ಗಾಳಿಯಲ್ಲಿ ಗುಂಡು
ಹಾರಿಸುವುದು ಎಂದರೆ
ತುಂಬಾ ಕಷ್ಟ
ಕಣ್ಣ ಮುಂದೊಂದು
ಗುರಿಯಿಲ್ಲದೆ ಹೋದರೆ
ಬಂದೂಕದ
ಕುದುರೆ ಎಳೆಯುವಾಗ
ಪುಳಕವಿರುವುದಿಲ್ಲ,
ಗುಂಡು ಈಡು ಸೀಳುವುದೇ?
ಆ ಆತಂಕ ಮಿಶ್ರಿತ
ಖುಷಿಯಾದರೂ ಅಲ್ಲೆಲ್ಲಿ!
ಶತ್ರುವಿನ ಎದೆಸೀಳಬೇಕಾದ
ಗುಂಡು ಹಾಗೆಯೇ ಗಾಳಿಯೊಂದಿಗೆ
ಘರ್ಷಿಸಿ ತೂರುತ್ತಾ ಹೋಗಿ
ವೇಗ ಕಳೆದು
ಕ....ಳೆ.........ದು
ಕೊನೆಗೆ ಬೇವಾರ್ಸಿಯಂತೆ
ಉದುರಿ ಹೋಗುವುದಕ್ಕೆ
ಏನಾದರೂ ಅರ್ಥವುಂಟೇ ಹೇಳಿ!
ಜಟ್ಟಿಯೊಬ್ಬನಿಗೆ ಗಾಳಿಯೊಡನೆ
ಗುದ್ದಾಡಿ ಶಕ್ತಿ ವ್ಯರ್ಥಗೊಳಿಸುವುಕ್ಕಿಂತ
ಗೋಡೆಗೆ ಬಡಿದು ಪುಡಿಗುಟ್ಟಿಸಿ
ತೊಡೆ ತಟ್ಟಿ ಮೆರೆಯುವುದು ಮೇಲು
ಶೂನ್ಯದಲ್ಲಿ ಗುರಿ
ಹುಡುಕಲು ಆಗುವುದಿಲ್ಲ
ಹುಡುಕುತ್ತಾ ಕೊನೆಕೊನೆಗೆ
ಶೂನ್ಯವೇ ನಮ್ಮನ್ನು
ಬೇಟೆಯಾಡುವಂತೆ ಅನ್ನಿಸುತ್ತದೆ
Photo by Aurelie and Morgan David de Lossy
1 comment:
ವೇಣು ಸರ್, ಹೊಸ ಪೋಸ್ಟ್ ಚೆನ್ನಾಗಿದೆ... `ಶೂನ್ಯದಲ್ಲಿ ಗುರಿ ಹುಡುಕಲು ಆಗುವುದಿಲ್ಲ' ಅರ್ಥಗಭರ್ಿತ ಪದ. ಆದರೆ ಗಾಳಿಯಲ್ಲಿ ಗುಂಡು ಹೊಡೆಯೋದರ ಒಂದು ಲಾಭವೇನೆಂದರೆ ಎಲ್ಲಿ ಬೇಕಾದರೂ ಹೊಡೆಯಬಹುದು. ಯಾಕೆಂದರೆ ಗುರಿ ತಪ್ಪುವ ಚಿಂತೆಯಿರುವುದಿಲ್ಲ.
Post a Comment