ಕಾಲವೃಕ್ಷದ ತುತ್ತತುದಿಯಿಂದ
ಕಳೆದ ವರುಷದ ಎಲೆಯೊಂದು
ಕಳಚಿ
ನಿ...ಧಾ...ನ...ವಾಗಿ
ತೇಲುತ್ತಾ
ಆರಾಮ ಕುರ್ಚಿಯಲ್ಲಿ ಕೂತಿದ್ದವನ
ಮುಂದೆ ಬಿತ್ತು...
ವರುಷದ ಮೂರೂ
ಕಾಲಗಳ ಕರಾಮತ್ತು
ವೀಕ್ಷಿಸಿ
ಮಳೆಗಾಲದ ಅಬ್ಬರ,
ಚಳಿಗಾಲದ ಬಿಸುಪು,
ಬೇಸಿಗೆಯ ಹಸಿವು
ತಾಳುತ್ತಾ ಏಗುತ್ತಾ
ಕೊನೆಗೆ ಮಗುಚಿ ಬಿತ್ತು
ಆ ಎಲೆ ಹಸಿರಾಗಿತ್ತು
ಎನ್ನುವುದಕ್ಕೆ ಇನ್ನೂ
ಸಾಕ್ಷಿ ಇದೆ,
ಹಳದಿ ವರ್ಣಕ್ಕೆ ತಿರುಗುತ್ತಿದೆಯಷ್ಟೇ
ಮುಪ್ಪಾಗಿರುವ ಲಕ್ಷಣದಿಂದ
ಅಲ್ಲೊಂದು ಇಲ್ಲೊಂದು
ರಂಧ್ರಗಳು...
ಹೊಸವರುಷದ ಸವಾಲುಗಳಿಗೆ
ಬೆಂಡಾಗಿ ಸೊರಗಿದೆ...
ಈಗ..
ಎಲೆ ಕಳಚಿದ ಗೆಲ್ಲಿನ
ತುದಿಯಲ್ಲೊಂದು
ಚಿಗುರು ಮೂಡಿದೆ,
ಜತೆಗೆ
ಮರಕ್ಕೆ ನೋವಿನಲ್ಲೊಂದು
ನಗು...
pic courtesy: artbycedar.com
27.12.10
22.12.10
ಸದಾನಂದ ಸುವರ್ಣರ ‘ಉರುಳು’
ನಾಟಕವೊಂದು ಪರಿಣಾಮಕಾರಿಯಾಗಲು, ಒಂದೂವರೆ, ೨ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿರಿಸಿಕೊಳ್ಳುವುದಕ್ಕೆ ವೇದಿಕೆ ತುಂಬುವುದಕ್ಕೆ ಡಜನ್ನು ಗಟ್ಟಲೆ ನಟನಟಿಯರು ವೇದಿಕೆಯಲ್ಲಿ ರಾರಾಜಿಸಬೇಕಿಲ್ಲ, ಎನ್ನುವುದಕ್ಕೆ ನಿನ್ನೆ ಇರುಳು ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಂಡ ‘ಉರುಳು’ ನಿದರ್ಶನವಾಯ್ತು.
ಕೈದಿಯೊಬ್ಬನ ಅಂತ:ಕರಣ, ಆತನ ವೈರುಧ್ಯಗಳು, ಹತಾಶೆ, ವ್ಯವಸ್ಥೆಯ ವಿಡಂಬನೆ, ಇವೆಲ್ಲದಕ್ಕೂ ದಯಾಮರಣದ ಚೌಕಟ್ಟು ಇವನ್ನೇ ಹಿಡಿದು ರಚಿಸಿರುವ ನಾಟಕವಿದು.
ಮೂಲ ಹಿಂದಿಯಲ್ಲಿ ಡಾ.ಶಂಕರಶೇಶ್ ರಚಿಸಿದ್ದರೆ, ಕನ್ನಡಕ್ಕೆ ಇದನ್ನು ಕರೆತಂದವರು, ನಮ್ಮ ‘ಗುಡ್ಡೆದ ಭೂತ’ ಧಾರಾವಾಹಿ ಖ್ಯಾತಿಯ ಸದಾನಂದ ಸುವರ್ಣ.
ದಯಾಮರಣವನ್ನು ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂಬ ಕೂಗು ನಮ್ಮ ದೇಶ ಮಾತ್ರವಲ್ಲ ಇತರ ಹಲವು ದೇಶಗಳಲ್ಲಿ ಕೇಳಿ ಬರುತ್ತಿದೆ, ಚಳವಳಿಯೂ ನಡೆದಿದೆ. ಇದೇ ಕೂಗಿನ ಅನುರಣನ ನಾಟಕದಲ್ಲೂ ಇದೆ.
ಕೈದಿಯೊಬ್ಬನನ್ನು ನೋಡಲು ಬರುವ ದೃಶ್ಯದೊಂದಿಗೆ ನಾಟಕದ ಮೊದಲ ದೃಶ್ಯ ತೆರೆದುಕೊಳ್ಳುತ್ತದೆ. ಯಾರನ್ನೂ ನೋಡಲು ಬಯಸದ ಕೈದಿಯೇ ನಾಟಕದ ಮುಖ್ಯ ಸೂತ್ರಧಾರನಾದರೆ ವೈಫಲ್ಯ ಅನುಭವಿಸುವ ಎಡೆಬಿಡಂಗಿ ವಕೀಲನೂ ನಾಟಕವನ್ನು ರೋಚಕತೆಯೆಡೆಗೆ ಕೊಂಡೊಯ್ಯುವ ಕೊಂಡಿ. ಇವರಿಬ್ಬರ ನಡುವೆ ಆಗಾಗ ಹಾದುಹೋಗುವ ಪಾತ್ರವಾಗಿ ಜೇಲಿನ ವಾರ್ಡನ್ ಅಷ್ಟೇ.
ಮೊದಲೆರಡು ನಟರೇ ಈ ನಾಟಕದಲ್ಲಿ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುವ ರೀತಿಯೇ ಇಡೀ ನಾಟಕದ ಆಕರ್ಷಣೆ. ಕ್ಯಾನ್ಸರ್‌ನಿಂದ ನರಳಿ ನರಳಿ ತಾಳಲಾರದೆ ತನ್ನನ್ನು ಕೊಂದುಬಿಡುವಂತೆ ಮಗನನ್ನು ಆಗಿಂದಾಗ್ಗೆ ಕೇಳಿಕೊಳ್ಳುವ ತಂದೆ, ಗಾಂಜಾ ಸಾಗಾಟ ಮಾಡಲು ಒಪ್ಪದೆ ಲಾರಿ ಕೆಲಸ ಬಿಟ್ಟು ಬಂದು, ತಂದೆಯೊಂದಿಗೇ ಗುಂಡು ಹಾಕುವ ಪ್ರಾಮಾಣಿಕ ಮಗ, ಚಾಲಕ ವೃತ್ತಿ ಮಾಡುವ ಈತ ಕೆಲಸ ಬಿಟ್ಟು ತಂದೆಯ ಚಿಕಿತ್ಸೆ ಮಾಡಲು ಹಣವಿಲ್ಲದೆ ಸಾಲ ಮಾಡಿರುತ್ತಾನೆ, ತಂದೆಯನ್ನು ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ, ಸಾಲಗಾರರಿಂದ ಒದೆ ತಿನ್ನುತ್ತಾನೆ, ಪತ್ನಿ ಮಕ್ಕಳ ಉಪವಾಸವಿಕ್ಕಿರುತಾನೆ.ಬದುಕು ಕತ್ತಲಲ್ಲಿರುತ್ತದೆ, ತಂದೆಗೂ ಇದೆಲ್ಲ ಸಾಕಾಗಿರುತ್ತದೆ, ನೋವು ಕೊಲ್ಲುವ ಮೋರ್ಫಿನ್ ಇಂಜಕ್ಷನ್ ತರುವುದಕ್ಕಿನ್ನು ಮಗನಲ್ಲಿ ದುಡ್ಡೇ ಇಲ್ಲ, ಹೇಗಾದರೂ ಸಾವು ನಿಚ್ಚಳ, ಇನ್ನು ಬದುಕಿ ಮಗನಿಗೆ ಹೊರೆಯಾಗುವುದು ಬೇಡ, ಹಾಗಾಗಿ ಕೊಂದು ಬಿಡು ಮಗನೇ ಎಂದು ತಂದೆಯೇ ಬೇಡಿಕೊಳ್ಳುತ್ತಾನೆ, ಬದುಕಿನ ಒಗಟಲ್ಲಿ ಸಿಲುಕಿದ ಮಗನ ಕೈಗಳೇ ತಂದೆಯ ಕೊರಳಿಗೆ ಉರುಳಾಗುತ್ತವೆ ಆತನಿಗೆ ಅರಿವಿಲ್ಲದಂತೆಯೇ.
ಹಾಗೆ ಜೇಲು ಸೇರುವ ಮಗನ ನೆರವಿಗೆ ಬರುವ ವಕೀಲನಿಗೆ, ತನ್ನ ವಾದ ವೈಖರಿಯನ್ನು ನ್ಯಾಯಾಲಯದಲ್ಲಿ ಜಾಹೀರು ಪಡಿಸಲು ಇದೊಂದು ರೀತಿ ಕೊನೆ ಅವಕಾಶ. ಬದುಕಿನಲ್ಲಿ ಸೋಲು ಕಂಡ ವಕೀಲನಿಗೆ ನಾಳೆ ಕೋರ್ಟಲ್ಲಿ ವಾದ ಮಾಡಬೇಕಾದರೆ, ಅದರ ಒಂದು ರಿಹರ್ಸಲ್ ಜೇಲಿನಲ್ಲೇ ನಡೆದರೆ ಹೇಗೆ ಎಂಬ ಯೋಚನೆ.
ಹಾಗೆ ತೆರೆದುಕೊಳ್ಳುತ್ತದೆ ಈ ನಾಟಕ. ಕೈದಿಯೇ ಇಲ್ಲಿ ಸಾಕ್ಷಿ ಸೇತುರಾಮನಾಗುತ್ತಾನೆ, ಸಾಲ ನೀಡಿ ಪೀಡಿಸುವ ಶೆಟ್ಟಿಯಾಗುತ್ತಾನೆ, ಪೋಸ್ಟ್‌ಮಾರ್ಟೆಂ ಮಾಡಿದ ವೈದ್ಯನಾಗುತ್ತಾನೆ, ಮೇಲಾಗಿ ನ್ಯಾಯಾಧೀಶನಾಗುತ್ತಾನೆ. ಈ ಅವಧಿಯಲ್ಲಿ ಇಡೀ ನಾಟಕದ ವಸ್ತು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ವ್ಯವಸ್ಥೆಯ ವ್ಯಂಗ್ಯ, ಲೇವಡಿ, ಬಡತನದ ಬೇಗೆ ಇವೆಲ್ಲವನ್ನೂ ಕಟ್ಟುವ ಈ ನಾಟಕದ್ದು ರಿಕ್ತ ರಂಗಭೂಮಿ ಅಥವಾ poor theatre ಶೈಲಿ.
ಕಾಲ್ಪನಿಕ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯಲ್ಲಿ ಮಾನವೀಯತೆಯ ದೈನ್ಯ ಮತ್ತು ಕಾನೂನಿನ ಕಾಠಿಣ್ಯಗಳ ತಿಕ್ಕಾಟ. ಕೊನೆಯಲ್ಲಿ, ಕೈದಿಯ ಪ್ರಶ್ನೆಗೆ ವಕೀಲರ ಉತ್ತರ ಹೀಗಿರುತ್ತದೆ-
ಕಾನೂನಿನ ಹೃದಯದಲ್ಲಿ ಮನುಷ್ಯನಿದ್ದರೆ ನಿನಗೆ ಫಾಶಿಯಾಗದು, ಆದರೆ ಕಾನೂನು ಕಲ್ಲಾದರೆ....
ಈ ಪ್ರಶ್ನೆಯನ್ನು ನೋಡುಗರ ಮನದಲ್ಲಿ ಆಳವಾಗಿ ಊರುತ್ತಾ ನಾಟಕದ ತೆರೆಬೀಳುತ್ತದೆ.
ಭರ್ತಿ ಆರು ದಶಕ ಕಾಲ ರಂಗಭೂಮಿ, ಸಿನಿಮಾಗಳಲ್ಲಿ ಕೆಲಸ ಮಾಡಿದ ಸುವರ್ಣರಿಗೀಗ ಎಂಭತ್ತು. ಅವರ ಮೂರು ನಾಟಕಗಳಾದ ಉರುಳು, ಮಳೆ ನಿಲ್ಲುವವರೆಗೆ ಹಾಗೂ ಕೋರ್ಟ್ ಮಾರ್ಷಲ್ ೨೧, ೨೨, ೨೩ರಂದು ನಾಟಕೋತ್ಸವ ನಿಮಿತ್ತ ಪುರಭವನದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಸುವರ್ಣರ ನಾಟಕದ ಉತ್ಸಾಹಕ್ಕೊಂದು ಸಲಾಂ....
Subscribe to:
Posts (Atom)