17.2.15

ಸೈಕಲ್ ಗಳಲ್ಲೂ ಇಷ್ಟೊಂದು ವಿಧ ಇದೆಯಾ ?!

ಸೈಕಲ್ ಗಳಲ್ಲೂ ಅನೇಕ ವಿಧದವುಗಳಿವೆ. ಸೈಕಲ್ ಖರೀದಿಸುವವರಿಗೆ ಇಂದು ಆಯ್ಕೆ ಎನ್ನುವುದು ತಲೆನೋವು ತರುವ ವಿಚಾರ. ಸೈಕಲ್ ಇರುವವರ ಬಳಿ ನೀವು ಮಾತನಾಡಲು ಹೋದರೆ ಸಾಕು ನಿಮ್ಮ ತಲೆ ತಿಂದು ಹಾಕುತ್ತಾರೆ. ಯಾಕೆಂದರೆ ಅಷ್ಟು ಬ್ರಾಂಡ್ ಗಳು, ಅಷ್ಟು ವಿಧದ ಸೈಕಲ್ ಗಳು ಮಾರುಕಟ್ಟೆಯಲ್ಲಿವೆ. ನಿಮ್ಮ ಆದ್ಯತೆ ಏನು ಎನ್ನುವುದನ್ನು ತಿಳಿದು ಕೊಂಡು ಕೆಳಗಿರುವ ಪ್ರಮುಖ ಮೂರು ವಿಧದ ಸೈಕಲ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ರೋಡ್ ಬೈಕ್ ಎಂದರೆ ಸಪುರ ಟೈರು, ಮುಂದೆ ಬಾಗಿ ಕೊಂಡ ವಿಶೇಷ ಎನಿಸುವ ಹ್ಯಾಂಡಲ್, ಹಗುರದ ಚೌಕಟ್ಟು. ಸಪುರ ಟೈರಾದ ಕಾರಣ ಹೆಸರೇ ಹೇಳುವಂತೆ ಸಪಾಟು ರಸ್ತೆಗಳಲ್ಲಿ ಜುಮ್ಮನೆ ವೇಗವಾಗಿ ಹೋಗುವುದಕ್ಕೆ ಉಪಯುಕ್ತ. ಇದರ ಗೇರ್ ಅನುಪಾತ ತುಸು ಕಷ್ಟ. ಎಂದರೆ ಈ ಸೈಕಲ್ನಲ್ಲಿ ದೂರ ಸಾಗಲು ಕಾಲುಗಳಿಗೆ ಹೆಚ್ಚಿನ ಶಕ್ತಿ ಬೇಕು, ಆದರೆ ನಿಮ್ಮ ಶಕ್ತಿ ವ್ಯರ್ಥವಾಗದಂತೆ ಅದನ್ನು ದೂರಕ್ಕೆ ಪರಿವರ್ತನೆಗೊಳಿಸುತ್ತದೆ ಎನ್ನುವುದಕ್ಕೆ ಅನುಮಾನ ಬೇಡ. ಸಾಮಾನ್ಯವಾಗಿ ದೈನಂದಿನ ಬಳಕೆಗೆ ಇದನ್ನು ಖರೀದಿಸುವವರು ಕಡಿಮೆ.
ಬಾಗಿದ ಹ್ಯಾಂಡಲ್, ಸಪುರ ಟೈರ್, ಇದೇ ರೋಡ್ ಬೈಕ್ 

ಎಂಟಿಬಿ ಅಥವಾ ಮೌಂಟನ್ ಟೆರೈನ್ ಬೈಕ್ ಇಂದು ಹೆಚ್ಚಿನವರ ಆಯ್ಕೆ. ಇದರ ಟೈರು ಅಗಲದ್ದು, ಅಲ್ಲದೆ ಇದರ ಬಟನ್ ಗಳು ಯಾವುದೇ ರೀತಿಯ ರಸ್ತೆಯಲ್ಲಿ ಸಾಗುವುದಕ್ಕೂ ಹಿಂಜರಿಯುವುದಿಲ್ಲ. ಹೆಸರೇ ಹೇಳುವಂತೆ ಗುಡ್ಡಗಾಡು ಪ್ರದೇಶಗಳಲ್ಲಿ ಸರಾಗವಾಗಿ ಸಾಗಲು ಮೌಂಟನ್ ಬೈಕ್ ಗಳಿಗೆ ಸಾಧ್ಯ. ಇಲ್ಲಿ ರೋಡ್ ಬೈಕ್ ಗಳು ಸೋತುಬಿಡಬಹುದು. ಆದರೆ ಸಪಾಟು ರಸ್ತೆಗೆ ಇಳಿದರೆ ಎಂಟಿಬಿಗಳ ಟೈರುಗಳ ದೊಡ್ಡ ಬಟನ್ ಕಾರಣ ಘರ್ಷಣೆ ಹೆಚ್ಚಾಗುವ ಕಾರಣ ನಿಮ್ಮ ಕಾಲುಗಳ ಶಕ್ತಿಯನ್ನು ರೋಡ್ ಬೈಕಿನಷ್ಟು ಪ್ರಮಾಣದಲ್ಲಿ ದೂರಕ್ಕೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಹಾಗೆಂದು ಸಾಮಾನ್ಯ ರಸ್ತೆಗಳಲ್ಲಿ ಸಾಗುವುದಕ್ಕೆ ಯಾವುದೇ ಕಷ್ಟವಿಲ್ಲ. ಎಂಟಿಬಿಗಳಲ್ಲಿ ಸಾಮಾನ್ಯ ಖರೀದಿಯಾಗುವುದು ಟ್ರೈಲ್ ಬೈಕ್ ಗಳು. ಇನ್ನು ವಿದೇಶಗಳಲ್ಲಿ ಹೆಚ್ಚಾಗಿ ಬೆಟ್ಟದಿಂದ ಕೆಳಗಿಳಿಯುವುದಕ್ಕೆ ಪ್ರತ್ಯೇಕ ಸೈಕಲ್ ಗಳಿವೆ , ಅದೆಲ್ಲಾ ನಮಗ್ಯಾಕೆ ? ಇನ್ನೊಂದು ವಿಚಾರ ಎಂದರೆ ಎಂಟಿಬಿಗಳ ಗೇರ್ ರೇಶಿಯೋ ಅಥವಾ ಅನುಪಾತ ಸುಲಭ, ಹಾಗಾಗಿ ಎಂತಹ ಏರು ಹಾದಿಯಾದರೂ ಸುಲಭದ ಗೇರ್ ಅಥವಾ ಹಿಂಬದಿಯ ದೊಡ್ಡ ಗೇರಿಗೆ ಹಾಕಿದರೆ ಆರಾಮವಾಗಿ ಕ್ರಮಿಸುವುದು ಸಾಧ್ಯ.
ಎಂಟಿಬಿಯಲ್ಲೂ ಅನೇಕ ಸೈಝಿನ(ಬೇರೆ ಬೇರೆ ವ್ಯಾಸದ) ಟೈರುಗಳನ್ನು ಹಾಕಬಹುದು. ಸಾಮಾನ್ಯವಾಗಿ 26 ಇಂಚಿನ ಚಕ್ರದ ಎಂಟಿಬಿಗಳು. ಈಗೀಗ 29 ಇಂಚಿನವು ಬರುತ್ತಿವೆ, ಅಲ್ಲದೆ 27.5 ಇಂಚಿನವೂ ಇವೆ. ಸಪಾಟು ಹಾದಿಯಲ್ಲಿ ದೊಡ್ಡ ಚಕ್ರದಲ್ಲಿ ವೇಗವಾಗಿ ಹೆಚ್ಚುದೂರ ಸಾಗಬಹುದು, ಆದರೆ ಏರು ಹಾದಿಗಳಲ್ಲಿ ಸಣ್ಣ ಚಕ್ರ ಸುಲಭ.
 ಅಷ್ಟೇ ಅಲ್ಲ ರೋಡ್ ಬೈಕಿನಷ್ಟೇ ಸಪುರದ ಟೈರು ಹಾಕಿ ಓಡಿಸುವವರೂ ಇದ್ದಾರೆ(ಬಜ್ಪೆಯ ಝಿಹಾನ್ ಮಹ್ಮದ್), ಹೆಚ್ಚು ವೇಗ ಸಾಧಿಸುವುದಕ್ಕಾಗಿ.ಇಲ್ಲಿ ಹಗುರ ಚಕ್ರ, ಸುಲಭ ಗೇರ್ ರೇಶಿಯೋದಿಂದಾಗಿ ದೂರ ಕ್ರಮಿಸಲು, ಏರು ಕ್ರಮಿಸಲು ಪ್ರಯೋಜನವಾಗುತ್ತದೆ.
ದಪ್ಪ ಬಟನ್ ಟೈರು, ಭರ್ಜರಿ ಸಸ್ಪೆನ್ಶನ್...ಇದೇ ಎಂಟಿಬಿ

ಇನ್ನು ಹೈಬ್ರಿಡ್ ಬೈಕ್ ವಿಚಾರ. ಹೆಸರೇ ತಿಳಿಸುವಂತೆ ಎಂಟಿಬಿ ಮತ್ತು ರೋಡ್ ಬೈಕ್ ಇವೆರಡರ ಗುಣಲಕ್ಷಣಗಳನ್ನು ತನಗೆ ಬೇಕಾದಂತೆ ಅಳವಡಿಸಿಕೊಂಡ ಬೈಸ್ಕಲ್ಲೇ ಹೈಬ್ರಿಡ್. ಇದರಲ್ಲಿ ಗೇರ್ ರೇಶಿಯೋ ಎಂಟಿಬಿಯಷ್ಟು ಸುಲಭವೂ ಅಲ್ಲ, ರೋಡ್ ಬೈಕಿನಷ್ಟು ಕಷ್ಟವೂ ಅಲ್ಲ, ಟೈರೂ ಕೂಡಾ ರೋಡ್ ಬೈಕಿನಷ್ಟು ಸಪುರವಲ್ಲ, ಹಾಗೆಂದು ಎಂಟಿಬಿಯಷ್ಟು ಅಗಲವಲ್ಲ, ಆದರೆ ದೈನಂದಿನ ಬಳಕೆಗೆ ಹೆಚ್ಚು ಯೋಗ್ಯ. ಸಾಮಾನ್ಯ ಗುಡ್ಡಗಾಡು ರಸ್ತೆಗಳಲ್ಲಿ ಓಡಿಸಬಹುದು(ಎಂಟಿಬಿಯಷ್ಟು ಸರಾಗವಲ್ಲದಿದ್ದರೂ) ಆದರೆ ಸಪಾಟು ರಸ್ತೆಗಳಲ್ಲಿ ನಿಮ್ಮ ಕಾಲುಗಳ ಶಕ್ತಿಗನುಗುಣವಾಗಿ ವೇಗವಾಗಿಯೂ ಸಾಗಬಹುದು. ನಾನು ಹೊಂದಿರುವುದು ಮೆರಿಡಾ ಕಂಪನಿಯ ಕ್ರಾಸ್ ವೇ 15 ಎಂಬ ಹೈಬ್ರಿಡ್ ಸೈಕಲ್.
ಇದು ಹೈಬ್ರಿಡ್ ಸೈಕಲ್

ಸೈಕಲ್ ಕೊಳ್ಳುವವರಿಗೆ ಈಗಿನ ಸೈಕಲ್ ಗಳ ಗೇರುಗಳನ್ನು ನೋಡಿದಾಗ ಭಯವಾಗಿ ಬಿಡುತ್ತದೆ. 21, 24, 27 ಸ್ಪೀಡಿನ ಗೇರುಗಳೆಂದರೆ ಗೊಂದಲ ಕೂಡಾ. ಇದು ಆರಂಭದಲ್ಲಿ ಎಲ್ಲರಿಗೂ ಆಗುವ ಹೆದರಿಕೆ. ಸರಿಯಾಗಿ ಗೇರ್ ಬಳಕೆ ಗೊತ್ತಿಲ್ಲದಿದ್ದರೂ ಸೈಕ್ಲಿಂಗ್ ಕಷ್ಟವೇ. ಹಾಗೆಂದು ಅದು ಕಷ್ಟಕರವೇನೂ ಅಲ್ಲ. 
ಸಾಮಾನ್ಯವಾಗಿ ಗೇರು ಸೈಕಲ್ನಲ್ಲಿ ಮುಂದೆ ಎಂದರೆ ಪೆಡಲ್ ಬಳಿ ಮೂರು ಗೇರ್, ಹಿಂದೆ 7, 8, 9 ಗೇರ್ ಇರುತ್ತವೆ. ಹಿಂದೆ ಟೈರಿಗೆ ಸಮೀಪ ಇರುವುದು ದೊಡ್ಡ ಗೇರು, ಇದರಲ್ಲಿ ಪೆಡಲಿಂಗ್ ಸುಲಭ. ದೂರ ಇರುವ ಅತೀ ಸಣ್ಣ ಗೇರ್ ನಲ್ಲಿ ಸಾಗುವುದು ಕಷ್ಟ, ಆದರೆ ವೇಗ ಜಾಸ್ತಿ. ಸಪಾಟು ರಸ್ತೆಗಿರುವ ಗೇರ್. ಉಳಿದಂತೆ ಭೂಮೇಲ್ಮೈಗೆ ಅನುಗುಣವಾದ ಗೇರುಗಳನ್ನು ಹಾಕುತ್ತಾ ಹೋದರಾಯಿತು. ಮುಂಭಾಗದಲ್ಲಿರುವ ಮೂರು ಗೇರಿನಲ್ಲಿ ಬೈಕ್ ಮಧ್ಯೆ ಇರುವುದು ಸಣ್ಣ ಗೇರ್, ಇನ್ನೊಂದು ದೊಡ್ಡದು ಹಾಗೂ ಮಧ್ಯಮ ಗಾತ್ರದ್ದು. ಮಧ್ಯಮ ಗಾತ್ರದ್ದರಲ್ಲೇ ಹೆಚ್ಚಾಗಿ ಇದ್ದರೆ ಒಳ್ಳೆಯದು. ದೊಡ್ಡ ಗೇರಿಗೆ ಹಾಕಿದರೆ ವೇಗ ಜಾಸ್ತಿ, ಆದರೆ ಕಾಲಿಗೆ ಶ್ರಮವೂ ಹೆಚ್ಚು. ಸಣ್ಣ ಗೇರಿಗೆ ಹಾಕಬೇಕಾದರೆ ತೀರಾ ಏರು ಹಾದಿ ಬೇಕು.
ಬೈಕಲ್ಲಿ ಸಾಗುವಾಗ ನೀವು ಏರು ಹಾದಿಯಲ್ಲಿ ಬೈಕಲ್ಲಿ ದೊಡ್ಡ ಗೇರುಗಳನ್ನು ಹಾಕುತ್ತೀರಿ, ಎಂದರೆ ಎಳೆಯುವ ಶಕ್ತಿ ಜಾಸ್ತಿ, ವೇಗ ಕಡಿಮೆ, ಬೈಕಿಗೆ ಸುಲಭ. ಇಲ್ಲೂ ಅದೇ ತತ್ವ. 
ಇಲ್ಲಿ ಕೊಟ್ಟ ಎರಡು ಚಿತ್ರಗಳನ್ನು ನೋಡಿದರೆ ನಿಮಗೂ ಮನದಟ್ಟಾಗಬಹುದು.
ಹಾಂ...ಹೇಳಲು ಮರೆತೆ. ಗೇರ್ ಶಿಫ್ಟ್ ಮಾಡುವ ಲಿವರ್ ಗಳು ಸೈಕಲ್ ನ ಹ್ಯಾಂಡಲ್ ಗೆ ಭದ್ರವಾಗಿ ಜೋಡಿಸಲ್ಪಟ್ಟಿವೆ. ಹಿಂದೆ ಸಾಮಾನ್ಯವಾಗಿ ಗೇರ್ ಶಿಫ್ಟರ್ ಗಳನ್ನು ಬಳಸಲು ಹ್ಯಾಂಡಲ್ ತಿರುವಬೇಕಿತ್ತು, ಈಗ ಸುಲಭದ ಟ್ರಿಗರ್ ಶೈಲಿಯದ್ದೇ ಜನಪ್ರಿಯ. ಕಡಿಮೆ ದರದ ಸೈಕಲ್ ನಲ್ಲಿ ಮಾತ್ರವೇ ತಿರುಗುವ ಹ್ಯಾಂಡಲ್ ಶಿಫ್ಟರ್ ಗಳಿವೆ.

ಚಿತ್ರಗಳು: ಅಂತರ್ಜಾಲ ಕೃಪೆ

Related Posts Plugin for WordPress, Blogger...