ಹೊಸ ಡೈರಿ
ಹೊಸ ಕ್ಯಾಲೆಂಡರು
ಕೈಗೆ ಸಿಕ್ಕಾಗಲೊಮ್ಮೆ
ಹುರುಪು, ಹೊಸ ಉತ್ಸಾಹ
ಹಾಗೂ ಬಾಟಲಿ
ಖಾಲಿಯಾಗಿಸುತ್ತಾ......
ತೆಗೆದುಕೊಳ್ಳುವ
ನವವರುಷದ ನಿರ್ಧಾರಗಳು
ಇನ್ನು ಅದನ್ನು ಮಾಡೋದೇ ಇಲ್ಲ
ನಾಳೆಯಿಂದ ನಾನು ಹೊಸ ಮನುಷ್ಯ
ಹೀಗೆ ಏನೇನೋ ಹುಚ್ಚು
ಆಲೋಚಿಸುವ ಕೆಚ್ಚು!
ಕ್ಯಾಲೆಂಡರಿನಲ್ಲಿ ತಿಂಗಳ
ಪುಟಗಳು ಮಗುಚುತ್ತಾ
ಹೋದಾಗ ನದಿಯಲ್ಲಿ ಹೊಸ
ನೀರು ಹರಿಯುತ್ತದೆ
ಮನೆ ಮುಂದಣ ಹಾಸಿನಲ್ಲಿ
ಹುಲ್ಲು ಬಾಡಿರುತ್ತದೆ
ಉತ್ಸಾಹದ ಮೇಲೇರಿ ಕುಳಿತ
ದಿವ್ಯ ಉದಾಸೀನ
ಗಹಗಹಿಸುತ್ತದೆ
...ಮತ್ತದೇ ಡಿಸೆಂ-
ಬರುವುದಕ್ಕೆ ಕಾಯುತ್ತೇನೆ
ಉತ್ಸಾಹವೇರಿಸುವ
ಒಂದು ಪೆಗ್ಗಿನ ನಿರೀಕ್ಷೆಯಲ್ಲಿ