ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗಿ, ತಾನು ಕೈಹಿಡಿದ ಹುಡುಗಿ ತನ್ನ ಅಧಿಕಪ್ರಸಂಗಿತನಕ್ಕೆ ಬೇಸತ್ತು ವಿಚ್ಛೇದನ ನೀಡಿದ ದಿನ ವಸಂತ ಮಮ್ಮಲ ಮರುಗಿಬಿಟ್ಟ.
ಲೋಕದಲ್ಲೆಲ್ಲೂ ಒಳ್ಳೆಯ ಮನಸ್ಸಿನ ಹೆಂಗಸರೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ. ಅದುವರೆಗೆ ಫೋಟೋದಲ್ಲಿದ್ದ ದೇವರನ್ನು ಕಣ್ಣೆತ್ತಿ ನೋಡದ ಆತ ಅದೊಂದು ರಾತ್ರಿ ನಿಶ್ಚಲ ಮನಸ್ಸಿನಿಂದ ತಪಸ್ಸಿಗೆ ಕುಳಿತ.
ಹೀಗೆ ಕೆಲ ದಿನಗಳುರುಳಿದವು.. ಈ ಐ.ಟಿ ಯುಗದಲ್ಲೂ ಹಸಿವೆ ನಿದ್ದೆಯನ್ನೆಲ್ಲ ಮೆಟ್ಟಿ ನಿಂತ ವಸಂತನ ದೃಢಚಿತ್ತದಿಂದ ಅಚ್ಚರಿಗೊಂಡ ಭಗವಂತ ಅದೊಂದು ಘಳಿಗೆಯಲ್ಲಿ ಧುತ್ತನೆ ವಸಂತನ ಮುಂದೆ ಪ್ರತ್ಯಕ್ಷನಾದ.
ಏನು ಈ ಯುಗದಲ್ಲೂ ನನಗಾಗಿ ತಪಸ್ಸು ಮಾಡುತ್ತಿರುವೆ? ಎಂದು ಕೇಳಿದ. ಹೆಚ್ಚೇನೂ ಸಂಭ್ರಮ ವ್ಯಕ್ತ ಪಡಿಸದ ವಸಂತ ತಣ್ಣನೆ ಸ್ವರದಲ್ಲಿ ಕೇಳಿದ-ನನಗೆ ವರ ಬೇಕು!
ಭ-ವರವೇ? ಏನದು ಹೇಳು?
ವ-ನಾನು ಹೆಂಗಸರಿಂದ ಬಹಳಷ್ಟು ಸೋತು ಹೋದೆ. ವೈಯಕ್ತಿಕ ಜೀವನದಲ್ಲಿ, ವೃತ್ತಿ ಜೀವನದಲ್ಲಿ...ಏನು ಮಾಡಬೇಕು ಎಂದು ತೋಚುತ್ತಿಲ್ಲ.
ಭ-ಅದು ಅವರವರ ಪ್ರಾರಬ್ಧ ಕರ್ಮ. ಎಷ್ಟೋ ಮಂದಿ ಹೆಂಗಸರಿಂದಾಗಿಯೇ ಒಳ್ಳೆಯ ಬದುಕಿನಲ್ಲಿದ್ದಾರೆ. ನೀನು ಮಾತ್ರ ಹೀಗೆ ಹೇಳುತ್ತಿರುವೆ.
ವ-ನನಗೀಗ ವರವ ಕೊಡು ಭಗವಂತ...ನಾನು ಹೆಂಗಸರೇ ಇಲ್ಲದ ಕಾಲದಲ್ಲಿ, ಅಥವಾ ದೇಶದಲ್ಲಿ, ಅಥವಾ ಜಗತ್ತಿನಲ್ಲಿ ಹುಟ್ಟುವಂತಾಗಬೇಕು.
ಭ-ಇದು ಬಹಳ ಪೇಚಿನ ವರ[ಈ ವರ ಕೊಟ್ಟದ್ದು ತಿಳಿದರೆ ಮಹಿಳಾ ಆಯೋಗದವರ ಕಣ್ಣೂ ಕೆಂಪಾದೀತು]. ಕೊಡುವ ಹಾಗಿಲ್ಲ.
ವ-ಇಲ್ಲ, ಕೊಡಲೇ ಬೇಕು...ನನ್ನ ಭಕ್ತಿಗೆ ಅಷ್ಟಾದರೂ ಬೆಲೆ ಕೊಡಬೇಕು.
ದೇವರಿಗೆ ಈ ಹುಲುಮಾನವ ಒಂದಿಷ್ಟೂ ಬೆದರದೆ ಉತ್ತರಿಸಲು ಕಾರಣವನ್ನು ಕೆಲ ನಿಮಿಷ ಕಾಲ ಚಿಂತಿಸಿದ ದೇವರು ಕೊನೆಗೂ ಈ ಯುಗದಲ್ಲಿ ತಾನು ಮೊದಲ ಬಾರಿ ಪ್ರತ್ಯಕ್ಷವಾಗಿರುವಾಗ ಭಕ್ತನನ್ನು ನಿರಾಸೆಗೊಳಿಸ ಬಾರದು ಎಂದು ತೀರ್ಮಾನಿಸಿ ತಥಾಸ್ತು ಎಂದ. ಆದರೆ ಒಂದು ಷರತ್ತು. ನೀನು ಪ್ರಮೀಳೆಯರಿಲ್ಲದ ಜಗತ್ತಿನಲ್ಲಿ ಹುಟ್ಟಬೇಕಾದರೆ ಮೊದಲು ಈಗಲೇ ಸಾಯಬೇಕು(ಯಾವುದಕ್ಕೂ ಒಂದು ಟೆಸ್ಟ್ ಮಾಡೋಣ ಅನ್ನಿಸಿರಬಹುದು) ಎಂದ.
ಒಪ್ಪಿದ ವಸಂತ ದೇವರಿಗೆ ಥ್ಯಾಂಕ್ಸ್ ಕೂಡಾ ಹೇಳದೆ ಹಿಂದಿರುಗಿದ. ಸಾಯುವುದು ಹೇಗೆ ಎಂದು ಚಿಂತಿಸತೊಡಗಿದ.
ಕೊನೆಗೂ ಸಮುದ್ರಕ್ಕೆ ಹಾರುವುದೇ ಲೇಸು ಎಂದುಕೊಂಡು ಕಡಲತಡಿಗೆ ಹೋದ.
ಅಲ್ಲಿ ನೋಡಿದರೆ ಆಗಲೇ ಒಂದು ಜೀವ ನೀರಲ್ಲಿ ಕೈಕಾಲು ಬಡಿಯುತ್ತಿದೆ...ಮತ್ತೆ ಸಾಯೋಣ ಎಂದು ಅನ್ನಿಸಿ ವಸಂತ ನೀರಿಗೆ ಜಿಗಿದ. ಈಜು ಗೊತ್ತಿದ್ದರಿಂದ ಕೈಕಾಲು ಬಡಿಯುತ್ತಿದ್ದವರನ್ನು ಎಳೆದು ತಂದ.
ನೋಡಿದರೆ ಅದೊಂದು ಹೆಣ್ಣು ಜೀವ. ಆಕೆಯನ್ನು ಪಕ್ಕ ಕೂರಿಸಿ ಕಥೆ ಕೇಳಿದ. ಆಕೆಗೆ ಯಾರೋ ಹುಡುಗ ಕೈಕೊಟ್ಟನಂತೆ, ಅದಕ್ಕೆ ನೀರಿಗೆ ಹಾರಿದಳಂತೆ, ಹಾರಿದ ನಂತರ ಬದುಕಬೇಕು ಅನ್ನಿಸಿತಂತೆ, ಆಗಲೇ ವಸಂತ ಕೈಹಿಡಿನಂತೆ...ಹಾಗೆ ಆಕೆ ಹೇಳುವಾಗ ಆಕೆಯ ಕೈ ವಸಂತನ ಕೈಗಳಲ್ಲಿ ಭದ್ರವಾಗಿತ್ತು. ವಸಂತನಿಗೆ ಸದ್ಯಕ್ಕೆ ಭಗವಂತ ತನಗೆ ನೀಡಿದ ವರ, ಅದಕ್ಕೆ ಹಾಕಿದ ಷರತ್ತು ಮರೆತುಹೋಯಿತು..ಆಕೆಯನ್ನು ಭದ್ರವಾಗಿ ಹಿಡಿದು ಕಡಲ ದಂಡೆಯಲ್ಲಿ ಹೆಜ್ಜೆ ಹಾಕಿದ..
ದೇವಲೋಕದಲ್ಲಿ ಕುಳಿತ ಭಗವಂತ ಮತ್ತು ಆತನ ಸಹವರ್ತಿಗಳು ಕೈಚಪ್ಪಾಳೆ ಹಾಕಿದರು...ಕೊನೆಯಲ್ಲಿ ಭಗವಂತ ಈ ಮಾತು ಹೇಳಿದ 'ಈ ಮೂಢ ಹೆಂಗಸರಿಲ್ಲದ ಪ್ರಪಂಚದಲ್ಲಿ ಬದುಕುವುದು ಅಸಾಧ್ಯ, ನಾನು ಮಾಡಿದ ಪರೀಕ್ಷೆಯಲ್ಲಿ ಸೋತ, ನನ್ನನ್ನು ಅನಾವಶ್ಯಕ ಭೂಮಿಗೆ ಬರಹೇಳಿದ್ದಕ್ಕೆ ಆತನಿಗೆ ಇದೇ ತಕ್ಕ ಶಿಕ್ಷೆ'.
ಹಾಗೆ ಭಗವಂತ ಹೇಳುವಾಗ ನೀರಲ್ಲಿ ಮುಳುಗಿ ಉಪ್ಪುಮಿಶ್ರಿತ ನೀರಿನಿಂದ ಒದ್ದೆಯಾಗಿದ್ದ ಆ ತರುಣಿಯೊಂದಿಗೆ ಬೀಚ್ ಪಕ್ಕದ ದೇವಸ್ಥಾನದಲ್ಲಿ ಕೈಮುಗಿಯಲು ಹೋಗುತ್ತಿದ್ದ!