






ಮಣ್ಣಿನ ಮಕ್ಕಳು ನಾವೆಲ್ಲಾ....
ಈ ಮಾತು ನೆನಪಾಗಬಹುದು ಈ ಚಿತ್ರಗಳನ್ನು ನೋಡಿದರೆ...ಯಾವುದೋ ಹಳ್ಳಿಗಾಡಿನ ದೃಶ್ಯದಂತೆ ಕಂಡೀತು ಕೂಡಾ.
ಮಂಗಳೂರೆಂಬುದು ಮಾಯಾನಗರಿಯಾಗುತ್ತಿದ್ದರೂ ಅದರ ಹೊರವಲಯದಲ್ಲಿ ಇನ್ನೂ ಹಸಿರು ಹೊದ್ದ ತಾಣಗಳು ಕೆಲವಾದರೂ ಉಳಿದುಕೊಂಡಿರುವ ಕಾರಣ ಈ ಚಿತ್ರ ನಿಮ್ಮ ಮುಂದಿವೆ.
ಬೊಂಡಂತಿಲ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ಸಾಹಿ ಯುವಕರು ಸೇರಿಕೊಂಡು ಪ್ರತಿ ವರ್ಷ ಇಡೀ ದಿನ ಕೆಸರಲ್ಲಿ ಕಳೆಯುತ್ತಾರೆ.
ಹಾಗೆಂದ ಮಾತ್ರಕ್ಕೆ ಮೂಗು ಮುರಿಯಬೇಡಿ. ಕ್ರಮಬದ್ಧವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಚೆಂಡಾಟದ ಸ್ಪರ್ಧೆ, ನೇಜಿ ನಡುವ ಸ್ಪರ್ಧೆ ನಡೆಯುತ್ತದೆ. ಮಹಿಳೆಯರಿಗಾಗಿ ಪಾಡ್ದನ ಹೇಳುವ ಸ್ಪರ್ಧೆ ಇದೆ.
ಗ್ರಾಮಾಭಿವೃದ್ಧಿ ಯೋಜನೆಯ ‘ಯಶಸ್ವಿನಿ’ಯರು ತುಳು ನಾಡಿನ ಪಾರಂಪರಿಕ ಕಡುಬು(ಅಡ್ಯೆ) ತಯಾರಿಸುತ್ತಾರೆ, ಅದರ ಪ್ರದರ್ಶನ ಇರುತ್ತದೆ.
ಈ ಭಾನುವಾರ ಮೂರನೇ ವರ್ಷದ ಕಾರ್ಯಕ್ರಮವಿತ್ತು. ಎಂದಿನಂತೆ ಭರ್ಜರಿ ಜನ. ಎಂದಿನಂತೆ ಸ್ಪರ್ಧೆಗಳು, ಸ್ಪರ್ಧಿಗಳು. ಮಹಿಳೆಯರು, ಮಕ್ಕಳೂ ದೊಡ್ಡಸಂಖ್ಯೆಯಲ್ಲಿದ್ದರೆ ನೋಡಲೂ ಸಾಕಷ್ಟು ಪ್ರೇಕ್ಷಕರು. ಮೊದಲ ವರ್ಷ ಈ ಹಬ್ಬಕ್ಕೆ ಆಟಿಡೊಂಜಿ ದಿನ ಎಂಬ ಹೆಸರು ಕೊಟ್ಟಿದ್ದರೆ, ಕಳೆದ ವರ್ಷ ಕೆಸರಡೊಂಜಿ ದಿನ ಎಂಬ ನಾಮಕರಣ. ಈ ಬಾರಿ ಗ್ರಾಮೊದ ಗೌಜಿ!ಹೆಚ್ಚೇನೂ ಕೊರೆಯುವುದಿಲ್ಲ ಇಲ್ಲಿ....ಈ ಚಿತ್ರಗಳನ್ನು ನೋಡಿದರೆ ನಿಮಗೆ ಒಂದಿಷ್ಟಾದರೂ ಮಾಹಿತಿ ಸಿಗಬಹುದು.


