31.8.08

ಸಿಯಾಚಿನ್ ಡೈರಿ

ಶೀತ ಗಟ್ಟಿಯಾಗಿ ಹಿಮಾಲಯದ ನದಿ ಧಾರೆಗಳೆಲ್ಲ ಕೆಳಗೆ ಹರಿಯುವುದೋ ಬೇಡವೋ ಎಂಬಂತೆ ನಿಧಾನವಾಗಿ ಸಾಗುತ್ತಿದ್ದರೆ ಹಿಮಾಚ್ಛಾದಿತ ಗಿರಿಶಿಖರಗಳೂ ಇನ್ನೂ ಚಂದ್ರನ ನೆನಪಿಂದ ಹೊರಗೆ ಬಂದಿಲ್ಲ...
ಶಿಖರಗಳ ತುದಿಯಿಂದ ಸ್ವಲ್ಪ ಕೆಳಗೆ ಕೆಳಗೆ ವಿಶಾಲ ಭರತಖಂಡದವರು ಯಾವಾಗಲಾದೊಮ್ಮೆ ಮಾತ್ರ ನೆನಪಿಸಿಕೊಳ್ಳುವ ಕೆಲ ನತದೃಷ್ಟರ ಬಂಕರ್‍ ಇದೆ.

ಅದು ಸಿಯಾಚಿನ್. ವಿಶ್ವದ ಅತೀ ಎತ್ತರದ ಯುದ್ಧಭೂಮಿ...

ಎಂಟು ಮಂದಿ ಇರಬಹುದಾದ ಬಂಕರಿನಲ್ಲಿ ಸರಿರಾತ್ರಿ ವರೆಗೂ ದೂರದಲ್ಲಿ ಸುರಿಯುವ ಮಂಜಿನ ತೆರೆಯಲ್ಲೇಲ್ಲೋ ಇದೆ ಎಂಬಂತೆ ಭಾಸವಾಗುವ ಕಾಲ್ಪನಿಕ ಗಡಿಯೊಂದರ ಮೇಲೆ ಕಣ್ಣಿಟ್ಟು ಸುಸ್ತಾದ ಮಂದಿ ಪಾಳಿ ಮುಗಿಸಿ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿಕೊಂಡಿದ್ದಾರೆ. ಜಮ್ಮುಕಾಶ್ಮೀರ ರಾಷ್ಟ್ರೀಯ ರೈಫಲ್ಸ್‌ನ ಲೆಫ್ಟಿನೆಂಟ್ ಶರ್ಮಾ ನಾಯಕತ್ವದ ಸೆಕ್ಷನ್ ಅದು. ಇಬ್ಬರು ಸೈನಿಕರು ಅದಾಗಲೇ ಮಷಿನ್ ಗನ್‌ಗಳ ಹಿಂದೆ ವಿಗ್ರಹಗಳಂತೆ ಕೂತಿದ್ದಾರೆ. ಬಂಕರಿನ ಗೋಡೆಯಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಗುತ್ತಿದ್ದಾಳೆ.

ವಾರದ ಹಿಂದೆಯಷ್ಟೇ ಹೊಸದಾಗಿ ಸಿಯಾಚಿನ್ನಿಗೆ ಕಾಲಿರಿಸಿದ ಸೈನಿಕರಿವರು. ಇನ್ನು ೯೦ ದಿನಗಳ ಕಾಲ ಇಲ್ಲಿಬೇಕಿದೆ. ಅದರೊಳಗೆ ಸಿಯಾಚಿನ್ನಿನ ವಿಚಿತ್ರ, ಕಠಿಣ ಪರಿಸ್ಥಿತಿಗಳಿಗೆ ಎಷ್ಟು ಮಂದಿ ಮರಗಟ್ಟಿ ಹೋಗುತ್ತಾರೋ, ಗಡಿಯಾಚೆಯಿಂದ ಮಂಜಿನೆಡೆ ಹಾರಿ ಬರುವ ಮೋರ್ಟಾರ್‍, ರೈಫಲ್ ಗುಂಡುಗಳಿಗೆ ಬಲಿಯಾಗುತ್ತಾರೋ ತಿಳಿಯದು. ಸೈನಿಕ ತೇಜ್ ಬಹಾದ್ದೂರನ ಕೈಯಲ್ಲಿ ರೈಫಲ್ ಹಿಡಿದರೂ ಮನಸ್ಸು ತನ್ನೂರು ಶ್ರೀನಗರಕ್ಕೆ ಹಾರುತ್ತದೆ.

ಇನ್ನೋರ್ವ ಸೈನಿಕ ಆಸೀಫನಿಗೆ ಎರಡು ದಿನಗಳಿಂದ ಕಾಲು ಜೋಮು ಬಂದಿದೆ. ಸರಿಯಾಗಿ ನಡೆಯದಂತಹ ಪರಿಸ್ಥಿತಿ..

ಸು.....ಶ್‌ಶ್‌ ಎಂದು ಒಂದೆ ಸವನೆ ಬೀಸುತ್ತಲೇ ಇರುವ ಮಂಜುಗಾಳಿ...ಉಸಿರಾಡಲು ಆಮ್ಲಜನಕದ ಕೊರತೆ..ಸದಾ ಶೂನ್ಯಕ್ಕಿಂತಲೂ ಕೆಳಗೆ ಇರುವ ಉಷ್ಣತೆ...ಆಗಾಗ ಹಿಮಪಾತ..ಇವೆಲ್ಲದರ ನಡುವೆ ಇತರ ಸಹೋದ್ಯೋಗಿಗಳಿದ್ದರೂ ಕಾಡುವ ಒಂಟಿತನಕ್ಕೆ ಆಸೀಫ ಬಲಿಯಾದಂತಿದೆ. ಆದರೂ ಅದು ಕರ್ತವ್ಯಕ್ಕೆ ಅಡ್ಡಿಯಾಗಿಲ್ಲ. ಆದರೆ ಕುಸಿಯುತ್ತಲೇ ಇರುವ ಆತನ ಬಗ್ಗೆ ಬೇಸ್ ಕ್ಯಾಂಪ್‌ಗೆ ಸ್ಯಾಟಲೈಟ್ ಫೋನ್‌ನಲ್ಲಿ ಸುದ್ದಿ ಮುಟ್ಟಿಸಿದ್ದಾನೆ ಲೆಫ್ಟಿನೆಂಟ್ ಶರ್ಮಾ.

ಕಾರಕೋರಂ ರೇಂಜಲ್ಲಿ ಭಾರೀ ಹಿಮಪಾತವಾಗುತ್ತಿದೆ, ಈಗಲೇ ಹೆಲಿಕಾಪ್ಟರ್‍ ಕಳಿಸಲಾಗದು, ಮುಂದಿನವಾರ ಸೈನಿಕರ ಮತ್ತು ಮಷಿನ್‌ಗನ್‌ಗಳ ಆಹಾರ, ಬಟ್ಟೆಬರೆ ಮತ್ತು ಕೆರೋಸಿನ್ ಹೊತ್ತು ಬರುವ ಆರ್ಮಿ ಹೆಲಿಕಾಪ್ಟರ್‍ನಲ್ಲಿ ಆತನನ್ನು ಕಳುಹಿಸಿ ಎಂಬ ಉತ್ತರ ಬೇಸ್ ಕ್ಯಾಂಪ್‌ನಿಂದ.

ಯಾವುದೋ ಹಳೆ ಹಾಡು ಗುನುಗುತ್ತಲೇ ಹಿಮ ಕರಗಿಸಿ ಆಗತಾನೇ ಮಾಡಿದ ಮಸಾಲಾ ಚಾ ಕಪ್ಪಿನೊಂದಿಗೆ ಬಂದ ಸಂಜಯ ಸಿಂಗ್ ‘ಸಾಬ್ ಮುಂದೆ ಇರುವ ಪಾಕಿಗಳು ಟೀ ಕುಡಿದಿರಬಹುದೇ’ ಕುಚೋದ್ಯ ಮಾಡಿದ. ‘ಹೋಗಿ ನೋಡು, ಎದ್ದಿಲ್ಲವಾದರೆ ಎಬ್ಬಿಸಿ ಹಾಗೇ ಟೀ ಕೊಟ್ಟು ಬಾ’ ಅಷ್ಟೇ ಕುಚೋದ್ಯದ ದನಿಯಲ್ಲಿ ಮೆಲುವಾಗಿ ಹೇಳಿದ.

‘ಸೂರ್ಯ ಕಿರಣಗಳು ಮೂಡತೊಡಗಿವೆ. ಇಂದು ಆಕಾಶ ಶುಭ್ರ ಇದೆ’ ರಾಮ್‌ ಸಿಂಗ್ ಉತ್ಸಾಹದಲ್ಲಿ ಹೇಳಿದ.

ಅಲ್ಲಿ ಯಾರೂ ತಮ್ಮ ಊರಿನ ಬಗ್ಗೆ ಮಾತಾಡುವುದೇ ಇಲ್ಲ. ಹಾಗಾಗಿ ಬೇರೇನೂ ಮಾತನಾಡಲು ಉಳಿದಿಲ್ಲ. ಹೀಗೇ ಒಮ್ಮೊಮ್ಮೆ ಕುಚೋದ್ಯದ ಮೂಲಕ ಜೀವನೋತ್ಸಾಹ ಇನ್ನೂ ಇದೆಯೇ ಎಂದು ತಮ್ಮನ್ನೇ ಪರೀಕ್ಷಿಸಿಕೊಳ್ಳುತ್ತಾರೆ!


ವಾರ ಕಳೆದಿದೆ, ಆಸೀಫನ ಸ್ಥಿತಿ ಬಿಗಡಾಯಿಸಿದೆ...ಪಾಕಿಸ್ಥಾನೀಯರಿಂದ ಸರಿಯಾಗಿ ಎಂಟು ಬಾರಿ ಗುಂಡು ಹಾರಿದೆ. ಗುರಿ ಎಲ್ಲಿಗೆ ಎಂದು ಬಹುಷಃ ಅವರಿಗೂ ಗೊತ್ತಿಲ್ಲ..ಅಷ್ಟರ ಮಟ್ಟಿಗೆ ಹಿಮಪಾತವಾಗುತ್ತಿದೆ. ಅದೋ ಮೆಲ್ಲಗೆ ಶಿಖರಗಳ ಮರೆಯಿಂದ ಹಾರಿ ಬಂತು ಹೆಲಿಕಾಪ್ಟರ್‍.

ಆಸೀಫ ಸ್ಟ್ರೆಚರ್‌ನಲ್ಲಿ ಹೆಲಿಕಾಪ್ಟರ್‍ ಒಳಗೆ ಹೋಗುತ್ತಾನೆ. ಆಹಾರದ ರಾಶಿ, ಮದ್ದುಗುಂಡಿನ ಬಾಕ್ಸ್ ಮುಂದಿನ ತಿಂಗಳಿಗಾಗುವಷ್ಟು ಬಂದಿದೆ. ಎರಡು ಕಿಮೀ ಮುಂದೆ ಇರುವ ಇನ್ನೊಂದು ಬಂಕರಿಗೂ ಹೋಗಬೇಕಿದೆ.

ಹೇಗಿದೆ ಕಾಶ್ಮೀರ? ಹೆಲಿಕಾಪ್ಟರ್‍ ಪೈಲಟ್‌ಗೆ ಕೇಳಿದ ಲೆಫ್ಟಿನೆಂಟ್ ಶರ್ಮಾ.

ಏನು ಹೇಳೋದು ಸಾಬ್..ಒಂದು ವಾರದಿಂದ ಕಾಶ್ಮೀರ ಪ್ರತ್ಯೇಕತೆ ಕೂಗು. ಚಾನೆಲ್ಲೊಂದರಲ್ಲಿ ಅನೇಕರು ಹೇಳುತ್ತಿದ್ದರು ಕಾಶ್ಮೀರವನ್ನ ಪಾಕಿಗಳಿಗೆ ಕೊಡೋದೇ ಒಳ್ಳೇದಂತೆ. ಒಂದು ವೇಳೆ ಅವರಿಗೆ ಕೊಡೋದಾದ್ರೆ ನೀವಿಲ್ಲಿರೋದ್ಯಾಕೆ ಸಾಬ್ ಪ್ರಶ್ನಿಸಿದ ಪೈಲಟ್.

‘ಹಹ್ಹಹ್ಹ...ನಾವೆಲ್ಲಾ ಹಾಗಾದರೆ ನಿರುದ್ಯೋಗಿಗಳಾಗುತ್ತೇವೆ’ ತಾತ್ಸಾರ ಬೆರೆತ ನಗೆಯೊಂದಿಗೆ ಹೇಳಿ ಬಂಕರ್‍ಗೆ ಮರಳಿದ ಶರ್ಮಾ.

ದೂರದಲ್ಲಿ ನಾಲ್ಕು ಚುಕ್ಕಿಗಳು ಹರಿದಾಡಿದಂತೆ ಅನಿಸಿತು. ಹೈಪವರ್‍ ಬೈನಾಕ್ಯುಲರ್‍ನಲ್ಲಿ ವೀಕ್ಷಿಸಿದರೆ ಧರ್ಮಯುದ್ಧಕ್ಕೆ ಹೊರಟ ನಾಲ್ಕು ಮಂದಿ. ಬೆನ್ನಲ್ಲಿ ಎಕೆ ರೈಫಲ್, ರಾಕೆಟ್ ಲಾಂಚರ್‍. ಕಣಿವೆಯೊಳಗೆ ಇಳಿಯಲು ಹೊರಟಂತಿದೆ.

ರಾಮ್ ಸಿಂಗ್ ಎಲ್ಲಿ ರೈಫಲ್, ಇಲ್ಲಿ ಕೊಡು ಕಾಶ್ಮೀರ ಕೇಳೋರು ಬಂದಿದ್ದಾರೆ, ಅವರಿಗೆ ವೆಲ್ ಕಂ ಹೇಳಬೇಕಲ್ವೇ ಅದೇ ನಗೆಯೊಂದಿಗೆ ರೈಫಲ್ ಎತ್ತಿಕೊಂಡ ಶರ್ಮಾ.....

ಶಿಖರಗಳಲ್ಲಿ ಮತ್ತೆ ಗುಂಡುಗಳ ಮೊರೆತ......


(ಭಾರತದ ಮುಕುಟ ಕಾಶ್ಮೀರ ಈಗ ಪ್ರತ್ಯೇಕತಾವಾದದ ಕೆಂಡದಲ್ಲಿದೆ, ಇತ್ತೀಚೆಗಿನ ಬೆಳವಣಿಗೆ ಗಮನಿಸುತ್ತಿದ್ದಾಗ ಮನದಲ್ಲಿ ಹುಟ್ಟಿದ ಕೆಲ ಪ್ರಶ್ನೆ, ಭಾವನೆ ಈ ಕಥೆಗೆ ಪ್ರೇರಣೆ)

8.8.08

ಭಾವಚಿತ್ರದ ನೋವು ನಲಿವು


ಹಳೆಮನೆಯ

ಮೂಲೆಯಲ್ಲಿ

ಕಪ್ಪಾಗುತ್ತಿರುವ

ಹಿರಿಯಜ್ಜನ
ಭಾವಚಿತ್ರಕ್ಕೆ
ಈಗ ಆಸರೆ
ತುಕ್ಕು ಹಿಡಿದ
ಮೊಳೆ ಮಾತ್ರ!


**********
ಸುಂದರ ಚೌಕಟ್ಟಿನ
ಭಾವಚಿತ್ರದಲ್ಲಿರುವ
ಅಜ್ಜನ ಕಂಗಳಲ್ಲಿ
ಸಾವಿರಾರು ಕಥೆಗಳು....
ಆದರೆ
ಕೇಳಿಸಿಕೊಳ್ಳಲು ಕಿವಿಗಳಿಲ್ಲ!

********

ಕಡುಬೇಸಗೆಯಲ್ಲಿ
ದಾರಿತಪ್ಪಿ
ಮನೆಯೊಳಗೆ ಬಂದ
ದುಂಬಿಯೊಂದು
ಚೌಕಟ್ಟಿನ ಚಿತ್ರದೊಳಗಿರುವ
ಗುಲಾಬಿ ಸುತ್ತ
ಸುತ್ತುತ್ತಿದೆ...
ಚಿತ್ರಕಾರನ
ಬದುಕೀಗ ಪಾವನ!

*******
ಭಾವಚಿತ್ರದಲ್ಲಿ
ಬಂಧಿಯಾದ
ಹದ್ದನ್ನು ನೋಡಿ
ಗಡಿಯಾರಗೂಡಿನ
ಗುಬ್ಬಕ್ಕನಿಗೆ
ದಿನವೂ ದು:ಖ

3.8.08

ಮಣ್ಣಿನ ಮಕ್ಕಳು ನಾವೆಲ್ಲಾ....

ನಮಗೆ ಸತ್ವ ನೀಡುವ ಮಣ್ಣಲ್ಲಿ, ಪ್ರಕೃತಿಯ ಮಡಿಲಲ್ಲಿ ಸೇರಿಕೊಳ್ಳುವುದೆಂದರೆ ಎಂತಹ ಸೊಗಸು!










ಮಣ್ಣಿನ ಮಕ್ಕಳು ನಾವೆಲ್ಲಾ....
ಈ ಮಾತು ನೆನಪಾಗಬಹುದು ಈ ಚಿತ್ರಗಳನ್ನು ನೋಡಿದರೆ...ಯಾವುದೋ ಹಳ್ಳಿಗಾಡಿನ ದೃಶ್ಯದಂತೆ ಕಂಡೀತು ಕೂಡಾ.
ಮಂಗಳೂರೆಂಬುದು ಮಾಯಾನಗರಿಯಾಗುತ್ತಿದ್ದರೂ ಅದರ ಹೊರವಲಯದಲ್ಲಿ ಇನ್ನೂ ಹಸಿರು ಹೊದ್ದ ತಾಣಗಳು ಕೆಲವಾದರೂ ಉಳಿದುಕೊಂಡಿರುವ ಕಾರಣ ಈ ಚಿತ್ರ ನಿಮ್ಮ ಮುಂದಿವೆ.

ಬೊಂಡಂತಿಲ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ಸಾಹಿ ಯುವಕರು ಸೇರಿಕೊಂಡು ಪ್ರತಿ ವರ್ಷ ಇಡೀ ದಿನ ಕೆಸರಲ್ಲಿ ಕಳೆಯುತ್ತಾರೆ.

ಹಾಗೆಂದ ಮಾತ್ರಕ್ಕೆ ಮೂಗು ಮುರಿಯಬೇಡಿ. ಕ್ರಮಬದ್ಧವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಚೆಂಡಾಟದ ಸ್ಪರ್ಧೆ, ನೇಜಿ ನಡುವ ಸ್ಪರ್ಧೆ ನಡೆಯುತ್ತದೆ. ಮಹಿಳೆಯರಿಗಾಗಿ ಪಾಡ್ದನ ಹೇಳುವ ಸ್ಪರ್ಧೆ ಇದೆ.

ಗ್ರಾಮಾಭಿವೃದ್ಧಿ ಯೋಜನೆಯ ‘ಯಶಸ್ವಿನಿ’ಯರು ತುಳು ನಾಡಿನ ಪಾರಂಪರಿಕ ಕಡುಬು(ಅಡ್ಯೆ) ತಯಾರಿಸುತ್ತಾರೆ, ಅದರ ಪ್ರದರ್ಶನ ಇರುತ್ತದೆ.
ಈ ಭಾನುವಾರ ಮೂರನೇ ವರ್ಷದ ಕಾರ್ಯಕ್ರಮವಿತ್ತು. ಎಂದಿನಂತೆ ಭರ್ಜರಿ ಜನ. ಎಂದಿನಂತೆ ಸ್ಪರ್ಧೆಗಳು, ಸ್ಪರ್ಧಿಗಳು. ಮಹಿಳೆಯರು, ಮಕ್ಕಳೂ ದೊಡ್ಡಸಂಖ್ಯೆಯಲ್ಲಿದ್ದರೆ ನೋಡಲೂ ಸಾಕಷ್ಟು ಪ್ರೇಕ್ಷಕರು. ಮೊದಲ ವರ್ಷ ಈ ಹಬ್ಬಕ್ಕೆ ಆಟಿಡೊಂಜಿ ದಿನ ಎಂಬ ಹೆಸರು ಕೊಟ್ಟಿದ್ದರೆ, ಕಳೆದ ವರ್ಷ ಕೆಸರಡೊಂಜಿ ದಿನ ಎಂಬ ನಾಮಕರಣ. ಈ ಬಾರಿ ಗ್ರಾಮೊದ ಗೌಜಿ!
ಹೆಚ್ಚೇನೂ ಕೊರೆಯುವುದಿಲ್ಲ ಇಲ್ಲಿ....ಈ ಚಿತ್ರಗಳನ್ನು ನೋಡಿದರೆ ನಿಮಗೆ ಒಂದಿಷ್ಟಾದರೂ ಮಾಹಿತಿ ಸಿಗಬಹುದು.
Related Posts Plugin for WordPress, Blogger...