ಅಕ್ಷರಗಳು ಕರಗಿ
ಧ್ವನಿಯಾಗಿ ಬೆಳಕಾಗಿ
ಹೊಳೆಹೊಳೆಯುತ್ತಾ ಹೊರಟಿವೆ
ಎಲ್ಲಿಗೋ!
ಇನ್ನಿಲ್ಲದ ಪಯಣದಂತೆ ಭಾಸವಾಗಿದೆ
ಕಂತುತ್ತಿರುವ ಭಾಸ್ಕರನ ತಣ್ಣನೆಯ
ಕೆಂಬಣ್ಣದ ಬೆಳಕಿನಲ್ಲಿ
ಸಾಗುತ್ತಿದೆ ಕಾಲದ ಬಂಡಿ
ಕಳೆದ ವೈಭವದ ನೆನಪುಗಳ ಹಿಂಡಿ
ಹಾಕುತ್ತಾ ಸಾಗುತ್ತಿದೆ
ಮೊನ್ನೆಮೊನ್ನೆಯ ವರ್ಣಚಿತ್ತಾರದ
ಪರದೆಗಳೆಲ್ಲಾ ಮಸುಕಾಗಿ
ಮೂಲೆಗೆ ಸರಿದಿವೆ..
ಡೈರಿಗಳ ಮೊದಲ ಕೆಲಪುಟಗಳಲ್ಲಷ್ಟೇ
ಹರಕಲು ಅಕ್ಷರಗಳು
ಮತ್ತೆಲ್ಲಾ ಖಾಲಿ ಖಾಲಿ
ಯಾವುದೋ ಉನ್ಮೇಷ
ಯಾಕಾಗಿಯೋ ಭಾವಾವೇಶ
ಎತ್ತಿರಿಸಿದ ಬಾಟಲಿಗಳ
ಒಳಗೆ ಕುದಿಯುತ್ತಿದೆ ನೆತ್ತರು
ನರ್ತನ, ಓಲಾಟ
ಅತ್ತರಿನ ಘಮಲು
ಅಮಿತಾವಾಕಾಶ, ಕಲ್ಪನಾತೀತ
ನಾಳೆಗಳತ್ತ ಅಕ್ಷರಗಳ ಯಾತ್ರೆ
ಯಾತ್ರೆ ಕೊನೆಯೆಂದು!