ಮಂಜುಮುಸುಕಿದ ದಾರಿಯಲ್ಲಿ ನನ್ನ ಪಯಣವೀಗ ಮೂರು ವರ್ಷ ಎಂಬ ಮೈಲಿಗಲ್ಲು ತಲಪಿದೆ....
ಈ ಮೊದಲು ನೂರು ಪೋಸ್ಟ್ ಆದಾಗ ಇರಲಿ, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಇಂತಹ ಮೈಲಿಗಲ್ಲನ್ನು ನೆನಪಿಸಿಕೊಳ್ಳಲು ನಾನು ಹೋಗಿರಲಿಲ್ಲ.
ಆದರೆ ಮೂರು ವರ್ಷ ಬ್ಲಾಗಿಂಗ್ ಎಂದರೆ ಅದು ನನ್ನಂಥ ಸೋಮಾರಿಗಳ ಪಾಲಿಗೆ ದೊಡ್ಡ ವಿಚಾರವೇ...
೨೦೦೬ರ ಆಗಸ್ಟ್ ೩೧ರಂದು ಮಂಜು ಮುಸುಕಿದ ದಾರಿಯಲ್ಲಿ ನನ್ನ ಮೊದಲ ಹೆಜ್ಜೆ ಗುರುತು ಮೂಡಿತ್ತು. ಗೆಳೆಯರಾದ
ಚೇವಾರ‍್,
ದೀಪಾ,
ಕೃಷ್ಣ ಮೋಹನ್ ಅವರ ಮಾಹಿತಿಯಿಂದಾಗಿ ಬ್ಲಾಗ್ ನನಗೆ ಪರಿಚಯವಾದದ್ದು.
ಆರಂಭದಲ್ಲಿ ಸುಮ್ಮನೇ ಏನೇನೋ ಗೀಚುತ್ತಿದ್ದೆ. ಆಗಲೇ ಬ್ಲಾಗಿಗರ ಸಂಖ್ಯೆ ಏರುಗತಿಯಲ್ಲಿ ಇತ್ತು. ಆದರೂ ಅನೇಕ ಮಂದಿ ನನ್ನ ಪುಟ ಗಮನಿಸಿದರು, ನನ್ನ ಫಡಪೋಶಿ ಬರಹಗಳಿಗೂ ಪ್ರತಿಸ್ಪಂದಿಸಿದರು. ಅನೇಕ ಹಿರಿಯರ ಬರಹಗಾರರೂ ಪ್ರತಿಕ್ರಿಯಿಸಿದರು.
ಏನೇ ಇರಲಿ ಬ್ಲಾಗ್ ಎನ್ನುವುದು ನನ್ನ ಬರಹಕ್ಕೆ ಒಂದು ರೂಪ ಕೊಟ್ಟಿದೆ. ಅನೇಕ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ಸಂಪರ್ಕ ವೃದ್ದಿಸಿದೆ.
ಅದುವರೆಗೆ ಕವನ ಎಂದರೆ ದೂರ ಓಡುತ್ತಿದ್ದವನು ನಾನು. ಬ್ಲಾಗ್‌ನಲ್ಲಿ ಇತರರ ಕವನಗಳನ್ನು ಓದತೊಡಗಿದಾಗಲೇ ನಾನೂ ಯಾಕೆ ಪ್ರಯತ್ನ ಮಾಡಬಾರದು ಎಂದು ಒಂದೆರಡು ಸಾಲು ಗೀಚಲಾರಂಭಿಸಿದೆ. ಅದೆಂತಹ ಕಳಪೆಯಾಗಿದ್ದರೂ ಬ್ಲಾಗ್ ಗೆಳೆಯರು ಎಲ್ಲೂ ನನ್ನನ್ನು ಮಾತಿನಿಂದ ಚುಚ್ಚದೆ ಪ್ರೋತ್ಸಾಹಿಸಿದ್ದು ಮರೆಯಲಾರೆ. ಕೆಲವೊಮ್ಮೆ ಉದಾಸೀನವಾದಾಗ ಯಾಕೆ ಅಪ್‌ಡೇಟಾಗಿಲ್ಲ ಎಂದು ಜವಾಬ್ದಾರಿ ನೆನಪಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಮಂಜುಮುಸುಕಿದ ದಾರಿಯಲ್ಲಿ ಮುಂದೆ ಸಾಗುತ್ತ, ಸಾಗುತ್ತಾ ಹಿಂದಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ. ಕೆಲವಾದರೂ ಸ್ಮರಣೀಯವೆನಿಸುವ ಸಾಲುಗಳು, ಬರಹಗಳು ನನ್ನಿಂದ ಸೃಷ್ಟಿಯಾಗಿವೆ. ಇವೆಲ್ಲ ನಾನೇ ಬರೆದೆನೇ ಎಂಬ ಅಚ್ಚರಿ ಮಿಶ್ರಿತ ಖುಷಿ ಸಿಕ್ಕುತ್ತದೆ. ಬಹುಷಃ ಯಾವುದೇ ಮ್ಯಾಗಝಿನ್, ಪುಸ್ತಕ, ವಾರ್ತಾಪತ್ರಿಕೆ ನೀಡದಷ್ಟು ಅವಕಾಶ, ಫೀಡ್‌ಬ್ಯಾಕ್ ಬ್ಲಾಗ್‌ನಲ್ಲಿ ಸಿಕ್ಕಿದೆ.
ದಾರಿಯುದ್ದಕ್ಕೂ ನವಿರುಭಾವನೆಗಳಮೆರವಣಿಗೆಚೇತೋಹಾರಿ ಕ್ಷಣಗಳನರ್ತನ, ದಾರಿಹೋಕರ ಚೆಲವು ನಗುವಿನ ತೋರಣಸವಿಯುತ್ತಾ ಮಂಜುಮುಸುಕಿದ ದಾರಿಯಲ್ಲಿಇನ್ನಷ್ಟು ಹೆಜ್ಜೆ ಇರಿಸುವಾಸೆ..ನಿಮ್ಮೆಲ್ಲರ ಪ್ರೋತ್ಸಾಹಕ್ಕೆ, ಪ್ರೀತಿಗೆ ಒಂದು ಸಲಾಂ....