ಬೇಸಗೆ ರಜೆಗೆ ಮಕ್ಕಳು ಸಾಲಾಗಿ
ಪ್ರವಾಸ ಹೊರಟಂತೆ
ಎತ್ತಲೋ ಹೊರಟಿವೆ
ಮೇ ತಿಂಗಳ ಮೋಡಗಳು
ಬತ್ತಿ ಒಡೆದ ಗದ್ದೆ ನೋಡುತ್ತ
ಕುಳಿತ ರೈತನ ಮುಂದೆ
ಅದೋ ಠೀವಿಯಿಂದ
ನಾಲ್ಕೇ ನಾಲ್ಕು ಹನಿ ಪನ್ನೀರು!
ಪೂರ್ತಿ ಮಳೆ ಸುರಿಸಲು ಈಗ
ಮೋಡಗಳಿಗಿಲ್ಲ ಸಮಯ
ಎತ್ತಲೋ ಪ್ರವಾಸ ಹೊರಟಿವೆ ನೋಡಿ
ಪಾತಾಳ ತಲಪಿರುವ
ಬಾವಿ ನೀರು ಪಾಚಿಗಟ್ಟಿದೆ
ಎಂದು ದೂರುವವರಿಗೆ,
ಪಟ್ಟಣದ ಪೈಪುಗಳಲ್ಲಿ ನೀರೇ
ಹರಿಯುತ್ತಿಲ್ಲ ಎಂಬ ನೀರೆಯರಿಗೆ
ಮೇಲಿಂದಲೇ ಅಣಕಿಸುತ್ತಾ
ಮೋಡ ಓಡೋಡಿ ಸಾಗಿದೆ
ನಗರದ ಗಗನಚುಂಬಿಗಳ
ಹಾದು
ವಲಸೆ ಹಕ್ಕಿಗಳ ರೆಕ್ಕೆ
ಚುಂಬಿಸುತ್ತಾ
ಬೆಳ್ಳಕ್ಕಿಗಳಂತೆ
ಹಾರಿವೆ ಮೇ ತಿಂಗಳ ಮೋಡಗಳು
ಇಂದು ರಾತ್ರಿ
ಅಥವಾ ನಾಳೆ ಘಟ್ಟ
ದಾಟಲಾರದೆ ಮಳೆ ಸುರಿಯಬಹುದು
5 comments:
ನೈಸ್! :-)
ಬೇಗ ಈ ಮೋಡಗಳು ಮಳೆ ಸುರಿಸಿ
ಬೇಗೆ ತೀರಲಿ.
ಸುಂದರ ಕವನ.
ಮೋಡಗಳು ಓಡುವುದು ನನಗೂ ಕಾಣುತ್ತದೆ. ಆದರೆ ನಿನ್ನಂಥ ಕವಿ ಮನಸ್ಸಿನವರಿಗೆ ಮಾತ್ರ ಅದು ಇಂತಹ ಉತ್ತಮ ಕವನಕ್ಕೆ ಸ್ಪೂರ್ತಿಯಾಗಬಲ್ಲದು. ದಿನದಿಂದ ದಿನಕ್ಕೆ, ಕವನದಿಂದ ಕವನಕ್ಕೆ ನೀನು ಉತ್ತಮಗೊಳ್ಳುತ್ತಿರುವುದು ನಿಜಕ್ಕೂ ಸಂತೋಷ.
ಚೆನ್ನಾಗಿದೆ ಕವನ
ಕವನ ತುಂಬಾ ಚೆನ್ನಾಗಿದೆ ..
Post a Comment