ವರುಷಗಳು ಉರುಳಿದಂತೆಯೇ ನಮ್ಮ ದೇಶದ ಮಹಾತ್ವಾಕಾಂಕ್ಷೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಪ್ರಪಂಚದ ಅತೀ ಮುಂದುವರಿದ ರಾಷ್ಟ್ರವಾಗಬೇಕು, ಪ್ರಗತಿಗೆ ಪ್ರತಿಯೊಬ್ಬರೂ ಪಾಲುದಾರರಾಗಬೇಕು ಎಂದು ನಮ್ಮ ಹೆಚ್ಚಿನ ನಾಯಕರೂ ಆಗಾಗ ‘ಕರೆ’ ಕೊಡುತ್ತಿರುತ್ತಾರೆ.
ಈ ಪ್ರಗತಿಯ ಚಕ್ರದಡಿಗೆ ಸಿಲುಕಿ ನರಳುತ್ತಿರುವುದು ಮಾತ್ರ ಕೃಷಿಕರು. ಕೃಷಿಕರಿಗೆ ಸೌಲಭ್ಯ ನೀಡುವ ನೆಪದಲ್ಲಿ ಸರ್ಕಾರಗಳು ಅವರನ್ನು ಸಾಲಗಾರರಾಗಿ ಮಾಡಿವೆ ಹೊರತು ಸ್ವಾವಲಂಬಿಗಳಾಗಲು, ದೂರಗಾಮಿ ದೃಷ್ಟಿಯಿರುವ ಅನ್ನದಾತರಾಗಿ ಮಾಡುವತ್ತ ದೃಷ್ಟಿಹರಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಇದಕ್ಕೊಂದು ತಾಜಾ ನಿದರ್ಶನ. ಇಲ್ಲಿನ ಕೃಷಿಭೂಮಿಯೆಲ್ಲ ಎಂಆರ್‌ಪಿಎಲ್, ನಾಗಾರ್ಜುನ, ವಿಶೇಷ ಆರ್ಥಿಕ ವಲಯ ಪಾಲಾಗುತ್ತಿದೆ, ಭತ್ತ ಬೆಳೆಯುತ್ತಿರುವ ಗದ್ದೆಗಳಲ್ಲಿ ದಢೀರ್ ಮಣ್ಣು ತುಂಬಿ ಕಟ್ಟಡ ಏಳುತ್ತಿದೆ, ಎಲ್ಲರೂ ಹಣದ ಹಿಂದೆ ಬಿದ್ದರೆ ನಾಳೆ ಅನ್ನ ಸಿಗುವುದೆಲ್ಲಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕೀತೇ?
ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸಿದವರು ಇಲ್ಲಿನ ಕುಪ್ಪೆಪದವಿನ ಕೃಷಿಕ ನೀಲಯ್ಯ ಅಗರಿಯವರು. ಇವರು ತಮ್ಮ ಮಿತ್ರರೊಂದಿಗೆ ಸೇರಿಕೊಂಡು ಭತ್ತದ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯೊಂದನ್ನು ಏರ್ಪಡಿಸಿದರು.
ಇದಕ್ಕೆ ಯಾರನ್ನೋ ಕರೆಯಲಿಲ್ಲ ನೆರೆಹೊರೆಯ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಕರೆದರು. ಬಂದವರಿಗೆ ತುಳುನಾಡಿನ ಬೇಸಾಯ ಆಧರಿತ ಜೀವನಕ್ರಮದ ಬಗ್ಗೆ ಜನಪದ ತಜ್ಞ ಡಾ.ಗಣೇಶ್ ಅಮೀನ್ ಸಂಕಮಾರ್ ಮನಮುಟ್ಟುವಂತೆ ಮಾತನಾಡಿದರು.
ಅಗರಿಯ ಬಾಕಿಮಾರು ಗದ್ದೆಯಲ್ಲಿ ಕೋಣ, ಎತ್ತು ಜೋಡಿಗಳು, ಉಳುವವರು ಸಿದ್ಧರಾಗಿದ್ದರೆ, ಬೇಸಾಯ ಮಾಡುವ ಮಹಿಳೆಯರೂ ವೀಳ್ಯ ಏರಿಸಿಕೊಂಡು ಕುಳಿತಿದ್ದರು.
ಕೊನೆಗೆ ಭತ್ತದ ನಾಟಿ ಮಾಡುವ ವಿಧಾನದ ಪ್ರಾತ್ಯಕ್ಷಿಕೆ. ಇಲ್ಲಿ ತಜ್ಷರೆಂದರೆ ಇದೇ ಬೇಸಾಯದ ಮಹಿಳೆಯರು. ಶ್ರೀ(systematic rice intensification) ವಿಧಾನದಲ್ಲಿ ಮಡಿ ಮಾಡಲಾದ ಜಯ ಭತ್ತದ ಸಸಿಗಳನ್ನು ಮಹಿಳೆಯರು ನೆಡುವುದಕ್ಕೆ ಆರಂಭಿಸಿದರೆ, ನಂತರ ಅವರನ್ನು ನೋಡಿದ ವಿದ್ಯಾರ್ಥಿಗಳೂ ಮಹಿಳೆಯರ ‘ಓಬೇಲೆ’ ಹಾಡಿಗೆ ದನಿಗೂಡಿಸುತ್ತಾ ಸಸಿ ನೆಡತೊಡಗಿದರು...
ಈ ವಿದ್ಯಾರ್ಥಿಗಳಲ್ಲಿ ಕನಿಷ್ಠ ನಾಲ್ಕು ಮಂದಿಯಾದರೂ ಒಳ್ಳೆಯ ಕೃಷಿಕರಾದರೆ ಅಗರಿಯವರ ಪ್ರಯತ್ನಕ್ಕೆ ಸಾರ್ಥಕತೆ ಬಂದೀತು. ಒಟ್ಟಾರೆಯಾಗಿ ಹೊಸ ಕ್ಯಾಲೆಂಡರ್ ವರುಷದ ಮೊದಲ ದಿನವೇ ಇಂತಹ ಸ್ಫೂರ್ತಿ ತರುವ ಕಾರ್ಯಕ್ರಮ ಆಯೋಜಿಸಲು ಮುಂದಾದವರಿಗೆ ವಂದನೆ, ಇಂತಹ ಆಲೋಚನೆಗಳು ತಡವಾಗಿಯಾದರೂ ಶುರುವಾಗಿರುವುದು ಶುಭಸೂಚಕ!