ದೆವ್ವಗಳು ಮೈಮೇಲೆ ಬರೋದು, ಅಕರಾಳ ವಿಕರಾಳ ರೂಪಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ತಬ್ಬಿಬ್ಬು ಮಾಡುವುದು, ಎದೆ ಹೊಡೆದುಕೊಳ್ಳುವಂತಹ ಸೌಂಡ್ ಇಫೆಕ್ಟ್ ಇವೆಲ್ಲ ಸಾಮಾನ್ಯ ಹಾರರ‍್ ಚಿತ್ರಗಳ ಲಕ್ಷಣ..
ಆದರೆ 13B ಕೊಂಚ ಭಿನ್ನ. ಇಲ್ಲಿ ಭೀಕರ ಶಬ್ದಗಳು ವಿಕಾರ ರೂಪಗಳು ಎಲ್ಲೂ ಪ್ರಕಟಗೊಳ್ಳುವುದಿಲ್ಲ. ಪ್ರಕಟಗೊಳ್ಳುವುದು ಟಿವಿ ಕಾರ್ಯಕ್ರಮವೊಂದರ ಮೂಲಕ.
ಲವರ‍್ಬಾಯ್ ಇಮೇಜಿನ ಮಾಧವನ್‌ಗೆ ಇಲ್ಲಿ ಭಿನ್ನ ರೂಪ. ಗೃಹಸ್ಥನಾದ ಸಿವಿಲ್ ಇಂಜಿನಿಯರ‍್ ಮನೋಹರ(ಮಾಧವನ್), ಆತನ ಪತ್ನಿ(ನೀತು ಚಂದ್ರ), ತಾಯಿ, ಅಣ್ಣ, ಅತ್ತಿಗೆ, ತಂಗಿಯೊಂದಿಗೆ ಹೊಸ ಅಪಾರ್ಟ್‌ಮೆಂಟಿಗೆ ಬಂದು ಕೆಲದಿನಗಳಷ್ಟೇ ಆಗಿದೆ. 13ನೇ ಮಹಡಿಯಲ್ಲಿರುವ ಈತನ ಮನೆ ನಂಬರ‍್ 13B. ಮನೆಯಲ್ಲಿ ಇನ್ನೂ ಪೂರ್ಣ ವ್ಯವಸ್ಥೆ ಆಗಿಲ್ಲ. ದೇವರ ಚಿತ್ರಗಳು ಇನ್ನೂ ಮನೆಯ ಗೋಡೆ ಏರಿಲ್ಲ.
ಅಷ್ಟರಲ್ಲಾಗಲೇ ಮನೆಯಲ್ಲಿ ಒಂದೊಂದೇ ವಿಚಿತ್ರಗಳು ಶುರು. ಆ ಮನೆಯಲ್ಲಿ ಹಾಲು ಯಾವಾಗಲೂ ಒಡೆಯುತ್ತಲೇ ಇರುತ್ತದೆ. ಮಾಧವನ್ ಲಿಫ್ಟ್ ಒಳಗೆ ಹೋದರೆ ಅದು ಕೆಲಸ ಮಾಡುವುದೇ ಇಲ್ಲ.ಇವೆಲ್ಲ ಕಿರಿಕಿರಿ ಅನುಭವಿಸುವಾಗಲೇ ದೇವರ ಫೋಟೋ ಗೋಡೆಗೆ ಹಾಕಲು ಗೋಡೆ ಡ್ರಿಲ್ ಕೊರೆಯಲು ಬಂದ ಡ್ರಿಲ್ಲರ‍್ ಹೈಪವರ‍್ ಶಾಕ್‌ಗೆ ಒಳಗಾಗುತ್ತಾನೆ.
ಈ ನಡುವೆಯೇ ಮನೋಹರ‍್ ಅರಿವಿಲ್ಲದೆಯೇ ಹೊಸ ಬೆಳವಣಿಗೆ. ಮಧ್ಯಾಹ್ನದ ಟಿವಿ ಶೋ ನೋಡುತ್ತಿರುವಾಗಲೇ ಟಿವಿಯಲ್ಲಿ ಚಾನೆಲ್ ತಾನಾಗಿ ಬದಲಾಗುತ್ತದೆ. ‘ಸಬ್ ಖೈರಿಯತ್ ಹೇ’ ಎಂಬ ಈ ಧಾರಾವಾಹಿಯಲ್ಲೂ ಒಂದು ಕುಟುಂಬ ಮನೋಹರನ ಕುಟುಂಬದ ಹಾಗೆಯೇ ಹೊಸಮನೆಗೆ ಬಂದಿರುತ್ತದೆ. ಈ ಧಾರಾವಾಹಿಯ ಚಾನೆಲ್ ಬದಲಾಯಿಸುವುದೂ ಅಸಾಧ್ಯ. ನೋಡಲೇಬೇಕಾದ ಪರಿಸ್ಥಿತಿ. ಕೊನೆಗೂ ಕುಟುಂಬದ ಮಹಿಳೆಯರು ಕುಳಿತು ಇದನ್ನು ಆಕರ್ಷಣೆಯಿಂದ ನೋಡುತ್ತಿರುತ್ತಾರೆ.
ಆಕಸ್ಮಿಕವಾಗಿ ಮನೋಹರ ಕೂಡಾ ಒಮ್ಮೆ ಇದನ್ನು ನೋಡುತ್ತಾನೆ. ತನ್ನ ಕುಟುಂಬದ ಕಥೆಯೇ ಅಲ್ಲಿ ಬಂದಂತಾಗುತ್ತದೆ, ಅಷ್ಟೇ ಅಲ್ಲ, ಮುಂದೆ ತನ್ನ ಕುಟುಂಬಕ್ಕೆ ಏನಾಗುತ್ತದೆ ಎನ್ನುವುದೂ ಈ ಧಾರಾವಾಹಿಯಲ್ಲಿ ನೋಡಿದಾಗ ತಿಳಿಯುತ್ತದೆ.
ಕೊನೆಗೂ ಕೆಲದಶಕಗಳ ಹಿಂದೆ ಸತ್ತು ಹೋದವರ ಆತ್ಮಗಳೇ ಟಿವಿಯಲ್ಲಿ ಪ್ರಕಟಗೊಳ್ಳುವುದು ಮನೋಹರನಿಗೆ ತಿಳಿಯುತ್ತದೆ...ಇನ್ನೂ ನಾನು ಕಥೆ ಹೇಳಿದರೆ ನಿಮ್ಮ ಆಸಕ್ತಿ ಹೋದೀತು..ಹಾಗಾಗಿ ಕಥೆ ಇಲ್ಲಿಗೇ ನಿಲ್ಲಿಸುವೆ. ವಿಕ್ರಮ ಕುಮಾರ‍್ ನಿರ್ದೇಶನದ ಈ ಚಿತ್ರ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದೆ. ಮಾಧವನ್ ಪ್ರಬುದ್ಧ ಅಭಿನಯ, ನೀತು ಚಂದ್ರ ತುಂಟ ಪತ್ನಿಯಾಗಿ, ಡಾಕ್ಟರ‍್ ಶಿಂಧೆಯಾಗಿ ಸಚಿನ್ ಖೇಡೇಕರ‍್ ಗಮನ ಸೆಳೆಯುತ್ತಾರೆ.
ಖಂಡಿತವಾಗಿ ಇತ್ತೀಚೆಗಿನ ಹಾರರ‍್ ಚಿತ್ರಗಳಲ್ಲಿ ಗುಣಮಟ್ಟದಲ್ಲಿ ಮೇಲ್ಪಂಕ್ತಿಯಲ್ಲಿರುವ ಚಿತ್ರ 13B.