11.10.16

ಚಾರ್ಮಾಡಿ, ಕಳಸ, ಕುದುರೆಮುಖ ಸೈಕಲ್ ಪ್ರವಾಸಕ್ಕೊಂದು ದಾರುಣ ಕೊನೆ

ಒಂದೂವರೆ ಸಾವಿರ ಮೀಟರ್ ಎತ್ತರವನ್ನು ಸತತ ಸೈಕ್ಲಿಂಗ್ ನಲ್ಲಿ ಕ್ರಮಿಸುವುದು..ಜಠರಾಗ್ನಿಯನ್ನು ತಣಿಸಿದ ಬಳಿಕ ಮಲೆನಾಡಿನ ಎಸ್ಟೇಟಿನ ತಿರುವು ದಾರಿಗಳಲ್ಲಿ ಹಸಿರು ಕಣ್ತುಂಬಿಕೊಳ್ಳುತ್ತಾ, ಸಿಗುವ ತಾಜಾ ಕಾಫಿಯಂಗಡಿಗಳಲ್ಲಿ ಮಲೆನಾಡಿನ ಕಾಫಿ ಗುಟುಕರಿಸುವುದು...ಇಂತಹ ಅನುಭವ ಯಾರಿಗುಂಟು ಯಾರಿಗಿಲ್ಲ...
ಇಂಥದ್ದೊಂದು ದೀರ್ಘ ಸೈಕಲ್ ಸವಾರಿ ಹಾಕಲೇಬೇಕೆಂಬುದು ಮಿತ್ರ, ಎಂಸಿಎಫ್ ಉದ್ಯೋಗಿ ಚಿನ್ಮಯ ದೇಲಂಪಾಡಿ ಹಾಗೂ ನನ್ನ ದೀರ್ಘಕಾಲೀನ ಆಲೋಚನೆಯಾಗಿತ್ತು. ಇದರಲ್ಲಿ ಸೇರಿಕೊಳ್ಳಬೇಕು ಎಂಬ ನಮ್ಮ ಆಮಂತ್ರಣಕ್ಕೆ ಒಪ್ಪಿಸೇರಿಕೊಂಡವರು ಗುರುವಾಯನಕೆರೆಯ ಗೆಳೆಯ, ಮಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಗೌರವ್ ಪ್ರಭು.
ಸೈಕ್ಲಿಂಗ್ ಪಟುಗಳ ಹುಚ್ಚಿಗೆ ಕಿಚ್ಚು ಹಚ್ಚುವ ಎಲ್ಲ ವಾಹನ ಚಾಲಕರಿಗೂ ತಲೆನೋವೇ ಆಗಿರುವ ಆದರೆ ಪ್ರಕೃತಿ ಪ್ರಿಯರಿಗೆ 365 ದಿನವೂ ನಿಸರ್ಗದ ಚೆಲುವಿನ ದರುಶನ ನೀಡುವ ಚಾರ್ಮಾಡಿ ಘಾಟ್ ಏರುವುದು, ಆ ಬಳಿಕ ಸಿಗುವ ಕೊಟ್ಟಿಗೆಹಾರದಿಂದ ಎಡಕ್ಕೆ ತಿರುಗಿ ಕಳಸ ಸೇರುವುದು ಮೊದಲ ದಿನದ ಯೋಜನೆ. 
ಮರುದಿನ ಕಳಸದಿಂದ ಏರಿಳಿತದ ಹಾದಿಯಲ್ಲಿ ಕುದುರೆಮುಖ ಸೇರಿ, ನಂತರ ಕಾರ್ಕಳ, ಪಡುಬಿದಿರೆಯಾಗಿ ಊರು ಸೇರುವುದು ಎರಡನೇ ದಿನದ ನಮ್ಮ ವೇಳಾಪಟ್ಟಿ.


ದಿನ 1: ಮಂಗಳೂರಿನಿಂದ ಕಳಸದತ್ತ
ನಾನು ಸುರತ್ಕಲಿನಿಂದಲೇ ಮುಂಜಾನೆ ಹೊರಟರೆ ಚಿನ್ಮಯ ಮಂಗಳೂರಿನಲ್ಲಿ ಜತೆಯಾದರು. ಬಿ.ಸಿ.ರೋಡಿನಲ್ಲಿ ಲಘು ಉಪಹಾರ ಸೇವಿಸಿ ಮುಂದುವರಿದೆವು. ಗುರುವಾಯನಕೆರೆ ಜಂಕ್ಷನಿನಲ್ಲಿ ಗೌರವ್ ಕೂಡಾ ಸೇರಿಕೊಂಡು ತ್ರಿಮೂರ್ತಿಗಳಾಗಿ ಮುಂದುವರಿದೆವು. ಉಜಿರೆಯ ಜನಾರ್ಧನ ಸ್ವಾಮಿ ದೇಗುಲದ ಮುಂಭಾಗದ ಹಳೆಯ ಹೊಟೇಲಿನಲ್ಲಿ ಬೆಳಗ್ಗಿನ ಉಪಹಾರ ತಿನ್ನುವಾಗಲೇ ಗೌರವ್ ಅವರ ಮಿತ್ರ ಆಗಮಿಸಿದರು. ಅವರೂ ನಮ್ಮ ಪ್ರವಾಸಕ್ಕೆ ಸೇರಬೇಕಾದರೂ ತಮ್ಮ ಕೌಟುಂಬಿಕ ಅನಿವಾರ್ಯತೆಯಿಂದ ನಮ್ಮನ್ನು ಬೀಳ್ಕೊಟ್ಟರು.
ಉಜಿರೆಯಿಂದ ಯಾವುದೇ ಅರ್ಜೆಂಟಿಲ್ಲದೆ ಸುತ್ತಮುತ್ತಲಿನ ವಿಚಾರಗಳನ್ನು ಗಮನಿಸುತ್ತಾ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಾ ಮುಂದುವರಿದೆವು. ಪ್ರೊಫೆಷನಲ್ ಸೈಕ್ಲಿಸ್ಟ್ ಗಳಂತೆ "ಸರಾಸರಿ ವೇಗ, ಗರಿಷ್ಠ ವೇಗ"ಗಳಿಗಷ್ಟೇ ಸೀಮಿತಗೊಳ್ಳುವುದು ಇಷ್ಟವಿರಲಿಲ್ಲ. ಹಾಗಾಗಿ ನಿಲ್ಲಬೇಕಾದಲ್ಲಿ ನಿಂತು ಸಾಗುತ್ತಿದ್ದೆವು. ನನ್ನ ಹಿಂದಿನ ಚಾರ್ಮಾಡಿ ಸೈಕಲ್ ಪ್ರವಾಸದಲ್ಲಿ ಕಾಲಿನ ಮಾಂಸಪೇಶಿ ಸೆಳೆತ ಉಂಟಾಗಿ ಇಡೀ ಪ್ರವಾಸ ನೋವುದಾಯಕವಾಗಿದ್ದ ನೆನಪು ಬೆನ್ನಿಗಿತ್ತು. ಈ ಬಾರಿ ಅಂತಹ ಯಾವುದೇ ದೈಹಿಕ ಸಮಸ್ಯೆ ಇರಲಿಲ್ಲ 
ಆದರೆ....
ನನ್ನ ಸೈಕಲ್ಲಿನ ಹಿಂದಿನ ಡಿರೇಲ್ಯೂರ್(ಎಂದರೆ ಚೈನನ್ನು ಬೇರೆ ಬೇರೆ ಗಿಯರು ಚಕ್ರಗಳಿಗೆ ದಾಟಿಸುವ ಸಲಕರಣೆ) ದೊಡ್ಡ ಎರಡು ಗಿಯರುಗಳಿಗೆ ಕೂರುತ್ತಲೇ ಇರಲಿಲ್ಲ ಗಿಯರು ಸೈಕಲ್ ತಾಂತ್ರಿಕವಾಗಿ ಮಾಹಿತಿ ಇದ್ದವರಿಗೆ ಇದು ಅರ್ಥವಾಗಬಹುದು. ಏರುದಾರಿಗಳನ್ನು ಸಲೀಸಾಗಿ ಏರಬೇಕಾದರೆ ಈ ಗಿಯರುಗಳು ಅತ್ಯಗತ್ಯ. ಮುಂಭಾಗದ ಕ್ರ್ಯಾಂಕಿನಲ್ಲಿರುವ ಮೂರು ಗಿಯರುಗಳಲ್ಲಿ ಚಿಕ್ಕದಕ್ಕೆ ಗಿಯರ್ ಶಿಫ್ಟ್ ಮಾಡಿ, ಹಿಂಬದಿಯ ಏಳೋ, ಎಂಟೋ ಗಿಯರ್ ಸೆಟ್ ಗಳಲ್ಲಿ ದೊಡ್ಡ ಚಕ್ರಗಳಿಗೆ ಶಿಫ್ಟ್ ಮಾಡಿಕೊಂಡು ಏರುದಾರಿಯೇರುವುದು ಸಾಮಾನ್ಯ. ನನ್ನ ಎರಡು ದೊಡ್ಡ ಚಕ್ರಗಳೂ ಇಲ್ಲಿ ಉಪಯೋಗಶೂನ್ಯವಾಗಿದ್ದವು. ಇದು ಸಹಜವಾಗಿ ಅಳುಕುಂಟು ಮಾಡಿತ್ತು. ಎಂದರೆ ಕಾಲಿನ ಹೆಚ್ಚಿನ ಬಲ, ಶ್ರಮ ತುಳಿಯಲು ಹಾಕಬೇಕಾಗುತ್ತದೆ.
ದಾರಿಯಲ್ಲೊಂದು ಗ್ಯಾರೇಜಿನಲ್ಲಿ ಡಿರೇಲ್ಯೂರ್ ಸೆಟ್ಟಿಂಗ್ ಬದಲಾಯಿಸುವುದಕ್ಕೆ ಗೌರವ್ ಪ್ರಭೂ ಶ್ರಮಿಸಿದರಾದರೂ ಯಾವುದೇ ಫಲ ಸಿಗಲಿಲ್ಲ. ಕೊನೆಯಲ್ಲಿ ಆದದ್ದಾಗಲಿ ಎಂದು ಮುಂದುವರಿದೆವು. 

ಚಾರ್ಮಾಡಿಯ ಏರುದಾರಿ

ಚಾರ್ಮಾಡಿಯಲ್ಲೊಂದು ತಣ್ಣನೆಯ ಜಲಧಾರೆ
ಶರೀರಕ್ಕೆ ಹೆಚ್ಚು ಶ್ರಮಕೊಡದೆ ಸುಲಭ ಗಿಯರುಗಳಲ್ಲೇ ಮೇಲೇರುತ್ತಾ ಹೋದೆವು. ತೀರಾ ಚಡಾವು ಇದ್ದಲ್ಲಿ ನಿಧಾನವಾಗಿ ಸಾಗಿದ ಕಾರಣ ಹೆಚ್ಚು ತೊಂದರೆಯೇನೂ ಆಗಲಿಲ್ಲ. ಚಾರ್ಮಾಡಿ ಘಾಟಿ ಏರುವಾಗ ತಿರುವುಗಳಲ್ಲಿ ಲಾರಿಗಳು ಎಸೆದ ಕೊಳೆತ ಕೋಳಿ ತ್ಯಾಜ್ಯದ ದುರ್ವಾಸನೆ ಸಹಿಸಲಸಾಧ್ಯ. ಘಾಟ್ ಮುಗಿಯುತ್ತಾ ಬಂದಾಗ ಎರಡೂ ಬದಿಯ ಸೌಂದರ್ಯಲೋಕ ತೆರೆದುಕೊಂಡಿತು. ಎಡಬದಿ ಗೋಡೆಯಂತಹ ಗುಡ್ಡಗಳಿಂದ ಹರಿದು ಬರುವ ನೀರು ಮನದಣಿಯ ಮುಖಕ್ಕೆ ಎರಚಿಕೊಂಡು, ಖಾಲಿಯಾಗುತ್ತಿದ್ದ ಬಾಟಲಿ ಹಾಗೂ ನಮ್ಮ ಹೊಟ್ಟೆಗೂ ರಿಚಾರ್ಜ್ ಮಾಡಿಕೊಂಡೆವು. 9.30ಕ್ಕೆ ಉಜಿರೆ ಬಿಟ್ಟ ನಾವು 2 ಗಂಟೆಗೆ ಕೊಟ್ಟಿಗೆಹಾರ ಸೇರಿದ್ದವು.
ಕೊಟ್ಟಿಗೆಹಾರದಲ್ಲಿ ಊಟ, ನೀರ್ದೋಸೆ, ಬಾಳೆ ಹಣ್ಣು ಇತ್ಯಾದಿ ಹೊಟ್ಟೆಗಿಳಿಸಿ, ಎಡದ ರಸ್ತೆಗೆ ಹೊರಳಿದೆವು. ಅಲ್ಲಿಂದ ಎಸ್ಟೇಟುಗಳು, ಗದ್ದೆಗಳ ವಿಹಂಗಮ ದೃಶ್ಯ. ಹೆಚ್ಚೇನು ಏರುಗಳಿಲ್ಲದ ಹಾಗೆಂದು ಸುಲಭವೂ ಅಲ್ಲದ ಹಾದಿ. ಆದರೆ ಅಚ್ಚರಿಯೆಂದರೆ ರಸ್ತೆಗಳೆಲ್ಲ ಸಪಾಟು, ಹೊಂಡಗುಂಡಿಗಳೇನೂ ಇರಲಿಲ್ಲ.

ಚಾರ್ಮಾಡಿಯನ್ನೇರಿದ ಸಹಜ ಬಳಲಿಕೆ, ಮಧ್ಯೆ ಕೊಟ್ಟಿಗೆಹಾರದಲ್ಲಿ ಹೊಟ್ಟೆಗೆ ಸಾಂಗವಾಗಿ ಆಹಾರ ನೀಡಿದ್ದು ಇದರಿಂದ ಸೈಕಲ್ ಸವಾರಿ ಮಾಡುತ್ತಿರುವಾಗಲೇ ನಮಗೆ ಕಣ್ಣೆಳೆಯತೊಡಗಿತ್ತು. ಬಾಳೂರು ಕ್ರಾಸ್ ಸಿಗುವುದಕ್ಕೂ ಮೊದಲೇ ಬದಿಯಲ್ಲೊಂದು ಹಳೆಯ ಬಸ್ ನಿಲ್ದಾಣ ಮೈತುಂಬ ನಿರ್ಮಲ ಭಾರತ ಅಭಿಯಾನ ಸಂದೇಶ ಹೊದ್ದು ಮಧ್ಯಾಹ್ನದ ಸುಡುಬಿಸಿಲಿಗೆ ತೆಪ್ಪಗೆ ಕುಳಿತಿತ್ತು. ನಾವೂ ಸೈಕಲ್ ಪಕ್ಕಕ್ಕಿರಿಸಿ ತುಸು ಹೊತ್ತು ವಿಶ್ರಮಿಸಿಕೊಂಡೆವು. ಮಲಗಿದರೆ ನಿದ್ದೆ ಆವರಿಸಿಕೊಳ್ಳುವ ಭೀತಿಯಿಂದೆದ್ದು ಮುಂದುವರಿದೆವು.
ಮಧ್ಯಾಹ್ನ ವಿಶ್ರಾಂತಿಗೆ ಇನ್ನೇನು ಬೇಕು

ಬಾಳೂರು ಕ್ರಾಸ್ ನಲ್ಲಿ ಎಡಕ್ಕೆ ಹೊರಳಿ ಕಳಸ ದಾರಿಯಾಗಿ ಹೋದರೆ ಮಧ್ಯಾಹ್ನದ ಬಿಸಿಲಿನಿಂದ ಮುಕ್ತಿ. ಎರಡೂ ಬದಿಯಲ್ಲೂ ಎತ್ತರೆತ್ತರ ಮರಗಳ ಮಧ್ಯೆ ಕಾಫಿ ಬೆಳೆದಿದ್ದಾರೆ. ಹಾಗಾಗಿ ಆಯಾಸವೆಲ್ಲ ಮರೆತು ಹೋಯಿತು. ತುಸುದೂರದಲ್ಲೇ ಹೇಮಾವತಿ ನದಿಯ ಉಗಮಸ್ಥಾನಕ್ಕೆ ಹೋಗುವ ದಾರಿ ಕಂಡಿತಾದರೂ ದಾರಿ ಹೇಗಿದೆ ಎಂಬ ಸಂಶಯದಿಂದ ಆ ಕಡೆ ಹೊರಳಲಿಲ್ಲ.
ಕೆಳಗೂರು ಸಮೀಪ ದಾರಿಯ ಎಡಬದಿ ನೋಡಿದರೆ ವಿಶಾಲ ಕಣಿವೆ, ಅದರ ತುಂಬ ಅಂತರಗಳಲ್ಲಿ ಬೆಳೆದ ಪಚ್ಚೆಪೈರು! ಮಂಗಳೂರು ಭಾಗದಲ್ಲಿ ಎಲ್ಲಿ ಹೋದರೂ ಈ ರೀತಿಯ ದೃಶ್ಯ ನೋಡಲು ಸಿಗದು. ಇನ್ನೊಂದಷ್ಟು ಮುಂದೆ ಬಂದರೆ ಗುಡ್ಡಕ್ಕೆ ಗುಡ್ಡವೇ ಚಹಾತೋಟ ಮಯ. ಈ ಭಾಗದಲ್ಲಿರುವ ಬಹುತೇಕ ಗುಡ್ಡಗಳೆಲ್ಲಲ್ಲ ಎಸ್ಟೇಟುಗಳು ರಿಸಾರ್ಟ್ ಗಳೂ ತಲೆಯೆತ್ತಿವೆ.


ಮುಂದಿನ ದಾರಿ ಬಹುತೇಕ ಇಳಿಜಾರು. ರಸ್ತೆಯೂ ಚೆನ್ನಾಗಿತ್ತು. ಕೆಳಗೂರಿನ ಒಂದೆರಡು ಕಿ.ಮೀ ಮಾತ್ರ ಕೆಟ್ಟಿತ್ತು. ಹಾಗಾಗಿ ಯಾವುದೇ ಸಮಸ್ಯೆಯಾಗದೆ ಸಾಯಂಕಾಲ 6.30ರ ವೇಳೆಗೆ ಕಳಸ ಪೇಟೆ ತಲಪಿದೆವು. ಕಳಸೇಶ್ವರನಿಗೆ ದೇವಳದ ಮುಂದಿನಿಂದ ಮನದಲ್ಲೇ ನಮಸ್ಕರಿಸಿ, ಮೊದಲು ತೋಟದೂರು ಯಾತ್ರಿ ನಿವಾಸ(ಪೂರ್ವದಲ್ಲೇ ನೋಂದಾಯಿತ) ಸೇರಿಕೊಂಡೆವು. ಸ್ನಾನಾದಿ ಮುಗಿಸಿ, ಮೊದಲು ಮೀನಾಕ್ಷಿ ಭವನದ ಭಟ್ಟರಲ್ಲಿ(ಇವರು ಮೂಲತಃ ಶಿರ್ತಾಡಿಯವರು, ಕಳಸದಲ್ಲಿ ನೆಲೆಯಾಗಿ 3 ದಶಕವೇ ಕಳೆದಿದೆ) ಊಟ ಮುಗಿಸಿ ಬಂದು ಮಲಗಿಕೊಂಡರೆ ಬಡಿದು ಹಾಕಿದಂತಹ ನಿದ್ದೆ!.

ದಿನ -2 ಕಳಸದಿಂದ ಕುದುರೆಮುಖ, ಊರಿನತ್ತ ಮುಖ

ಮುಂಜಾನೆಯ ಸವಾರಿಗೆ ಸೂರ್ಯನ ಇಣುಕು
ಕಳಸದ ತಣುಪು ವಾತಾವರಣದಲ್ಲಿ ರಾತ್ರಿ ಹಾಯಾದ ನಿದ್ದೆ ಮುಗಿಸಿ, ಅಲಾರಾಂಗೆ ದಡಬಡಾಯಿಸಿ ಎದ್ದು ಮುಖಮಾರ್ಜನ ನೆರವೇರಿಸಿಕೊಂಡು ಥಟ್ಟಂತ ಹೊರಟುಬಿಟ್ಟೆವು. ಕಳಸದ ಚಾದಂಗಡಿಯಲ್ಲೊಂದು ಚಹಾ ಏರಿಸಿಕೊಂಡು ಹೊರಟು ಪೇಟೆಯ ಹೊರಗೆ ತಲಪುವಷ್ಟರಲ್ಲೆ ಎಡಬದಿಯಲ್ಲಿ ಸೂರ್ಯರಶ್ಮಿ ಸುವರ್ಣಬಣ್ಣದಲ್ಲಿ ಕೋರೈಸತೊಡಗಿತ್ತು. ತಟ್ಟು ತಟ್ಟಾದ ಗದ್ದೆಯ ಮೇಲ್ಭಾಗದಲ್ಲಿ ಹೊಳೆಯುವ ಸೂರ್ಯನ ಚಿತ್ರ ತೆಗೆಯಲು ಮರೆಯಲಿಲ್ಲ. 
ಕಳಸ ಪೇಟೆಯ ಹೊರಗೆ ಸಿಕ್ಕಿದ ದೃಶ್ಯ
ಮನಮುದಗೊಳಿಸುವ ಕೆಳಗೂರಿನ ಗದ್ದೆಗಳು

ಕಳಸದಿಂದ ಕುದುರೆಮುಖ ಸಾಗುವಾಗ ಮಧ್ಯೆ ಬಾಳ್ಗಲ್ ಎಂಬಲ್ಲಿ ಜೈನರ ಚಿಕ್ಕ ಹೊಟೇಲೊಂದರಲ್ಲಿ ನಮ್ಮ ಹಸಿದ ಹೊಟ್ಟೆಗೆ ಭರ್ಜರಿ ರುಚಿಯ ಇಡ್ಲಿ ಚಟ್ಟನಿ ಸಿಕ್ಕಿದ್ದು ಖುಷಿಯೆನಿಸಿದರೂ, ಒಂದೇ ಕಿಲೋಮೀಟರ್ ಗೆ ಅಷ್ಟೇ ಭರ್ಜರಿ ಹಿಮ್ಮುರಿ ತಿರುವು ಸಹಿತ ಏರು ದಾರಿ ಕಂಗೆಡಿಸಿಬಿಟ್ಟಿತು! ಅಲ್ಲಿವರೆಗಿನ 'ಕೂಲ್' ವಾತಾವರಣವೆಲ್ಲವೂ ನಮಗೆ ಬಿಸಿಯಾಯ್ತು. ಇಂತಹ ಒಂದಲ್ಲ ಮತ್ತೂ ಎರಡು ಚಡಾವುಗಳಲ್ಲಿ ಮೈ ಪೂರ್ತಿ ವಾರ್ಮ್ ಅಪ್ ಆಯ್ತು. ಏರಿದವನು ಇಳಿಯಲೇಬೇಕು ಎಂಬ ನಿಯಮದ ಹಾಗೆ ಮತ್ತೆ ಇಳಿದಾರಿ. ಕಳಸದಿಂದ ಸರಿಸುಮಾರು 20 ಕಿ.ಮೀ ದಾರಿಯನ್ನು ಅಂತೂ ಮೂರು ಗಂಟೆಯಲ್ಲಿ ಕ್ರಮಿಸಿದೆವು.
ದಾರಿಯಲ್ಲಿ ಜಾಮ್ಳೆ ಸರಕಾರಿ ಶಾಲೆಯ ಮಕ್ಕಳೊಂದಿಗೆ ಹಾಗೆ ಕುಶಲೋಪರಿ ಮಾತನಾಡಿ, ಅವರೊಂದಿಗೆ ಫೊಟೊ ಕ್ಲಿಕ್ಕಿಸಿಕೊಂಡೆವು. ಮಕ್ಕಳ ಸೈಕಲ್ ಕುರಿತ ಕುತೂಹಲಕಾರಿ ಪ್ರಶ್ನೆಗಳಿಗೆ ಸಾಕಷ್ಟು ಉತ್ತರಿಸಿದೆವು. ನಾವು ಓಡುತ್ತೇವೆ, ನಮ್ಮನ್ನು ಚೇಸ್ ಮಾಡಿ ಎಂದು ಮಕ್ಕಳು ನಮಗೇ ಸವಾಲೆಸೆಯಬೇಕೆ!
 ಕುದುರೆಮುಖದಿಂದ ಗಂಗಾಮೂಲದ ವರೆಗೂ ಮತ್ತೆ ಏರುದಾರಿಗಳೇ. ಆದರೆ ಆ ವೇಳೆಗಾಗಲೇ ನಮಗೆ ಸವಾರಿಯ ಲಯ ಸಿಕ್ಕಿದ್ದರಿಂದ ಕಷ್ಟವಾಗಲಿಲ್ಲ. ಬೆಳಗ್ಗಿನ ಕುದುರೆಮುಖ ಶ್ರೇಣಿ, ಕಾಡಿನ ಸೌಂದರ್ಯ ಸವಿಯುತ್ತಾ ಸಾಗಿಬಂದೆವು. ಗಂಗಾಮೂಲದ ಬಳಿ ನಿಂತು ತುಸು ದಣಿವಾರಿಸಿಕೊಳ್ಳುತ್ತಿದ್ದೆವು. 
ಮಾರ್ಗವೆಲ್ಲ ನಮದೇ :)

ಕುತೂಹಲಿ ಚಿಣ್ಣರೊಂದಿಗೆ
ಅದು ರಾಷ್ಟ್ರೀಯ ಉದ್ಯಾನವನ ಎನ್ನುವುದು ಎಲ್ಲರಿಗೂ ಗೊತ್ತು ಪ್ರಾಣಿಗಳು ರಸ್ತೆ ದಾಟುವುದು, ರಸ್ತೆಯಲ್ಲಿ ಕುಳಿತುರುವುದು ಕೂಡಾ ಹೊಸತಲ್ಲ. ಆದರೂ ನಮ್ಮ ಅನಾಗರಿಕ ಜನರಿಗೆ ಮಾತ್ರ ಈ ವ್ಯವಸ್ಥೆಗೆ ಗೌರವ ಕೊಡುವ ಬುದ್ಧಿಯೇ ಇಲ್ಲ. ಗಂಗಾಮೂಲದ ಇಳಿಜಾರು ರಸ್ತೆಯಲ್ಲಿ ವಾನರ ವೃಂದವೊಂದು ಕುಳಿತಿತ್ತು. ಹೋಗಿ ಬರುವ ಪ್ರವಾಸಿಗರು ಎಸೆಯುವ ಹಾಳುಮೂಳು ತಿಂಡಿಗೆ ಇವು ಒಗ್ಗಿಕೊಂಡಿವೆ. ಕುದುರೆಮುಖದಿಂದ ಬಂದ ಬಾಡಿಗೆಯ ಇನ್ನೋವಾ ವಾಹನದ ಚಾಲಕ ಬ್ರೇಕ್ ಇರುವುದನ್ನೂ ಮರೆತು ಮುಂದುವರಿದ. ವಾನರಗಳೆಲ್ಲ ದಿಕ್ಕಾಪಾಲಾಗಿ ಚದುರಿದರೂ ಒಂದು ಮಂಗ ಮಾತ್ರ ವಾಹನದಡಿಗೆ ಸಿಲುಕಿ ಒದ್ದಾಡಿತು, ಹಿಂದಿನ ಟೈರು ಅದರ ಹೊಟ್ಟೆಯ ಮೇಲೆಯೇ.....
ಅಲ್ಲಿಂದ ಜೀವ ಕೈಲಿ ಹಿಡಿದು ಚೀರುತ್ತಾ ಕಾಡಿನ ಗರ್ಭಕ್ಕೆ ಹೊರಟು ಹೋಯಿತು...ಈ ದೃಶ್ಯ ಮಾತ್ರ ನಮ್ಮೂವರನ್ನೂ ಕಲಕಿ ಬಿಟ್ಟಿತು. ಯಾವುದೇ ಬೇಸರವಿಲ್ಲದೆ ಇನ್ನೋವಾ ತೊಲಗಿತು. ಈ ಹೃದಯವಿದ್ರಾವಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ನಮಗೆ ಮರೆಯದ ಅನುಭವ.

Related Posts Plugin for WordPress, Blogger...