29.5.07

ಆಸರೆ

ಮುಂಗಾರು ಮಳೆಗೆ
ಗುಡುಗು ಬೊಬ್ಬಿರಿದಾಗ
ಸಿಡಿಲು ಕೋರೈಸಿದಾಗ
ಭೂಗರ್ಭದಲ್ಲೊಂದು
ಸಂಚಲನ...
ಒಣಗಿ ಬಿದ್ದಿದ್ದ
ಬೀಜಕ್ಕೆ ಜೀವಾಂಕುರ...
ಒಡೆದ ಕವಚ, ಮೆಲ್ಲನೆ
ಹೊರಕ್ಕಿಣುಕಿದ
ಪುಟ್ಟ ಎರಡೆಲೆ
ಇಡೀ ಪ್ರಪಂಚದ
ಅಚ್ಚರಿಯಷ್ಟನ್ನೂ
ಕಣ್ಣಲ್ಲಿ ತುಂಬಿಕೊಂಡಂತೆ


ಗಿಡಕ್ಕೆ ಗೊತ್ತಿಲ್ಲ
ತಾನು ಮರದ
ಅಡಿಯಲ್ಲಿರುವೆ ಎಂದು
ಅಲ್ಲಿ ಸಾಕಷ್ಟು ನೆರಳಿದೆ
ಆದರೂ ಗಿಡಕ್ಕೆ
ಉಸಿರುಗಟ್ಟಬಹುದು
ಹಸಿರೆಲೆಗಳ
ರುಚಿನೋಡಬಯಸುವ
ದವಡೆಗಳಿಂದ
ರಕ್ಷಿಸಿಕೊಂಡು ಬೆಳೆಯಬೇಕಿದೆ

ತನಗೆ ಆಸರೆ ನೀಡಿರುವ
ಮರ ಒಣಗಿದಾಗಲೇ
ಗಿಡಕ್ಕೆ ಸರಿಯಾಗಿ
ದೇಶ ನೋಡುವ ಭಾಗ್ಯ!

17.5.07

ಮಂಗಳೂರಿನ ಸೆಖೆ, ಬೆವರು ಮತ್ತು ಮದುವೆ!

ಅಬ್ಬಬ್ಬ ಎಂಥ ಸೆಕೆ....
ಮಂಗಳೂರಿನಲ್ಲಿ ಹಿಂದೆಂದೂ ಇರಲಿಲ್ಲ ಇಷ್ಟು ಬಿಸಿ.... ಮೈ ಎಲ್ಲ ಬೆವರಿ ಒದ್ದೆ.....
ಹೀಗೆ ಈಗ ಥರಾವರಿ ಮಾತುಗಳು ಈಗ ಕುಡ್ಲದೆಲ್ಲೆಡೆ. ಇದು ಮಂಗಳೂರಿಗಷ್ಟೇ ಅಲ್ಲ. ಕೂಲ್ ಸಿಟಿ, ಉದ್ಯಾನನಗರಿ ಎನಿಸಿರುವ ಬೆಂಗಳೂರಿನಲ್ಲಿ ಝಂಡಾ ಹೂಡಿರುವ ಸ್ನೇಹಿತರಿಗೆ ಕೇಳಿದರೆ ಅಲ್ಲೂ ಸೆಖೆಯಂತೆ. ಬಿಡಿ ಬೆಂಗಳೂರೇ ಬಿಸಿಯಾದರೆ ಇನ್ನು ಮಂಗಳೂರು ಬಿಸಿಯಾಗಿದೆ ಎಂದು ಬೊಂಬ್ಡಾ ಹೊಡೆದರೂ ಪ್ರಯೋಜನವಾಗದು. ಎಲ್ಲಾದರೂ ನಗರಗಳಿಗೆ ತಂಪು ಗಾಳಿ ಬೀಸುವ ಯೋಜನೆಯನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದರೆ ಮಂತ್ರಿಗಳು ಅದನ್ನು ಬೆಂಗಳೂರಿನಲ್ಲೇ ಮೊದಲು ಅನುಷ್ಠಾನ ಮಾಡುತ್ತಾರೆ!
ಇದೆಲ್ಲಾ ತಲೆಹರಟೆಗಳೇನೇ ಇರಲಿ, ಮಂಗಳೂರಿನ ಬಿಸಿಲು ಇಲ್ಲಿನ ಜನರಿಗೆ ಒಂಥರಾ ಆಪ್ಯಾಯಮಾನ. ಇಲ್ಲಿ ಬೆಂಗಳೂರಿನಂತಲ್ಲ. ಹತ್ತು ಹೆಜ್ಜೆ ನಡೆದರೆ ಮೈತುಂಬಾ ಬೆವರಿನೊರತೆ ಧಾರಾಕಾರ(ಆದ್ರೆ ಬೆಂಗಳೂರಲ್ಲಿ ಬೆವರೋದೇ ಇಲ್ಲ, ಯಾಕೆ ಎನ್ನುವುದನ್ನು ಅಲ್ಲಿರುವ ಸಹೃದಯರು ವಿವರಿಸಿದರೆ ಒಳಿತು). ಮರಗಳೇ ಇಲ್ಲದ ಸುಡು ರಸ್ತೆಗಳಲ್ಲಿ ನಡೆಯುತ್ತಾ, ಪಕ್ಕದ ಪೆಟ್ಟಿ ಅಂಗಡಿಯಲ್ಲಿ ಸಿಗುವ ಕೆಂಬಣ್ಣದ ಪುನರ್ಪುಳಿ ಜ್ಯೂಸೋ, ಮರಗಳಿರುವ ಏಕೈಕ ರಸ್ತೆಯಾದ ಮಣ್ಣಗುಡ್ಡೆಯ ನೆಹರೂ ಅವೆನ್ಯೂದಲ್ಲಿ ಕಬ್ಬಿನ ರಸ ಹೀರೋದು ಬೇಸಿಗೆಯಲ್ಲಿ ತಾನೆ ಸಾಧ್ಯ.

ಮಂಗಳೂರಿನ ಸೆಖೆ ಎಷ್ಟೇ ಇರಲಿ, ಇಲ್ಲಿಗೆ ಅತ್ಯಧಿಕ ಪ್ರವಾಸಿಗರು ಬರೋದು ಬೇಸಿಗೆಯಲ್ಲೇ. ಪಣಂಬೂರು, ಸೋಮೇಶ್ವರ, ಸುರತ್ಕಲ್, ತಣ್ಣೀರುಬಾವಿ ಬೀಚುಗಳಲ್ಲಿ ಜನ ಗಿಚಿಗುಟ್ಟುವುದು ಇದೇ ಕಾರಣಕ್ಕೆ.
ಹೆಚ್ಚಿದ ಸಮಾರಂಭ, ಹೆಚ್ಚೆಚ್ಚು ಜನರ ಓಡಾಟ, ಇದರಿಂದಾಗಿ ವಹಿವಾಟೂ ಏರಿಕೆ ಕಾಣುತ್ತದೆ. ರೈಲು, ವಿಮಾನ ನಿಲ್ದಾಣಗಳಿಗೆ ಹೋದರೆ ಉದ್ದುದ್ದ ಕ್ಯೂ.
ಮಂಗಳೂರಿನ ಬೇಸಿಗೆಯ ಸುಖವನ್ನೊಮ್ಮೆ ಸವಿಯಬೇಕಾದರೆ ಮದುವೆಗಳು, ಗೃಹಪ್ರವೇಶಗಳಿಗೆ ಹೋಗಲೇಬೇಕು. ಅದ್ಯಾಕೋ ಗೊತ್ತಿಲ್ಲ, ಮದುವೆ ಮುಂಜಿ ಮತ್ತಿತರ ಡಜನ್‌ ಕಾರ್ಯಕ್ರಮಗಳಿಗೆ ಈ ಬೇಸಿಗೆಯಲ್ಲಿ ಮಾತ್ರ ಮುಹೂರ್ತ ಇರೋದಂತೆ. ಈ ಮುಹೂರ್ತಗಳ ದೆಸೆಯಿಂದ ಜನಕ್ಕಂತೂ ಬಹಳ ಫಜೀತಿ. ಮೊನ್ನೆ ಗೆಳೆಯರಾದ ರಾಮಕೃಷ್ಣ ಒಂದು ಗೃಹಪ್ರವೇಶಕ್ಕೆ ಬಹಳ ತಡವಾಗಿ ಬಂದರು. ಯಾಕೆ ತಡ ಕೇಳಿದೆ. ಅಂದು ಅವರಿಗೆ ಎರಡು ಮದುವೆಗಳಿಗೆ ಹೋಗುವುದಿತ್ತು. ಅವೆರಡನ್ನು ಮುಗಿಸಿ ಬಂದಿದ್ದರಂತೆ!

ಇರಲಿ, ಇಂತಿಪ್ಪ ಈ ಬೇಸಿಗೆ ಸಮಾರಂಭಗಳಿಗೆ ಕರೆಕ್ಟಾಗಿ ಗಂಟೆ ಢಣ್ ಎಂದು ೧೨ ಬಾರಿಸಿದಕೂಡಲೇ ಎಲ್ಲೆಲ್ಲಿಂದಲೋ ಜನ ಆಗಮಿಸತೊಡಗುತ್ತಾರೆ. ಮದುವೆ ಹಾಲ್‌ಗಳು ಒಮ್ಮೆಲೇ ಹೌಸ್‌ಫುಲ್. ಬರುತ್ತಿದವರಿಗೆ ತಂಪಾಗಿ ಕಲ್ಲಂಗಡಿ ಜ್ಯೂಸ್ ಅಥವಾ ಹುಳಿ ದ್ರಾಕ್ಷಿ ಜ್ಯೂಸ್ ರೆಡಿಯಾಗಿರುತ್ತದೆ. ಹೊಚ್ಚಹೊಸ ಸೀರೆ ಉಟ್ಟು ಪೇಪರ್‌ನ್ನು ಬೀಸುತ್ತಾ ದಣಿವಾರಿಸಿಕೊಳ್ಳುವ ಮಹಿಳೆಯರೂ, ಬಿಳೀ ಬಣ್ಣದ ಅಂಗಿ, ಪಂಚೆ ತೊಟ್ಟು ಸುರಿವ ಬೆವರನ್ನು ಆಗಾಗ್ಗೆ ಒರೆಸುತ್ತಿರುವ ಮಧ್ಯವಯಸ್ಕರು, ಒದ್ದೆಯಾಗಿ ಮೈಗಂಟಿಕೊಂಡ ಶೇರ್ವಾನಿ ತೊಟ್ಟು ಹಾಲ್ ತುಂಬೆಲ್ಲಾ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಾ ಓಡಾಡುವ ಯುವಕರು....ಇದೆಲ್ಲಾ ಬೇಸಿಗೆ ಮದುವೆಯ ದೃಶ್ಯಗಳು.
ಮದುವೆ ಎಂದರೆ ಊಟ. ಹಾಗೆಂದು ಊಟಕ್ಕೆ ಬಂದೆವೋ ಗತಿ. ಕೆಲವು ಸಭಾಂಗಣದಲ್ಲಿ ಸರಿಯಾಗಿ ಗಾಳಿಯಾಡಲು ವ್ಯವಸ್ಥೆ ಇರೋದಿಲ್ಲ. ಅಂಥ ಕಡೆ ಊಟ ಅರ್ಧ ಆಗೋವಾಗಲೆ ಮೈಯಲ್ಲಿ ಜಲಲ..ಜಲಲ ಜಲಧಾರೆ. ಊಟ ಮುಗಿಸೋದು ದೊಡ್ಡ ಸಾಹಸವೇ.
ಇದೆಲ್ಲಾ ನೋಡಿರುವ ನಾನಂತೂ ನಿರ್ಧಾರ ಮಾಡಿದ್ದೇನೆ. ಮದುವೆ ಏನಿದ್ದರೂ ಮಳೆಗಾಲ ಯಾ ಚಳಿಗಾಲದಲ್ಲೇ ಆಗ್ಬೇಕು ಅಂತ!

13.5.07

ಅಮ್ಮನೆಂಬ ವಿಸ್ಮಯ

ಮನತುಂಬ ಮ್ಲಾನತೆ
ತಲೆತುಂಬಿ ಒಡೆದು
ಹೋಗುವಷ್ಟು ಬರಸಿಡಿಲು

ಆದರೂ..
ತಂದೀತು ಒಂದಿಷ್ಷು
ಸಮಾಧಾನ ಅಮ್ಮನ ಮಡಿಲು

ಬದುಕಿನ ಉದ್ದಕ್ಕೂ
ಓಡುತ್ತಲೇ ಇರುವಾಗ
ಎಲ್ಲೋ ಎಡವಿ ಕೈಕಾಲು
ತರಚಿಕೊಂಡರೂ
ಥಟ್ಟನೇ ನುಗ್ಗಿ
'ಏನ್ ಮಾಡ್ಕೊಂಡ್ಯೋ'
ಎಂಬ ಪ್ರೀತಿ-ಸಿಟ್ಟಿನ
ಮುಲಾಮು ಹಚ್ಚುವುದು
ಆಕೆಗೆ ಹವ್ಯಾಸ!

ನೋವಲ್ಲಿ ಮಾತಾಗಿ
ಖುಷಿಯಲ್ಲಿ ಮೌನವಾಗಿ
ಬದುಕಿಡೀ ಒಗಟಾಗಿ
ಒಮ್ಮೊಮ್ಮೆ ಒಗರಾಗಿ
ಮಕ್ಕಳ ನಗುವಿಗೇ ಖುಷಿಯಾಗಿ
ಇರುವಾಕೆ....
ಯಾಕೆ ಹೀಗೆ? ಈಕೆ
ಎನ್ನುವುದೇ ಪ್ರಶ್ನೆ.

ಮಕ್ಕಳಿಗಾಗಿ ಏನನ್ನಾದರೂ
ಮಾಡುವೆ ಎಂಬ ಛಲ
ಅದಮ್ಯ ಚೇತನದ ಖಣಿ
ಆ ಅಪೂರ್ವ ಸಾಮರ್ಥ್ಯ
ಬಂತು ಎಲ್ಲಿಂದ!

(ಮಕ್ಕಳಿಗಾಗಿ ಸರ್ವಸ್ವವನ್ನೂ ಧಾರೆಯೆರೆವ ‘ವಿಶ್ವದ ವಿಸ್ಮಯ’ ಎನಿಸಿದ ಅಮ್ಮನಿಗಾಗಿ ಈ ಸಾಲುಗಳು)

Related Posts Plugin for WordPress, Blogger...