ನಗ್ಲಿ ಬಿಡು ಏನಾಯ್ತು....
ಹೌದಲ್ಲ...ನಗೋರು ನಗ್ಲಿ...ಪಾಪ...
-------------------------
ಹೀಗೊಂದು ಪಾಸಿಟಿವ್ ನೋಟ್ನೊಂದಿಗೆ ಶುಭಂ ಆಗುವ ಚಿತ್ರ ಮನಸಾರೆ.
ಮುಂಗಾರು ಮಳೆ, ಗಾಳಿಪಟ ಚಿತ್ರಗಳಲ್ಲಿ ಗಟ್ಟಿ ಕಥಾ ವಸ್ತು ಇಲ್ಲವಾದರೂ ಚುರುಕಾದ ನಿರೂಪಣೆ, ದೃಶ್ಯವೈಭವ ಮತ್ತು ಇಂಪಾದ ಹಾಡುಗಳಿಂದಷ್ಟೇ ಗೆಲುವು ದಕ್ಕಿಸಿಕೊಂಟಿದ್ದರು ಯೋಗರಾಜ್ ಭಟ್. ಆದರೆ ಈ ಬಾರಿ ಹೆಚ್ಚು ಮೆಚ್ಯೂರ್ಡ್ ಕಥಾವಸ್ತು ಇದೆ. ಫ್ರೆಶ್ ಮುಖಗಳಿವೆ, ಮುಂಗಾರು ಮಳೆಯ ನಂತರ ಮಾಮೂಲಿಯಾಗಿಬಿಡುವ ಮಳೆ ಈ ಬಾರಿ ಕಣ್ಮರೆಯಾಗಿ ಉತ್ತರ ಕನ್ನಡದ ಹವಾ ಮನಸಾರೆಯ ಮೂಲಕ ಬೀಸತೊಡಗಿದೆ.
ಬಳ್ಳಾರಿ, ಚಿತ್ರದುರ್ಗ, ಹಂಪಿಯ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಮಡಿಕೇರಿಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದ ಶೂಟಿಂಗ್ ನಡೆದಿದೆ.ಬರಡು ಭೂಮಿಯನ್ನು ಚಿತ್ರಕಥೆಗೆ ತಕ್ಕಂತೆ ಬಳಸಿಕೊಂಡಿದ್ದಕ್ಕೆ ಛಾಯಾಗ್ರಾಹಕ ಸತ್ಯ ಹೆಗಡೆಗೆ ಶರಣು.
ಇಲ್ಲೂ ಮನತಣಿಸುವ ಸಂಗೀತ, ಹಾಡುಗಳಿವೆ. ಕಾಯ್ಕಿಣಿಯವರ ಸಾಹಿತ್ಯದಿಂದಾಗಿ ಉತ್ತರಕನ್ನಡದಲ್ಲೂ ಮಳೆಯಾಗಿದೆ!(i.e:ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ). ಯೋಗರಾಜ ಭಟ್ಟರ ನಾ ನಗುವ ಮೊದಲೇನೆ, ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ, ಮನಮುಟ್ಟುವುದರಲ್ಲಿ ಸಂಶಯವೇ ಇಲ್ಲ.
ಅಪ್ಪ ಅಮ್ಮನಿಲ್ಲದೆ ಚಿಕ್ಕಪ್ಪನ ಮನೆಯಲ್ಲಿ ಬೆಳೆಯುವ ಮನೋಹರ(ದಿಗಂತ್) ಚಿಕ್ಕಮ್ಮ ಮತ್ತು ಆಕೆಯ ಸಾಫ್ಟ್ವೇರ್ ಮಗನ ಕಣ್ಣಲ್ಲಿ ಕಸ. ರಸ್ತೆಯಲ್ಲಿ ವಿದ್ಯುತ್ ಉತ್ಪಾದಿಸುವಂತಹ ವಿಚಿತ್ರ ಐಡಿಯಾಗಳಿರುವ ಮನೋಹರನ ಪ್ರೇಯಸಿ ನೀತು ಈತನ ಬದುಕಿನ ಬಗ್ಗೆ ಇರುವ ನಿರ್ಲಕ್ಷ್ಯ ನೋಡಿ ಸಹಿಸದೆ ಬೇರೊಬ್ಬನೊಂದಿಗೆ ಮದುವೆಯಾಗುವುದೇ ಚಿತ್ರದ ಎರಡನೇ ಸೀನ್. ಇಡೀ ‘ಜೀವನ ಹರಿದು ಹೋದ ಚಪ್ಪಲಿ ಹಾಗಾಯ್ತು’ ಎಂಬಂತಹ ಕ್ರೇಝಿ ಡಯಲಾಗುಗಳನ್ನು ದಿಗಂತಗೆ ಬಾಯಿಪಾಠ ಮಾಡಿಸಿದ್ದಾರೆ ಭಟ್.
ನಿರುದ್ಯೋಗಿ ಮನೋಹರ ಮನೆಗೆ ಬೇಡದವನಾಗಿ, ಸಮಾಜಕ್ಕೂ ಬೇಡದವನಾಗುತ್ತಾನೆ, ಈತ ಹುಚ್ಚಾಸ್ಪತ್ರೆ ಸೇರಬೇಕಿತ್ತು ಎಂಬಂತಹ ಮಾತುಗಳು ಮತ್ತೆ ಮತ್ತೆ ಈತನನ್ನ ಚುಚ್ಚುತ್ತವೆ. ಅದೊಂದು ದಿನ ಬೆಂಗಳೂರು-ಮಂಗಳೂರು ರಸ್ತೆ ಪಕ್ಕ ನಡೆಯುತ್ತಿದ್ದ ಮನೋಹರನನ್ನು ಕಾಮನಬಿಲ್ಲು ಮಾನಸಿಕ ಅಸ್ವಸ್ಥರ ಸಾಗಾಟ ವಾಹನವೊಂದು ಅಚಾನಕ್ಕಾಗಿ ಹಾಗೂ ಆಕಸ್ಮಿಕವಾಗಿ ಮಹೇಂದ್ರ ಎಂದು ತಿಳಿದು ಎತ್ತಿ ಕೊಂಡೊಯ್ಯುತ್ತದೆ. ನಾನು ಮಹೇಂದ್ರನೂ ಅಲ್ಲ, ಹುಚ್ಚನಲ್ಲ ಎಂದರೂ ಬಿಡುವುದಿಲ್ಲ.
ಅಲ್ಲಿಗೆ ಚಿತ್ರವೂ ವೇಗ ಪಡೆದುಕೊಳ್ಳುತ್ತದೆ.
ಆಸ್ಪತ್ರೆಯಲ್ಲಿ ಈತನ ಬೆಡ್ ಪಕ್ಕ ಇರುವವನು ಶಂಕ್ರಣ್ಣ(ರಾಜು ತಾಳಿಕೋಟೆ), ಕಳೆದ ೨೦ ವರ್ಷಗಳಿಂದ ಅದೇ ಕೇಂದ್ರದಲ್ಲಿರುವವನು. ಈ ಪಾತ್ರ ಚಿತ್ರವನ್ನು ಆಧರಿಸುತ್ತದೆ. ಬಳ್ಳಾರಿ ಕನ್ನಡದಲ್ಲಿ ವಟವಟ ಮಾತನಾಡುವ ರಾಜು ಪ್ರೇಕ್ಷರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.
ಕಾಮನಬಿಲ್ಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮನೋಹರ ಅಚಾನಕ್ ಆಗಿ ನಾಯಕಿ ದೇವಿಕಾ(ಐಂದ್ರಿತಾ ರೇ)ಳನ್ನು ನೋಡಿ ಕಂಟ್ರೋಲ್ ತಪ್ಪುತ್ತಾನೆ. ಕಾಮನಬಿಲ್ಲಿನ ಕೋಟೆಯಿಂದ ಹೊರಬಂದವನೂ ಮತ್ತೆ ಆಕೆಗಾಗಿ ಮರಳುತ್ತಾನೆ. ನಿದ್ದೆ ಮಾತ್ರೆ ತಿಂದು ಆಕೆ ನಿದ್ದೆಯಲ್ಲಿ ಮುಳುಗಿರುವಾಗಲೇ ಶಂಕ್ರಣ್ಣನ ನೆರವಲ್ಲಿ ಆಕೆಯನ್ನು ೧೦೮ ಅಂಬ್ಯುಲೆನ್ಸ್ಗೆ ಹಾಕಿಕೊಂಡು ಪರಾರಿಯಾಗುತ್ತಾರೆ.
ತಾಯಿಯನ್ನು ಹಿಂಸಿಸಿ ಕೊಂದ ತಂದೆಯ ಕಾರಣಕ್ಕಾಗಿ ಎಲ್ಲ ಗಂಡಸರನ್ನು ದ್ವೇಷಿಸುವ ದೇವಿಕಾ ಮನೋಹರನನ್ನೂ ಕೊಲ್ಲಲು ಯತ್ನಿಸುತ್ತಾಳೆ, ಸೋಲುತ್ತಾಳೆ, ಆತನಿಗೂ ಮನಸೋಲುತ್ತಾಳೆ ಕೂಡಾ!
ಗಾಢವಾಗಿ ಪ್ರೀತಿಸುವ ಇಬ್ಬರೂ ಓಡಿ ಹೋಗುವ ಬದಲು ಮತ್ತೆ ಕಾಮನಬಿಲ್ಲಿಗೇ ಬರಳುತ್ತಾರೆ. ಶಂಕ್ರಣ್ಣ ಇವರಿಬ್ಬರ ಮದುವೆ ಮಾಡಿಸುವಂತೆ ಕಾಮನಬಿಲ್ಲಿನ ನಿರ್ದೇಶಕರಿಗೆ ವಿನಂತಿ ಮಾಡಿದರೂ ಅದು ವಿಫಲವಾಗುತ್ತದೆ. ಅಷ್ಟರ ಹೊತ್ತಿಗೆ ತಪ್ಪಿಸಿಕೊಂಡಿದ್ದ ಹುಚ್ಚ ಮಹೇಂದ್ರ ಸಿಗುತ್ತಾನೆ, ಮನೋಹರನನ್ನು ಕಾಮನಬಿಲ್ಲಿನಿಂದ ಹೊರ ಹಾಕುತ್ತಾರೆ. ಕಾಮನಬಿಲ್ಲಿನ ಹುಡುಗಿಯರ ಮೇಲೆಯೇ ಕಣ್ಣಿರಿಸುವ ಡಾಕ್ಟರನೊಬ್ಬನ ಮಸಲತ್ತೂ ಇದರಲ್ಲಿರುತ್ತದೆ.
ಮನೆಗೆ ಮರಳುವ ಮನೋಹರನಿಗೆ ಮತ್ತೆ ಹೊರಗೇನಿಲ್ಲ ಅನಿಸುತ್ತದೆ. ಆರೋಗ್ಯಕವಚ ಅಂಬ್ಯುಲೆನ್ಸ್ ನಲ್ಲಿ ತಪ್ಪಿಸಿಕೊಂಡಾಗ ದೇವಿಕಾಳನ್ನು ಗಾಢವಾಗಿ ಪ್ರೀತಿಸುವ ಮನೋಹರನ ಮನದ ಪರಿಶುದ್ಧತೆ ಕಾಮನಬಿಲ್ಲಿನ ನಿರ್ದೇಶಕರಿಗೆ ಅರಿವಾಗಿ ಇಬ್ಬರನ್ನು ಒಂದಾಗಿಸುತ್ತಾರೆ.
ಮಾನಸಿಕ ಆರೋಗ್ಯ ಕೇಂದ್ರವೊಂದನ್ನು ಕಥೆಯಾಗಿಸುವ ಮೂಲಕ ಹೊಸತನ ನೀಡಿದ್ದಾರೆ ಭಟ್.
ಅಂಬ್ಯುಲೆನ್ಸ್ನಲ್ಲಿ ನಾಯಕಿಯನ್ನು ಕರೆದುಕೊಂಡು ಹೋಗುವ ದೃಶ್ಯ, ಕಾಮನಬಿಲ್ಲಿನ ದೊಡ್ಡಗೋಡೆಯ ಕಿಂಡಿಯಲ್ಲಿ ನಾಯಕ ನಾಯಕಿ ಮಾತನಾಡಿಕೊಳ್ಳುವ ದೃಶ್ಯ, ಚಿತ್ರದ ಕೊನೆಯಲ್ಲಿ ಇಡೀ ಚಿತ್ರದ ಪಾತ್ರಗಳು, ಜನರು ಸೇರಿಕೊಂಡು ಮನೋಹರನನ್ನು ತಮಾಷೆ ಮಾಡಿದಂತೆ ಭಾಸವಾಗುವ ದೃಶ್ಯಗಳು ಬಹಳ ಕಾಲ ನೆನಪಿನಲ್ಲುಳಿಯುವಂಥವು.
ನಟನೆಯಲ್ಲಿ ದಿಗಂತ್ ಬಹಳ ಸುಧಾರಿಸಿದ್ದಾರೆ, ಡ್ಯಾನ್ಸ್, ಅಭಿವ್ಯಕ್ತಿ, ಸಂಭಾಷಣೆ ನಿರಾಳವಾಗಿದೆ. ಐಂದ್ರಿತಾ ಕಣ್ಣಿಗೆ ಹಬ್ಬ. ನಟನೆಯೂ ಸುಂದರ. ತಾಳಿಕೋಟೆ ರಾಜು ಮೂಲಕ ಕನ್ನಡಚಿತ್ರರಂಗಕ್ಕೆ ಮತ್ತೊಂದು ಪ್ರತಿಭೆ ಪರಿಚಯವಾದಂತೆ. ಅಚ್ಯುತ್ ಕುಮಾರ್, ಪವನ್ ಕುಮಾರ್, ನೀನಾಸಂ ಅಶ್ವಥ್ ಚಿತ್ರಕ್ಕೆ ನೆರವಾಗಿದ್ದಾರೆ.
ಬಹಳ ಕಾಲದ ನಂತರ ಒಳ್ಳೆಯ ಚಿತ್ರ ನೋಡಿದಂತಾಗಿದೆ.
ಸಿನಿಮಾ ನೋಡಿದರೆ ಅದು ನಮ್ಮನ್ನು ಕನಿಷ್ಠ ೧ ವಾರವಾದರೂ ಕಾಡುತ್ತಿರಬೇಕು, ಒಂದು ವರುಷವಾದರೂ ಹಾಡು ಬಾಯಲ್ಲಿ ಗುನುಗುತ್ತಿರಬೇಕು. ಅಂತಹ ಒಳ್ಳೆಯ ಚಿತ್ರ ಕೊಟ್ಟಿದ್ದಕ್ಕೆ ಭಟ್ಟರಿಗೆ,ಉಲ್ಲಾಸಭರಿತ ಟ್ಯೂನ್ಗಳಿಗಾಗಿ ಮನೋಮೂರ್ತಿಯವರಿಗೆ, ಮತ್ತು ಮನಸೂರೆಗೊಂಡ ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ !
ಚಿತ್ರಕೃಪೆ: manasaare.com, nowshowing.com
12 comments:
ಚಿತ್ರ ನೋಡ್ಬೇಕು ಅನ್ನಿಸ್ತಿದೆ. ಒಳ್ಳೇ ವಿಮರ್ಶೆ.
ವೇಣು,
ನಾನು ತುಂಬಾ ದಿನಗಳ ನಂತ್ರ ನೋಡಿದ ಒಳ್ಳೇ ಸಿನಿಮಾ ಇದು..ನೀವು ಹೇಳಿದಂತೆ ನಂತರವೂ ಕಾಡಿತ್ತು. ಮತ್ತೊಮ್ಮೆ ಬಿಡುವು ಮಾಡಿಕೊಂಡು ನೋಡಬೇಕೆನಿಸಿದೆ. ನೋಡುತ್ತೇನೆ.
ಹರೀಶ್, ಖಂಡಿತಾ ನೋಡಿ...
ಶಿವು, ನಿಮ್ಮ ಹಾಗೇ ನಾನೂ ಇನ್ನೊಮ್ಮೆ ನೋಡುವ ಐಡಿಯಾದಲ್ಲಿದ್ದೇನೆ.
olleya chitra sir . chitrada bagge chennagi barediddeeri.
'One flew over the cukoo's nest' ಎಂಬ ಇಂಗ್ಲೀಷ್ ಚಿತ್ರ ಕದ್ದದ್ದಂತಪ್ಪೋ...
ವೇಣು
ಖಂಡಿತ ಭಾರತಕ್ಕೆ ಬಂದಾಗ ಚಿತ್ರ ನೋಡ್ತೀನಿ,
ಒಳ್ಳೆ ನಿರೂಪಣೆ
ನಾನು ಚಿತ್ರ ನೋಡಿಲ್ಲವಾದರೂ ವಿಮರ್ಶೆಗಳನ್ನು ಓದಿದ್ದೇನೆ. ಹಾಡನ್ನು ಕೇಳುತ್ತಿದ್ದೇನೆ.ಗುನುಗುತ್ತಿದ್ದೇನೆ ಕೂಡಾ...
ಮೊನ್ನೆ ವಾಹಿನಿಯೊಂದರಲ್ಲಿ ವಿಶೇಷ ಇದೇ ಚಿತ್ರದ ಕುರಿತಾದ ಕಾರ್ಯಕ್ರಮವೊಂದನ್ನು ನೋಡಿದೆ. ಚಿತ್ರವನ್ನು ಚಿತ್ರೀಕರಿಸಿದ ಮಡಿಕೇರಿಯ ತಾಣಗಳನ್ನು ಖುದ್ದಾಗಿ ಭಟ್, ದಿಗಂತ್, ಪವನ್ ಹಾಗೂ ಐಂದ್ರಿತಾ ರೇ ವಿವರಿಸುತ್ತಿದ್ದರು. ಆ ಕಾಮನಬಿಲ್ಲು ಹುಚ್ಚಾಸ್ಪತ್ರೆ ಜೈಲು ಎಂಬುದನ್ನು ತಿಳಿದು ಅಚ್ಚರಿಪಟ್ಟೆ. ಚಿತ್ರತಂಡದ ಶ್ರಮ ಈ ಚಿತ್ರದ ಪ್ರತಿ ಫ್ರೇಮ್ ಹಾಗೂ ಹಾಡುಗಳಲ್ಲಿ ಕಂಡು ಬರುತ್ತದೆ. ಇಡೀ ಚಿತ್ರವನ್ನು ಕೆಲವು ಪ್ಯಾರಾಗಳಲ್ಲಿ ವಿವರಿಸಿದ್ದೀರಿ. ಇನ್ನೇಕೋ ಚಿತ್ರ ನೋಡುವುದು ಬೇಡ ಅಂತ ಅನ್ನಿಸುತ್ತಿದೆ.
ಒಳ್ಳೆಯ ವಿಮರ್ಶೆ.
ಧನ್ಯವಾದಗಳು..
ಒಳ್ಳೆಯ ಚಿತ್ರ. ಒಳ್ಳೆಯ ಹಾಡು.....
ಒಳ್ಳೆಯ ಚಿತ್ರ. ಒಳ್ಳೆಯ ಹಾಡು.....
ಚಿತ್ರ ಇನ್ನೂ ಚೆನ್ನಾಗಿ ಮಾಡಬಹುದೇನೋ ಅನ್ನಿಸಿತು. ಹಾಡುಗಳು ಮಾತ್ರ ಬೊಂಬಾಟ್, ಥೇಟ್ ನಿಮ್ಮ ಈ ಲೇಖನದಂತೆ.
ಚೆನ್ನಾಗಿದೆ ನಿಮ್ಮ ವಿಮರ್ಷೆ..
neenasam ashwath illa ee film li,
naanu 2 sala noDde, nice movie.
chenda barediddeeri. nanoo suvarnada 1.30 ganteya special programme noDde, chanagittu- hege shooting madidru, en kathe anta..
Post a Comment