31.12.25

ಹೊಸವರ್ಷವೆಂಬ ಒಗಟು

ಅಕ್ಷರಗಳು ಕರಗಿ 

ಧ್ವನಿಯಾಗಿ ಬೆಳಕಾಗಿ

ಹೊಳೆಹೊಳೆಯುತ್ತಾ ಹೊರಟಿವೆ

ಎಲ್ಲಿಗೋ!

ಇನ್ನಿಲ್ಲದ ಪಯಣದಂತೆ ಭಾಸವಾಗಿದೆ

ಕಂತುತ್ತಿರುವ ಭಾಸ್ಕರನ ತಣ್ಣನೆಯ

ಕೆಂಬಣ್ಣದ ಬೆಳಕಿನಲ್ಲಿ

ಸಾಗುತ್ತಿದೆ ಕಾಲದ ಬಂಡಿ

ಕಳೆದ ವೈಭವದ ನೆನಪುಗಳ ಹಿಂಡಿ

ಹಾಕುತ್ತಾ ಸಾಗುತ್ತಿದೆ 

ಮೊನ್ನೆಮೊನ್ನೆಯ ವರ್ಣಚಿತ್ತಾರದ

ಪರದೆಗಳೆಲ್ಲಾ ಮಸುಕಾಗಿ 

ಮೂಲೆಗೆ ಸರಿದಿವೆ..

ಡೈರಿಗಳ ಮೊದಲ ಕೆಲಪುಟಗಳಲ್ಲಷ್ಟೇ 

ಹರಕಲು ಅಕ್ಷರಗಳು 

ಮತ್ತೆಲ್ಲಾ ಖಾಲಿ ಖಾಲಿ

ಯಾವುದೋ ಉನ್ಮೇಷ

ಯಾಕಾಗಿಯೋ ಭಾವಾವೇಶ

ಎತ್ತಿರಿಸಿದ ಬಾಟಲಿಗಳ

ಒಳಗೆ ಕುದಿಯುತ್ತಿದೆ ನೆತ್ತರು

ನರ್ತನ, ಓಲಾಟ

ಅತ್ತರಿನ ಘಮಲು

ಅಮಿತಾವಾಕಾಶ, ಕಲ್ಪನಾತೀತ

ನಾಳೆಗಳತ್ತ ಅಕ್ಷರಗಳ ಯಾತ್ರೆ

ಯಾತ್ರೆ ಕೊನೆಯೆಂದು!


1.1.23

ಮಸುಕಾದ 2022ರ ಡೈರಿಯಿಂದ....

                           -1-

ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ, 

ಕಳೆದ ವರ್ಷದ ನೋವುಗಳೆಲ್ಲವನ್ನೂ 

ಮನದ ಮೂಲೆಗೆ ತಳ್ಳಿ ದೂ....ರದಲ್ಲಿ 

ಸಿಡಿದು ಮಿನುಗುವ ಬೆಳಕಿನ ಪುಂಜಗಳ 

ಬೆನ್ನಿಡಿದು ಓಡುವ ಉತ್ಸಾಹ...

ಈ ವರ್ಷ ʻಅದನ್ನುʼ ಮಾಡಿಯೇ 

ತೀರಬೇಕೆಂಬ ಹೊಸ ನಿರ್ಧಾರಗಳ ಭೋರ್ಗರೆತ

ಹೊಸ ಡೈರಿಯಲ್ಲಿ 

ದಿನದಿನವೂ ಬದುಕಿನ 

ಹೆಜ್ಜೆಗುರುತುಗಳ ಗೀಚಿ 

ಕಾಪಿಡುವ ಹುಮ್ಮಸ್ಸು








              -2-

ಹೊಸವರ್ಷ ಸ್ವಾಗತಕ್ಕೆ 

ಶೀಷಾವಿನೋದದಲ್ಲಿ ಮುಳುಗೆದ್ದು 

ಮರುದಿನ ಸೂರ್ಯಮುಳುಗುವರೆಗೆ 

ಕಣ್ಬಿಡಲಾರದೆ ಒದ್ದಾಟ 

ಹಳೆಯ ಕನಸುಗಳು, 

ದುಃಖ ದುಮ್ಮಾನಗಳ 

ಹ್ಯಾಂಗೋವರ್‌, ವಾಂತಿ.

ಹೊಸ ಕ್ಯಾಲೆಂಡರಿನ ಪುಟಗಳು 

ಮ.ಗು.ಚು.ತ್ತಾ 

ಹೋದಂತೆಯೇ 2023ರ 

ಅಕ್ಷರಗಳು ಮಸುಕು

ಖಾಲಿ ಉಳಿದ ಡೈರಿಯ ಪುಟ

ಭಾರವಾಗಿ ಉಳಿದ ಮನ

ಮತ್ತೆ ವರ್ಷಾಂತ್ಯಕ್ಕೆ ಗಮನ


-ವೇಣುವಿನೋದ್

01-01-2023


Related Posts Plugin for WordPress, Blogger...