ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಹಠಾತ್ ಆಗಿ ರಾಜೀನಾಮೆ ಘೋಷಿಸಿಬಿಟ್ಟಾಗ ತುಂಬಾ ಕಸಿವಿಸಿ ಉಂಟಾಯ್ತು.
ನಮ್ಮ ಜೊತೆ ಕೆಲಸ ಮಾಡುವವರು ಬಿಟ್ಟು ಹೋಗುವಾಗ, ನಮ್ಮ ಮನೆಯವರು ದೂರದ ಊರಿಗೆ ಹೊರಟು ನಿಂತಾಗ ಆಗುವಂತೆ ಭಾಸವಾಯ್ತು. ಹತ್ತಿರದ ಕಾರ್ಕಳದವರೇ ಆದ ಜ|ಹೆಗ್ಡೆ ಮಂಗಳೂರಿಗೆ ಆಗಾಗ ಬಂದವರು.
ಲೋಕಾಯುಕ್ತರಾಗಿ ಮಂಗಳೂರಿನಲ್ಲಿ ಅವರು ನೇರ ದಾಳಿ ನಡೆಸಿದ್ದು ಕಡಿಮೆಯಾದರೂ ಇಲ್ಲಿ ಅನೇಕ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲು ಬರುತ್ತಿದ್ದವರು. ನೇರಮಾತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಕ್ಟಿಕಲ್ ಆಗಿ ಮಾತನಾಡುವವರು ಹೆಗ್ಡೆ.
ಶಾಲೆ, ಕಾಲೇಜುಗಳಿಗೂ ತೆರಳಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವರು. ಲೋಕಾಯುಕ್ತರಾಗಿ ನೇಮಕವಾದಾಗ ನಾನು ಆಸ್ಪತ್ರೆಗಳಿಗೆ ದಾಳಿ ಮಾಡಲಾರೆ ಎಂದು ಹೇಳಿದ್ದ ಹೆಗಡೆಯವರ ವಿರುದ್ಧ ಮಾಧ್ಯಮಗಳು ಲೇಖನ ಪ್ರಕಟಿಸಿದ್ದರೆ ಈಗ ಅದೇ ಮಾಧ್ಯಮಗಳು ಹೆಗ್ಡೆಯವರ ಗುಣಗಾನ ಮಾಡಬೇಕಾದರೆ ಅವರು ಸವೆಸಿದ ಹಾದಿ ಕಠಿಣವಾದದ್ದು.
ಈ ಮೊದಲ ಲೋಕಾಯುಕ್ತ ಜ.ವೆಂಕಟಾಚಲ ಅವರು ನಿವೃತ್ತರಾದ ಬಳಿಕ ಅವರ ಪ್ರಬಲವಾದ ಚರಿಷ್ಮಾ ರಾಜ್ಯದಲ್ಲಿ ಹಬ್ಬಿತ್ತು. ಅದನ್ನು ಮೀರಿ ನಿಂತು ತನ್ನ ನೈಜ ಸಾಮರ್ಥ್ಯವನ್ನು ತೋರ್ಪಡಿಸಬೇಕಿತ್ತು. ಹಾಗೆಂದು ಆರಂಭದಿಂದಲೂ ಯಾವುದೇ ಗಿಮಿಕ್ ನಡೆಸದೆ ನಿಧ ನಿಧಾನವಾಗೇ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಪ್ರಕಟಿಸುತ್ತಾ ಬಂದರು ಹೆಗ್ಡೆ. ಜ.ವೆಂಕಟಾಚಲ ದಢೀರ್ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಕ್ಯಾಮೆರಾ ಮುಂದೆ, ಮಾಧ್ಯಮಗಳ ಮುಂದೆ ತರಾಟೆಗೆ ತೆಗೆದುಕೊಂಡು ಲೋಕಾಯುಕ್ತರೆಂದರೆ ಹೀಗೇ ಹೀರೋ ಮಾದರಿ ಇರಬೇಕು ಎಂಬ ವಾತಾವರಣ ಸೃಷ್ಟಿಸಿದ್ದರು.
ಆದರೆ ಜ.ಹೆಗ್ಡೆ ತಮ್ಮ ವ್ಯಕ್ತಿತ್ವ ಪ್ರದರ್ಶನಕ್ಕೆ ಹೋಗದೆ ಸಮರ್ಥರ ತಂಡವೊಂದನ್ನು ಕಟ್ಟಿದರು. ಅದುವರೆಗೆ ಚಿಕ್ಕ ಚಿಕ್ಕ ಮೀನುಗಳಷ್ಟೇ ಗಾಳಕ್ಕೆ ಸಿಗುತ್ತಿದ್ದರೆ ಲೋಕಾಯುಕ್ತರು ದುರ್ಬಲರ ಮೇಲೆ ಮಾತ್ರವಲ್ಲ ಉನ್ನತ ಅಧಿಕಾರಿಗಳ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧವೂ ಚಾಟಿ ಬೀಸಬಹುದೆನ್ನುವುದು ಜನಸಾಮಾನ್ಯರಿಗೆ ಆ ಬಳಿಕ ಗೊತ್ತಾಯ್ತು.
ಉನ್ನತ ಐಎಎಸ್/ಐಪಿಎಸ್ ಅಧಿಕಾರಿಗಳು, ಮಹಾನಗರ ಪಾಲಿಕಗಳ ನಗರಯೋಜನಾ ಅಧಿಕಾರಿಗಳು ಆಸ್ಪತ್ರೆ ವೈದ್ಯಾಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದರೆ ಅವರ ನಡುಕದಲ್ಲಿ ಕೋಟಿಗಟ್ಟಲೆ ಝಣಝಣ ಕಾಂಚಾಣ ಉದುರುತ್ತಿತ್ತು.ಈಗ ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದಾಗಿದೆ. ಹಿಂದೆ ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾದಂದಿನಿಂದಲೂ ಪರಮಾಧಿಕಾರದ ಪ್ರಸ್ತಾಪ ಗಾಳಿಯಲ್ಲಿ ಹರಿದಾಡುತ್ತಲೇ ಇತ್ತು. ಈಗ ಯಡಿಯೂರಪ್ಪ ಮತ್ತು ಅವರ ಮಂತ್ರಿಮಾಗಧರು ಅದನ್ನು ಮುಂದುವರಿಸಿದ್ದಷ್ಟೇ ಅಲ್ಲ, ಲೋಕಾಯುಕ್ತರ ಕಾರ್ಯಕ್ಕೆ ಅಡ್ಡಿಪಡಿಸುತ್ತಾ, ಕಿರುಕುಳ ನೀಡಿದ್ದರ ಬಗ್ಗೆ ಲೋಕಾಯುಕ್ತರೇ ಅನೇಕ ಕಡೆ ಹೇಳಿಕೊಂಡಿದ್ದಾರೆ. ಇಷ್ಟಾಗಿಯೂ ಕುಮಾರಸ್ವಾಮಿ ಈಗ ಸರ್ಕಾರದ ವಿರುದ್ಧ ಟೀಕೆಗಿಳಿದಿದ್ದು ಟಿವಿ ಚಾನೆಲೊಂದರ ಚರ್ಚೆಯಲ್ಲಿ ಲಜ್ಜೆಯಿಲ್ಲದೆ ಸಂತೋಷ ಹೆಗ್ಡೆ ಜತೆ ಮಾತನಾಡಿದ್ದು ಸೋಜಿಗವೆನಿಸುತ್ತದೆ.
ಈಗಿರುವ ಪ್ರಶ್ನೆ ಇಷ್ಟೆ. ಯಾರು ಹೋದರೂ ಇಲ್ಲಿ ಏನೂ ಬದಲಾವಣೆ ಆಗದು. ಇನ್ನೋರ್ವ ಲೋಕಾಯುಕ್ತರು ಬಂದರೂ ನಮ್ಮ ಸಂಪತ್ತು ಮಾನ ಪ್ರಾಣಗಳ ಲೂಟಿ ನಿಲ್ಲುವುದಿಲ್ಲ. ನಾವೂ ಎಲ್ಲೋ ಏನೋ ಆದರೆ ಏನಾಗುತ್ತದೆ ಎಂದುಕೊಳ್ಳುತ್ತಾ ನಮ್ಮ ಪಾಡಿಗೆ ನಾವಿರುತ್ತೇವೆ.
ಹಾಗಿರುವಾಗ ಕೆಸರಿನ ಕೊಳದಲ್ಲಿ ಲೋಕಾಯುಕ್ತ ಸಂತೋಷ ಹೆಗ್ಡೆಯವರೊಬ್ಬರೇ ಕೈಕಾಲು ಬಡಿಯುತ್ತಾ ಸಮಾಜಕ್ಕೆ ಒಳಿತು ಮಾಡಲಿ ಎಂದು ನಾವು ಯಾವ ಮುಖದಲ್ಲಿ ಕೇಳಿಕೊಳ್ಳುವುದು ?
6 comments:
ಸತ್ಯವಾದ ಮಾತನ್ನು ಹೇಳಿದ್ದಿರಾ! ಉದಾಸೀನ ಜನಕ್ಕೆ ಹೆಗ್ಡೆಯವರನ್ನು ನಿಲ್ಲಿಎನ್ನಲ್ಲು ಮುಖವಿಲ್ಲ.
ಉತ್ತಮ ಚಿಂತನೆ. ಪರಿಹಾರ ?
ಸುಂದರ ಬರಹ
ಚಿಂತನಾರ್ಹವಾದ ಬರಹ...ಇದಕ್ಕೆ ಪರಿಹಾರವೇನು?
ನೀವು ಹೇಳುವದು ನಿಜ. ಲೋಕಾಯುಕ್ತರಾಗಿ ಯಾರೇ ಬಂದರೂ ಸಹ, ರಾಜಕೀಯ ಬದಲಾಗದ ಹೊರತು, ಇಲ್ಲಿ ಏನೂ ಸುಧಾರಿಸಲಾರದು.
ನಾವಾಗಿಯೇ ಭ್ರಷ್ಟಾಚಾರವನ್ನು ವಿರೋಧಿಸಲು ಸಾಧ್ಯವಾ?
Post a Comment