12.2.13

ಕಿಟಿಕಿಯಲ್ಲಿನ ಮುಖಗಳು

ಮನೆಯ ಕೊಠಡಿಯ
ಪುಟ್ಟ ಕಿಟಿಕಿಯ ಮುಂದೆ ಕುಳಿತು
ತೆರೆ ಸರಿಸಿದರೆ
ಅರಳಿಕೊಳ್ಳುತ್ತವೆ ಮುಖಗಳು
ಗೊತ್ತಿರುವವರು,
ಗೊತ್ತಿದ್ದು ಗೊತ್ತಾಗದಂತೆ
ಉಳಿದವರು ಹಲವರು
ಮಿತ್ರರು, ಸಂಗಾತಿಗಳು
ಕಿಟಿಕಿ ಸಂದಿನಲ್ಲಿ
ಮಿಂಚಿ ಮರೆಯಾಗುತ್ತವೆ
ಅಪರಿಚಿತರ ಸಾವಿರಾರು
ಇಣುಕು ನೋಟಗಳು

ದಿನವಿಡೀ ತಮ್ಮದೇ
ಕಿಟಿಕಿಯ ಮುಂದೆ ಕುಳಿತಿರುವವರು
ಪ್ರಪಂಚವೆಂದರೆ ಕಿಟಿಕಿ
ಎಂದೇ ತಿಳಿದುಕೊಂಡವರು
ಹಲ್ಲುಜ್ಜಿದ್ದರಿಂದ ತೊಡಗಿ
ಕಂಡ ಕನಸಿನ ಬಗ್ಗೆ ಹೇಳಿಕೊಳ್ಳುವವರು
ಭಾವನೆಗಳಿಗೆ ಮಾರುಕಟ್ಟೆ
ಕಾಣಹೊರಟವರು

ವೇದನೆಯಿದ್ದೂ ಪ್ರೀತಿ ಹಂಚುವವರು,
ಹಿಡಿಯಷ್ಟು ಅಕ್ಕರೆಗೆ ಕಾದವರು,
ಬಡಾಯಿಕೊಚ್ಚಿಕೊಳ್ಳುವವರು
ಮಾಡಿದ ಎಡವಟ್ಟನ್ನೂ
ಮೆಚ್ಚಿಕೊಳುವ ಹೊಗಳುಭಟರು
ಮುಖ ಇರುವವರು,
ತಮ್ಮ ಮುಖಕ್ಕೆ ಬೇರೆ
ಮುಖವಾಡ ಧರಿಸಿಕೊಂಡವರು


ಕಿಟಿಕಿ ಇವರಿಗೆಲ್ಲ
ಒಂದು ನಾಟಕದ ಪರದೆ ಇದ್ದಂತೆ!
ದಿನವೂ ರಂಜಿಸುತ್ತಾರೆ,
ಲೋಕದ ದುಃಖಕ್ಕೆ ಕಣ್ಣೀರು
-ಗರೆಯುತ್ತಾರೆ
ನೂರೆಂಟು ಕಾರಣಕ್ಕೆ ಕೈಗೂಡಿಸಲು
ಕರೆಯುತ್ತಾರೆ


ಎಲ್ಲರಿಗೂ ಗೊತ್ತಿದೆ ಅವರ ಮನೆಗಳಲ್ಲಿ
ಕಿಟಿಕಿಯಷ್ಟೇ ಅಲ್ಲ ವಿಶಾಲವಾದ
ಬಾಗಿಲುಗಳೂ ಇರುತ್ತವೆ!

9.2.13

ಅಕ್ಕಿ ಇದ್ದರೆ ಕೊಡಿ!

ಬ್ರೆಡ್ ಜಾಮ್ ತಿಂದೂ..
ತಿಂದು
ಸಾಕೆನಿಸಿದೆ,
ಪಿಜ್ಜಾ, ಹಾಟ್ ಡಾಗ್
ಅರಗಿಸಿಕೊಳ್ಳುತ್ತಿಲ್ಲ
ಇದ್ದರೆ ಕೊಡಿ
ಅಕ್ಕಿ
ಒಂದು ಹಿಡಿ

ಬದಲಿಗೆ ನಿಮಗೇನು ಬೇಕು?
ಕಂತೆ ನೋಟು ಕೊಟ್ಟೇವು,
ಕಂಪ್ಯೂಟರ್ ಬೇಕಾದರೆ ಹೇಳಿ,
ಸಾಫ್ಟ್ ವೇರ್ ಹಾರ್ಡ್ ವೇರ್ ಇದೆ ನಮ್ಮಲ್ಲಿ
ರಂಜನೆಯ ಬ್ರೇಕಿಂಗ್ ನ್ಯೂಸಿದೆ
ನಮಗೆ ಅಕ್ಕಿ ಮಾತ್ರ ಬೇಕೇಬೇಕು!

ನಮ್ಮೂರಲ್ಲಿ ಗದ್ದೆ ಇಲ್ಲ,
ಇದ್ದರೆ ಬೆಳೆಯುತ್ತಿದ್ದೆವು
ಖಾಲಿ ಜಾಗ ಹುಡುಕಾಡಿ
ಬಂದಿದ್ದೇವೆ, ಅರಣ್ಯಗಳಿಲ್ಲದೆ
ಬರೀ ಜನಾರಣ್ಯಗಳೇ ಇಲ್ಲಿ.
ಹತ್ತಿರವೇಕೆ ದೂರದೂರಕ್ಕೂ
ನಾವು ಅಭಿವೃದ್ಧಿ ಹೊಂದಿದ್ದಾಗಿದೆ
ನಮ್ಮ ದೇಶವೀಗ ಅಗ್ರಪಂಕ್ತಿಗೇರಿದೆ
ನಮ್ಮಲ್ಲಿರುವ ಯುದ್ಧವಿಮಾನಗಳು
ನೆರೆಯಲ್ಲೆಲ್ಲೂ ಇಲ್ಲ.
ತಿನ್ನುವುದಕ್ಕೆ ಅಕ್ಕಿ ಮಾತ್ರ ಇಲ್ಲ

ಗದ್ದೆ ಇರುವ ಊರು ಹುಡುಕುತ್ತಾ
ಇಲ್ಲಿಗೆ ಬಂದಿದ್ದೇವೆ.
ಇದ್ದರೆ ಅಕ್ಕಿ ಕೊಡಿ.


(ಅಭಿವೃದ್ಧಿಯ ಭ್ರಮೆಯಲ್ಲಿರುವ ನಮಗೆ ಇಂತಹ ಪರಿಸ್ಥಿತಿ ಬಾರದಿರಲಿ)
Related Posts Plugin for WordPress, Blogger...