
ಇಂದು ಮುಗಿಲಪ್ಯಾಟೆಯಲ್ಲಿ ಸಂಜೆ ಎಂದಿನಂತಿಲ್ಲ.
ಪಶ್ಚಿಮದಲ್ಲಿ ಅದೇಕೋ ಸೂರ್ಯನನ್ನೇ ಮುಚ್ಚಿ ಹಾಕುವಂತಹ ತಳಮಳ....
ಇದ್ದಕ್ಕಿದ್ದಂತೆಯೇ ರಾತ್ರಿಯಾಯಿತೇನೋ ಎಂಬಂತೆ ಬೆಳಕು ಇನ್ನಿಲ್ಲದಂತೆ ಮಾಯ....
ಅಂಗಡಿಯಲ್ಲಿ ಗೋಳಿಬಜೆ ಹಿಟ್ಟು ಕಲಸುತ್ತಿದ್ದವನಿಗೆ, ಮರದಡಿ ಮೀನು ಮಾರುವವರಿಗೆ, ಮುಂದಿನ ಗದ್ದೆಯಲ್ಲಿ ಕಸ ಒಟ್ಟು ಮಾಡಿ ಬೆಂಕಿ ಹಾಕುತ್ತಿದ್ದ ರೈತರಿಗೆ, ಗಂಭೀರವಾಗಿ ಕ್ರಾಪ್ ಬಿಡಿಸುತ್ತಿದ್ದ ಕ್ಷೌರಿಕನಿಗೆ, ಸುಮ್ಮನೇ ಕ್ಯಾಸೆಟ್ ಹಾಡು ಕೇಳುತ್ತಿದ್ದ ರಿಕ್ಷಾವಾಲನಿಗೆ, ಪಕ್ಕದ ಹೊಳೆಯಲ್ಲಿ ಗಾಳ ಇಳಿಸಿ ಧ್ಯಾನ ಮಗ್ನರಾಗಿ ಕುಂತವರಿಗೆಲ್ಲಾ ಇಂದು ಮಳೆ ಬರೋದಂತೂ ಗ್ಯಾರಂಟಿ ಅನ್ನಿಸಿತು.
ಇನ್ನೇನು ಶಾಲೆ ಬಿಡೋದಕ್ಕೂ ಆಯ್ತು. ಶಾಲೆ ಗಂಟೆ ಬಾರಿಸುವುದಕ್ಕೂ ಪಶ್ಚಿಮದಲ್ಲೆಲ್ಲೋ ತಿರುಗುತ್ತಿದ್ದ ಮೋಡಗಳೆಲ್ಲ ಥೇಟ್ ಯುದ್ಧವಿಮಾನಗಳ ರೀತಿ ಪೇಟೆಯತ್ತಲೇ ಧಾವಿಸಿಬಂದವು. ಶಾಲೆ ಅಂಗಳದಲ್ಲಿ ಚಿಣ್ಣರು ಓಡುತ್ತಿರುವಂತೆಯೇ ಸಣ್ಣಗೆ ಸುರಿಯತೊಡಗಿತು ಮಳೆ. ಮಳೆಗಾಗಿ ಅದೆಷ್ಟು ದಿನಗಳ ಕಾಯುವಿಕೆ ಇಂದು ಸಾರ್ಥಕ.
ಅಲ್ಲಿವರೆಗೆ ಮುಗಿಲಪ್ಯಾಟೆಯ ಇಡೀ ಧರೆ ಶುಷ್ಕವಾಗಿತ್ತು. ಗದ್ದೆಗಳೆಲ್ಲ ಒಡೆದಿದ್ದವು. ಇಡೀ ಹಳ್ಳಿಗೆ ಅದೇನೋ ದುಗುಡ ಆವರಿಸಿತ್ತು. ರೈತರು ತಲೆಗೆ ಕೈಹೊತ್ತು ಕುಳಿತಿದ್ದರು. ಮೋಡ ಬಂದರೂ ಮಳೆಯಾಗುತ್ತಿರಲಿಲ್ಲ. ತುರ್ತು ಕೆಲಸಕ್ಕೆಂಬಂತೆ ಮುಗಿಲ ಪ್ಯಾಟೆಯ ಸೂರಿನ ಮೇಲಿಂದಲೇ ಹಾದು ಹೋಗುತ್ತಿತ್ತು.
ಈಗ ಮಳೆ ಬಂದಿದೆ...ಮಳೆ ಬಂದೇ ಬಿಟ್ಟಿದೆ
ಖುಷಿಯಲ್ಲಿ ಚಿಣ್ಣರು ಮಳೆಯಲ್ಲಿಯೇ ಕುಣಿಯುತ್ತಾ ಓಡತೊಡಗಿದರು. ಶಾಲೆಯ ಗೋಡೆಗಂಟಿ ನಿಂತಿದ್ದ ಪುಟ್ಟಿಯೊಬ್ಬಳನ್ನು ಪೋರನೊಬ್ಬ ಮಳೆಗೆ ಎಳೆದ ಕಿಲ ಕಿಲ ನಕ್ಕ, ನೋಡಿದ ಮಕ್ಕಳೆಲ್ಲ ನಗತೊಡಗಿದರು...
ಅದನ್ನು ನೋಡಿದ ಮೇಷ್ಟರೂ ನಕ್ಕರು...ಬಜ್ಜಿ ಹಿಟ್ಟು ಕಲಸಿದವನು, ಗಾಳ ಹಾಕುತ್ತಿದ್ದಾತ, ಮೀನು ಮಾರುವವರು, ರೈತ, ಆಟೋವಾಲ ಎಲ್ಲರ ಬಾಯಿಗೂ ಈಗ ನಗು ಅಂಟಿಕೊಂಡಿತು...ಎಲ್ಲರೂ ನಗತೊಡಗಿದರು...ಬಹಳ ದಿನಗಳ ಬಳಿಕ...
ಮುಗಿಲಪ್ಯಾಟೆಯಲ್ಲಿ ಈಗ ಇಡೀ ಮಳೆಗೇ ಹೆದರಿಕೆ ಹುಟ್ಟುವಂತೆ ನಗುವಿನ ಮಳೆ!