27.12.10

ತೊಟ್ಟು ಕಳಚಿದ ಎಲೆ

ಕಾಲವೃಕ್ಷದ ತುತ್ತತುದಿಯಿಂದ
ಕಳೆದ ವರುಷದ ಎಲೆಯೊಂದು
ಕಳಚಿ
ನಿ...ಧಾ...ನ...ವಾಗಿ
ತೇಲುತ್ತಾ
ಆರಾಮ ಕುರ್ಚಿಯಲ್ಲಿ ಕೂತಿದ್ದವನ
ಮುಂದೆ ಬಿತ್ತು...


ವರುಷದ ಮೂರೂ
ಕಾಲಗಳ ಕರಾಮತ್ತು
ವೀಕ್ಷಿಸಿ
ಮಳೆಗಾಲದ ಅಬ್ಬರ,
ಚಳಿಗಾಲದ ಬಿಸುಪು, 
ಬೇಸಿಗೆಯ ಹಸಿವು
ತಾಳುತ್ತಾ ಏಗುತ್ತಾ
ಕೊನೆಗೆ ಮಗುಚಿ ಬಿತ್ತು
ಆ ಎಲೆ ಹಸಿರಾಗಿತ್ತು
ಎನ್ನುವುದಕ್ಕೆ ಇನ್ನೂ 
ಸಾಕ್ಷಿ ಇದೆ,
ಹಳದಿ ವರ್ಣಕ್ಕೆ ತಿರುಗುತ್ತಿದೆಯಷ್ಟೇ
ಮುಪ್ಪಾಗಿರುವ ಲಕ್ಷಣದಿಂದ
ಅಲ್ಲೊಂದು ಇಲ್ಲೊಂದು
ರಂಧ್ರಗಳು...
ಹೊಸವರುಷದ ಸವಾಲುಗಳಿಗೆ
ಬೆಂಡಾಗಿ ಸೊರಗಿದೆ...
ಈಗ..
ಎಲೆ ಕಳಚಿದ ಗೆಲ್ಲಿನ
ತುದಿಯಲ್ಲೊಂದು
ಚಿಗುರು ಮೂಡಿದೆ,
ಜತೆಗೆ 
ಮರಕ್ಕೆ ನೋವಿನಲ್ಲೊಂದು
ನಗು...

pic courtesy: artbycedar.com

22.12.10

ಸದಾನಂದ ಸುವರ್ಣರ ‘ಉರುಳು’


ನಾಟಕವೊಂದು ಪರಿಣಾಮಕಾರಿಯಾಗಲು, ಒಂದೂವರೆ, ೨ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿರಿಸಿಕೊಳ್ಳುವುದಕ್ಕೆ ವೇದಿಕೆ ತುಂಬುವುದಕ್ಕೆ ಡಜನ್ನು ಗಟ್ಟಲೆ ನಟನಟಿಯರು ವೇದಿಕೆಯಲ್ಲಿ ರಾರಾಜಿಸಬೇಕಿಲ್ಲ, ಎನ್ನುವುದಕ್ಕೆ ನಿನ್ನೆ ಇರುಳು ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಂಡ ‘ಉರುಳು’ ನಿದರ್ಶನವಾಯ್ತು.
ಕೈದಿಯೊಬ್ಬನ ಅಂತ:ಕರಣ, ಆತನ ವೈರುಧ್ಯಗಳು, ಹತಾಶೆ, ವ್ಯವಸ್ಥೆಯ ವಿಡಂಬನೆ, ಇವೆಲ್ಲದಕ್ಕೂ ದಯಾಮರಣದ ಚೌಕಟ್ಟು ಇವನ್ನೇ ಹಿಡಿದು ರಚಿಸಿರುವ ನಾಟಕವಿದು.
ಮೂಲ ಹಿಂದಿಯಲ್ಲಿ ಡಾ.ಶಂಕರಶೇಶ್ ರಚಿಸಿದ್ದರೆ, ಕನ್ನಡಕ್ಕೆ ಇದನ್ನು ಕರೆತಂದವರು, ನಮ್ಮ ‘ಗುಡ್ಡೆದ ಭೂತ’ ಧಾರಾವಾಹಿ ಖ್ಯಾತಿಯ ಸದಾನಂದ ಸುವರ್ಣ.
ದಯಾಮರಣವನ್ನು ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂಬ ಕೂಗು ನಮ್ಮ ದೇಶ ಮಾತ್ರವಲ್ಲ ಇತರ ಹಲವು ದೇಶಗಳಲ್ಲಿ ಕೇಳಿ ಬರುತ್ತಿದೆ, ಚಳವಳಿಯೂ ನಡೆದಿದೆ. ಇದೇ ಕೂಗಿನ ಅನುರಣನ ನಾಟಕದಲ್ಲೂ ಇದೆ.
ಕೈದಿಯೊಬ್ಬನನ್ನು ನೋಡಲು ಬರುವ ದೃಶ್ಯದೊಂದಿಗೆ ನಾಟಕದ ಮೊದಲ ದೃಶ್ಯ ತೆರೆದುಕೊಳ್ಳುತ್ತದೆ. ಯಾರನ್ನೂ ನೋಡಲು ಬಯಸದ ಕೈದಿಯೇ ನಾಟಕದ ಮುಖ್ಯ ಸೂತ್ರಧಾರನಾದರೆ ವೈಫಲ್ಯ ಅನುಭವಿಸುವ ಎಡೆಬಿಡಂಗಿ ವಕೀಲನೂ ನಾಟಕವನ್ನು ರೋಚಕತೆಯೆಡೆಗೆ ಕೊಂಡೊಯ್ಯುವ ಕೊಂಡಿ. ಇವರಿಬ್ಬರ ನಡುವೆ ಆಗಾಗ ಹಾದುಹೋಗುವ ಪಾತ್ರವಾಗಿ ಜೇಲಿನ ವಾರ್ಡನ್ ಅಷ್ಟೇ.
ಮೊದಲೆರಡು ನಟರೇ ಈ ನಾಟಕದಲ್ಲಿ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುವ ರೀತಿಯೇ ಇಡೀ ನಾಟಕದ ಆಕರ್ಷಣೆ. ಕ್ಯಾನ್ಸರ್‌ನಿಂದ ನರಳಿ ನರಳಿ ತಾಳಲಾರದೆ ತನ್ನನ್ನು ಕೊಂದುಬಿಡುವಂತೆ ಮಗನನ್ನು ಆಗಿಂದಾಗ್ಗೆ ಕೇಳಿಕೊಳ್ಳುವ ತಂದೆ, ಗಾಂಜಾ ಸಾಗಾಟ ಮಾಡಲು ಒಪ್ಪದೆ ಲಾರಿ ಕೆಲಸ ಬಿಟ್ಟು ಬಂದು, ತಂದೆಯೊಂದಿಗೇ ಗುಂಡು ಹಾಕುವ ಪ್ರಾಮಾಣಿಕ ಮಗ, ಚಾಲಕ ವೃತ್ತಿ ಮಾಡುವ ಈತ ಕೆಲಸ ಬಿಟ್ಟು ತಂದೆಯ ಚಿಕಿತ್ಸೆ ಮಾಡಲು ಹಣವಿಲ್ಲದೆ ಸಾಲ ಮಾಡಿರುತ್ತಾನೆ, ತಂದೆಯನ್ನು ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ, ಸಾಲಗಾರರಿಂದ ಒದೆ ತಿನ್ನುತ್ತಾನೆ, ಪತ್ನಿ ಮಕ್ಕಳ ಉಪವಾಸವಿಕ್ಕಿರುತಾನೆ.ಬದುಕು ಕತ್ತಲಲ್ಲಿರುತ್ತದೆ, ತಂದೆಗೂ ಇದೆಲ್ಲ ಸಾಕಾಗಿರುತ್ತದೆ, ನೋವು ಕೊಲ್ಲುವ ಮೋರ್ಫಿನ್‌ ಇಂಜಕ್ಷನ್‌ ತರುವುದಕ್ಕಿನ್ನು ಮಗನಲ್ಲಿ ದುಡ್ಡೇ ಇಲ್ಲ,  ಹೇಗಾದರೂ ಸಾವು ನಿಚ್ಚಳ, ಇನ್ನು ಬದುಕಿ ಮಗನಿಗೆ ಹೊರೆಯಾಗುವುದು ಬೇಡ, ಹಾಗಾಗಿ ಕೊಂದು ಬಿಡು ಮಗನೇ ಎಂದು ತಂದೆಯೇ ಬೇಡಿಕೊಳ್ಳುತ್ತಾನೆ, ಬದುಕಿನ ಒಗಟಲ್ಲಿ ಸಿಲುಕಿದ ಮಗನ ಕೈಗಳೇ ತಂದೆಯ ಕೊರಳಿಗೆ ಉರುಳಾಗುತ್ತವೆ ಆತನಿಗೆ ಅರಿವಿಲ್ಲದಂತೆಯೇ.
ಹಾಗೆ ಜೇಲು ಸೇರುವ ಮಗನ ನೆರವಿಗೆ ಬರುವ ವಕೀಲನಿಗೆ, ತನ್ನ ವಾದ ವೈಖರಿಯನ್ನು ನ್ಯಾಯಾಲಯದಲ್ಲಿ ಜಾಹೀರು ಪಡಿಸಲು ಇದೊಂದು ರೀತಿ ಕೊನೆ ಅವಕಾಶ. ಬದುಕಿನಲ್ಲಿ ಸೋಲು ಕಂಡ ವಕೀಲನಿಗೆ ನಾಳೆ ಕೋರ್ಟಲ್ಲಿ ವಾದ ಮಾಡಬೇಕಾದರೆ, ಅದರ ಒಂದು ರಿಹರ್ಸಲ್‌ ಜೇಲಿನಲ್ಲೇ ನಡೆದರೆ ಹೇಗೆ ಎಂಬ ಯೋಚನೆ.
ಹಾಗೆ ತೆರೆದುಕೊಳ್ಳುತ್ತದೆ ಈ ನಾಟಕ. ಕೈದಿಯೇ ಇಲ್ಲಿ ಸಾಕ್ಷಿ ಸೇತುರಾಮನಾಗುತ್ತಾನೆ, ಸಾಲ ನೀಡಿ ಪೀಡಿಸುವ ಶೆಟ್ಟಿಯಾಗುತ್ತಾನೆ, ಪೋಸ್ಟ್‌ಮಾರ್ಟೆಂ ಮಾಡಿದ ವೈದ್ಯನಾಗುತ್ತಾನೆ, ಮೇಲಾಗಿ ನ್ಯಾಯಾಧೀಶನಾಗುತ್ತಾನೆ. ಈ ಅವಧಿಯಲ್ಲಿ ಇಡೀ ನಾಟಕದ ವಸ್ತು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ವ್ಯವಸ್ಥೆಯ ವ್ಯಂಗ್ಯ, ಲೇವಡಿ, ಬಡತನದ ಬೇಗೆ ಇವೆಲ್ಲವನ್ನೂ ಕಟ್ಟುವ ಈ ನಾಟಕದ್ದು ರಿಕ್ತ ರಂಗಭೂಮಿ ಅಥವಾ poor theatre ಶೈಲಿ.
ಕಾಲ್ಪನಿಕ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯಲ್ಲಿ ಮಾನವೀಯತೆಯ ದೈನ್ಯ ಮತ್ತು ಕಾನೂನಿನ ಕಾಠಿಣ್ಯಗಳ ತಿಕ್ಕಾಟ. ಕೊನೆಯಲ್ಲಿ, ಕೈದಿಯ ಪ್ರಶ್ನೆಗೆ ವಕೀಲರ ಉತ್ತರ ಹೀಗಿರುತ್ತದೆ-
ಕಾನೂನಿನ ಹೃದಯದಲ್ಲಿ ಮನುಷ್ಯನಿದ್ದರೆ ನಿನಗೆ ಫಾಶಿಯಾಗದು, ಆದರೆ ಕಾನೂನು ಕಲ್ಲಾದರೆ....
ಈ ಪ್ರಶ್ನೆಯನ್ನು ನೋಡುಗರ ಮನದಲ್ಲಿ ಆಳವಾಗಿ ಊರುತ್ತಾ ನಾಟಕದ ತೆರೆಬೀಳುತ್ತದೆ.


ಭರ್ತಿ ಆರು ದಶಕ ಕಾಲ ರಂಗಭೂಮಿ, ಸಿನಿಮಾಗಳಲ್ಲಿ ಕೆಲಸ ಮಾಡಿದ ಸುವರ್ಣರಿಗೀಗ ಎಂಭತ್ತು. ಅವರ ಮೂರು ನಾಟಕಗಳಾದ ಉರುಳು, ಮಳೆ ನಿಲ್ಲುವವರೆಗೆ ಹಾಗೂ ಕೋರ್ಟ್ ಮಾರ್ಷಲ್ ೨೧, ೨೨, ೨೩ರಂದು ನಾಟಕೋತ್ಸವ ನಿಮಿತ್ತ ಪುರಭವನದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಸುವರ್ಣರ ನಾಟಕದ ಉತ್ಸಾಹಕ್ಕೊಂದು ಸಲಾಂ...

5.11.10

ನಗೆಯ ನಕ್ಷತ್ರದ ದೀಪಾವಳಿ

ಸಂಜೆಯಾಗುತ್ತಲೇ
ಹಣತೆಗಳು
ಬೆಳಗಿದವು
ಗೂಡುದೀಪ 
ತೊನೆದವು ಮಂದಾನಿಲಕ್ಕೆ
ಬಾಣಬಿರುಸುಗಳು
ನೆಗದವು ನಭಕ್ಕೆ
ಈಗ ಕತ್ತಲು
ಆಪ್ತ ಸಂತೃಪ್ತಿಯಿಂದ 
ಕಣ್ಮುಚ್ಚಿತು!

*********

ಕೈಯಲ್ಲಿನ ನಕ್ಷತ್ರ
ಕಡ್ಡಿಗಳು ಸುರುಗುಟ್ಟುವಾಗ
ಪುಟಾಣಿಯ ಮೊಗ
ತುಂಬಿದ ನಗೆಯ
ಬೆಳದಿಂಗಳು
ನೋಡಿ ದೂರದ
ನಕ್ಷತ್ರಕ್ಕೆ ಅಸೂಯೆ!25.10.10

ಸಂತೆ ತುಂಬಾ ಕನಸುಸಂಜೆಯಾಗುತ್ತಲೇ
ಕಡಲಕಿನಾರೆಯ
ಬಾನ ಸಂತೆಯ ತುಂಬ
ಹರಡಿವೆ ಕನಸು
ಕನಸುಕೊಳ್ಳಲು ಗಿರಾಕಿಗಳೋ
ಲೆಕ್ಕವಿಲ್ಲದಷ್ಟು...

ಮರಳಾಟವಾಡುವ ಚಿಣ್ಣರು
ಚೆಂಡಾಟದಲ್ಲಿ ತಲ್ಲೀನ
ಯುವಕರು
ಪ್ರಿಯತಮನ ತೆಕ್ಕೆಯ
ಸುಖವುಣ್ಣುವ ಹುಡುಗಿ
ಬಂಡೆಯಾಗಿಯೇ
ಕುಳಿತ ವಿರಹಿ
ವಿರಕ್ತ ಯೋಗಿಯಂತೆ
ನೆಟ್ಡಗೆ ಕುಳಿತ
ನಾಯಿ...

ಎಲ್ಲರಿಗೂ ಕನಸುಗಳು
ಬೇಕು..
ಬಣ್ಣದ ಕನಸು,
ಚೆಂದದ ಕನಸು...

ಇಲ್ಲಿ
ಕನಸು ಕಟ್ಟಿಕೊಡುವವರಿಲ್ಲ
ಬೇಕಿರುವ ಎಲ್ಲರಿಗೂ ಇದೆ ಪಾಲು
ಸಿಕ್ಕಿದಷ್ಟು, ಪಡೆದುಕೊಂಡಷ್ಟು !


pic courtesy: cbc news

27.9.10

ಸವೆದ ಬೇರಿನ ಮರಗಳು

ನೀ
ನಡೆದು ಹೋದ ಮೇಲೆ
ಹೆಜ್ಜೆಗಳಲ್ಲಿ
ಗೆಜ್ಜೆ ಸದ್ದುಗಳಲ್ಲಿ
ಉಳಿದ್ದಾದರೂ ಏನು
ನಿನ್ನ ನೆನಪುಗಳು
ಅಲೆ ಅಲೆಯಾಗಿ
ನನ್ನ ಕೊಚ್ಚಿಕೊಂಡು ಹೋದ ಮೇಲೆ
ಉಳಿದ ಬೇರುಗಳನ್ನು
ಕಟ್ಟಿಕೊಂಡು ಮಾಡುವುದೇನು
ಬಾಲ್ಕನಿಯಲ್ಲಿ ನಿಂತು
ನೆನಪುಗಳಲೇ ಕಳೆದುಕೊಂಡು
ಆರಿದ ಕಾಫಿಯ
ಕಂಡು ಕನಲಿದರೆ
ಸಿಗುವುದಾದರೂ ಏನು!

*************


ಒಲವೆಂಬ ಮಳೆ ಹಾಗೇ ಹರಿದು
ಯಾರ ಒಡಲೂ ಸೇರದೆ
ಕಡಲ ಸೇರಿತು..
ತೆಂಗಿನ ಮರದ
ಗರಿಗಳಿಂದ ನೀರು ತೊಟ್ಟಿಕ್ಕಿತು


***********
ಗಾಳಿಪಟಗಳು
ಎಲ್ಲೆಡೆ ಹಾರುತ್ತಿವೆ
ಸೂತ್ರವಿದ್ದವು ಕುಣಿದರೆ
ಸೂತ್ರ ಹರಿದವು
ಸರ್ವಸ್ವತಂತ್ರವಾಗಿ

ಓಲಾಡಿದವು

19.9.10

ಹೆದ್ದಾರಿ ಕಥೆಗಳು-೨

 ಅದೊಂದು ಛಳಿಗಾಲದ ಇಳಿಹೊತ್ತು..
ಹಗಲಿಡೀ ವಾಹನಗಳ ಭರಾಟೆಯಿಂದ ಹೈರಾಣಾಗಿ ಹೆದ್ದಾರಿ ವಿಶ್ರಾಂತಿಗೆ ಇಳಿದಂತಿತ್ತು. ಅರಣ್ಯದ ನಡುವೆ ಹಾದು ಹೋಗುವ ಘಾಟಿ  ದಾರಿಯದು, ರಾತ್ರಿಯಾದರೆ ವಾಹನಗಳ ಸಂಖ್ಯೆ ಕಡಿಮೆ. ಆಗಲೇ ಸೋಡಿಯಂ ವೇಪರ‍್ ಲೈಟುಗಳಿ ಮಿನುಗಲು ತೊಡಗಿದ್ದವು.
ಗಂಟೆಗಳುರುಳಿದವು. ಜೀಪೊಂದು ಕೇಕೆ ಹಾಕುತ್ತಾ ತೂರಾಡುತ್ತಾ ಬಂತು.
ಒಳಗಿರುವವರ ಪರಿಸ್ಥಿತಿ ಹೀಗಎಯೇ ಇರಬಹುದೆಂದು ಊಹಿಸಿ ಹೆದ್ದಾರಿಗೆ ನಗೆಯುಕ್ಕಿತು. ಯಾರೋ ನಕ್ಕಂತಾಗಿ ಡ್ರೈವಿಂಗ್‌ ಸೀಟಿನಲ್ಲಿದ್ದವನಿಗೆ ಸಿಟ್ಟು ಬಂತು. ಹಿಂದಿನ ಸೀಟಲ್ಲಿದ್ದವರಿಗೆ  ತೊಡರು ನಾಲಗೆಯಲ್ಲೇ ಬೈದ..ಸು..ಮ್ನೆ ಕುಂತ್ಕ..ಳ್ಳಿ..ಇಂಥವರನ್ನ ದಿನಾ ನೋಡುತ್ತಿದ್ದ ಹೆದ್ದಾರಿಗೆ ಮತ್ತೂ ನಗುಬಂತು, ಡ್ರೈವರನ್ನು ಇನ್ನಷ್ಟು  ಪೇಚಿಗೆ ಸಿಲುಕಿಸಲು ಮತ್ತೊಮ್ಮೆ ಗಟ್ಟಿಯಾಗಿ ನಕ್ಕಿತು. ಈ ಬಾರಿ ಅಮಲಿನಲ್ಲೂ ಎಲ್ಲರಿಗೂ ನಗು ಕೇಳಿತು. ನಗು ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಾ ಹೋದಾಗ ಆ ನಗು ತಮ್ಮದ್ದಲ್ಲ ಎಂದು ಸ್ಪಷ್ಟವಾಯಿತು. ಡ್ರೈವರನಿಗೆ ಚಿಕ್ಕವನಿದ್ದಾಗ ಕೇಳಿದ ಭೂತ ಪಿಶಾಚಿ ಕಥೆಗಳು ನೆನಪಾದವು, ಕೈ ಮರಗಟ್ಟಿತು. ಒಂದೊಂದು ಮರಗಳೂ ಒಂದೊಂದು ಆಕಾರ ಪಡೆದು ನರ್ತಿಸತೊಡಗಿದವು. ರಸ್ತೆಯೇ ದಢೀರ್‌ ಎದ್ದು ನಿಂತಂತಾಯಿತು. ಆ ಕೊರಕಲಿನ ತಿರುವಿನಲ್ಲಿ ಸ್ಟೀರಿಂಗ್‌ ತಿರುಗಲೇ ಇಲ್ಲ.....
ಆ ತಿರುವಿನಲ್ಲೊಂದು ಫಲಕವಿತ್ತು.
ಎಚ್ಚರಿಕೆ ! ಅಪಘಾತ ವಲಯ!

21.8.10

ಅಗ್ನಿಸಾಕ್ಷಿ

ಅದು ಆಗಲೇಬೇಕಾ
ಉತ್ತರ ಗೊತ್ತಿರಲಿಲ್ಲ...
ಚಿಕ್ಕವನಿದ್ದಾಗ
ಆಗೋದೆ ಇಲ್ಲ
ಮದುವೆ ಎನ್ನುತ್ತಿದ್ದೆ
ಒಲವು ಅರಳಿದ್ದು ತಿಳಿಯಲಿಲ್ಲ


ಬದುಕಿಗೆ ತುಸು ತುಸುವೇ
ಬೆರೆತ ಪ್ರೀತಿ
ತಂದು ನಿಲ್ಲಿಸಿದೆ
ಸಾರ್ಥಕ ಕ್ಷಣಕ್ಕೆ
ಒಲುಮೆ ಅರಳಿದ್ದಕ್ಕೆ
ಅಗ್ನಿಸಾಕ್ಷಿಯ ಗಳಿಗೆ
ಈಗ ಕಣ್ಣಮುಂದೆ


ನಾಳೆ ನನಗೆ ಮದುವೆ!

15.7.10

ನಾಲ್ಕು ಹನಿ

ನೀ ನೋವಿನ ನಿಮಿಷಗಳನ್ನೇ
ಕರುಣಿಸು
ನಾನು ಅದರಲ್ಲಿ
ಆನಂದದ ಕ್ಷಣಗಳ
ಆಯಬಲ್ಲೆ...

ಮಳೆ ಸುಮ್ಮನೆ
ಹರಿದು ತನ್ನ
ಪಾಡಿಗೆ ಚರಂಡಿ ಸೇರಿತು
ನನ್ನ ಒಲವಿನ ಮಾತು
ಬರಿದೇ ಮಾತಾಗಿ
ಉಳಿಯಿತು

ನೀ ಬೇಗನೆ ಕಣ್ಮುಚ್ಚಿ
ಮಲಗಿದರೆ
ನನ್ನ ಮನದ ನಕ್ಷತ್ರಗಳಿಗಿನ್ನು
ಕೆಲಸವಿಲ್ಲ!

ನೀ ದೂರವಾದ
ಬಳಿಕ ಎದೆಯ
ಭಿತ್ತಿಯಲ್ಲಿ ನೆನಪುಗಳು
ಮಾಡಿಟ್ಟ ಗೀರುಗಳು
ಒಣಗಲು ಹೊರಟಿದ್ದವು
ಅಷ್ಟರಲ್ಲಿ ನನ್ನಲ್ಲಿ
ಒಲವು ಮೂಡಿತು!

28.6.10

ಕೆಸರಿನ ಕೊಳಕ್ಕೆ ಧುಮುಕುವವರು ಯಾರು?

ಲೋಕಾಯುಕ್ತ ಜಸ್ಟಿಸ್ ಸಂತೋಷ್‌ ಹೆಗ್ಡೆ ಹಠಾತ್‌ ಆಗಿ ರಾಜೀನಾಮೆ ಘೋಷಿಸಿಬಿಟ್ಟಾಗ ತುಂಬಾ ಕಸಿವಿಸಿ ಉಂಟಾಯ್ತು.
ನಮ್ಮ ಜೊತೆ ಕೆಲಸ ಮಾಡುವವರು ಬಿಟ್ಟು ಹೋಗುವಾಗ, ನಮ್ಮ ಮನೆಯವರು ದೂರದ ಊರಿಗೆ ಹೊರಟು ನಿಂತಾಗ ಆಗುವಂತೆ ಭಾಸವಾಯ್ತು. ಹತ್ತಿರದ ಕಾರ್ಕಳದವರೇ ಆದ ಜ|ಹೆಗ್ಡೆ ಮಂಗಳೂರಿಗೆ ಆಗಾಗ ಬಂದವರು.
ಲೋಕಾಯುಕ್ತರಾಗಿ ಮಂಗಳೂರಿನಲ್ಲಿ ಅವರು ನೇರ ದಾಳಿ ನಡೆಸಿದ್ದು ಕಡಿಮೆಯಾದರೂ ಇಲ್ಲಿ ಅನೇಕ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲು ಬರುತ್ತಿದ್ದವರು. ನೇರಮಾತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಕ್ಟಿಕಲ್‌ ಆಗಿ ಮಾತನಾಡುವವರು ಹೆಗ್ಡೆ.
ಶಾಲೆ, ಕಾಲೇಜುಗಳಿಗೂ ತೆರಳಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವರು. ಲೋಕಾಯುಕ್ತರಾಗಿ ನೇಮಕವಾದಾಗ ನಾನು ಆಸ್ಪತ್ರೆಗಳಿಗೆ ದಾಳಿ ಮಾಡಲಾರೆ ಎಂದು ಹೇಳಿದ್ದ ಹೆಗಡೆಯವರ ವಿರುದ್ಧ ಮಾಧ್ಯಮಗಳು ಲೇಖನ ಪ್ರಕಟಿಸಿದ್ದರೆ ಈಗ ಅದೇ ಮಾಧ್ಯಮಗಳು ಹೆಗ್ಡೆಯವರ ಗುಣಗಾನ ಮಾಡಬೇಕಾದರೆ ಅವರು ಸವೆಸಿದ ಹಾದಿ ಕಠಿಣವಾದದ್ದು.
ಈ ಮೊದಲ ಲೋಕಾಯುಕ್ತ ಜ.ವೆಂಕಟಾಚಲ ಅವರು ನಿವೃತ್ತರಾದ ಬಳಿಕ ಅವರ ಪ್ರಬಲವಾದ ಚರಿಷ್ಮಾ ರಾಜ್ಯದಲ್ಲಿ ಹಬ್ಬಿತ್ತು. ಅದನ್ನು ಮೀರಿ ನಿಂತು ತನ್ನ ನೈಜ ಸಾಮರ್ಥ್ಯವನ್ನು ತೋರ್ಪಡಿಸಬೇಕಿತ್ತು. ಹಾಗೆಂದು ಆರಂಭದಿಂದಲೂ ಯಾವುದೇ ಗಿಮಿಕ್‌ ನಡೆಸದೆ ನಿಧ ನಿಧಾನವಾಗೇ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಪ್ರಕಟಿಸುತ್ತಾ ಬಂದರು ಹೆಗ್ಡೆ. ಜ.ವೆಂಕಟಾಚಲ ದಢೀರ್‌ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಕ್ಯಾಮೆರಾ ಮುಂದೆ, ಮಾಧ್ಯಮಗಳ ಮುಂದೆ ತರಾಟೆಗೆ ತೆಗೆದುಕೊಂಡು ಲೋಕಾಯುಕ್ತರೆಂದರೆ ಹೀಗೇ ಹೀರೋ ಮಾದರಿ ಇರಬೇಕು ಎಂಬ ವಾತಾವರಣ ಸೃಷ್ಟಿಸಿದ್ದರು.
ಆದರೆ ಜ.ಹೆಗ್ಡೆ ತಮ್ಮ ವ್ಯಕ್ತಿತ್ವ ಪ್ರದರ್ಶನಕ್ಕೆ ಹೋಗದೆ ಸಮರ್ಥರ ತಂಡವೊಂದನ್ನು ಕಟ್ಟಿದರು. ಅದುವರೆಗೆ ಚಿಕ್ಕ ಚಿಕ್ಕ ಮೀನುಗಳಷ್ಟೇ ಗಾಳಕ್ಕೆ ಸಿಗುತ್ತಿದ್ದರೆ ಲೋಕಾಯುಕ್ತರು ದುರ್ಬಲರ ಮೇಲೆ ಮಾತ್ರವಲ್ಲ ಉನ್ನತ ಅಧಿಕಾರಿಗಳ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧವೂ ಚಾಟಿ ಬೀಸಬಹುದೆನ್ನುವುದು ಜನಸಾಮಾನ್ಯರಿಗೆ ಆ ಬಳಿಕ ಗೊತ್ತಾಯ್ತು.
ಉನ್ನತ ಐಎಎಸ್/ಐಪಿಎಸ್  ಅಧಿಕಾರಿಗಳು, ಮಹಾನಗರ ಪಾಲಿಕಗಳ ನಗರಯೋಜನಾ ಅಧಿಕಾರಿಗಳು ಆಸ್ಪತ್ರೆ ವೈದ್ಯಾಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದರೆ ಅವರ ನಡುಕದಲ್ಲಿ ಕೋಟಿಗಟ್ಟಲೆ ಝಣಝಣ ಕಾಂಚಾಣ ಉದುರುತ್ತಿತ್ತು.
ಈಗ ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದಾಗಿದೆ. ಹಿಂದೆ ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾದಂದಿನಿಂದಲೂ ಪರಮಾಧಿಕಾರದ ಪ್ರಸ್ತಾಪ ಗಾಳಿಯಲ್ಲಿ ಹರಿದಾಡುತ್ತಲೇ ಇತ್ತು. ಈಗ ಯಡಿಯೂರಪ್ಪ ಮತ್ತು ಅವರ ಮಂತ್ರಿಮಾಗಧರು ಅದನ್ನು ಮುಂದುವರಿಸಿದ್ದಷ್ಟೇ ಅಲ್ಲ, ಲೋಕಾಯುಕ್ತರ ಕಾರ್ಯಕ್ಕೆ ಅಡ್ಡಿಪಡಿಸುತ್ತಾ, ಕಿರುಕುಳ ನೀಡಿದ್ದರ ಬಗ್ಗೆ ಲೋಕಾಯುಕ್ತರೇ ಅನೇಕ ಕಡೆ ಹೇಳಿಕೊಂಡಿದ್ದಾರೆ. ಇಷ್ಟಾಗಿಯೂ ಕುಮಾರಸ್ವಾಮಿ ಈಗ ಸರ್ಕಾರದ ವಿರುದ್ಧ ಟೀಕೆಗಿಳಿದಿದ್ದು ಟಿವಿ ಚಾನೆಲೊಂದರ ಚರ್ಚೆಯಲ್ಲಿ ಲಜ್ಜೆಯಿಲ್ಲದೆ ಸಂತೋಷ ಹೆಗ್ಡೆ ಜತೆ ಮಾತನಾಡಿದ್ದು ಸೋಜಿಗವೆನಿಸುತ್ತದೆ.

ಈಗಿರುವ ಪ್ರಶ್ನೆ ಇಷ್ಟೆ. ಯಾರು ಹೋದರೂ ಇಲ್ಲಿ ಏನೂ ಬದಲಾವಣೆ ಆಗದು. ಇನ್ನೋರ್ವ ಲೋಕಾಯುಕ್ತರು ಬಂದರೂ ನಮ್ಮ ಸಂಪತ್ತು ಮಾನ ಪ್ರಾಣಗಳ ಲೂಟಿ ನಿಲ್ಲುವುದಿಲ್ಲ. ನಾವೂ ಎಲ್ಲೋ ಏನೋ ಆದರೆ ಏನಾಗುತ್ತದೆ ಎಂದುಕೊಳ್ಳುತ್ತಾ ನಮ್ಮ ಪಾಡಿಗೆ ನಾವಿರುತ್ತೇವೆ.
ಹಾಗಿರುವಾಗ ಕೆಸರಿನ ಕೊಳದಲ್ಲಿ ಲೋಕಾಯುಕ್ತ ಸಂತೋಷ ಹೆಗ್ಡೆಯವರೊಬ್ಬರೇ ಕೈಕಾಲು ಬಡಿಯುತ್ತಾ ಸಮಾಜಕ್ಕೆ ಒಳಿತು ಮಾಡಲಿ ಎಂದು ನಾವು ಯಾವ ಮುಖದಲ್ಲಿ ಕೇಳಿಕೊಳ್ಳುವುದು ?

12.6.10

ಜೂನ್‌ ಮಳೆ ಮತ್ತು ಮಾಸಲು ನೆನಪುಗಳುಮಳೆ ಶುರುವಿಟ್ಟುಕೊಂಡಿದೆ.....
ಈ ದಿನಗಳಿಗಾಗಿ
ಬಹಳ ಕಾದಿದ್ದೆ...

ಪುರುಗು ವಾಸನೆ ಬರುತ್ತಿದ್ದ
ಕಂಬಳಿಯ ಮೇ ತಿಂಗಳ
ಬಿಸಿಲಲ್ಲಿ ಒಣಗಿಸಿ,

ಪಾತ್ರೆ ತುಂಬುವಷ್ಟು
ಚಕ್ಕುಲಿ, ಕೋಡುಬಳೆ
ಮಾಡಿಟ್ಟ ಅಮ್ಮನನ್ನು
ಆಗಲೇ
ಕೊಡುವಂತೆ ಕಾಡಿಸಿ
ಕಾದಿದ್ದೆ

ಈಗ ಮಳೆ ಸುರಿದಿದೆ
ಮಳೆ ಸುರಿದಷ್ಟೂ
ಹಳೆಯ ನೆನಪುಗಳು
ಥಂಡಿಯಾಗುತ್ತಿವೆ
ಮೂಗು ಕಟ್ಟಿಕೊಳ್ಳುತ್ತದೆ,
ನೆನಪಿನ
ಕಪಾಟಿನೊಳಗಿನ
ಧೂಳಿಗೆ ಗಂಟಲು
ಬಿಗಿಯಾಗುತ್ತದೆ

ಅಚ್ಚರಿ ಮೂಡಿಸುತ್ತದೆ
ಈ ಮಳೆ
ಇಳೆಯ ಜತೆ ನರ್ತಿಸಿ
ಸೃಷ್ಟಿಗೆ ಮೊದಲಿಡುತ್ತದೆ...


ಮಳೆಯೆನ್ನುವ ಮಳೆ ಕರಾವಳಿಯಲ್ಲಿ ಕಾಲಿಟ್ಟಾಗಿದೆ, ಮಳೆಗಾಲದ ಆರಂಭದಲ್ಲಿ ಹೊರಗೆ ಕಾಲಿಡಲೂ ಬಿಡದೆ ಹನಿ ಕಡಿದುಕೊಳ್ಳದೆ ಸುರಿಯುವ ಆ ಮಳೆ ಮನಸ್ಸು ಮುದಗೊಳಿಸುತ್ತದೆ ಜತೆಗೆ ಹಿಂದಿನ ಎಲ್ಲ ನೆನಪುಗಳನ್ನೂ ತಾಜಾಗೊಳಿಸುತ್ತದೆ.
ಅಂತಹ ಮಳೆಯಲ್ಲಿ ಮನ ಉದಾಸೀನಗೊಳ್ಳುತ್ತಿದ್ದರೂ ಕ್ಯಾಮೆರಾದಲ್ಲಿ ಕೆಲವು ಚಿತ್ರ ಸೆರೆಹಿಡಿದಿದ್ದೇನೆ, ಈ ಸಾಲುಗಳೊಂದಿಗೆ ನೆಂಜಿಕೊಳ್ಳುವುದಕ್ಕೆ....
ಹೇಗಿದೆ ಹೇಳಿ...

29.5.10

ಕತ್ತಲು ಕಡಲು


ಕತ್ತಲಿನ್ನು ಬರಿಯ ಕತ್ತಲೆಯಲ್ಲ
ಕತ್ತಲಿನ ಸನ್ನಿಧಿಗೆ
ಸರಿದಿವೆ ಸಾಲುಸಾಲು ಜೀವ
ನಿನ್ನ ಪಾದತಳಕ್ಕೆ ಇದೋ
ತಲಪಿದೆ ಎನ್ನುವಾಗಲೇ
ತಪ್ಪಿದ ಆಯ, ಎಲ್ಲಾ ಮಾಯ
ಮೃತ್ಯು ಆಲಿಂಗನ
ಕತ್ತಲಿನ್ನು ಏಕಾಂಗಿಯಲ್ಲ

ಭೋರ್ಗರೆವ ಕಡಲಿನ
ರೋಧನಕ್ಕೆ ಸೇರಿಕೊಂಡಿದೆ
ಅವರ ಕಡೆಯವರ ಕಣ್ಣೀರು
ಕಡಲಿನ್ನು ಒಂಟಿಯಲ್ಲ
ಅಳುವವರಿಗೆ
ಸಾಲು ಅಲೆಗಳದ್ದಷ್ಟೇ
ಸಾಂತ್ವನ

ನೋಟಕ್ಕೆ ನಿಲುಕದ್ದು
ಬರಿಗೈಗೆ ಸಿಲುಕಿದ್ದು
ಸುಟ್ಟು ಕರಕಲಾದದ್ದು
ಎಲ್ಲದರ
ಕೊನೆಗೆ ಉಳಿದದ್ದು
ಬರಿಯ ಕತ್ತಲು
ಕತ್ತಲಿನ್ನು ಬರಿಯ ಕತ್ತಲಲ್ಲ.

8.5.10

ಪ್ರಯಾಣ


ತಲೆ ಚಿಟ್ಟು ಹಿಡಿಸುವ
ಶಬ್ದಕೂಪದಲ್ಲಿ
ನಿನ್ನ ಮನೋತಲ್ಲಣದ
ಹಿಂದಿನ ಮೌನ ಅರಸಿ
ಬಂದಿದ್ದೇನೆ
ಅರ್ಥವಿಲ್ಲದ ಪದಗಳು
ಅಂಕೆಯಿಲ್ಲದ ಶಬ್ದಗಳ
ನಡುವೆ ಬರೀ
ಪ್ರಯಾಸದ ಪಯಣ

ನಿನ್ನ ಕಣ್ಣಕೊನೆಯಿಂದ
ಬಿದ್ದ ಬಿಂದುಗಳನ್ನು
ಅಕ್ಷರಸಾಗರದಿಂದ
ಆಯ್ದುಕೊಳ್ಳಬೇಕಿದೆ
ಅಕ್ಷರ ಸಂತೆಯಲ್ಲಿ
ನಿನ್ನ ಕಣ್ಣಹನಿಗಳು
ನನಗೆ ಅಮೂಲ್ಯ

ನಿನ್ನ ಅಂದಿನ ಮುಗುಳ್ನಗು
ಬೇಕಿತ್ತೇ...
ಗೊತ್ತಿಲ್ಲ
ಆದರೂ ಅದೊಂದು
ಕಾಡುವ ಒಗಟು
ಬದುಕಿನ ಜಂಗುಳಿಯಲ್ಲಿ
ಆ ಒಗಟು ನನ್ನನ್ನು
ಮುನ್ನಡೆಸುತ್ತದೆ

ಚಿತ್ರ: www.dreamstime.com

17.4.10

ಬಿಸಿಲಿನ ಹನಿಗಳು

ಕಾದ ನೆಲದ ಮೇಲೆ
ಬಿದ್ದ ಎರಡು ಕಣ್ಣೀರ
ಹನಿಗಳು
ನನ್ನ ಹೃದಯದ
ನೋವನ್ನು ನಿನಗೆ ತಿಳಿಸಲಾಗದೆ
ಮರೆಯಾದವು

*******

ಬಿಸಿಲು ಬಿಸಿಲೆಂದು
ಬೈಯಲೇಬೇಕಿಲ್ಲ
ನೆರಳನ್ನು ಪ್ರೀತಿಸುವುದಕ್ಕೆ
ಕಾರಣ ಬಿಸಿಲು
ಬಯಲಿನ
ಮರದ ಚೆಲುವು ಹೆಚ್ಚಿಸಿದ್ದು
ಅದುವೇ..
ನೀನಿಲ್ಲದ ಇರುಳಿನ
ತಾಪಕ್ಕೆ ನನ್ನ ಬೇಗೆ ಏನೇನಲ್ಲ
ಎಂದು ಸಾರಿದ್ದೂ ಬಿಸಿಲೇ !

******

ಬಿಸಿಲಿಗಿಂತ
ನೆರಳೇ ಲೇಸೆಂದು
ಬಂಡೆಯ ಮರೆಗೆ
ಸರಿದ ಕಪ್ಪೆಯನ್ನು
ಬಲುಹಸಿದ ಹದ್ದು
ಕೊಂಡೊಯ್ದಿತು !


ಚಿತ್ರಕೃಪೆ:
www.flickr.com/photos/hirotokyo/4080312692/

15.3.10

ವಸಂತಗಾನ

ನಾನು ಅವಳನ್ನು
ಅವಳು ನನ್ನನ್ನು
ಬಿಟ್ಟಿರಲಾರದಷ್ಟು ಪ್ರೀತಿಸಿದೆವು
ಮಾವು ಚಿಗುರಲಿಲ್ಲ,
ಕೋಗಿಲೆ ಹಾಡಲಿಲ್ಲ
ಯಾರಿಗೂ ತೊಂದರೆಯಾಗಲಿಲ್ಲ
ಪ್ರೀತಿಯ ಬೆಂಕಿಯಲ್ಲಿ
ಚಿಂತೆಗಳು ಚಿತೆಯಾದವು
ಒಲವಿನ ಗುಸುಗುಸು
ಮಾತುಕತೆಯಾಗಿ
ಅರಳಿಕೊಂಡವು
ಹಚ್ಚಡತುಂಬ ಹರಡಿಬಿದ್ದವು
ಪಾರಿಜಾತದಂತೆ
ಇಬ್ಬನಿಯಾಗಿ ಕಂಡಿದ್ದು
ಸಾಗರವಾಗಿ ಭೋರ್ಗರೆಯಿತು
ನಾವು ಅದರ ಅಲೆಗಳಲ್ಲಿ
ತೇಲಿ ಹೋದೆವು
ಪ್ರೀತಿ ಪ್ರೀತಿಯಲ್ಲಿ
ಸೇರಿಕೊಂಡಿತು

pic courtesy: tandi venter

28.2.10

ಅಂಗೈಯಲ್ಲಿನ ಬೆರಗು !

ಈ ಹಕ್ಕಿ ಸುಮ್ಮನೆ ಅಂಗೈಯೊಳಗೆ ಬರುವುದು ಸಾಧ್ಯವೇ ಇಲ್ಲ.
ನಮ್ಮ ಹೂತೋಟಗಳಲ್ಲಿನ ಹೂವುಗಳ ಸುತ್ತ ಸುತ್ತುತ್ತಾ ಇರುವ ಈ ಪುಟ್ಟ ಪುಟ್ಟ ಹಕ್ಕಿಗಳಲ್ಲಿ ಸುಮಾರು ೧೩೨ ಥರದವು ಇವೆಯಂತೆ!
Nectariniidae ಕುಟುಂಬಕ್ಕೆ ಸೇರಿದ ಈ ಹಕ್ಕಿಯ ಜೈವಿಕ ಹೆಸರು Nectarinia jugularis. ಹಳದಿ ಎದೆಯ ಸೂರ್ಯಕ್ಕಿ ಅಥವಾ ಆಲಿವ್‌ ಬೆನ್ನಿನ ಸೂರ್ಯಕ್ಕಿ(sunbird) ಎನ್ನುವುದು ಸಾಮಾನ್ಯ ಪದನಾಮ.
Nectariniidae ಕುಟುಂಬದಲ್ಲಿ ಸೂರ್ಯಕ್ಕಿಗಳಲ್ಲದೆ ಸ್ಪೈಡರ್‌ಹಂಟರ್‌ಗಳು, ಫ್ಲವರ್‌ಪೆಕರ್‌ಗಳೂ ಬರುತ್ತವೆ.


ಮೊನ್ನೆ ಮನೆಯಲ್ಲಿ ಕೂತಿದ್ದಾಗ ಅಂಗಳಕ್ಕೆ ಪಟಾರನೆ ಬಿದ್ದುಬಿಟ್ಟ ಈ ಹಕ್ಕಿಗೆ ಏನಾಗಿತ್ತೋ ತಿಳಿಯದು. ಕಾಗೆ ಅಟ್ಟಿಸಿಕೊಂಡು ಬಂತೇ ಅಥವಾ ಬಿಸಿಲ ಧಗೆಗೆ ತಲೆ ತಿರುಗಿತ್ತೇ ಗೊತ್ತಾಗಲಿಲ್ಲ. ಬಿದ್ದು ಗರಬಡಿದಂತೆ ಕೂತಿದ್ದ ಈ ಹಕ್ಕಿಯನ್ನು ಗೆಳತಿ ರಶ್ಮಿ ಎತ್ತಿಕೊಂಡು ನೇವರಿಸಿ, ಅದರ ಮೈಮೇಲೆ ತಂಪು ನೀರು ಎರಚಿದಾಗ ಯಾವುದೇ ದಾಕ್ಷಿಣ್ಯ ತೋರಿಸದೆ ಕೊಕ್ಕು ತೆರೆಯುತ್ತಾ ಕುಡಿಯಿತು ಈ ಸೂರ್ಯಕ್ಕಿ!
ಒಂದಷ್ಟು ಹೊತ್ತು ತನ್ನನ್ನು ಆರೈಕೆ ಮಾಡುತ್ತಿದ್ದವರನ್ನೇ ಕೃತಜ್ಞತಾಪೂರ್ವಕ ನೋಡುತ್ತಿತ್ತು. ಈ ಹಕ್ಕಿಯನ್ನು ಇನ್ನು ಬದುಕಿಸೋದು ಕಷ್ಟವೇನೋ ಅನ್ನಿಸುತ್ತಿತ್ತು ನನಗೆ, ಯಾಕೆಂದರೆ ಹಕ್ಕಿ ಅಷ್ಟು ಕರುಣಾಜನಕವಾಗಿ ಕಾಣಿಸುತ್ತಿತ್ತು.
ಗೆಳತಿಯ ಕೈಲಿ ಭದ್ರವಾಗಿ ಕೂತಿದ್ದ ಹಕ್ಕಿಯ ಒಂದೆರಡು ಫೋಟೋ ಕ್ಲಿಕ್ಕಿಸಿದೆ. ಅಲ್ಲಿಂದ ಹಕ್ಕಿಯನ್ನೆತ್ತಿ ಒಂದು ಮರದ ಹತ್ತಿರ ಬಿಡೋಣ, ಅದರ ತಾಯಿಯಾದರೂ ಬಂದು ಕರೆದೊಯ್ಯಲೂ ಬಹುದು ಎಂದು ಭಾವಿಸಿ ನಾವು ಅದನ್ನು ಮನೆಯೆದುರಿನ ತೆಂಗಿನ ಮರದ ಹತ್ತಿರ ತರುವಾಗಲೇ ಹಕ್ಕಿ ಪುರೃನೆ ಹಾರಿಹೋಗಿ ಗುಲಾಬಿ ಗಿಡದಲ್ಲಿ ಕೂತಿತು!
ಒಂದೆರಡು ನಿಮಿಷ ಕೂತಲ್ಲೇ ರೆಕ್ಕೆ ಬಡಿಯುತ್ತಾ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಂಡು ಬಳಿಕ ಹಾರಿ ಮಾಯವಾಯಿತು!

12.2.10

ಕನಸಿನ ಬಂಡಿಗೆ ನಿಲ್ದಾಣವಿಲ್ಲ

ಅದು ಫೆಬ್ರವರಿಯ ಥಂಡಿ ಸುರಿಯುವ ರಾತ್ರಿ. ನಕ್ಷತ್ರಗಳ ಹಿಮ್ಮೇಳದಲ್ಲಿ ಬೆಳ್ಳನೆ ಬೆಳದಿಂಗಳು ಚೆಲ್ಲುತ್ತಾ ಚಂದಿರ ಸವಾರಿ ಹೊರಟಿರುವಾಗಲೇ ಜಮ್ಮುತಾವಿ ಎಕ್ಸ್‌ಪ್ರೆಸ್ ರೈಲು ಯಾವುದೋ ಗೋಧಿಯ ಬಯಲುಗದ್ದೆಗಳ ನಡುವೆ ಮಂಜು ಪರದೆ ಸೀಳುತ್ತಾ ಓಡುತ್ತಿದೆ.
ರೇಲು ಗಾಡಿಯ ಸ್ಲೀಪರ‍್ ಕೋಚ್ ಎಸ್‌-8ರಲ್ಲಿ ಇರುವ ಕೆಲವೇ ಪ್ರಯಾಣಿಕರು ತಮ್ಮ ಇಹಲೋಕ ಪರಿವೆಯೆಲ್ಲ ಮರೆತು ನಿದ್ರೆ ಮಾಡುತ್ತಿದ್ದರೆ ಇಡೀ ಬೋಗಿಯೇ ಆಲಸ್ಯದಿಂದ ತುಂಬಿರುವಂತೆ ಕಾಣುತ್ತದೆ. ಮಬ್ಬು ಬೆಳಕಲ್ಲಿ ಅಪ್ಪರ‍್ ಬರ್ತ್‌ನಲ್ಲಿ ಬ್ಯಾಗ್‌ಗೆ ಬೆನ್ನು ಕೊಟ್ಟು ನಿದ್ರಿಸಲು ಯತ್ನಿಸುತ್ತಿದ್ದಾನೆ ಆ ೨೫ರ ಹುಡುಗ. ಆತ ಮಗ್ಗುಲಾಗಿ ಮಲಗಿದ್ದಾನೆ.
ಕಣ್ಣೆವೆ ಮುಚ್ಚಿಕೊಂಡರೆ ಸಾಕು ಆಕೆ ಕಣ್ಣಮುಂದೆ ಬರುತ್ತಾಳೆ. ಕಣ್ಣೆವೆ ತೆರೆದರೆ ಅಲ್ಲೇ ಮುಂಭಾಗದ ಮಧ್ಯೆಯ ಬರ್ತ್‌ನಲ್ಲೇ ಮಲಗಿದ್ದಾಳೆ. ಆಕೆಯ ಕಂಗಳಲ್ಲೂ ಈತನ ಪ್ರತಿಬಿಂಬ ಕಂಡಂತಿದೆ. ನಿನ್ನೆ ಬೆಳಗ್ಗಿನಿಂದ ಆತನಿಗೆ ಆಕೆ ಪರಿಚಯವಾಗಿದ್ದಾಳೆ, ಚೂಡಿದಾರ‍್ ಉಟ್ಟ ಸರಳ ಹುಡುಗಿ.
ಮಾತಿಗಾಗಿ ಆತನೂ ತಡವರಿಸಿದ್ದಾನೆ. ಆಕೆಯೂ ಅಂತಹಾ ಮಾತುಗಾರ್ತಿ ಅಲ್ಲ. ಆಕೆಯ ತಂದೆ ತಾಯಿ ಅಲ್ಲೇ ಕೆಳಗಿನ ಎರಡು ಬರ್ತ್‌ಗಳಲ್ಲಿ ಮಲಗಿದ್ದಾರೆ.
ಅವರು ಬೇಕೆಂದಾಗ ಪೇಪರನ್ನೋ, ನೀರನ್ನೋ ತಂದು ಕೊಟ್ಟು ಈತ ಉಪಕಾರ ಮಾಡಿದ್ದಿದೆ. ನನ್ನ ಬಗ್ಗೆ ಅವರೇನಂದುಕೊಂಡಿರಬಹುದು ಎಂದು ಆತ ಚಿಂತೆ ಮಾಡಿಲ್ಲ, ಆದರೆ ಗುಲಾಬಿ ವರ್ಣದ ಚೂಡಿದಾರದ ಆ ಚೆಲುವೆ ಮುಖ ನೋಡಿ ನಕ್ಕಾಗೆಲ್ಲ ಈತ ನಡುಗುತ್ತಾನೆ.
ಈ ಮಂಗಳೂರು ಹುಡುಗನಿಗೆ ಕನ್ನಡ, ಇಂಗ್ಲಿಷ್ ಬರುತ್ತದೆ. ವಿಚ್‌ ಪ್ಲೇಸ್ ಆರ‍್ ಯೂ ಫ್ರಂ, ಓ..ಯು ಆರ‍್.ಕನ್ನಡಿಗ...ಎಂದು ಪರಿಚಯ ಅಷ್ಟೇ ಮಾಡಿಕೊಂಡಿದ್ದಾಳೆ. ಆಕೆ ಅಹ್ಮದಾಬಾದ್‌ನವಳು.

ಇನ್ನು ಮೂರು-ನಾಲ್ಕು ಗಂಟೆಯಲ್ಲಿ ಬೆಳಗಾಗುವಾಗ ಅಹ್ಮದಾಬಾದ್ ಸ್ಟೇಷನ್ ಬರುತ್ತದೆ. ಆಕೆ ಅಲ್ಲಿ ಇಳಿಯು‌ತ್ತಾಳಂತೆ. ಬೆಳಗ್ಗಿನಿಂದಲೇ ಆಗಾಗ್ಗೆ ಮೊಬೈಲ್‌ನಲ್ಲಿ ಮೆಸೇಜ್ ನೋಡುತ್ತಿದ್ದವಳು, ಆಕೆಯ ಪ್ರಿಯಕರನ ಅಲ್ಲ, ಗೆಳೆಯರ ಸಂದೇಶ ಓದುತ್ತಿದ್ದಳೋ ಏನೋ. ಮಧ್ಯಾಹ್ನ ನಂತರ ಮೊಬೈಲ್ ನೋಡಿಲ್ಲ. ರೋಮಿಂಗಲ್ವಾ ಅಂತ ಬೆಂಗಳೂರು ಹುಡುಗ ಮೊಬೈಲ್ ಆಫ್ ಮಾಡಿಟ್ಟಿದ್ದಾನೆ.
ಆಕೆಯ ಮೇಲೆ ಆತನಿಗೆ ಪ್ರೇಮವೇ, ಆಕರ್ಷಣೆಯೇ ಗೊತ್ತಿಲ್ಲ. ಗುಜರಾತಿ ಹುಡುಗಿ ಮನದೊಳಗೆ ಗೂಡು ಕಟ್ಟಿದಳೇ? ಆತನಿಗೆ ಗೋಜಲು.
‘ನೀ ಹೋದರೆ ಮತ್ತೆ ನನ್ನ ಒಂದು ದಿನದ ಪ್ರಯಾಣ ಮಹಾ ಬೋರಿಂಗ್’ ಎನ್ನ ಹೊರಟಾಗ ರೇಲು ಇಂಜಿನ್ ಸುರಂಗ ಹೊಕ್ಕು ಕರ್ಕಶವಾಗಿ ಸೀಟಿ ಹಾಕುತ್ತಾ ವೇಗ ಹೆಚ್ಚಿಸಿಕೊಂಡಿವೆ. ಮಾತುಗಳನ್ನು ಹುಡುಗ ನುಂಗಿಕೊಂಡಿದ್ದಾನೆ. ಈತನ ಮುಖವನ್ನೇ ನೋಡುತ್ತಿದ್ದಾಕೆ ನುಂಗಿದ ಮಾತುಗಳನ್ನು ಹೆಕ್ಕಿಕೊಂಡಂತೆ ಮುಗುಳ್ನಗುತ್ತಾಳೆ. ಕಿಟಿಕಿಯಿಂದ ಒಳಹೊಕ್ಕ ಕುಳಿರ್ಗಾಳಿಗೆ ಮಲಗಿದ್ದವಳ ತಲೆಕೂದಲಿನ ಜೊಂಪೆ ಒಮ್ಮೆ ಮೇಲೆದ್ದು ಅಲೆ ಅಲೆಯಾಗಿ ಕಣ್ಣು, ಕೆನ್ನೆ ಮೇಲೆ ಜಾರುತ್ತಾ ಮುಖವನ್ನು ಆವರಿಸಿದ ದೃಶ್ಯ ಮನಃಪಟಲದಲ್ಲಿ ಅಚ್ಚೊತ್ತಿದೆ.
ಚಂದಿರ ರಾತ್ರಿ ಪಾಳಿ ಮುಗಿಸಿ ಬದಿಗೆ ಸರಿಯಲಿದ್ದಾನೆ, ಸೂರ್ಯನಿಗೆ ಹೊಸ ಪಾಳಿ ಇನ್ನು. ಪಾಳಿ ಬದಲಾವಣೆಯಾಗುವಾಗ ಆಕೆ ತನ್ನವರೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಬಿಡುತ್ತಾಳೆ. ಆಕೆ ಮಲಗಿದ್ದ ಬರ್ತ್‌ಗೆ ಇನ್ಯಾರೋ ಬಂದು ಬಿಡುತ್ತಾರೆ ಎಂಬ ನೆನಪುಗಳೇ ಈಗ ಆತನನ್ನು ಇರಿಯುತ್ತವೆ.
ಎಷ್ಟೊಂದು ಮಾತುಗಳು ಮನದ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿದ್ದವು, ಆಕೆಯ ಪಿಂಕ್ ಚೂಡಿ, ಅಲೆ ಅಲೆಗೂದಲು, ಗುಜರಾತಿ ಮಿಶ್ರಿತ ಇಂಗ್ಲಿಷ್, ಕಣ್ಣಿನ ನೇರನೋಟ ಇವೆಲ್ಲ ಸೇರಿ ಆತನಿಗೆ ಆಕೆಯ ಬಗ್ಗೆ ಯಾವ ಭಾವನೆ ಮೂಡುತ್ತಿದೆ ಎನ್ನುವುದನ್ನು ಇನ್ನೂ ನಿರ್ಧಾರ ಮಾಡುವ ಮೊದಲೇ ಆಕೆ ಹೊರಟು ಹೋಗುವವಳಿದ್ದಾಳೆ. ಆಕೆ ಇನ್ನೊಂದಿಷ್ಟು ಹೊತ್ತು ತನ್ನೊಂದಿಗಿದ್ದರೆ...
ಆತನ ಮನದ ಕೊರಗು ಆಕೆಗೂ ಇತ್ತೇ ಗೊತ್ತಿಲ್ಲ...ಸಂಜೆಯಾದಾಗ ಮುದುಡುವ ಗುಲಾಬಿಯಂತಿರುವ ಮುಖ ಏನೋ ಹೇಳುತ್ತಿದೆ.
ಈಗ ಬೆಳಕು ಹರಿದಿದೆ. ವೇಗ ಇಳಿಸಿದ ರೇಲು ನಿಲ್ದಾಣದತ್ತ ಜಾರುತ್ತಿದೆ. ಆಕೆಯ ಪೋಷಕರು ಬ್ಯಾಗೇರಿಸಿದ್ದಾರೆ. ಆಕೆಯೂ ತನ್ನ ತುರುಬು ಕಟ್ಟಿಕೊಂಡು ನಿದ್ದೆಗಣ್ಣಿಗೆ ತಣ್ಣೀರೆರಚಿ ಬಂದು ಸಿದ್ಧಳಾಗುತ್ತಿದ್ದಾಳೆ, ಆತನ ಕನಸಿನ ಬಂಡಿಯಿಂದ ಇಳಿದು ಹೋಗುವುದಕ್ಕೆ.
ಪ್ಲಾಟ್‌ಫಾರಂ ಬಂದು ನಿಂತಿದೆ ರೇಲು, ಆಕೆಯ ಹೆತ್ತವರ ಕೈಲಿದ್ದ ಬ್ಯಾಗ್ ಈತ ತೆಗೆದುಕೊಂಡಿದ್ದಾನೆ, ಅವರನ್ನು ಕೆಳಗಿಳಿಸಿ, ಬ್ಯಾಗ್ ಕೈಗೆ ಕೊಡುತ್ತಾನೆ. ಹಮ್ ಫಿರ‍್ ಮಿಲೇಂಗೇ....ನಕ್ಕ ಆಕೆಯ ತಂದೆ ಹುಡುಗನ ಬೆನ್ನು ಸವರಿದ್ದಾನೆ, ತಾಯಿಗಂಟಿ ನಿಂತ ಹುಡುಗಿ ತೀಕ್ಷ್ಣವಾಗಿ ಈತನತ್ತ ನೋಡುತ್ತಾಳೆ.
ಆಕೆಯ ಮೊಬೈಲ್ ನಂಬರ‍್ ಕೇಳಿ ಬಿಡಲೇ ಬೇಕೇ ಎನ್ನುವ ಗೊಂದಲದಲ್ಲಿದ್ದಾನೆ ಹುಡುಗ...ಆಗಲೇ ರೈಲು ಹೊರಟಿದೆ ಮತ್ತೆ...
ಒಲವೂ ಅಲ್ಲದ, ಸ್ನೇಹವೂ ಅಲ್ಲದ ನವಿರು ಭಾವಗಳ ಕನಸು ಹಾಗೇ ಹರಿಯಲಿ ಎನ್ನುತ್ತಾ ಹುಡುಗ ಅವ್ಯಕ್ತ ನೋವಿನಿಂದ ತಿರುಗಿಯೂ ನೋಡದೆ ರೈಲು ಏರಿದ್ದಾನೆ....ಲವ್‌ ಯೂ ಎಂದು ಕೂಗಿ ಹೇಳೋಣ ಎಂದು ಬಾಯ್ತೆರೆದರೆ ಮತ್ತೆ ಅದೇ ರೈಲಿನ ಸೀಟಿ....
ಮಾತುಗಳು ಬಾಯಲ್ಲೇ ಉಳಿದಿವೆ...ಆಕೆಯ ಕಂಗಳ ಅಂಗಳದಲ್ಲೆ ಹೊಳೆದ ಕಂಬನಿ ಮಾತ್ರ ಇನ್ನೂ ಹುಡುಗನ ಕಂಗಳಲ್ಲಿ ಶಾಶ್ವತವಾಗಿವೆ.

pic : pixadus.com

ಪ್ರೇಮ ಎಂಬ abstract ಭಾವನೆಯೊಂದರ ಸುತ್ತ ಸುತ್ತುವ ಕೆಲ ಯೋಚನೆಗಳೇ ಈ ಕಥೆಗೆ ಮಾರ್ಗದರ್ಶೀ ಸೂತ್ರ, ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಈ ಕಥೆ

3.2.10

ನಶ್ಯ ಪುರಾಣಂ

ನಾನು ಮೊದಲ ಬಾರಿಗೆ ನಶ್ಯ ನೋಡಿದ್ದು ಸುಮಾರು೩-೪ ವರ್ಷದವನಿರಬೇಕಾದರೆ ಪೆರ್ಲದ ದಾಮು ಭಂಡಾರಿಗಳ ಕ್ಷೌರದಂಗಡಿಯಲ್ಲಿ.
ದಾಮು ಭಂಡಾರಿಯವರು ಪ್ರತಿ ಗಿರಾಕಿಯ ಕ್ಷೌರ ಮಾಡಿದ ಬಳಿಕ ಮಧ್ಯಂತರದಲ್ಲಿ ತಪ್ಪದೇ ಚಿಟಿಕೆ ನಶ್ಯ ಹಾಕುವ ಗಮ್ಮತ್ತನ್ನು ನೋಡುವುದಕ್ಕಾಗೇ ನಾನು ಅಜ್ಜನೊಂದಿಗೆ ಕ್ಷೌರದಂಗಡಿಗೇ ಹೋಗಿದ್ದುಂಟು!
ಶುದ್ಧ ಬಿಳಿಯ ಪಂಚೆ, ಅದೇ ಬಣ್ಣದ ಶುಭ್ರ ಖಾದಿ ಬನೀನು ಧರಿಸಿದ್ದ ಇಳಿ ವಯಸ್ಸಿನ ಭಂಡಾರಿಯವರನ್ನು ನೋಡುವಾಗಲೇ ಗೌರವ ಬರುವುದು. ಅವರು ಹಳೇ ಅಲ್ಮಾರಿಯ ಮೂಲೆಗೆ ಕೈಹಾಕಿ, ಅಲ್ಲಿಂದ ನಶ್ಯ ತುಂಬಿದ್ದ ಆಕರ್ಷಕ ಗಾಜಿನ ಚಿಕ್ಕ ಗಾತ್ರದ ಸಪುರ ಕೊರಳಿನ ಬಾಟಲಿಯನ್ನು ಹೊರ ತೆಗೆದು, ಹೊರ ಬಂದು ಎಡಗೈ ಅಗಲಿಸಿ, ಬಾಟಲಿಯಿಂದ ನಶ್ಯವನ್ನು ಕೈಗೆ ಹಾಕಿಕೊಂಡು ಅದರಿಂದ ಒಂದು ಚಿಟಿಕೆ ಪುಡಿ ಮಾತ್ರವೆ ಬಲ ಅಂಗುಷ್ಠ ಮತ್ತು ತೋರು ಬೆರಳಿನಲ್ಲಿ ಇರಿಸಿ, ಉಳಿದದ್ದು ಕೊಡವಿ ಅದೊಂದು ಗತ್ತಿನಲ್ಲಿ ನಶ್ಯ ಏರಿಸುತ್ತಿದ್ದರೆ ನನಗೇ ನಶ್ಯ ಹಾಕಿದ ಹಾಗೆ ಆಗುತ್ತಿತ್ತು.
ಇನ್ನು ಮದುವೆ, ಪೂಜೆಯಂತಹ ಸಮಾರಂಭಗಳಲ್ಲೂ ನಶ್ಯ ಹಾಕುವವರು ಒಂದು ಕಡೆ ಸೇರಿಕೊಂಡು ಅದೋ ಇದೋ ರಾಜಕೀಯ ಮಾತಾಡುತ್ತಾ ಹೇಗೆ ಈ ಬಾರಿ ಅಡಕೆಗೆ ರೇಟ್ ಏರಬಹುದೋ ಏನೋ ಎನ್ನುತ್ತಾ ನಶ್ಯ ಹಾಕುವುದು, ಆ ಬಳಿಕ ಲಯಬದ್ಧವಾಗಿ ಅನೇಕರು ‘ಆಆಆಆಆಆ ಕ್ಷೀಈಈಈಈಈಈ’ ಎಂದು ಸೀನುವುದು ಏನು ದೃಶ್ಯ!
ಇನ್ನು ಕೆಲವರು ಒಂದೊಂದು ಪದವನ್ನು ಮಧ್ಯೆ ಆಕ್ಷೀ ಬೆರೆಸಿಕೊಂಡು ಹೇಳುವುದಂತೂ ನಾಟಕೀವಾಗಿರುತ್ತಿತ್ತು.


ಇದರಿಂದ ನಾನೂ ಪ್ರೇರಿತನಾಗಿ ಅನುಸರಿಸಲು ಹೋಗಿ ಮನೆಯಲ್ಲಿ ಚೆನ್ನಾಗಿ ಬೈಗುಳ ತಿಂದದ್ದಿದೆ. ನಾನು, ನನ್ನ ಓರಗೆಯ ಇತರ ಕೆಲ ಮಕ್ಕಳಿಗೂ ನಶ್ಯದಲ್ಲಿ ಆಕರ್ಷಣೆ ಬರಲು ಕಾರಣವೇ ಈ ಆಕ್ಷಿ ಎಂದರೂ ತಪ್ಪಲ್ಲ! ನಶ್ಯವನ್ನು ಹದವಾಗಿ ಏರಿಸಿದಾಗ ಶ್ವಾಸಕೋಶದ ಅಂತರಾಳದಲ್ಲೆಲ್ಲೋ ಉದ್ಭವವಾಗುವ ಆಕ್ಷಿ ನಿಧಾನವಾಗಿ ಕಂಠದ ಮೂಲಕ ಹೊರ ಬರುತ್ತಿರುವಾಗ ಕೆಲವರು ಕಣ್ಮುಚ್ಚಿ ಅಥವಾ ಅರೆಕಣ್ಣು ಮುಚ್ಚಿ, ಬಾಯಿ ಆಆಆಆ ಮಾಡಿಕೊಂಡು ಕೊನೆಗೆ ಆಕ್ಷೀ ಎನ್ನುತ್ತಾ ಮಹದಾನಂದ ಪಡೆಯುವುದನ್ನು ನೋಡಿದ್ದೇನೆ :) ಜೋರು ಶೀತವಾದ ಸಂದರ್ಭದಲ್ಲಿ ಮಾತ್ರ ಮೂಗು ಕ್ಲಿಯರಾಗಲು ಕೆಲವೊಮ್ಮೆ ಅಜ್ಜನೇ ನನಗೆ ನಶ್ಯವನ್ನು ಕರುಣಿಸುತ್ತಿದ್ದರು.


ಯಾಕೆ ಇದೆಲ್ಲಾ ನೆನಪಾಯಿತೆಂದರೆ,ಈಗೀಗ ನಮ್ಮ ಕಡೆಯಂತೂ ನಶ್ಯ ಹಾಕುವವರೇ ಕಾಣಸಿಗುವುದಿಲ್ಲ, ಕೆಲವೊಂದು ಅಜ್ಜಂದಿರನ್ನು ಬಿಟ್ಟರೆ. ಇದು ಒಳ್ಳೆಯದೋ ಕೆಟ್ಟದೋ ಎಂದು ವಿಶ್ಲೇಷಿಸೋದು ನನ್ನ ಉದ್ದೇಶವಲ್ಲ.
ನಿಜ ಹೊಗೆಸೊಪ್ಪಿನಿಂದ ತಯಾರಿಸಿದ ಎಲ್ಲಾ ರೀತಿಯ ವಸ್ತುಗಳೂ ಅತಿಯಾದರೆ ದೇಹಕ್ಕೆ ಮಾರಕವೇ. ಬಹುಷಃ ಸಿಗರೇಟ್, ಗುಟ್ಕಾದ ಜನಪ್ರಿಯತೆಯಲ್ಲಿ ನಶ್ಯದ ಚಟ ಮಸುಕಾಗಿರಬಹುದೇನೋ..
ಯಾವಾಗಲೋ ಒಮ್ಮೆ ನಶ್ಯ ಏರಿಸಿ ಆಕ್ಷೀ ಎನ್ನುವ ಆನಂದ ಅನುಭವಿಸಿದವರಿಗೆ ಮಾತ್ರ ಆ ಖುಷಿ ಬೇರೆಲ್ಲೂ ಸಿಗದು :)

1.1.10

ಹೊಸವರುಷದ ನಿಶೆ


ರಾತ್ರಿಯಲ್ಲಿ
ಸ್ವರ್ಗದ ಮೊದಲ ಅಂತಸ್ತಿನಲ್ಲಿ
ಮಂಜುಗತ್ತಲಿನ ಅಮಲಿನಲ್ಲಿ
ರಂಭೆ ಮೇನಕೆಯರ ನಡುವೆ
ತೇಲಾಡುವಾಗ
ಅಂತರಾತ್ಮನ ಮಾತುಗಳು
ಎಲ್ಲೋ ಕೇಳಿಸುತ್ತವೆ
ಬೇಡ ಈ ಎಲ್ಲ ಅವತಾರ..

ನೆನಪಿಲ್ಲವೇ
ಬೆಳಗ್ಗೆಯಷ್ಟೇ
ಬಿರುಬೆಚ್ಚಗಿನ ಗಾಳಿ
ಸಂಕಟದ ಕಡಲಿನ ಮೇಲಿಂದ
ಬೀಸಿ ಬಂದಿದ್ದು..
ಸಂತ್ರಸ್ತರ ಕಣ್ಣೀರಿನ
ಮಳೆಯನ್ನೂ ಹೊತ್ತು ಸುಳಿದಿದ್ದು?

ಈಗ
ಕೈಯಲ್ಲಿನ ಸೀಸೆಗಳು
ಕಂಪಿಸಿವೆ...
ನಶೆಗಣ್ಣಿಗೆ
ಒಳಗಿನ ದ್ರವವೂ
ರಕ್ತದಂತೆ

ತಲೆಯೇಕೋ ಧಿಮುಗುಡುತ್ತದೆ
ಧಾವಿಸುತ್ತೇನೆ
ಕಾರಿನತ್ತ
ತಲಪಬೇಕಿದೆ ನೇರ
ನೋವಿರದ ತೀರ
ಎಲ್ಲೋ ರಸ್ತೆ ಬದಿ ಕೇಳಿತಲ್ಲವೇ ಚೀತ್ಕಾರ
ಏನೋ ನೋಡಲು ಹೊರಟರೆ
ಕಿರಿಚಿಕೊಳ್ಳುತ್ತವೆ
ಎರಡೂ ಮೊಬೈಲ್ ಏಕಕಾಲಕ್ಕೆ...
ಸ್ವರಗಳು ಉಲಿಯುತ್ತವೆ
ಹ್ಯಾಪಿ ನ್ಯೂ ಇಯರ‍್...!!!
ರಕ್ತಸಿಕ್ತ ಟೈರಿನ ಅಚ್ಚು ಕಾಂಕ್ರೀಟ್
ಮೇಲೆ ಮೂಡುವಾಗ
ಆಕಾಶದಲ್ಲಿ ಹೊಸ ವರ್ಷದ
ಬಿರುಸು ಜೋರು!

(ಹೊಸ ವರುಷ ಎನ್ನುವುದು ಭ್ರಮೆಯೇ, ಆಡಂಬರವೇ, ಸಂಪ್ರದಾಯವೇ, ಏನೂ ಗೊತ್ತಿಲ್ಲದೆ ಹ್ಯಾಪಿ ನ್ಯೂ ಇಯರ‍್ ಹೇಳಿದವರಲ್ಲಿ ನಾನೂ ಒಬ್ಬ...ಇದರ ನಡುವೆ ಸುಳಿದ ಒಂದಷ್ಟು ದ್ವಂದ್ವಗಳು ಈ ಸಾಲುಗಳಿಗೆ ಕಾರಣವಾಯ್ತು)
Related Posts Plugin for WordPress, Blogger...