ಬರೆಯುವುದನ್ನು ಮರೆತು ಬಿಟ್ಟಿದೇನಾ...ಎಂದು ನಾನು ನನ್ನಷ್ಟಕ್ಕೇ ಅಂದುಕೊಳ್ಳುತ್ತಿದ್ದೆ...
ನನ್ನ ಅಕ್ಷರಗಳನ್ನು ನೋಡಿ, ಛೇ ನನ್ನ ಬರವಣಿಗೆ ಕಲೆಯೇ ಹೋಗಿ ಬಿಟ್ಟಿತೇನೋ ಎಂಬ ವೈರಾಗ್ಯ ಬರತೊಡಗಿತ್ತು.
ಈಗ ತಿಂಗಳ ಹಿಂದೆ ಮಂಗಳೂರಿನ ವಿಜಯ ಪೆನ್ ಮಾರ್ಟಿಗೆ ಹೋಗಿದ್ದಾಗ ಒಳ್ಳೆಯ ಪೆನ್ನು ತೋರಿಸಿ ಎಂದೆ. 150 ರೂ.ನ ಒಂದು ಪೆನ್ ತೋರಿಸಿದರು. ಬಾಯರ್ ಕಂಪನಿಯದ್ದು. ಒಮ್ಮೆ ಅದರಲ್ಲಿ ಗೀಚಿ ನೋಡಿದರೆ ಚೆನ್ನಾಗಿದ್ದಂತೆ ತೋರಿತು.
ಅದು ತಂದ ಬಳಿಕ ಮತ್ತೆ ನನ್ನ ಕೈಬರಹ ಸುಧಾರಿಸುತ್ತಿದೆ.
ಬರೆಯುವುದಕ್ಕೂ ಪೆನ್ನಿಗೂ ಆತ್ಮೀಯ ಸಂಬಂಧವೇ ಇದೆ. ಒಂದು ಒಳ್ಳೆಯ ಪೆನ್ನಿದ್ದರೆ ಬರೆಯುವುದಕ್ಕೆ ಎಷ್ಟು ಖುಷಿಯಾಗುತ್ತೆ ಗೊತ್ತಾ? ನಾನು ಕನ್ನಡಪ್ರಭಕ್ಕೆ 2002ರಲ್ಲಿ ವರದಿಗಾರನಾಗಿ ಸೇರುವ ವೇಳೆಗೆ ಅದಾಗಲೇ ಕಂಪ್ಯೂಟರ್ ಬಂದಾಗಿತ್ತು. ಕಾರ್ಯಕ್ರಮಗಳಿಗೆ ಹೋಗಿ ಬಂದು ಕಾಗದ ಪೆನ್ ಹಿಡಿದು ಬರೆಯಲು ಕುಳಿತರೆ ನಮ್ಮ ಹಿರಿಯ ವರದಿಗಾರರು, ಬರೆಯಲು ಹೋಗಬೇಡಿ, ನೇರವಾಗಿ ಕಂಪ್ಯೂಟರ್ ನಲ್ಲಿ ವರದಿ ಟೈಪಿಸಿ ಎಂದೇ ಆದೇಶಿಸಿ ಬಿಟ್ಟರು.
ಹಾಗೆ ಕಂಪ್ಯೂಟರಿನಲ್ಲಿ ವರದಿ ಟೈಪ್ ಮಾಡುವುದು ಹೆಚ್ಚು ಅಭ್ಯಾಸವಾಗಿ ಬಿಟ್ಟಿತು. ಪಿಯುಸಿ, ಬಿಎ ಪದವಿಯಲ್ಲಿ ನೋಟ್ಸ್ ಬರೆಯುವುದು ಬಹಳ ಆಪ್ತ ವಿಚಾರವಾಗಿತ್ತು. ಹೀರೋ ಶಾಯಿ ಪೆನ್ನಿನನಲ್ಲಿ ಬರೆಯಲು ಕುಳಿತರೆ ಆಹ್ ಅದೆಂತಹಾ ಅನುಭವ!
ಶಾಯಿ ಪೆನ್ನು ಬಿಳಿಯ ಹಾಳೆಯ ಮೇಲೆ ಜಾರುತ್ತಾ ಹೋಗುವಾಗ ಸುಂದರ ಅಕ್ಷರಗಳು ಮೈದಳೆಯುತ್ತಾ ಹೋಗುತ್ತಿದ್ದವು, ಅಂತಹ ನೋಟ್ಸನ್ನು ಓದುವ ಖುಷಿ ಇನ್ನಿಲ್ಲದ್ದು.
ನಾನು ವರದಿಗಾರನಾದ ಬಳಿಕ ಬರೆಯುತ್ತಿದ್ದುದು ಎಂದರೆ ಪುಟ್ಟ ಪಾಕೆಟ್ ನೋಟ್ ಪುಸ್ತಕದಲ್ಲಿ. 10 ರೂ., 20 ರೂ.ಗೆ ಸಿಗುವ ಅದ್ಯಾವುದೋ ಜೆಲ್ ಪೆನ್ನುಗಳು, ಬಳಸಿ ಎಸೆಯುವ ಪೆನ್ನುಗಳಲ್ಲಿ. ಅವುಗಳಲ್ಲಿ ಬರೆಯುವುದರಲ್ಲಿ ಅಷ್ಟೇನು ಮಜಾ ಇಲ್ಲ. ಇನ್ನು ಪುಟ್ಟ ಪುಸ್ತಕಗಳಲ್ಲಿ ನೋಟ್ಸ್ ಮಾಡಿಕೊಳ್ಳುವ ತುರ್ತಿನಲ್ಲಿ ನನ್ನ ಅಕ್ಷರಗಳೋ ಡಾಕ್ಟರುಗಳ ಬರವಣಿಗೆಯಂತಾಗಿತ್ತು.
ಒಮ್ಮೊಮ್ಮೆ ನಾನು ಬರೆದದ್ದು ಏನೆಂಬುದೇ ನನಗೆ ಗೊತ್ತಾಗುತ್ತಿರಲಿಲ್ಲ.
ನಮ್ಮ ಸಹಪಾಠಿ ಹುಡುಗಿಯರಂತೂ ಮುದ್ದಾದ ಉರುಟುರುಟು ಅಕ್ಷರಗಳಲ್ಲಿ ಬರೆಯುತ್ತಿದ್ದರು, ಅದನ್ನು ಮೀರಿಸಲು ನಾವು ಹುಡುಗರಿಗೆ ಸಾಧ್ಯವೇ ಇರಲಿಲ್ಲ, ಆದರೂ ಹುಡುಗಿಯರ ಅಕ್ಷರ ಶೈಲಿ ಬೇರೆ, ಹುಡುಗರ ಅಕ್ಷರ ಶೈಲಿಯ ಗೆಟಪ್ಪೇ ಬೇರೆ.
ಈಗಿನ ವಿದ್ಯಾರ್ಥಿಗಳಿಗೆ ಇದು ಸಿಗುವ ಸಾಧ್ಯತೆ ಕಡಿಮೆ ಯಾಕೆಂದರೆ ರೆಡಿಮೇಡ್ ಪ್ರಿಂಟ್ ಔಟುಗಳು ಬಂದಿವೆಯಲ್ಲ. ಗೂಗಲ್ ಮಾಡಿ ಅದರಲ್ಲಿ ಸಿಕ್ಕದ್ದನ್ನು ಪ್ರಿಂಟು ತೆಗೆದರಾಯ್ತು. ಅಥವಾ ಪಠ್ಯ ಪುಸ್ತಕ ಫೋಟೊ ಕಾಪಿ ಮಾಡಿಕೊಂಡರಾಯ್ತು.
ಪೆನ್ನಿನಲ್ಲೂ ಕೆಲವು ಪೆನ್ನು ಕೆಲವರಿಗೆ ಇಷ್ಟ. ನನ್ನ ಹಿರಿಯ ಮಿತ್ರ, ಹೊಸದಿಗಂತದ ಗುರುವಪ್ಪ ಬಾಳೆಪುಣಿಯವರದ್ದು ಸುಂದರ ಅಕ್ಷರ. ಎಷ್ಟೇ ವೇಗವಾಗಿ ನೋಟ್ಸ್ ಮಾಡಬೇಕಿದ್ದರೂ ಅವರ ಅಕ್ಷರ ಆಕಾರ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಇಂಗ್ಲಿಷ್ ನಲ್ಲಿ ಟೈಮ್ಸಾಫ್ ಇಂಡಿಯಾದ ಜಯದೀಪ್ ಶೆಣೈಯವರದ್ದು ಕೂಡಾ ಸುಂದರ ಅಕ್ಷರ . ಇವರಿಬ್ಬರಿಗೂ ಜೆಲ್ ಪೆನ್ ಎಂದರೆ ಖುಷಿಯಂತೆ. ನನಗೆ ಜೆಲ್ ಪೆನ್ ನಲ್ಲಿ ಬರೆಯಲಾಗದು, ಶಾಯಿಯ ಪೆನ್ನು ಇಷ್ಟ. ಹೀರೋ ಪೆನ್ನು ಫೇವರಿಟ್ ಆಗಿತ್ತು. ಆದರೆ ಎರಡು ತಿಂಗಳ ಹಿಂದೆ ಕೊಂಡು ಕೊಂಡ ಹೀರೊ ಪೆನ್ ಸರಿಯಾಗಿ ಬರೆಯುತ್ತಿಲ್ಲ, ಹಾಗಾಗಿ ವಿಜಯಾ ಪೆನ್ನು ಮಾರ್ಟಿಂದ ಕೊಂಡುಕೊಂಡಿರುವ ಬಾಯರ್ ಪೆನ್ ಈಗ ನನ್ನ ಆಪ್ತ ಮಿತ್ರ.
ನೀವು ಬರೆಯುವವರಾಗಿದ್ದರೆ ಒಳ್ಳೆಯ ಪೆನ್ನು ಖರೀದಿಸಿ, ನಿಮ್ಮಮಿತ್ರರು ಬಂಧುಗಳು ಬರೆಯುವ ಹವ್ಯಾಸದವರಿಗೆ ಒಳ್ಳೆಯ ಪೆನ್ನು ಉಡುಗೊರೆ ನೀಡಿ, ಖುಷಿ ಪಡದಿದ್ದರೆ ಮತ್ತೆ ಕೇಳಿ!