳದಿಂಗಳ
ರಾತ್ರಿಯಲ್ಲೂ ಅತ್ತಿರಬೇಕು
ಹುಲ್ಲಗರಿಗಳ ತುಂಬ
ಕನಸಿನ ಹನಿ ಚೆಲ್ಲಿವೆ

--------------

ನಾನು ನಿನ್ನ ಕನಸುಗಳಲ್ಲಿ ಬಾರದೇ
ಇದ್ದರೂ ಚಿಂತೆಯಿಲ್ಲ
ನಿನ್ನ ನಾಳೆಗಳಲ್ಲಿ
ಪಾಲ್ಗೊಳ್ಳಲು ಬಿಡು
ಅಷ್ಟು ಸಾಕು

29.7.09

ಮಳೆ ನನಗೆ ಎಲ್ಲವೂ....

ಈ ಮಳೆ ಅನ್ನೋದು...
ನನಗೆ
ನಗು,
ಏಕಾಂತ,
ಪ್ರೇಮಿ,
ಜೋಗುಳ,
ನಿದ್ದೆ,
ಈ ಎಲ್ಲವೂ ಹೌದು...
ಆದರೆ
ನಿನಗೋ
ಅದು
ಬರೀ ಮಳೆ ಅಷ್ಟೇ !


********

ಮಳೆ ಬಂದು
ಹುಲ್ಲು ಚಿಗುರಿದೆ
ಹಕ್ಕಿ ಚಿಲಿಪಿಲಿಗುಟ್ಟಿವೆ
ಹೂದಳಗಳಲ್ಲಿ
ನಕ್ಕಿವೆ ಜಲಬಿಂದು,
ಏನು ಪ್ರಯೋಜನ ಹೇಳು
ಹೂವಿನ
ಸುತ್ತ ದುಂಬಿಯ ಸುಳಿವಿಲ್ಲ!


*********
ರಾತ್ರಿ
ಮಳೆ ಸುರಿದದ್ದಾಗಿದೆ
ಸಿ.ಡಿ ಪ್ಲೇಯರಿನ
ಹಾಡೂ ನಿಂತಿದೆ
ಕಣ್ಣೆವೆಯಲ್ಲಿ ನಿದ್ದೆಯಿಲ್ಲ
ನನ್ನೆದೆಯಲ್ಲಿ ನೀ ಬಂಧಿಯಾಗಲು
ಸಿಡಿಲು ಬಡಿಯಲೇಬೇಕಾ !!

20.7.09

ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತ


ಏನೇನೋ ಕಾರಣಗಳಿಂದ ಈ ವರ್ಷ ಮೆಚ್ಚಿನ ಅಭ್ಯಾಸ ಟ್ರೆಕ್ಕಿಂಗಿನಿಂದ ಅನಿವಾರ್ಯವಾಗಿ ದೂರವುಳಿದಿದ್ದೆ. ನಾವೇ ರಚಿಸಿಕೊಂಡ ಚಾರಣ ತಂಡದ ಬಹುತೇಕ ಹುಡುಗರೂ ಅವರವರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡ ಕಾರಣ ಆ ತಂಡವೀಗ ಬಹುತೇಕ ಬರ್ಖಾಸ್ತುಗೊಂಡಿದೆ !
ನನ್ನನ್ನು ಮತ್ತೆ ಹಸಿರಿನತ್ತ ಸೆಳೆಯಲು ಸಹಾಯ ಮಾಡಿದ್ದು ಮಿತ್ರ ದಿನೇಶ್ ಹೊಳ್ಳ.
‘ಮಳೆಗಾಲದ ಚಾರಣ ಹಾಕಿದ್ದೇವೆ. ಬಾಂಜಾರಮಲೆ ಮತ್ತು ಕಲ್ಲರ್ಬಿ ಜಲಪಾತಕ್ಕೆ’ ಎಂಬ ಅವರ ಒಂದು ಸಂದೇಶ ಬಂದಾಗಲೇ ರಜೆ ಫಿಕ್ಸ್ ಮಾಡಿಟ್ಟು ಬಿಟ್ಟೆ.
ಚಾರ್ಮಾಡಿಯಲ್ಲಿ ಕೊಟ್ಟಿಗೆಹಾರದತ್ತ ಪ್ರಯಾಣ ಬೆಳೆಸುವಾಗ ಎಡಬದಿಗೆ ಸುಂದರ ಬೆಟ್ಟಗಳೂ, ಬಲಬದಿಗೆ ರುದ್ರರಮಣೀಯ ಕಣಿವೆ ಕೊರಕಲು ಗಮನ ಸೆಳೆಯುತ್ತವೆ. ಈ ಕೊರಕಲಿನ ಕಾಡಿನಲ್ಲಿ ಅನೇಕ ಸುಂದರ ಜಲಪಾತಗಳು ಅಡಗಿಕೊಂಡಿವೆ. ಆದರೆ ಹೆಚ್ಚಿನ ಇಂತಹ ಜಲಪಾತಗಳೂ ಇಲ್ಲಿರುವ ಎಸ್ಟೇಟುಗಳ ಭದ್ರಕೋಟೆಯಲ್ಲಿ ಬಂದಿಯಾಗಿವೆ. ಹಾಗಾಗಿ ಅನಿವಾರ್ಯವಾಗಿ ಅವು ಕೆಲವೇ ಮಂದಿಯ ಕಣ್ಣಿಗೆ ಬೀಳುತ್ತವೆ.
ಅಂತಹುದೇ ಒಂದು ಸುಂದರಿ ಕಲ್ಲರ್ಬಿ ಜಲಪಾತ.
ಬಾಂಜಾರ ಮಲೆಯೆಂಬ ಬೆಟ್ಟದಲ್ಲಿ ಮನೆ ಮಾಡಿಕೊಂಡು ಅನೇಕ ದಶಕಗಳಿಂದಲೇ ಇಲ್ಲಿ ವಾಸಿಸುತ್ತಿದ್ದಾರೆ ಮಲೆಕುಡಿಯ ಜನಾಂಗದ ಮಂದಿ. ಅವರಿರುವುದೂ ಒಂದು ಎಸ್ಟೇಟಿಗಾಗಿ. ಎಸ್ಟೇಟಿನ ಮಂದಿ ಇವರಿಗೂ ಸಾಕಷ್ಟು ಅನುಕೂಲ ಕಲ್ಪಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಸುಮಾರು ೩೪ ಮನೆಗಳು ಇಲ್ಲಿವೆ. ೧೨೦ ಮಂದಿ ಜನರಿದ್ದಾರೆ. ಎಲ್ಲರೂ ಒಂದೇ ಮನೆಯ ಮೂಲದಿಂದ ಬಂದವರೇ.
ಹೆಂಚಿನ ಮನೆ ಬಂದಿದೆ, ವರ್ಷಪೂರ್ತಿ ಹರಿಯುವ ನೀರಿನ ಸೆಲೆ ಇಲ್ಲಿರುವ ಕಾರಣ, ಅದರಿಂದಲೇ ವಿದ್ಯುತ್ ತಯಾರಿಸುವ ವ್ಯವಸ್ಥೆ ಇಲ್ಲಿದೆ, ಕೈತುಂಬಾ ಕೆಲಸ ಎಸ್ಟೇಟಿನಲ್ಲಿದೆ. ಮಕ್ಕಳಿಗೆ ಶಾಲೆ ಮಾತ್ರ ೧೪ ಕಿ.ಮೀ ದೂರದ ಕಕ್ಕಿಂಜೆಗೆ ಹೋಗಬೇಕು. ಅಲ್ಲಿನ ಆಶ್ರಮಶಾಲೆಯಲ್ಲಿ ಉಳಿದುಕೊಂಡು ಮಕ್ಕಳು ಕಲಿಯುತ್ತಾರೆ.ಈ ಬಾಂಜಾರ ಮಲೆ ಆದಿವಾಸಿಗಳ ಮನೆಗಳ ಎಡೆಯಲ್ಲೇ ಹೋಗಬೇಕು ಕಲ್ಲರ್ಬಿ ಜಲಪಾತ ನೋಡುವುದಕ್ಕೆ. ಕಳೆದ ೧೦-೧೫ ದಿನಗಳಿಂದ ಎಗ್ಗಿಲ್ಲದೇ ಸುರಿಯುತ್ತಿದ್ದ ಮಳೆಯಲ್ಲೂ ನಮ್ಮ ತಂಡದ ಸದಸ್ಯರ ಸಂಖ್ಯೆ ಸರಿಯಾಗಿ ಅರ್ಧಶತಕವಾಗಿತ್ತು! ಬೆಂಗಳೂರಿನಿಂದಲೂ ಮಹಿಳೆಯೊಬ್ಬರು ಚಾರಣಾಸಕ್ತಿಯಿಂದ ಬಂದಿದ್ದರು ಎನ್ನುವುದು ಮತ್ತೊಂದು ವಿಶೇಷ.
ಯೂತ್ ಹಾಸ್ಟೆಲ್‌ನ ಯಾವತ್ತೂ ಬರುವವರ ಜತೆಗೆ ಅನೇಕ ಹೊಸಮುಖಗಳಿದ್ದವು. ಒಂದೇ ದಿನದ ಚಾರಣ ಹಾಗೂ ಹೆಚ್ಚು ನಡೆಯುವುದಕ್ಕಿಲ್ಲ ಎಂಬ ‘ಮಾಹಿತಿ ಸೋರಿಕೆ’ ಆಗಿದ್ದರಿಂದ ಹೀಗಾಗಿತ್ತು! ಏನೇ ಇರಲಿ ಹೊಸಬರು ಸೇರುತ್ತಿದ್ದರೆ ಚಾರಣ ತಂಡವೂ intact ಆಗಿರುತ್ತದೆ.

ಭರ್ಜರಿ ಮಳೆ ನಮ್ಮ ದಾರಿಯುದ್ದಕ್ಕೂ ಸುರಿದು ನೆಲತುಂಬಾ ನೀರು ಮತ್ತು ಜಿಗಣೆ(leech). ಜಿಗಣೆಗಳು ಎಂದಿನಂತೆ ರೇಜಿಗೆ, ಕಿರಿಕಿರಿ ಉಂಟುಮಾಡುತ್ತಲೇ ಇದ್ದವು. ದಾರಿಮಧ್ಯೆ ಭಾರೀ ಸದ್ದಿನೊಂದಿಗೆ ಹೊಳೆಯೊಂದು ಹರಿಯುತ್ತಿತ್ತು, ಅದೇ ನದಿಯೇ ಮುಂದೆ ಕಲ್ಲರ್ಬಿಯಾಗಿ ಧುಮುಕುತ್ತದೆ. ಆ ಸೇತುವೆ ದಾಟಿ ಮುಂದೆ ಹೋದೆವು.


ಬಾಂಜಾರಮಲೆಯಲ್ಲಿ ಮಲೆಕುಡಿಯರು ಅಡಕೆ ತೋಟ ಬೆಳೆಸಿದ್ದಾರೆ. ನಮಗೆ ಜಲಪಾತ ತೋರಿಸಲು ಬಾಂಜಾರಮಲೆಯ ಯುವಕರಾದ ರವೀಂದ್ರ, ಜಗದೀಶ ಮತ್ತು ಹುಡುಗ ವಿಶ್ವನಾಥ ಸೇರಿಕೊಂಡರು. ಮರದಿಂದಲೇ ಮಾಡಿದ ತೂಗುಸೇತುವೆಯಲ್ಲಿ ಹಳ್ಳವೊಂದನ್ನು ದಾಟಿ ಮುಂದುವರಿದೆವು. ಭಾರೀ ಮಳೆಯಾದ್ದರಿಂದ ದಾರಿಯಿಡೀ ಕೊಚ್ಚೆಕೆಸರು. ತೋಟ ಮುಗಿದು ಮತ್ತೆ ಕಾಡಿಗೆ ಕಾಲಿಟ್ಟೆವು. ಕಾಡಿನಲ್ಲಿ ಕಡಿದಾದ ಇಳಿ‘ಜಾರು’ ದಾರಿ. ಮಣ್ಣು ತೀರಾ ಅಂಟಂಟಾಗಿದ್ದ ಕಾರಣ ಚಾರಣಿಗರು ಮೊದಲ ಮಳೆಗೆ ಬೈಕ್ ಸ್ಕಿಡ್ ಆಗುವಂತೆ ಬಿದ್ದು, ಬಳಿಕ ಎದ್ದು ಹೋಗುತ್ತಿದ್ದರು. ಹಲವು ಮಂದಿ ‘ನಮಗೆ ಬಾಂಜಾರಮಲೆಯೇ ಸಾಕು, ಜಲಪಾತ ನೀವೇ ನೋಡಿಬನ್ನಿ’ ಎಂದು ಹಿಂದುಳಿದರು.
ಅಂತು ನಮ್ಮ ದಾರಿತೋರುವವರ ಸಹಾಯದಲ್ಲಿ ಕಾಡಿನ ಬಳ್ಳಿ ಹಿಡಿದು ಭೋರಿಡುವ ಜಲಪಾತದ ಪಾದ ತಲುಪಿದೆವು. ಸರಿಯಾಗಿ ನೋಡುವುದಕ್ಕೂ ಜಲಪಾತದ ಅರ್ಭಟ ಅಡ್ಡಿಯಾಗಿತ್ತು. ಕ್ಯಾಮೆರಾ ಬ್ಯಾಗಲ್ಲಿ ಬೆಚ್ಚಗೆ ಮಲಗಿತ್ತು ತೆಗೆದರೆ ಹಾಳಾದೀತು ಎನ್ನುವ ಭಯ. ಅಷ್ಟು ಜೋರಾಗಿ ನೀರಿನ ಹನಿಗಳು ರಾಚುತ್ತಿದ್ದೆವು. ಕಷ್ಟಪಟ್ಟು ಮೊಬೈಲ್ ಕ್ಯಾಮೆರಾದಲ್ಲೆ ಒಂದೆರಡು ಫೋಟೋ ತೆಗೆದುಬಿಟ್ಟೆ.


ಮತ್ತೆ ಬೀಳುತ್ತ ಏಳುತ್ತಾ ಲಂಬವಾದ ದಾರಿಯಾಲ್ಲಿ ಮೇಲೇರಿ ಬಂದೆವು. ಹೊಟ್ಟೆ ಚುರುಗುಟ್ಟುತ್ತಿತ್ತು, ಗಡಿಯಾರ ನೋಡಿದರೆ ಗಂಟೆ ಆಗಲೇ ೨.೩೦ ! ಬಾಟಲಿ ನೀರು ಖಾಲಿಯಾಗಿತ್ತು, ಬಾಂಜಾರಮಲೆಯ ಮನೆಯೊಂದರಲ್ಲಿ ನೀರು ಕೇಳಿ ಕುಡಿದೆವು. ಅಲ್ಲಿಂದ ಮುಂದುವರಿದು ನಮ್ಮ ಟೆಂಪೋ ಸೇರಿ ತಿಂಡಿ ಖಾಲಿಮಾಡಿ ಮತ್ತೆ ಶುರುವಿಟ್ಟ ಮಳೆಯಲ್ಲಿ ನಮ್ಮ ಮರುಪ್ರಯಾಣ....
14.7.09

ರಾಜಕೀಯ ಮತ್ತು ಏರ‍್ಟೆಲ್ ಜಾಹೀರಾತು

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತಪ್ಪಿರುವುದು ಹೌದು, ಬಹುತೇಕ ಸಮಸ್ಯೆಗಳು ರಾಜಕೀಯದಿಂದಾಗಿಯೇ ಹುಟ್ಟಿಕೊಂಡದ್ದೂ ಹೌದು, ಆದರೆ ನಮ್ಮ ಮಾಧ್ಯಮಗಳು ಕೆಟ್ಟ ರಾಜಕೀಯ ವ್ಯವಸ್ಥೆಯನ್ನೇ ತೋರಿಸಬೇಕೇ? ಚೆನ್ನಾಗಿಯೂ ತೋರಿಸಬಹುದಲ್ಲ ಇಂತಹ ಪ್ರಶ್ನೆ, ಆಕ್ಷೇಪ ಅನೇಕರದ್ದು.
ಅದೆಷ್ಟೋ ಚಿತ್ರಗಳಲ್ಲಿ, ಬಹುತೇಕ ಜಾಹೀರಾತುಗಳಲ್ಲಿ ರಾಜಕಾರಣಿಗಳನ್ನು ಕೀಳಾಗಿ, ವಿಲನ್‌ಗಳಾಗಿ ಚಿತ್ರೀಕರಿಸಿದ್ದಾರೆ. ಆದರೆ ತನ್ನದೇ ಆದ ಒರಿಜಿನಾಲಿಟಿಯ ಜಾಹೀರಾತುಗಳನ್ನು ನೀಡುತ್ತಿರುವ ಏರ‍್ ಟೆಲ್ ಕಂಪನಿ ಮಾತ್ರ ಇಲ್ಲಿ ವಿಭಿನ್ನ ಪ್ರಯತ್ನ ಮಾಡಿದೆ. ಇಕ್ಬಾಲ್‌, ವೆಲ್‌ ಕಂ ಟು ಸಜ್ಜನ್‌ಪುರ‍್ ಮುಂತಾದ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ಮೂಲಕ ಆಕರ್ಷಿಸಿದ್ದ ಶ್ರೇಯಸ್ ತಲ್ಪಾಡೆಯನ್ನು ತಮ್ಮ ಜಾಹೀರಾತು ಸರಣಿಗೆ ಆರಿಸಿಕೊಂಡಿದ್ದೇ ಅವರು ತೆಗೆದುಕೊಂಡ ರಿಸ್ಕ್‌ಗೆ ಉದಾಹರಣೆ.
ಏರ‍್ಟೆಲ್‌ನವರೇ ಹೇಳುವ ಪ್ರಕಾರ ಮಾನವನ ನಡುವಣ ದೃಢವಾದ ಸಂಬಂಧ ಮತ್ತು ಸಂಪರ್ಕಗಳಿಗೆ ಅವರು ಮಹತ್ವ ನೀಡುತ್ತಾರೆ, ಆಧುನಿಕ ಸಂವಹನ ತಂತ್ರಜ್ಞಾನ ಹೇಗೆ ಮನಮನಗಳನ್ನು ಬೆಸೆಯುತ್ತದೆ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶ. ಹಾಗಾಗಿ ಅವರು ತಮ್ಮ ಜಾಹೀರಾತುಗಳಲ್ಲಿ ಸ್ಟಾರ್‌ಗಳಿಗೆ ಮಣೆ ಹಾಕಿಲ್ಲ. ಸಾಮಾನ್ಯರನ್ನು, ಪ್ರವರ್ಧಮಾನಕ್ಕೆ ಬರುವ ನಟರನ್ನೇ ಬಳಸಿಕೊಳ್ಳುತ್ತಾರೆ. ಅಭಯ್ ಡಿಯೋಲ್-ರೈಮಾ ಸೇನ್, ಮಾಧವನ್-ವಿದ್ಯಾಬಾಲನ್ ಮುಂತಾದವರನ್ನು ಬಳಸಿಕೊಂಡಿದ್ದು ಇದಕ್ಕೇ.
ಇಬ್ಬರು ಮಕ್ಕಳು ಗಡಿ ದಾಟಿ ಫುಟ್ ಬಾಲ್ ಆಡುವ ಸುಂದರ ಕಲ್ಪನೆ ಏರ್‌ಟೆಲ್‌ನದ್ದು. ಆ ಜಾಹೀರಾತು ಎಂದುಗೂ ಮರೆಯುವಂಥದ್ದಲ್ಲ.
ಇಲ್ಲಿ ನಾನು ಹೇಳುವ ಜಾಹೀರಾತು ಏರ್‌ಟೆಲ್‌ ಸರಣಿಯಲ್ಲಿ ಹೊಸದು. ಜನರಿಂದ ಆರಿಸಿ ಬಂದು ಸಂಸತ್ತಿಗೆ ತೆರಳುವ ಯುವನಾಯಕ. ಅಲ್ಲಿ ಹೋಗಿದ್ದರೂ ತನ್ನೂರಿನ ಜನರ ಸಂಪರ್ಕ ಬಿಡುವುದಿಲ್ಲ ಎನ್ನುವುದು ಈ ಜಾಹೀರಾತಿನ ತಾತ್ಪರ್ಯ.
ಸಂಸತ್ತಿನ ಬಗ್ಗೆ ಗೌರವ, ರಾಜಕಾರಣಿಗಳ ಬಗ್ಗೆ ಧನಾತ್ಮಕತೆ ತೋರಿಸುವಂತಹ ಜಾಹೀರಾತು ಬಳಸುವ ಮೂಲಕ ಏರ‍್ಟೆಲ್ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲವಾದರೆ ಜನರನ್ನು ಸೆಳೆಯಲು ಎಂತೆಂತಹ ಕೊಳಕು ಜಾಹೀರಾತನ್ನು ಬಳಸಬಹುದಿತ್ತು.
ಕೇವಲ ಭಿನ್ನತೆ ಮಾತ್ರವಲ್ಲದೆ ಸಂದೇಶ ನೀಡುವಂತಹ ಇಂತಹ ಜಾಹೀರಾತು ಹೆಚ್ಚೆಚ್ಚು ಬರಲಿ.
ಆ ಜಾಹೀರಾತು ಇಲ್ಲಿದೆ ನೋಡಿ....

Airtel 'Parliament' from Campaign India on Vimeo.

31.5.09

ಪ್ರಮೀಳೆಯರಿಲ್ಲದ ಪ್ರಪಂಚ

ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗಿ, ತಾನು ಕೈಹಿಡಿದ ಹುಡುಗಿ ತನ್ನ ಅಧಿಕಪ್ರಸಂಗಿತನಕ್ಕೆ ಬೇಸತ್ತು ವಿಚ್ಛೇದನ ನೀಡಿದ ದಿನ ವಸಂತ ಮಮ್ಮಲ ಮರುಗಿಬಿಟ್ಟ.
ಲೋಕದಲ್ಲೆಲ್ಲೂ ಒಳ್ಳೆಯ ಮನಸ್ಸಿನ ಹೆಂಗಸರೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ. ಅದುವರೆಗೆ ಫೋಟೋದಲ್ಲಿದ್ದ ದೇವರನ್ನು ಕಣ್ಣೆತ್ತಿ ನೋಡದ ಆತ ಅದೊಂದು ರಾತ್ರಿ ನಿಶ್ಚಲ ಮನಸ್ಸಿನಿಂದ ತಪಸ್ಸಿಗೆ ಕುಳಿತ.
ಹೀಗೆ ಕೆಲ ದಿನಗಳುರುಳಿದವು.. ಈ ಐ.ಟಿ ಯುಗದಲ್ಲೂ ಹಸಿವೆ ನಿದ್ದೆಯನ್ನೆಲ್ಲ ಮೆಟ್ಟಿ ನಿಂತ ವಸಂತನ ದೃಢಚಿತ್ತದಿಂದ ಅಚ್ಚರಿಗೊಂಡ ಭಗವಂತ ಅದೊಂದು ಘಳಿಗೆಯಲ್ಲಿ ಧುತ್ತನೆ ವಸಂತನ ಮುಂದೆ ಪ್ರತ್ಯಕ್ಷನಾದ.
ಏನು ಈ ಯುಗದಲ್ಲೂ ನನಗಾಗಿ ತಪಸ್ಸು ಮಾಡುತ್ತಿರುವೆ? ಎಂದು ಕೇಳಿದ. ಹೆಚ್ಚೇನೂ ಸಂಭ್ರಮ ವ್ಯಕ್ತ ಪಡಿಸದ ವಸಂತ ತಣ್ಣನೆ ಸ್ವರದಲ್ಲಿ ಕೇಳಿದ-ನನಗೆ ವರ ಬೇಕು!
ಭ-ವರವೇ? ಏನದು ಹೇಳು?
ವ-ನಾನು ಹೆಂಗಸರಿಂದ ಬಹಳಷ್ಟು ಸೋತು ಹೋದೆ. ವೈಯಕ್ತಿಕ ಜೀವನದಲ್ಲಿ, ವೃತ್ತಿ ಜೀವನದಲ್ಲಿ...ಏನು ಮಾಡಬೇಕು ಎಂದು ತೋಚುತ್ತಿಲ್ಲ.
ಭ-ಅದು ಅವರವರ ಪ್ರಾರಬ್ಧ ಕರ್ಮ. ಎಷ್ಟೋ ಮಂದಿ ಹೆಂಗಸರಿಂದಾಗಿಯೇ ಒಳ್ಳೆಯ ಬದುಕಿನಲ್ಲಿದ್ದಾರೆ. ನೀನು ಮಾತ್ರ ಹೀಗೆ ಹೇಳುತ್ತಿರುವೆ.
ವ-ನನಗೀಗ ವರವ ಕೊಡು ಭಗವಂತ...ನಾನು ಹೆಂಗಸರೇ ಇಲ್ಲದ ಕಾಲದಲ್ಲಿ, ಅಥವಾ ದೇಶದಲ್ಲಿ, ಅಥವಾ ಜಗತ್ತಿನಲ್ಲಿ ಹುಟ್ಟುವಂತಾಗಬೇಕು.
ಭ-ಇದು ಬಹಳ ಪೇಚಿನ ವರ[ಈ ವರ ಕೊಟ್ಟದ್ದು ತಿಳಿದರೆ ಮಹಿಳಾ ಆಯೋಗದವರ ಕಣ್ಣೂ ಕೆಂಪಾದೀತು]. ಕೊಡುವ ಹಾಗಿಲ್ಲ.
ವ-ಇಲ್ಲ, ಕೊಡಲೇ ಬೇಕು...ನನ್ನ ಭಕ್ತಿಗೆ ಅಷ್ಟಾದರೂ ಬೆಲೆ ಕೊಡಬೇಕು.
ದೇವರಿಗೆ ಈ ಹುಲುಮಾನವ ಒಂದಿಷ್ಟೂ ಬೆದರದೆ ಉತ್ತರಿಸಲು ಕಾರಣವನ್ನು ಕೆಲ ನಿಮಿಷ ಕಾಲ ಚಿಂತಿಸಿದ ದೇವರು ಕೊನೆಗೂ ಈ ಯುಗದಲ್ಲಿ ತಾನು ಮೊದಲ ಬಾರಿ ಪ್ರತ್ಯಕ್ಷವಾಗಿರುವಾಗ ಭಕ್ತನನ್ನು ನಿರಾಸೆಗೊಳಿಸ ಬಾರದು ಎಂದು ತೀರ್ಮಾನಿಸಿ ತಥಾಸ್ತು ಎಂದ. ಆದರೆ ಒಂದು ಷರತ್ತು. ನೀನು ಪ್ರಮೀಳೆಯರಿಲ್ಲದ ಜಗತ್ತಿನಲ್ಲಿ ಹುಟ್ಟಬೇಕಾದರೆ ಮೊದಲು ಈಗಲೇ ಸಾಯಬೇಕು(ಯಾವುದಕ್ಕೂ ಒಂದು ಟೆಸ್ಟ್ ಮಾಡೋಣ ಅನ್ನಿಸಿರಬಹುದು) ಎಂದ.
ಒಪ್ಪಿದ ವಸಂತ ದೇವರಿಗೆ ಥ್ಯಾಂಕ್ಸ್ ಕೂಡಾ ಹೇಳದೆ ಹಿಂದಿರುಗಿದ. ಸಾಯುವುದು ಹೇಗೆ ಎಂದು ಚಿಂತಿಸತೊಡಗಿದ.
ಕೊನೆಗೂ ಸಮುದ್ರಕ್ಕೆ ಹಾರುವುದೇ ಲೇಸು ಎಂದುಕೊಂಡು ಕಡಲತಡಿಗೆ ಹೋದ.
ಅಲ್ಲಿ ನೋಡಿದರೆ ಆಗಲೇ ಒಂದು ಜೀವ ನೀರಲ್ಲಿ ಕೈಕಾಲು ಬಡಿಯುತ್ತಿದೆ...ಮತ್ತೆ ಸಾಯೋಣ ಎಂದು ಅನ್ನಿಸಿ ವಸಂತ ನೀರಿಗೆ ಜಿಗಿದ. ಈಜು ಗೊತ್ತಿದ್ದರಿಂದ ಕೈಕಾಲು ಬಡಿಯುತ್ತಿದ್ದವರನ್ನು ಎಳೆದು ತಂದ.
ನೋಡಿದರೆ ಅದೊಂದು ಹೆಣ್ಣು ಜೀವ. ಆಕೆಯನ್ನು ಪಕ್ಕ ಕೂರಿಸಿ ಕಥೆ ಕೇಳಿದ. ಆಕೆಗೆ ಯಾರೋ ಹುಡುಗ ಕೈಕೊಟ್ಟನಂತೆ, ಅದಕ್ಕೆ ನೀರಿಗೆ ಹಾರಿದಳಂತೆ, ಹಾರಿದ ನಂತರ ಬದುಕಬೇಕು ಅನ್ನಿಸಿತಂತೆ, ಆಗಲೇ ವಸಂತ ಕೈಹಿಡಿನಂತೆ...ಹಾಗೆ ಆಕೆ ಹೇಳುವಾಗ ಆಕೆಯ ಕೈ ವಸಂತನ ಕೈಗಳಲ್ಲಿ ಭದ್ರವಾಗಿತ್ತು. ವಸಂತನಿಗೆ ಸದ್ಯಕ್ಕೆ ಭಗವಂತ ತನಗೆ ನೀಡಿದ ವರ, ಅದಕ್ಕೆ ಹಾಕಿದ ಷರತ್ತು ಮರೆತುಹೋಯಿತು..ಆಕೆಯನ್ನು ಭದ್ರವಾಗಿ ಹಿಡಿದು ಕಡಲ ದಂಡೆಯಲ್ಲಿ ಹೆಜ್ಜೆ ಹಾಕಿದ..
ದೇವಲೋಕದಲ್ಲಿ ಕುಳಿತ ಭಗವಂತ ಮತ್ತು ಆತನ ಸಹವರ್ತಿಗಳು ಕೈಚಪ್ಪಾಳೆ ಹಾಕಿದರು...ಕೊನೆಯಲ್ಲಿ ಭಗವಂತ ಈ ಮಾತು ಹೇಳಿದ 'ಈ ಮೂಢ ಹೆಂಗಸರಿಲ್ಲದ ಪ್ರಪಂಚದಲ್ಲಿ ಬದುಕುವುದು ಅಸಾಧ್ಯ, ನಾನು ಮಾಡಿದ ಪರೀಕ್ಷೆಯಲ್ಲಿ ಸೋತ, ನನ್ನನ್ನು ಅನಾವಶ್ಯಕ ಭೂಮಿಗೆ ಬರಹೇಳಿದ್ದಕ್ಕೆ ಆತನಿಗೆ ಇದೇ ತಕ್ಕ ಶಿಕ್ಷೆ'.
ಹಾಗೆ ಭಗವಂತ ಹೇಳುವಾಗ ನೀರಲ್ಲಿ ಮುಳುಗಿ ಉಪ್ಪುಮಿಶ್ರಿತ ನೀರಿನಿಂದ ಒದ್ದೆಯಾಗಿದ್ದ ಆ ತರುಣಿಯೊಂದಿಗೆ ಬೀಚ್ ಪಕ್ಕದ ದೇವಸ್ಥಾನದಲ್ಲಿ ಕೈಮುಗಿಯಲು ಹೋಗುತ್ತಿದ್ದ!

29.4.09

ಮೇ ಫ್ಲವರ್ ದಳಗಳು

ಆಗಷ್ಟೇ ಹೂ ಬಿಡುತ್ತಿರುವ
ಮೇಫ್ಲವರಿನ ಮರ
ಕೆಳಗಿನ ಬೆಂಚಲ್ಲಿ
ಕುಳಿತ ನಾನು
ಮರದಲ್ಲಿ ಕುಳಿತ
ಒಂಟಿ ಗಿಣಿಯೂ
ವಿರಹಗೀತೆ ಹಾಡಿದೆವು!

-------------

ನಿನಗಾಗಿ ನಾನು
ಇನ್ನಷ್ಟು ಕಾಯಬಲ್ಲೆ
ಆದರೆ
ನಿನಗಾಗಿ ತಂದು
ಅರ್ಧ ಗಂಟೆಯ ಬಿಸಿಲಿಗೆ
ಒಣಗಿದ ಹೂಗೊಂಚಲುಗಳು
ಬಹುಷಃ ನಿರಾಸೆಗೊಂಡಾವು

--------------

ಕಡಲತಡಿಯ ಮರಳಲ್ಲಿ
ಬರೆದ ನಿನ್ನ ಹೆಸರು
ಮುಂದಿನ ತೆರೆಗೆ
ಕೊಚ್ಚಿ ಹೋಗಬಹುದು
ನನ್ನ ನೆನಪು ನಿನ್ನಲ್ಲಿ ಅಳಿದರೆ
ನಾನೂ ಕೊಚ್ಚಿಕೊಂಡು ಹೋದೇನು!

---------------

ನೀನು ಕೊಟ್ಟ ಕಾಣಿಕೆಗಳು
ಇಂದು ಮನದಲ್ಲಿಲ್ಲ...
ಏನಿದ್ದರೂ ನೀನು
ನನ್ನೆದೆಯಲ್ಲಿ
ಬಿತ್ತಿದ ಕಣ್ಣೀರಿನ
ನೆನಪುಗಳು ಮಾತ್ರ
---------------
ನನ್ನ ಮನದ
ಗೋಡೆಗಳಲ್ಲೆಲ್ಲ
ನಿನ್ನದೇ ಚಿತ್ರಗಳು
ಹೃದಯದ ಡಾರ್ಕ್ ರೂಮಿನಲ್ಲಿ
ಅರಳುತ್ತವೆ ನಗುವಿನ ಅಲೆಗಳು

28.4.09

ಮತ ಭಾರತ - ಮಹಾ ಭಾರತ !

ನಮ್ಮ ರಾಜ್ಯದಲ್ಲಿ ನಿರಂತರ ಎರಡನೇ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆ ಇದು . ಕಳೆದ ವರ್ಷವಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿಸಿದವರು ನಾವು. ನಾಡಿದ್ದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ. ದಕ್ಷಿಣ ಕನ್ನಡದ ಅಲ್ಲಿಂದಿಲ್ಲಿಂದ ಪ್ರಚಾರ, ಅದಕ್ಕೆ ಸಿಕ್ಕೋ ಮತದಾರ ಬಾಂಧವನ ಸ್ಪಂದನದ ವರದಿ ನೋಡುವಾಗಲೇ ಏಕೋ ಈ ಬಾರಿ ಸಪ್ಪೆ ಅನ್ನಿಸುತ್ತಿತ್ತು. ಮೊದಲ ಹಂತದ ಚುನಾವಣೆ ಮುಗಿದದ್ದು ಏಪ್ರಿಲ್ 23ರಂದು. ಮತದಾನದ ಶೇಕಡಾವಾರು ನೋಡಿದರೆ ಶೇ.೫೭. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಶೆ.೪೫ರ ಆಜುಬಾಜಿನಲ್ಲಷ್ಟೇ ಮತದಾನವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಷ್ಟೂ ಮತದಾನ ಹೆಚ್ಚಾಗಬೇಕಿತ್ತು. ಆದರೆ ಇಲ್ಲಿ ವ್ಯತಿರಿಕ್ತ. ನೆರೆಯ ಕೇರಳ ರಾಜ್ಯದಲ್ಲಿ ಶೆ.೭೩ರಷ್ಟು ಮತದಾನವಾಗಿದೆ. ಆ ಮೂಲಕ ೨೦೦೪ರ ಚುನಾವಣೆಯಲ್ಲಿನ ಶೇ.೭೧ರ ದಾಖಲೆಯನ್ನು ಅದೇ ರಾಜ್ಯ ಹಿಂದಿಕ್ಕಿತು.
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಪ್ರಚಾರವನ್ನು ಚುನಾವಣೆಗೆ ಕೊಡಲಾಗಿತ್ತು. ಎಲ್ಲಾ ಮಾಧ್ಯಮಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಪವಿತ್ರ ಕಾರ್ಯ, ಆದರೆ ಮತ ಮಾರಿಕೊಳ್ಳಬಾರದು ಎಂಬ ಅಂಶವನ್ನು ಪದೇ ಪದೇ ಹಾಳುತ್ತಾ ಬಂದಿವೆ. ಆದರೂ ಮತದಾನದ ದಿನ ಮಾತ್ರ ನಮ್ಮಲ್ಲಿ ಮಾತ್ರ ಯಾಕೀ ನಿರಾಸಕ್ತಿ.
ಮತದಾರರನ್ನೇ ಕೇಳಿದರೆ, ಅಯ್ಯೋ ಎಲ್ಲಾರೂ ಒಂದೇನೇ. ಅವರನ್ನು ಆರಿಸಿ ತಪ್ಪು ಮಾಡೋದು ಯಾಕೆ ಎಂಬಂತಹ ಜನರಲೈಸ್ಡ್ ಉತ್ತರ ಸಿಗುತ್ತವೆ. ಇಷ್ಟು ಸಲ ಮತದಾನ ಮಾಡಿದ್ದೇವೆ, ಏನೂ ಅಭಿವೃದ್ಧಿ ಆಗಿಲ್ಲ ಎಂಬ ಸಿನಿಕ ಹೇಳಿಕೆಗಳೂ ಸಿಗುತ್ತವೆ.
ಹಾಗೆ ನೋಡಿದರೆ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಈಗೀಗ ಚುನಾವಣೆ ಅನ್ನಿಸುವುದೇ ಇಲ್ಲ. ನಾನು ಸಣ್ಣವನಿದ್ದಾಗ ಪಾರ್ಟಿಯೊಂದರ ಕಾರ್ಯಕರ್ತರೊಂದಿಗೆ ರಾತ್ರಿ ರಸ್ತೆಯಲ್ಲಿ ಸುಣ್ಣ ಬಳಸಿ ----ಪಕ್ಷಕ್ಕೆ ಮತ ದೇಶಕ್ಕೆ ಹಿತ, ಮುಂತಾದ ಘೋಷಣೆ ಬರೆಯಲು ಹೋಗುತ್ತಿದ್ದೆ. ಜೀಪ್‌ಗಳಲ್ಲಿ ರಾಗವಾಗಿ ಘೋಷಣೆ ಹೇಳುತ್ತಾ ಮತಯಾಚಿಸುವುದನ್ನು ಕೇಳಲು ಖುಷಿಯಿತ್ತು. ಮನೆಯಲ್ಲಿಯೂ ರಾಜಕೀಯ ಪ್ರಭಾವ ಸಾಕಷ್ಟಿತ್ತು, ಮಾವ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರಾಗಿದ್ದರು. ಆಗ ಮತದಾನವೆಂದರೆ ಒಂದು ಸಂಭ್ರಮ, ಅದರಲ್ಲಿ ಊರಿಗೆ ಊರೇ ಪಾಲ್ಗೊಳ್ಳುತ್ತಿತ್ತು ಕೂಡಾ.
ಈಗ ಎಲ್ಲೂ ಬ್ಯಾನರ‍್ಗಳಿಲ್ಲ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ‍್ ಕೂಡಾ ತೆಗೆಸಲಾಗುತ್ತದೆ! ಬ್ಯಾನರ್‌ಗಳಿಲ್ಲದೆ ನಗರ ಸುಂದರವಾಗಿ ಕಾಣುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಯೋಗದ ಕಟ್ಟುನಿಟ್ಟಿನ ಕ್ರಮವಿರುವುದೇನೋ ನಿಜ, ಆದರೆ ಜನರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿದಂತೆ ಕೂಡಾ ಗೋಚರಿಸುತ್ತದೆ. ಹಾಗಾಗಿಯೇ ಅಲ್ಲಿಂದಿಲ್ಲಿಂದ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿಬರುತ್ತವೆ.
ಕಾರಣ ಹೀಗಿರಬಹುದೇ?
ಇದರಲ್ಲಿ ಎಲ್ಲಾ ಪಕ್ಷದವರ, ಸರ್ಕಾರಗಳ ಪಾಲೂ ಇದೆ. ಅನೇಕ ದಶಕಗಳಿಂದ ಸರಿಯಾದ ರಸ್ತೆ ಇಲ್ಲದಿರುವ, ಸಂಪರ್ಕಕ್ಕೆ ಸೇತುವೆ ಇಲ್ಲದ, ಮಳೆಗಾಲದಲ್ಲಿ ದ್ವೀಪವಾಗುವ ಊರುಗಳು ಇನ್ನೂ ನಮ್ಮಲ್ಲಿವೆ. ಇಂತಹ ಕಡೆಗಳ ಜನ ಮತ ಹಾಕಿದರೂ ತಮಗೇನೂ ಲಾಭವಿಲ್ಲದಿರುವಾಗ ಹೋಗಿ ಏನು ಪ್ರಯೋಜನ ಎಂದು ತಿಳಿದುಕೊಳ್ಳುವುದು ಸಹಜ.
ಪಕ್ಷಗಳ ನಾಯಕರು ಪರಸ್ಪರ ಕೆಸರೆರಚುವುದು, ಕೈ ಕತ್ತರಿಸುವ, ತಲೆ ಕಡಿಯುವ, ತಿಥಿ ಮಾಡುವಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಇವೆಲ್ಲಾ ಈಗೀಗ ಹೆಚ್ಚಿರುವುದು ಜನರ ಸಿನಿಕತನ ಹೆಚ್ಚಲು ಕಾರಣ ಅನಿಸುತ್ತದೆ. ಜಿಲ್ಲೆಯ ಹಿರಿಯರೊಬ್ಬರಲ್ಲಿ ಈಚೆಗೆ ಚುನಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೆ. ಹಿಂದಿನ ವೈಭವದ ಬಗ್ಗೆ ಅವರೂ ಹೇಳಿಕೊಂಡರು. ಹಿಂದೆ ವ್ಯಕ್ತಿಯೊಬ್ಬನ ವೈಯಕ್ತಿಕ ಚಾರಿತ್ಯ್ರ ಆತನಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡುತ್ತಿತ್ತು. ಅಂದು ನಾಯಕರ ಭಾಷಣಗಳನ್ನು ಕುಳಿತುಕೊಂಡು ಕೇಳುವಂತಿತ್ತು. ಈಗ ವೈಯಕ್ತಿಕ ತೇಜೋವಧೆ ಮಾಡುವುದೇ ಭಾಷಣ ಎಂಬಂತಾಗಿದೆ. ನಮ್ಮ ಹಕ್ಕು ಎಂದು ಮಾತ್ರ ಮತದಾನ ಮಾಡಬೇಕೇ ಹೊರತು ನಿಜಕ್ಕೂ ಮತದಾನ ಮಾಡಲು ಆಸಕ್ತಿ ಇಲ್ಲ ಎಂಬುದು ಆ ಹಿರಿಯರ ಅಭಿಪ್ರಾಯವಾಗಿತ್ತು.
ಹಾಗೆಂದರೆ ನಾವು ಇನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸುವಂತಿಲ್ಲವೇ?
ಹಾಗೆಂದುಕೊಳ್ಳಬೇಕಿಲ್ಲ. ಇನ್ನೂ ಮತದಾನ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ(ಇ-ವೋಟಿಂಗ್‌ ಮಾದರಿಯಲ್ಲಿ) ವಿದ್ಯಾವಂತರಿಂದ ಹೆಚ್ಚು ಮತದಾನ ನಿರೀಕ್ಷಿಸಬಹುದು. ಈಗೀಗ ವಿದ್ಯಾವಂತ ಅಭ್ಯರ್ಥಿಗಳೂ ಚುನಾವಣೆಗೆ ಧುಮುಕಿ(ಹಣ ಹೆಂಡದ ಹೊಳೆಯ ನಡುವೆಯೂ) ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆ ಅಲ್ಲೊಂದು ಇಲ್ಲೊಂದು ಇರಬಹುದು, ಆದರೆ ಇದನ್ನು ಮತದಾರರು ಪ್ರೋತ್ಸಾಹಿಸಿದರೆ ಮುಂದೆ ಇಂತಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಲೂ ಬಹುದು.
......ನಾಡಿದ್ದು ಎರಡನೇ ಹಂತದ ಮತದಾನ. ಕಳೆದ ಸುಮಾರು ೩೦ ದಿನಗಳಿಂದ ರಜೆಯಿಲ್ಲದ ದುಡಿಮೆ, ಹಾಗಾಗಿ ಬ್ಲಾಗ್ ಅಪ್‌ಡೇಟಾಗಿಲ್ಲ. ಮತಸಮರದ ಅಂತಿಮ ಹಂತದಲ್ಲಿ ಅದೇ ವಿಷಯವನ್ನೇ ಇಲ್ಲಿಯೂ ಇಳಿಸೋಣ ಅನ್ನಿಸಿತ್ತು...ನಿಮ್ಮ ಅಮೂಲ್ಯ ಸಲಹೆ, ಪ್ರತಿಕ್ರಿಯೆ ಇರಲಿ.....

7.4.09

ಮಾರ್ಚ್ ಮಳೆ


ಸೂರ್ಯ ನಿಗಿನಿಗಿ ಕೆಂಡವಾಗಿ ಪ್ರಜ್ವಲಿಸುತ್ತಿದ್ದಾನೆ. ಮುದುಕರಷ್ಟೇ ಏಕೆ ಜವ್ವನಿಗರೂ ಸೆಖೆಯ ಪೆಟ್ಟು ತಾಳಲಾಗದೆ ಸುಸ್ತು ಹೊಡೆದಂತಿದ್ದಾರೆ. ಈಗೀಗ ಕೆಲ ದಿನಗಳಿಂದ ಬೆಳಗ್ಗೆ ಏಳುವಾಗಲೇ ಮೋಡ ಕ್ರಮಪ್ರಕಾರ ಕಾಣಿಸುತ್ತದೆ. ಪ್ರಾಣಿ, ಪಕ್ಷಿ, ಮನುಷ್ಯರೆಲ್ಲರೂ ಒಂದೆರಡು ಹನಿಯಾದರೂ ಸುರಿದೀತೇ ಮೇಲಿಂದ ಎಂದು ಮೇಲೆ ನೋಡುತ್ತಾರೆ.
ಹುಲು ಮಾನವರೆಲ್ಲ ಕಳೆದ ಮಳೆಗಾಲದ ವೈಭವ ನೆನಪಿಸಿಕೊಳ್ಳುತ್ತಾರೆ. ಹಕ್ಕಿಗಳೂ ಕಳೆದ ತಿಂಗಳು ಯಾವುದೋ ತೋಡಿನ ಕೊಳಕಿನ ನೀರಲ್ಲಿ ಮಿಂದದ್ದು ಜ್ಞಾಪಿಸಿಕೊಳ್ಳುತ್ತವೆ.
ಹೀಗೆ ಎಲ್ಲರೂ ಮಳೆ ನಿರೀಕ್ಷೆಯಲ್ಲಿ ದಿನಾ ಸೆಖೆಯಲ್ಲಿ ಬೇಯುತ್ತಾರೆ. ಒಂದು ದಿನ ಮೋಡ ಕಪ್ಪಾಗಿ ಆಗಸದಲ್ಲಿ ಹೆಪ್ಪುಗಟ್ಟತೊಡಗಿದೆ. ಇದರಪ್ಪನ್‌....ಮಳೆ ಸುಯ್ಯೋದಿಲ್ಲ..ಬೇಯಿಸುತ್ತೆ ಅಷ್ಟೇ..ಎಂದು ಮುದುಕರಾದಿಯಾಗಿ ಊರಿನ ಎಲ್ಲರೂ ಶಪಿಸುತ್ತಾರೆ. ಆದರೆ ಬಾಳೆಲೆಯ ಧೂಳಿನ ಮೇಲೆ ಟಪ್ ಟಪ್ ಎಂದು ನಾಲ್ಕಾರು ಹನಿ ಬಿದ್ದಂತೆ ಕಾಣುತ್ತದೆ. ಕಾಗೆಯೊಂದರ ರೆಕ್ಕೆಯ ಮೇಲೆ ಒಂದು ಹನಿ ಬಿದ್ದು ಕಾಗೆ ಖುಷಿಯಲ್ಲಿ ರೆಕ್ಕೆ ಬಡಿದಿದೆ..ಅರಳುವ ಗುಲಾಬಿ ಮೊಗ್ಗೊಂದು ತನ್ನ ಮೇಲೆ ಬಿದ್ದ ಹನಿಯನ್ನು ಹರಿದು ಹೋಗಲು ಬಿಡದೆ ತನ್ನಲ್ಲೇ ಧರಿಸಿಕೊಂಡು ಖುಷಿಪಡುತ್ತಿದೆ. ಇನ್ನಷ್ಟು ಹನಿಗಳಿಗಾಗಿ ತೋಡುಗಳು ಕಾಯುತ್ತಿವೆ. ನಿರೀಕ್ಷೆ ಮೂಡಿಸುವ ಮಳೆ ಮೋಡ ಎಲ್ಲರಿಗೂ ವಿದಾಯ ಹೇಳಿ ಯಾವುದೋ ದಿಕ್ಕಿಗೆ ಪ್ರಯಾಣ ಬೆಳೆಸುತ್ತದೆ, ತನ್ನ ಬರುವಿಕೆಗೆ ಇನ್ನೂ ಎರಡು ಕಾಯಿರಿ ಎಂದಂತೆ ಹಕ್ಕಿಗಳಿಗೆ ಭಾಸವಾಗಿದೆ!


**********************

ಮಳೆಗಾಲದಲ್ಲಿ ತುಂಬಿ ಹರಿವ ಹೊಳೆಯದು. ಈಗ ನೀರೆಲ್ಲಾ ಬತ್ತಿ ಎತ್ತಲೋ ಹೋಗಿದೆ. ಕೆಲ ಹೊಂಡಗಳಲ್ಲಿ ಮಾತ್ರ ಪಾಚಿಗಟ್ಟಿ ಯಾವ ಕೆಲಸಕ್ಕೂ ಬಾರದ ಹಸಿರು ನೀರು ತುಂಬಿಕೊಂಡಿದೆ. ಅದನ್ನು ಯಾರೂ ಬಳಸುವುದಿಲ್ಲ ಎಂಬ ಬೇಸರದಲ್ಲಿ ನದಿಯೂ ಕೆಲವೊಮ್ಮೆ ಅಳುವುದಿದೆ. ಕಳೆದ ಮಳೆಗಾಲದಲ್ಲಿ ತನುತುಂಬಿ ಹರಿದಿದ್ದು ನೆನಯುತ್ತಾಳೆ ನದಿ. ನದಿಯ ಅವಸ್ಥೆ ನೋಡಿ ಸೇತುವೆ ಮೇಲೆ ಹೋಗುವ ಜನ, ದನ, ನಾಯಿ ಎಲ್ಲರಿಗೂ ಸಂಕಟ. ಪಶ್ಟಿಮದ ಮೋಡದ ಜತೆ ಹೊರಟ ತಣ್ಣನೆ ಗಾಳಿಯೀಗ ನದಿಯ ಒಡಲಲ್ಲಿ ತಂಪುಮೂಡಿಸಿದೆ. ಇನ್ನೆರಡು ತಿಂಗಳ ನಿರೀಕ್ಷೆಗಳು ಮತ್ತೆ ತಾಜಾ ಆಗಿವೆ.

**********************

ಮೊದಲ ಮಳೆಗೆ
ಕಾಯುವುದು ಎಂದರೆ
ಮನಗೆದ್ದಾಕೆಗೆ ಮೊದಲ
ಪತ್ರ ಬರೆದು
ಉತ್ತರಕ್ಕಾಗಿ ಕಾಯುವುದು,
ಅಥವಾ
ಮಗುವಿನ ಮೊದಲ
ನುಡಿ ಕೇಳಲು
ತಾಯಿ ಹಂಬಲಿಸುವುದು
ಅಥವಾ
ಆಗ ತಾನೇ ಮೊಳಕೆ
-ಯೊಡೆದ ಬೀಜ
ಪಕ್ಕದ ಮರ ನೋಡಿ
ಅದರಂತೆ ತಾನೂ
ಆಗಬೇಕೆನ್ನುವುದು!

3.4.09

ಗುಣಮಟ್ಟದಲ್ಲಿ ಮುಂದಿರುವ 13B


ದೆವ್ವಗಳು ಮೈಮೇಲೆ ಬರೋದು, ಅಕರಾಳ ವಿಕರಾಳ ರೂಪಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ತಬ್ಬಿಬ್ಬು ಮಾಡುವುದು, ಎದೆ ಹೊಡೆದುಕೊಳ್ಳುವಂತಹ ಸೌಂಡ್ ಇಫೆಕ್ಟ್ ಇವೆಲ್ಲ ಸಾಮಾನ್ಯ ಹಾರರ‍್ ಚಿತ್ರಗಳ ಲಕ್ಷಣ..
ಆದರೆ 13B ಕೊಂಚ ಭಿನ್ನ. ಇಲ್ಲಿ ಭೀಕರ ಶಬ್ದಗಳು ವಿಕಾರ ರೂಪಗಳು ಎಲ್ಲೂ ಪ್ರಕಟಗೊಳ್ಳುವುದಿಲ್ಲ. ಪ್ರಕಟಗೊಳ್ಳುವುದು ಟಿವಿ ಕಾರ್ಯಕ್ರಮವೊಂದರ ಮೂಲಕ.
ಲವರ‍್ಬಾಯ್ ಇಮೇಜಿನ ಮಾಧವನ್‌ಗೆ ಇಲ್ಲಿ ಭಿನ್ನ ರೂಪ. ಗೃಹಸ್ಥನಾದ ಸಿವಿಲ್ ಇಂಜಿನಿಯರ‍್ ಮನೋಹರ(ಮಾಧವನ್), ಆತನ ಪತ್ನಿ(ನೀತು ಚಂದ್ರ), ತಾಯಿ, ಅಣ್ಣ, ಅತ್ತಿಗೆ, ತಂಗಿಯೊಂದಿಗೆ ಹೊಸ ಅಪಾರ್ಟ್‌ಮೆಂಟಿಗೆ ಬಂದು ಕೆಲದಿನಗಳಷ್ಟೇ ಆಗಿದೆ. 13ನೇ ಮಹಡಿಯಲ್ಲಿರುವ ಈತನ ಮನೆ ನಂಬರ‍್ 13B. ಮನೆಯಲ್ಲಿ ಇನ್ನೂ ಪೂರ್ಣ ವ್ಯವಸ್ಥೆ ಆಗಿಲ್ಲ. ದೇವರ ಚಿತ್ರಗಳು ಇನ್ನೂ ಮನೆಯ ಗೋಡೆ ಏರಿಲ್ಲ.
ಅಷ್ಟರಲ್ಲಾಗಲೇ ಮನೆಯಲ್ಲಿ ಒಂದೊಂದೇ ವಿಚಿತ್ರಗಳು ಶುರು. ಆ ಮನೆಯಲ್ಲಿ ಹಾಲು ಯಾವಾಗಲೂ ಒಡೆಯುತ್ತಲೇ ಇರುತ್ತದೆ. ಮಾಧವನ್‌ ಲಿಫ್ಟ್‌ ಒಳಗೆ ಹೋದರೆ ಅದು ಕೆಲಸ ಮಾಡುವುದೇ ಇಲ್ಲ.ಇವೆಲ್ಲ ಕಿರಿಕಿರಿ ಅನುಭವಿಸುವಾಗಲೇ ದೇವರ ಫೋಟೋ ಗೋಡೆಗೆ ಹಾಕಲು ಗೋಡೆ ಡ್ರಿಲ್ ಕೊರೆಯಲು ಬಂದ ಡ್ರಿಲ್ಲರ‍್ ಹೈಪವರ‍್ ಶಾಕ್‌ಗೆ ಒಳಗಾಗುತ್ತಾನೆ.
ಈ ನಡುವೆಯೇ ಮನೋಹರ‍್ ಅರಿವಿಲ್ಲದೆಯೇ ಹೊಸ ಬೆಳವಣಿಗೆ. ಮಧ್ಯಾಹ್ನದ ಟಿವಿ ಶೋ ನೋಡುತ್ತಿರುವಾಗಲೇ ಟಿವಿಯಲ್ಲಿ ಚಾನೆಲ್ ತಾನಾಗಿ ಬದಲಾಗುತ್ತದೆ. ‘ಸಬ್ ಖೈರಿಯತ್ ಹೇ’ ಎಂಬ ಈ ಧಾರಾವಾಹಿಯಲ್ಲೂ ಒಂದು ಕುಟುಂಬ ಮನೋಹರನ ಕುಟುಂಬದ ಹಾಗೆಯೇ ಹೊಸಮನೆಗೆ ಬಂದಿರುತ್ತದೆ. ಈ ಧಾರಾವಾಹಿಯ ಚಾನೆಲ್ ಬದಲಾಯಿಸುವುದೂ ಅಸಾಧ್ಯ. ನೋಡಲೇಬೇಕಾದ ಪರಿಸ್ಥಿತಿ. ಕೊನೆಗೂ ಕುಟುಂಬದ ಮಹಿಳೆಯರು ಕುಳಿತು ಇದನ್ನು ಆಕರ್ಷಣೆಯಿಂದ ನೋಡುತ್ತಿರುತ್ತಾರೆ.
ಆಕಸ್ಮಿಕವಾಗಿ ಮನೋಹರ ಕೂಡಾ ಒಮ್ಮೆ ಇದನ್ನು ನೋಡುತ್ತಾನೆ. ತನ್ನ ಕುಟುಂಬದ ಕಥೆಯೇ ಅಲ್ಲಿ ಬಂದಂತಾಗುತ್ತದೆ, ಅಷ್ಟೇ ಅಲ್ಲ, ಮುಂದೆ ತನ್ನ ಕುಟುಂಬಕ್ಕೆ ಏನಾಗುತ್ತದೆ ಎನ್ನುವುದೂ ಈ ಧಾರಾವಾಹಿಯಲ್ಲಿ ನೋಡಿದಾಗ ತಿಳಿಯುತ್ತದೆ.
ಕೊನೆಗೂ ಕೆಲದಶಕಗಳ ಹಿಂದೆ ಸತ್ತು ಹೋದವರ ಆತ್ಮಗಳೇ ಟಿವಿಯಲ್ಲಿ ಪ್ರಕಟಗೊಳ್ಳುವುದು ಮನೋಹರನಿಗೆ ತಿಳಿಯುತ್ತದೆ...ಇನ್ನೂ ನಾನು ಕಥೆ ಹೇಳಿದರೆ ನಿಮ್ಮ ಆಸಕ್ತಿ ಹೋದೀತು..ಹಾಗಾಗಿ ಕಥೆ ಇಲ್ಲಿಗೇ ನಿಲ್ಲಿಸುವೆ. ವಿಕ್ರಮ ಕುಮಾರ‍್ ನಿರ್ದೇಶನದ ಈ ಚಿತ್ರ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದೆ. ಮಾಧವನ್ ಪ್ರಬುದ್ಧ ಅಭಿನಯ, ನೀತು ಚಂದ್ರ ತುಂಟ ಪತ್ನಿಯಾಗಿ, ಡಾಕ್ಟರ‍್ ಶಿಂಧೆಯಾಗಿ ಸಚಿನ್ ಖೇಡೇಕರ‍್ ಗಮನ ಸೆಳೆಯುತ್ತಾರೆ.
ಖಂಡಿತವಾಗಿ ಇತ್ತೀಚೆಗಿನ ಹಾರರ‍್ ಚಿತ್ರಗಳಲ್ಲಿ ಗುಣಮಟ್ಟದಲ್ಲಿ ಮೇಲ್ಪಂಕ್ತಿಯಲ್ಲಿರುವ ಚಿತ್ರ 13B.

25.3.09

ಒಂದಷ್ಟು ಅರಿಕೆ...

ನಿನ್ನ ಖುಷಿಯ

ಅಲೆಗಳಲ್ಲಿ ನನ್ನ ನೋವುಗಳೆಲ್ಲ

ಕೊಚ್ಚಿಕೊಂಡು ಹೋಗಲಿ

ನಿನ್ನ ನಾಳೆಗಳಲ್ಲಿ

ನನ್ನ ಇಂದು

ಪಿಳಿ ಪಿಳಿ

ಕಣ್ಣು ಬಿಡಲಿ

ಕ್ಷಣಕ್ಷಣಕ್ಕೂ ಬದಲಾಗುವ

ನಿನ್ನ ಮಾತಿನ ಮೋಡಿಯಲ್ಲಿ

ಸಿಲುಕಿದ ನನ್ನ ಹಾಡುಗಳೆಂದಿಗೂ

ಮಾಧುರ್ಯ ಕಳೆದುಕೊಳ್ಳದಿರಲಿ

ದಿನರಾತ್ರಿ ಕನಸುಕಾಣುವ

ನಿನ್ನ ಕಂಗಳ ರೆಪ್ಪೆಗಳು

ನನ್ನೆದೆಯ ಕ್ಯಾನ್ವಾಸಲ್ಲಿ

ಚಿತ್ತಾರ ಬರೆಯಲಿ..

ನಮ್ಮ ಅಗಲುವಿಕೆಯ

ಬೇಗುದಿಯೆ ಈ ಛಳಿಗೆ

ಹೊದಿಕೆಯಾಗಲಿ..

10.3.09

ನಿನ್ನೆ ನಾಳೆಗಳು....

ಮೊನ್ನೆ, ನಿನ್ನೆ ನನಗೆ ಚೆನ್ನಾಗಿತ್ತು

ಇಂದೂ ಇಲ್ಲಿಯ ವರೆಗೆ

ಪರವಾಗಿಲ್ಲ...

ಅಂದಹಾಗೆ

ಬದುಕು ಬೇವು ಬೆಲ್ಲ,

ಕಷ್ಟ ಸುಖಗಳೆ ಎಲ್ಲ

ಎಂದಿದ್ದಾರೆ ಹಿರಿಯರು

ಮೊನ್ನೆ, ನಿನ್ನೆ, ಇಂದು ಚೆನ್ನಾಗಿದೆ ನನಗೆ

ಅದಕ್ಕೇ ಭಯವಾಗುತ್ತಿದೆ...

ನಾಳೆಯ ನೆನೆದು ಮನ ಅಳುಕುತ್ತದೆ

-------------------------------

ಆಶಾವಾದಿಯೊಬ್ಬ

ನಾಳೆಗಳನ್ನು ಕೈವಶ

ಮಾಡುತ್ತಲೇ ಹೋದ

ಆತನ ಅಕೌಂಟಿನಲ್ಲಿದ್ದ

ನೋವುಗಳಿಗೆ

ಅನುಭವದ ಹಾಗೂ

ನಲಿವುಗಳಿಗೆ

ಸಂಭ್ರಮದ ಬಡ್ಡಿ ಸಿಕ್ಕಿತು..

ನಿರಾಶಾವಾದಿ ನಾಳೆಯ

ನೆನಪುಗಳಿಗೆ ಸೊರಗಿ

ವಿಗ್ರಹವಾಗಿದ್ದಾನೆ!

------------------------

ನಾಳೆಯಾಗಲು

ಕೆಲ ಗಂಟೆಗಳಿವೆ

ನಿನ್ನೆಯ ಹೊಸ್ತಿಲು ದಾಟಿಯಾಗಿದೆ

ಆ.......

ದೂರದಲ್ಲಿ ಕಾಣುವದೇನು

ಶುಭ್ರಸೂರ್ಯನ ಬಿಂಬವೋ

ನಮ್ಮ ಸುಡುವ ಬಾಂಬೋ!

1.3.09

ನಾವೆಲ್ಲರೂ ಕರಿ ಮಂಗಗಳೇ !!!

ನಮ್ಮೆಲ್ಲರೊಳಗೆ 'ಕಾಲಾ ಬಂದರ್'(ಕರಿಮಂಗ)ದ ಸ್ವಭಾವ ಅಡಗಿರುತ್ತದೆ...ಇತರರಿಗೆ ತೊಂದರೆ ಕೊಡುತ್ತಾ ತಾನು ಖುಷಿಪಡುವ ಸ್ವಭಾವ...
ಮನುಷ್ಯನ ಈ ಸ್ವಭಾವವನ್ನೇ ವಿಶ್ಲೇಷಿಸಿಕೊಂಡು, ಕೋಮುಸೂಕ್ಷ್ಮತೆ, ಭಾರತೀಯರ ಮನೋಭೂಮಿಕೆ, ಇಲ್ಲಿನ ಸಂಸ್ಕೃತಿಯ ಅನನ್ಯತೆಗಳನ್ನು ದೆಹಲಿಯಲ್ಲೊಮ್ಮೆ ಆಗಿಹೋದ ಮಂಕಿಮ್ಯಾನ್ ಪ್ರಸಂಗದ ಕೆನೆಯಲ್ಲಿರಿಸಿದ್ದಾರೆ ರಾಕೇಶ್ ಓಂಪ್ರಕಾಶ್ ಮೆಹ್ರಾ. ಅವರ ಡೆಲ್ಲಿ 6 ಚಲನಚಿತ್ರ ನೋಡುಗರಿಗೆ ಒಂದು ಅಪರೂಪದ ಪ್ರಯೋಗ.
ಒಂದು ವೇಳೆ ಅಭಿಷೇಕ್ ಬಚ್ಚನ್, ಸೋನಂಕಪೂರ್, ವಹೀದಾ ರೆಹ್ಮಾನ್ ಇಲ್ಲದಿರುತ್ತಿದ್ದರೆ, ಮಸಕ್ಕಲಿ, ಮೌಲಾದಂತಹ ಹಾಡಿಲ್ಲದಿರುತ್ತಿದ್ದರೆ, ಅಷ್ಟು ದೊಡ್ಡ ಮಟ್ಟದ ಪ್ರಚಾರವಿಲ್ಲದಿದ್ದರೆ ಈ ಚಿತ್ರ ಒಂದು ಡಾಕ್ಯುಮೆಂಟರಿಯಾಗುವ ಅಪಾಯವಿತ್ತು. ಆದರೆ ಇದನ್ನೆಲ್ಲಾ ಜೋಡಿಸಿಕೊಂಡು ಮೆಹ್ರಾ ಜನಸಾಮಾನ್ಯರಿಗೊಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಅದಕ್ಕೆ ಅವರಿಗೊಂದು ಸಲಾಂ.
ರಂಗ್ ದೇ ಬಸಂತಿಯಲ್ಲೊಂದು ರೀತಿಯ ಸಾರಾಂಶವಾದರೆ ಡೆಲ್ಲಿ 6 ಇನ್ನಷ್ಟು ವಿಭಿನ್ನ. ರಂಗ್ ದೇಯಲ್ಲಿ ಸೊಗಸಾದ ದೇಶಪ್ರೇಮದ ಕಥೆಯನ್ನು ಭಾವನಾತ್ಮಕವಾಗಿ ಪ್ರಸಕ್ತ ರಾಜಕೀಯ ಸನ್ನಿವೇಶ, ಮಿಗ್ 21 ಯುದ್ಧವಿಮಾನದ ವೈಫಲ್ಯದೊಂದಿಗೆ ಹೆಣೆದಿದ್ದ ರಾಕೇಶ್, ಚಿತ್ರದ ಮೂಲಕ ಯುವ ಹೃದಯಗಳಿಗೆ ದೇಶಪ್ರೇಮದ ಹೊಸಭಾಷ್ಯೆ ಮೂಲಕ ಕಿಚ್ಚು ಹಚ್ಚಿದ್ದರು.
ಡೆಲ್ಲಿ 6ನಲ್ಲಿ ರಂಗ್ ದೇಯಂತಹ ಅಬ್ಬರವಿಲ್ಲ. ಆದರೆ ಚಿತ್ರ ಆರಂಭದಲ್ಲಿ ಒಂದಷ್ಟು ಬೋರ್ ಎನಿಸಿದರೂ ಮುಂದುವರಿದಂತೆ ಹಿಡಿದಿರಿಸುತ್ತದೆ ನಿರೂಪಣೆ.
ಅಮೆರಿಕಾದಿಂದ ದೆಹಲಿಯ ಚಾಂದನಿ ಚೌಕಕ್ಕೆ(ಡೆಲ್ಲಿ 6) ತನ್ನ ಅಜ್ಜಿಯನ್ನು(ವಹೀದಾ) ಕೊನೆ ಕಾಲ ಕಳೆಯಲು ಕರೆತರುವ ಎನ್ಆರೈ ಮೊಮ್ಮಗ ರೋಶನ್(ಅಭಿಷೇಕ್ ಬಚ್ಚನ್), ಡೆಲ್ಲಿಗೆ, ಅಲ್ಲಿನ ಬದುಕಿಗೆ, ಪರಿಸರಕ್ಕೆ, ಮೇಲಾಗಿ ಹೀರೋಯಿನ್ನಿಗೆ(ಸೋನಮ್ ಕಪೂರ್) ಮಾರುಹೋಗುತ್ತಾನೆ. ಆ ಸಮಯದಲ್ಲಿ ಕಾಲಾಬಂದರ್ ಆ ಪ್ರದೇಶದಲ್ಲಿ ಸಾಕಷ್ಟು ಕಿರಿಕಿರಿ ಮಾಡುತ್ತಿರುತ್ತದೆ(ಮಂಕಿಮ್ಯಾನ್ ಎಂಬ ಹೆಸರ ಮೂಲಕ ಕಿಡಿಗೇಡಿಗಳು ಮಾಡುವ ಕೃತ್ಯ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತದೆ). ಆರಂಭದಲ್ಲೆ ಮೊಮ್ಮಗನಿಗೆ ಇಲ್ಲಿನ ಯಾವುದೊಂದೂ ಹಿಡಿಸದೆ ಅಜ್ಜಿಯೊಂದಿಗೆ ಮತ್ತೆ ಅಮೆರಿಕಕ್ಕೆ ಮರಳಲು ಒತ್ತಾಯಿಸುತ್ತಾನೆ. ಅಜ್ಜಿಯ ಸಮಾಧಾನಕ್ಕಷ್ಟೇ ಉಳಿಯುತ್ತಾನೆ.
ಇದರ ನಡುವೆಯೇ ಅಲ್ಲಿನ ಫೋಟೋಗ್ರಾಫರ್ ಮತ್ತು ಮುದುಕ ಲಾಲಾಜಿಯ ಹದಿಹರೆಯದ ಪತ್ನಿಯ ನಡುವೆ ಅಕ್ರಮ ಸಂಬಂಧ ಮುಂದುವರಿಯುತ್ತದೆ.
ಮಂಕಿಮ್ಯಾನ್ ವಿಷಯದಲ್ಲೇ ಹಿಂದು-ಮುಸ್ಲಿಂ ನಡುವೆ ಕೋಮುಗಲಭೆ ಕೂಡಾ ಉರಿಯುತ್ತದೆ. ಸಮಾಧಾನ ಪಡಿಸಲು ಹೋದರೆ ಅಭಿಷೇಕ್ ಬಚ್ಚನ್ ಎಲ್ಲರ ವಿರೋಧ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಜ್ಜಿಗೂ ದೆಹಲಿ ಸಾಕಾಗುತ್ತದೆ. ಆದರೆ ಈಗ ಮೊಮ್ಮಗನಿಗೆ ಇಲ್ಲಿನ ಬಗ್ಗೆ ವಿಶೇಷ ಆಸ್ಥೆ ಮೂಡುತ್ತದೆ...ಬಹುಷಃ ಪ್ರಿಯತಮೆಗಾಗಿ....ತನ್ನ ಪ್ರಿಯತಮೆ ಬಿಟ್ಟು ಕೈ ತಪ್ಪಿ ಫೋಟೋಗ್ರಾಫರ್ ಜತೆ ಇಂಡಿಯನ್ ಐಡಲ್ ಆಗಲೆಂದು ಮುಂಬೈಗೆ ಹೋಗದಂತೆ ತಡೆಯುವದಕ್ಕೆ ಮಂಕಿಮ್ಯಾನ್ ಆಗುತ್ತಾನೆ. ಅಲ್ಲೇ ಆಕೆಗೆ ಐ ಲವ್ ಯೂ ಹೇಳುತ್ತಾನೆ. ಅಷ್ಟು ಹೊತ್ತಿಗೆ ಮಂಕಿಮ್ಯಾನ್ ಹುಡುಕುತ್ತಾ ಬರುಬವವರು ಚೆನ್ನಾಗಿ ತದುಕುತ್ತಾರೆ...ಕೋಮುಗಲಭೆಗೆ ಮುಂದಾಗಿ ಪರಸ್ಪರ ಕೊಲೆ ಮಾಡಲು ಹೋದವರು ಈಗ ಮಂಕಿಮ್ಯಾನ್ ಮೇಲೆ ಮುಗಿಬೀಳುತ್ತಾರೆ...ಆ ಮೂಲಕ ಕೋಪ ಶಮನ ಮಾಡಿಕೊಳ್ಳುತ್ತಾರೆ. ಗುಂಡೇಟಿಗೂ ತುತ್ತಾಗುವ ಅಭಿಷೇಕ್ ಮೂಲಕವೇ ಚಿತ್ರದ ಸಂದೇಶವೂ ಹೊರಹೊಮ್ಮುತ್ತದೆ. ಚಿತ್ರವನ್ನು ಒಂದು ರೀತಿ ಕೊಲಾಜ್ ಮಾದರಿಯಲ್ಲಿ ಬಳಸಿಕೊಂಡಿದ್ದಾರೆ ರಾಕೇಶ್. ಅದಕ್ಕೆ ಅವರಿಗೆ ಪೂರ್ಣ ಅಂಕ.
ಅಭಿಷೇಕ್ ಬಚ್ಚನ್ ಪ್ರತಿಭೆ ಭರಪೂರ ಬಳಕೆಯಾಗಿದ್ದರೆ, ಮಸಕ್ಕಲಿ ಸೋನಂ ಚೆಂದವೋ ಚೆಂದ. ವಹೀದಾ ಇಡೀ ಚಿತ್ರಕ್ಕೇ ಸಮತೋಲನ ತಂದಿಟ್ಟಿದ್ದಾರೆ. ಸಪೋರ್ಟಿಂಗ್ ಪಾತ್ರಗಳಾದ ರಿಷಿಕಪೂರ್, ಓಂಪುರಿ, ಕುಲಕರ್ಣಿ ಇವರೆಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಮಾನವನ ಮನಸ್ಸಿನ ಸೂಕ್ಷ್ಮತೆ, ಕಾಂಪ್ಲೆಕ್ಸಿಟಿ ಇವುಗಳೆಲ್ಲದಕ್ಕೂ ಕನ್ನಡಿ ಹಿಡಿಯುವ ಚಿತ್ರಗಳು ಇನ್ನಷ್ಟು ಬರಲಿ......

19.2.09

ಪ್ರೀತಿಯೆಂಬ ಉಸುಕಿನಲ್ಲಿ

ನೀನಿಲ್ಲದ ಖಾಲಿತನ
ತುಂಬುವುದಕ್ಕೆ
ಈ ಖಾಲಿಹಾಳೆಯಲ್ಲಿ
ಒಂದಿಷ್ಟು ಸಾಲುಗಳನ್ನು
ಬಿಕ್ಕಿದ್ದೇನೆ

ನೀ ದೂರವಾದಂದಿನಿಂದ
ಸಿಡಿ ಪ್ಲೇಯರು
ಶೋಕಗೀತೆಗಳನ್ನಷ್ಟೇ
ಹಾಡುತ್ತಿದೆ

ಕಡಲತೀರದಲ್ಲಿ
ಚದುರಿಕೊಂಡಿರುವ
ಖುಷಿಯ ಚಿಪ್ಪುಗಳನ್ನು
ಒಟ್ಟುಗೂಡಿಸಲಾಗದೆ
ಸೋತಿದ್ದೇನೆ

ಪ್ರೀತಿಯೆಂಬ
ಉಸುಕುಭೂಮಿಯಲ್ಲಿ
ಕಂಠಮಟ್ಟ ಹುದುಗಿ
ಹೋಗಿದ್ದೇನೆ,
ಪೂರ್ತಿ ಮುಳುಗುವ
ಮೊದಲು ಸ್ವರ
ಉಳಿದರೆ ನಿನ್ನ
ಹೆಸರೇ ಹೇಳುವಾಸೆ!

14.2.09

ಗುಲಾಬಿ ನೆನಪುಗಳು


ನಿನ್ನೆ ಸುರಿದ ಮಳೆಗೆ
ಭೋರ್ಗರೆದಿದೆ ನದಿ
ತೊಟ್ಟಿಕ್ಕಿದೆ ಜಲ, ಮರದ
ಎಲೆಗಳಲ್ಲಿ....

.......ಅವಳ ಕಣ್ಣಲ್ಲಿ ಮಾತ್ರ ಪಸೆಯಿಲ್ಲ


*******

ದೂರದಲ್ಲೆಲ್ಲೋ ರೈತ ಮಾರಾಟಕ್ಕೆ
ಬೆಳೆದು ಇಂದು ಮಾರುಕಟ್ಟೆ
ಸೇರಿದ ಗುಲಾಬಿಗೂ
ಚೆಲುವೆಯ ಮುಡಿಯೇರುವ ನೆನಪಿಂದ
ರೋಮಾನ್ಸಿನ ಅಮಲು!
********
ರಾತ್ರಿಯಿಡೀ ಆಗಸದಲ್ಲಿ ಕಣ್ಣು
ನೆಟ್ಟಾಗ ಸಿಡಿದ ಉಲ್ಕೆಗಳು ಸಾವಿರ
ನನ್ನವಳ ಕಣ್ಣಲ್ಲಿ ಮಾತ್ರ ನಗುತ್ತಿದ್ದಾನೆ
ಪೋಲಿ ಹುಣ್ಣಿಮೆ ಚಂದಿರ

********
ಏನೂ ಅಲ್ಲದ ಅವನಿಗೆ,
ಏನೂ ಇಲ್ಲದ ಅವಳಿಗೆ
ನಡುವೆ
ಅದೇನೋ ಒಲವಲ್ಲಿ
ತುಂಬಲಿದೆ ಭವಿಷ್ಯದ ಜೋಳಿಗೆ

9.2.09

ಟಯರು ಪಂಕ್ಚರ್‍ ಪುರಾಣ

ಬಹುಷಃ ಅತ್ಯಂತ ಕಿರಿಕಿರಿಯ ಅವಸ್ಥೆ ಇದು..ಎಲ್ಲ ಬೈಕ್‌ ರೈಡರ್‌ಗಳನ್ನು ಕಾಡುವ ಸಮಸ್ಯೆ...

ತಡರಾತ್ರಿ ವರೆಗೂ ದುಡಿದು ಇನ್ನೇನು ಒಮ್ಮೆ ಮನೆ ಸೇರಿಬಿಡೋಣ ಎಂದು ದ್ವಿಚಕ್ರ ಸಂಗಾತಿಯ ಬಳಿ ಬಂದು ಕಿಕ್ ಹೊಡೆದು ಮುಂದೆ ಚಲಿಸುವಾಗ ಹಿಂದಿನ ಭಾಗ ಕಡಮೆ ಮಾಲು ಕುಡಿದವರಂತೆ ಓಲಾಡತೊಡಗುತ್ತದೆ. ನೋಡಿದರೆ ಟೈರ್‍ ಫ್ಲಾಟ್! ಇನ್ನೆಲ್ಲೋ ಅರ್ಜೆಂಟಾಗಿ ಹೋಗುತ್ತಿದ್ದೀರಿ..ಅರ್ಧ ಧಾರಿಯಲ್ಲಿ ಬೈಕ್ ಓಲಾಡುತ್ತದೆ...ಟೈರು ಬಡಕಲು ನಾಯಿಯಂತಾಗಿರುತ್ತದೆ...
ನಿಮ್ಮ ದ್ವಿಚಕ್ರ ವಾಹನ ಸ್ಕೂಟರ್‍ ಆಗಿದ್ದು ಸ್ಟೆಪ್ನೀ ಇದ್ದರೆ ಬಚಾವ್..ಟೈರು ಬದಲಾಯಿಸಬಹುದು(ಕಷ್ಟಪಟ್ಟಾದರೂ).
ಆದರೆ ಬೈಕ್ ಆಗಿದ್ದರೆ ಮುಗೀತು ಕಥೆ. ರಾತ್ರಿಯಾಗಿದ್ದರೆ ಪಂಕ್ಚರ್‍ ಹಾಕುವವರೂ ಮನೆಗೆ ಹೋಗಿರುತ್ತಾರೆ. ಹೋಗುವ ಹಂತದಲ್ಲಿದ್ದರೆ ಅವರ ಮನವೊಲಿಸಿ, ದಮ್ಮಯ್ಯಾ ಹಾಕಿ ಕರೆದುಕೊಂಡು ಬಂದು ಟ್ಯೂಬ್‌ಗೆ ಪ್ಯಾಚ್ ಹಾಕಿಸುವುದು ನಮ್ಮ ನಮ್ಮ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ.
ಮಂಗಳೂರಿನ ನವಭಾರತ ಸರ್ಕಲ್ ಬಳಿಯಲ್ಲೊಬ್ಬ ಅಜ್ಜಿಯ ಟ್ಯೂಬ್ ಪಂಕ್ಚರ್‍ ಅಂಗಡಿಯಿದೆ. ಅಜ್ಜಿ ಕ್ಯಾಷಿಯರ್‍. ವಯಸ್ಸಿಗೆ ತಕ್ಕಷ್ಟು ಧಾರ್ಷ್ಟ್ಯವೂ ಇದೆ. ಆಕೆಯ ಅಸಿಸ್ಟೆಂಟ್ ಹುಡುಗನಿಗೆ ಕೈತುಂಬಾ ಕೆಲಸ. ಒಮ್ಮೆ ರಾತ್ರಿ ೯.೩೦ರ ವೇಳೆಗೆ ಮನೆಗೆ ಹೊರಟಾ‌ಗ ನನ್ನ ಬೈಕ್‌ನ ಟೈರ್‍ ಪ್ಯಾಚ್ ಆಗಿ ‘ತಳ್ಳು ಗಾಡಿ ಐಸಾ’ ಮಾಡಿಕೊಂಡು ಅಜ್ಜಿಯ ಮುಂದೆ ಹೋಗಿ ದೀನಮುಖ ಭಾವ ಹೊತ್ತು ನಿಂದೆ.
ಏನು?! ಎಂಬಂತೆ ಕಣ್ಣಲ್ಲೇ ಅಜ್ಜಿ ಆವಾಝ್ ಹಾಕಿದ್ರು. ಟೈರು ತೋರಿಸಿದೆ.
ಅಲ್ಲೆಲ್ಲೂ ಆಕೆಯ ಪಂಕ್ಚರ್‍ ಪ್ರವೀಣ ಹುಡುಗ ಕಾಣಿಸಲಿಲ್ಲ.
ಟೈಮಾಯ್ತು...ಇವತ್ತಾಗಲ್ಲ ಎಂದು ಖಡಾಖಂಡಿತವಾಗಿ ಹೇಳಬೇಕೆ ಈ ಅಜ್ಜಿ.
ಸುರತ್ಕಲ್‌ಗೆ ಹೋಗಬೇಕು, ೧೦ ಗಂಟೆ ಕಳೆದ್ರೆ ಬಸ್ ಸಿಗಲ್ಲ...ಹೀಗೆ ಅನುನಯದ ದನಿಯಲ್ಲಿ ಅಜ್ಜಿಯನ್ನು ಪುಸಲಾಯಿಸಿದೆ...ಸುಮಾರು ೧೦ ನಿಮಿಷದ ಗೋಗರೆತದ ಬಳಿಕವೂ ಅಜ್ಜಿ ಕರಗಲಿಲ್ಲ. ಕೊನೆಗೆ ಭಾವರಹಿತರಾಗಿ ‘ಹೋದವ ಬರ್‍ಲಿ ಅವ ಮಾಡಿದ್ರೆ ಆಯ್ತು ನನಗ್ಗೊತ್ತಿಲ್ಲ’(ನಿಮ್ಮಂಥವರನ್ನು ಯಾವಾಗಲೂ ನೋಡುತ್ತೇನೆ?) ಎಂಬ ಡೈಲಾಗ್.
ಕೊನೆಗೂ ಸ್ಪಾನರ್‍ಗಳ ನಾದ ಹೊರಹೊಮ್ಮಿಸುತ್ತಾ ಹುಡುಗ ಬಂದ. ಅಜ್ಜಿ ಕಣ್ಣಲ್ಲೇ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ, ಟೈರನ್ನೊಮ್ಮೆ ಹುಡುಗನ ಮುಖವನ್ನೊಮ್ಮೆ ನೋಡಿದ್ರು. ಹುಡುಗ ಆಣತಿಯನ್ನು ಅರ್ಥೈಸಿಕೊಂಡವನಂತೆ ನೇರ ಬೈಕನ್ನು ಮೈನ್ ಸ್ಟಾಂಡಿಗೇರಿಸಿ ಸರಸರನೆ ಟೈರು ಕಳಚಿ ತನ್ನ ಕಾರ್ಯ ಶುರು ಹಚ್ಚಿಕೊಂಡ....

ಟೈರಿಗೆ ಪಂಕ್ಚರ್‍ ಹಾಕುವವರು ಹತ್ತಿರವಿದ್ದರೆ, ಪಂಕ್ಚರ್‍ ಹಗಲೇ ಇದ್ದರೆ ನಿಮ್ಮ ಅದೃಷ್ಟ. ಇಲ್ಲವಾದರೆ ಸೈಕಲ್ ಮಾದರಿಯಲ್ಲಿ ಬೈಕನ್ನು ತಳ್ಳಿಕೊಂಡು ಹೋಗಬೇಕು. ಅದೂ ನಿಮ್ಮ ೧೫೦-೧೮೦ ಸಿಸಿಯ ಕೋಣಗಳಂತಹ ಬೈಕಾದರೆ ತಳ್ಳುವುದೂ ಶಿಕ್ಷೆಯೇ! ಊರಿಗೆ ಒಬ್ಬನೇ ಪಂಕ್ಚರ್‍ ಹಾಕುವವನಾದರೆ ಅವನ ಧಿಮಾಕು ನೋಡಬೇಕು. ಗೆಳೆಯರೊಬ್ಬರ ಟೈರು ಪಂಕ್ಚರಾದಾಗ, ಹೊಸ ಟ್ಯೂಬೇ ಹಾಕಬೇಕು ಎಂದು ಪಟ್ಟು ಹಿಡಿದ ಮುದುಕ ಮೆಕ್ಯಾನಿಕ್ ಒಬ್ಬರು ಆಲ್‌ಮೋಸ್ಟ್ ಡಬಲ್ ಹಣ ವಸೂಲಿ ಮಾಡಿದ್ದರಂತೆ. ಕೆಲವರ ಕೆಲಸವೂ ಕಳಪೆ. ಅದೃಷ್ಟವೂ ಕೈಕೊಟ್ಟಿತ್ತೇನೋ..ನಾನೊಮ್ಮೆ ಒಂದು ವಾರದಲ್ಲಿ ನಾಲ್ಕು ಬಾರಿ ಪಂಕ್ಚರ್‍ ಹಾಕಿಸಬೇಕಾಗಿ ಬಂದಿತ್ತು.
ನನ್ನ ಬೈಕ್‌ನ ಟೈರ್‍ ಪಂಕ್ಚರ್‍ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಮೆಕ್ಯಾನಿಕ್‌ಗಳನ್ನು ನೋಡಿದ್ದೇನೆ. ಉಪ್ಪಿನಂಗಡಿ ಬಳಿಯ ನಗು ಮೊಗದ ಮೆಕ್ಯಾನಿಕ್ ಒಬ್ಬರು ಮಧ್ಯಾಹ್ನ ಕರೆಂಟ್ ಇಲ್ಲದಿದ್ದರೂ ಗ್ಯಾಸ್ ಸ್ಟೋವ್ ಬಳಸಿ ಹಾಟ್ ಪ್ರೆಸ್ ಪಂಕ್ಚರ್‍ ಹಾಕಿ, ನಾನು ಹಣದ ಕೊಡುವ ಜತೆ ಥ್ಯಾಂಕ್ಸ್ ಹೇಳಿದಾಗ ಬಹಳ ಖುಷಿ ಪಟ್ಟಿದ್ದರು. ಟೈರ್‍ ಪಂಕ್ಚರಿನಂತಹ ಪೇಚಿನ ಪ್ರಸಂಗಗಳಲ್ಲಿ ಉತ್ತಮ ಸೇವೆ ಕೊಡುವ ಮೆಕ್ಯಾನಿಕ್‌ಗಳು ಆಪದ್ಬಾಂಧವರಂತೆಯೇ ಕಾಣಿಸಿದರೂ ಅಚ್ಚರಿಯಿಲ್ಲ.

5.2.09

ಧೂಮಲೀಲೆ


ತನ್ನ ಪಾಡಿಗೆ ತನ್ನನ್ನೇ
ಸುಟ್ಟುಕೊಂಡು ನನಗೆ
ಸಾಂತ್ವನ ಹೇಳುತ್ತದೆ
ಎಂತಹ
ತ್ಯಾಗಮಯಿ
ನನ್ನ ಸಿಗರೇಟು!

ತಣ್ಣನೆ ರಾತ್ರಿಗಳು
ಕೊರೆಯುವಾಗ
ಅವಳಿಲ್ಲದ
ಗಳಿಗೆಗಳಲ್ಲಿ ಕೊರಗುವಾಗ
ಕೆಂಪಗೆ ಕೊನರುತ್ತಾ
ಬೆಚ್ಚನೆಯ
ಅನುಭೂತಿ ನೀಡುವುದು

ನನ್ನ ಗೆಳತಿಯ ಯೋಚನಾ
ಲಹರಿಯಂತೆ
ಗೊತ್ತುಗುರಿಯಿಲ್ಲದೆ
ಎತ್ತಲೋ ಸುತ್ತುತ್ತಾ
ವಿಲೀನವಾಗುವ
ಸಿಗರೇಟಿನ ಧೂಮ ನಂಗಿಷ್ಟ!
ಶಾಸನ ವಿಧಿಸಿದ ಎಚ್ಚರಿಕೆ
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ

1.2.09

ಮಂಗಳೂರು ಪಬ್ಬಾಯಣ

-೧-

ಮಂಗಳೂರಿನ ನ್ಯಾಯಾಲಯವದು...ಸಂಸ್ಕೃತಿಯ ‘ರಕ್ಷಕರು’ ಅನುಭವಿಸುವ ಹಕ್ಕು ‘ಉಳ್ಳವರಿಗೆ’ ತದುಕಿದ ಪ್ರಕರಣ*ದ ವಿಚಾರಣೆ ಮೊನ್ನೆ ನಡೆಯುತ್ತಿತ್ತು...ಅಲ್ಲಿ ಮಂಗಳೂರನ್ನು ತಾಲೀಬಾನ್ ಎಂದು ಹೆಸರಿಸಿದವರ ದಂಡೂ ಇತ್ತು...ಈ ದಂಡು(ಅನುಮತಿ ಪಡೆಯದೇ) ಕೋರ್ಟ್ ಸಭಾಂಗಣದಲ್ಲಿ ವಕೀಲರನ್ನೂ ತಳ್ಳಿಕೊಂಡು ಹೋಯಿತು..ಅಷ್ಟೇ ಅಲ್ಲ, ಕೋರ್ಟ್ ಕಲಾಪವನ್ನೇ ಮೊಬೈಲ್‌ನಲ್ಲಿ ದಾಖಲಿಸಲು ಶುರುವಿಟ್ಟರು ದಂಡಿನ ಸದಸ್ಯರು...ಇದನ್ನು ನ್ಯಾಯವಾದಿಗಳು ಪತ್ತೆ ಮಾಡಿ ನ್ಯಾಯಾಧೀಶರ ಗಮನಕ್ಕೆ ತಂದರು, ಕೊನೆಗೆ ಇವರನ್ನೆಲ್ಲ ಛೀಮಾರಿ ಹಾಕಿ ಹೊರಗೆ ಕಳುಹಿಸಲಾಯಿತು.
ಮಂಗಳೂರಿನಲ್ಲಿ ಯಾವ ರೀತಿ ರಾಷ್ಟ್ರೀಯ ದುರಂತ ನಡೆದಿದೆ ಎಂದು ವರದಿ ಮಾಡಲು ಬಂದಿದ್ದವರಿಗೆ, ಮೋರಲ್ ಪೊಲೀಸಿಂಗ್ ಬಗ್ಗೆ ಮೈಕ್ ಹಿಡಿದು ಸುದ್ದಿ ಬದಲು ಅಭಿಪ್ರಾಯಗಳನ್ನೇ ಹೇರುತ್ತಾ ಬಂದ ಛಾನೆಲ್ ಅಣ್ಣಂದಿರಿಗೆ ಕೋರ್ಟ್‌ನಲ್ಲಿ ಮೊಬೈಲ್ ಬಳಸಬಾರದು ಎಂಬ ಕನಿಷ್ಠ ಜ್ಞಾನವಿರಲಿಲ್ಲ....

*(ಅರ್ಥವಾಗಿರುತ್ತೆ...ಈಗಾಗಲೇ ಎಲ್ಲ ಬ್ಲಾಗ್‌ಗಳಲ್ಲೂ ಬಂದಿದೆ, ಅಂತಾರಾಷ್ಟ್ರೀಯ ಸುದ್ದಿ..ಅದೇ ಮಂಗಳೂರು ಪಬ್ ದಾಳಿ)

-೨-

ಅದಾಯ್ತು....
ಎಲ್ಲ ೨೮ ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೊಟ್ಟಿತು...ಅದು ನ್ಯಾಯಾಲಯದ ತೀರ್ಪು. ತೀರ್ಪು ಕೊಟ್ಟದ್ದು ಇಷ್ಟವಾಗದಿದ್ದರೆ ಸಂಬಂಧಿಸಿದವರು ಮೇಲ್ಮನವಿ ಸಲ್ಲಿಸಬಹುದು..ಅಷ್ಟಕ್ಕೂ ಜಾಮೀನು ಕೊಟ್ಟಾಕ್ಷಣ ದೋಷಮುಕ್ತರಾಗುವುದಿಲ್ಲ...ಚಾನೆಲ್ಲೊಂದರಲ್ಲಿ ವರದಿಗಾರ್ತಿಯೊಬ್ಬಳು ೧೦ ಮಂದಿ ಹೈಪ್ರೊಫೈಲಿಗರನ್ನು ನಿಲ್ಲಿಸಿ ಅವರ ಬಾಯಿಂದ ಏನೋ ಹೇಳಿಸಲು ಯತ್ನಿಸುತ್ತಿದ್ದಳು.
ನಿಮಗೆ ರಸ್ತೆಯಲ್ಲಿ ಹೋದಾಗ ಯಾರಾದರೂ ಹೊಡೆದರೆ, ಅವರೆಲ್ಲರೂ ಜೇಲಿನಿಂದ ಹೊರಬಂದರೆ ನಿಮಗೆ ಏನನ್ನಿಸುತ್ತದೆ? ಮುಂತಾದ ಪ್ರಶ್ನೆಗಳನ್ನು ಹಾಕಿದಳು.

-೩-

ನಿನ್ನೆಯಷ್ಟೇ ನಿವೃತ್ತರಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್‍.ಶ್ರೀಕುಮಾರ್‍ ಮಂಗಳೂರಿಗೆ ಬಂದಿದ್ದರು. ಎಸಿ ಹಾಲ್‌ನಲ್ಲಿ ನಡೆದ ಉದ್ಯಮಿಗಳ ಸಭೆಯೊಂದರಲ್ಲಿ ಮಹಿಳಾಮಣಿಯೊಬ್ಬರು ಡಿಜಿಪಿಗೆ ಹಾಕಿದ ಪ್ರಶ್ನೆ - ‘ನನಗೂ ಟೀನೇಜ್ ಮಕ್ಕಳಿದ್ದಾರೆ, ಅವರು ರಸ್ತೆಯಲ್ಲಿ ನಡೆಯುವಾಗ ಯಾರಾದರೂ ಹೊಡೆದರೆ, ನಿಮ್ಮ ಪೊಲೀಸರು ರಕ್ಷಣೆ ಕೊಡಬೇಡ್ವೇ’
ಅದಕ್ಕೆ ಡಿಜಿಪಿಯವರ ಉತ್ತರ - ‘ಪೊಲೀಸರು ಖಂಡಿತಾ ಕ್ರಮ ಕೈಗೊಳ್ಳಲೇಬೇಕು, ಆದರೆ ಮಕ್ಕಳ ಹೆತ್ತವರಿಗೂ ಸ್ವಲ್ಪ ಜವಾಬ್ದಾರಿ ಇರಬೇಕು’

-೪-
ಮೊನ್ನೆ ಪಬ್ ದಾಳಿ ನಡೆದ ಬಳಿಕ ವಿಚಾರಣೆಗೆ ಕೇಂದ್ರ ಮಹಿಳಾ ಆಯೋಗ ಮಂಗಳೂರಿಗೆ ಬಂತು. ಅಮ್ನೆಸಿಯಾ ಪಬ್‌ಗೆ ಭೇಟಿ ನೀಡಿತು. ಆಯೋಗದ ಸದಸ್ಯೆ ರಾಜ್ಯದವರೇ..ನಿರ್ಮಲಾ ವೆಂಕಟೇಶ್.
ಅಮ್ನೆಸಿಯಾ(ಇದು ಪಬ್ ಅಲ್ಲ, ಬಾರ್‍, ಇಲ್ಲಿ ಬಿಯರ್‍ ಮಾತ್ರವಲ್ಲ ಇತರೇ ಮದ್ಯಕ್ಕೂ ಅವಕಾಶ ಇದೆ, ಪಕ್ಕದಲ್ಲೇ ಇರೋ ವುಡ್ಸೈಡ್ ಹೊಟೇಲಲ್ಲಿ ರೂಮ್ ಮಾಡೋವ್ರಿಗೆ ಲಿಕ್ಕರ್‍ ನೀಡೋ ಬಾರ್‍ ಎನ್ನೋದು ಅಬಕಾರಿ ಇಲಾಖೆ ಅಧಿಕಾರಿ ಸಮಜಾಯಿಷಿ ಇದೆ)ಗೆ ಭೇಟಿ ನೀಡಿದ ಮಹಿಳಾ ಆಯೋಗದ ಸದಸ್ಯೆ ಹಾಸ್ಯಗೋಷ್ಠಿ ಮಾದರಿಯಲ್ಲಿ ಪಬ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡರು...ಹೀಗೆ...
‘ಏನಪ್ಪಾ ಹುಡುಗೀರು ನಿನ್ನ ಪಬ್‌ಗೆ ಬರೋವಾಗ ಸೆಕ್ಯೂರಿಟಿ ಕೊಡಬೇಡ್ವ?
‘ಅಲ್ಲ... ಗಂಡಸಾಗಿ ಹೊರಗಿನವ್ರನ್ನ ತಡೆಯೋಕೆ ಆಗಿಲ್ವ? ಇಷ್ಟು ದಪ್ಪಕ್ಕಿದ್ದೀಯಾ ಅವ್ರನ್ನ ಸುಮ್ನೇ ಹೊಡೆಯೋಕೆ ಬಿಟ್ಯಾ’
‘ಈಗ ನಾನೇ ಬರ್‍ತೀನಿ, ಪ್ರಾಂಸ್ ತಿನ್ನೋಕೆ ಅಂತ, ಎಲ್ರೂ ಕುಡಿಯೋಕಂತಾನೇ ಬರ್‍ತಾರಾ?’
ಹೀಗೆ ಕ್ಲಾಸ್ ಆದ ಬಳಿಕ ಮೇಡಮ್ಮು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ರು - ಈ ಪಬ್ಬಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಲೈಸೆನ್ಸ್ ರದ್ದು ಮಾಡಿ..ಉಳಿದ ಪಬ್‌ಗಳಲ್ಲೂ ರಕ್ಷಣೆ ಉಂಟೇ ನೋಡಿ...
ಲೇಟೆಸ್ಟ್ ಸುದ್ದಿ : ಆಯೋಗದ ಸದಸ್ಯೆ ಶ್ರೀರಾಮಸೇನೆಯಿಂದ ಪೆಟ್ಟು ತಿಂದ ಅಕ್ಕಂದಿರನ್ನು ಭೇಟಿಯೇ ಮಾಡಿಲ್ಲಾಂತ ಅಧ್ಯಕ್ಷೆ ಗಿರಿಜಾ ವ್ಯಾಸರಿಗೆ ಕೋಪ ಬಂದಿದೆ!

-೫-
ಮಂಗಳೂರು ತಾಲಿಬಾನ್ ಆಗಿದೆ ಅಂತ ರಾಷ್ಟ್ರೀಯ ಛಾನೆಲ್‌ಗಳು ಬೊಬ್ಬೆ ಹಾಕಿದ್ದೇ ಹಾಕಿದ್ದು. ಶ್ರೀರಾಮ ಸೇನೆಯ ಮಂಗಳೂರಿನ ಲೀಡರ್‌ಗಳೂ ತಾವೀಗ ನ್ಯಾಷನಲ್ ಫಿಗರ್‌ಗಳಾಗಿದ್ದೇವೆ ಎಂಬ ಹೆಮ್ಮೆಯಲ್ಲಿದ್ದಾರೆ.
ಎನೀ ಪಬ್ಲಿಸಿಟಿ ಈಸ್ ಪಬ್ಲಿಸಿಟಿ!
ಮಂಗಳೂರಿನಲ್ಲಿ ಕೋಮು ಗಲಭೆ, ಕರ್ಫ್ಯೂ ಆದಾಗ ಮಾತ್ರ ರಾಷ್ಟ್ರೀಯ ಛಾನೆಲ್‌ಗಳು ಬರುತ್ತವೆ ಎಂಬ ಆರೋಪ ಸುಳ್ಳಾಗಿದೆ.
-೬-
(ಫ್ಲಾಷ್‌ಬ್ಯಾಕ್)
ಕಳೆದ ವರ್ಷ ಮಂಗಳೂರಲ್ಲಿ ಟೈಂಸ್ ಪತ್ರಿಕಾಸಮೂಹದ ಮಿಸ್ ಫೆಮಿನಾ ಇಂಡಿಯಾ ಸ್ಪರ್ಧೆಯ ಆಯ್ಕೆ ಏರ್ಪಡಿಸಲಾಗಿತ್ತು...ಕೊನೇ ಹಂತದಲ್ಲಿ ಶ್ರೀರಾಮಸೇನೆ ಸಂಸ್ಕೃತಿ ಹೆಸರಲ್ಲಿ ಇದಕ್ಕೂ ಅಡ್ಡಿಪಡಿಸಿತ್ತು...ಆಗ ಟೈಂಸ್ ಗ್ರೂಪ್‌ಗೆ ಸೇನೆಯ ಪರಿಚಯವಾಗಿ ಪ್ರೀತಿಗೆ ತಿರುಗಿತು. ಅದುವೇ times now ಚಾನೆಲಲ್ಲಿ ಸೇನೆ ದಿನವೂ ಪ್ರಚಾರ ಪಡೆಯಲು ಕಾರಣ ಇರಬಹುದು ಎಂಬುದೊಂದು ವಿಶ್ಲೇಷಣೆಯೊಂದಿಗೆ ಈ ಅಂಕವು ಪರಿಸಮಾಪ್ತಿಗೊಂಡಿದೆ.

26.1.09

ಶಾಂತಿಪ್ರಿಯ ದೇಶಕ್ಕೊಂದು ಕಂಗ್ರಾಟ್ಸ್!

ಮತ್ತೊಮ್ಮೆ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನಡೆದಿದೆ...
ಸಾಕಷ್ಟು ಭದ್ರತೆ ನಡುವೆ ಯಾವುದೇ ಅಹಿತಕರ ಘಟನೆ ಇಲ್ಲದೆ ನಡೆದಿರುವುದೇ ಅಚ್ಚರಿ!
ಅಷ್ಟರ ಮಟ್ಟಿಗೆ ಭಾರತೀಯರಲ್ಲಿ ಭಯೋತ್ಪಾದನೆ ಭೀತಿ ಮೂಡಿಸಿದೆ. ಭಾರತೀಯ ಗಣತಂತ್ರ ವ್ಯವಸ್ಥೆ ೬೦ನೇ ವರ್ಷ ಪೂರೈಸಿದೆ. ಜಗತ್ತಿನಲ್ಲೇ ವಿಶೇಷ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ.
ಭೀತಿವಾದ,
ಪ್ರತ್ಯೇಕತಾವಾದ,
ಒಡಕು,
ಕೋಮುವಾದ,
ನಕಲಿ ಜಾತ್ಯತೀತತೆ
ಬಡತನ,
ಹಸಿವು,
ಇವೆಲ್ಲ -veಗಳ ನಡುವೆಯೂ ನಾವು ಭಾರತೀಯರು...ಇದನ್ನು ಅಲ್ಲಗಳೆಯುವಂತಿಲ್ಲ. ಎಂತಹ ಸಂಕಷ್ಟ ಬಂದೊದಗಿದರೂ ಆಂತರಿಕ ಪರಿಸ್ಥಿತಿಗಳು ವಿರುದ್ಧವಾಗಿ ನಿಂತರೂ ನಾವೆಲ್ಲರೂ ಒಂದಾಗಬಲ್ಲೆವು ಎಂಬ ಸಂದೇಶ ಇತ್ತೀಚೆಗೆ ಮುಂಬೈ ಮೇಲೆ ಉಗ್ರರ ದಾಳಿ ನಡೆದ ಬಳಿಕ ಇಡೀ ದೇಶದಲ್ಲಿ ಹೊರಹೊಮ್ಮಿದೆ.
ಪಾಕಿಸ್ತಾನ ವಿರುದ್ಧ ಆರಂಭದಲ್ಲಿ ಭಾರತೀಯ ಸರ್ಕಾರ ತೋರಿದ ಜಿಗುಟು ಕಠಿಣ ಧೋರಣೆಯನ್ನು ಮುಂದುವರಿಸಿಲ್ಲ ಎನ್ನುವ ನೋವು ಅನೇಕ ಭಾರತೀಯರಲ್ಲಿ ಇರುವುದು ನಿಜ. ಆದರೂ ಭಾರತದಂತಹ ಶಾಂತಿಪ್ರಿಯ ದೇಶವನ್ನು ಪದೇ ಪದೇ ತೊಂದರೆಗೆ ಸಿಲುಕಿಸುವ ಪಾಕಿಸ್ತಾನ ಸ್ವಯಂಕೃತಾಪರಾಧಕ್ಕೆ ತಾನೇ ಸಿಲುಕುವ ಹಂತದಲ್ಲಿದೆ.
ಬಾಂಗ್ಲಾದೇಶವೆನ್ನುವ ಪುಟ್ಟ ರಾಷ್ಟ್ರವೂ ಭಾರತಕ್ಕೆ ತಲೆನೋವು ತರುತ್ತಿದೆ, ಭಾರತದ ೭ ಸೋದರಿಯರ ಒಡಲೊಳಗೆ ಪ್ರತ್ಯೇಕತಾವಾದ ಹುಟ್ಟುಹಾಕಲು ಬಾಂಗ್ಲಾ ಉಗ್ರರು ಮಸಲತ್ತು ನಡೆಸುತ್ತಿದ್ದಾಗಲೇ ಶೇಖ್ ಹಸೀನಾ ಸರ್ಕಾರ ಆಡಳಿತ ವಹಿಸಿಕೊಂಡಿದ್ದು ಒಂದಷ್ಟು ಆಶಾವಾದಕ್ಕೆ ಕಾರಣ.

ಪ್ರಜಾಪ್ರಭುತ್ವದಿನದಂದು ದೆಹಲಿ ರಾಜಪಥದಲ್ಲಿ ಶಿಸ್ತುಬದ್ಧ ಹೆಜ್ಜೆ ಹಾಕುವಷ್ಟೇ ನೀಟಾಗಿ ವೈರಿಗಳ ಹುಟ್ಟಡಗಿಸುವ ನಮ್ಮ ಯೋಧರು, ಭಾರತವಿನ್ನೂ ದೇಶವಾಗಿ ಉಳಿದಿರಲು ಕಾರಣವಾದ ಎಲ್ಲರಿಗೂ ಗಣರಾಜ್ಯ ದಿನದ ಶುಭಾಶಯಗಳು...

12.1.09

ಕೃಷಿಯಲ್ಲೂ ‘ಸಫಲ’ರಾಗಬಹುದು!!!

ನಾನು ಕೃಷಿಕರ ಬಗ್ಗೆ ಬರೆಯಲು ಹೋದಾಗಲೆಲ್ಲ ಸಿಗುತ್ತಿದ್ದುದು ಪೇಲವ ಕಥೆಗಳೇ.
ಆದರೆ ಇತ್ತೀಚೆಗೆ ಮಿತ್ರರೊಬ್ಬರು ‘ಮೂಡುಬಿದಿರೆ ಸಮೀಪ ಅಡಕೆ ಕೃಷಿಕರೊಬ್ಬರಿದ್ದಾರೆ, ಕಡಮೆ ಬಂಡವಾಳದಲ್ಲಿ ಕೃಷಿ ಮಾಡ್ತಿದಾರೆ’ ಎಂದಿದ್ದು ಕುತೂಹಲಕ್ಕೆ ಕಾರಣವಾಯ್ತು.
ಹಾಗಾಗಿ ಒಂದು ಸಂಜೆ ಆ ಮಿತ್ರರೊಂದಿಗೇ ತೋಟ ನೋಡೇ ಬಿಡೋಣ ಎಂದು ಹೊರಟೆ. ಮೂಡುಬಿದಿರೆಗೆ ಮಂಗಳೂರಿಂದ ಹೋಗುವಾಗ ಬಡಗೆಡಪದವು ಎಂಬ ಊರು ಸಿಗುತ್ತದೆ. ಮಂಗಳೂರೆಲ್ಲಾ ಕಾಂಕ್ರೀಟು ನಗರಿಯಾಗುತ್ತಿದ್ದರೂ ಎಡಪದವು, ಗುರುಪುರ, ಮೂಡುಬಿದಿರೆ, ಕಿನ್ನಿಗೋಳಿ ಇಲ್ಲೆಲ್ಲಾ ಇನ್ನೂ ಹಸಿರಿದೆ, ತೋಟ, ಗದ್ದೆ ಇದೆ. ಎಷ್ಟು ದಿನ ಗೊತ್ತಿಲ್ಲ! ಮೂಡುಬಿದಿರೆ ಮೋಹನ ಆಳ್ವರ ಶೋಭಾವನದ ಹಿಂದಿನ ಬಸ್ ಸ್ಟಾಪಲ್ಲಿಳಿದು ಸಫಲಿಗರ ಮನೆ ಕೇಳಿದರೆ ಯಾರಾದರೂ ತೋರಿಸುತ್ತಾರೆ.

ಸಂಜೀವ ಸಫಲಿಗರು ಮೊದಲು ವಿದೇಶದಲ್ಲಿ ಉದ್ಯೋಗಿಯಾಗಿದ್ದವರು. ಊರಿಗೆ ಮರಳಿ ಕೃಷಿ ಮಾಡಬೇಕು ಎಂದು ನಿರ್ಧರಿಸಿದವರು. ಸುಮಾರು ೧೦ ವರ್ಷಗಳಿಂದ ಅವರಿಗೆ ಕೃಷಿಯಲ್ಲಿ ಪ್ರಯೋಗ ಮಾಡುವ ಹುಚ್ಚು. ಸಾವಯವ ಕೃಷಿ ಸಾಧಕ ಸುಭಾಷ್ ಪಾಳೆಕರ್‍ ಅವರ ಉಪನ್ಯಾಸ, ತರಬೇತಿ ಕಾರ್ಯಾಗಾರಗಳಿಗೆ ಸಫಲಿಗ ಭೇಟಿ ಕೊಟ್ಟಿದ್ದಾರೆ.

ಆದರೆ ಅನುಷ್ಠಾನ ಮಾಡುವಾಗ ತಮ್ಮದೇ ವಿಧಾನದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ.
ಸಫಲಿಗರ ತೋಟದಲ್ಲಿ ಅಳವಡಿಸಿದ ವಿಧಾನಗಳು ಮೂರು.
  • ಜೀವಾಮೃತದ ಬಳಕೆ
  • ನೀರಿನ ಮಿತವ್ಯಯ
  • ತೋಟದಲ್ಲಿ ನೈಸರ್ಗಿಕತೆಯ ಉಳಿಕೆ


ಆರಂಭದಲ್ಲಿ ತೋಟಕ್ಕೆ ಸ್ಪ್ರಿಂಕ್ಲರ್‍ ಹಾಕಿಸಿದ್ದವರು ಈಗ ಅದನ್ನು ತೆಗೆದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸುತ್ತಾರೆ. ಸ್ಪ್ರಿಂಕ್ಲರ್‍ ನೀರು ಮಣ್ಣಿನ ಮೇಲ್ಪದರಕ್ಕೆ ಹೆಚ್ಚಾಗಿ ತೇವಗೊಳಿಸುತ್ತದೆ. ಆಗ ಅಡಕೆ ಮರದ ಬೇರುಗಳು ಮೇಲಕ್ಕೆ ಬಂದು ಹರಡಿಕೊಳ್ಳುತ್ತವೆ. ಇದರಿಂದಾಗಿ ಮೇಲ್ಪದರ ಒಣಗಿದ ಕೂಡಲೇ ಮರ ಕೂಡಾ ಒಣಗುತ್ತದೆ. ಇದಕ್ಕೆ ಪರ್ಯಾಯವಾಗಿ ಸಫಲಿಗರು ಕಂಡುಕೊಂಡದ್ದು ಬದುಗಳನ್ನು(ಓಳಿ).

ಬದುಗಳಲ್ಲಿ ಜೀವಾಮೃತ ಮಿಶ್ರಿತ ನೀರನ್ನು ಬಿಟ್ಟು ಬಿಡುತ್ತಾರೆ. ಅದು ತುಂಬಿದ ಕೂಡಲೇ ನೀರನ್ನು ಇನ್ನೊಂದು ಬದುವಿಗೆ ಹರಿಸುತ್ತಾರೆ. ಇದರಿಂದ ಬದುವಿನ ನೀರು ಆಳಕ್ಕಿಳಿಯುತ್ತದೆ, ನೀರು ಹುಡುಕುತ್ತಾ ಬೇರುಗಳು ಆಳಕ್ಕಿಳಿಯುತ್ತವೆ. ಆಗ ನೀರು ಸಿಗದಿದ್ದರೂ ಮರ ಬೇಗನೆ ಒಣಗುವುದಿಲ್ಲ. ಅಲ್ಲದೆ ಬೇರು ಆಳಕ್ಕೆ ಹೋಗುವ ಕಾರಣ ಮರ ಹೆಚ್ಚು ಫಲಕೊಡುತ್ತದೆ, ದೃಢವಾಗುತ್ತದೆ. ಈ ಕಾರಣಕ್ಕೆ ಸಫಲಿಗರು ತೋಟಕ್ಕೆ ನೀರು ಕೊಡುವುದು ೮-೯ ದಿನಕ್ಕೊಮ್ಮೆ.ಸಫಲಿಗರ ತೋಟದಲ್ಲಿ ಕಳೆಗಿಡಗಳಿಗೂ ಒಂದು ಸ್ಥಾನವಿದೆ. ಅತೀ ತೊಂದರೆ ಕೊಡುವ ಕಳೆ ಬಿಟ್ಟರೆ ಉಳಿದದ್ದನ್ನು ಹಾಗೇ ಬಿಡುತ್ತಾರೆ. ಅಡಕೆ ಮರದ ಬುಡದಲ್ಲೇ ಕೆಲಮರಗಳು ಅಡಕೆ ಮೀರಿಸುವಂತೆ ಬೆಳೆದು ನಿಂತಿವೆ. ಕೆಲ ಅಡಕೆ ಮರದ ನಾಲ್ಕೂ ಸುತ್ತಲೂ ಉಪ್ಪಾಳಿಗೆಯ ಮರಗಳು. ಅಷ್ಟಾದರೂ ಅದು ಅಡಕೆ ಇಳುವರಿಗೆ ತೊಂದರೆಯಾಗಿಲ್ಲ. ಇದು ನನ್ನ ಪ್ರಯೋಗವಷ್ಟೇ ಇಲ್ಲಿವರೆಗೆ ಮರಗಳೇನೂ ಅಡಕೆ ಮರದ ಪಾಲನ್ನು ಕಬಳಿಸಿಲ್ಲ, ಹಾಗಾಗಿದ್ದರೆ ಇಳುವರಿ ಕಡಮೆಯಾಗಬೇಕಿತ್ತಲ್ವೇ? ಪ್ರಶ್ನಿಸುತ್ತಾರೆ ಸಫಲಿಗ.

ಈ ತೋಟಕ್ಕೆ ಸೊಪ್ಪು ಹಾಕುವುದಿಲ್ಲ, ಪದೇ ಪದೇ ನೀರು ಬೇಕಿಲ್ಲ, ಕೂಲಿಯವರ ಮೇಲಿನ ಅವಲಂಬನೆ ಅತ್ಯಲ್ಪ, ರಸಗೊಬ್ಬರ ಬೇಡ, ಹಾಗಾಗಿ ನನ್ನದು ಕನಿಷ್ಠ ಬಂಡವಾಳ, ಬರುವ ಆದಾಯದಿಂದ ಜೀವನ ಸಾಗಿಸಬಹುದು ಎನ್ನುವುದು ಅವರ ಪ್ರತಿಪಾದನೆ.


ಸಫಲಿಗರ ಸಾಧನೆ ಕಥೆ ಕೇಳುತ್ತಾ ಅವರ ತೋಟದ ತಾಜಾ ಸೀಯಾಳ ಕುಡಿಯುತ್ತಾ ಅವರ ಪಕ್ಕಾ ಕೃಷಿಕರ ಮನೆಯ ಅಂಗಳದಲ್ಲಿ ಓಡಾಡುವ ಆಡು, ಕೋಳಿ, ಕರುಗಳನ್ನು ನೋಡುತ್ತಾ ಇದ್ದರೆ ಇದೇ ಜೀವನ ಎಷ್ಟು ಹಿತ ಎನಿಸತೊಡಗಿತು.

Related Posts Plugin for WordPress, Blogger...