ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಕಾಣಿಸಿಕೊಂಡ ನಕ್ಸಲರು, ಅವರನ್ನು ಬೆನ್ನು ಹಿಡಿಯುವ ನೆಪದಲ್ಲಿ ಚಾರಣಿಗರನ್ನು ಹಿಂಡುವ ಪೊಲೀಸ್, ಅರಣ್ಯ ಇಲಾಖೆ ಇವೆಲ್ಲದರಿಂದ ಕಳೆದ ವರ್ಷ ನಾವು ಕಂಗೆಟ್ಟಿದ್ದೆವು. ಹಾಗಾಗಿ ದಕ್ಷಿಣತುದಿಯ ನಾಡು ಕೇರಳಕ್ಕೊಮ್ಮೆ ಹೋದರೇನು ಎಂಬ ವಿಚಾರ ಹೊಳೆಯಿತು.
ಕರ್ನಾಟಕಕ್ಕೆ ಹೋಲಿಸಿದರೆ ಜೋಗ, ಕೂಸಳ್ಳಿ, ಅರಶಿನಗುಂಡಿಯತಹ ಜಲಧಾರೆಗಳಿಲ್ಲದಿದ್ದರೂ ಕೇರಳದಲ್ಲಿ ನೈಸರ್ಗಿಕ ರಮಣೀಯ ಜಾಗಗಳಿಗೇನೂ ಕೊರತೆಯಿಲ್ಲ. ಸೈಲೆಂಟ್ ವ್ಯಾಲಿ, ಮನೋಹರ ಹಿನ್ನೀರುಗಳು ಇವೆಲ್ಲದರಿಂದ ಕೇರಳ ಸಮೃದ್ಧ. ಹಾಗಾಗಿ ನೋಡೇ ಬಿಡೋಣ ಎಂದು ಕೇರಳವನ್ನೇ ಆರಿಸಿಕೊಂಡೆವು ನಮ್ಮ ಸುತ್ತಾಟಕ್ಕೆ. ಕೇರಳ ಎಂದಾಗ ಗೆಳೆಯರು ಏನು ಹೇಳ್ತಾರೋ ಎನ್ನುವ ಆತಂಕ ಇತ್ತು. ಆದರೆ, ಗಣಪತಿ, ವಸಂತ, ಕೃಷ್ಣಮೋಹನ ಎಲ್ಲರೂ ಹೋಗೋಣ ಎಂದು ಒಪ್ಪಿಗೆ ಸೂಚಿಸಿಬಿಟ್ಟರು.
ನಮ್ಮ ತಂಡದ ಬಾಲಕೃಷ್ಣ ಹೇಳಿದಂತೆ ಕೇರಳದ ಗುಡ್ಡಗಳ ಜಿಲ್ಲೆ ವಯನಾಡಿನಲ್ಲಿರುವ ಜಲಪಾತ ಸೂಚಿಪಾರ ಫಾಲ್ಸ್ ನಮ್ಮ ಗಮ್ಯ ತಾಣ.
ನಾವು ಹೊರಟಿದ್ದು ಮೇ ತಿಂಗಳ ಸುಡು ಸುಡು ಬಿಸಿಲಲ್ಲಿ. ಮಂಗಳೂರಿಂದ ರಾತ್ರಿ ರೇಲಿನಲ್ಲಿ ಹೊರಟು ಮುಂಜಾನೆ ಕೋಝಿಕೋಡ್ ನಿಲ್ದಾಣದಲ್ಲಿಳಿದೆವು. ನಿಲ್ದಾಣದಲ್ಲಿ ಇಳಿದು ಅಲ್ಲೇ ಇದ್ದ ಕ್ಯಾಂಟೀನಲ್ಲಿ ದಪ್ಪ ದಪ್ಪ ‘ದೋಷಂ’ ತಿಂದು ಕೋಝಿಕೋಡ್ ಬಸ್ ನಿಲ್ದಾಣದಲ್ಲಿ ವಿಚಾರಿಸಿ ವಯನಾಡಿನ ಕೇಂದ್ರ ಸ್ಥಾನವಾದ ಕಲ್ಪೆಟ್ಟಕ್ಕೆ ಹೋಗುವ ಬಸ್ಸೇರಿ ಕುಳಿತೆವು. ಕೋಝಿಕೋಡ್‌ನಿಂದ ಬರೋಬ್ಬರಿ ಮೂರು ಗಂಟೆ ಪ್ರಯಾಣದ ಬಳಿಕ ಕಲ್ಪೆಟ್ಟ ತಲಪಿದೆವು. ಒಂದು ರೀತಿಯಲ್ಲಿ ಹಿಲ್ ಸ್ಟೇಷನ್ ರೀತಿಯೇ ಇದೆ ಕಲ್ಪೆಟ್ಟ. ಊಟಿಗೆ ಹೋಗುವ ರೀತಿಯೇ ಘಾಟ್ ರಸ್ತೆ ಏರುತ್ತಾ ಹೋಗಬೇಕು. ಆದರೆ ಕಲ್ಪೆಟ್ಟದಲ್ಲಿ ನೈಸರ್ಗಿಕ ಸೌಂದರ್ಯವನ್ನು ಆದಷ್ಟು ಕೆಡಿಸಿದ್ದಾರೆ. ಕಾಡು ಕಡಿದು ರಬ್ಬರ್ ಹಾಕಲಾಗಿದೆ. ಅತ್ತ ಕೃಷಿಯೂ ಅಲ್ಲದೆ, ಕಾಡೂ ಇಲ್ಲದೆ ಗುಡ್ಡಗಳು ಬೋಳು...ಜಾಳು.
ಅಂತೂ ಕಲ್ಪೆಟ್ಟ ತಲುಪಿದ್ದಾಯಿತು. ಕಲ್ಪೆಟ್ಟದಲ್ಲಿ ನಮ್ಮ ತಂಡದ ಬಾಲಕೃಷ್ಣರ ದೂರದ ಸಂಬಂಧಿಯೊಬ್ಬರು ಕಲ್ಪೆಟ್ಟದಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಚಾರಣಕ್ಕೆ ಅವರ ನೆರವನ್ನೂ ಕೋರಿದ್ದೆವು. ಅವರ ಮನೆ ಸೇರಿದಾಗ ಮಧ್ಯಾಹ್ನ ೧೨ ಗಂಟೆ. ಮಧ್ಯಾಹ್ನದ ಊಟ ಅಲ್ಲೆ ಮುಗಿಸಿ, ಅವರನ್ನೂ ಸೇರಿಸಿಕೊಂಡು ಜೀಪೊಂದರಲ್ಲಿ ಸೂಚಿಪ್ಪಾರ ಜಲಪಾತಕ್ಕೆ ಹೊರಟೆವು. ವಿಶಾಲ ಟೀ ಎಸ್ಟೇಟುಗಳ ಮಧ್ಯೆ ಸಾಗುತ್ತದೆ ಈ ಹಾದಿ. ಬೇಸಿಗೆಯಾದ್ದರಿಂದ ರಸ್ತೆ ಬರಡಾಗಿತ್ತು. ಜೀಪಿನೊಳಗೆ ಸೆಖೆ ಏಳುತ್ತಿತ್ತು.
ಜಲಪಾತಕ್ಕೆ ಇನ್ನೇನು ೨ ಕಿ.ಮೀ ಇದೆ ಎನ್ನುವಾಗ ಡಾಮರು ರಸ್ತೆ ಕೊನೆಯಾಗುತ್ತದೆ. ಮುಂದಕ್ಕೆ ನಡೆದೇ ಹೋಗಲು ನಿರ್ಧರಿಸಿದೆವು.
ಯಾವುದೇ ಕಷ್ಟವಿಲ್ಲದೆ ನಡೆದು ಹೋಗಬಹುದು ಜಲಪಾತಕ್ಕೆ. ಇಂಟರ್ನೆಟ್‌ನಲ್ಲಿ ಸರ್ಚ್ ಕೊಟ್ಟಾಗ ಕಾಣುವ ಸೂಚಿಪ್ಪಾರ ಫಾಲ್ಸ್ ನೋಡಿದರೆ ಅಷ್ಟೇನೂ ವಿಶೇಷ ಕಾಣುವುದಿಲ್ಲ. ಆದರೆ ಅಲ್ಲಿಗೆ ತೆರಳಿ ಅಡ್ಡಾಡಿದಾಗ ಸೂಚಿಪ್ಪಾರ ಫಾಲ್ಸ್ ಹರವು ತೆರೆದುಕೊಳ್ಳುತ್ತದೆ. ವಿಶಾಲವಾದ ಕಣಿವೆಯಲ್ಲಿ ನೀರು ಹರಿಯುತ್ತಾ ಸಾಗುವುದನ್ನು ನೋಡುವುದೇ ಆಹ್ಲಾದಕರ. ಮಳೆಗಾಲದಲ್ಲಿ ಹೋದರೆ ಇನ್ನಷ್ಟು ಸೂಕ್ತ ಎಂದರು ನಮ್ಮ ಮಾರ್ಗದರ್ಶಿ.
ಸೂಚಿಪ್ಪಾರ ಅಂದರೆ....
ಸೂಚಿಪ್ಪಾರ ಎಂದರೆ ಸೂಜಿಮೊನೆಯಂತಹ ಕಲ್ಲು ಎಂದು ಮಲಯಾಳಂ ಅರ್ಥ. ಈ ಜಲಪಾತ ಹರಿದು ಸಾಗುವ ಕಣಿವೆ ಮೇಲೊಂದು ಸೂಜಿಯಂತಹ ಉದ್ದ ಕಲ್ಲು ಇದ್ದ ಕಾರಣ ಈ ಹೆಸರು ಜಲಪಾತಕ್ಕೆ ಬಂದಿರಬಹುದು ಎನ್ನುತ್ತಾರೆ ಸ್ಥಳೀಯರು. ಆದರೆ ಈಗ ಆ ಕಲ್ಲು ಯಾವುದೋ ಕಾರಣದಿಂದ ಅರ್ಧತುಂಡಾಗಿದೆ.
ಕಣಿವೆಯ ನೋಟದ ಬಳಿಕ ಸೂಚಿಪ್ಪಾರದ ಪ್ರಮುಖ ಜಲಧಾರೆಯ ಬಳಿ ತೆರಳಿ ಮನಸೋ ಇಚ್ಛೆ ಈಜಾಡಿದೆವು. ಬೇಸಿಗೆಯ ತುದಿಯಾಗಿದ್ದರೂ ನೀರಿಗೆ ಕೊರತೆ ಇರಲಿಲ್ಲ.
ನಮಗೆ ಅಂದೇ ಮರಳಬೇಕಾದ ಒತ್ತಡ ಇತ್ತು, ಹಾಗಾಗಿ ವಯನಾಡಿನ ಇನ್ನೊಂದು ಸುಂದರ ಜಲಪಾತ ಮೀನ್ ಮಟ್ಟಿ ಫಾಲ್ಸ್ ನೋಡಬೇಕಿತ್ತು. ಜೀಪ್‌ನಲ್ಲಿ ಹಿಂತಿರುತ್ತಿದ್ದಾಗ ಇನ್ನಷ್ಟು ಗುಡ್ಡಬೆಟ್ಟಗಳೂ ದೂರದಿಂದಲೇ ನಮಗೆ ಆಹ್ವಾನ ನೀಡುತ್ತಿದ್ದವು. ಅವೆಲ್ಲವನ್ನೂ ಇನ್ನೊಂದು ದಿನ ನೋಡುವ ಹಂಬಲದೊಂದಿಗೇ ಹಿಂತಿರುಗಿದೆವು.
ನೆನಪಿರಲಿ...ಕೇರಳದ ತಾಣಗಳಿಗೆ ಹೋಗಬೇಕಾದರೆ ಕನಿಷ್ಠ ಒಂದು ದಿನ ರೈಲು ಪ್ರಯಾಣ ಮಾಡಲೇ ಬೇಕು. ಹಾಗಾಗಿ ಸಾಕಷ್ಟು ರಜೆ ಹಾಕಿ ತೆರಳುವುದೇ ಸೂಕ್ತ. ಇಲ್ಲವಾದರೆ ಪ್ರಯಾಣಕ್ಕೆ ತಕ್ಕಷ್ಟು ಸ್ಥಳ ನೋಡಿದ ತೃಪ್ತಿ ಇರುವುದಿಲ್ಲ. ಅದರಲ್ಲೂ ವಯನಾಡ್ ನೋಡುವುದಾದರೆ ಕೋಝಿಕೋಡ್‌ನಿಂದ ವಾಹನವೊಂದನ್ನು ಗೊತ್ತು ಮಾಡಿಕೊಂಡರೆ ಇಲ್ಲಿರುವ ಸೂಚಿಪ್ಪಾರ, ಮೀನ್ ಮಟ್ಟಿ ಫಾಲ್ಸ್, ಚೆಂಬರ ಹಿಲ್ಸ್, ಎಡಕ್ಕಲ್ ಗುಹೆ ಇತ್ಯಾದಿ ನೋಡಿ ಖುಷಿ ಪಡಬಹುದು.
ಚಿತ್ರಗಳು: ಗಣಪತಿ ಸುರತ್ಕಲ್
1 comment:
ನಾಗೇಂದ್ರ ತ್ರಾಸಿ.ಚೆನ್ನೈ
ಕೇರಳದ ಸೂಚಿಪ್ಪಾರ ಜಲಪಾತದ ಬಗ್ಗೆ ಪರಿಚಯಿಸಿದ್ದಕ್ಕೆ ವೇಣುಗೆ ಧನ್ಯವಾದಗಳು.
Post a Comment