ಅದೆಷ್ಟೋ ಚಿತ್ರಗಳಲ್ಲಿ, ಬಹುತೇಕ ಜಾಹೀರಾತುಗಳಲ್ಲಿ ರಾಜಕಾರಣಿಗಳನ್ನು ಕೀಳಾಗಿ, ವಿಲನ್‌ಗಳಾಗಿ ಚಿತ್ರೀಕರಿಸಿದ್ದಾರೆ. ಆದರೆ ತನ್ನದೇ ಆದ ಒರಿಜಿನಾಲಿಟಿಯ ಜಾಹೀರಾತುಗಳನ್ನು ನೀಡುತ್ತಿರುವ ಏರ‍್ ಟೆಲ್ ಕಂಪನಿ ಮಾತ್ರ ಇಲ್ಲಿ ವಿಭಿನ್ನ ಪ್ರಯತ್ನ ಮಾಡಿದೆ. ಇಕ್ಬಾಲ್, ವೆಲ್ ಕಂ ಟು ಸಜ್ಜನ್‌ಪುರ‍್ ಮುಂತಾದ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ಮೂಲಕ ಆಕರ್ಷಿಸಿದ್ದ ಶ್ರೇಯಸ್ ತಲ್ಪಾಡೆಯನ್ನು ತಮ್ಮ ಜಾಹೀರಾತು ಸರಣಿಗೆ ಆರಿಸಿಕೊಂಡಿದ್ದೇ ಅವರು ತೆಗೆದುಕೊಂಡ ರಿಸ್ಕ್‌ಗೆ ಉದಾಹರಣೆ.
ಏರ‍್ಟೆಲ್‌ನವರೇ ಹೇಳುವ ಪ್ರಕಾರ ಮಾನವನ ನಡುವಣ ದೃಢವಾದ ಸಂಬಂಧ ಮತ್ತು ಸಂಪರ್ಕಗಳಿಗೆ ಅವರು ಮಹತ್ವ ನೀಡುತ್ತಾರೆ, ಆಧುನಿಕ ಸಂವಹನ ತಂತ್ರಜ್ಞಾನ ಹೇಗೆ ಮನಮನಗಳನ್ನು ಬೆಸೆಯುತ್ತದೆ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶ. ಹಾಗಾಗಿ ಅವರು ತಮ್ಮ ಜಾಹೀರಾತುಗಳಲ್ಲಿ ಸ್ಟಾರ್‌ಗಳಿಗೆ ಮಣೆ ಹಾಕಿಲ್ಲ. ಸಾಮಾನ್ಯರನ್ನು, ಪ್ರವರ್ಧಮಾನಕ್ಕೆ ಬರುವ ನಟರನ್ನೇ ಬಳಸಿಕೊಳ್ಳುತ್ತಾರೆ. ಅಭಯ್ ಡಿಯೋಲ್-ರೈಮಾ ಸೇನ್, ಮಾಧವನ್-ವಿದ್ಯಾಬಾಲನ್ ಮುಂತಾದವರನ್ನು ಬಳಸಿಕೊಂಡಿದ್ದು ಇದಕ್ಕೇ.
ಇಬ್ಬರು ಮಕ್ಕಳು ಗಡಿ ದಾಟಿ ಫುಟ್ ಬಾಲ್ ಆಡುವ ಸುಂದರ ಕಲ್ಪನೆ ಏರ್‌ಟೆಲ್‌ನದ್ದು. ಆ ಜಾಹೀರಾತು ಎಂದುಗೂ ಮರೆಯುವಂಥದ್ದಲ್ಲ.
ಇಲ್ಲಿ ನಾನು ಹೇಳುವ ಜಾಹೀರಾತು ಏರ್‌ಟೆಲ್ ಸರಣಿಯಲ್ಲಿ ಹೊಸದು. ಜನರಿಂದ ಆರಿಸಿ ಬಂದು ಸಂಸತ್ತಿಗೆ ತೆರಳುವ ಯುವನಾಯಕ. ಅಲ್ಲಿ ಹೋಗಿದ್ದರೂ ತನ್ನೂರಿನ ಜನರ ಸಂಪರ್ಕ ಬಿಡುವುದಿಲ್ಲ ಎನ್ನುವುದು ಈ ಜಾಹೀರಾತಿನ ತಾತ್ಪರ್ಯ.
ಸಂಸತ್ತಿನ ಬಗ್ಗೆ ಗೌರವ, ರಾಜಕಾರಣಿಗಳ ಬಗ್ಗೆ ಧನಾತ್ಮಕತೆ ತೋರಿಸುವಂತಹ ಜಾಹೀರಾತು ಬಳಸುವ ಮೂಲಕ ಏರ‍್ಟೆಲ್ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲವಾದರೆ ಜನರನ್ನು ಸೆಳೆಯಲು ಎಂತೆಂತಹ ಕೊಳಕು ಜಾಹೀರಾತನ್ನು ಬಳಸಬಹುದಿತ್ತು.
ಕೇವಲ ಭಿನ್ನತೆ ಮಾತ್ರವಲ್ಲದೆ ಸಂದೇಶ ನೀಡುವಂತಹ ಇಂತಹ ಜಾಹೀರಾತು ಹೆಚ್ಚೆಚ್ಚು ಬರಲಿ.
ಆ ಜಾಹೀರಾತು ಇಲ್ಲಿದೆ ನೋಡಿ....
Airtel 'Parliament' from Campaign India on Vimeo.