ಆ
ರಾತ್ರಿಯಲ್ಲಿ
ಸ್ವರ್ಗದ ಮೊದಲ ಅಂತಸ್ತಿನಲ್ಲಿ
ಮಂಜುಗತ್ತಲಿನ ಅಮಲಿನಲ್ಲಿ
ರಂಭೆ ಮೇನಕೆಯರ ನಡುವೆ
ತೇಲಾಡುವಾಗ
ಅಂತರಾತ್ಮನ ಮಾತುಗಳು
ಎಲ್ಲೋ ಕೇಳಿಸುತ್ತವೆ
ಬೇಡ ಈ ಎಲ್ಲ ಅವತಾರ..
ನೆನಪಿಲ್ಲವೇ
ಬೆಳಗ್ಗೆಯಷ್ಟೇ
ಬಿರುಬೆಚ್ಚಗಿನ ಗಾಳಿ
ಸಂಕಟದ ಕಡಲಿನ ಮೇಲಿಂದ
ಬೀಸಿ ಬಂದಿದ್ದು..
ಸಂತ್ರಸ್ತರ ಕಣ್ಣೀರಿನ
ಮಳೆಯನ್ನೂ ಹೊತ್ತು ಸುಳಿದಿದ್ದು?
ಈಗ
ಕೈಯಲ್ಲಿನ ಸೀಸೆಗಳು
ಕಂಪಿಸಿವೆ...
ನಶೆಗಣ್ಣಿಗೆ
ಒಳಗಿನ ದ್ರವವೂ
ರಕ್ತದಂತೆ
ತಲೆಯೇಕೋ ಧಿಮುಗುಡುತ್ತದೆ
ಧಾವಿಸುತ್ತೇನೆ
ಕಾರಿನತ್ತ
ತಲಪಬೇಕಿದೆ ನೇರ
ನೋವಿರದ ತೀರ
ಎಲ್ಲೋ ರಸ್ತೆ ಬದಿ ಕೇಳಿತಲ್ಲವೇ ಚೀತ್ಕಾರ
ಏನೋ ನೋಡಲು ಹೊರಟರೆ
ಕಿರಿಚಿಕೊಳ್ಳುತ್ತವೆ
ಎರಡೂ ಮೊಬೈಲ್ ಏಕಕಾಲಕ್ಕೆ...
ಸ್ವರಗಳು ಉಲಿಯುತ್ತವೆ
ಹ್ಯಾಪಿ ನ್ಯೂ ಇಯರ‍್...!!!
ರಕ್ತಸಿಕ್ತ ಟೈರಿನ ಅಚ್ಚು ಕಾಂಕ್ರೀಟ್
ಮೇಲೆ ಮೂಡುವಾಗ
ಆಕಾಶದಲ್ಲಿ ಹೊಸ ವರ್ಷದ
ಬಿರುಸು ಜೋರು!
(ಹೊಸ ವರುಷ ಎನ್ನುವುದು ಭ್ರಮೆಯೇ, ಆಡಂಬರವೇ, ಸಂಪ್ರದಾಯವೇ, ಏನೂ ಗೊತ್ತಿಲ್ಲದೆ ಹ್ಯಾಪಿ ನ್ಯೂ ಇಯರ‍್ ಹೇಳಿದವರಲ್ಲಿ ನಾನೂ ಒಬ್ಬ...ಇದರ ನಡುವೆ ಸುಳಿದ ಒಂದಷ್ಟು ದ್ವಂದ್ವಗಳು ಈ ಸಾಲುಗಳಿಗೆ ಕಾರಣವಾಯ್ತು)