30.12.06

ಹೊಸ ವರ್ಷದ ಹಾರೈಕೆ


ಪರಭಾಷೆಗಳ ತೀವ್ರ ಮೇಲುಗೈ ನಡುವೆ
ಕನ್ನಡಿಗರ ದಿವ್ಯ ಉದಾಸೀನದ ನಡುವೆ ಕೂಡಾ
ಕನ್ನಡ ಮನಸ್ಸುಗಳು ಹಸಿರಾಗಿರುತ್ತವೆ
ಬ್ಲಾಗುಗಳ ಮುಖಾಂತರ

ತಾಂತ್ರಿಕ ಔನ್ನತ್ಯದ ನಡುವೆ
ದೇಶೀಯ, ಭಾಷಾ ಪಂಡಿತರ ಮೂದಲಿಕೆ-
ಗಳಿದ್ದರು ಕೂಡಾ
ಕನ್ನಡಕ್ಕೆ ಬಾರದು ಗಂಡಾಂತರ

ಕನ್ನಡ ನಿತ್ಯನೂತನ
ವಿಶಾಲ...ಚಿರಂತನ
ನಿತ್ಯನಿರಂತರ

ಇತರ ಭಾಷೆಗಳ, ಸಂಸ್ಕೃತಿಗಳ ಸಾರ ಸತ್ವ ಸವಿಯುತ್ತಲೇ ಎಂದೆಂದಿಗೂ ಕನ್ನಡಿಗರಾಗಿರೋಣ
ಎಲ್ಲರಿಗೂ ಹೊಸ ಕ್ಯಾಲೆಂಡರ್‍ ವರ್ಷದ ಶುಭಹಾರೈಕೆಗಳು

3.12.06

ನೆರಳಿನಾಟ




ಆ ಬಿಸಿಗಾಳಿಯ ಹಬೆಗೆ
ಮುಸುಗುಡುತ್ತಾ
ನಿದ್ರಿಸಿದ್ದೆ ಅದೊಂದು ರಾತ್ರಿ
ಆದರೂ ನಿದ್ರಿಸಿಲ್ಲ ನನ್ನ ನೆರಳು
ಛಂಗನೆದ್ದು ಸುತ್ತಾಡ
ಹೊರಟಿದೆ ಆ ಇರುಳು!

ಅತೃಪ್ತ ಆತ್ಮದಂತೆ
ನಿದ್ದೆ ಸುಳಿಯದ ವಿರಹಿಯಂತೆ
ವಿಕ್ಷಿಪ್ತ ಮನೋರೋಗಿಯಂತೆ
ಸುತ್ತಾಡುತ್ತಿದೆ ನೆರಳು

ಎಲ್ಲಿಗೆ ಹೋಗಬಯಸಿದೆಯೋ
ಏನೋ ತಿಳಿಯದು
ನಾನಂತೂ ನನ್ನಷ್ಟಕ್ಕೇ
ಗೊರಕೆ ಹೊಡೆಯುತ್ತಿದ್ದೇನೆ
ಆದರೆ ನೆರಳಿಗೆ ಯಾಕಿಂತಹ
ಹುಚ್ಚಾಟ?!

ಎಂದಿಗೂ ನನ್ನನ್ನು ಬಿಟ್ಟಿರದ ನೆರಳದು
ಆದರೆ ಇಂದು ಮಾತ್ರ ಯಾಕೆ ಹೀಗೆ?

ನೆರಳು ಎಲ್ಲೆಲ್ಲೋ ಹೋಗುತ್ತಿದೆ
ಊರ ನಡುವಿನ ಕಟ್ಟೆಗೆ
ಅಲ್ಲೇ ಪಕ್ಕದ ಶಾಲೆಗೆ

ಸಂತೆ ಮೈದಾನದಲ್ಲಿ
ಭಗ್ನಪ್ರೇಮಿಯಂತೆ ಗಿರಕಿ
ಹಾಕುತ್ತಿದೆ
ಆಲದಮರದ ಬಿಳಲು
ಹಿಡಿದು ಜೋಲಾಡುತ್ತಿದೆ
ಬಾಲ್ಯದ ನೆನಪು ಹತ್ತಿದಂತೆ

ಈಗ ನಿದ್ದೆ ಲಘುವಾಗಿದೆ
ಹಠಾತ್ ಎದ್ದು ನೋಡುತ್ತೇನೆ
ನೆರಳು ಪಕ್ಕದಲ್ಲೇ ಇದೆ!
Related Posts Plugin for WordPress, Blogger...