ಇಡೀ ಪ್ರಪಂಚವೇ ಕತ್ತಲೆಯಲ್ಲಿ ಕೊಚ್ಚಿದೆಯೋ ಎಂಬಂಥ ಕತ್ತಲೆಯಲ್ಲಿ ಕ್ಷೀಣವಾಗಿ ಉರಿಯುತ್ತಿರುವ ಬುಡ್ಡಿದೀಪ. ಅದನ್ನೇ ಒಮ್ಮೆ ನೋಡುತ್ತಾ ತಲೆಗೆ ಸುತರಾಂ ಹತ್ತದ ಗಣಿತದ ಸಮಸ್ಯೆ ಶಪಿಸುತ್ತಾ, ಕಣ್ಣಿನ ತೂಕಡಿಕೆಯಲ್ಲಿ ದೀಪವನ್ನು ತುಂಬಿಕೊಳ್ಳುತ್ತಿದ್ದಾನೆ ಆ ಹುಡುಗ.
ಮರದ ತುಂಡುಗಳನ್ನು ತ್ರಿಕೋನಾಕಾರದಲ್ಲಿ ಕಟ್ಟಿ ನಾಲ್ಕು ಹರಿದ ಟಾರ್ಪಾಲಿನ್‌ಗಳನ್ನು ಸೇರಿಸಿ ಮಾಡಿದ ಮನೆಯೆಂಬೋ ಮನೆಯದು. ನಗರದ ಯುಜಿಡಿ ಚರಂಡಿ ನೀರನ್ನು ೧೯೫೦ರ ಕಾಲದ ಟ್ರೀಟ್‌ಮೆಂಟ್ ಪ್ಲಾಂಟೊಂದು ಅರ್ಧವಷ್ಟೇ ಸಂಸ್ಕರಿಸಿ ಚೆಲ್ಲಿ ಬಿಡುವ ತ್ಯಾಜ್ಯ ಸಾಗಿಸುವ ತೋಡಿನ ಪಕ್ಕದಲ್ಲಿ ಇದೆ ಹುಡುಗನ ಅರಮನೆ.
ನಗರದಲ್ಲಿ ನೋಡುವ ದೊಡ್ಡ ಮನೆಗಳನ್ನು ನೋಡುವಾಗ ತನಗೂ ಒಂದು ಚಿಕ್ಕದಾದರೂ ಸುಂದರ ಮನೆ ಬೇಕೆಂದು ಹುಡುಗನಿಗೆ ಮನವರಿಕೆಯಾಗಿದೆ. ಹೇಗಾದರೂ ಎಸ್ಸೆಸ್ಸೆಲ್ಸಿ ಪಾಸಾದರೆ ನಗರದಲ್ಲಿ ಏನಾದರೂ ಕೆಲಸ ಮಾಡಿ ಮನೆ ಕಟ್ಟಬಹುದು ಎಂದು ಶಾಲೆಯಲ್ಲಿ ಅವನಿಗೆ ಟೀಚರ್ ಹೇಳಿದ್ದು ಚೆನ್ನಾಗಿ ನೆನಪಿದೆ. ಅದಕ್ಕಾಗಿ ಹುಡುಗ ಜೀವ ಬಿಟ್ಟು ಓದುತ್ತಾನೆ. ಆದರೆ ಈ ಗಣಿತ ಮಾತ್ರ ಆತನಿಂದಾಗದು...ಟೀಚರ್ ಎಷ್ಟೇ ಹೇಳಿದರೂ ಆತನ ಮೆದುಳಿಗೇ ಹೋಗುವುದಿಲ್ಲ.
ರಾತ್ರಿ ಅದೆಷ್ಟೋ ಹೊತ್ತು ಪುಸ್ತಕದೆದುರು ಧ್ಯಾನ ಮಗ್ನನಂತೆ ಕುಕ್ಕರಗೂತಿರುತ್ತಾನೆ ಹುಡುಗ. ಪಕ್ಕದ ನ್ಯಾಷನಲ್ ಹೈವೇಯಲ್ಲಿ ತಡರಾತ್ರಿಯಲ್ಲಿ ಅಬ್ಬರಿಸುತ್ತಾ ಆನೆಯಂತೆ ಘೀಳಿಡುತ್ತಾ ಹೋಗುವ ಟ್ರಕ್‌ಗಳಿಗೆ ಇವನ ಏಕಾಂತ ಭಂಗ ಪಡಿಸುವುದು ಸಾಧ್ಯವಿಲ್ಲ. ಆದರೆ ಮಳೆ ನೀರು ತೊಟ್ಟಿಕ್ಕುವಲ್ಲಿ ಒಂದು ಪಾತ್ರೆ ಇರಿಸಿ ಪಕ್ಕದಲ್ಲಿ ಗೋಣಿ, ಅದರ ಮೇಲೆ ಕಂಬಳಿ ಸುತ್ತಿ ಮಲಗಿರುವ ಉಬ್ಬಸ ಪೀಡಿತ ಮುದಿ ತಾಯಿ ತಾಳ ಲಯ ಇಲ್ಲದ ಚರ್ಮವಾದ್ಯದಂತೆ ಕೆಮ್ಮುವಾಗ ಹುಡುಗನ ಕರುಳು ಕಿವಿಚಿದಂತಾಗುತ್ತದೆ.
ಹಗಲೆಲ್ಲಾ ಶಾಲೆಯಲ್ಲಿ ಫಾಸ್ಟ್ ಫಾರ್ವರ್ಡ್ ಮಾಡಿದಂತೆ ಓಡುವ ಹುಡುಗನ ದಿನಚರಿ ರಾತ್ರಿ ಮಾತ್ರ ಘಾಟಿರಸ್ತೆ ಏರುವ ಟ್ಯಾಂಕರ್.
ಹಗಲಲ್ಲಿ ತಿರುಗಾಡುವ ಹುಡುಗನನ್ನು ಬಹುವಾಗಿ ಆಕರ್ಷಿಸುವುದು ಹೆದ್ದಾರಿ ಪಕ್ಕದ ಜಾಹೀರಾತು ಹೋರ್ಡಿಂಗ್‌ಗಳು. ಹಾಗೆ ನೋಡಿದರೆ ಹುಡುಗನ ಕನಸುಗಳಿಗೆ ವಸ್ತುವಾಗುವುದು ಈ ಹೋರ್ಡಿಂಗ್‌ಗಳೇ.
ಬೆಟ್ಟದ ಅಂಚಿನಲ್ಲಿ ನಿಂತ ದಪ್ಪ ಟಯರಿನ ಬೈಸಿಕಲ್ಲು, ನುಣ್ಣನೆ ಕೆನ್ನೆಯೊಂದಿಗೆ ಸೋಪ್ ತೋರಿಸುತ್ತಾ ನಿಂತ ನಟಿ, ನೀಲಿ ಬಣ್ಣದ ಆಕಾಶದೆದುರು ದೃಢವಾಗಿ ನಿಂತ ಕಾರು ಹೀಗೆ ಇಂತಹ ಅನೇಕ ಜಾಹೀರಾತುಗಳನ್ನು ನೋಡುತ್ತಿರುತ್ತಾನೆ ಹುಡುಗ. ಹಗಲು ನೋಡಿದ ಜಾಹೀರಾತುಗಳಿಂದ ರಾತ್ರಿ ಕನಸಿಗೆ ಬಣ್ಣ ಹಚ್ಚಿಕೊಳ್ಳುತ್ತಾನೆ.
ಈಚೆಗೆ ಹುಡುಗನ ಜೋಪಡಿಯ ಹತ್ತಿರ ದೊಡ್ಡ ಅಗಲವಾದ ಜಾಹೀರಾತು ಫಲಕ ಎದ್ದುನಿಂತಿದೆ. ಆದರೆ ಇನ್ನೂ ಯಾವ ಜಾಹೀರಾತು ಅದರಲ್ಲಿಲ್ಲ. ಯಾವುದೋ ಫೋನ್ ನಂಬರು ಮಾತ್ರ ಬರೆದಿದ್ದಾರೆ. ಅದರಲ್ಲಿ ತನ್ನ ಚಿತ್ರ ಬಂದಂತೆ ಹುಡುಗ ಕೆಲವೊಮ್ಮೆ ಕಲ್ಪಿಸಿ ಖುಷಿ ಪಡುವುದಿದೆ.
ತಂದೆ, ಬಾಂಧವರಿಲ್ಲದ ಹುಡುಗನಿಗೆ ತಾಯಿ ಮಾತ್ರ ಸರ್ವಸ್ವ. ಉಬ್ಬಸನ ಮಧ್ಯೆಯೂ ತಾಯಿಗೆ ಹುಡುಗ ಸಾಗುವ ದಾರಿ ಬಗ್ಗೆ ಖುಷಿಯಿದೆ.
ಹೀಗಿರುವಾಗ ಮೊನ್ನೆ ಹುಡುಗನಿಗೆ ಉತ್ಸಾಹ ಬಂದಿದೆ. ಜಾಹೀರಾತು ಬೋರ್ಡ್‌ನ ಸುತ್ತ ನಾಲ್ಕು ಜಗಮಗಿಸುವ ಫ್ಲಾಶ್ ಲೈಟುಗಳನ್ನು ಹಾಕಿದ್ದಾರೆ. ಯಾವುದೋ ಬ್ರಾಂಡ್‌ನ ಒಳವಸ್ತ್ರದ ಜಾಹೀರಾತೂ ಬೋರ್ಡ್ ಮೇಲೆ ಬಿದ್ದಿದೆ. ಜಾಹೀರಾತಿನ ಬೆಡಗಿ ಹುಡುಗನ ಕನಸುಗಳಿಗೆ ಮತ್ತಷ್ಟು ಬಣ್ಣ ತುಂಬಿದ್ದಾಳೆ.
ಹುಡುಗನ ರಜೆಉ ದಿನ, ಬೆಳಗ್ಗೆ ಕನಸು ಮುರಿದು ನೇಸರ ಬಂದಿದ್ದಾನೆ. ಯಾರೋ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಜೋಪಡಿಯ ಹೊರಗೆ. ತಾಯಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಜೋಪಡಿ ಕಾನೂನು ಬಾಹಿರ, ಅದನ್ನು ಎಬ್ಬಿಸುವುದಾಗಿ, ಅಧಿಕಾರಿಗಳು ಹೇಳುತ್ತಾರೆ. ಹೆದ್ದಾರಿ ಅಗಲವಾಗಲಿದೆಯಂತೆ, ಕಾಂಕ್ರೀಟ್ ಹಾಕುತ್ತಾರಂತೆ.
ಬುಲ್‌ಡೋಜರ್‍ಗಳು ಬಂದಿವೆ, ಟಿಪ್ಪರ್ ಲಾರಿಗಳು ಓಡಾಡುತ್ತಿವೆ, ಅವು ಎಬ್ಬಿಸಿದ ಧೂಳಿನ ತೆರೆಯ ನಡುವೆ ತಾಯಿ ಮಗ ಹೊರಟಿದ್ದಾರೆ, ಗುರಿಯೇ ಇಲ್ಲದ ವಿಶಾಲ ಪ್ರಪಂಚಕ್ಕೆ ಲಗ್ಗೆ ಇಡುವವರಂತೆ.
ಅವರ ಬೆನ್ನಿಗೇ ಜಾಹೀರಾತು ಬೋರ್ಡ್‌ನ ಒಳವಸ್ತ್ರದ ಸುಂದರಿ ಕಿಲಕಿಲನೆ ನಗುತ್ತಿದ್ದಾಳೆ....