21.6.07

ಎರಡೂವರೆಗಂಟೆಯ ದುನಿಯಾ ಹಾಗೂ ಒಂದು ಆಕ್ಸಿಡೆಂಟ್


ವಿಲಕ್ಷಣ ಸಮಾಜದಲ್ಲಿ ಅದೊಂದು ವಿಲಕ್ಷಣ ಸಿನಿಮಾ....
ನಮ್ಮ ಸುತ್ತಲೂ ಜಗಮಗಿಸುವ ದೀಪಗಳ ನೆರಳಿನ ಕತ್ತಲೆಯಲ್ಲಿ ನಮಗರಿವಿಲ್ಲದ ಆಗುಹೋಗುಗಳತ್ತ ಶಾರ್ಪ್ ಸಿನಿಮಾ ನಿರ್ದೇಶಕನೊಬ್ಬ ಕಣ್ಣು ಹಾಯಿಸಿದಾಗ ದುನಿಯಾದಂತಹ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ.
ಈ ಸಿನಿಮಾ ಮಂಗಳೂರಿನಂತಹ ನಗರದಲ್ಲೂ ಶತದಿನ ಆಚರಿಸಿದ್ದಕ್ಕೆ ನಾನು ಕಾರಣಗಳನ್ನು ಊಹಿಸುವುದಕ್ಕೆ ಹೋಗಲಾರೆ. ಆದರೆ ಥಳುಕುಬಳುಕಿನ ಬದುಕಿನ ಸುತ್ತಲೇ ಗಿರಕಿ ಹೊಡೆಯುವ ಇಂದಿನ ದಿನಗಳಲ್ಲೂ ಕಲ್ಲು ಒಡೆಯುವ ಯುವಕನೊಬ್ಬನ ಕಥೆಯನ್ನೇ ಆಧಾರವಾಗಿರಿಸಿ, ಆ ಪಾತ್ರಕ್ಕೂ ಹೊಸಮುಖ(ವಿಜಯ್)ವನ್ನೇ ಹುಡುಕಿದ ನವನಿರ್ದೇಶಕ ಸೂರಿ ಪ್ರಯತ್ನಕ್ಕೆ ಮಾತ್ರ ಸೆಲ್ಯೂಟ್!
ಬಹುಷಃ ಈ ಸಿನಿಮಾ ಅನೇಕರು ನೋಡಿ ಆಗಿರಬಹುದು, ಆದರೂ ನನಗನ್ನಿಸಿದ ಕೆಲವು ಯೋಚನೆಗಳನ್ನು ಇಲ್ಲಿ ಹಂಚಿಕೊಳ್ತಾ ಇದ್ದೇನೆ. ತನ್ನದೇ ದುನಿಯಾದಲ್ಲಿ ಕಲ್ಲು ಬಂಡೆ ಒಡೆಯುತ್ತಾ ಜೀವನ ಸಾಗಿಸುತ್ತಿದ್ದ ಕಲ್ಲಿನಂಥ ದೇಹದ ಆದರೆ ಹೂವಿನ ಮನಸ್ಸಿನ ಯುವಕ ಶಿವಲಿಂಗು. ಬದುಕಿನ ಕೊನೆಕ್ಷಣದಲ್ಲಿರುವ ತಾಯಿಯನ್ನು ‘ದೊಡ್ಡಾಸ್ಪತ್ರೆ ’ಗೆ ಸೇರಿಸಲು ದುಡ್ಡು ಸಾಲದೆ ಮತ್ತೆ ಆಸ್ಪತ್ರೆಗೆ ಮರಳುವಾಗ ತಾಯಿ ಕಣ್ಮುಚ್ಚಿರುತ್ತಾರೆ. ತನ್ನವರೆಂದಿದ್ದ ಮುದಿ ಜೀವವೂ ಇಲ್ಲದಾದಾಗ ಕಂಗಾಲಾಗುವ ಶವಲಿಂಗುವಿಗೆ ತಾಯಿಯ ಶವದಹನಕ್ಕೂ ಹಣವಿರುವುದಿಲ್ಲ. ಅರ್ಧಹೂತಾದ ಗೋರಿಯನ್ನು ಬಗೆದು ಮೃತಶರೀರದ ಕೈನಿಂದ ಉಂಗುರವನ್ನೇ ತೆಗೆದು ಕೊಡುವಾಗ ನಾಯಕನ ಅಭಿನಯದ ಆಳ ಕಾಣುತ್ತದೆ.


ಊರಿಗೆ ಹೋಗುವುದಕ್ಕೆಂದು ನಾಯಕ ಏರುವ ಲಾರಿಯಲ್ಲೆ ತರಕಾರಿ ಜತೆ ಪ್ಯಾಕ್ ಆಗಿರುವ ಆಶ್ರಮದ ಹುಡುಗಿ ಪೂರ್ಣಿಮ. ಆಕೆಯನ್ನು ಕಾಪಾಡೋದು, ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವ ದಾರಿಯಲ್ಲಿ ಕ್ವಾಲಿಸ್‌ನಲ್ಲಿ ಪಿಕಪ್ ಕೇಳುವುದು. ಅದೊಂದು ರೌಡಿಯ ವಾಹನ ಅನ್ನೋದು ಶಿವಲಿಂಗುವಿಗೆ ತಡವಾಗಿ ಅರ್ಥ ಆಗುತ್ತದೆ. ಅಷ್ಟು ಹೊತ್ತಿಗೆ ಎನ್‌ ಕೌಂಟರ್‍ ಸ್ಪೆಷಲಿಸ್ಟ್ ಎಸಿಪಿಯ ಗುಂಡಿಗೆ ರೌಡಿ ಬಲಿಯಾಗಿರುತ್ತಾನೆ. ಎಸಿಪಿಯ ಕಣ್ಣು ಶಿವಲಿಂಗು ಮೇಲೂ ಬಿದ್ದಿರುತ್ತದೆ.
ಅಲ್ಲಿಂದ ಬೇಡ ಬೇಡ ಎಂದರೂ ಶಿವನನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತದೆ ಕತ್ತಲಿನ ದುನಿಯಾ, ಕಲ್ಲಿನಂತಹ ಶಿವುಗೆ ಮಾರಾಮಾರಿ ದೃಶ್ಯಗಳು ನೀರು ಕುಡಿದಷ್ಟೇ ಸಲೀಸು. ಹೊಡೆಯುವ, ಹೊಡೆಸಿಕೊಳ್ಳುವುದೇ ಆತನ ಕೆಲಸ. ಈ ಕೆಲಸಕ್ಕೆ ಹಚ್ಚುವ ದಲ್ಲಾಳಿ ಸತ್ಯ(ರಂಗಾಯಣ ರಘು) ದುನಿಯಾದ ಹೈಲೈಟ್.
ಶಿವುಗೆ ಎರಡೇ ಗುರಿ. ತಾಯಿಗೊಂದು ಗೋರಿ ಕಟ್ಟೋದು,ಆಶ್ರಮದಿಂದ ಹೊರಹಾಕಲ್ಪಟ್ಟು ತನ್ನನ್ನೇ ನಂಬಿರುವ ಪೂರ್ಣಿಯನ್ನು ಓದಿಸುವುದು. ಆದರೆ ದುನಿಯಾದ ಒಳಹೊಕ್ಕಮೇಲೆ ಇಂಥ ಒಳ್ಳೆಯ ಗುರಿ ಈಡೇರುವುದಾದರೂ ಹೇಗೆ. ತನ್ನದಲ್ಲದ ತಪ್ಪಿಗೆ ಎರಡು ಕೊಲೆ ಆರೋಪ ಶಿವಲಿಂಗು ಮೇಲೆ. ಎಸಿಪಿಯಂತೂ ಶಿವಲಿಂಗು ಮೇಲೂ ಬುಲೆಟ್ ಮಸೆಯುತ್ತಿರುತ್ತಾನೆ. ಈ ವಿಷಚಕ್ರದಿಂದ ಹೊರಬೀಳುವುದಕ್ಕೆ ಸಾಧ್ಯವೇ ಇಲ್ಲ ಅನ್ನೋದು ನಾಯಕನಿಗಿಂತ ಮೊದಲೇ ಅರಿವಾಗುವುದು ನಾಯಕಿಗೆ. ಮುಂದೇನಾಗುತ್ತದೆ ಅನ್ನೋದು ನಮಗೆಲ್ಲ ತಿಳಿದದ್ದೇ.
ಚಿತ್ರದಲ್ಲಿ ನಮ್ಮನ್ನು ಕಾಡುವ ಕೆಲ ದೃಶ್ಯಗಳಿವೆ. ಮೊದಲೇ ಹೇಳಿರುವ ಸ್ಮಶಾನದ ದೃಶ್ಯ, ಹೆಣಕೊಯ್ಯುವ ಸತ್ಯ ತನ್ನ ಕಥೆಯನ್ನು ಹೇಳಿಕೊಳ್ಳುವುದು, ಕೊನೆಯಲ್ಲಿ ಗೋರಿ ಕಟ್ಟಿಸುವ ಸತ್ಯ...
ವಿಜಯ್ ನಟನೆಯಲ್ಲಿ ಫಸ್ಟ್ ಕ್ಲಾಸ್, ಫೈಟಿಂಗ್‌ನಲ್ಲೂ ಸೂಪರ್‍. ರಶ್ಮಿಯದ್ದು ತಾಜಾ ಅಭಿನಯ. ರಂಗಾಯಣ ರಘು ಇಡೀ ಚಿತ್ರವನ್ನು ಬ್ಯಾಲೆನ್ಸ್ ಮಾಡುವ ಸೂತ್ರಧಾರ. ಸೀಮಿತ ಪಾತ್ರಗಳಾದ ಎನ್‌ಕೌಂಟರ್‍ ಎಸಿಪಿ, ಮಾದ ಮತ್ತಿತರ ಹೊಸಮುಖಗಳಿಂದ ಒಳ್ಳೆ ಅಭಿನಯ ಮೂಡಿಬಂದಿದೆ.
ಸತ್ಯ ಹೆಗಡೆ ಸಿನಿಮಾಟೋಗ್ರಫಿಯಲ್ಲಿ ದುನಿಯಾದ ಕತ್ತಲೆ, ಕ್ಲೋಸಪ್‌ಗಳು ಅರಳಿವೆ. ಸೂರಿಯ ಕಲಾ ಕುಸುರಿ ಸುಂದರ.
ಚಿತ್ರಕ್ಕೊಂದು ಅರ್ಥಪೂರ್ಣ ಟ್ಯಾಗ್ ಲೈನಿದೆ: ಯಾರ ಗೋರಿ ಮೇಲೂ ಯಾಕ್ ಸತ್ರು ಅಂತ ಬರಿಯಲ್ಲ. ಚಿತ್ರಕ್ಕೊಂದು ಚೌಕಟ್ಟು ಕೊಟ್ಟಿರುವುದೇ ಗೋರಿ ಅನ್ನೋದು ಮತ್ತೊಂದು ವಿಶೇಷ.
ಇಂತಹ ಚಿತ್ರಗಳು ಕನ್ನಡದಲ್ಲಿ ಬರುತ್ತಿರುವುದು ಚಿತ್ರರಂಗಕ್ಕೆ ಶುಭಸೂಚನೆ. ಸೂರಿಗೆ ಶುಭವಾಗಲಿ.
ಒಂದು ಆಕ್ಸಿಡೆಂಟ್:
ರಾತ್ರಿ ಶೋದಲ್ಲಿ ದುನಿಯಾ ಚಿತ್ರ ನೋಡಿ ಬೈಕಲ್ಲಿ ಸ್ನೇಹಿತನ ಜೊತೆ ಮನೆಗೆ ಧಾವಿಸ್ತಿದ್ದೆ. ಮುಂದೆ ಥಟ್ಟನೆ ಪಾಸಾದ ಕಾರಿಗೆ ನನ್ನೆದುರೇ ಇದ್ದ ಬೈಕ್ ಒರೆಸಿ ಬೈಕಲ್ಲಿದ್ದ ವ್ಯಕ್ತಿ ಮೂರು ಪಲ್ಟಿ. ಕಾರಿನ ಹಿಂದಿನ ಟೈರಿನ ಬಳಿಯೇ ಆತನ ತಲೆ. ನಾವು ಬೈಕ್ ನಿಲ್ಲಿಸಿ ನೋಡಿದರೆ ಬೈಕ್ ಯುವಕ ಬಚಾವಾಗಿದ್ದ. ಮೇಲ್ನೋಟಕ್ಕೆ ತರಚು ಗಾಯ ಆಗಿತ್ತು. ಏನಾಗಿದೆ ಎಂದು ಹೇಳಲಾಗದೆ ಹೆದರಿಯೇ ನಡುಗುತ್ತಿದ್ದ. ನೋಡಿದರೆ ಕಾರಿನಲ್ಲಿದ್ದ ವ್ಯಕ್ತಿ ನನಗೆ ತುಸು ಪರಿಚಯವೇ. ಒಳ್ಳೆಯ ಬರಹಗಾರ, ಉಪನ್ಯಾಸಕ. ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದೆವು ನಾನು ಮತ್ತು ನನ್ನ ಫ್ರೆಂಡ್. ನನ್ನ ಪರಿಚಯದ ಲಾಭ ಪಡೆದು ಮೆಲ್ಲನೆ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ‘ನೀವು ಕರೆದುಕೊಂಡು ಹೋಗಿ. ಏನಾದ್ರೂ ಇದ್ದರೆ ನನಗೆ ಫೋನ್ ಮಾಡಿ!’. ಕೊನೆಗೆ ಗಾಯಾಳು ಯುವಕ ಬರಹಗಾರರ ಫೋನ್ ನಂಬರ್‍ ಪಡೆದುಕೊಂಡ. ಬೈಕ್ ಸ್ಟಾರ್ಟ್ ಮಾಡಿದ. ಆಸ್ಪತ್ರೆಗೆ ಬರಬೇಕೇ ಎಂಬ ನಮ್ಮ ಕೇಳಿಕೆಗೆ ತಿರಸ್ಕರಿಸಿ ಹೊರಟು ಹೋದ. ಉಪನ್ಯಾಸಕರೂ ‘ಕಾರಿ’ಗೆ ಬುದ್ಧಿ ಹೇಳಿದರು. ಸಿನಿಮಾದಿಂದ ಹೊರಗೆ ಬಂದ ನಮಗೆ ಹೀಗೊಂದು ದುನಿಯಾ ದರ್ಶನ!
ಚಿತ್ರಗಳು: www.nowrunning.com

5 comments:

Chevar said...

ವೇಣು ನೀವು ಚಿತ್ರದ ಬಗ್ಗೆ ಹೇಳಿದ ಮಾತು ನಿಜ. ಸದ್ಯದ ಕನ್ನಡ ಚಿತ್ರಗಳಲ್ಲಿ camera work Sakath. take examples of Cyanide, ಮುಂಗಾರು ಮಳೆ, ದುನಿಯಾ. the change is coming from the whole industry. Yet to see the No. 73 Shanthi Nivas.
A good sign from industry. I think now we compare the quality of kannda film to Malayalam films. Am taking only from quality wise. Any how expecting more films from Sandal Wood.

ರಾಜೇಶ್ ನಾಯ್ಕ said...

ದುನಿಯಾ ನೋಡಿದ ಕೂಡಲೇ ದುನಿಯಾ ಕಾಣಸಿಕ್ಕಿದ್ದು ವಿಶೇಷ. ನಿಮ್ಮ ಪರಿಚಯವಿದ್ದ ಆ ಉಪನ್ಯಾಸಕರಿಗೆ ಒಂದೆರಡು ದಬಾಯಿಸಬೇಕಿತ್ತು ಆತ ಜಾರಿಕೊಳ್ಳುವ ಮಾತು ಆಡಿದಾಗ...

PRAVINA KUMAR.S said...

ನಾನು ದುನಿಯಾ, ಮುಂಗಾರು ಮಳೆ ನೋಡಿಲ್ಲ. ಯಾಕೋ ಇಷ್ಟ ಆಗಲಿಲ್ಲ. ಶಾಂತಿ ನಿವಾಸ ನೋಡೋಣ ಅಂತ ಇದ್ದೇನೆ. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸಾರ್....

ಸಿಂಧು sindhu said...

ವೇಣು,

ರೀಲ್ ದುನಿಯಾ ಮತ್ತು ರಿಯಲ್ ದುನಿಯಾ ಎರಡನ್ನೂ ಸಮರ್ಥವಾಗಿ ಪದಗಳಲ್ಲಿ ಕಟ್ಟಿಕೊಟ್ಟಿದ್ದೀರಿ. ನಾನು ಸಿನಿಮಾ ನೋಡಿಲ್ಲ. ನಿಮ್ಮ ಅಭಿಪ್ರಾಯ ಇಷ್ಟವಾಯಿತು.

ನಿಜ ಬದುಕಲ್ಲಿ ಹೀಗೆ ವಿಚಾರಗಳಿಗೆ ಬದ್ದರಲ್ಲದ ವಿಚಾರವಂತರು ಮತ್ತು ಬುದ್ದಿಜೀವಿಗಳು ಹೇರಳ ಸಿಗುತ್ತಾರೆ. ಸೂಚ್ಯವಾಗಿ ಅವರ ಬಣ್ಣದ ವೇಷ ಕಳಚಿದ ರೀತಿ ಹಿಡಿಸಿತು.

ಈ ಹೊಸನೋಟಗಳಿಗೆ ಧನ್ಯವಾದ.

~: яαтнηαкαя :~ said...

Real Duniya experience is nice.. It happens sir..

Related Posts Plugin for WordPress, Blogger...