6.8.14

ವಿಭ್ರಮೆ

ಎಷ್ಟುದಿನ ಹೀಗೆ ನೀನು
ಬೇಸಿಗೆಯ ಮೋಡದಂತೆ
ಕಟ್ಟಿ ನಿಲ್ಲಬಲ್ಲೆ
ಒಂದನೇ ತರಗತಿಗೆ ಹೋಗಲೊಪ್ಪದ
ಪೋರನ ಹಾಗೆ
ಗೂಡಿಗೆ ಹೋಗಲೊಪ್ಪದ
ಹಠಮಾರಿ ನಾಯಿಮರಿ
-ಯ ಹಾಗೆ!

ಇನ್ನೇನು ಮಳೆ ಸುರಿದೇಬಿಟ್ಟಿತು
ಎನ್ನುವಾಗಲೇ ಬೀಸಿ
ಬಂದ ಗಾಳಿಗೆ ಮೋಡ ಭಗ್ನ
ಎಂಬ ಹಾಗೆ ಆಗಿದೆ
ಇತ್ತೀಚೆಗೆ ಮನದ
ಭಾವಪರದೆಯಲ್ಲಿ
ಮೂಡುತ್ತಿಲ್ಲ ಚಿತ್ತಾರ

ಪೆನ್ನು ಹಿಡಿದು ಕುಳಿತಾಗಲೂ
ಮಂಜಿನ ದಾರಿಯಲ್ಲಿ ಕುಳಿತ
ಹಾಗೆ, ಕಣ್ಣ ಮುಂದೆ
ಖಾಲಿ ಖಾಲಿ ದಾರಿ
ಹಸಿರಿನ ಇಶಾರೆಗಾಗಿ
ಕಾಯುವ ಕಣ್ಣು
ಪದಗಳ ಪೋಣಿಸುವಲ್ಲಿ
ಸೋಲುವುದೇಕೆ!

image courtesy: http://www.tarachettur.in/
Related Posts Plugin for WordPress, Blogger...