ನನ್ನ ರೂಪ ಹಾಳಾಗಿದೆ
ಎಂದು ಜಿಡ್ಡು ಹಿಡಿದ
ಕನ್ನಡಿ ಹೇಳಿದ್ದರಿಂದ
ಮುಖತೊಳೆಯಲು
ಕೆರೆಗೆ ಬಗ್ಗಿದೆ
ಸ್ವಚ್ಛ ನೀರಿನಲ್ಲಿ ರೂಪ
ನಳನಳಿಸಿತು!
ಈಗ ಕನ್ನಡಿಗೆ ನಾನೇ
ಕನ್ನಡಿಯಾಗಿದ್ದೇನೆ.
*******
ದಿನವೂ ನನ್ನನ್ನು
ಕೊಂಡಾಡುವ ನನ್ನ
ಕನ್ನಡಿಯೇ
ನನ್ನ ಬಿಳಿಗೂದಲು
ತೋರಿಸಿ ಹೀಯಾಳಿಸದಿರು!
*****
ಊರಿನಲ್ಲಿರುವ ಅಮ್ಮನ
ನೆನಪು ಹೇಳಲು
ನನ್ನ ರೂಮಿನಲ್ಲಿದೆ
ಆ ಹಳೇ ಕನ್ನಡಿ
ಮತ್ತೊಂದು ಅದಕ್ಕಂಟಿದ
ಬಿಂದಿ!
*********
ಈ ಹಳೆ ಕನ್ನಡಿಯಲ್ಲಿ
ಕಾಣುವುದು ನಾನು ಮಾತ್ರವಲ್ಲ
ಮೀಸೆ ಹಿರಿದು ನಗುವ ನನ್ನಜ್ಜ,
ಜೇನು ಮಯಣ ಹಣೆಗೆ ಒತ್ತಿ,
ಅದರ ಮೇಲೆ ಕುಂಕುಮ ಇಡುವ
ನನ್ನಜ್ಜಿ,
ಮೂಗಿನ ಮೇಲೆ ಸಿಟ್ಟು ತೋರಿಸುವ
ಮಾಮ,
ರಮಿಸುವ ಅತ್ತೆ,
ಈ ಕನ್ನಡಿಯೆನ್ನುವುದು
ಬರಿಯ ನೆನಪುಗಳ ಸಂತೆ
******
ಕನ್ನಡಿ ನೋಡದೆ
ಈ ಬೆಕ್ಕು, ದನ, ನಾಯಿಗಳೆಲ್ಲಾ
ಎಷ್ಟೊಂದು ಸುಖವಾಗಿವೆ !
******
picture: painting of norman rockwell
7 comments:
ವೇಣು,
ನಿಮ್ಮ ಕನ್ನಡಿ ಕಲ್ಪನೆ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಭಾವನೆಗಳ ಪದ ಜೋಡಣೆಯೂ ಚೆನ್ನಾಗಿದೆ...
ವೇಣು,
ಇದು ಕೇವಲ ಕನ್ನಡಿಯಲ್ಲ, ಆದರೆ ಭಾವನೆಗಳನ್ನು ಬಿಂಬಿಸುವ
ಮಾಯಾಕನ್ನಡಿ!
ವೇಣು, ಕನ್ನಡಿ ಕಲ್ಪನೆ ಸೊಗಸಾಗಿದೆ,
ಅದು ಎಲ್ಲರ ಮನಸ್ಸಿನ ಕನ್ನಡಿಯೂ ಹೌದು
ಮೊದಲ ಹಾಗೂ ಮೂರನೆಯ ಪ್ರತಿಬಿಂಬ ತುಂಬಾ ಚೆನ್ನಾಗಿವೆ. ಇಷ್ಟವಾದವು. ಇಂತಹ ತುಣುಕುಗಳು ಅದ್ಭುತವಾಗಿ ಮೂಡಿಬರುತ್ತವೆ ನಿಮ್ಮ ಲೇಖನಿಯಿಂದ...
wow... super... :)
chennagive
Post a Comment