Showing posts with label ಸೈಕಲ್ ಸವಾರಿ. Show all posts
Showing posts with label ಸೈಕಲ್ ಸವಾರಿ. Show all posts

29.6.18

ಯಾಣಕ್ಕೆ ಮಳೆಗಾಲ ಸೈಕಲ್ ಸವಾರಿ

ಪ್ರಕೃತಿಯನ್ನು ವೀಕ್ಷಿಸುವುದಕ್ಕೆ ಆಪ್ತವಾದ ಕಾಲವೆಂದರೆ ಮಳೆಗಾಲ. ಹಾಗೆ ಮಳೆಯಲ್ಲಿ ತೊಯ್ಯುತ್ತಾ ಪ್ರಕೃತಿಯ ನಡುವೆ ಸಾಗುವುದಕ್ಕೆ ಪ್ರಕೃತಿಯ ಚೆಲುವು ಕಣ್ತುಂಬಿಕೊಳ್ಳುವುದಕ್ಕೆ ಸೂಕ್ತ ಚಾರಣ ಅಥವಾ ಸೈಕಲ್ ಟೂರ್.
ಇವೆರಡೂ ನನಗೆ ಆಪ್ತ. ಈ ಬಾರಿಯ ಸೈಕಲ್ ಟೂರಿಗೆ ಮಂಗಳೂರು ಬೈಸಿಕಲ್ ಕ್ಲಬ್ ಎಂಬಿಸಿಯ ನಾವು ಐವರು ಸಿದ್ಧರಾದೆವು. ಎಂಬಿಸಿಯ ಗಣೇಶ್ ನಾಯಕ್ ನಾವು ಹೋಗುವ ತಾಣ ಅದು ಯಾಣ ಎಂದು ನಿರ್ಧರಿಸಿಯಾಗಿತ್ತು. ಭಾನುವಾರದ ಒಂದೇ ರಜೆ ನಮ್ಮೆಲ್ಲರಿಗೆ. ಮಂಗಳೂರಿನಿಂದಲೇ ಸೈಕಲ್ ತುಳಿದು 230 ಕಿ.ಮೀ ದೂರದ ಯಾಣಕ್ಕೆ ಹೋಗಿ ಬರುವುದು ಒಂದು ದಿನದಲ್ಲಿ ಅಸಾಧ್ಯ. ಹಾಗಾಗಿ ಬೇರೆ ವಿಧಿಯಿಲ್ಲದೆ ಮೂರು ಕಾರುಗಳಲ್ಲಿ ನಮ್ಮ ಸೈಕಲ್ ಹೇರಿಕೊಂಡು ಹೊರಟೆವು.
ಕಾರೇರಿ ಸೈಕ್ಲಿಂಗ್ ಹೊರಟವರು!

ಇಂಥ ದೃಶ್ಯವೆಲ್ಲ ಸಿಟಿಯಲ್ಲೆಲ್ಲಿ !

ಯಾಣದ ದಾರಿಯಲ್ಲೊಂದು ನಖರಾ ಚಿತ್ರ

ಹಸಿರದಾರಿಯಲ್ಲಿ ಸವಾರಿ

ನಮ್ಮ ಟೀಂ

ಪೋಸಿಂಗ್





ಭೈರವೇಶ್ವರ ಶಿಖರದ ಮುಂದೆ


ಗಣೇಶ್ ನಾಯಕ್, ಚಿನ್ಮಯ ದೇಲಂಪಾಡಿ, ಹಿಮಾಚಲ ಪ್ರದೇಶ ಮೂಲದ ದಂತ ವೈದ್ಯ ಆಕಾಶ್ ಅಗ್ನಿಹೋತ್ರಿ, ಶ್ರೀಕಾಂತ್ ರಾಜ, ನಾನು ನಾವೈವರು ಸೈಕಲ್ ಸವಾರರಾದರೆ ಕಾಲೇಜು ಉಪನ್ಯಾಸಕ ಹರಿಪ್ರಸಾದ್ ಹಾಗೂ ಅವರ ಮಗಳು ಅಹನಾ-ಇದು ನಮ್ಮ ಈ ಟೂರಿನ ತಂಡ. ಹರಿಪ್ರಸಾದ್ ಮತ್ತು ಅಹನ ಸೈಕಲ್ ತರದೆ ಕೇವಲ ಪ್ರವಾಸದ ಮಜಾ ಅನುಭವಿಸಲು ಬಂದಿದ್ದರು, ಇನ್ನೊಂದರ್ಥದಲ್ಲಿ ನಮ್ಮ ಸೈಕಲ್ ಸವಾರಿಯ ಛಾಯಾಗ್ರಹಣ, ಜತೆಗೆ ಅಗತ್ಯ ನೆರವು ನೀಡುವ ಜವಾಬ್ದಾರಿಯನ್ನೂ ಅಲಿಖಿತ ನಿಯಮದಂತೆ ಬೆನ್ನೇರಿಸಿಕೊಂಡಿದ್ದರು.
ಮೊನ್ನೆ ಭಾನುವಾರ ಮಂಗಳೂರು ಮುಂಜಾನೆಯ ಜಡಿಮಳೆಗೆ ತೊಪ್ಪೆಯಾಗಿ ಮಲಗಿರುವಾಗಲೇ ನಮ್ಮ ಕಾರುಗಳು ಹೊರಟವು. ದಾರಿ ಮಧ್ಯೆ ಕುಂದಾಪುರದಲ್ಲಿ ಹೊಟ್ಟೆ ತುಂಬಿಸಿಕೊಂಡು ಸಾಂಗವಾಗಿ ಸಾಗಿ ಕುಮಟಾ ಸೇರಿದೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಮಳೆ ನಮಗೆ ಹಾಯ್ ಹೇಳುತ್ತಲೇ ಇತ್ತು.
ಕುಮಟಾ ಪೇಟೆಯಲ್ಲೇ ನಮ್ಮ ಕಾರು ನಿಲ್ಲಿಸಿ, ಸೈಕ್ಲಿಂಗ್ ದಿರಿಸು ಧರಿಸುವಾಗ ಕುತೂಹಲಿ ಸ್ಥಳೀಯರು ನಮ್ಮ ವೇಷವನ್ನೂ, ನಮ್ಮ ಸೈಕಲ್ಗಳನ್ನೂ ಅಚ್ಚರಿಯಿಂದ ಗಮನಿಸಿದರು. ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಹೊರಟೆವು.
ಯಾಣಕ್ಕೆ ಸ್ವಾಗತ
ಕುಮಟಾ ಸೇತುವೆ ದಾಟಿ, ಬಲಕ್ಕೆ ತಿರುಗಿ ಏರು ದಾರಿಯಲ್ಲಿ ಸಾಗುವಾಗ ಚಳಿಯೆಲ್ಲಾ ಬಿಟ್ಟು ವಾರ್ಮ್ ಅಪ್ ಆದಂತಾಯ್ತು. ನಾವು ನಮ್ಮ ಖುಷಿಗೆ ಹೊರಟಿದ್ದರೆ ದಾರಿಯಲ್ಲಿ ತಮ್ಮ ಕಾಯಕವನ್ನು ಮಾಡುವ ಮಹಿಳೆಯರು ಕಾಡಿನಿಂದ ಸೊಪ್ಪಿನ ಕಟ್ಟು ಹೊತ್ತು ಶಿಸ್ತಿನಲ್ಲಿ ನಡೆದು ಬರುತ್ತಿದ್ದರು. ದಾರಿಯುದ್ದಕ್ಕೂ ಮಳೆ ಸೃಷ್ಟಿಸಿದ ದೃಶ್ಯಕಾವ್ಯವನ್ನು ಸವಿಯಲು, ಕಣ್ತುಂಬಿಕೊಳ್ಳುವ ಜತೆಗೆ ಕ್ಯಾಮೆರಾದಲ್ಲಿ ದಾಖಲಿಸಲು ಸಾಕಷ್ಟು ಸಮಯ ನೀಡುತ್ತಾ ಮುಂದುವರಿದೆವು. ಮುರಕಲ್ಲಿನ ಪಾದೆ ಪ್ರದೇಶ, ಅಲ್ಲಿ ಅಲ್ಲಲ್ಲಿ ಉಂಟಾದ ಪಳ್ಳಗಳು(ಚಿಕ್ಕ ಗುಂಡಿ ತುಂಬ ಶುಭ್ರ ನೀರು), ಅಲ್ಲಲ್ಲಿ ಹಸಿರು ಹುಲ್ಲು ಹಿನ್ನೆಲೆಯಲ್ಲಿ ಕಾಡು ಇವುಗಳು ನೀಡುವ ಖುಷಿಯೇ ಬೇರೆ.
ಸೈಕಲ್ ಬಿಟ್ಟು ಕೈಕಾಲ್ ಬಳಕೆ
ಕುಮಟಾ-ಶಿರಸಿ ರಸ್ತೆಯಲ್ಲಿ ಸುಮಾರು 13 ಕಿ.ಮೀ ಚಲಿಸಿ, ಕತಗಾಲ, ಅಂತ್ರವಳ್ಳಿ ದಾಟಿ ಹೈವೇ ಬಿಟ್ಟು ಎಡಕ್ಕೆ ಹೊರಳಿದರೆ ದಟ್ಟಾರಣ್ಯ. ಅದರ ನಡುವೆ ನಮ್ಮ ನಿರೀಕ್ಷೆಯನ್ನೂ ಮೀರಿ ಉತ್ತಮ ರಸ್ತೆಯೇ ಇತ್ತು. ಐದು ಸೈಕಲ್ಲುಗಳು ಮುಂದೆ ಸಾಗುತ್ತಿದ್ದರೆ ನಮ್ಮ ಹಿಂದೆ ಅಥವಾ ಮುಂದೆ ಅಪ್ಪ-ಮಗಳು ಇದ್ದ ಕಾರು ಇತ್ತು. ಮಳೆಗಾಲವಾಗಿದ್ದರಿಂದಲೋ ಏನೋ ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯೆನ್ನಬಹುದು. ಹಾಗಾಗಿ ರಸ್ತೆ ನಮಗೇ ಬರೆದುಕೊಟ್ಟಂತೆ ಆಗಿತ್ತು. ಅದಕ್ಕಾಗಿಯೇ ಗಣೇಶ್ ನಾಯಕ್ ನಮ್ಮೆಲ್ಲರನ್ನೂ ಬೇಕು ಬೇಕಾದಂತೆ ರಸ್ತೆಯಲ್ಲಿ ನಿಲ್ಲಿಸಿ, ಸವಾರಿ ಮಾಡಿಸಿ ಆಂಗಲ್ ಬದಲಾಯಿಸಿ ಫೊಟೊ ತೆಗೆದುಕೊಳ್ಳುತ್ತಲೇ ಇದ್ದರು!
ಕಾಡು, ಅಲ್ಲಲ್ಲಿ ಕಾಡಿನ ತೆಕ್ಕೆಗೆ ಹೊಂದಿಕೊಂಡಂತೆ ಗದ್ದೆ, ಹಳ್ಳಿ, ಮನೆಗಳು, ರಸ್ತೆ ಬದಿಯಲ್ಲಿ ಸಿಮೆಂಟಿಲ್ಲದೆ ತಾಳೆ ಎಲೆ, ಮಡಲು ಬಳಸಿ ಮಾಡಿದ ತಂಗುದಾಣಗಳು ಇವೆಲ್ಲವೂ ನಮ್ಮ ಸೋಜಿಗದ ಕಣ್ಣುಗಳಿಗೆ ಆಹಾರವಾದರೂ ಗ್ರಾಮಸ್ಥರ ಶಾಂತಿಯುತ ಆದರೆ ಒಡಲಲ್ಲಿರುವ ಅನೇಕ ನೋವುಗಳನ್ನು ಕಡೆಗಣಿಸುವಂತಿಲ್ಲ.
ಕಾಡು ದಾರಿ, ಜತೆಗೆ ಏರುದಾರಿ-ಇಳಿದಾರಿಯಾದರೂ ಮಳೆಗಾಲದ ತಣ್ಪಿನಿಂದಾಗಿ ಯಾವುದೇ ವಿಶೇಷ ಕಷ್ಟವನ್ನನುಭವಿಸದೆ ಯಾಣ ರಸ್ತೆ ಮುಗಿಯುವ ಕೊನೆಯ ಭಾಗ ಸೇರಿಕೊಂಡೆವು. ಅಲ್ಲೊಂದೇ ಒಂದು ಅಂಗಡಿಯಲ್ಲಿ ಚಹಾ ವಿರಾಮ, ಅಲ್ಲೇ ಬದಿಯಲ್ಲಿ ಸೈಕಲ್ಲನ್ನು ಭದ್ರವಾಗಿರಿಸಿ ಒಂದು ಕಿ.ಮೀ ಚಾರಣ.
ದಾರಿ ಪಕ್ಕದ ಸಣ್ಣ ತೊರೆ, ಜಲಪಾತದಲ್ಲಿ ಮತ್ತೊಂದಷ್ಟು ಫೊಟೊ ಶೂಟ್ ಆಗಿ ಮೇಲೇರುತ್ತಾ ಮೊದಲು ಸಿಕ್ಕಿದ್ದು ಗಣಪತಿ ದೇವಸ್ಥಾನ, ಎಡಗಡೆಯಲ್ಲಿ ವಿನೂತನ ರಚನೆಯ ಮೋಹಿನಿ ಶಿಖರವಾದರೆ ಮತ್ತೆ ಮೆಟ್ಟಿಲಲ್ಲಿ ಏರುತ್ತಾ ಹೋದರೆ ಅದು ತಲಪುವುದು ವಿಶಾಲವಾದ ಭೈರವೇಶ್ವರ ಶಿಖರದ ಬುಡಕ್ಕೆ. ಅಲ್ಲಿ ಮತ್ತೆ ಭೈರವೇಶ್ವರನ ಗುಡಿ ಶಿಲಾರಚನೆಯ ಬುಡದಲ್ಲೇ ಇದೆ.
ಭಸ್ಮಾಸುರ ಮೋಹಿನಿ ಪುರಾಣಕಥೆಯೊಂದಿಗೆ ಮಿಳಿತವಾಗಿ ಈ ಎರಡು ಬೃಹತ್ ಕಲ್ಲುಗಳಿಗೆ ಮೋಹಿನಿ ಶಿಖರ, ಭೈರವ ಶಿಖರ ಹೆಸರು ಬಂದಿದೆ. ಗಾತ್ರದಲ್ಲಿ ಎತ್ತರವಿರುವುದು ಭೈರವ ಶಿಖರ. ಮೋಹಿನಿ ಶಿಖರ 90 ಮೀಟರ್ ಎತ್ತರವಿದ್ದರೆ ಭೈರವೇಶ್ವರ ಶಿಲಾಶಿಖರ 120 ಮೀಟರ್ ಇದೆ. ಇವುಗಳಲ್ಲಿ ಅಲ್ಲಲ್ಲಿ ದೊಡ್ಡಜೇನುಹುಳುಗಳ ಗೂಡು ವಿಶೇಷ ಮೆರುಗು ನೀಡುತ್ತವೆ. ನಮ್ಮ ಸೈಕಲ್ ದಿರಿಸಿನ ಕಾರಣದಿಂದ ದೇವಸ್ಥಾನದೊಳಗೆ ಹೋಗದೆ ಹೊರಗಿನಿಂದಲೇ ನಮಿಸಿ ಮತ್ತೆ ಕೆಳಗಿಳಿದೆವು. ಅಷ್ಟರಲ್ಲಾಗಲೇ ಹೊಟ್ಟೆ ತಾಳ ಹಾಕಿದ್ದರಿಂದ ತಳಭಾಗದ ಪಾಕರ್ಿಂಗ್ ತಾಣದ ಚಹಾದಂಗಡಿಯಲ್ಲಿ ಪ್ಲೇಟ್ ಮ್ಯಾಗಿ ಹೊಟ್ಟೆಗಿಳಿಸಿ ಮತ್ತೆ ಸೈಕಲ್ ತುಳಿಯಲು ಶುರುವಿಟ್ಟರೆ ಮಧ್ಯಾಹ್ನ 2.30 ಸುಮಾರಿಗೆ ನಾವು ಕಾರು ನಿಲ್ಲಿಸಿದ ಕುಮಟಾದ ಪಾಂಡುರಂಗ ಹೊಟೇಲ್ ಆವರಣ ತಲಪಿದೆವು. ಮತ್ತೆ ವೇಷ ಪಲ್ಲಟಿಸಿ ಕಾರೇರಿದವರು ರಾತ್ರಿ ವೇಳೆಗೆ ಮರಳಿ ಮನೆಗೆ.
ಭೈರವೇಶ್ವರ ಶಿಖರ, ಅಂತರ್ಜಾಲ ಚಿತ್ರಕೃಪೆ
ಮೋಹಿನಿ ಶಿಖರ, ಅಂತರ್ಜಾಲ ಚಿತ್ರ ಕೃಪೆ

11.10.16

ಚಾರ್ಮಾಡಿ, ಕಳಸ, ಕುದುರೆಮುಖ ಸೈಕಲ್ ಪ್ರವಾಸಕ್ಕೊಂದು ದಾರುಣ ಕೊನೆ

ಒಂದೂವರೆ ಸಾವಿರ ಮೀಟರ್ ಎತ್ತರವನ್ನು ಸತತ ಸೈಕ್ಲಿಂಗ್ ನಲ್ಲಿ ಕ್ರಮಿಸುವುದು..ಜಠರಾಗ್ನಿಯನ್ನು ತಣಿಸಿದ ಬಳಿಕ ಮಲೆನಾಡಿನ ಎಸ್ಟೇಟಿನ ತಿರುವು ದಾರಿಗಳಲ್ಲಿ ಹಸಿರು ಕಣ್ತುಂಬಿಕೊಳ್ಳುತ್ತಾ, ಸಿಗುವ ತಾಜಾ ಕಾಫಿಯಂಗಡಿಗಳಲ್ಲಿ ಮಲೆನಾಡಿನ ಕಾಫಿ ಗುಟುಕರಿಸುವುದು...ಇಂತಹ ಅನುಭವ ಯಾರಿಗುಂಟು ಯಾರಿಗಿಲ್ಲ...
ಇಂಥದ್ದೊಂದು ದೀರ್ಘ ಸೈಕಲ್ ಸವಾರಿ ಹಾಕಲೇಬೇಕೆಂಬುದು ಮಿತ್ರ, ಎಂಸಿಎಫ್ ಉದ್ಯೋಗಿ ಚಿನ್ಮಯ ದೇಲಂಪಾಡಿ ಹಾಗೂ ನನ್ನ ದೀರ್ಘಕಾಲೀನ ಆಲೋಚನೆಯಾಗಿತ್ತು. ಇದರಲ್ಲಿ ಸೇರಿಕೊಳ್ಳಬೇಕು ಎಂಬ ನಮ್ಮ ಆಮಂತ್ರಣಕ್ಕೆ ಒಪ್ಪಿಸೇರಿಕೊಂಡವರು ಗುರುವಾಯನಕೆರೆಯ ಗೆಳೆಯ, ಮಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಗೌರವ್ ಪ್ರಭು.
ಸೈಕ್ಲಿಂಗ್ ಪಟುಗಳ ಹುಚ್ಚಿಗೆ ಕಿಚ್ಚು ಹಚ್ಚುವ ಎಲ್ಲ ವಾಹನ ಚಾಲಕರಿಗೂ ತಲೆನೋವೇ ಆಗಿರುವ ಆದರೆ ಪ್ರಕೃತಿ ಪ್ರಿಯರಿಗೆ 365 ದಿನವೂ ನಿಸರ್ಗದ ಚೆಲುವಿನ ದರುಶನ ನೀಡುವ ಚಾರ್ಮಾಡಿ ಘಾಟ್ ಏರುವುದು, ಆ ಬಳಿಕ ಸಿಗುವ ಕೊಟ್ಟಿಗೆಹಾರದಿಂದ ಎಡಕ್ಕೆ ತಿರುಗಿ ಕಳಸ ಸೇರುವುದು ಮೊದಲ ದಿನದ ಯೋಜನೆ. 
ಮರುದಿನ ಕಳಸದಿಂದ ಏರಿಳಿತದ ಹಾದಿಯಲ್ಲಿ ಕುದುರೆಮುಖ ಸೇರಿ, ನಂತರ ಕಾರ್ಕಳ, ಪಡುಬಿದಿರೆಯಾಗಿ ಊರು ಸೇರುವುದು ಎರಡನೇ ದಿನದ ನಮ್ಮ ವೇಳಾಪಟ್ಟಿ.


ದಿನ 1: ಮಂಗಳೂರಿನಿಂದ ಕಳಸದತ್ತ
ನಾನು ಸುರತ್ಕಲಿನಿಂದಲೇ ಮುಂಜಾನೆ ಹೊರಟರೆ ಚಿನ್ಮಯ ಮಂಗಳೂರಿನಲ್ಲಿ ಜತೆಯಾದರು. ಬಿ.ಸಿ.ರೋಡಿನಲ್ಲಿ ಲಘು ಉಪಹಾರ ಸೇವಿಸಿ ಮುಂದುವರಿದೆವು. ಗುರುವಾಯನಕೆರೆ ಜಂಕ್ಷನಿನಲ್ಲಿ ಗೌರವ್ ಕೂಡಾ ಸೇರಿಕೊಂಡು ತ್ರಿಮೂರ್ತಿಗಳಾಗಿ ಮುಂದುವರಿದೆವು. ಉಜಿರೆಯ ಜನಾರ್ಧನ ಸ್ವಾಮಿ ದೇಗುಲದ ಮುಂಭಾಗದ ಹಳೆಯ ಹೊಟೇಲಿನಲ್ಲಿ ಬೆಳಗ್ಗಿನ ಉಪಹಾರ ತಿನ್ನುವಾಗಲೇ ಗೌರವ್ ಅವರ ಮಿತ್ರ ಆಗಮಿಸಿದರು. ಅವರೂ ನಮ್ಮ ಪ್ರವಾಸಕ್ಕೆ ಸೇರಬೇಕಾದರೂ ತಮ್ಮ ಕೌಟುಂಬಿಕ ಅನಿವಾರ್ಯತೆಯಿಂದ ನಮ್ಮನ್ನು ಬೀಳ್ಕೊಟ್ಟರು.
ಉಜಿರೆಯಿಂದ ಯಾವುದೇ ಅರ್ಜೆಂಟಿಲ್ಲದೆ ಸುತ್ತಮುತ್ತಲಿನ ವಿಚಾರಗಳನ್ನು ಗಮನಿಸುತ್ತಾ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಾ ಮುಂದುವರಿದೆವು. ಪ್ರೊಫೆಷನಲ್ ಸೈಕ್ಲಿಸ್ಟ್ ಗಳಂತೆ "ಸರಾಸರಿ ವೇಗ, ಗರಿಷ್ಠ ವೇಗ"ಗಳಿಗಷ್ಟೇ ಸೀಮಿತಗೊಳ್ಳುವುದು ಇಷ್ಟವಿರಲಿಲ್ಲ. ಹಾಗಾಗಿ ನಿಲ್ಲಬೇಕಾದಲ್ಲಿ ನಿಂತು ಸಾಗುತ್ತಿದ್ದೆವು. ನನ್ನ ಹಿಂದಿನ ಚಾರ್ಮಾಡಿ ಸೈಕಲ್ ಪ್ರವಾಸದಲ್ಲಿ ಕಾಲಿನ ಮಾಂಸಪೇಶಿ ಸೆಳೆತ ಉಂಟಾಗಿ ಇಡೀ ಪ್ರವಾಸ ನೋವುದಾಯಕವಾಗಿದ್ದ ನೆನಪು ಬೆನ್ನಿಗಿತ್ತು. ಈ ಬಾರಿ ಅಂತಹ ಯಾವುದೇ ದೈಹಿಕ ಸಮಸ್ಯೆ ಇರಲಿಲ್ಲ 
ಆದರೆ....
ನನ್ನ ಸೈಕಲ್ಲಿನ ಹಿಂದಿನ ಡಿರೇಲ್ಯೂರ್(ಎಂದರೆ ಚೈನನ್ನು ಬೇರೆ ಬೇರೆ ಗಿಯರು ಚಕ್ರಗಳಿಗೆ ದಾಟಿಸುವ ಸಲಕರಣೆ) ದೊಡ್ಡ ಎರಡು ಗಿಯರುಗಳಿಗೆ ಕೂರುತ್ತಲೇ ಇರಲಿಲ್ಲ ಗಿಯರು ಸೈಕಲ್ ತಾಂತ್ರಿಕವಾಗಿ ಮಾಹಿತಿ ಇದ್ದವರಿಗೆ ಇದು ಅರ್ಥವಾಗಬಹುದು. ಏರುದಾರಿಗಳನ್ನು ಸಲೀಸಾಗಿ ಏರಬೇಕಾದರೆ ಈ ಗಿಯರುಗಳು ಅತ್ಯಗತ್ಯ. ಮುಂಭಾಗದ ಕ್ರ್ಯಾಂಕಿನಲ್ಲಿರುವ ಮೂರು ಗಿಯರುಗಳಲ್ಲಿ ಚಿಕ್ಕದಕ್ಕೆ ಗಿಯರ್ ಶಿಫ್ಟ್ ಮಾಡಿ, ಹಿಂಬದಿಯ ಏಳೋ, ಎಂಟೋ ಗಿಯರ್ ಸೆಟ್ ಗಳಲ್ಲಿ ದೊಡ್ಡ ಚಕ್ರಗಳಿಗೆ ಶಿಫ್ಟ್ ಮಾಡಿಕೊಂಡು ಏರುದಾರಿಯೇರುವುದು ಸಾಮಾನ್ಯ. ನನ್ನ ಎರಡು ದೊಡ್ಡ ಚಕ್ರಗಳೂ ಇಲ್ಲಿ ಉಪಯೋಗಶೂನ್ಯವಾಗಿದ್ದವು. ಇದು ಸಹಜವಾಗಿ ಅಳುಕುಂಟು ಮಾಡಿತ್ತು. ಎಂದರೆ ಕಾಲಿನ ಹೆಚ್ಚಿನ ಬಲ, ಶ್ರಮ ತುಳಿಯಲು ಹಾಕಬೇಕಾಗುತ್ತದೆ.
ದಾರಿಯಲ್ಲೊಂದು ಗ್ಯಾರೇಜಿನಲ್ಲಿ ಡಿರೇಲ್ಯೂರ್ ಸೆಟ್ಟಿಂಗ್ ಬದಲಾಯಿಸುವುದಕ್ಕೆ ಗೌರವ್ ಪ್ರಭೂ ಶ್ರಮಿಸಿದರಾದರೂ ಯಾವುದೇ ಫಲ ಸಿಗಲಿಲ್ಲ. ಕೊನೆಯಲ್ಲಿ ಆದದ್ದಾಗಲಿ ಎಂದು ಮುಂದುವರಿದೆವು. 

ಚಾರ್ಮಾಡಿಯ ಏರುದಾರಿ

ಚಾರ್ಮಾಡಿಯಲ್ಲೊಂದು ತಣ್ಣನೆಯ ಜಲಧಾರೆ
ಶರೀರಕ್ಕೆ ಹೆಚ್ಚು ಶ್ರಮಕೊಡದೆ ಸುಲಭ ಗಿಯರುಗಳಲ್ಲೇ ಮೇಲೇರುತ್ತಾ ಹೋದೆವು. ತೀರಾ ಚಡಾವು ಇದ್ದಲ್ಲಿ ನಿಧಾನವಾಗಿ ಸಾಗಿದ ಕಾರಣ ಹೆಚ್ಚು ತೊಂದರೆಯೇನೂ ಆಗಲಿಲ್ಲ. ಚಾರ್ಮಾಡಿ ಘಾಟಿ ಏರುವಾಗ ತಿರುವುಗಳಲ್ಲಿ ಲಾರಿಗಳು ಎಸೆದ ಕೊಳೆತ ಕೋಳಿ ತ್ಯಾಜ್ಯದ ದುರ್ವಾಸನೆ ಸಹಿಸಲಸಾಧ್ಯ. ಘಾಟ್ ಮುಗಿಯುತ್ತಾ ಬಂದಾಗ ಎರಡೂ ಬದಿಯ ಸೌಂದರ್ಯಲೋಕ ತೆರೆದುಕೊಂಡಿತು. ಎಡಬದಿ ಗೋಡೆಯಂತಹ ಗುಡ್ಡಗಳಿಂದ ಹರಿದು ಬರುವ ನೀರು ಮನದಣಿಯ ಮುಖಕ್ಕೆ ಎರಚಿಕೊಂಡು, ಖಾಲಿಯಾಗುತ್ತಿದ್ದ ಬಾಟಲಿ ಹಾಗೂ ನಮ್ಮ ಹೊಟ್ಟೆಗೂ ರಿಚಾರ್ಜ್ ಮಾಡಿಕೊಂಡೆವು. 9.30ಕ್ಕೆ ಉಜಿರೆ ಬಿಟ್ಟ ನಾವು 2 ಗಂಟೆಗೆ ಕೊಟ್ಟಿಗೆಹಾರ ಸೇರಿದ್ದವು.
ಕೊಟ್ಟಿಗೆಹಾರದಲ್ಲಿ ಊಟ, ನೀರ್ದೋಸೆ, ಬಾಳೆ ಹಣ್ಣು ಇತ್ಯಾದಿ ಹೊಟ್ಟೆಗಿಳಿಸಿ, ಎಡದ ರಸ್ತೆಗೆ ಹೊರಳಿದೆವು. ಅಲ್ಲಿಂದ ಎಸ್ಟೇಟುಗಳು, ಗದ್ದೆಗಳ ವಿಹಂಗಮ ದೃಶ್ಯ. ಹೆಚ್ಚೇನು ಏರುಗಳಿಲ್ಲದ ಹಾಗೆಂದು ಸುಲಭವೂ ಅಲ್ಲದ ಹಾದಿ. ಆದರೆ ಅಚ್ಚರಿಯೆಂದರೆ ರಸ್ತೆಗಳೆಲ್ಲ ಸಪಾಟು, ಹೊಂಡಗುಂಡಿಗಳೇನೂ ಇರಲಿಲ್ಲ.

ಚಾರ್ಮಾಡಿಯನ್ನೇರಿದ ಸಹಜ ಬಳಲಿಕೆ, ಮಧ್ಯೆ ಕೊಟ್ಟಿಗೆಹಾರದಲ್ಲಿ ಹೊಟ್ಟೆಗೆ ಸಾಂಗವಾಗಿ ಆಹಾರ ನೀಡಿದ್ದು ಇದರಿಂದ ಸೈಕಲ್ ಸವಾರಿ ಮಾಡುತ್ತಿರುವಾಗಲೇ ನಮಗೆ ಕಣ್ಣೆಳೆಯತೊಡಗಿತ್ತು. ಬಾಳೂರು ಕ್ರಾಸ್ ಸಿಗುವುದಕ್ಕೂ ಮೊದಲೇ ಬದಿಯಲ್ಲೊಂದು ಹಳೆಯ ಬಸ್ ನಿಲ್ದಾಣ ಮೈತುಂಬ ನಿರ್ಮಲ ಭಾರತ ಅಭಿಯಾನ ಸಂದೇಶ ಹೊದ್ದು ಮಧ್ಯಾಹ್ನದ ಸುಡುಬಿಸಿಲಿಗೆ ತೆಪ್ಪಗೆ ಕುಳಿತಿತ್ತು. ನಾವೂ ಸೈಕಲ್ ಪಕ್ಕಕ್ಕಿರಿಸಿ ತುಸು ಹೊತ್ತು ವಿಶ್ರಮಿಸಿಕೊಂಡೆವು. ಮಲಗಿದರೆ ನಿದ್ದೆ ಆವರಿಸಿಕೊಳ್ಳುವ ಭೀತಿಯಿಂದೆದ್ದು ಮುಂದುವರಿದೆವು.
ಮಧ್ಯಾಹ್ನ ವಿಶ್ರಾಂತಿಗೆ ಇನ್ನೇನು ಬೇಕು

ಬಾಳೂರು ಕ್ರಾಸ್ ನಲ್ಲಿ ಎಡಕ್ಕೆ ಹೊರಳಿ ಕಳಸ ದಾರಿಯಾಗಿ ಹೋದರೆ ಮಧ್ಯಾಹ್ನದ ಬಿಸಿಲಿನಿಂದ ಮುಕ್ತಿ. ಎರಡೂ ಬದಿಯಲ್ಲೂ ಎತ್ತರೆತ್ತರ ಮರಗಳ ಮಧ್ಯೆ ಕಾಫಿ ಬೆಳೆದಿದ್ದಾರೆ. ಹಾಗಾಗಿ ಆಯಾಸವೆಲ್ಲ ಮರೆತು ಹೋಯಿತು. ತುಸುದೂರದಲ್ಲೇ ಹೇಮಾವತಿ ನದಿಯ ಉಗಮಸ್ಥಾನಕ್ಕೆ ಹೋಗುವ ದಾರಿ ಕಂಡಿತಾದರೂ ದಾರಿ ಹೇಗಿದೆ ಎಂಬ ಸಂಶಯದಿಂದ ಆ ಕಡೆ ಹೊರಳಲಿಲ್ಲ.
ಕೆಳಗೂರು ಸಮೀಪ ದಾರಿಯ ಎಡಬದಿ ನೋಡಿದರೆ ವಿಶಾಲ ಕಣಿವೆ, ಅದರ ತುಂಬ ಅಂತರಗಳಲ್ಲಿ ಬೆಳೆದ ಪಚ್ಚೆಪೈರು! ಮಂಗಳೂರು ಭಾಗದಲ್ಲಿ ಎಲ್ಲಿ ಹೋದರೂ ಈ ರೀತಿಯ ದೃಶ್ಯ ನೋಡಲು ಸಿಗದು. ಇನ್ನೊಂದಷ್ಟು ಮುಂದೆ ಬಂದರೆ ಗುಡ್ಡಕ್ಕೆ ಗುಡ್ಡವೇ ಚಹಾತೋಟ ಮಯ. ಈ ಭಾಗದಲ್ಲಿರುವ ಬಹುತೇಕ ಗುಡ್ಡಗಳೆಲ್ಲಲ್ಲ ಎಸ್ಟೇಟುಗಳು ರಿಸಾರ್ಟ್ ಗಳೂ ತಲೆಯೆತ್ತಿವೆ.


ಮುಂದಿನ ದಾರಿ ಬಹುತೇಕ ಇಳಿಜಾರು. ರಸ್ತೆಯೂ ಚೆನ್ನಾಗಿತ್ತು. ಕೆಳಗೂರಿನ ಒಂದೆರಡು ಕಿ.ಮೀ ಮಾತ್ರ ಕೆಟ್ಟಿತ್ತು. ಹಾಗಾಗಿ ಯಾವುದೇ ಸಮಸ್ಯೆಯಾಗದೆ ಸಾಯಂಕಾಲ 6.30ರ ವೇಳೆಗೆ ಕಳಸ ಪೇಟೆ ತಲಪಿದೆವು. ಕಳಸೇಶ್ವರನಿಗೆ ದೇವಳದ ಮುಂದಿನಿಂದ ಮನದಲ್ಲೇ ನಮಸ್ಕರಿಸಿ, ಮೊದಲು ತೋಟದೂರು ಯಾತ್ರಿ ನಿವಾಸ(ಪೂರ್ವದಲ್ಲೇ ನೋಂದಾಯಿತ) ಸೇರಿಕೊಂಡೆವು. ಸ್ನಾನಾದಿ ಮುಗಿಸಿ, ಮೊದಲು ಮೀನಾಕ್ಷಿ ಭವನದ ಭಟ್ಟರಲ್ಲಿ(ಇವರು ಮೂಲತಃ ಶಿರ್ತಾಡಿಯವರು, ಕಳಸದಲ್ಲಿ ನೆಲೆಯಾಗಿ 3 ದಶಕವೇ ಕಳೆದಿದೆ) ಊಟ ಮುಗಿಸಿ ಬಂದು ಮಲಗಿಕೊಂಡರೆ ಬಡಿದು ಹಾಕಿದಂತಹ ನಿದ್ದೆ!.

ದಿನ -2 ಕಳಸದಿಂದ ಕುದುರೆಮುಖ, ಊರಿನತ್ತ ಮುಖ

ಮುಂಜಾನೆಯ ಸವಾರಿಗೆ ಸೂರ್ಯನ ಇಣುಕು
ಕಳಸದ ತಣುಪು ವಾತಾವರಣದಲ್ಲಿ ರಾತ್ರಿ ಹಾಯಾದ ನಿದ್ದೆ ಮುಗಿಸಿ, ಅಲಾರಾಂಗೆ ದಡಬಡಾಯಿಸಿ ಎದ್ದು ಮುಖಮಾರ್ಜನ ನೆರವೇರಿಸಿಕೊಂಡು ಥಟ್ಟಂತ ಹೊರಟುಬಿಟ್ಟೆವು. ಕಳಸದ ಚಾದಂಗಡಿಯಲ್ಲೊಂದು ಚಹಾ ಏರಿಸಿಕೊಂಡು ಹೊರಟು ಪೇಟೆಯ ಹೊರಗೆ ತಲಪುವಷ್ಟರಲ್ಲೆ ಎಡಬದಿಯಲ್ಲಿ ಸೂರ್ಯರಶ್ಮಿ ಸುವರ್ಣಬಣ್ಣದಲ್ಲಿ ಕೋರೈಸತೊಡಗಿತ್ತು. ತಟ್ಟು ತಟ್ಟಾದ ಗದ್ದೆಯ ಮೇಲ್ಭಾಗದಲ್ಲಿ ಹೊಳೆಯುವ ಸೂರ್ಯನ ಚಿತ್ರ ತೆಗೆಯಲು ಮರೆಯಲಿಲ್ಲ. 
ಕಳಸ ಪೇಟೆಯ ಹೊರಗೆ ಸಿಕ್ಕಿದ ದೃಶ್ಯ
ಮನಮುದಗೊಳಿಸುವ ಕೆಳಗೂರಿನ ಗದ್ದೆಗಳು

ಕಳಸದಿಂದ ಕುದುರೆಮುಖ ಸಾಗುವಾಗ ಮಧ್ಯೆ ಬಾಳ್ಗಲ್ ಎಂಬಲ್ಲಿ ಜೈನರ ಚಿಕ್ಕ ಹೊಟೇಲೊಂದರಲ್ಲಿ ನಮ್ಮ ಹಸಿದ ಹೊಟ್ಟೆಗೆ ಭರ್ಜರಿ ರುಚಿಯ ಇಡ್ಲಿ ಚಟ್ಟನಿ ಸಿಕ್ಕಿದ್ದು ಖುಷಿಯೆನಿಸಿದರೂ, ಒಂದೇ ಕಿಲೋಮೀಟರ್ ಗೆ ಅಷ್ಟೇ ಭರ್ಜರಿ ಹಿಮ್ಮುರಿ ತಿರುವು ಸಹಿತ ಏರು ದಾರಿ ಕಂಗೆಡಿಸಿಬಿಟ್ಟಿತು! ಅಲ್ಲಿವರೆಗಿನ 'ಕೂಲ್' ವಾತಾವರಣವೆಲ್ಲವೂ ನಮಗೆ ಬಿಸಿಯಾಯ್ತು. ಇಂತಹ ಒಂದಲ್ಲ ಮತ್ತೂ ಎರಡು ಚಡಾವುಗಳಲ್ಲಿ ಮೈ ಪೂರ್ತಿ ವಾರ್ಮ್ ಅಪ್ ಆಯ್ತು. ಏರಿದವನು ಇಳಿಯಲೇಬೇಕು ಎಂಬ ನಿಯಮದ ಹಾಗೆ ಮತ್ತೆ ಇಳಿದಾರಿ. ಕಳಸದಿಂದ ಸರಿಸುಮಾರು 20 ಕಿ.ಮೀ ದಾರಿಯನ್ನು ಅಂತೂ ಮೂರು ಗಂಟೆಯಲ್ಲಿ ಕ್ರಮಿಸಿದೆವು.
ದಾರಿಯಲ್ಲಿ ಜಾಮ್ಳೆ ಸರಕಾರಿ ಶಾಲೆಯ ಮಕ್ಕಳೊಂದಿಗೆ ಹಾಗೆ ಕುಶಲೋಪರಿ ಮಾತನಾಡಿ, ಅವರೊಂದಿಗೆ ಫೊಟೊ ಕ್ಲಿಕ್ಕಿಸಿಕೊಂಡೆವು. ಮಕ್ಕಳ ಸೈಕಲ್ ಕುರಿತ ಕುತೂಹಲಕಾರಿ ಪ್ರಶ್ನೆಗಳಿಗೆ ಸಾಕಷ್ಟು ಉತ್ತರಿಸಿದೆವು. ನಾವು ಓಡುತ್ತೇವೆ, ನಮ್ಮನ್ನು ಚೇಸ್ ಮಾಡಿ ಎಂದು ಮಕ್ಕಳು ನಮಗೇ ಸವಾಲೆಸೆಯಬೇಕೆ!
 ಕುದುರೆಮುಖದಿಂದ ಗಂಗಾಮೂಲದ ವರೆಗೂ ಮತ್ತೆ ಏರುದಾರಿಗಳೇ. ಆದರೆ ಆ ವೇಳೆಗಾಗಲೇ ನಮಗೆ ಸವಾರಿಯ ಲಯ ಸಿಕ್ಕಿದ್ದರಿಂದ ಕಷ್ಟವಾಗಲಿಲ್ಲ. ಬೆಳಗ್ಗಿನ ಕುದುರೆಮುಖ ಶ್ರೇಣಿ, ಕಾಡಿನ ಸೌಂದರ್ಯ ಸವಿಯುತ್ತಾ ಸಾಗಿಬಂದೆವು. ಗಂಗಾಮೂಲದ ಬಳಿ ನಿಂತು ತುಸು ದಣಿವಾರಿಸಿಕೊಳ್ಳುತ್ತಿದ್ದೆವು. 
ಮಾರ್ಗವೆಲ್ಲ ನಮದೇ :)

ಕುತೂಹಲಿ ಚಿಣ್ಣರೊಂದಿಗೆ
ಅದು ರಾಷ್ಟ್ರೀಯ ಉದ್ಯಾನವನ ಎನ್ನುವುದು ಎಲ್ಲರಿಗೂ ಗೊತ್ತು ಪ್ರಾಣಿಗಳು ರಸ್ತೆ ದಾಟುವುದು, ರಸ್ತೆಯಲ್ಲಿ ಕುಳಿತುರುವುದು ಕೂಡಾ ಹೊಸತಲ್ಲ. ಆದರೂ ನಮ್ಮ ಅನಾಗರಿಕ ಜನರಿಗೆ ಮಾತ್ರ ಈ ವ್ಯವಸ್ಥೆಗೆ ಗೌರವ ಕೊಡುವ ಬುದ್ಧಿಯೇ ಇಲ್ಲ. ಗಂಗಾಮೂಲದ ಇಳಿಜಾರು ರಸ್ತೆಯಲ್ಲಿ ವಾನರ ವೃಂದವೊಂದು ಕುಳಿತಿತ್ತು. ಹೋಗಿ ಬರುವ ಪ್ರವಾಸಿಗರು ಎಸೆಯುವ ಹಾಳುಮೂಳು ತಿಂಡಿಗೆ ಇವು ಒಗ್ಗಿಕೊಂಡಿವೆ. ಕುದುರೆಮುಖದಿಂದ ಬಂದ ಬಾಡಿಗೆಯ ಇನ್ನೋವಾ ವಾಹನದ ಚಾಲಕ ಬ್ರೇಕ್ ಇರುವುದನ್ನೂ ಮರೆತು ಮುಂದುವರಿದ. ವಾನರಗಳೆಲ್ಲ ದಿಕ್ಕಾಪಾಲಾಗಿ ಚದುರಿದರೂ ಒಂದು ಮಂಗ ಮಾತ್ರ ವಾಹನದಡಿಗೆ ಸಿಲುಕಿ ಒದ್ದಾಡಿತು, ಹಿಂದಿನ ಟೈರು ಅದರ ಹೊಟ್ಟೆಯ ಮೇಲೆಯೇ.....
ಅಲ್ಲಿಂದ ಜೀವ ಕೈಲಿ ಹಿಡಿದು ಚೀರುತ್ತಾ ಕಾಡಿನ ಗರ್ಭಕ್ಕೆ ಹೊರಟು ಹೋಯಿತು...ಈ ದೃಶ್ಯ ಮಾತ್ರ ನಮ್ಮೂವರನ್ನೂ ಕಲಕಿ ಬಿಟ್ಟಿತು. ಯಾವುದೇ ಬೇಸರವಿಲ್ಲದೆ ಇನ್ನೋವಾ ತೊಲಗಿತು. ಈ ಹೃದಯವಿದ್ರಾವಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ನಮಗೆ ಮರೆಯದ ಅನುಭವ.

9.8.16

ಆಗುಂಬೆಗೊಂದು ಸೈಕಲ್ ಸವಾರಿ

ಮುಂಗಾರು ಮಳೆ ಶುರುವಾದ ಬಳಿಕ ಸೈಕಲ್ ತೆಪ್ಪಗೆ ಬದಿಯಲ್ಲಿ ಮಲಗಿತ್ತು...ಹಾಗೇ ನಾನೂ....

ಕಳೆದ ಎರಡ್ಮೂರು ತಿಂಗಳಿಂದ ಭೋರಿಡುವ ಮಳೆಯಲ್ಲಿ ತೋಯುತ್ತಾ ಸೈಕಲ್ ಮಾಡುವ ಆಸೆಯಿದ್ದರೂ ವಿವಿಧ ಕಾರಣಗಳಿಂದ ಎಲ್ಲೂ ದೂರ ಹೋಗಲಾಗಿರಲಿಲ್ಲ. ಕಳೆದ ಬೇಸಿಗೆಯಲ್ಲೇ ಚಿನ್ಮಯ ದೇಲಂಪಾಡಿ ಮಾನ್ಸೂನ್ ಸವಾರಿ ಹೋಗಲೇಬೇಕು ಎಂದು ಹಕ್ಕೊತ್ತಾಯ ಮಾಡಿದ್ದೂ ಆಗಿತ್ತು..

ನಮ್ಮ ಯಾವತ್ತಿನ ಸೈಕಲ್ ಗುರು ಅಶೋಕವರ್ಧನರು ಕೌಟುಂಬಿಕ `ನಿರೀಕ್ಷಣಾ' ಕಾರಣಕ್ಕಾಗಿ ಈ ಬಾರಿ ನಾನಿಲ್ಲ, ನೀವು ಹೋಗಿಬನ್ನಿ ಎಂದು ಬಿಟ್ಟರು, ನಾನು ಬರುವೆ ಎಂದು ಮೊದಲು ಹೇಳಿದ್ದ ಅಭಿ ಭಟ್ ಕೂಡಾ ಕಾರ್ಯದೊತ್ತಡಕ್ಕೆ ಮಣಿದು ಸರಿಯಾಗಿ ಅಭ್ಯಾಸ ಮಾಡಲಾಗದೆ ಕೈಚೆಲ್ಲಿದ.

ಉಳಿದದ್ದು ಚಿನ್ಮಯ ಹಾಗೂ ನಾನು ಮಾತ್ರ. ಸೋಮೇಶ್ವರದಿಂದ ಎತ್ತರಕ್ಕೇರಿ ಆಗುಂಬೆ ತಲಪುವುದು ಎಂದರೆ ಸಮುದ್ರಮಟ್ಟದಿಂದ 11 ಕಿ.ಮೀ ಭಾಗವನ್ನು ಏರಲು ಸುಮಾರು 800 ಮೀಟರ್ ಔನ್ನತ್ಯ ಸಾಧಿಸಬೇಕು. ಈ ಮೊದಲು ಕುದುರೆಮುಖ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಇದಕ್ಕಿಂತ ಹೆಚ್ಚಿನ ಎತ್ತರವೇರಿದ ಅನುಭವ ಕಾಲುಗಳಿಗಿತ್ತಾದರೂ ಇತ್ತೀಚೆಗೆ ಎರಡು ತಿಂಗಳಿಂದ ಸ್ನಾಯುಗಳು ವಿಶ್ರಾಂತಿಯಲ್ಲಿದ್ದ ಭೀತಿ ಮಾತ್ರ ಇದ್ದೇ ಇತ್ತು. ಬೈಕಲ್ಲೋ ಕಾರಲ್ಲೋ ಆದರೆ ಪೆಟ್ರೋಲ್ ತುಂಬಿ ಗಿಯರು ಹಾಕಿ ಆಕ್ಸಿಲೇಟರ್ ಒತ್ತಿದರೆ ಬೇಕಾದಲ್ಲಿ ತಲಪುತ್ತದೆ. ಸೈಕಲ್ ನಲ್ಲಿ ಮಾತ್ರ ಹಾಗಲ್ಲ, ದೂರ ಸವಾರಿಗೆ ನಮ್ಮ ದೇಹ ಸಿದ್ಧವಿಲ್ಲವಾದರೆ ಸ್ನಾಯು ಸೆಳೆತವೋ, ವಿಪರೀತ ಆಯಾಸವೋ ಆಗಿ ಅರ್ಧಕ್ಕೇ ಪ್ರಯಾಣ ಕೈಬಿಡಬೇಕಾಗಿ ಬರುವುದುಂಟು.
ಅದೋ ಅಲ್ಲಿ ಆಗುಂಬೆ
ಒಂದೆರಡು ಬಾರಿ ಮನೆ ಹತ್ತಿರದಲ್ಲೇ ರೈಡ್ ಮಾಡಿ ಬಂದದ್ದಷ್ಟೇ ನನ್ನ ಈ ಬಾರಿಯ ತಯಾರಿ. ಚಿನ್ಮಯನೂ ಹೆಚ್ಚೇನೂ ತಯಾರಿ ಮಾಡಿರಲಿಲ್ಲ. ಸಮಯದ ಅಭಾವ ಇದ್ದಕಾರಣ ಮಣಿಪಾಲ ವರೆಗೆ ಸೈಕಲ್ಗಳನ್ನು ಕಾರಿನಲ್ಲೇರಿಸಿಕೊಂಡು ಹೋಗಿ ಶನಿವಾರ ರಾತ್ರಿ ಅಲ್ಲಿದ್ದು ಭಾನುವಾರ ಮುಂಜಾನೆ ಸೈಕಲ್ಲೇರುವುದು ನಮ್ಮ ಯೋಜನೆ. ಅದರಂತೆಯೇ ಭಾನುವಾರ ನಸುಕು ಹರಿಯುವ ವೇಳೆಗೆ ನಮ್ಮಿಬ್ಬರ ಸವಾರಿ ಮಣಿಪಾಲ ಬಿಟ್ಟಿತು. ಹದವಾದ ಮಳೆಯಿಂದ ಇಳೆ ತಂಪಾಗಿತ್ತು. ಖಾಲಿ ಹೊಟ್ಟೆಯಲ್ಲಿ ಸೈಕಲ್ ತುಳಿಯಬಾರದು, ಹಾಗಾಗಿ ಹೊಟೇಲೊಂದರಲ್ಲಿ ಹಗುರ ತಿಂಡಿ, ಚಹಾ ಸೇವಿಸಿ ಮುಂದುವರಿದೆವು.

ಅರಣ್ಯಭಂಗ
ಪೆರ್ಡೂರು ಭಾಗವಾಗಿ ಹೋಗುವಾಗ ಇಕ್ಕೆಲಗಳಲ್ಲು ತಂಪು ನೀಡುತ್ತಿದ್ದ ಮರಗಳೆಲ್ಲಾ ಧರಾಶಾಯಿಯಾಗಿ ಬಿದ್ದಿರುವುದು ಕಂಡುಬಂತು! ಕೆಲದಿನಗಳ ಹಿಂದೆ ಬಂದ ಭಾರೀ ಸುಂಟರಗಾಳಿಯ ಪ್ರಭಾವದಿಂದ ಈ ಗತಿ. ಅತೀವ ಬೇಸರ ತರುವ ದೃಶ್ಯವನ್ನು ನೋಡುತ್ತಾ ಮುಂದುವರಿದೆವು. ಕೆಲಹೊತ್ತಿನಲ್ಲೇ ಹೆಬ್ರಿ ತಲಪಿದೆವು. ಸೋಮೇಶ್ವರದಲ್ಲಿ ನಮ್ಮ ಉದರ ತುಂಬುವ ಯೋಜನೆ ಮೊದಲಿದ್ದರೂ, ಬಳಿಕ ಘಾಟಿಯೇರುವಾಗ ತೊಂದರೆ ಬೇಡವೆಂದು ಹೆಬ್ರಿಯಲ್ಲೇ ಸೇಮಿಗೆ, ನೀರುದೋಸೆ ತಿಂದು ಮುಂದುವರಿದೆವು. ಚೆನ್ನಾಗಿ ಸೈಕಲ್ ಹಾಗೂ ನಮ್ಮ ಕಾಲುಗಳ ಹೊಂದಾಣಿಕೆಯಾಗಿ ಮೈಬಿಸಿಯೇರಿದ್ದರಿಂದ ಸೋಮೇಶ್ವರದಲ್ಲಿ ಹೆಚ್ಚು ಸಮಯ ವ್ಯರ್ಥಗೊಳಿಸದೆ ನೇರವಾಗಿ ಮಿಶನ್ ಆಗುಂಬೆ ಶುರುವಿಟ್ಟೆವು.
ಪೆರ್ಡೂರು ಸಮೀಪ ಧರಾಶಾಯಿಯಾದ ಮರಗಳು

ಮೊದಲ ಚರಣದಲ್ಲಿ ಸುಂದರ ರಸ್ತೆ ನಮ್ಮ ನೆರವಿಗೆ ಬಂತು. ಏರು ದಾರಿಯಾದ್ದರಿಂದ ಸುಲಭ ಗಿಯರ್ ಹಾಕಿ ಪೆಡಲುತ್ತಾ ಸಾಗುತ್ತಿದ್ದರೆ ಫೋರ್ ವೀಲ್ ಡ್ರೈವಿನ ಎಸ್ ಯೂ ವಿ ವಾಲಾಗಳು ನಮ್ಮನ್ನು ಅನುಕಂಪದಿಂದಲೋ ಹೀಯಾಳಿಕೆಯಿಂದಲೂ ನೋಡುತ್ತಾ ಸಾಗುತ್ತಿದ್ದರು. ಬದಿಯಲ್ಲೊಂದು ಮಳೆಗಾಲದ ವಿಶೇಷ ಕಿರು ಜಲಧಾರೆ ಕಣ್ತುಂಬಿಕೊಳ್ಳುವುದಕ್ಕೆಂದು ನಿಲ್ಲಿಸಿ ಎರಡು ಫೊಟೊ ತೆಗೆದಾಗಿತ್ತು. ಅಷ್ಟೊತ್ತಿಗೆ ಮಳೆ ಜೋರು.ಉದ್ದೇಶದಂತೆಯೇ ಮಳೆಯಲ್ಲೇ ನೆನೆಯುತ್ತಾ ಒಂದೊಂದೇ ಹಿಮ್ಮುರಿ ತಿರುವುಗಳಲ್ಲಿ ಉಸ್ಸಪ್ಪಾ ಮಾಡುತ್ತಾ ಏರಿದೆವು. ಕುದುರೆಮುಖ ಏರಿನಲ್ಲಾದರೆ ನೇರವಾಗಿ ಏರುತ್ತಾ ಸಣ್ಣ ತಿರುವುಗಳಲ್ಲಿ ಸಾಗಬೇಕು, ಆದರೆ ಆಗುಂಬೆಯಲ್ಲಿ ಸೈಕ್ಲಿಸ್ಟ್ ಗಳಿಗೆ ಸವಾಲು ದೊಡ್ಡ ಹಿಮ್ಮುರಿ ತಿರುವುಗಳು.
ಹಿಮ್ಮುರಿ ತಿರುವೊಂದರಲ್ಲಿ

ಮಳೆಗಾಲದಲ್ಲಿ ಆಗುಂಬೆಯಲ್ಲಿ ಇಂತಹ ದೃಶ್ಯ ಸಾಮಾನ್ಯ

ಮಂಜಿನಲ್ಲಿ ಘಾಟಿಯೇರುವ ಮಜಾ

ಸೈಕಲ್ ತುಳಿಯುತ್ತಾ ಏರುದಾರಿಗೆ ಕಾಲುಗಳು ಹೊಂದಾಣಿಕೆ ಮಾಡಿಕೊಂಡವು ಎನ್ನುವಷ್ಟರಲ್ಲೇ ಸಿಗುವ ಹಿಮ್ಮುರಿ ತಿರುವು ಒಮ್ಮೆಗೇ ಬ್ರೇಕ್ ಹಾಕುತ್ತದೆ. ಮತ್ತೆ ಕಾಲುಗಳಿಗೆ ಒತ್ತಡ ಹೆಚ್ಚು. ಇದರಲ್ಲೇ ನಮ್ಮ ಲಯವನ್ನು ಕಾಯ್ದುಕೊಂಡು ಹೋಗುವುದು ಸೈಕಲ್ ಸವಾರನ ಚಾಕಚಕ್ಯತೆಯ ನಿಜ ಪರೀಕ್ಷೆ.
ಮೊದಲ ಮೂರ್ನಾಲ್ಕು ತಿರುವು ಕಳೆದ ಬಳಿಕ ಆಗುಂಬೆಯ ಹಳೆಯ ರಸ್ತೆಯೇ ಗತಿ! ಒಡಕಲು ಕಾಂಕ್ರೀಟ್ ರಸ್ತೆಯಲ್ಲಿ ಗಡ ಗಡ ಸವಾರಿ. ಮೇಲೇರುತ್ತಿದ್ದಂತೆಯೇ ಆಗುಂಬೆಯ ಮಂಜು ದರ್ಶನ. ಸೈಕಲ್ ಮುಂದೆ `ತಲೆದೀಪ' ಹಾಗೂ ಹಿಂದೆ `ಬಾಲದೀಪ' ಮಿನುಗಿಸುತ್ತಿದ್ದೆವು, ಇಲ್ಲವಾದರೆ ಮಂಜಿನ ನಡುವೆ ವೇಗವಾಗಿ ಬರುವ ವಾಹನಗಳಿಗೆ ನಾವು ಸುಲಭ ತುತ್ತು. ಆಗುಂಬೆಯ ಸೂ ರ್ಯಯಾಸ್ತ ಸವಿಯಲು ಕಟ್ಟಿಸಿರುವ ವೀಕ್ಷಣಾ ತಾಣ ಪೂರ್ತಿ ಮಂಜುಮಯ. ನಮ್ಮ ಆಗಮನ ಸಾಕ್ಷೀಕರಿಸಲು ಅಲ್ಲೊಂದು ಫೊಟೊ ಕ್ಲಿಕ್ಕಿಸಿ ಮುಂದುವರಿದೆವು.

ಅಲ್ಲೊಂದಿಷ್ಟ್ ಜನಾ...
ಜಿಲ್ಲಾ ಗಡಿಯಲ್ಲಿರುವ ತಪಾಸಣಾ ಠಾಣೆ ದಾಟಿ ಮುಂದುವರಿದಾಗ ಅರರೆ....ದೂರದಲ್ಲಿ ಬದಿಯಲ್ಲಿ ಕೆಂಪು ಬಿಳಿ ಪುಟ್ಟ ದೀಪಗಳು ಮಿನುಗುತ್ತಿವೆ...ನೋಡಿದರೆ ನಮ್ಮ ಹಾಗೆಯೇ ಮೂವರು ಸೈಕಲ್ ಸವಾರರು. ಹೋಗಿ ಮಾತನಾಡಿದಾಗ ಅವರು ಬೆಂಗಳೂರಿನವರೆಂದೂ, ಹೊರನಾಡಿಗೆ ಬಸ್ಸಲ್ಲಿ ಸೈಕಲ್ ತುಂಬಿಕೊಂಡು ಬಂದು, ಅಲ್ಲಿಂದ ಆಗುಂಬೆಗೆ ಬಂದವರೆಂದೂ ತಿಳಿಯಿತು. ಅರೆಕನ್ನಡದಲ್ಲಿ ಮಾತನಾಡಿದ ಅಖಿಲೇಶ್, ಅಜಯ್ ಹಾಗೂ ಶ್ರೀವಿಜಯರಿಗೆ ವಿದಾಯ ಹೇಳಿ ನಾವು ಮುಂದುವರಿದೆವು.
ಬೆಂಗಳೂರಿನ ಸೈಕಲ್ಲಿಗರೊಂದಿಗೆ ಆಗುಂಬೆಯಲ್ಲಿ
ಸೋಮೇಶ್ವರ ವ್ಯಾಪ್ತಿ ಮುಗಿದು ಔéಷಧವನ ದಾಟಿ ಮುಂದೆ ಹೋದಾಗ ಬಲಬದಿಯಲ್ಲಿ ಮಣ್ಣು ರಸ್ತೆಯೊಂದು ಹೋಗುತ್ತಿದ್ದುದು ಕಂಡಿತು ಒಳಗೆ ಸುಂದರ ಹುಲ್ಲುಗಾವಲು ಕಾಣಿಸಿತು, ಇರಲಿ ಹಿಂದೆ ಬರುವಾಗ ಪೊಟೊ ತೆಗೆದರಾಯ್ತು ಎಂದು ಮುಂದುವರಿದೆವು. ಅಂತೂ ಆಗುಂಬೆ ಬಂತು. ಹೊಟ್ಟೆ ತಾಳ ಹಾಗುತ್ತಿತ್ತು, ಹಾಗಾಗಿ ಮಯೂರ ಹೊಟೇಲಲ್ಲಿ ಉದರ ಪೋಷಣೆ ಮಾಡಿದೆವು. ಹೊರಗೆ ಸೋನೆಮಳೆ ಸುರಿಯುತ್ತಲೇ ಇತ್ತು. ಮತ್ತೆ ಆಗುಂಬೆಯಲ್ಲೇ ಒಂದು ರೌಂಡ್ ಹೊಡೆದು ಊರು ದರ್ಶನ ಮಾಡಿಕೊಂಡು ಮೊದಲೇ ನೋಡಿದ್ದ ಹುಲ್ಲುಗಾವಲಲ್ಲಿ ಫೊಟೋಶೂಟ್ ಮಾಡುವ ಎಂದು ಹೊರಟಾಗ ಮಳೆ ಜೋರಾಯಿತು.
ಆಗುಂಬೆ ದೃಶ್ಯಾವಳಿ - 1

ಆಗುಂಬೆ ದೃಶ್ಯಾವಳಿ - 2
 ಆಗುಂಬೆಯ ಸಾಂಪ್ರದಾಯಿಕ ಹಳೆಯ ಹೆಂಚಿನ ಮನೆಗಳು ಮಂಜು ಸುರಿಯುವಾಗ ಕಟ್ಟಿಕೊಡುವ ದೃಶ್ಯಾವಳಿ ಕಲಾವಿದರು, ಆ ಮನಸ್ಸಿನವರೆಲ್ಲರಿಗೂ ಸ್ಫೂರ್ತಿ. ಅದನ್ನು ಪದಗಳಿಂದ ಕಟ್ಟಿಡಲೂ ಆಗದು. ಅಂತಹ ಒಂದು ಮನೆಯ ಮುಂಗಟ್ಟಿನ ಅಡಿಯಲ್ಲಿ ತಾತ್ಕಾಲಿಕ ಆಸರೆ ಪಡೆದು ಮಳೆ ತುಸು ಹಗುರವಾದಂತೆಯೇ ಮುಂದ್ಹೋದೆವು.
ಎರಡು ಮೆರಿಡಾಗಳು

ನೋಡಿದೆನು ನಾ... ನೋಡಿದೆನು ನಾ ...
ಅದೇ ಹುಲ್ಲುಗಾವಲು ಅಂದೆನಲ್ಲಾ, ಅದೇ ದಾರಿಯತ್ತ ಸಾಗಿದೆವು.
ನಾವಂದುಕೊಂಡಂತೆಯೇ ಪಚ್ಚೆಹಸಿರಿನ ಹುಲ್ಲುಹಾಸು ಸ್ವಾಗತಿಸಿತು...ಮುಂದೆ...ನೋ.ಡಿ.ದ.ರೆ.....
ಆಗುಂಬೆಯ ಕಸಕಡ್ಡಿ ತ್ಯಾಜ್ಯವೆಲ್ಲಾ ಅಲ್ಲೇ ಅಡರಿಕೊಂಡಿದೆ!
ಇದಕ್ಕೆ ವಿವರಣೆ ಬೇಡ!
ಇಡೀ ಆಗುಂಬೆಯಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೆಲ್ಲಾ ತಂದು ಎಸೆಯುವ ಜಾಗವಾಗಿ ಅದು ಮಾರ್ಪಟ್ಟಿತ್ತು! ಅದುವರೆಗೆ ನೋಡದ ಆಗುಂಬೆಯ ದರ್ಶನವೂ ಆಯಿತು. ಕಸಕಡ್ಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಗಳೆಲ್ಲಾ ನಮ್ಮಲ್ಲಿ ಇವೆ. ಎಷ್ಟೋ ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ ಕೂಡಾ. ಅದನ್ನು ಅಳವಡಿಸುವುದು ಬಿಟ್ಟು ಆಗುಂಬೆಯನ್ನು ಕಸದ ತಾಣವಾಗಿ ಮಾಡಿದ್ದು ನೋಡಿ ಆದ ನೋವನ್ನು ಹಂಚಿಕೊಳ್ಳುತ್ತಾ ಇಳಿಯುವಾಗ ಚಿನ್ಮಯನ ಸೈಕಲ್ನ ಪ್ರಮುಖ ಭಾಗ ಫ್ರೀವೀಲ್ನಲ್ಲೇನೋ ದೋಷ ಕಂಡುಬಂತು. ಪೆಡಲ್ ಮಾಡಿದರೂ ಸೈಕಲ್ ಮುಂದೋಡುತ್ತಿರಲಿಲ್ಲ. ಅಲ್ಲಿಂದ ಇಳಿಜಾರಾದ ಕಾರಣ ಜಾಗರೂಕತೆಯಿಂದ ಸೋಮೇಶ್ವರ ವರೆಗೂ ತಲಪಿದೆವು. ಅಲ್ಲಿಂದ ಬಸ್ನಲ್ಲೋ ಟೆಂಪೋದಲ್ಲಾದರೋ ಸೈಕಲ್ ಹಾಕಿಕೊಂಡು ಹೋಗೋಣ ಎಂದು ಅಂದುಕೊಂಡೆವು. ಆದರೆ ಆಗುಂಬೆದಾರಿಯಲ್ಲಿರುವುದು ಹೆಚ್ಚಿನವೂ ಮಿನಿಬಸ್ಗಳು, ಅದರಲ್ಲಿ ಜಾಗದ ಕೊರತೆ. ಮಧ್ಯಾಹ್ನವಾದ್ದರಿಂದ ಹೆಚ್ಚು ವಾಹನಗಳಿರಲಿಲ್ಲ. ಹಾಗಾಗಿ ಏರುದಾರಿಯಲ್ಲಿ ಇಳಿದು ತಳ್ಳುತ್ತಾ ಇಳಿಜಾರಲ್ಲಿ ಸೈಕಲ್ಲೇರುತ್ತಾ ಚಿನ್ಮಯ ಹಿಂಬಾಲಿಸಿದರೆ ನಾನು ನಿಧಾನವಾಗಿ ಮುಂದುವರಿದೆ. ಹಿರಿಯ ಮಿತ್ರ ಪ್ರಕಾಶ್ ಭಟ್ ಮಣಿಪಾಲದಲ್ಲಿರುವುದು ನೆನಪಿಗೆ ಬಂತು. ಅವರೂ ಸೈಕ್ಲಿಸ್ಟ್ ಅಲ್ಲದೆ ಎಸ್ಯುವಿ ವಾಹನ ಮತ್ತು ಸೈಕಲ್ ಕಟ್ಟುವ rack ಕೂಡಾ ಇದೆ. ಹಾಗೆ ಅವರಿಗೆ ಫೋನಾಯಿಸಿದಾಗ ನೀವು ಬರುತ್ತಾ ಇರಿ, ನಾನು ಊಟ ಮುಗಿಸಿ ಬರುವೆ ಎಂಬ ಆಶ್ವಾಸನೆ ಸಿಕ್ಕಿತು. ಅದರಂತೆ ಹೆಬ್ರಿ ವರೆಗೂ ಬಂದು, ಬಡ್ಕಿಲ್ಲಾಯರ ಹೊಟೇಲಲ್ಲಿ ಊಟಕ್ಕೆಂದು ಸೇರಿಕೊಂಡೆವು. ಊಟ ಆಗಲೇ ಖಾಲಿ. ಅವಲಕ್ಕಿ ಮೊಸರು ಮುಕ್ಕಿ ತೃಪ್ತಿ ಪಟ್ಟಾಗ ನಮ್ಮ ವಾಹನ ಆಗಮನ. ಸೈಕಲ್ ಹಾಕಿಕೊಂಡು ಸಂಜೆ ವೇಳೆಗೆ ಮಣಿಪಾಲ ತಲಪಿದೆವು.
ಹೆಚ್ಚೇನೂ ತಯಾರಿಯಿಲ್ಲದೆ ಆಗುಂಬೆಯೇರಿದ್ದು, ಅಲ್ಲಿನ ಮಂಜಿನಲ್ಲಿ ಮಿಂದೆದ್ದು ಬಂದದ್ದು ಮನತಣಿಸಿದರೆ ಆಗುಂಬೆಯ ಕಸ ಎಸೆ ತಾಣ ನೋಡಿ ಮನಕಲಕಿತು, ಮಂಜಿನ ನೆರಳಿನಲ್ಲಿ ಅಲ್ಲಿಯ ನಿಸರ್ಗದ ಮೇಲೆ ಇನ್ನೆಷ್ಟು ಅತ್ಯಾಚಾರ ನಡೆದಿದೆಯೋ ಯಾರು ಬಲ್ಲರು ???

17.2.15

ಸೈಕಲ್ ಗಳಲ್ಲೂ ಇಷ್ಟೊಂದು ವಿಧ ಇದೆಯಾ ?!

ಸೈಕಲ್ ಗಳಲ್ಲೂ ಅನೇಕ ವಿಧದವುಗಳಿವೆ. ಸೈಕಲ್ ಖರೀದಿಸುವವರಿಗೆ ಇಂದು ಆಯ್ಕೆ ಎನ್ನುವುದು ತಲೆನೋವು ತರುವ ವಿಚಾರ. ಸೈಕಲ್ ಇರುವವರ ಬಳಿ ನೀವು ಮಾತನಾಡಲು ಹೋದರೆ ಸಾಕು ನಿಮ್ಮ ತಲೆ ತಿಂದು ಹಾಕುತ್ತಾರೆ. ಯಾಕೆಂದರೆ ಅಷ್ಟು ಬ್ರಾಂಡ್ ಗಳು, ಅಷ್ಟು ವಿಧದ ಸೈಕಲ್ ಗಳು ಮಾರುಕಟ್ಟೆಯಲ್ಲಿವೆ. ನಿಮ್ಮ ಆದ್ಯತೆ ಏನು ಎನ್ನುವುದನ್ನು ತಿಳಿದು ಕೊಂಡು ಕೆಳಗಿರುವ ಪ್ರಮುಖ ಮೂರು ವಿಧದ ಸೈಕಲ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ರೋಡ್ ಬೈಕ್ ಎಂದರೆ ಸಪುರ ಟೈರು, ಮುಂದೆ ಬಾಗಿ ಕೊಂಡ ವಿಶೇಷ ಎನಿಸುವ ಹ್ಯಾಂಡಲ್, ಹಗುರದ ಚೌಕಟ್ಟು. ಸಪುರ ಟೈರಾದ ಕಾರಣ ಹೆಸರೇ ಹೇಳುವಂತೆ ಸಪಾಟು ರಸ್ತೆಗಳಲ್ಲಿ ಜುಮ್ಮನೆ ವೇಗವಾಗಿ ಹೋಗುವುದಕ್ಕೆ ಉಪಯುಕ್ತ. ಇದರ ಗೇರ್ ಅನುಪಾತ ತುಸು ಕಷ್ಟ. ಎಂದರೆ ಈ ಸೈಕಲ್ನಲ್ಲಿ ದೂರ ಸಾಗಲು ಕಾಲುಗಳಿಗೆ ಹೆಚ್ಚಿನ ಶಕ್ತಿ ಬೇಕು, ಆದರೆ ನಿಮ್ಮ ಶಕ್ತಿ ವ್ಯರ್ಥವಾಗದಂತೆ ಅದನ್ನು ದೂರಕ್ಕೆ ಪರಿವರ್ತನೆಗೊಳಿಸುತ್ತದೆ ಎನ್ನುವುದಕ್ಕೆ ಅನುಮಾನ ಬೇಡ. ಸಾಮಾನ್ಯವಾಗಿ ದೈನಂದಿನ ಬಳಕೆಗೆ ಇದನ್ನು ಖರೀದಿಸುವವರು ಕಡಿಮೆ.
ಬಾಗಿದ ಹ್ಯಾಂಡಲ್, ಸಪುರ ಟೈರ್, ಇದೇ ರೋಡ್ ಬೈಕ್ 

ಎಂಟಿಬಿ ಅಥವಾ ಮೌಂಟನ್ ಟೆರೈನ್ ಬೈಕ್ ಇಂದು ಹೆಚ್ಚಿನವರ ಆಯ್ಕೆ. ಇದರ ಟೈರು ಅಗಲದ್ದು, ಅಲ್ಲದೆ ಇದರ ಬಟನ್ ಗಳು ಯಾವುದೇ ರೀತಿಯ ರಸ್ತೆಯಲ್ಲಿ ಸಾಗುವುದಕ್ಕೂ ಹಿಂಜರಿಯುವುದಿಲ್ಲ. ಹೆಸರೇ ಹೇಳುವಂತೆ ಗುಡ್ಡಗಾಡು ಪ್ರದೇಶಗಳಲ್ಲಿ ಸರಾಗವಾಗಿ ಸಾಗಲು ಮೌಂಟನ್ ಬೈಕ್ ಗಳಿಗೆ ಸಾಧ್ಯ. ಇಲ್ಲಿ ರೋಡ್ ಬೈಕ್ ಗಳು ಸೋತುಬಿಡಬಹುದು. ಆದರೆ ಸಪಾಟು ರಸ್ತೆಗೆ ಇಳಿದರೆ ಎಂಟಿಬಿಗಳ ಟೈರುಗಳ ದೊಡ್ಡ ಬಟನ್ ಕಾರಣ ಘರ್ಷಣೆ ಹೆಚ್ಚಾಗುವ ಕಾರಣ ನಿಮ್ಮ ಕಾಲುಗಳ ಶಕ್ತಿಯನ್ನು ರೋಡ್ ಬೈಕಿನಷ್ಟು ಪ್ರಮಾಣದಲ್ಲಿ ದೂರಕ್ಕೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಹಾಗೆಂದು ಸಾಮಾನ್ಯ ರಸ್ತೆಗಳಲ್ಲಿ ಸಾಗುವುದಕ್ಕೆ ಯಾವುದೇ ಕಷ್ಟವಿಲ್ಲ. ಎಂಟಿಬಿಗಳಲ್ಲಿ ಸಾಮಾನ್ಯ ಖರೀದಿಯಾಗುವುದು ಟ್ರೈಲ್ ಬೈಕ್ ಗಳು. ಇನ್ನು ವಿದೇಶಗಳಲ್ಲಿ ಹೆಚ್ಚಾಗಿ ಬೆಟ್ಟದಿಂದ ಕೆಳಗಿಳಿಯುವುದಕ್ಕೆ ಪ್ರತ್ಯೇಕ ಸೈಕಲ್ ಗಳಿವೆ , ಅದೆಲ್ಲಾ ನಮಗ್ಯಾಕೆ ? ಇನ್ನೊಂದು ವಿಚಾರ ಎಂದರೆ ಎಂಟಿಬಿಗಳ ಗೇರ್ ರೇಶಿಯೋ ಅಥವಾ ಅನುಪಾತ ಸುಲಭ, ಹಾಗಾಗಿ ಎಂತಹ ಏರು ಹಾದಿಯಾದರೂ ಸುಲಭದ ಗೇರ್ ಅಥವಾ ಹಿಂಬದಿಯ ದೊಡ್ಡ ಗೇರಿಗೆ ಹಾಕಿದರೆ ಆರಾಮವಾಗಿ ಕ್ರಮಿಸುವುದು ಸಾಧ್ಯ.
ಎಂಟಿಬಿಯಲ್ಲೂ ಅನೇಕ ಸೈಝಿನ(ಬೇರೆ ಬೇರೆ ವ್ಯಾಸದ) ಟೈರುಗಳನ್ನು ಹಾಕಬಹುದು. ಸಾಮಾನ್ಯವಾಗಿ 26 ಇಂಚಿನ ಚಕ್ರದ ಎಂಟಿಬಿಗಳು. ಈಗೀಗ 29 ಇಂಚಿನವು ಬರುತ್ತಿವೆ, ಅಲ್ಲದೆ 27.5 ಇಂಚಿನವೂ ಇವೆ. ಸಪಾಟು ಹಾದಿಯಲ್ಲಿ ದೊಡ್ಡ ಚಕ್ರದಲ್ಲಿ ವೇಗವಾಗಿ ಹೆಚ್ಚುದೂರ ಸಾಗಬಹುದು, ಆದರೆ ಏರು ಹಾದಿಗಳಲ್ಲಿ ಸಣ್ಣ ಚಕ್ರ ಸುಲಭ.
 ಅಷ್ಟೇ ಅಲ್ಲ ರೋಡ್ ಬೈಕಿನಷ್ಟೇ ಸಪುರದ ಟೈರು ಹಾಕಿ ಓಡಿಸುವವರೂ ಇದ್ದಾರೆ(ಬಜ್ಪೆಯ ಝಿಹಾನ್ ಮಹ್ಮದ್), ಹೆಚ್ಚು ವೇಗ ಸಾಧಿಸುವುದಕ್ಕಾಗಿ.ಇಲ್ಲಿ ಹಗುರ ಚಕ್ರ, ಸುಲಭ ಗೇರ್ ರೇಶಿಯೋದಿಂದಾಗಿ ದೂರ ಕ್ರಮಿಸಲು, ಏರು ಕ್ರಮಿಸಲು ಪ್ರಯೋಜನವಾಗುತ್ತದೆ.
ದಪ್ಪ ಬಟನ್ ಟೈರು, ಭರ್ಜರಿ ಸಸ್ಪೆನ್ಶನ್...ಇದೇ ಎಂಟಿಬಿ

ಇನ್ನು ಹೈಬ್ರಿಡ್ ಬೈಕ್ ವಿಚಾರ. ಹೆಸರೇ ತಿಳಿಸುವಂತೆ ಎಂಟಿಬಿ ಮತ್ತು ರೋಡ್ ಬೈಕ್ ಇವೆರಡರ ಗುಣಲಕ್ಷಣಗಳನ್ನು ತನಗೆ ಬೇಕಾದಂತೆ ಅಳವಡಿಸಿಕೊಂಡ ಬೈಸ್ಕಲ್ಲೇ ಹೈಬ್ರಿಡ್. ಇದರಲ್ಲಿ ಗೇರ್ ರೇಶಿಯೋ ಎಂಟಿಬಿಯಷ್ಟು ಸುಲಭವೂ ಅಲ್ಲ, ರೋಡ್ ಬೈಕಿನಷ್ಟು ಕಷ್ಟವೂ ಅಲ್ಲ, ಟೈರೂ ಕೂಡಾ ರೋಡ್ ಬೈಕಿನಷ್ಟು ಸಪುರವಲ್ಲ, ಹಾಗೆಂದು ಎಂಟಿಬಿಯಷ್ಟು ಅಗಲವಲ್ಲ, ಆದರೆ ದೈನಂದಿನ ಬಳಕೆಗೆ ಹೆಚ್ಚು ಯೋಗ್ಯ. ಸಾಮಾನ್ಯ ಗುಡ್ಡಗಾಡು ರಸ್ತೆಗಳಲ್ಲಿ ಓಡಿಸಬಹುದು(ಎಂಟಿಬಿಯಷ್ಟು ಸರಾಗವಲ್ಲದಿದ್ದರೂ) ಆದರೆ ಸಪಾಟು ರಸ್ತೆಗಳಲ್ಲಿ ನಿಮ್ಮ ಕಾಲುಗಳ ಶಕ್ತಿಗನುಗುಣವಾಗಿ ವೇಗವಾಗಿಯೂ ಸಾಗಬಹುದು. ನಾನು ಹೊಂದಿರುವುದು ಮೆರಿಡಾ ಕಂಪನಿಯ ಕ್ರಾಸ್ ವೇ 15 ಎಂಬ ಹೈಬ್ರಿಡ್ ಸೈಕಲ್.
ಇದು ಹೈಬ್ರಿಡ್ ಸೈಕಲ್

ಸೈಕಲ್ ಕೊಳ್ಳುವವರಿಗೆ ಈಗಿನ ಸೈಕಲ್ ಗಳ ಗೇರುಗಳನ್ನು ನೋಡಿದಾಗ ಭಯವಾಗಿ ಬಿಡುತ್ತದೆ. 21, 24, 27 ಸ್ಪೀಡಿನ ಗೇರುಗಳೆಂದರೆ ಗೊಂದಲ ಕೂಡಾ. ಇದು ಆರಂಭದಲ್ಲಿ ಎಲ್ಲರಿಗೂ ಆಗುವ ಹೆದರಿಕೆ. ಸರಿಯಾಗಿ ಗೇರ್ ಬಳಕೆ ಗೊತ್ತಿಲ್ಲದಿದ್ದರೂ ಸೈಕ್ಲಿಂಗ್ ಕಷ್ಟವೇ. ಹಾಗೆಂದು ಅದು ಕಷ್ಟಕರವೇನೂ ಅಲ್ಲ. 
ಸಾಮಾನ್ಯವಾಗಿ ಗೇರು ಸೈಕಲ್ನಲ್ಲಿ ಮುಂದೆ ಎಂದರೆ ಪೆಡಲ್ ಬಳಿ ಮೂರು ಗೇರ್, ಹಿಂದೆ 7, 8, 9 ಗೇರ್ ಇರುತ್ತವೆ. ಹಿಂದೆ ಟೈರಿಗೆ ಸಮೀಪ ಇರುವುದು ದೊಡ್ಡ ಗೇರು, ಇದರಲ್ಲಿ ಪೆಡಲಿಂಗ್ ಸುಲಭ. ದೂರ ಇರುವ ಅತೀ ಸಣ್ಣ ಗೇರ್ ನಲ್ಲಿ ಸಾಗುವುದು ಕಷ್ಟ, ಆದರೆ ವೇಗ ಜಾಸ್ತಿ. ಸಪಾಟು ರಸ್ತೆಗಿರುವ ಗೇರ್. ಉಳಿದಂತೆ ಭೂಮೇಲ್ಮೈಗೆ ಅನುಗುಣವಾದ ಗೇರುಗಳನ್ನು ಹಾಕುತ್ತಾ ಹೋದರಾಯಿತು. ಮುಂಭಾಗದಲ್ಲಿರುವ ಮೂರು ಗೇರಿನಲ್ಲಿ ಬೈಕ್ ಮಧ್ಯೆ ಇರುವುದು ಸಣ್ಣ ಗೇರ್, ಇನ್ನೊಂದು ದೊಡ್ಡದು ಹಾಗೂ ಮಧ್ಯಮ ಗಾತ್ರದ್ದು. ಮಧ್ಯಮ ಗಾತ್ರದ್ದರಲ್ಲೇ ಹೆಚ್ಚಾಗಿ ಇದ್ದರೆ ಒಳ್ಳೆಯದು. ದೊಡ್ಡ ಗೇರಿಗೆ ಹಾಕಿದರೆ ವೇಗ ಜಾಸ್ತಿ, ಆದರೆ ಕಾಲಿಗೆ ಶ್ರಮವೂ ಹೆಚ್ಚು. ಸಣ್ಣ ಗೇರಿಗೆ ಹಾಕಬೇಕಾದರೆ ತೀರಾ ಏರು ಹಾದಿ ಬೇಕು.
ಬೈಕಲ್ಲಿ ಸಾಗುವಾಗ ನೀವು ಏರು ಹಾದಿಯಲ್ಲಿ ಬೈಕಲ್ಲಿ ದೊಡ್ಡ ಗೇರುಗಳನ್ನು ಹಾಕುತ್ತೀರಿ, ಎಂದರೆ ಎಳೆಯುವ ಶಕ್ತಿ ಜಾಸ್ತಿ, ವೇಗ ಕಡಿಮೆ, ಬೈಕಿಗೆ ಸುಲಭ. ಇಲ್ಲೂ ಅದೇ ತತ್ವ. 
ಇಲ್ಲಿ ಕೊಟ್ಟ ಎರಡು ಚಿತ್ರಗಳನ್ನು ನೋಡಿದರೆ ನಿಮಗೂ ಮನದಟ್ಟಾಗಬಹುದು.
ಹಾಂ...ಹೇಳಲು ಮರೆತೆ. ಗೇರ್ ಶಿಫ್ಟ್ ಮಾಡುವ ಲಿವರ್ ಗಳು ಸೈಕಲ್ ನ ಹ್ಯಾಂಡಲ್ ಗೆ ಭದ್ರವಾಗಿ ಜೋಡಿಸಲ್ಪಟ್ಟಿವೆ. ಹಿಂದೆ ಸಾಮಾನ್ಯವಾಗಿ ಗೇರ್ ಶಿಫ್ಟರ್ ಗಳನ್ನು ಬಳಸಲು ಹ್ಯಾಂಡಲ್ ತಿರುವಬೇಕಿತ್ತು, ಈಗ ಸುಲಭದ ಟ್ರಿಗರ್ ಶೈಲಿಯದ್ದೇ ಜನಪ್ರಿಯ. ಕಡಿಮೆ ದರದ ಸೈಕಲ್ ನಲ್ಲಿ ಮಾತ್ರವೇ ತಿರುಗುವ ಹ್ಯಾಂಡಲ್ ಶಿಫ್ಟರ್ ಗಳಿವೆ.

ಚಿತ್ರಗಳು: ಅಂತರ್ಜಾಲ ಕೃಪೆ

26.12.14

ನಮ್ಮ ದೇಹಕ್ಕೆ ನಾವೇ ಜವಾಬ್ದಾರರು ಎಂದು ಎಚ್ಚರಿಸುವ ಸೈಕಲ್!


ನನ್ನದೇ ಮಾರುತಿ ಆಲ್ಟೊ ಕೆ 10ನಿಂದ ತೊಡಗಿ ಕಾರ್ ಉತ್ಪಾದನೆಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಆಡಿ ಕಂಪನಿಯ ಆಡಿ ಕ್ಯು 7 ಎಸ್ ಯು ವಿ ವರೆಗೆ ಬೇರೆ ಬೇರೆ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿದೆ.

ಈ ಎಲ್ಲಾ ವಾಹನಗಳೂ ತಂತ್ರಜ್ಞಾನದಲ್ಲಿ ಮುಂದುವರಿದವು ಎನ್ನುವುದು ಪ್ರಶ್ನಾತೀತ. ಇದರ ಹಿಂದಿರುವ ಇಂಜಿನಿಯರುಗಳ ಸಾಧನೆಗೆ ಶರಣು.
ತಣ್ಣನೆ ಎಸಿಯಲ್ಲಿ ಕುಳಿತು ಅಟೋಗೇರ್ ಹಾಕಿದರೆ ಆಡಿ ಎ6ನಂತಹ ಸೆಡಾನ್ ಕಾರುಗಳು ಗಂಟೆಗೆ 120 ಕಿ.ಮೀಗೂ ಹೆಚ್ಚು ವೇಗದಲ್ಲಿ ಮುನ್ನುಗ್ಗಿದರೆ ನಮಗೆ ಗೊತ್ತೇ ಆಗದು. ಇಲ್ಲೆಲ್ಲೂ ನಮ್ಮ ಶ್ರಮವಿಲ್ಲ. ಚಾಲನೆ.ಮಾಡುವ ಕೌಶಲ್ಯ ಹಾಗು ಏಕಾಗ್ರತೆ ಇದ್ದರೆ ಸಾಕು.

ಹೀಗೆ ಬೈಕ್, ಕಾರ್ ಇದೆಲ್ಲದರ ಬಳಿಕ ನಾನು ಸೈಕಲ್ ಖರೀದಿಸಿದ್ದು. ವಾಹನಗಳೆಲ್ಲ ನಮ್ಮನ್ನು ಹೊತ್ತೊಯ್ಯುತ್ತವಾದರೆ ಸೈಕಲ್ ಮುಂದೆ ಹೋಗಲು ನಮ್ಮ ಶ್ರಮವೇ ಬೇಕು! ನಮ್ಮ ಹೆಚ್ಚುತ್ತಿರುವ ತೂಕವನ್ನು ಈ ವಾಹನಗಳು ಹೇಳಿವುದೇ ಇಲ್ಲ.
near bajpe airport
ಸೈಕಲ್ ಮೇಲೆ ಕುಳಿತಾಗ ನಮ್ಮ ಕಾಲಿನ ಕಸುವು ಎಷ್ಟೆಂದು ಗೊತ್ತಾಗುತ್ತದೆ. ಹೊಟ್ಟೆಯ ಬೊಜ್ಜಿನ ಮೇಲೆ ಒತ್ತಡ ಬೀಳುತ್ತದೆ. ನಮ್ಮ ಪುಪ್ಪುಸದ ಸಾಮರ್ಥ್ಯ ಎಷ್ಟೆನ್ನುವುದರ ಅರಿವಾಗುತ್ತದೆ. ಹಾಗಾಗಿಯೇ ಸೈಕಲ್ ನನಗಿಷ್ಟವಾಯ್ತು.(ಚಾರಣ ಹೋಗುವಾಗಲೂ ನಮ್ಮ ದೈಹಿಕ ಫಿಟ್ ನೆಸ್ ಮಟ್ಟ ನಮಗೆ ಬೇಗ ಸ್ಪಷ್ಟವಾಗುತ್ತದೆ, ವಾಹನದ ದೃಷ್ಟಿಯಲ್ಲಿ ನೋಡಿದರೆ ಸೈಕಲ್ ಎಂಬುದನ್ನು ನಾನಿಲ್ಲಿ ಹೇಳಿದ್ದು ಅಷ್ಟೆ.)
ಸೈಕಲ್ ಸವಾರಿ ಮಧ್ಯೆ ಹೀಗೆ ಕುಳಿತು ನೀರು ಕುಡಿಯೋದ್ರಲ್ಲೂ ಮಜಾ ಇದೆ!
ಸೈಕಲ್ ಮಹತ್ವವನ್ನು ಭಾರತೀಯರಿಗಿಂತ ಚೆನ್ನಾಗಿ ವಿದೇಶೀಯರು, ಅದರಲ್ಲೂ ಜರ್ಮನ್, ಫ್ರಾನ್ಸ್, ಅಮೆರಿಕಾ, ಬ್ರಿಟನ್ನವರು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಹಾಗಾಗಿ ಆ ಭಾಗದಿಂದ GIANT, SCOTT, BIANCHI, FUJI, SCHWINN, SPECIALISED ಮುಂತಾದ ಕಂಪನಿಯ ಸರಳ ಸುಂದರ ಸೈಕಲ್ ಗಳನ್ನು ಭಾರತಕ್ಕೂ ಕಳುಹಿಸಿ ಪ್ರಚುರ ಪಡಿಸಿದ್ದಾರೆ. ಭಾರತದ ಕಂಪನಿಗಳಾದ ಹೀರೋ, ಬಿಎಸ್ಎ, ಹರ್ಕ್ಯುಲಸ್ ಈ ನಿಟ್ಟಿನಲ್ಲಿ ಸೋತಿವೆ ಎಂದೇ ಹೇಳಬೇಕು. ಇಲ್ಲಿ ಹಳ್ಳಿಗೆ ಬೇಕಾದಂತಹ ರಫ್ ಎಂಡ್ ಟಫ್ ಸೈಕಲ್ಗಳನ್ನು ಅಭಿವೃದ್ಧಿ ಪಡಿಸಿದರೂ ದೊಡ್ಡವರಿಗೆ ಬೇಕಾದ ಫ್ರೇಮ್ ಸೈಜಿನ ಹಗುರವಾದ, ವಿವಿಧ ಆಯ್ಕೆಗಳನ್ನು ಹೊಂದಿದ ಬೈಸಿಕಲ್ಲುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಹಾಗಾಗಿ ಸೈಕಲ್ ಪೇಟೆಯವರ ಮನ ಗೆಲ್ಲುತ್ತಿಲ್ಲ.

ಇನ್ನೂ ಗ್ರಾಮಾಂತರದ ಭಾಗಗಳ ಅನೇಕ ಬಡಜನರ, ಕೆಳಮಧ್ಯಮ ವರ್ಗದವರ ಆಯ್ಕೆ ಇದೇ ಹರ್ಕ್ಯುಲಸ್, ಹೀರೋ ಬೈಸಿಕಲ್ಲುಗಳು ಎನ್ನುವುದನ್ನು ನಾನು ಖಂಡಿತಾ ಮರೆಯಲಾರೆ. ಅಷ್ಟರ ಮಟ್ಟಿಗೆ ಆ ಕಂಪನಿಗಳಿಗೆ ಸಲಾಂ. 3500 ರೂ.ಗೆ ಸೈಕಲ್ ಕೊಟ್ಟು ಬಹಳ ನೆರವಾಗಿವೆ.
ಒಂದು ಸೋಪು, ಶಾಂಪೂ, ಹಾಲು ತರುವುದಕ್ಕೆ 1 ಕಿ.ಮೀ ಹೋಗಬೇಕಾದರೂ ಜುಯ್ಯಂನೆ ಕಾರೇರಿ ಹೋಗುವ ಭೂಪರಿಗೆ ಸೈಕಲ್ ಏರುವುದಕ್ಕೆ ಒಂದಷ್ಟು ಪ್ಯಾಶನ್, ಫ್ಯಾಶನ್ ನೆಪ ಬೇಕು. ಅದನ್ನು ಭಾರತೀಯ ಕಂಪನಿಗಳು ಮಾಡುವಲ್ಲಿ ಸೋತಿವೆ ಎನ್ನುವುದು ನನ್ನ ದೂರು. 
ಅಂತಹವರಲ್ಲೊಬ್ಬನಾದ ನಾನು ಅಂತೂ ಸೈಕಲ್ ಖರೀದಿಸಲು ನಿರ್ಧರಿಸಿಯೇಬಿಟ್ಟೆ. ಇದಕ್ಕೆ ಕಾರಣ ಅತ್ರಿಬುಕ್ ಸೆಂಟರ್ ಅಶೋಕವರ್ಧನರ ಸೈಕಲ್ ಚಳವಳಿ. ಅವರು ಜಂಟಿ ಸೈಕಲ್ನಲ್ಲಿ ಪತ್ನಿ ದೇವಕಿಯಮ್ಮನವರ ಜತೆ ನಗರ ಸಂಚಾರ ಮಾಡುವುದನ್ನು ನೋಡಿದೆ. ಅಲ್ಲಿಂದ ಬಾಲ್ಯಕಾಲದ ನನ್ನ ಸೈಕಲ್ ಸವಾರಿಯ ಆಸೆ ಮತ್ತೆ ಪುಟಿದೆದ್ದಿತು. ಹಾಗೆ ಅವರ ಬ್ಲಾಗ್ನಲ್ಲಿ ಬರುವ ರೋಚಕ ಸೈಕಲ್ ಕಥಾನಕಗಳನ್ನು ಓದುತ್ತಿದ್ದೆ. ಅಂತೂ ತಿಂಗಳುರುಳಿದವು. ಅಶೋಕವರ್ಧನರ ಗೇರ್ ಇಲ್ಲದ ಜಂಟಿ ಸೈಕಲಿನ ಕಷ್ಟಗಳನ್ನೂ ಅವರು ಹೇಳಿಕೊಂಡಿದ್ದರು.
ಮತ್ತೆ ಇನ್ಫೋಸಿಸ್ ನ ಚಾರಣಿಗ ಗೆಳೆಯ ಸಂದೀಪ್ ಕೂಡಾ ತಮ್ಮ ಸೈಕಲ್ ಸಾಹಸ ನನ್ನೊಂದಿಗೆ ಒಮ್ಮೆ ಹೇಳಿಕೊಂಡರು. ಮಂಗಳೂರಿನಂತಹ ಏರು ತಗ್ಗು ಹೆಚ್ಚಿರುವ ಕಡೆಗೆ ಗೇರ್ ಸೈಕಲ್ ಹೇಗೆ ಅನಿವಾರ್ಯ ಎನ್ನುವುದನ್ನು ವಿವರಿಸಿದ್ದರು.
ಆ ಬಳಿಕ ಅಶೋಕವರ್ಧನರು ಬೆಂಗಳೂರಿಗೆ ಹೋಗಿ ಮೆರಿಡಾ ಕಂಪನಿಯ ಮ್ಯಾಟ್ಸ್ ಎನ್ನುವ ಎಂಟಿಬಿ(ಮೌಂಟನ್ ಟೆರೇನ್ ಬೈಕ್) ಖರೀದಿಸಿ, ಸವಾರಿ ಮಾಡಿಕೊಂಡೇ ಬಂದುಬಿಟ್ಟರು. ಅದು ನನಗೆ ಮತ್ತಷ್ಟು ಉತ್ಸಾಹ ಕೊಟ್ಟಿತ್ತು. ಸರಿ ಮನಸ್ಸಿನಲ್ಲಿ ಸೈಕಲ್ ಖರೀದಿಸುವುದನ್ನು ಫೈನಲ್ ಮಾಡಿಯೇ ಬಿಟ್ಟೆ. 
ಸೈಕಲ್ ಖರೀದಿಗೆ ಎಂದು ನಾನು ಮೊದಲು ಇರಿಸಿದ್ದು 15 ಸಾವಿರ ರೂ. ಬೆಂಗಳೂರಿನಲ್ಲಿರುವ ದೀಪಕ್, ಸೈಕಲ್ನಲ್ಲಿ ಭಾರತ ಸುತ್ತುವ ಗೆಳೆಯ ಮಿಥುನ್ ಇವರಿಗೆಲ್ಲಾ ಮಾತನಾಡಿದಾಗ ನನ್ನ ಬಜೆಟ್ ಒಂದಷ್ಟು ವಿಸ್ತರಿಸಿದರೆ ಸ್ವಲ್ವ ಹೆಚ್ಚು ಬಾಳಿಕೆ ಬರುವ ಹಗುರವಾದ, ಸವಾರಿ ಖುಷಿ ಹೆಚ್ಚಿಸುವ ಸೈಕಲ್ ಸಿಗಬಹುದು ಎಂದರು. ಇಂಟರ್ನೆಟ್ನಲ್ಲೂ ಒಂದಷ್ಟು ಪುಟ ತಿರುವಿ ಹಾಕಿದೆ. ನನ್ನ ಆಯ್ಕೆಗೆ ಎಂಟಿಬಿಗಿಂತಲೂ ಹೈಬ್ರಿಡ್ ಒಳ್ಳೆಯದು ಎನ್ನಿಸಿಬಿಟ್ಟಿತು. ಹಾಗೆ ಮೆರಿಡಾ ಎಂಬ ಕಂಪನಿಯ ಕ್ರಾಸ್ ವೇ ಮಾಡೆಲ್ನ ಹೈಬ್ರಿಡ್ ಸೈಕಲ್ ಖರೀದಿಸಿಯೇ ಬಿಟ್ಟೆ.
ಈ ಎಂಟಿಬಿ, ಹೈಬ್ರಿಡ್ ಎಂಬಿತ್ಯಾದಿ ವಿವರಗಳು, ಸೈಕಲ್ ಖರೀದಿ ಬಳಿಕ ಗೆಳೆಯರ ವಿವಿಧ ರೀತಿಯ ಸ್ಪಂದನೆಗಳನ್ನು ಮುಂದಿನ ಸಂಚಿಕೆಯಲ್ಲಿ ಕಟ್ಟಿಕೊಡುವೆ..... 

13.12.14

ಸೈಕಲ್ ಸವಾರಿಯ ಸಂಕಥನ!

ಪೀಠಿಕೆ
ಸೈಕಲ್! ಈ ಮೂರಕ್ಷದ ವಾಹನ ಸರಳ, ಯಾರಿಗೂ ಕಿರಿಕಿರಿ ಎನಿಸದ, ಹೊಗೆಯುಗುಳದ, ಕಾಲಿನ ಮಾಂಸಪೇಶಿಗಳ, ಸ್ನಾಯುಗಳ ಬಲವನ್ನು ಬಯಸುವ ಸೈಕಲ್ ನನಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಚಿಕ್ಕಂದಿನಲ್ಲಿ ಪರಮಪ್ರಿಯ. ಅದರಲ್ಲೂ ಹುಡುಗರಿಗೆ ಮೊದಲ ಲವ್.
ನಾನು ಚಿಕ್ಕಂದಿನಲ್ಲಿ ನೋಡಿದ ಸೈಕಲ್ ಗಳೆಲ್ಲಾ ಬಹಳ ಸರಳ. ಎರಡು ಟೈರು, ಅದನ್ನು ಜೋಡಿಸುವ ಕಬ್ಬಿಣದ ತ್ರಿಭುಜ ಪಟ್ಟಿ. ಚೈನ್, ಪೆಡಲ್, ಅದನ್ನು ಹಿಡಿದಿರಿಸುವ ಹಲ್ಲಿರುವ ಚಕ್ರ, ಅಂಥದ್ದೇ ಇನ್ನೊಂದು ಹಿಂದಿನ ಚಕ್ರ, ಒಂದು ಮರದ ತುಂಡಿನಂತೆಯೇ ಭಾಸವಾಗುವ ಸೀಟು ಅಷ್ಟೇ.
ಅಂಚೆಯಣ್ಣನಿಂದು ಹಿಡಿದು ಮಾಸ್ಟರರ ವರೆಗೆ, ಪುರೋಹಿತರಿಂದ ಹಿಡಿದು ಮರಕಡಿಯಲು ಬರುವ ಅಬ್ಬುಬ್ಯಾರಿಯ ವರೆಗೂ ಎಲ್ಲರಿಗೂ ಸಮಾನತೆ ಒದಗಿಸಿದ್ದು ಸೈಕಲ್.
ನನಗೂ ಸೈಕಲ್ ಮೇಲೆ ಪ್ರೀತಿ ಹುಟ್ಟಿದ್ದು ನಾನು ಎಂಟನೇ ತರಗತಿಯಲ್ಲಿರುವಾಗ. ಪಿಯರ್ ಅಟ್ರಾಕ್ಷನ್ ಅಥವಾ ಓರಗೆಯ ಮಕ್ಕಳಿಂದ ಸಹಜವಾಗಿ ನನಗೂ ಸೈಕಲ್ ಕಲಿಯುವ ಆಸೆ ಹುಟ್ಟಿತ್ತು. ಆಗ ಶಾಲೆ ಬಳಿಯ ಮಾರ್ಸೆಲ್ ಸೋಜರ ಅಂಗಡಿಯಲ್ಲಿ ಹೊಸದಾಗಿ ಬಂದ ಹೀರೋ ಜೆಟ್ ಸೈಕಲ್ ಗಳು ಇತರ ಸೈಕಲ್ ನಂತೆಯೇ ಇದ್ದರೂ ಹೊಸ ಮಾದರಿಯ ವರ್ಣದಲ್ಲಿ ಕಂಗೊಳಿಸುತ್ತಿದ್ದವು. 2 ರೂಪಾಯಿ ಬಾಡಿಗೆ ಕೊಟ್ಟರೆ ಒಂದು ಗಂಟೆ ಸೈಕಲ್ ತುಳಿಯಬಹುದು. ಅಂಥದ್ದರಲ್ಲೇ ಎದ್ದು ಬಿದ್ದು ಸೈಕಲ್ ಕಲಿತಿದ್ದಾಯ್ತು.
ನನಗೂ ಒಂದು ಸೈಕಲ್ ಬೇಕೆಂಬ ಹಂಬಲ ಸಸಿಯಾಗಿ ಹುಟ್ಟಿಕೊಳ್ಳುವಾಗ ಎಸ್ಸೆಸ್ಸೆಲ್ಸಿಯಲ್ಲಿದ್ದೆ. ಈಗಲಾದರೆ ಮಕ್ಕಳು ನಡೆಯುವ ಮೊದಲೇ ಒಂದು ತ್ರಿಚಕ್ರ ಸೈಕಲ್, ಅದು ಹಳತಾಗುವ ಮೊದಲೇ ಚಿಕ್ಕ ಗಾಲಿ ಸಹಾಯ ಇರುವ ಸೈಕಲ್ ಬಂದಿರುತ್ತಿದ್ದವು. ನಾನು ಚಿಕ್ಕವನಿದ್ದಾಗ ಆಸೆಗಳನ್ನು ಈಡೇರಿಸುವುದು ಮನೆಯವರಿಗೂ ಕಷ್ಟವೇ. ಆದರೂ ನನ್ನೆಲ್ಲ ಆಕಾಂಕ್ಷೆಗಳಿಗೆ ಬೆಳಕಿಂಡಿಯಾಗಿದ್ದ ನನ್ನ ಚಿಕ್ಕಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ಗಂಟಲಿನಲ್ಲಿಳಿಯದ ಕಡುಬಾದ ಗಣಿತದಲ್ಲಿ 70ಕ್ಕಿಂತ ಹೆಚ್ಚು ಗಳಿಸಿದರೆ ಸೈಕಲ್ ಕೊಡಿಸುವುದಾಗಿ ಆಶ್ವಾಸನೆಯಿತ್ತರು. ಆದರೆ ಅದರ ಕನಸಿನಲ್ಲಿ ಮುಳುಗಿಯೋ ಏನೋ ನನಗೆ ಪ್ರಥಮ ದರ್ಜೆ ಗಳಿಸಲಷ್ಟೇ ಸಾಧ್ಯವಾಯಿತು. ಗಣಿತದಲ್ಲಂತೂ ಜಸ್ಟ್ ಪಾಸು!
ಹಾಗಾಗಿ ಸೈಕಲ್ ಗಗನ ಕುಸುಮವಾಗಿಯೇ ಉಳಿಯಿತು.
18 ವರ್ಷ ಬಳಿಕ
ಅಲ್ಲಿಂದ ಕಾಲೇಜು ಪ್ರವೇಶ, ಓದಿನ ಅರಮನೆ ಪ್ರವೇಶಿಸಿದ ಬಳಿಕ ಸೈಕಲ್ ನಂತಹ 'ಕ್ಷುಲ್ಲಕ' ವಿಚಾರಗಳಿಗೆಲ್ಲ ಎಡೆಯಿಲ್ಲ!
ಹಾಗಾಗಿ ಅದು ಮರೆತೇ ಹೋಯ್ತು. ಉದ್ಯೋಗ ಸಿಕ್ಕ ಬಳಿಕ ಬೈಕ್ ಕೊಳ್ಳುವ ಹಂಬಲ. ಸ್ಪ್ಲೆಂಡರ್ ಬಂತು, ಅದು ಹೋಗಿ ಸುಝುಕಿ ಹೀಟ್ ಬಂತು, ನಂತರ ಸುಜುಕಿ ಜಿಎಸ್ 150 ಬಂತು.
ಇವೆಲ್ಲ ಬಂದರೂ ದಿಢೀರ್ ಆಗಿ ಹುಟ್ಟಿಕೊಂಡ ಯೋಚನೆ ಸೈಕಲ್ ನದ್ದು. ವಯಸ್ಸಿನೊಂದಿಗೇ ಕಾಣಿಸಿಕೊಳ್ಳುತ್ತಿದ್ದ ನಸುಮಂದಗತಿ, ನನಗೂ ವಯಸ್ಸಾಗುತ್ತಿದೆಯೇ ಎಂದು ಯೋಚಿಸುವಂತೆ ಮಾಡುತ್ತಿದ್ದ ದೇಹ, ಇದೆಲ್ಲದಕ್ಕೂ ನಿಯಂತ್ರಣ ಹೇರುವುದಾದರೆ ಅದು ಸೈಕಲ್ನಿಂದಲೇ ಎಂದು ಸೈಕಲ್ ಕೊಂಡು ಬಿಟ್ಟೆ.
ತೈವಾನ್ ಕಂಪನಿ ಮೆರಿಡಾ ಅದ್ಭುತವೆನಿಸುವ ಗಿಯರು ಸಹಿತ ಸೈಕಲ್ ಗಳನ್ನು ಉತ್ಪಾದಿಸುತ್ತದೆ. ಅದರಲ್ಲಿ ಒಂದು ಮಾದರಿಯನ್ನು ನಾನು ಕೊಂಡುಕೊಂಡೆ, ತೆಗೆದುಕೊಂಡ ಒಂದು ತಿಂಗಳಲ್ಲಿ ಬಹಳ ಮಜವಾದ ಅನುಭವ ಕೊಟ್ಟಿದೆ...ಸೈಕ್ಲಿಂಗ್ ಅನುಭವಗಳನ್ನು ಮುಂದಿನ ಸಂಚಿಕೆಗಳಲ್ಲಿ ಕಟ್ಟಿಕೊಡಲಿದ್ದೇನೆ...
ರಾತ್ರಿ 10.45 ಶುಭರಾತ್ರಿ!



Related Posts Plugin for WordPress, Blogger...