Sunday, May 31, 2009

ಪ್ರಮೀಳೆಯರಿಲ್ಲದ ಪ್ರಪಂಚ

ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗಿ, ತಾನು ಕೈಹಿಡಿದ ಹುಡುಗಿ ತನ್ನ ಅಧಿಕಪ್ರಸಂಗಿತನಕ್ಕೆ ಬೇಸತ್ತು ವಿಚ್ಛೇದನ ನೀಡಿದ ದಿನ ವಸಂತ ಮಮ್ಮಲ ಮರುಗಿಬಿಟ್ಟ.
ಲೋಕದಲ್ಲೆಲ್ಲೂ ಒಳ್ಳೆಯ ಮನಸ್ಸಿನ ಹೆಂಗಸರೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ. ಅದುವರೆಗೆ ಫೋಟೋದಲ್ಲಿದ್ದ ದೇವರನ್ನು ಕಣ್ಣೆತ್ತಿ ನೋಡದ ಆತ ಅದೊಂದು ರಾತ್ರಿ ನಿಶ್ಚಲ ಮನಸ್ಸಿನಿಂದ ತಪಸ್ಸಿಗೆ ಕುಳಿತ.
ಹೀಗೆ ಕೆಲ ದಿನಗಳುರುಳಿದವು.. ಈ ಐ.ಟಿ ಯುಗದಲ್ಲೂ ಹಸಿವೆ ನಿದ್ದೆಯನ್ನೆಲ್ಲ ಮೆಟ್ಟಿ ನಿಂತ ವಸಂತನ ದೃಢಚಿತ್ತದಿಂದ ಅಚ್ಚರಿಗೊಂಡ ಭಗವಂತ ಅದೊಂದು ಘಳಿಗೆಯಲ್ಲಿ ಧುತ್ತನೆ ವಸಂತನ ಮುಂದೆ ಪ್ರತ್ಯಕ್ಷನಾದ.
ಏನು ಈ ಯುಗದಲ್ಲೂ ನನಗಾಗಿ ತಪಸ್ಸು ಮಾಡುತ್ತಿರುವೆ? ಎಂದು ಕೇಳಿದ. ಹೆಚ್ಚೇನೂ ಸಂಭ್ರಮ ವ್ಯಕ್ತ ಪಡಿಸದ ವಸಂತ ತಣ್ಣನೆ ಸ್ವರದಲ್ಲಿ ಕೇಳಿದ-ನನಗೆ ವರ ಬೇಕು!
ಭ-ವರವೇ? ಏನದು ಹೇಳು?
ವ-ನಾನು ಹೆಂಗಸರಿಂದ ಬಹಳಷ್ಟು ಸೋತು ಹೋದೆ. ವೈಯಕ್ತಿಕ ಜೀವನದಲ್ಲಿ, ವೃತ್ತಿ ಜೀವನದಲ್ಲಿ...ಏನು ಮಾಡಬೇಕು ಎಂದು ತೋಚುತ್ತಿಲ್ಲ.
ಭ-ಅದು ಅವರವರ ಪ್ರಾರಬ್ಧ ಕರ್ಮ. ಎಷ್ಟೋ ಮಂದಿ ಹೆಂಗಸರಿಂದಾಗಿಯೇ ಒಳ್ಳೆಯ ಬದುಕಿನಲ್ಲಿದ್ದಾರೆ. ನೀನು ಮಾತ್ರ ಹೀಗೆ ಹೇಳುತ್ತಿರುವೆ.
ವ-ನನಗೀಗ ವರವ ಕೊಡು ಭಗವಂತ...ನಾನು ಹೆಂಗಸರೇ ಇಲ್ಲದ ಕಾಲದಲ್ಲಿ, ಅಥವಾ ದೇಶದಲ್ಲಿ, ಅಥವಾ ಜಗತ್ತಿನಲ್ಲಿ ಹುಟ್ಟುವಂತಾಗಬೇಕು.
ಭ-ಇದು ಬಹಳ ಪೇಚಿನ ವರ[ಈ ವರ ಕೊಟ್ಟದ್ದು ತಿಳಿದರೆ ಮಹಿಳಾ ಆಯೋಗದವರ ಕಣ್ಣೂ ಕೆಂಪಾದೀತು]. ಕೊಡುವ ಹಾಗಿಲ್ಲ.
ವ-ಇಲ್ಲ, ಕೊಡಲೇ ಬೇಕು...ನನ್ನ ಭಕ್ತಿಗೆ ಅಷ್ಟಾದರೂ ಬೆಲೆ ಕೊಡಬೇಕು.
ದೇವರಿಗೆ ಈ ಹುಲುಮಾನವ ಒಂದಿಷ್ಟೂ ಬೆದರದೆ ಉತ್ತರಿಸಲು ಕಾರಣವನ್ನು ಕೆಲ ನಿಮಿಷ ಕಾಲ ಚಿಂತಿಸಿದ ದೇವರು ಕೊನೆಗೂ ಈ ಯುಗದಲ್ಲಿ ತಾನು ಮೊದಲ ಬಾರಿ ಪ್ರತ್ಯಕ್ಷವಾಗಿರುವಾಗ ಭಕ್ತನನ್ನು ನಿರಾಸೆಗೊಳಿಸ ಬಾರದು ಎಂದು ತೀರ್ಮಾನಿಸಿ ತಥಾಸ್ತು ಎಂದ. ಆದರೆ ಒಂದು ಷರತ್ತು. ನೀನು ಪ್ರಮೀಳೆಯರಿಲ್ಲದ ಜಗತ್ತಿನಲ್ಲಿ ಹುಟ್ಟಬೇಕಾದರೆ ಮೊದಲು ಈಗಲೇ ಸಾಯಬೇಕು(ಯಾವುದಕ್ಕೂ ಒಂದು ಟೆಸ್ಟ್ ಮಾಡೋಣ ಅನ್ನಿಸಿರಬಹುದು) ಎಂದ.
ಒಪ್ಪಿದ ವಸಂತ ದೇವರಿಗೆ ಥ್ಯಾಂಕ್ಸ್ ಕೂಡಾ ಹೇಳದೆ ಹಿಂದಿರುಗಿದ. ಸಾಯುವುದು ಹೇಗೆ ಎಂದು ಚಿಂತಿಸತೊಡಗಿದ.
ಕೊನೆಗೂ ಸಮುದ್ರಕ್ಕೆ ಹಾರುವುದೇ ಲೇಸು ಎಂದುಕೊಂಡು ಕಡಲತಡಿಗೆ ಹೋದ.
ಅಲ್ಲಿ ನೋಡಿದರೆ ಆಗಲೇ ಒಂದು ಜೀವ ನೀರಲ್ಲಿ ಕೈಕಾಲು ಬಡಿಯುತ್ತಿದೆ...ಮತ್ತೆ ಸಾಯೋಣ ಎಂದು ಅನ್ನಿಸಿ ವಸಂತ ನೀರಿಗೆ ಜಿಗಿದ. ಈಜು ಗೊತ್ತಿದ್ದರಿಂದ ಕೈಕಾಲು ಬಡಿಯುತ್ತಿದ್ದವರನ್ನು ಎಳೆದು ತಂದ.
ನೋಡಿದರೆ ಅದೊಂದು ಹೆಣ್ಣು ಜೀವ. ಆಕೆಯನ್ನು ಪಕ್ಕ ಕೂರಿಸಿ ಕಥೆ ಕೇಳಿದ. ಆಕೆಗೆ ಯಾರೋ ಹುಡುಗ ಕೈಕೊಟ್ಟನಂತೆ, ಅದಕ್ಕೆ ನೀರಿಗೆ ಹಾರಿದಳಂತೆ, ಹಾರಿದ ನಂತರ ಬದುಕಬೇಕು ಅನ್ನಿಸಿತಂತೆ, ಆಗಲೇ ವಸಂತ ಕೈಹಿಡಿನಂತೆ...ಹಾಗೆ ಆಕೆ ಹೇಳುವಾಗ ಆಕೆಯ ಕೈ ವಸಂತನ ಕೈಗಳಲ್ಲಿ ಭದ್ರವಾಗಿತ್ತು. ವಸಂತನಿಗೆ ಸದ್ಯಕ್ಕೆ ಭಗವಂತ ತನಗೆ ನೀಡಿದ ವರ, ಅದಕ್ಕೆ ಹಾಕಿದ ಷರತ್ತು ಮರೆತುಹೋಯಿತು..ಆಕೆಯನ್ನು ಭದ್ರವಾಗಿ ಹಿಡಿದು ಕಡಲ ದಂಡೆಯಲ್ಲಿ ಹೆಜ್ಜೆ ಹಾಕಿದ..
ದೇವಲೋಕದಲ್ಲಿ ಕುಳಿತ ಭಗವಂತ ಮತ್ತು ಆತನ ಸಹವರ್ತಿಗಳು ಕೈಚಪ್ಪಾಳೆ ಹಾಕಿದರು...ಕೊನೆಯಲ್ಲಿ ಭಗವಂತ ಈ ಮಾತು ಹೇಳಿದ 'ಈ ಮೂಢ ಹೆಂಗಸರಿಲ್ಲದ ಪ್ರಪಂಚದಲ್ಲಿ ಬದುಕುವುದು ಅಸಾಧ್ಯ, ನಾನು ಮಾಡಿದ ಪರೀಕ್ಷೆಯಲ್ಲಿ ಸೋತ, ನನ್ನನ್ನು ಅನಾವಶ್ಯಕ ಭೂಮಿಗೆ ಬರಹೇಳಿದ್ದಕ್ಕೆ ಆತನಿಗೆ ಇದೇ ತಕ್ಕ ಶಿಕ್ಷೆ'.
ಹಾಗೆ ಭಗವಂತ ಹೇಳುವಾಗ ನೀರಲ್ಲಿ ಮುಳುಗಿ ಉಪ್ಪುಮಿಶ್ರಿತ ನೀರಿನಿಂದ ಒದ್ದೆಯಾಗಿದ್ದ ಆ ತರುಣಿಯೊಂದಿಗೆ ಬೀಚ್ ಪಕ್ಕದ ದೇವಸ್ಥಾನದಲ್ಲಿ ಕೈಮುಗಿಯಲು ಹೋಗುತ್ತಿದ್ದ!

Tuesday, April 28, 2009

ಮೇ ಫ್ಲವರ್ ದಳಗಳು

ಆಗಷ್ಟೇ ಹೂ ಬಿಡುತ್ತಿರುವ
ಮೇಫ್ಲವರಿನ ಮರ
ಕೆಳಗಿನ ಬೆಂಚಲ್ಲಿ
ಕುಳಿತ ನಾನು
ಮರದಲ್ಲಿ ಕುಳಿತ
ಒಂಟಿ ಗಿಣಿಯೂ
ವಿರಹಗೀತೆ ಹಾಡಿದೆವು!

-------------

ನಿನಗಾಗಿ ನಾನು
ಇನ್ನಷ್ಟು ಕಾಯಬಲ್ಲೆ
ಆದರೆ
ನಿನಗಾಗಿ ತಂದು
ಅರ್ಧ ಗಂಟೆಯ ಬಿಸಿಲಿಗೆ
ಒಣಗಿದ ಹೂಗೊಂಚಲುಗಳು
ಬಹುಷಃ ನಿರಾಸೆಗೊಂಡಾವು

--------------

ಕಡಲತಡಿಯ ಮರಳಲ್ಲಿ
ಬರೆದ ನಿನ್ನ ಹೆಸರು
ಮುಂದಿನ ತೆರೆಗೆ
ಕೊಚ್ಚಿ ಹೋಗಬಹುದು
ನನ್ನ ನೆನಪು ನಿನ್ನಲ್ಲಿ ಅಳಿದರೆ
ನಾನೂ ಕೊಚ್ಚಿಕೊಂಡು ಹೋದೇನು!

---------------

ನೀನು ಕೊಟ್ಟ ಕಾಣಿಕೆಗಳು
ಇಂದು ಮನದಲ್ಲಿಲ್ಲ...
ಏನಿದ್ದರೂ ನೀನು
ನನ್ನೆದೆಯಲ್ಲಿ
ಬಿತ್ತಿದ ಕಣ್ಣೀರಿನ
ನೆನಪುಗಳು ಮಾತ್ರ
---------------
ನನ್ನ ಮನದ
ಗೋಡೆಗಳಲ್ಲೆಲ್ಲ
ನಿನ್ನದೇ ಚಿತ್ರಗಳು
ಹೃದಯದ ಡಾರ್ಕ್ ರೂಮಿನಲ್ಲಿ
ಅರಳುತ್ತವೆ ನಗುವಿನ ಅಲೆಗಳು

ಮತ ಭಾರತ - ಮಹಾ ಭಾರತ !

ನಮ್ಮ ರಾಜ್ಯದಲ್ಲಿ ನಿರಂತರ ಎರಡನೇ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆ ಇದು . ಕಳೆದ ವರ್ಷವಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿಸಿದವರು ನಾವು. ನಾಡಿದ್ದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ. ದಕ್ಷಿಣ ಕನ್ನಡದ ಅಲ್ಲಿಂದಿಲ್ಲಿಂದ ಪ್ರಚಾರ, ಅದಕ್ಕೆ ಸಿಕ್ಕೋ ಮತದಾರ ಬಾಂಧವನ ಸ್ಪಂದನದ ವರದಿ ನೋಡುವಾಗಲೇ ಏಕೋ ಈ ಬಾರಿ ಸಪ್ಪೆ ಅನ್ನಿಸುತ್ತಿತ್ತು. ಮೊದಲ ಹಂತದ ಚುನಾವಣೆ ಮುಗಿದದ್ದು ಏಪ್ರಿಲ್ 23ರಂದು. ಮತದಾನದ ಶೇಕಡಾವಾರು ನೋಡಿದರೆ ಶೇ.೫೭. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿ ಶೆ.೪೫ರ ಆಜುಬಾಜಿನಲ್ಲಷ್ಟೇ ಮತದಾನವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಷ್ಟೂ ಮತದಾನ ಹೆಚ್ಚಾಗಬೇಕಿತ್ತು. ಆದರೆ ಇಲ್ಲಿ ವ್ಯತಿರಿಕ್ತ. ನೆರೆಯ ಕೇರಳ ರಾಜ್ಯದಲ್ಲಿ ಶೆ.೭೩ರಷ್ಟು ಮತದಾನವಾಗಿದೆ. ಆ ಮೂಲಕ ೨೦೦೪ರ ಚುನಾವಣೆಯಲ್ಲಿನ ಶೇ.೭೧ರ ದಾಖಲೆಯನ್ನು ಅದೇ ರಾಜ್ಯ ಹಿಂದಿಕ್ಕಿತು.

ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಪ್ರಚಾರವನ್ನು ಚುನಾವಣೆಗೆ ಕೊಡಲಾಗಿತ್ತು. ಎಲ್ಲಾ ಮಾಧ್ಯಮಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಪವಿತ್ರ ಕಾರ್ಯ, ಆದರೆ ಮತ ಮಾರಿಕೊಳ್ಳಬಾರದು ಎಂಬ ಅಂಶವನ್ನು ಪದೇ ಪದೇ ಹಾಳುತ್ತಾ ಬಂದಿವೆ. ಆದರೂ ಮತದಾನದ ದಿನ ಮಾತ್ರ ನಮ್ಮಲ್ಲಿ ಮಾತ್ರ ಯಾಕೀ ನಿರಾಸಕ್ತಿ.
ಮತದಾರರನ್ನೇ ಕೇಳಿದರೆ, ಅಯ್ಯೋ ಎಲ್ಲಾರೂ ಒಂದೇನೇ. ಅವರನ್ನು ಆರಿಸಿ ತಪ್ಪು ಮಾಡೋದು ಯಾಕೆ ಎಂಬಂತಹ ಜನರಲೈಸ್ಡ್ ಉತ್ತರ ಸಿಗುತ್ತವೆ. ಇಷ್ಟು ಸಲ ಮತದಾನ ಮಾಡಿದ್ದೇವೆ, ಏನೂ ಅಭಿವೃದ್ಧಿ ಆಗಿಲ್ಲ ಎಂಬ ಸಿನಿಕ ಹೇಳಿಕೆಗಳೂ ಸಿಗುತ್ತವೆ.
ಹಾಗೆ ನೋಡಿದರೆ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಈಗೀಗ ಚುನಾವಣೆ ಅನ್ನಿಸುವುದೇ ಇಲ್ಲ. ನಾನು ಸಣ್ಣವನಿದ್ದಾಗ ಪಾರ್ಟಿಯೊಂದರ ಕಾರ್ಯಕರ್ತರೊಂದಿಗೆ ರಾತ್ರಿ ರಸ್ತೆಯಲ್ಲಿ ಸುಣ್ಣ ಬಳಸಿ ----ಪಕ್ಷಕ್ಕೆ ಮತ ದೇಶಕ್ಕೆ ಹಿತ, ಮುಂತಾದ ಘೋಷಣೆ ಬರೆಯಲು ಹೋಗುತ್ತಿದ್ದೆ. ಜೀಪ್‌ಗಳಲ್ಲಿ ರಾಗವಾಗಿ ಘೋಷಣೆ ಹೇಳುತ್ತಾ ಮತಯಾಚಿಸುವುದನ್ನು ಕೇಳಲು ಖುಷಿಯಿತ್ತು. ಮನೆಯಲ್ಲಿಯೂ ರಾಜಕೀಯ ಪ್ರಭಾವ ಸಾಕಷ್ಟಿತ್ತು, ಮಾವ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರಾಗಿದ್ದರು. ಆಗ ಮತದಾನವೆಂದರೆ ಒಂದು ಸಂಭ್ರಮ, ಅದರಲ್ಲಿ ಊರಿಗೆ ಊರೇ ಪಾಲ್ಗೊಳ್ಳುತ್ತಿತ್ತು ಕೂಡಾ.
ಈಗ ಎಲ್ಲೂ ಬ್ಯಾನರ‍್ಗಳಿಲ್ಲ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ‍್ ಕೂಡಾ ತೆಗೆಸಲಾಗುತ್ತದೆ! ಬ್ಯಾನರ್‌ಗಳಿಲ್ಲದೆ ನಗರ ಸುಂದರವಾಗಿ ಕಾಣುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಯೋಗದ ಕಟ್ಟುನಿಟ್ಟಿನ ಕ್ರಮವಿರುವುದೇನೋ ನಿಜ, ಆದರೆ ಜನರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿದಂತೆ ಕೂಡಾ ಗೋಚರಿಸುತ್ತದೆ. ಹಾಗಾಗಿಯೇ ಅಲ್ಲಿಂದಿಲ್ಲಿಂದ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿಬರುತ್ತವೆ.
ಕಾರಣ ಹೀಗಿರಬಹುದೇ?
ಇದರಲ್ಲಿ ಎಲ್ಲಾ ಪಕ್ಷದವರ, ಸರ್ಕಾರಗಳ ಪಾಲೂ ಇದೆ. ಅನೇಕ ದಶಕಗಳಿಂದ ಸರಿಯಾದ ರಸ್ತೆ ಇಲ್ಲದಿರುವ, ಸಂಪರ್ಕಕ್ಕೆ ಸೇತುವೆ ಇಲ್ಲದ, ಮಳೆಗಾಲದಲ್ಲಿ ದ್ವೀಪವಾಗುವ ಊರುಗಳು ಇನ್ನೂ ನಮ್ಮಲ್ಲಿವೆ. ಇಂತಹ ಕಡೆಗಳ ಜನ ಮತ ಹಾಕಿದರೂ ತಮಗೇನೂ ಲಾಭವಿಲ್ಲದಿರುವಾಗ ಹೋಗಿ ಏನು ಪ್ರಯೋಜನ ಎಂದು ತಿಳಿದುಕೊಳ್ಳುವುದು ಸಹಜ.
ಪಕ್ಷಗಳ ನಾಯಕರು ಪರಸ್ಪರ ಕೆಸರೆರಚುವುದು, ಕೈ ಕತ್ತರಿಸುವ, ತಲೆ ಕಡಿಯುವ, ತಿಥಿ ಮಾಡುವಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಇವೆಲ್ಲಾ ಈಗೀಗ ಹೆಚ್ಚಿರುವುದು ಜನರ ಸಿನಿಕತನ ಹೆಚ್ಚಲು ಕಾರಣ ಅನಿಸುತ್ತದೆ. ಜಿಲ್ಲೆಯ ಹಿರಿಯರೊಬ್ಬರಲ್ಲಿ ಈಚೆಗೆ ಚುನಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೆ. ಹಿಂದಿನ ವೈಭವದ ಬಗ್ಗೆ ಅವರೂ ಹೇಳಿಕೊಂಡರು. ಹಿಂದೆ ವ್ಯಕ್ತಿಯೊಬ್ಬನ ವೈಯಕ್ತಿಕ ಚಾರಿತ್ಯ್ರ ಆತನಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡುತ್ತಿತ್ತು. ಅಂದು ನಾಯಕರ ಭಾಷಣಗಳನ್ನು ಕುಳಿತುಕೊಂಡು ಕೇಳುವಂತಿತ್ತು. ಈಗ ವೈಯಕ್ತಿಕ ತೇಜೋವಧೆ ಮಾಡುವುದೇ ಭಾಷಣ ಎಂಬಂತಾಗಿದೆ. ನಮ್ಮ ಹಕ್ಕು ಎಂದು ಮಾತ್ರ ಮತದಾನ ಮಾಡಬೇಕೇ ಹೊರತು ನಿಜಕ್ಕೂ ಮತದಾನ ಮಾಡಲು ಆಸಕ್ತಿ ಇಲ್ಲ ಎಂಬುದು ಆ ಹಿರಿಯರ ಅಭಿಪ್ರಾಯವಾಗಿತ್ತು.
ಹಾಗೆಂದರೆ ನಾವು ಇನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸುವಂತಿಲ್ಲವೇ?
ಹಾಗೆಂದುಕೊಳ್ಳಬೇಕಿಲ್ಲ. ಇನ್ನೂ ಮತದಾನ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ(ಇ-ವೋಟಿಂಗ್‌ ಮಾದರಿಯಲ್ಲಿ) ವಿದ್ಯಾವಂತರಿಂದ ಹೆಚ್ಚು ಮತದಾನ ನಿರೀಕ್ಷಿಸಬಹುದು. ಈಗೀಗ ವಿದ್ಯಾವಂತ ಅಭ್ಯರ್ಥಿಗಳೂ ಚುನಾವಣೆಗೆ ಧುಮುಕಿ(ಹಣ ಹೆಂಡದ ಹೊಳೆಯ ನಡುವೆಯೂ) ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆ ಅಲ್ಲೊಂದು ಇಲ್ಲೊಂದು ಇರಬಹುದು, ಆದರೆ ಇದನ್ನು ಮತದಾರರು ಪ್ರೋತ್ಸಾಹಿಸಿದರೆ ಮುಂದೆ ಇಂತಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಲೂ ಬಹುದು.
......ನಾಡಿದ್ದು ಎರಡನೇ ಹಂತದ ಮತದಾನ. ಕಳೆದ ಸುಮಾರು ೩೦ ದಿನಗಳಿಂದ ರಜೆಯಿಲ್ಲದ ದುಡಿಮೆ, ಹಾಗಾಗಿ ಬ್ಲಾಗ್ ಅಪ್‌ಡೇಟಾಗಿಲ್ಲ. ಮತಸಮರದ ಅಂತಿಮ ಹಂತದಲ್ಲಿ ಅದೇ ವಿಷಯವನ್ನೇ ಇಲ್ಲಿಯೂ ಇಳಿಸೋಣ ಅನ್ನಿಸಿತ್ತು...ನಿಮ್ಮ ಅಮೂಲ್ಯ ಸಲಹೆ, ಪ್ರತಿಕ್ರಿಯೆ ಇರಲಿ.....