26.1.09
ಶಾಂತಿಪ್ರಿಯ ದೇಶಕ್ಕೊಂದು ಕಂಗ್ರಾಟ್ಸ್!
12.1.09
ಕೃಷಿಯಲ್ಲೂ ‘ಸಫಲ’ರಾಗಬಹುದು!!!
- ಜೀವಾಮೃತದ ಬಳಕೆ
- ನೀರಿನ ಮಿತವ್ಯಯ
- ತೋಟದಲ್ಲಿ ನೈಸರ್ಗಿಕತೆಯ ಉಳಿಕೆ
ಆರಂಭದಲ್ಲಿ ತೋಟಕ್ಕೆ ಸ್ಪ್ರಿಂಕ್ಲರ್ ಹಾಕಿಸಿದ್ದವರು ಈಗ ಅದನ್ನು ತೆಗೆದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸುತ್ತಾರೆ. ಸ್ಪ್ರಿಂಕ್ಲರ್ ನೀರು ಮಣ್ಣಿನ ಮೇಲ್ಪದರಕ್ಕೆ ಹೆಚ್ಚಾಗಿ ತೇವಗೊಳಿಸುತ್ತದೆ. ಆಗ ಅಡಕೆ ಮರದ ಬೇರುಗಳು ಮೇಲಕ್ಕೆ ಬಂದು ಹರಡಿಕೊಳ್ಳುತ್ತವೆ. ಇದರಿಂದಾಗಿ ಮೇಲ್ಪದರ ಒಣಗಿದ ಕೂಡಲೇ ಮರ ಕೂಡಾ ಒಣಗುತ್ತದೆ. ಇದಕ್ಕೆ ಪರ್ಯಾಯವಾಗಿ ಸಫಲಿಗರು ಕಂಡುಕೊಂಡದ್ದು ಬದುಗಳನ್ನು(ಓಳಿ).
ಬದುಗಳಲ್ಲಿ ಜೀವಾಮೃತ ಮಿಶ್ರಿತ ನೀರನ್ನು ಬಿಟ್ಟು ಬಿಡುತ್ತಾರೆ. ಅದು ತುಂಬಿದ ಕೂಡಲೇ ನೀರನ್ನು ಇನ್ನೊಂದು ಬದುವಿಗೆ ಹರಿಸುತ್ತಾರೆ. ಇದರಿಂದ ಬದುವಿನ ನೀರು ಆಳಕ್ಕಿಳಿಯುತ್ತದೆ, ನೀರು ಹುಡುಕುತ್ತಾ ಬೇರುಗಳು ಆಳಕ್ಕಿಳಿಯುತ್ತವೆ. ಆಗ ನೀರು ಸಿಗದಿದ್ದರೂ ಮರ ಬೇಗನೆ ಒಣಗುವುದಿಲ್ಲ. ಅಲ್ಲದೆ ಬೇರು ಆಳಕ್ಕೆ ಹೋಗುವ ಕಾರಣ ಮರ ಹೆಚ್ಚು ಫಲಕೊಡುತ್ತದೆ, ದೃಢವಾಗುತ್ತದೆ. ಈ ಕಾರಣಕ್ಕೆ ಸಫಲಿಗರು ತೋಟಕ್ಕೆ ನೀರು ಕೊಡುವುದು ೮-೯ ದಿನಕ್ಕೊಮ್ಮೆ.
ಸಫಲಿಗರ ತೋಟದಲ್ಲಿ ಕಳೆಗಿಡಗಳಿಗೂ ಒಂದು ಸ್ಥಾನವಿದೆ. ಅತೀ ತೊಂದರೆ ಕೊಡುವ ಕಳೆ ಬಿಟ್ಟರೆ ಉಳಿದದ್ದನ್ನು ಹಾಗೇ ಬಿಡುತ್ತಾರೆ. ಅಡಕೆ ಮರದ ಬುಡದಲ್ಲೇ ಕೆಲಮರಗಳು ಅಡಕೆ ಮೀರಿಸುವಂತೆ ಬೆಳೆದು ನಿಂತಿವೆ. ಕೆಲ ಅಡಕೆ ಮರದ ನಾಲ್ಕೂ ಸುತ್ತಲೂ ಉಪ್ಪಾಳಿಗೆಯ ಮರಗಳು. ಅಷ್ಟಾದರೂ ಅದು ಅಡಕೆ ಇಳುವರಿಗೆ ತೊಂದರೆಯಾಗಿಲ್ಲ. ಇದು ನನ್ನ ಪ್ರಯೋಗವಷ್ಟೇ ಇಲ್ಲಿವರೆಗೆ ಮರಗಳೇನೂ ಅಡಕೆ ಮರದ ಪಾಲನ್ನು ಕಬಳಿಸಿಲ್ಲ, ಹಾಗಾಗಿದ್ದರೆ ಇಳುವರಿ ಕಡಮೆಯಾಗಬೇಕಿತ್ತಲ್ವೇ? ಪ್ರಶ್ನಿಸುತ್ತಾರೆ ಸಫಲಿಗ.
ಈ ತೋಟಕ್ಕೆ ಸೊಪ್ಪು ಹಾಕುವುದಿಲ್ಲ, ಪದೇ ಪದೇ ನೀರು ಬೇಕಿಲ್ಲ, ಕೂಲಿಯವರ ಮೇಲಿನ ಅವಲಂಬನೆ ಅತ್ಯಲ್ಪ, ರಸಗೊಬ್ಬರ ಬೇಡ, ಹಾಗಾಗಿ ನನ್ನದು ಕನಿಷ್ಠ ಬಂಡವಾಳ, ಬರುವ ಆದಾಯದಿಂದ ಜೀವನ ಸಾಗಿಸಬಹುದು ಎನ್ನುವುದು ಅವರ ಪ್ರತಿಪಾದನೆ.
ಸಫಲಿಗರ ಸಾಧನೆ ಕಥೆ ಕೇಳುತ್ತಾ ಅವರ ತೋಟದ ತಾಜಾ ಸೀಯಾಳ ಕುಡಿಯುತ್ತಾ ಅವರ ಪಕ್ಕಾ ಕೃಷಿಕರ ಮನೆಯ ಅಂಗಳದಲ್ಲಿ ಓಡಾಡುವ ಆಡು, ಕೋಳಿ, ಕರುಗಳನ್ನು ನೋಡುತ್ತಾ ಇದ್ದರೆ ಇದೇ ಜೀವನ ಎಷ್ಟು ಹಿತ ಎನಿಸತೊಡಗಿತು.