7.9.08

ಫೂಂಕ್‌ನಲ್ಲೇನಿದೆ?

ರಾಮ್ ಗೋಪಾಲ್ ವರ್ಮಾ ನನಗಿಷ್ಟವಾಗುವುದು ಆತನ ಪ್ರಯೋಗಶೀಲತೆ, ಅಧ್ಯಯನಕ್ಕೆ.
ನನಗೆ ರೆಸ್ಟ್ ಎನ್ನುವುದೇ ಇಲ್ಲ, ಪತ್ನಿಯೂ ಇಲ್ಲ, ಮಕ್ಕಳಿಲ್ಲ. ಬೆಳಗ್ಗೆ ಎದ್ದು ಮಾಡುವ ಕೆಲಸ ಎಂದರೆ ಸಿನಿಮಾ ನೊಡೋದು ಎಂದು ಇತ್ತೀಚೆಗೆ ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಏಕತಾನತೆಗೆ ಕಟ್ಟುಬಿದ್ದಿದ್ದ ಬಾಲಿವುಡ್ಡಿಗೆ ಪ್ರಯೋಗಶೀಲತೆ ತಂದುಕೊಟ್ಟವರು ವರ್ಮಾ. ನಿರಂತರ ಪ್ರಯೋಗಶೀಲತೆಯ ಧಾರೆಯಲ್ಲಿ ಅವರು ಆಗೀಗ ವಿರ್ಮಕರಿಂದ ಭೇಷ್ ವರ್ಮಾ ಅನ್ನಿಸಿಕೊಂಡದ್ದಿದೆ, ಹೀನಾಮಾನಾ ಟೀಕಿಸಲ್ಪಟ್ಟದ್ದೂ ಇದೆ. ಆದರೆ ವಿಮರ್ಶಕರು ಏನೇ ಬರೆಯಲಿ, ತನ್ನ ಪ್ರಯೋಗಶೀಲತೆಯನ್ನು ವರ್ಮಾ ಉಳಿಸಿಕೊಂಡಿದ್ದಾರೆ ಎಂದೇ ಹೇಳಬಹುದು.



ಮೊನ್ನೆ ವರ್ಮಾನ ಇತ್ತೀಚೆಗಿನ ಚಿತ್ರ ‘ಫೂಂಕ್’ ನೋಡಿದೆ. ಅನೇಕ ಹಾರರ್‍ ಸಿನಿಮಾಗಳು ಬಂದಿವೆ ನಿಜ, ಆದರೆ ಹೆಚ್ಚಿನವೂ ಭೂತ, ಪ್ರೇತಗಳ ಬಗ್ಗೆಯೇ ತಯಾರಾದವು. ಬ್ಲಾಕ್ ಮ್ಯಾಜಿಕ್ ಅಥವಾ ವಾಮಾಚಾರ, ಮಾಟಮಂತ್ರಗಳ ಬಗ್ಗೆ ಸಿನಿಮಾ ಸಾಕಷ್ಟು ಬಂದಿಲ್ಲ, ವಾಮಾಚಾರವನ್ನೂ ಭಯಾನಕವಾಗಿ ತೋರಿಸುತ್ತದೆ ಫೂಂಕ್.

ತಮ್ಮ ಚಿತ್ರಗಳಿಗೆ ಹೊಸಮುಖಗಳನ್ನ ಅರಸುತ್ತಿರುವ ವರ್ಮಾಗೆ ಈ ಸಲ ನಮ್ಮ ಕಿಚ್ಚ ಸುದೀಪ್ ಸಿಕ್ಕಿದ್ದಾರೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ ಸುದೀಪ್. ಅವರ ಮುಖಭಾವ ಇಂತಹ ಹಾರರ್‍ನ ಗಂಭೀರತೆಗೆ ಸರಿಯಾಗಿ ಒಪ್ಪುತ್ತದೆ. ದೇವರನ್ನು, ದೈವವನ್ನು ನಂಬದೆ ಶುದ್ಧ ನಾಸ್ತಿಕ ಸಿವಿಲ್ ಇಂಜಿನಿಯರ್‍ ರಾಜೀವ್ (ಸುದೀಪ್). ಕಟ್ಟಡ ನಿರ್ಮಾಣಕ್ಕೆ ನೆಲ ಅಗೆಯುವಾಗ ಗಣಪತಿ ಆಕಾರದ ಬಂಡೆ ಸಿಗುತ್ತದೆ, ಅಲ್ಲಿ ಒಂದು ಚಿಕ್ಕ ಗಣಪತಿ ಗುಡಿ ನಿರ್ಮಿಸಲು ಕೆಲಸದವರು ಮನವಿ ಮಾಡಿದರೂ ಕೇಳುವುದಿಲ್ಲ. ಇಂತಿಪ್ಪ ರಾಜೀವ್‌ಗೆ ಆಸ್ತಿಕ ಪತ್ನಿ, ಧಾರ್ಮಿಕ ಶ್ರದ್ಧೆಯ ತಾಯಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇವರಲ್ಲದೆ ಮನೆಯಲ್ಲಿ ಅಡುಗೆಯವಳು ಹಾಗೂ ಕಾರಿನ ಚಾಲಕ ವಾಸಿಸುತ್ತಾರೆ.

ತನ್ನ ಹೊಸ ಕಾಂಟ್ರಾಕ್ಟ್‌ವೊಂದರಲ್ಲಿ ತನ್ನೊಂದಿಗಿರುವ ಮಧು ಮತ್ತು ಅನ್ಶುಮನ್ ಮೋಸ ಮಾಡಿದ್ದು ತಿಳಿದು ಅವರನ್ನು ಕೆಲಸದಿಂದ ಕಿತ್ತು ಹಾಕುವ ರಾಜೀವ್‌ ಮನೆ ಮೇಲೆ ಮಾಟದ ಛಾಯೆ ಕಾಡುತ್ತದೆ. ಮುದ್ದಿನ ಮಗಳನ್ನು ಆಗಿಂದಾಗ್ಗೆ ಕಾಡುವ ಕಾಣದ ಶಕ್ತಿಗಳು ಆಸ್ತಿಕನ ನಂಬಿಕೆಯನ್ನು ಕ್ಷೀಣಿಸುವಂತೆ ಮಾಡುತ್ತವೆ ಎನ್ನುವುದೇ ಕಥೆಯ ಹಂದರ. ಅಂತಿಮವಾಗಿ ಸಿನಿಮಾ ಏನನ್ನೂ ಹೇಳುವುದಿಲ್ಲ. ಮಗು ಹುಷಾರಾಗುತ್ತದೆ. ಅದು ವಾಮಾಚಾರಕ್ಕೆ ಪ್ರತಿಯಾದ ಮಂತ್ರದಿಂದಲೋ, ಅಥವಾ ಮನೋವೈದ್ಯೆಯ ಚಿಕಿತ್ಸೆಯಿಂದಲೋ ಎಂಬುದನ್ನು ವೀಕ್ಷಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ ವರ್ಮಾ.

ಸಮಾಜದ ವಿವಿಧ ಮಜಲುಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಚಿತ್ರ ಸಿದ್ಧ ಪಡಿಸುವುದೇ ವರ್ಮಾ ಮರ್ಮ. ಯಂಡಮೂರಿ ವೀರೇಂದ್ರನಾಥ್ ವಾಮಾಚಾರದ ಕುರಿತು ಬರೆದ ‘ತುಳಸಿ’ ಮತ್ತು ‘ತುಳಸೀದಳ’ ಕಾದಂಬರಿಗಳನ್ನು ನೀವು ಓದಿರಬಹುದು, ಅದರಂದಲೇ ವರ್ಮಾ ಕೂಡ ಪ್ರಭಾವಿತರಾಗಿ ಈ ಚಿತ್ರ ಸಿದ್ಧಪಡಿಸಿದ್ದಾರೆ.
ಇದೊಂದು ಅತ್ಯುತ್ತಮ ಚಿತ್ರ ಎನ್ನಲಾಗದು. ಆದರೆ ಅವರ ಪ್ರಯತ್ನಕ್ಕೆ ಶಾಭಾಷ್ ಎನ್ನದಿರಲೂ ಆಗದು.

ಹಿಂದೆ ‘ಕೌನ್’, ‘ಡರ್ನಾ ಮನಾ ಹೈ’ ಮುಂತಾದ ಒಳ್ಳೆಯ ಹಾರರ್‍ ಚಿತ್ರ ಕೊಟ್ಟವರು ಆರ್‍ಜೀವಿ. ಅದೇ ರೀತಿ ಭೂತ್, ಡರ್ನಾ ಜರೂರಿ ಹೈ ಮುಂತಾದ ಡಬ್ಬಾ ಚಿತ್ರಗಳನ್ನೂ ಕೊಟ್ಟವರೇ.

ಮನೆಯ ಚಿಕ್ಕ ಪುಟ್ಟ ವಸ್ತುಗಳನ್ನೇ ಎದ್ದು ಕಾಣುವಂತೆ ಫೋಕಸ್ ಆಗುತ್ತಾ, ಅನೂಹ್ಯ ಕೋನಗಳಿಂದ ಸೆರೆ ಹಿಡಿಯುವ ಕ್ಯಾಮೆರಾ ವರ್ಕ್ ಸೂಪರ್‍. ಮರದ ಮೇಲೆ ಕೂತಿರುವ ಕಾಗೆ, ಚರಂಡಿಯೊಳಗೆ ಅವಿತ ಕಪ್ಪು ಬೆಕ್ಕು ಕೂಡಾ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡಿಲ್ಲ! ಆದರೆ ಕೆಲವೆಡೆ ಅನಗತ್ಯ ಎನ್ನುವಷ್ಟು ಕರ್ಕಶ ಹಿನ್ನೆಲೆ ಸಂಗೀತ.

ಸುದೀಪ್ ಬಿಟ್ಟರೆ ನಟನೆಯಲ್ಲಿ ಮಿಂಚಿದ್ದು ಬಾಲಕಿ ರಕ್ಷಾ (ಅಹಸಾಸ್ ಚನ್ನಾ) ವಾಮಾಚಾರದ ಪ್ರಭಾವಕ್ಕೊಳಗಾಗುವ ಆಕೆಯ ನೋಟವೇ ಕಣ್ಣಿನಲ್ಲಿ ಉಳಿದುಬಿಡುತ್ತದೆ. ಉಳಿದಂತೆ ಮಾಂತ್ರಿಕ ಝಾಕಿರ್‍ ಹುಸೈನ್ ಎಂದಿನಂತೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ಮೊದಲಾರ್ಧದಲ್ಲಿ ನಿಮ್ಮನ್ನು ಅಷ್ಟೇನು ಭಯಭೀತಗೊಳಿಸದಿದ್ದರೂ ಉತ್ತರಾರ್ಧದಲ್ಲಿ ಪೂರ್ತಿಯಾಗಿ ವಾಮಾಚಾರದ ಲೋಕ ಆವರಿಸಿಬಿಡುತ್ತದೆ. ಆದರೆ ವರ್ಮಾ ಹೇಳುವಷ್ಟೇನೂ ಹಾರರ್‍ ಅಂಶಗಳು ಇಲ್ಲಿಲ್ಲ.
ಕೊನೆ ಮಾತು: ನಿರೀಕ್ಷೆ ಇಟ್ಟು ಕೊಂಡು ವರ್ಮಾ ಸಿನಿಮಾ ನೋಡಬೇಡಿ. ಹಾಗೇ ಸುಮ್ಮನೆ ಡಿಫರೆಂಟ್ ಅನುಭವಕ್ಕಾಗಿ ನೋಡಿ!
(ಫೂಂಕ್ ಹಿಂದಿ ಪದದ ಅರ್ಥ ಬಾಯಿಯಿಂದ ಗಾಳಿ ಊದುವುದು)

31.8.08

ಸಿಯಾಚಿನ್ ಡೈರಿ

ಶೀತ ಗಟ್ಟಿಯಾಗಿ ಹಿಮಾಲಯದ ನದಿ ಧಾರೆಗಳೆಲ್ಲ ಕೆಳಗೆ ಹರಿಯುವುದೋ ಬೇಡವೋ ಎಂಬಂತೆ ನಿಧಾನವಾಗಿ ಸಾಗುತ್ತಿದ್ದರೆ ಹಿಮಾಚ್ಛಾದಿತ ಗಿರಿಶಿಖರಗಳೂ ಇನ್ನೂ ಚಂದ್ರನ ನೆನಪಿಂದ ಹೊರಗೆ ಬಂದಿಲ್ಲ...
ಶಿಖರಗಳ ತುದಿಯಿಂದ ಸ್ವಲ್ಪ ಕೆಳಗೆ ಕೆಳಗೆ ವಿಶಾಲ ಭರತಖಂಡದವರು ಯಾವಾಗಲಾದೊಮ್ಮೆ ಮಾತ್ರ ನೆನಪಿಸಿಕೊಳ್ಳುವ ಕೆಲ ನತದೃಷ್ಟರ ಬಂಕರ್‍ ಇದೆ.

ಅದು ಸಿಯಾಚಿನ್. ವಿಶ್ವದ ಅತೀ ಎತ್ತರದ ಯುದ್ಧಭೂಮಿ...

ಎಂಟು ಮಂದಿ ಇರಬಹುದಾದ ಬಂಕರಿನಲ್ಲಿ ಸರಿರಾತ್ರಿ ವರೆಗೂ ದೂರದಲ್ಲಿ ಸುರಿಯುವ ಮಂಜಿನ ತೆರೆಯಲ್ಲೇಲ್ಲೋ ಇದೆ ಎಂಬಂತೆ ಭಾಸವಾಗುವ ಕಾಲ್ಪನಿಕ ಗಡಿಯೊಂದರ ಮೇಲೆ ಕಣ್ಣಿಟ್ಟು ಸುಸ್ತಾದ ಮಂದಿ ಪಾಳಿ ಮುಗಿಸಿ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿಕೊಂಡಿದ್ದಾರೆ. ಜಮ್ಮುಕಾಶ್ಮೀರ ರಾಷ್ಟ್ರೀಯ ರೈಫಲ್ಸ್‌ನ ಲೆಫ್ಟಿನೆಂಟ್ ಶರ್ಮಾ ನಾಯಕತ್ವದ ಸೆಕ್ಷನ್ ಅದು. ಇಬ್ಬರು ಸೈನಿಕರು ಅದಾಗಲೇ ಮಷಿನ್ ಗನ್‌ಗಳ ಹಿಂದೆ ವಿಗ್ರಹಗಳಂತೆ ಕೂತಿದ್ದಾರೆ. ಬಂಕರಿನ ಗೋಡೆಯಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಗುತ್ತಿದ್ದಾಳೆ.

ವಾರದ ಹಿಂದೆಯಷ್ಟೇ ಹೊಸದಾಗಿ ಸಿಯಾಚಿನ್ನಿಗೆ ಕಾಲಿರಿಸಿದ ಸೈನಿಕರಿವರು. ಇನ್ನು ೯೦ ದಿನಗಳ ಕಾಲ ಇಲ್ಲಿಬೇಕಿದೆ. ಅದರೊಳಗೆ ಸಿಯಾಚಿನ್ನಿನ ವಿಚಿತ್ರ, ಕಠಿಣ ಪರಿಸ್ಥಿತಿಗಳಿಗೆ ಎಷ್ಟು ಮಂದಿ ಮರಗಟ್ಟಿ ಹೋಗುತ್ತಾರೋ, ಗಡಿಯಾಚೆಯಿಂದ ಮಂಜಿನೆಡೆ ಹಾರಿ ಬರುವ ಮೋರ್ಟಾರ್‍, ರೈಫಲ್ ಗುಂಡುಗಳಿಗೆ ಬಲಿಯಾಗುತ್ತಾರೋ ತಿಳಿಯದು. ಸೈನಿಕ ತೇಜ್ ಬಹಾದ್ದೂರನ ಕೈಯಲ್ಲಿ ರೈಫಲ್ ಹಿಡಿದರೂ ಮನಸ್ಸು ತನ್ನೂರು ಶ್ರೀನಗರಕ್ಕೆ ಹಾರುತ್ತದೆ.

ಇನ್ನೋರ್ವ ಸೈನಿಕ ಆಸೀಫನಿಗೆ ಎರಡು ದಿನಗಳಿಂದ ಕಾಲು ಜೋಮು ಬಂದಿದೆ. ಸರಿಯಾಗಿ ನಡೆಯದಂತಹ ಪರಿಸ್ಥಿತಿ..

ಸು.....ಶ್‌ಶ್‌ ಎಂದು ಒಂದೆ ಸವನೆ ಬೀಸುತ್ತಲೇ ಇರುವ ಮಂಜುಗಾಳಿ...ಉಸಿರಾಡಲು ಆಮ್ಲಜನಕದ ಕೊರತೆ..ಸದಾ ಶೂನ್ಯಕ್ಕಿಂತಲೂ ಕೆಳಗೆ ಇರುವ ಉಷ್ಣತೆ...ಆಗಾಗ ಹಿಮಪಾತ..ಇವೆಲ್ಲದರ ನಡುವೆ ಇತರ ಸಹೋದ್ಯೋಗಿಗಳಿದ್ದರೂ ಕಾಡುವ ಒಂಟಿತನಕ್ಕೆ ಆಸೀಫ ಬಲಿಯಾದಂತಿದೆ. ಆದರೂ ಅದು ಕರ್ತವ್ಯಕ್ಕೆ ಅಡ್ಡಿಯಾಗಿಲ್ಲ. ಆದರೆ ಕುಸಿಯುತ್ತಲೇ ಇರುವ ಆತನ ಬಗ್ಗೆ ಬೇಸ್ ಕ್ಯಾಂಪ್‌ಗೆ ಸ್ಯಾಟಲೈಟ್ ಫೋನ್‌ನಲ್ಲಿ ಸುದ್ದಿ ಮುಟ್ಟಿಸಿದ್ದಾನೆ ಲೆಫ್ಟಿನೆಂಟ್ ಶರ್ಮಾ.

ಕಾರಕೋರಂ ರೇಂಜಲ್ಲಿ ಭಾರೀ ಹಿಮಪಾತವಾಗುತ್ತಿದೆ, ಈಗಲೇ ಹೆಲಿಕಾಪ್ಟರ್‍ ಕಳಿಸಲಾಗದು, ಮುಂದಿನವಾರ ಸೈನಿಕರ ಮತ್ತು ಮಷಿನ್‌ಗನ್‌ಗಳ ಆಹಾರ, ಬಟ್ಟೆಬರೆ ಮತ್ತು ಕೆರೋಸಿನ್ ಹೊತ್ತು ಬರುವ ಆರ್ಮಿ ಹೆಲಿಕಾಪ್ಟರ್‍ನಲ್ಲಿ ಆತನನ್ನು ಕಳುಹಿಸಿ ಎಂಬ ಉತ್ತರ ಬೇಸ್ ಕ್ಯಾಂಪ್‌ನಿಂದ.

ಯಾವುದೋ ಹಳೆ ಹಾಡು ಗುನುಗುತ್ತಲೇ ಹಿಮ ಕರಗಿಸಿ ಆಗತಾನೇ ಮಾಡಿದ ಮಸಾಲಾ ಚಾ ಕಪ್ಪಿನೊಂದಿಗೆ ಬಂದ ಸಂಜಯ ಸಿಂಗ್ ‘ಸಾಬ್ ಮುಂದೆ ಇರುವ ಪಾಕಿಗಳು ಟೀ ಕುಡಿದಿರಬಹುದೇ’ ಕುಚೋದ್ಯ ಮಾಡಿದ. ‘ಹೋಗಿ ನೋಡು, ಎದ್ದಿಲ್ಲವಾದರೆ ಎಬ್ಬಿಸಿ ಹಾಗೇ ಟೀ ಕೊಟ್ಟು ಬಾ’ ಅಷ್ಟೇ ಕುಚೋದ್ಯದ ದನಿಯಲ್ಲಿ ಮೆಲುವಾಗಿ ಹೇಳಿದ.

‘ಸೂರ್ಯ ಕಿರಣಗಳು ಮೂಡತೊಡಗಿವೆ. ಇಂದು ಆಕಾಶ ಶುಭ್ರ ಇದೆ’ ರಾಮ್‌ ಸಿಂಗ್ ಉತ್ಸಾಹದಲ್ಲಿ ಹೇಳಿದ.

ಅಲ್ಲಿ ಯಾರೂ ತಮ್ಮ ಊರಿನ ಬಗ್ಗೆ ಮಾತಾಡುವುದೇ ಇಲ್ಲ. ಹಾಗಾಗಿ ಬೇರೇನೂ ಮಾತನಾಡಲು ಉಳಿದಿಲ್ಲ. ಹೀಗೇ ಒಮ್ಮೊಮ್ಮೆ ಕುಚೋದ್ಯದ ಮೂಲಕ ಜೀವನೋತ್ಸಾಹ ಇನ್ನೂ ಇದೆಯೇ ಎಂದು ತಮ್ಮನ್ನೇ ಪರೀಕ್ಷಿಸಿಕೊಳ್ಳುತ್ತಾರೆ!


ವಾರ ಕಳೆದಿದೆ, ಆಸೀಫನ ಸ್ಥಿತಿ ಬಿಗಡಾಯಿಸಿದೆ...ಪಾಕಿಸ್ಥಾನೀಯರಿಂದ ಸರಿಯಾಗಿ ಎಂಟು ಬಾರಿ ಗುಂಡು ಹಾರಿದೆ. ಗುರಿ ಎಲ್ಲಿಗೆ ಎಂದು ಬಹುಷಃ ಅವರಿಗೂ ಗೊತ್ತಿಲ್ಲ..ಅಷ್ಟರ ಮಟ್ಟಿಗೆ ಹಿಮಪಾತವಾಗುತ್ತಿದೆ. ಅದೋ ಮೆಲ್ಲಗೆ ಶಿಖರಗಳ ಮರೆಯಿಂದ ಹಾರಿ ಬಂತು ಹೆಲಿಕಾಪ್ಟರ್‍.

ಆಸೀಫ ಸ್ಟ್ರೆಚರ್‌ನಲ್ಲಿ ಹೆಲಿಕಾಪ್ಟರ್‍ ಒಳಗೆ ಹೋಗುತ್ತಾನೆ. ಆಹಾರದ ರಾಶಿ, ಮದ್ದುಗುಂಡಿನ ಬಾಕ್ಸ್ ಮುಂದಿನ ತಿಂಗಳಿಗಾಗುವಷ್ಟು ಬಂದಿದೆ. ಎರಡು ಕಿಮೀ ಮುಂದೆ ಇರುವ ಇನ್ನೊಂದು ಬಂಕರಿಗೂ ಹೋಗಬೇಕಿದೆ.

ಹೇಗಿದೆ ಕಾಶ್ಮೀರ? ಹೆಲಿಕಾಪ್ಟರ್‍ ಪೈಲಟ್‌ಗೆ ಕೇಳಿದ ಲೆಫ್ಟಿನೆಂಟ್ ಶರ್ಮಾ.

ಏನು ಹೇಳೋದು ಸಾಬ್..ಒಂದು ವಾರದಿಂದ ಕಾಶ್ಮೀರ ಪ್ರತ್ಯೇಕತೆ ಕೂಗು. ಚಾನೆಲ್ಲೊಂದರಲ್ಲಿ ಅನೇಕರು ಹೇಳುತ್ತಿದ್ದರು ಕಾಶ್ಮೀರವನ್ನ ಪಾಕಿಗಳಿಗೆ ಕೊಡೋದೇ ಒಳ್ಳೇದಂತೆ. ಒಂದು ವೇಳೆ ಅವರಿಗೆ ಕೊಡೋದಾದ್ರೆ ನೀವಿಲ್ಲಿರೋದ್ಯಾಕೆ ಸಾಬ್ ಪ್ರಶ್ನಿಸಿದ ಪೈಲಟ್.

‘ಹಹ್ಹಹ್ಹ...ನಾವೆಲ್ಲಾ ಹಾಗಾದರೆ ನಿರುದ್ಯೋಗಿಗಳಾಗುತ್ತೇವೆ’ ತಾತ್ಸಾರ ಬೆರೆತ ನಗೆಯೊಂದಿಗೆ ಹೇಳಿ ಬಂಕರ್‍ಗೆ ಮರಳಿದ ಶರ್ಮಾ.

ದೂರದಲ್ಲಿ ನಾಲ್ಕು ಚುಕ್ಕಿಗಳು ಹರಿದಾಡಿದಂತೆ ಅನಿಸಿತು. ಹೈಪವರ್‍ ಬೈನಾಕ್ಯುಲರ್‍ನಲ್ಲಿ ವೀಕ್ಷಿಸಿದರೆ ಧರ್ಮಯುದ್ಧಕ್ಕೆ ಹೊರಟ ನಾಲ್ಕು ಮಂದಿ. ಬೆನ್ನಲ್ಲಿ ಎಕೆ ರೈಫಲ್, ರಾಕೆಟ್ ಲಾಂಚರ್‍. ಕಣಿವೆಯೊಳಗೆ ಇಳಿಯಲು ಹೊರಟಂತಿದೆ.

ರಾಮ್ ಸಿಂಗ್ ಎಲ್ಲಿ ರೈಫಲ್, ಇಲ್ಲಿ ಕೊಡು ಕಾಶ್ಮೀರ ಕೇಳೋರು ಬಂದಿದ್ದಾರೆ, ಅವರಿಗೆ ವೆಲ್ ಕಂ ಹೇಳಬೇಕಲ್ವೇ ಅದೇ ನಗೆಯೊಂದಿಗೆ ರೈಫಲ್ ಎತ್ತಿಕೊಂಡ ಶರ್ಮಾ.....

ಶಿಖರಗಳಲ್ಲಿ ಮತ್ತೆ ಗುಂಡುಗಳ ಮೊರೆತ......


(ಭಾರತದ ಮುಕುಟ ಕಾಶ್ಮೀರ ಈಗ ಪ್ರತ್ಯೇಕತಾವಾದದ ಕೆಂಡದಲ್ಲಿದೆ, ಇತ್ತೀಚೆಗಿನ ಬೆಳವಣಿಗೆ ಗಮನಿಸುತ್ತಿದ್ದಾಗ ಮನದಲ್ಲಿ ಹುಟ್ಟಿದ ಕೆಲ ಪ್ರಶ್ನೆ, ಭಾವನೆ ಈ ಕಥೆಗೆ ಪ್ರೇರಣೆ)
Related Posts Plugin for WordPress, Blogger...