ರಾಮ್ ಗೋಪಾಲ್ ವರ್ಮಾ ನನಗಿಷ್ಟವಾಗುವುದು ಆತನ ಪ್ರಯೋಗಶೀಲತೆ, ಅಧ್ಯಯನಕ್ಕೆ.
ನನಗೆ ರೆಸ್ಟ್ ಎನ್ನುವುದೇ ಇಲ್ಲ, ಪತ್ನಿಯೂ ಇಲ್ಲ, ಮಕ್ಕಳಿಲ್ಲ. ಬೆಳಗ್ಗೆ ಎದ್ದು ಮಾಡುವ ಕೆಲಸ ಎಂದರೆ ಸಿನಿಮಾ ನೊಡೋದು ಎಂದು ಇತ್ತೀಚೆಗೆ ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಏಕತಾನತೆಗೆ ಕಟ್ಟುಬಿದ್ದಿದ್ದ ಬಾಲಿವುಡ್ಡಿಗೆ ಪ್ರಯೋಗಶೀಲತೆ ತಂದುಕೊಟ್ಟವರು ವರ್ಮಾ. ನಿರಂತರ ಪ್ರಯೋಗಶೀಲತೆಯ ಧಾರೆಯಲ್ಲಿ ಅವರು ಆಗೀಗ ವಿರ್ಮಕರಿಂದ ಭೇಷ್ ವರ್ಮಾ ಅನ್ನಿಸಿಕೊಂಡದ್ದಿದೆ, ಹೀನಾಮಾನಾ ಟೀಕಿಸಲ್ಪಟ್ಟದ್ದೂ ಇದೆ. ಆದರೆ ವಿಮರ್ಶಕರು ಏನೇ ಬರೆಯಲಿ, ತನ್ನ ಪ್ರಯೋಗಶೀಲತೆಯನ್ನು ವರ್ಮಾ ಉಳಿಸಿಕೊಂಡಿದ್ದಾರೆ ಎಂದೇ ಹೇಳಬಹುದು.
ಮೊನ್ನೆ ವರ್ಮಾನ ಇತ್ತೀಚೆಗಿನ ಚಿತ್ರ ‘ಫೂಂಕ್’ ನೋಡಿದೆ. ಅನೇಕ ಹಾರರ್ ಸಿನಿಮಾಗಳು ಬಂದಿವೆ ನಿಜ, ಆದರೆ ಹೆಚ್ಚಿನವೂ ಭೂತ, ಪ್ರೇತಗಳ ಬಗ್ಗೆಯೇ ತಯಾರಾದವು. ಬ್ಲಾಕ್ ಮ್ಯಾಜಿಕ್ ಅಥವಾ ವಾಮಾಚಾರ, ಮಾಟಮಂತ್ರಗಳ ಬಗ್ಗೆ ಸಿನಿಮಾ ಸಾಕಷ್ಟು ಬಂದಿಲ್ಲ, ವಾಮಾಚಾರವನ್ನೂ ಭಯಾನಕವಾಗಿ ತೋರಿಸುತ್ತದೆ ಫೂಂಕ್.
ತಮ್ಮ ಚಿತ್ರಗಳಿಗೆ ಹೊಸಮುಖಗಳನ್ನ ಅರಸುತ್ತಿರುವ ವರ್ಮಾಗೆ ಈ ಸಲ ನಮ್ಮ ಕಿಚ್ಚ ಸುದೀಪ್ ಸಿಕ್ಕಿದ್ದಾರೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ ಸುದೀಪ್. ಅವರ ಮುಖಭಾವ ಇಂತಹ ಹಾರರ್ನ ಗಂಭೀರತೆಗೆ ಸರಿಯಾಗಿ ಒಪ್ಪುತ್ತದೆ. ದೇವರನ್ನು, ದೈವವನ್ನು ನಂಬದೆ ಶುದ್ಧ ನಾಸ್ತಿಕ ಸಿವಿಲ್ ಇಂಜಿನಿಯರ್ ರಾಜೀವ್ (ಸುದೀಪ್). ಕಟ್ಟಡ ನಿರ್ಮಾಣಕ್ಕೆ ನೆಲ ಅಗೆಯುವಾಗ ಗಣಪತಿ ಆಕಾರದ ಬಂಡೆ ಸಿಗುತ್ತದೆ, ಅಲ್ಲಿ ಒಂದು ಚಿಕ್ಕ ಗಣಪತಿ ಗುಡಿ ನಿರ್ಮಿಸಲು ಕೆಲಸದವರು ಮನವಿ ಮಾಡಿದರೂ ಕೇಳುವುದಿಲ್ಲ. ಇಂತಿಪ್ಪ ರಾಜೀವ್ಗೆ ಆಸ್ತಿಕ ಪತ್ನಿ, ಧಾರ್ಮಿಕ ಶ್ರದ್ಧೆಯ ತಾಯಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇವರಲ್ಲದೆ ಮನೆಯಲ್ಲಿ ಅಡುಗೆಯವಳು ಹಾಗೂ ಕಾರಿನ ಚಾಲಕ ವಾಸಿಸುತ್ತಾರೆ.
ತನ್ನ ಹೊಸ ಕಾಂಟ್ರಾಕ್ಟ್ವೊಂದರಲ್ಲಿ ತನ್ನೊಂದಿಗಿರುವ ಮಧು ಮತ್ತು ಅನ್ಶುಮನ್ ಮೋಸ ಮಾಡಿದ್ದು ತಿಳಿದು ಅವರನ್ನು ಕೆಲಸದಿಂದ ಕಿತ್ತು ಹಾಕುವ ರಾಜೀವ್ ಮನೆ ಮೇಲೆ ಮಾಟದ ಛಾಯೆ ಕಾಡುತ್ತದೆ. ಮುದ್ದಿನ ಮಗಳನ್ನು ಆಗಿಂದಾಗ್ಗೆ ಕಾಡುವ ಕಾಣದ ಶಕ್ತಿಗಳು ಆಸ್ತಿಕನ ನಂಬಿಕೆಯನ್ನು ಕ್ಷೀಣಿಸುವಂತೆ ಮಾಡುತ್ತವೆ ಎನ್ನುವುದೇ ಕಥೆಯ ಹಂದರ. ಅಂತಿಮವಾಗಿ ಸಿನಿಮಾ ಏನನ್ನೂ ಹೇಳುವುದಿಲ್ಲ. ಮಗು ಹುಷಾರಾಗುತ್ತದೆ. ಅದು ವಾಮಾಚಾರಕ್ಕೆ ಪ್ರತಿಯಾದ ಮಂತ್ರದಿಂದಲೋ, ಅಥವಾ ಮನೋವೈದ್ಯೆಯ ಚಿಕಿತ್ಸೆಯಿಂದಲೋ ಎಂಬುದನ್ನು ವೀಕ್ಷಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ ವರ್ಮಾ.
ಸಮಾಜದ ವಿವಿಧ ಮಜಲುಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಚಿತ್ರ ಸಿದ್ಧ ಪಡಿಸುವುದೇ ವರ್ಮಾ ಮರ್ಮ. ಯಂಡಮೂರಿ ವೀರೇಂದ್ರನಾಥ್ ವಾಮಾಚಾರದ ಕುರಿತು ಬರೆದ ‘ತುಳಸಿ’ ಮತ್ತು ‘ತುಳಸೀದಳ’ ಕಾದಂಬರಿಗಳನ್ನು ನೀವು ಓದಿರಬಹುದು, ಅದರಂದಲೇ ವರ್ಮಾ ಕೂಡ ಪ್ರಭಾವಿತರಾಗಿ ಈ ಚಿತ್ರ ಸಿದ್ಧಪಡಿಸಿದ್ದಾರೆ.
ಇದೊಂದು ಅತ್ಯುತ್ತಮ ಚಿತ್ರ ಎನ್ನಲಾಗದು. ಆದರೆ ಅವರ ಪ್ರಯತ್ನಕ್ಕೆ ಶಾಭಾಷ್ ಎನ್ನದಿರಲೂ ಆಗದು.
ಹಿಂದೆ ‘ಕೌನ್’, ‘ಡರ್ನಾ ಮನಾ ಹೈ’ ಮುಂತಾದ ಒಳ್ಳೆಯ ಹಾರರ್ ಚಿತ್ರ ಕೊಟ್ಟವರು ಆರ್ಜೀವಿ. ಅದೇ ರೀತಿ ಭೂತ್, ಡರ್ನಾ ಜರೂರಿ ಹೈ ಮುಂತಾದ ಡಬ್ಬಾ ಚಿತ್ರಗಳನ್ನೂ ಕೊಟ್ಟವರೇ.
ಮನೆಯ ಚಿಕ್ಕ ಪುಟ್ಟ ವಸ್ತುಗಳನ್ನೇ ಎದ್ದು ಕಾಣುವಂತೆ ಫೋಕಸ್ ಆಗುತ್ತಾ, ಅನೂಹ್ಯ ಕೋನಗಳಿಂದ ಸೆರೆ ಹಿಡಿಯುವ ಕ್ಯಾಮೆರಾ ವರ್ಕ್ ಸೂಪರ್. ಮರದ ಮೇಲೆ ಕೂತಿರುವ ಕಾಗೆ, ಚರಂಡಿಯೊಳಗೆ ಅವಿತ ಕಪ್ಪು ಬೆಕ್ಕು ಕೂಡಾ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡಿಲ್ಲ! ಆದರೆ ಕೆಲವೆಡೆ ಅನಗತ್ಯ ಎನ್ನುವಷ್ಟು ಕರ್ಕಶ ಹಿನ್ನೆಲೆ ಸಂಗೀತ.
ಸುದೀಪ್ ಬಿಟ್ಟರೆ ನಟನೆಯಲ್ಲಿ ಮಿಂಚಿದ್ದು ಬಾಲಕಿ ರಕ್ಷಾ (ಅಹಸಾಸ್ ಚನ್ನಾ) ವಾಮಾಚಾರದ ಪ್ರಭಾವಕ್ಕೊಳಗಾಗುವ ಆಕೆಯ ನೋಟವೇ ಕಣ್ಣಿನಲ್ಲಿ ಉಳಿದುಬಿಡುತ್ತದೆ. ಉಳಿದಂತೆ ಮಾಂತ್ರಿಕ ಝಾಕಿರ್ ಹುಸೈನ್ ಎಂದಿನಂತೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ಮೊದಲಾರ್ಧದಲ್ಲಿ ನಿಮ್ಮನ್ನು ಅಷ್ಟೇನು ಭಯಭೀತಗೊಳಿಸದಿದ್ದರೂ ಉತ್ತರಾರ್ಧದಲ್ಲಿ ಪೂರ್ತಿಯಾಗಿ ವಾಮಾಚಾರದ ಲೋಕ ಆವರಿಸಿಬಿಡುತ್ತದೆ. ಆದರೆ ವರ್ಮಾ ಹೇಳುವಷ್ಟೇನೂ ಹಾರರ್ ಅಂಶಗಳು ಇಲ್ಲಿಲ್ಲ.
ಕೊನೆ ಮಾತು: ನಿರೀಕ್ಷೆ ಇಟ್ಟು ಕೊಂಡು ವರ್ಮಾ ಸಿನಿಮಾ ನೋಡಬೇಡಿ. ಹಾಗೇ ಸುಮ್ಮನೆ ಡಿಫರೆಂಟ್ ಅನುಭವಕ್ಕಾಗಿ ನೋಡಿ!
(ಫೂಂಕ್ ಹಿಂದಿ ಪದದ ಅರ್ಥ ಬಾಯಿಯಿಂದ ಗಾಳಿ ಊದುವುದು)
2 comments:
ವೇಣು,
ಒಳ್ಳೆಯ ವಿಮರ್ಶೆ ಕೊಟ್ಟದ್ದಕ್ಕೆ ಧನ್ಯವಾದಗಳು.
ತುಳಸಿಯನ್ನು ಯಂಡಮೂರಿ ಚಾಣಾಕ್ಷತನದಿಂದ ಬರೆದಿದ್ದಾರೆ.
ಇನ್ನು, Ingmer Bergman ನಿರ್ದೇಶನದ ಒಂದು ಚಿತ್ರವನ್ನು ಎಷ್ಟೋ ಹಿಂದೆ ನೋಡಿದ್ದೆ. ಚಿಕ್ಕ ಹುಡುಗನ (ಅಥವಾ ಹುಡುಗಿಯ?)horrorಅನ್ನು ಚಿತ್ರಿಸುವ ಫಿಲ್ಮ್ ಅದು. ಆ ಚಿತ್ರದಲ್ಲಿ ಸಾಮಾನ್ಯ ವಸ್ತುಗಳನ್ನೇ ಭಯ ಹುಟ್ಟಿಸುವಂತೆ ಚಿತ್ರಿಸಲಾಗಿತ್ತು.
ಸುನಾಥರೇ,
ಧನ್ಯವಾದ. ಇಂಗರ್ ಬರ್ಗ್ಮನ್ ಚಿತ್ರದ ಹೆಸರು ಹೇಳಿ, ಸಿಕ್ಕರೆ ನೋಡುತ್ತೇನೆ.
Post a Comment